Sj*

ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ ಹಾಗೂ ಬಹುಬೇಡಿಕೆಯ ನಟಿ ರುಕ್ಮಿಣಿ ವಸಂತ್ ಒಟ್ಟಿಗೆ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ. ಸ್ಯಾಂಡಲ್‌ವುಡ್‌ನ ಎರಡು ತಲೆಮಾರಿನ ಖ್ಯಾತ ನಟಿಯರನ್ನು ಒಂದೇ ಫ್ರೇಮ್‌ನಲ್ಲಿ ಒಗ್ಗೂಡಿಸಿರುವ ‘ಮಂಗಳ ಗೌರಿ’ ಎಂಬ ಬಹುನಿರೀಕ್ಷಿತ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದ್ದು, ಸದ್ಯ ಭರದಿಂದ ಚಿತ್ರೀಕರಣ ಸಾಗುತ್ತಿದೆ. ರಾಹುಲ್ ಪಿಕೆ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನು ಕಂಟೆಂಟ್ ಆಧಾರಿತ ಹಾಗೂ ಅದ್ಧೂರಿ ಚಿತ್ರಗಳಿಗೆ ಹೆಸರಾದ ಎರಡು ಪ್ರತಿಷ್ಠಿತ ಸಂಸ್ಥೆಗಳಾದ ‘ಕೆವಿಎನ್ ಪ್ರೊಡಕ್ಷನ್ಸ್’ ಮತ್ತು ‘ದಾಕ್ಷಾಯಣಿ ಟಾಕೀಸ್’ ಜಂಟಿಯಾಗಿ ನಿರ್ಮಿಸುತ್ತಿವೆ.

ವೆಂಕಟ್ ಕೆ. ನಾರಾಯಣ ನೇತೃತ್ವದ ಕೆವಿಎನ್ ಪ್ರೊಡಕ್ಷನ್ಸ್, ಭಾರತೀಯ ಚಿತ್ರರಂಗದಲ್ಲಿ ಬೃಹತ್ ಬಜೆಟ್‌ನ ಪ್ಯಾನ್-ಇಂಡಿಯಾ ಚಿತ್ರಗಳ ಮೂಲಕ ಮುಂಚೂಣಿಯಲ್ಲಿದ್ದು, ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’, ‘ಜನ ನಾಯಗನ್’, ವಿಮರ್ಶಕರ ಪ್ರಶಂಸೆಗೆ ಪಾತ್ರವಾದ ‘ಬಾಲನ್ – ದಿ ಬಾಯ್’ ಮತ್ತು ಮೆಗಾಸ್ಟಾರ್ ಚಿರಂಜೀವಿ ಅವರ ಮುಂಬರುವ ‘ಕಾಕ’ ಸಿನಿಮಾಗಳೊಂದಿಗೆ ಗುರುತಿಸಿಕೊಂಡಿದೆ. ಇತ್ತ ಖ್ಯಾತ ಬರಹಗಾರ-ನಿರ್ದೇಶಕ ಹೇಮಂತ್ ಎಂ. ರಾವ್ ಅವರು ಬಾಲ್ಯದಲ್ಲೇ ತಮಗೆ ಕಥಾಲೋಕವನ್ನು ಪರಿಚಯಿಸಿದ ತಾಯಿಯ ಹೆಸರಿನಲ್ಲಿ ಸ್ಥಾಪಿಸಿದ ದಾಕ್ಷಾಯಣಿ ಟಾಕೀಸ್, ಈಗಾಗಲೇ ‘ಅಜ್ಞಾತವಾಸಿ’ ಸೇರಿದಂತೆ ಹಲವು ವಿಶಿಷ್ಟ ಕಥಾಹಂದರದ ಚಿತ್ರಗಳನ್ನು ನಿರ್ಮಿಸಿದೆ. ಕೆವಿಎನ್ ಸಂಸ್ಥೆಯ ಅದ್ದೂರಿತನ ಮತ್ತು ದಾಕ್ಷಾಯಣಿ ಟಾಕೀಸ್‌ನ ಗಟ್ಟಿಯಾದ ಕಂಟೆಂಟ್ ಆಧಾರಿತ ನಿಲುವು ಒಂದಾಗಿ, ಹೊಸ ಪ್ರತಿಭೆಗಳು ಹಾಗೂ ವಿಶಿಷ್ಟ ಕಥೆಗಳನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ ‘ಮಂಗಳ ಗೌರಿ’ ಚಿತ್ರದ ಮೂಲಕ ಈ ಚೊಚ್ಚಲ ಜಂಟಿ ಪಾಲುದಾರಿಕೆಗೆ ಮುನ್ನುಡಿ ಬರೆದಿವೆ.

mangala

ಈ ಚಿತ್ರದಲ್ಲಿ ನಟಿ ಮಾಲಾಶ್ರೀ ಅವರು ಇದುವರೆಗೂ ಕಂಡಿರದ ಹೊಚ್ಚ ಹೊಸ ಅವತಾರದಲ್ಲಿ ಪ್ರೇಕ್ಷಕರ ಎದುರು ಬರಲಿದ್ದು, ಇಂದಿನ ಯುವ ಪೀಳಿಗೆಯ ಪ್ರೇಕ್ಷಕರಿಗೆ ಅವರ ಹೊಸ ಆಯಾಮದ ನಟನಾ ಕೌಶಲ ಅನಾವರಣಗೊಳ್ಳಲಿದೆ. ಮತ್ತೊಂದೆಡೆ ಸಹಜ ಅಭಿನಯದ ಮೂಲಕ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರುಕ್ಮಿಣಿ ವಸಂತ್, ಮಾಲಾಶ್ರೀ ಜೊತೆ ಸಮಬಲದ ಪಾತ್ರದಲ್ಲಿ ಮಿಂಚಲಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ನಂತರ ಹೇಮಂತ್ ಎಂ. ರಾವ್ ಅವರೊಂದಿಗೆ ಹಾಗೂ ‘ಟಾಕ್ಸಿಕ್’ ಚಿತ್ರದ ನಂತರ ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ರುಕ್ಮಿಣಿ ವಸಂತ್ ಅವರ ಎರಡನೇ ಸಿನಿಮಾವಾಗಿದೆ.

ಚಿತ್ರಕ್ಕೆ ತಾಂತ್ರಿಕವಾಗಿಯೂ ಬಲಿಷ್ಠ ತಂಡ ಸಾಥ್ ನೀಡಿದ್ದು, ಮಿಧುನ್ ಮುಕುಂದನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇಬ್ಬರು ಬಲಿಷ್ಠ ಮಹಿಳಾ ಪಾತ್ರಗಳ ನಡುವಿನ ರೋಚಕ ಪಯಣವನ್ನು ಒಳಗೊಂಡ ಈ ಚಿತ್ರಕ್ಕೆ ‘ತುಳಸಿ’ ಮ್ಯೂಸಿಕ್ ವಿಡಿಯೋ ಖ್ಯಾತಿಯ ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಖ್ಯಾತ ಸಾಹಸ ನಿರ್ದೇಶಕ ವಿಕ್ರಮ್ ಮೋರ್ ಆ್ಯಕ್ಷನ್ ದೃಶ್ಯಗಳಿಗೆ ನಿರ್ದೇಶನ ಮಾಡುತ್ತಿದಾರೆ. ಸದ್ಯ ಬಿರುಸಿನಿಂದ ಸಾಗುತ್ತಿರುವ ಶೂಟಿಂಗ್ ಮುಕ್ತಾಯದ ಹಂತಕ್ಕೆ ತಲುಪಿದ್ದು, ಚಿತ್ರತಂಡ ಶೀಘ್ರದಲ್ಲೇ ತೆರೆಗೆ ತರಲು ಸಿದ್ಧತೆ ನಡೆಸುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ