–  ರಾಘವೇಂದ್ರ ಅಡಿಗ ಎಚ್ಚೆನ್.

ಹಿರಿಯ ಸಾಹಿತಿ ಹಾಗೂ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ 25ನೇ ಚಿತ್ರ ‘ಮಹಾಕವಿ’ ಸೆಪ್ಟೆಂಬರ್ 18ರಂದು ಕರ್ನಾಟಕದಾದ್ಯಂತ ತೆರೆಗೆ ಬರಲಿದೆ. ಬೆಳಗಾವಿಯ ಪ್ರಭು ಯತ್ನಟ್ಟಿ ಅವರು ಪಿಆರ್ ಅಸೋಸಿಯೇಟ್ಸ್ ಬ್ಯಾನರ್‌ನಡಿ ಚಿತ್ರವನ್ನು ನಿರ್ಮಿಸಿದ್ದಾರೆ.

ಆದಿಕವಿ ಪಂಪನ ‘ಆದಿಪುರಾಣ’ ಮತ್ತು ‘ವಿಕ್ರಮಾರ್ಜುನ ವಿಜಯ’ ಕೃತಿಗಳನ್ನು ಆಧರಿಸಿ ಚಿತ್ರದ ಕಥಾವಸ್ತುವನ್ನು ರೂಪಿಸಲಾಗಿದೆ. ಆದಿಪುರಾಣದಲ್ಲಿನ ಭರತ–ಬಾಹುಬಲಿ ಪ್ರಸಂಗ ಹಾಗೂ ವಿಕ್ರಮಾರ್ಜುನ ವಿಜಯದಲ್ಲಿನ ಕರ್ಣನಿಗೆ ಸಂಬಂಧಿಸಿದ ಪ್ರಮುಖ ಪ್ರಸಂಗಗಳು ಚಿತ್ರದಲ್ಲಿ ಮಹತ್ವದ ಸ್ಥಾನ ಪಡೆದಿವೆ. ಪಂಪನ ಕೆಲವು ಪದ್ಯಗಳನ್ನೂ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ.

‘ಮಹಾಕವಿ’ ಚಿತ್ರದ ಪ್ರಮುಖ ವಿಶೇಷತೆಗಳಲ್ಲಿ ಪಂಪನ ಸಾಮಾಜಿಕ ಚಿಂತನೆ ಮತ್ತು ಸಮಾನತೆಯ ಆಶಯಗಳಿಗೆ ನೀಡಿರುವ ಪ್ರಾಮುಖ್ಯತೆಯೂ ಒಂದಾಗಿದೆ. ಜಾತಿ ವ್ಯವಸ್ಥೆಯ ಕುರಿತ ಪಂಪನ ವಿರೋಧ ಮತ್ತು ಮಾನವರೆಲ್ಲರೂ ಒಂದೇ ಎಂಬ ಅವರ ನಿಲುವನ್ನು ಚಿತ್ರದಲ್ಲಿ ಪ್ರತಿಬಿಂಬಿಸಲಾಗಿದೆ. ಪಂಪನ ಪ್ರಸಿದ್ಧವಾದ ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ಸಂದೇಶವೂ ಚಿತ್ರದ ಪ್ರಮುಖ ಆಶಯವಾಗಿದೆ.

mahakavi

ಅರಮನೆಯ ಆಸ್ಥಾನದಲ್ಲಿದ್ದರೂ ಪಂಪ ತನ್ನ ಸೃಜನಶೀಲ ಸ್ವಾತಂತ್ರ್ಯವನ್ನು ಹೇಗೆ ಉಳಿಸಿಕೊಂಡಿದ್ದ, ಸಮಾಜವನ್ನು ಹೇಗೆ ಗ್ರಹಿಸಿದ್ದ ಮತ್ತು ಸಾಹಿತ್ಯದಲ್ಲಿ ಪ್ರತಿನಾಯಕನ ಪರಿಕಲ್ಪನೆಗೆ ನೀಡಿದ ಕೊಡುಗೆಗಳನ್ನೂ ಸಿನಿಮಾ ಅನಾವರಣಗೊಳಿಸುತ್ತದೆ.

ಚಿತ್ರದಲ್ಲಿ ಕಿಶೋರ್, ಅನುಷಾ ರೈ, ಸುಂದರ್ ರಾಜ್, ಪ್ರಮಿಳಾ ಜೋಷಾಯ್, ಕುಮಾರ್ ಗೋವಿಂದ್, ಶೀಲಾ, ಆಕಾಂಕ್ಷ್ ಬರಗೂರು, ಸುಂದರ್ ರಾಜ್ ಅರಸು, ರಾಜಪ್ಪ ದಳವಾಯಿ, ರಾಘವ್ ಮತ್ತು ವತ್ಸಲಾ ಮೋಹನ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಸುರೇಶ್ ಅರಸು ಸಂಕಲನ, ನಾಗರಾಜ್ ಅದ್ವಾನಿ ಛಾಯಾಗ್ರಹಣ ಹಾಗೂ ಶಮಿತಾ ಮಲ್ನಾಡ್ ಸಂಗೀತ ಸಂಯೋಜನೆ ಮಾಡಿದ್ದಾರೆ. ತ್ರಿಭುವನ್ ನೃತ್ಯ ನಿರ್ದೇಶನ ಮಾಡಿದ್ದು, ಹೊಸ್ಮನೆ ಮೂರ್ತಿ ಕಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ನಿರ್ದೇಶನದ ಜೊತೆಗೆ ಚಿತ್ರಕಥೆ, ಸಂಭಾಷಣೆ ಮತ್ತು ಗೀತರಚನೆಯನ್ನೂ ಬರಗೂರು ರಾಮಚಂದ್ರಪ್ಪ ಅವರೇ ನಿರ್ವಹಿಸಿದ್ದಾರೆ.

ತಮ್ಮ ಸುದೀರ್ಘ ಸಾಹಿತ್ಯ ಮತ್ತು ಸಿನಿಮಾ ಪಯಣದಲ್ಲಿ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ 25ನೇ ಚಿತ್ರ ಎಂಬ ವಿಶೇಷತೆಯೊಂದಿಗೆ ‘ಮಹಾಕವಿ’ ಸೆಪ್ಟೆಂಬರ್ 18ರಂದು ಕರ್ನಾಟಕದಾದ್ಯಂತ ಪ್ರೇಕ್ಷಕರ ಮುಂದೆ ಬರಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ