ಕಥೆ – ಸವಿತಾ ಪ್ರಭಾಕರ್
ದಾಯಾದಿ ಮಕ್ಕಳಾದ ಮಧು, ಗೀತಾ ಅಕ್ಕತಂಗಿಯರಿಗಿಂತ ಹೆಚ್ಚಾಗಿ ತರಲೆ ಮಾಡುವ ಸ್ನೇಹಿತೆಯರಾಗಿದ್ದರು. ಅವರು ಮಾಡಿದ ತರಲೆಗಳಿಂದಾಗಿ ಇತರರಿಗೆ ನೋವಾಗದಂತೆ ಎಚ್ಚರ ವಹಿಸಿದ್ದರು. ಮುಂದೆ ನಡೆದದ್ದೇನು…..?
“ಲೇ ಗೀತಾ…. ಕಾರ್ ನಲ್ಲೇ ಹೋಗೋಣ ಅಂದ್ರೆ ನೀನು ಕೇಳ್ಲಿಲ್ಲ, ಈಗ ನೋಡು, ಈ ಬಿಸಿಲಿನಲ್ಲಿ ಬಸ್ ಗೋಸ್ಕರ ಕಾದು ಕಾದು ಸಾಕಾಗ್ತಾ ಇದೆ….”
“ಇಂಥ ಅನುಭವ ಕೂಡ ಮಜವಾಗಿರುತ್ತೆ ಕಣೇ…. ಸದಾ ಕಾರ್ ನಲ್ಲೇ ಓಡಾಡ್ತಾ ಇದ್ರೆ ಹೀಗೆ ಬಿಸಿಲು ಕಾಯಿಸಿಕೊಳ್ಳುವ ಎಕ್ಸ್ ಪೀರಿಯನ್ಸ್ ಸಿಗುತ್ತಾ ಹೇಳು ಮಧು….?”
ಆ ಇಬ್ಬರು ಹುಡುಗಿಯರ ಮಾತು ಕೇಳ್ತಾ ನಿಂತಿದ್ದ ಒಬ್ಬ ವಯಸ್ಸಾದ ಹೆಂಗಸು, “ಅದ್ಯಾಕಮ್ಮ ಮನೇಲಿ ಕಾರಿಟ್ಕೊಂಡು ಬಸ್ ನಲ್ಲಿ ಓಡಾಡೋ ಕಷ್ಟ ತಂದ್ಕೊಡಿದ್ದೀರಿ…. ಸುಮ್ನೇ ಕಾರ್ ನಲ್ಲೇ ಬರಬಾರ್ದಾ…..?” ಎಂದರು.
“ಹ್ಞೂಂ…. ನಮ್ಮನೇಲಿ ಒಂದಲ್ಲ ಅಂತ ಎರಡು ಕಾರುಗಳಿವೆ. ಆದ್ರೆ ಬಸ್ ನಲ್ಲೇ ಹೋಗೋಣ ಅಂತ ಇವಳದ್ದೇ ಹಠ.”
ಅಷ್ಟರಲ್ಲಿ ಬಸ್ ಬಂತು, ಇಬ್ಬರು ಹುಡುಗಿಯರೂ ನಗುತ್ತಾ ಬಸ್ ಹತ್ತಿದರು. ಬಸ್ ನಲ್ಲಿ ಕೂತು ತಾವಾಡಿದ ಮಾತುಗಳನ್ನು ಅದಕ್ಕೆ ಪ್ರತಿಕ್ರಿಯಿಸಿದ ಪಾಪದ ಆ ಹೆಂಗಸಿನ ಕಳಕಳಿಯನ್ನೂ ನೆನೆಸಿಕೊಂಡು ಗಟ್ಟಿಯಾಗಿ ನಕ್ಕರು. ನಿಜವಾದ ವಿಷಯ ಏನು ಅಂದ್ರೆ ಅವರ ಮನೇಲಿ ಎರಡಿರಲೀ ಒಂದು ಕಾರು ಕೂಡಾ ಇರಲಿಲ್ಲ. ಆದರೂ ಪ್ರತಿನಿತ್ಯ ಈ ತರಹದ ತರಲೆ ಮಾತಾಡಿಕೊಂಡು ನಕ್ಕು ಹಗುರವಾಗುವುದು ಅಂದ್ರೆ ಅವರಿಗೆ ತುಂಬಾ ಇಷ್ಟ.
ಆ ಹುಡುಗಿಯರು ಬರೀ ಸ್ನೇಹಿತೆಯರಲ್ಲ ಅಥವಾ ಸ್ವಂತ ಅಕ್ಕ ತಂಗಿಯರೂ ಅಲ್ಲ…. ಸ್ನೇಹಿತೆಯರಂತಿರುವ ಅಕ್ಕತಂಗಿಯರು. ಅಂದರೆ ಅಣ್ಣ ತಮ್ಮಂದಿರ ಮಕ್ಕಳು.
ಮಧುರಾ ಅಣ್ಣ ರಾಜೀವನ ಮಗಳು, ಗೀತಾ ತಮ್ಮ ವೇಣುಗೋಪಾಲನ ಮಗಳು. ಗೀತಾ ಮಧುರಾಳಿಗಿಂತ ನಾಲ್ಕು ತಿಂಗಳು ಚಿಕ್ಕವಳು ಅಷ್ಟೇ. ಬಾಲ್ಯದಿಂದಲೂ ಒಂದೇ ಶಾಲೆ, ಒಂದೇ ಕ್ಲಾಸ್, ಒಂದೇ ಬೆಂಚು, ಮನೆ ತುಂಬಾ ಜನ…. ಬಾಯಿ ತುಂಬಾ ಮಾತು…. ಬದುಕಿನ ಸ್ವಾರಸ್ಯವನ್ನು ತುಂಬಾ ಚೆನ್ನಾಗಿ ಸವಿಯುತ್ತಿದ್ದ ತುಂಟ ಹುಡುಗಿಯರು. ಅವರ ಹವ್ಯಾಸ ಪ್ರಜ್ಞೆಯನ್ನು ಮೆಚ್ಚಿ ತುಂಬಾ ಎಂಜಾಯ್ ಮಾಡ್ತಾ ಇದ್ದರು ಅಂದ್ರೆ, ಅವರ ಮನೆಯಲ್ಲೇ ಇದ್ದ ಇವರ ಸೋದರತ್ತೆಯ ಮಕ್ಕಳು ಉಮೇಶ ಮತ್ತು ರಮೇಶ.
ಇವರ ಮನೆಯ ಎದುರುಗಡೆ ಮನೆಯಲ್ಲಿದ್ದರು ಅಮರನಾಥ್ ಮತ್ತು ರೇಖಾ ದಂಪತಿಗಳು. ಅವರ ಮದುವೆಯಾಗಿ ಆರು ತಿಂಗಳಾಗಿತ್ತು. ತುಂಬಾ ಲವಲವಿಕೆಯ ದಂಪತಿಗಳು. ರೇಖಾ ಅಂತೂ ಸದಾ ನಗುನಗುತ್ತಲೇ ಇರುವ ಹುಡುಗಿ. ಅಪರೂಪಕ್ಕೆ ಒಮ್ಮೊಮ್ಮೆ ಇವರ ಮನೆಗೂ ಬರುತ್ತಿದ್ದಳು.
ಈ ಗಂಡ ಹೆಂಡತಿಯ ನಡುವೆ ಏನಾದರೂ ತಂದಿಟ್ಟು ಮಜಾ ತಗೋಬಹುದಲ್ಲ ಅಂತ ಆಲೋಚಿಸಿಕೊಂಡರು ಈ ಹುಡುಗಾಟದ ಹುಡುಗಿಯರು. ಒಂದು ದಿವಸ ರೇಖಾ ಇಲ್ಲದ ಸಮಯ ನೋಡಿಕೊಂಡು ಅಮರನಾಥನ ಮನೆಗೆ ಹೋಗಿ, “ಸರ್, ನೀವು ಆಗಾಗ ಕವನಗಳನ್ನು ಬರೀತಾ ಇರ್ತೀರಂತೆ ಹೌದಾ….?” ಅಂತ ಕೇಳಿದರು.
“ಅಯ್ಯೋ….. ಅದು ನಿಮಗೆ ಹೇಗೆ ಗೊತ್ತಾಯ್ತು….?” ಗಾಬರಿಯಿಂದ ಪ್ರಶ್ನಿಸಿದ ಅಮರನಾಥ.
“ನಮ್ಮ ಉಮೇಶ ಹೇಳಿದ, ಅದಿರಲಿ ನೀವು ಬರೆದಿರುವ ಒಂದು ಕವನವನ್ನು ನಮಗೆ ಓದಲು ಕೊಡ್ತೀರಾ….?”
“ಛೇ…. ನಾನು ಯಾವಾಗ್ಲಾದ್ರೂ ಸುಮ್ನೇ ಏನಾದ್ರೂ ಗೀಚ್ತಾ ಇರ್ತೀನಿ. ನೀವುಗಳು ಓದೋದು ಅಷ್ಟು ಚೆನ್ನಾಗಿರೋಲ್ಲ.”
“ನೀವು ಬರೆದ ಮೇಲೆ ಚೆನ್ನಾಗೇ ಇರುತ್ತೆ. ಇತ್ತೀಚೆಗೆ ಬರೆದಿರೋ ಒಂದು ಕವನ ಕೊಡಿ ಪ್ಲೀಸ್.”
ಮುದ್ದು ಹುಡುಗಿಯರ ಮಾತನ್ನು ನಿರಾಕರಿಸಲಾಗದೇ ಅಮರನಾಥ ತಾನು ಬರೆದಿದ್ದ ಕವನವೊಂದನ್ನು ಕೊಟ್ಟು, “ಇದು ನಿನ್ನೆ ಬರೆದದ್ದು….” ಅಂದ.
“ಓಹ್ ಹೌದಾ….? ರೇಖಾ ಇದನ್ನು ಓದಲಾಯ್ತಾ….?”
“ಇಲ್ಲ….. ಇನ್ನೂ ಅವಳಿಗೆ ತೋರಿಸಿಲ್ಲ.”
“ಸರಿ ಸರ್, ಬೇಗ ವಾಪಸ್ ಕೊಡ್ತೀವಿ…..”
`ರೇಖಾ ಇನ್ನು ಓದದೇ ಇರೋದು ಒಳ್ಳೇದಾಯ್ತು,’ ಅಂದುಕೊಂಡ ಮಧು ಮತ್ತು ಗೀತಾ ಕವನದೊಂದಿಗೆ ಮನೆಗೆ ಬಂದರು. ಕವನ ಓದಿದಾಗ ಅದೊಂದು ರೊಮ್ಯಾಂಟಿಕ್ ಕವಿತೆ ಆಗಿದ್ದನ್ನು ಕಂಡು ಇಬ್ಬರಿಗೂ ಖುಷಿಯಾಯಿತು.
ಮಾರನೇ ದಿವಸ ಅಮರನಾಥ್ ಇಲ್ಲದ ಸಮಯ ನೋಡಿಕೊಂಡು ಅವರ ಮನೆಗೆ ಹೋಗಿ ಆ ಕವನವನ್ನು ರೇಖಾ ಕೈಗೆ ಕೊಟ್ಟು, “ಇದು ನಿನ್ನೆ ನಿಮ್ಮ ಯಜಮಾನ್ರು ಕೊಟ್ಟಿದ್ರು. ಇಬ್ಬರು ಓದಿದೀನಿ ತುಂಬಾ ಚೆನ್ನಾಗಿದೆ. ನೀವು ಓದಿ ಅಕ್ಕ…..” ಅಂತ ಹೇಳಿ ವಾಪಸ್ಸು ಬಂದರು.
ಸಂಜೆ ಅಮರನಾಥ ಬರುವ ಸಮಯ ನೋಡಿಕೊಂಡು ಇವರು ತಮ್ಮ ಮನೆಯ ಗೇಟಿನ ಮುಂದೆ ನಿಂತು ಎದುರು ಮನೆಯ ಕಡೆಗೇ ದೃಷ್ಟಿ ಹಾಯಿಸುತ್ತಿದ್ದರು. ಮನದ ತುಂಬಾ ಕುತೂಹಲ ತುಂಬಿಕೊಂಡಿತ್ತು.
“ಅವರ ಮನೇಲಿ ಏನು ನಡೀತಿರಬಹುದು ಮಧು….?”
“ಇನ್ನೇನು ತಾನೇ ನಡೆಯುತ್ತೆ ಗೀತಾ….. ಗಂಡ ಮನೆಗೆ ಬಂದ ತಕ್ಷಣ ರೇಖಾ ಆ ಕವನವನ್ನು ಮುಂದೆ ಹಿಡೀತಾಳೆ.”
“ಆಮೇಲೆ….?”
“ಆಮೇಲೆ, ಆ ಹುಡುಗಿಯರಿಗ್ಯಾಕ್ರಿ ಇಂಥ ರೊಮ್ಯಾಂಟಿಕ್ ಕವನ ಬರೆದುಕೊಟ್ರಿ…. ಅಂತ ದಬಾಯಿಸ್ತಾಳೆ.”
“ಆಮೇಲೆ, ಅವರ ಮನೇಲೊಂದು ವಾರ್ ನಡೆಯುತ್ತೆ….”
ಏನೇನೋ ಊಹಿಸಿಕೊಂಡು ಇವರುಗಳು ಗಟ್ಟಿಯಾಗಿ ನಗುತ್ತಿರುವಾಗಲೇ ಎದುರು ಮನೆ ಬಾಗಿಲು ತೆರೆಯಿತು. ಗಂಡ ಹೆಂಡತಿ ಮನೆಗೆ ಬೀಗ ಹಾಕಿ ನಗುನಗುತ್ತಾ ಗೇಟು ಮುಚ್ಚಿ ಬೀದಿಗಿಳಿದರು. ತಮ್ಮ ಪ್ಲಾನ್ ಠುಸ್ ಆದದ್ದರಿಂದ ಮಧುರಾ ಗೀತಾ ಪೆಚ್ಚಾಗಿಬಿಟ್ಟರು. ಎಲ್ಲಾ ಗೊತ್ತಿದ್ದ ಉಮೇಶ, ರಮೇಶ ಇವರ ಮುಂದೆ ನಿಂತು ಗಟ್ಟಿಯಾಗಿ ನಕ್ಕು, ರೇಗಿಸುತ್ತಾ ಚಪ್ಪಾಳೆ ಹೊಡೆದರು.
ಮುಂದಿನ ಕೆಲವು ತಿಂಗಳು ಯಾವುದೇ ತರಲೆ ಘಟನೆಗಳೂ ನಡೆಯಲಿಲ್ಲ. ಆಮೇಲೆ ಒಂದು ಅಮೋಘವಾದ ಪ್ಲಾನ್ ಸಿದ್ಧವಾಯಿತು. ಇವರ ಬೀದಿಯಲ್ಲಿ ರಾಜಾರಾಮ್ ಎನ್ನುವವರ ಮನೆ ಇತ್ತು. ಏಳೆಂಟು ವರ್ಷಗಳ ಹಿಂದೆ ಅವರು ಆ ಮನೆಯನ್ನು ಕೊಂಡುಕೊಂಡಿದ್ದರು. ಮನೆಯಲ್ಲಿ ಅವರೊಬ್ಬರೇ ಇದ್ದದ್ದು. ತುಂಬಾ ಸರಳ ವ್ಯಕ್ತಿ, ಮಾತು ಕಡಿಮೆ. ಬೆಳಗ್ಗೆ ಸಾಯಂಕಾಲ ಹತ್ತಿರದ ಪಾರ್ಕಿಗೆ ಹೋಗಿ ಬರುತ್ತಿದ್ದರು. ಅವರೇ ಅಡುಗೆ ಮಾಡಿಕೊಳ್ತಾ ಇದ್ದರು. ಅವರ ಮನೆಗೆ ಅಪರೂಪಕ್ಕೆ ಅವರ ಸ್ನೇಹಿತರು ಬರುತ್ತಿದ್ದರು ಅಷ್ಟೇ. ಅದೊಂದು ಸಂಜೆ ಅವರು ವಾಕಿಂಗ್ ಮುಗಿಸಿ ಬರುವಾಗ ಈ ಹುಡುಗಿಯರು ಅವರ ಮುಂದೆ ಹೋಗಿ ನಿಂತರು.

“ಏನ್ರಮ್ಮ ಮಧುರಾ…. ಗೀತಾ… ಏನ್ ಸಮಾಚಾರ….?” ರಾಜಾರಾಮ್ ಆತ್ಮೀಯವಾಗಿ ಪ್ರಶ್ನಿಸಿದರು.
“ಏನಿಲ್ಲ ಅಂಕಲ್, ನಿಮ್ಮನ್ನು ಹುಡುಕ್ಕೊಂಡು ಯಾರೋ ಹೆಂಗಸರು ಬಂದಿದ್ರು….”
“ನನ್ನ ಹುಡುಕಿಕೊಂಡು ಬಂದಿದ್ರಾ…?”
“ಹೌದು….?”
“ಹೌದೇನಮ್ಮ…. ಅವರ ಹೆಸರು ಹೇಳಿದ್ರಾ….?”
“ಇಲ್ಲ ಅಂಕಲ್.”
“ನೀವು ಕೇಳ್ಲಿಲ್ವಾ….?”
“ಇಲ್ಲ ಅಂಕಲ್ ಸಾರಿ.”
“ಪರವಾಗಿಲ್ಲ ಬಿಡಿ. ಅವರು ಇನ್ನೇನಾದ್ರೂ ಹೇಳಿದ್ರಾ….?”
“ಹ್ಞೂಂ ಅಂಕಲ್….. ನಾಳೆ ಅಥವಾ ನಾಡಿದ್ದು ಬಂದು ನಿಮ್ಮನ್ನು ಮೀಟ್ ಮಾಡ್ತೀನಿ, ಅಂತ ಹೇಳಿ ಹೊರಟು ಹೋದ್ರು.”
“ಹೌದಾ…?”
“ಹ್ಞೂಂ…..”
“ಸರಿ ಬಿಡಿ….”
ರಾಜಾರಾಮ್ ಮಾತು ಮುಗಿಸಿ ಮನೆಯೊಳಕ್ಕೆ ಹೊರಟು ಹೋದರು.
“ಆ ಹೆಂಗಸು ಯಾರಿರಬಹುದು….. ಅಂತ ಅಂಕಲ್ ಸಖತ್ತಾಗಿ ತಲೆ ಕೆಡಿಸಿಕೊಂಡಿರ್ತಾರೆ ಅಲ್ವಾ….?”
ಈ ಕಿಲಾಡಿ ಜೋಡಿ ಗಟ್ಟಿಯಾಗಿ ನಗುತ್ತಾ ಮುಂದಕ್ಕೆ ನಡೆದರು. ಮುಂದಿನ ಒಂದೆರಡು ದಿನಗಳು ರಾಜಾರಾಮ್ ಬಾಗಿಲು ತೆರೆಯಲಿಲ್ಲ. ಆಮೇಲೆ ನಾಲ್ಕಾರು ದಿನ ಕಾಂಪೌಂಡ್ ಒಳಗೇ ವಾಕಿಂಗ್ ಮಾಡ್ತಾ ಕಾಲ ಕಳೆದರು. ಇದನ್ನು ನೋಡಿ ಮಧುರಾ, ಗೀತಾರಿಗೆ ನಗು ಬಂದರೂ ಆಮೇಲೆ ಅವರನ್ನು ನೋಡಿ `ಅಯ್ಯೋ ಪಾಪ…’ ಅನಿಸಿತ್ತು.
ಈ ವಿಷಯ ಹೇಗೋ ಮನೆಯ ಹಿರಿಯರಿಗೆ ಗೊತ್ತಾಗಿ, “ನಿಮಗೆ ಬುದ್ಧಿ ಇದೆಯಾ….? ಅಂಥ ಸಾತ್ವಿಕ ಮನುಷ್ಯನಿಗೆ ಸುಳ್ಳು ಹೇಳಿದ್ದೀರಲ್ಲ…. ಇಂಥ ಕಥೆ ಕಟ್ಟೋಕೆ ಮನಸ್ಸಾದ್ರೂ ಹೇಗ್ಬಂತು….? ನಿಮ್ಮ ಹುಡುಗಾಟ ಯಾಕೋ ಅತಿಯಾಯ್ತು,” ಅಂತ ಬೈದು ಬುದ್ಧಿ ಹೇಳಿದರು.
ಈ ಹುಡುಗಿಯರ ಸ್ವಭಾವ ಬರೀ ತರಲೆ ತುಂಟಾಟಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಎಷ್ಟೋ ಸಾರಿ ಕಾಲೇಜಿಗೆ ಹೋಗುವಾಗ ತಿಂಡಿ ಡಬ್ಬಿ ತಗೊಂಡು ಹೋಗಿ ಹಾಸ್ಟೆಲ್ ನಲ್ಲಿದ್ದ ಗೆಳತಿಯರಿಗೆ ಕೊಟ್ಟು ಅವರು ತಿಂದು ಖುಷಿ ಪಡುವುದನ್ನು ಕಂಡು ಇವರು ತೃಪ್ತಿ ಪಟ್ಟುಕೊಳ್ಳುತ್ತಿದ್ದುದ್ದೂ ಉಂಟು.
ಪರೀಕ್ಷೆ ಹತ್ತಿರ ಬಂದಾಗ ಹುಡುಗಿಯರು ಕಷ್ಟಪಟ್ಟು ಓದತೊಡಗಿದರು. ಆಟ ಹುಡುಗಾಟ ಎಲ್ಲಾ ಕಡಿಮೆ ಆಯ್ತು. ಅಂತೂ ಒಳ್ಳೇ ನಂಬರ್ ತಗೊಂಡು ಡಿಗ್ರಿ ಮುಗಿಸಿದ ಹುಡುಗಿಯರಿಗೆ ಒಂದೇ ದಿಸ, ಒಂದೇ ಛತ್ರದಲ್ಲಿ ಮದುವೆಯಾಯಿತು. ಆದರೆ ಒಂದೇ ಊರಿಗಂತೂ ಅಲ್ಲ. ಒಬ್ಬಳು ಉತ್ತರಕ್ಕೆ ಮತ್ತೊಬ್ಬಳು ದಕ್ಷಿಣಕ್ಕೆ. ಅಂದರೆ ಮಧುರಾ ಮುಂಬೈಗೆ, ಗೀತಾ ಮದರಾಸಿಗೆ.
ಕಾಲಚಕ್ರ ಉರುಳಿತು. ಅಪರೂಪಕ್ಕೆ ಒಮ್ಮೆ ಇಬ್ಬರು ಭೇಟಿಯಾದರೂ ಆ ಭೇಟಿ ತೃಪ್ತಿ ಕೊಟ್ಟಿರಲಿಲ್ಲ.
ಆ ವರ್ಷದ ಬೇಸಿಗೆ ರಜೆಯಲ್ಲಿ ಮಧುರಾ ಮತ್ತು ಗೀತಾ ಇಬ್ಬರೂ ತವರೂರಿಗೆ ಬಂದಿಳಿದರು. ಕಾರಣ, `ಅಜ್ಜಿ ತಾತ ನಿಮ್ಮಿಬ್ಬರನ್ನೂ ನೋಡಬೇಕು ಅಂತ ಆಸೆ ಪಡ್ತಾ ಇದ್ದಾರೆ. ಅವರಿಗೆ ಆರೋಗ್ಯ ಸರಿ ಇಲ್ಲ ಬೇಗ ಬನ್ನಿ,’ ಎಂದು ಅವರಿಗೆ ಫೋನ್ ಕಾಲ್ ಹೋಗಿತ್ತು.
ಮಧುರಾ ಮತ್ತು ಗೀತಾ ಅವರವರ ಗಂಡ ಮತ್ತು ಮಕ್ಕಳನ್ನು ಮನೆಯಲ್ಲೇ ಬಿಟ್ಟು ಒಂದಿಷ್ಟು ಬುದ್ಧಿವಾದ ಹೇಳಿ ತವರುಮನೆಗೆ ಬಂದೇಬಿಟ್ಟರು. ಮನೆಯಲ್ಲಿ ಸಂಭ್ರಮವೋ ಸಂಭ್ರಮ! ಆಶ್ಚರ್ಯ ಎನ್ನುವಂತೆ ಇವರಿಬ್ಬರೂ ಬಂದ ಒಂದೆರಡು ದಿನಗಳಲ್ಲೇ ಅಜ್ಜಿ, ತಾತ ಚೇತರಿಸಿಕೊಂಡದ್ದು ಎಲ್ಲರಿಗೂ ಮತ್ತಷ್ಟು ಖುಷಿಯಾಯ್ತು. ಮನೆಯೆಲ್ಲಾ ಹಬ್ಬದ ಸಡಗರ ತುಂಬಿ ತುಳುಕಿತು.
ಅಂದು ರಾತ್ರಿ ಹತ್ತು ಗಂಟೆಯ ಸಮಯ. ಮಧುರಾ, ಗೀತಾ ಇಬ್ಬರೂ ಒಂದೇ ರೂಮಿನಲ್ಲಿ ಮಲಗಿಕೊಂಡಿದ್ದರು. ಒಂದೇ ಮಂಚ, ಒಂದೇ ಹಾಸಿಗೆ…. ಒಂದೇ ಹೊದಿಕೆಯಲ್ಲಿ ತೂರಿಕೊಂಡಿದ್ದ ಅವರಿಬ್ಬರ ಹೃದಯದಲ್ಲಿ ಪರಿಪೂರ್ಣ ಆನಂದ ತುಂಬಿಕೊಂಡಿತ್ತು.
“ಲೇ ಮಧು…. ನಿಂಗೆ ಇಬ್ಬರು ಗಂಡು ಮಕ್ಕಳು ಅಲ್ವಾ…..?”
“ಹ್ಞೂಂ…. ಇದು ನಿಂಗೂ ಗೊತ್ತಿದೆಯಲ್ಲ. ಅದರಲ್ಲೇನು ವಿಶೇಷ….?”
“ನಂಗೆ ಇಬ್ಬರು ಹೆಣ್ಣುಮಕ್ಕಳು. ”
“ನಂಗೊತ್ತು.”
“ನಮ್ಮ ಮಕ್ಕಳನ್ನು ತುಂಬಾ ಚೆನ್ನಾಗಿ ಓದಿಸೋಣ. ಒಳ್ಳೆಯ ವಿದ್ಯಾವಂತರಾಗಿ ಯಾವುದಾದರೂ ಒಂದು ರೀತಿಯಲ್ಲಿ ದೇಶ ಸೇವೆ ಮಾಡೋ ಹಾಗೇ ಪ್ರೇರೇಪಿಸೋಣ.”
“ನಾನೊಂದು ವಿಷಯ ಹೇಳ್ಲಾ….?”
“ಹೇಳು….”
“ಭವಿಷ್ಯದ ವಿಷಯ ಈಗ ಬೇಡ.”
“ಸರಿ….”
“ವರ್ತಮಾನ ಬೇಡ.”
“ಮತ್ತೇ….?”
“ವಾಪಸ್ಸು ಹಿಂದಕ್ಕೆ ಹೋಗಿಬಿಡೋಣ….”
“ಹಿಂದಕ್ಕೆ ಹೋಗೋದಾ…..?”
“ಹ್ಞೂಂ….”
“ಕಳೆದು ಹೋದದ್ದನ್ನು ನೆನಪಿಸಿಕೊಳ್ಳಬಾರ್ದು ಅಂತಾರಲ್ಲಾ ಕೆಲವರು?”
“ಆ ತಲೆಕೆಟ್ಟ ಕೆಲವರ ವಿಷಯ ಬೇಡ. ಈಗ ನಾನು ಹೇಳೋದನ್ನು ಸುಮ್ನೇ ಕೇಳು.”
“ಆಯ್ತು ಹೇಳೇ ಮಾರಾಯ್ತಿ….?”
“ನಾವಿಬ್ರೂ ಈಗ ಹಿಂದಿನ ದಿನಗಳಿಗೆ ಹೋಗಿಬಿಡೋಣ. ಆ ದಿನಗಳಲ್ಲಿ ನಮ್ಮಿಬ್ಬರ ಮಧ್ಯೆ ಇದ್ದ ಆ ಕನ್ಸರ್ನ್, ಆ ಪ್ರೀತಿ, ಆ ರಿಲೇಶನ್ ಶಿಪ್….. ಎಲ್ಲವನ್ನೂ ಮತ್ತೆ ಮತ್ತೆ ನೆನಪಿಸಿಕೊಳ್ಳೋಣ. ಆ ಸಿಹಿದಿನಗಳು ಮತ್ತೆ ನಮ್ಮ ಬದುಕಲ್ಲಿ ಬರೋಲ್ವಾ ಅಲ್ವಾ….?”
“ಹ್ಞೂಂ…..”
“ಅದ್ರಿಂದ ನಾವಿಬ್ರೂ ಈಗ ಗಂಡ, ಮನೆ, ಮಕ್ಕಳನ್ನು ಮರೆತುಬಿಡೋಣ. ನಮ್ಮ ಮದುವೆಗಿಂತ ಮುಂಚೆ ಮಾಡುತ್ತಿದ್ದ ತರಲೆ ತುಂಟಾಟಗಳನ್ನು ಮಾತ್ರ ನಮ್ಮ ಮನಸ್ಸಿನ ತುಂಬಾ ತುಂಬಿಕೊಂಡು ಹಾಯಾಗಿ ಮಲಗಿಬಿಡೋಣ ಸರಿಯಾ…?”
“ಓ…ಕೆ….!”
ಮಧುರಾ ಮತ್ತು ಗೀತಾ ಇಬ್ಬರೂ ಪರಸ್ಪರ ಕೈಗಳನ್ನು ಗಟ್ಟಿಯಾಗಿ ಬೆಸೆದುಕೊಂಡರು. ಮನಸ್ಸಿನ ತುಂಬಾ ಹಿಂದಿನ ಉಲ್ಲಾಸ ಉತ್ಸಾಹಗಳನ್ನು ತುಂಬಿಕೊಂಡರು. ಆ ಕ್ಷಣದಲ್ಲಿ ಬೇರೆಲ್ಲ ಮರೆತುಹೋಯ್ತು. ಸವಿನೆನಪುಗಳು ಅವರ ಎದೆಯಲ್ಲಿ ಹೂವಾಗಿ ಅರಳಿತು. ತುಟಿಯಂಚಿನ ನಗು ಬಹು ಹೊತ್ತಿನವರೆಗೂ ಹಾಗೇ ಇತ್ತು.





