ನಮ್ಮ ಸನಾತನ ಧರ್ಮದ ಪುರಾಣ ಪರಂಪರೆಯಲ್ಲಿ ವಾಮನ ಜಯಂತಿ ಅಥವಾ ವಾಮನ ದ್ವಾದಶಿಗೆ ವಿಶೇಷ ಮಹತ್ವವಿದೆ. ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಐದನೇ ಅವತಾರವೆಂದು ಪರಿಗಣಿಸಲಾಗುವ ವಾಮನಾವತಾರವು ಕೇವಲ ಬಲಿಚಕ್ರವರ್ತಿಯ ಕಥೆಯಲ್ಲ; ಅಹಂಕಾರದ ಮೇಲೆ ವಿನಯ, ಅಧಿಕಾರದ ಮೇಲೆ ಧರ್ಮ, ಸಂಪತ್ತಿನ ಮೇಲೆ ದಾನಶೀಲತೆ ಮತ್ತು ಭಕ್ತಿಯ ಮಹತ್ವವನ್ನು ಸಾರುವ ವಿಶಿಷ್ಟ ಪುರಾಣ ಪ್ರಸಂಗವಾಗಿದೆ.

vamana1

ನಿತ್ಯ ಪೂಜೆಯ ಸಂದರ್ಭದಲ್ಲಿ ವಿಷ್ಣುವಿನ ನಾಮಾವಳಿಗಳನ್ನು ಸ್ಮರಿಸುವಾಗ ಅಚ್ಯುತಾಯ ನಮಃ, ಅನಂತಾಯ ನಮಃ, ಗೋವಿಂದಾಯ ನಮಃ, ತ್ರಿವಿಕ್ರಮಾಯ ನಮಃ, ವಾಮನಾಯ ನಮಃ ಎಂದು ಜಪಿಸುವ ಸಂಪ್ರದಾಯವೂ ಇದೆ. ‘ವಾಮನ’ ಎಂದರೆ ಕುಳ್ಳಗಿನ ರೂಪ. ತ್ರಿವಿಕ್ರಮ’ ಎಂದರೆ ಮೂರು ಹೆಜ್ಜೆಗಳಲ್ಲಿ ವಿಶ್ವವನ್ನೇ ಅಳೆಯುವ ಮಹಾವಿಶ್ವರೂಪ.

ಹಿಂದೂ ಪುರಾಣ ಪರಂಪರೆಯ ಪ್ರಕಾರ, ಭಾದ್ರಪದ ಶುಕ್ಲ ದ್ವಾದಶಿಯಂದು, ಶ್ರವಣ ನಕ್ಷತ್ರದ ಸಂದರ್ಭದಲ್ಲಿ ಕಶ್ಯಪ ಮಹರ್ಷಿ ಮತ್ತು ಅದಿತಿ ದೇವಿಯ ಪುತ್ರನಾಗಿ ವಾಮನನು ಅವತರಿಸಿದನೆಂದು ಶ್ರೀಮದ್ಭಾಗವತವು ವಿವರಿಸುತ್ತದೆ. ಈ ದಿನವನ್ನು ವಾಮನ ಜಯಂತಿ ಅಥವಾ ವಾಮನ ದ್ವಾದಶಿಯಾಗಿ ಆಚರಿಸಲಾಗುತ್ತದೆ.

ಬಲಿಚಕ್ರವರ್ತಿ ಯಾರು?

ವಾಮನಾವತಾರದ ಕಥೆಯಲ್ಲಿ ಬಲಿಚಕ್ರವರ್ತಿಗೆ ಅತ್ಯಂತ ಪ್ರಮುಖ ಸ್ಥಾನವಿದೆ. ಪುರಾಣಗಳಲ್ಲಿ ಬಲಿಯನ್ನು ಪ್ರಹ್ಲಾದನ ಮೊಮ್ಮಗ ಮತ್ತು ವಿರೋಚನನ ಪುತ್ರ ಎಂದು ವಿವರಿಸಲಾಗಿದೆ. ಆತ ಅಸುರ ವಂಶಕ್ಕೆ ಸೇರಿದವನಾಗಿದ್ದರೂ ಮಹಾವಿಷ್ಣುವಿನ ಭಕ್ತನಾಗಿದ್ದ ಮತ್ತು ದಾನಶೀಲತೆ ಹಾಗೂ ವಚನಪಾಲನೆಗೆ ಪ್ರಸಿದ್ಧನಾಗಿದ್ದನೆಂದು ಕಥೆಗಳು ಹೇಳುತ್ತವೆ.

ಹಿಂದೂ ಧರ್ಮ ಗ್ರಂಥಗಳ ಪ್ರಕಾರ, ಈ ಹಿಂದೆ ಭೂ ಲೋಕದಲ್ಲಿ ಬಲಿ ಚಕ್ರವರ್ತಿ ಎಂಬ ಪ್ರಬಲ ರಾಕ್ಷಸ ರಾಜನಿದ್ದನು. ಆತ ಮಹಾವಿಷ್ಣುವಿನ ಭಕ್ತನಾಗಿದ್ದರೂ ಪರಮ ಅಹಂಕಾರಿ ಮತ್ತು ದಬ್ಬಾಳಿಕೆಯವನಾಗಿ ಮೂರು ಲೋಕವನ್ನು ಗೆದ್ದು ತನ್ನ ಮುಷ್ಟಿಯಲ್ಲಿ ಇಟ್ಟುಕೊಳ್ಳಲು ಬಯಸಿ, ಭೂಮಿ ಮತ್ತು ಪಾತಾಳ ಲೋಕವನ್ನು ಗೆದ್ದು, ಆಕಾಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಲುವಾಗಿ ದೇವತೆಗಳ ರಾಜನಾದ ಇಂದ್ರನ ಜೊತೆ ಪದೇ ಪದೇ ಯುದ್ಧವನ್ನು ಮಾಡುತ್ತಿದ್ದನು. ಇಂತಹ ಯುದ್ದಹ್ದ ಸಮಯದಲ್ಲಿ ಇಂದ್ರನ ಪ್ರಭಲ ದಾಳಿಯಿಂದ ಅಸುರರ ರಾಜ ಬಲಿಯು ಪ್ರಜ್ಞಾಹೀನನಾಗಿ ಮರಣಶಯ್ಯೆಯಲ್ಲಿರುವಾಗ, ಅಸುರರ ಗುರುಗಳಾದ ಶ್ರೀ ಶುಕ್ರಾಚಾರ್ಯರು ಸಂಜೀವಿನಿ ಔಷಧಿಯನ್ನು ನೀದಿ ಬಲಿಯೂ ಸೇರಿದಂತೆ ಆ ಯುದ್ಧದಲ್ಲಿ ಅಸುನೀಗಿದ್ದ ಉಳಿದ ರಾಕ್ಷಸರಿಗೆ ಮರುಜೀವ ನೀಡುತ್ತಾರೆ. ತನ್ನ ಮೇಲೇ ಧಾಳಿ ನಡೆಸಿದ ಇಂದ್ರನ ವಿರುದ್ಧ ಕ್ರೋಧಗೊಂಡ ಬಲಿಚಕ್ರವರ್ತಿಯು ಮಹಾವಿಷ್ಣುವಿನನ್ನು ಕುರಿತಾಗಿ ಉಗ್ರ ತಪಸ್ಸು ಮಾಡಿ ಆ ತಪಸ್ಸಿನ ಮೂಲಕ ದೈವಿಕ ರಥ, ತ್ರಿಶೂಲ ಮತ್ತು ರಕ್ಷಾಕವಚವನ್ನು ವರವಾಗಿ ಗಳಿಸುವ ಮೂಲಕ ದೇವತೆಗಳಿಗಿಂತ ಶಕ್ತಿಶಾಲಿಯಾಗುತ್ತಾನೆ.

ಅದಿತಿ–ಕಶ್ಯಪರ ಮಗನಾಗಿ ವಾಮನನ ಅವತಾರ

vamana3

ಈ ರೀತಿಯಾಗಿ ಪ್ರಭಲನಾದ ಬಲಿಯು ಇಂದ್ರನ ಪಟ್ಟವನ್ನು ಕಿತ್ತುಕೊಳ್ಳಲು ಹೊಂಚುಹಾಕುತ್ತಿರುವ ವಿಷಯವನ್ನು ತಿಳಿದ ಇಂದ್ರನು, ಬಲಿಯನ್ನು ಯುದ್ಧದಲ್ಲಿ ಸೋಲಿಸಲು ಆಸಾಧ್ಯ ಎಂಬುದನ್ನು ಅರಿತು ಅವನಿಂದ ರಕ್ಷಣೆ ಮಾಡಲು ಬಲಿ ಚಕ್ರವರ್ತಿಯ ಆರಾಧ್ಯದೈವನಾದ ಮಹಾವಿಷ್ಣುವಿನ ಮೊರೆ ಹೋಗುತ್ತಾನೆ. ದೇವತೆಗಳ ಸಂಕಷ್ಟವನ್ನು ಪರಿಹರಿಸಲು ಭಗವಾನ್ ವಿಷ್ಣುವು ತನ್ನ ದಶಾವತಾರದ ಐದನೇ ಅವತಾರವಾಗಿ ವಾಮನನಾಗಿ ಅವತರಿಸಲು ನಿರ್ಧರಿಸಿ ಭಾದ್ರಪದ ಮಾಸದ ಶುಕ್ಲ ಪಕ್ಷದ ದ್ವಾದಶಿಯ ದಿನದಂದು ಶ್ರವಣ ನಕ್ಷತ್ರದಲ್ಲಿ ಋಷಿ ಕಶ್ಯಪ ಮತ್ತು ಅದಿತಿ ದಂಪತಿಗಳ ಸುಪುತ್ರನಾಗಿ ಈ ಭೂಲೋಕದಲ್ಲಿ ಜನಿಸುತ್ತಾನೆ. ನೋಡಲು ಕುಳ್ಳಗೆ ಮುದ್ದಾಗಿದ್ದ ಆ ಮಗುವಿಗೆ ವಾಮನ ಎಂದು ಹೆಸರಿಡುತ್ತಾರೆ. ಕಾಲ ಕಾಲಕ್ಕೆ ತಕ್ಕಂತೆ ಆ ಪುಟ್ಟ ಮಗುವು ಬೆಳೆಯುತ್ತಾ ಹೋದಂತೆ ಆತನಿಗೆ ಚೌಲ ಮತ್ತು ಉಪನಯನಗಳು ಮುಗಿದು ಆತ ಸಕಲ ವೇದಾಭ್ಯಾಸದಲ್ಲಿ ತೊಡಗಿರುತ್ತಾನೆ.

ಶ್ರೀಮದ್ಭಾಗವತದ 8ನೇ ಸ್ಕಂಧದ 18ನೇ ಅಧ್ಯಾಯದಲ್ಲಿ ವಾಮನನ ಅವತಾರವನ್ನು ವಿವರಿಸಲಾಗಿದೆ. ಅವತಾರ ಸಂದರ್ಭದಲ್ಲಿ ವಿಷ್ಣು ದಿವ್ಯಸ್ವರೂಪದಲ್ಲಿ ಕಾಣಿಸಿಕೊಂಡು, ನಂತರ ವಾಮನ—ಅಂದರೆ ಕುಳ್ಳಗಿನ ಬ್ರಾಹ್ಮಣ ಬಾಲಕನ ರೂಪವನ್ನು ಧರಿಸಿದನೆಂದು ಪುರಾಣ ಹೇಳುತ್ತದೆ. ವಾಮನನು ಕೈಯಲ್ಲಿ ಛತ್ರಿ, ದಂಡ ಮತ್ತು ಕಮಂಡಲವನ್ನು ಹಿಡಿದುಕೊಂಡು ಬ್ರಹ್ಮಚಾರಿ ವಟುವಿನ ರೂಪದಲ್ಲಿ ಬಲಿಚಕ್ರವರ್ತಿಯ ಯಜ್ಞಶಾಲೆಯತ್ತ ತೆರಳಿದನೆಂದು ಭಾಗವತ ಪುರಾಣ ವಿವರಿಸುತ್ತದೆ.

ಬಲಿಯ ಅಶ್ವಮೇಧ ಯಜ್ಞ

ಆ ಸಮಯದಲ್ಲಿ ಬಲಿಚಕ್ರವರ್ತಿ ತನ್ನ ಸಾಮ್ರಾಜ್ಯ ಮತ್ತು ಪ್ರಭಾವವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ಅಶ್ವಮೇಧ ಯಜ್ಞವನ್ನು ನಡೆಸುತ್ತಿದ್ದನು. ಯಜ್ಞಕ್ಕೆ ಆಗಮಿಸುವ ಬ್ರಾಹ್ಮಣರು ಮತ್ತು ಅತಿಥಿಗಳು ಏನೇ ಕೇಳಿದರೂ ತಮ್ಮ ಶಕ್ತಿಗೆ ತಕ್ಕಂತೆ ದಾನ ಮಾಡುವುದಾಗಿ ಬಲಿ ಪ್ರತಿಜ್ಞೆ ಮಾಡಿದ್ದನೆಂದು ಪುರಾಣ ಕಥನ ಹೇಳುತ್ತದೆ. ಇದೇ ಸಂದರ್ಭವನ್ನು ಬಳಸಿಕೊಂಡು ವಾಮನನು ಯಜ್ಞಶಾಲೆಗೆ ಪ್ರವೇಶಿಸುತ್ತಾನೆ. ವಾಮನನ ತೇಜಸ್ಸು ಮತ್ತು ವ್ಯಕ್ತಿತ್ವದಿಂದ ಆಕರ್ಷಿತನಾದ ಬಲಿ ಆತನನ್ನು ಗೌರವದಿಂದ ಸ್ವಾಗತಿಸಿ, ನಿನಗೆ ಏನು ಬೇಕು? ಕೇಳು, ಕೊಡುತ್ತೇನೆ ಎಂದು ಹೇಳುತ್ತಾನೆ.

ಆಗ ವಾಮನನು ಕೇಳಿದ್ದು ಕೇವಲ ಮೂರು ಹೆಜ್ಜೆಗಳಷ್ಟು ಭೂಮಿ! ಬಲಿಗೆ ಇದು ಅತ್ಯಂತ ಸಣ್ಣ ಬೇಡಿಕೆಯಾಗಿ ಕಾಣುತ್ತದೆ. ತನ್ನ ಬಳಿ ಅಪಾರ ಸಂಪತ್ತು ಮತ್ತು ವಿಶಾಲ ಸಾಮ್ರಾಜ್ಯವಿರುವಾಗ ಈ ಪುಟ್ಟ ಬಾಲಕನಿಗೆ ಮೂರು ಹೆಜ್ಜೆ ಭೂಮಿ ಕೊಡುವುದು ದೊಡ್ಡ ವಿಷಯವೇ ಅಲ್ಲ ಎಂದು ಭಾವಿಸುತ್ತಾನೆ. ಆದರೆ ಇದೇ ಕ್ಷಣದಲ್ಲಿ ಕಥೆಯ ಮಹತ್ವದ ತಿರುವು ಆರಂಭವಾಗುತ್ತದೆ.

ಶುಕ್ರಾಚಾರ್ಯರ ಎಚ್ಚರಿಕೆ

vamana5

ಬಲಿಯ ಗುರುಗಳಾದ ಶುಕ್ರಾಚಾರ್ಯರು, ವಾಮನನ ನಿಜಸ್ವರೂಪವನ್ನು ಅರಿತುಕೊಳ್ಳುತ್ತಾರೆ. ಬಂದಿರುವುದು ಸಾಮಾನ್ಯ ವಟುವಲ್ಲ, ಸ್ವತಃ ಮಹಾವಿಷ್ಣುವೇ ವಾಮನ ರೂಪದಲ್ಲಿ ಬಂದಿದ್ದಾನೆ ಎಂದು ಅವರು ಗ್ರಹಿಸುತ್ತಾರೆ. ಆದ್ದರಿಂದ ಬಲಿಗೆ ದಾನ ನೀಡದಂತೆ ಎಚ್ಚರಿಸುತ್ತಾರೆ. ಆದರೆ ಬಲಿ ತನ್ನ ಮಾತಿನಿಂದ ಹಿಂದೆ ಸರಿಯುವುದಿಲ್ಲ. ತಾನು ನೀಡಿದ ವಚನವನ್ನು ಮುರಿಯುವುದು ತನ್ನ ಧರ್ಮಕ್ಕೆ ವಿರುದ್ಧ ಎಂದು ನಿರ್ಧರಿಸುತ್ತಾನೆ. ಇಲ್ಲಿಯೇ ಬಲಿಚಕ್ರವರ್ತಿಯ ಮತ್ತೊಂದು ಗುಣ—ವಚನಪಾಲನೆ—ಮುನ್ನೆಲೆಗೆ ಬರುತ್ತದೆ.

ಮೂರು ಹೆಜ್ಜೆ ಕೇಳಿದ ವಾಮನ ತ್ರಿವಿಕ್ರಮನಾದದ್ದು ಹೇಗೆ?

ಬಲಿ ದಾನ ನೀಡಲು ಒಪ್ಪಿದ ತಕ್ಷಣ ವಾಮನನು ತನ್ನ ನಿಜಸ್ವರೂಪವನ್ನು ಪ್ರದರ್ಶಿಸುತ್ತಾನೆ. ಪುಟ್ಟ ವಾಮನನ ದೇಹ ಕ್ಷಣಕ್ಷಣಕ್ಕೂ ವಿಸ್ತರಿಸುತ್ತಾ ಹೋಗುತ್ತದೆ. ಆತ ತ್ರಿವಿಕ್ರಮನಾಗಿ ವಿಶ್ವವ್ಯಾಪಿ ರೂಪವನ್ನು ತಾಳುತ್ತಾನೆ. ಮೊದಲ ಹೆಜ್ಜೆಯಲ್ಲಿ ಭೂಮಿಯನ್ನು, ಎರಡನೇ ಹೆಜ್ಜೆಯಲ್ಲಿ ಸ್ವರ್ಗ ಮತ್ತು ಅಂತರಿಕ್ಷವನ್ನು ಆವರಿಸಿದ ನಂತರ, ಮೂರನೇ ಹೆಜ್ಜೆಗೆ ಸ್ಥಳವೇ ಉಳಿಯದ ಪರಿಸ್ಥಿತಿ ನಿರ್ಮಾಣವಾಗುತ್ತದೆ

vamana1

ಆಗ ಬಲಿ ತನ್ನ ತಪ್ಪನ್ನು ಅರಿತುಕೊಂಡು, ಮೂರನೇ ಹೆಜ್ಜೆಯನ್ನು ನನ್ನ ತಲೆಯ ಮೇಲೆ ಇಡಿ ಎಂದು ಅರ್ಪಿಸಿಕೊಂಡನೆಂದು ಪುರಾಣ ಪ್ರಸಂಗ ಹೇಳುತ್ತದೆ. ವಿಷ್ಣು ಆತನ ತಲೆಯ ಮೇಲೆ ಮೂರನೇ ಹೆಜ್ಜೆ ಇಟ್ಟು ಬಲಿಯನ್ನು ಪಾತಾಳ ಲೋಕಕ್ಕೆ ಕಳುಹಿಸುತ್ತಾನೆ. ಆದರೆ ಇದು ಬಲಿಯ ಸಂಪೂರ್ಣ ನಾಶವಲ್ಲ. ಬಲಿಯ ಭಕ್ತಿ ಮತ್ತು ವಚನಪಾಲನೆಯಿಂದ ಸಂತುಷ್ಟನಾದ ವಿಷ್ಣು ಆತನಿಗೆ ಅನುಗ್ರಹ ನೀಡುತ್ತಾನೆ.

ಬಲಿಯ ಸೋಲಿನಲ್ಲೂ ಭಕ್ತಿಯ ಗೆಲುವು

ವಾಮನ ಕಥೆಯ ಅತ್ಯಂತ ವಿಶಿಷ್ಟ ಅಂಶ ಇದೇ. ಬಲಿ ತನ್ನ ಸಾಮ್ರಾಜ್ಯವನ್ನು ಕಳೆದುಕೊಂಡರೂ ಭಕ್ತಿಯನ್ನು ಕಳೆದುಕೊಳ್ಳಲಿಲ್ಲ. ತನ್ನ ತಲೆಯನ್ನೇ ಭಗವಂತನಿಗೆ ಮೂರನೇ ಹೆಜ್ಜೆಯಾಗಿ ಅರ್ಪಿಸಿದನು. ಹೀಗಾಗಿ ಈ ಕಥೆಯನ್ನು ಕೇವಲ “ವಿಷ್ಣು ಬಲಿಯನ್ನು ಸೋಲಿಸಿದ ಕಥೆ” ಎಂದು ನೋಡುವುದಕ್ಕಿಂತ, ಅಹಂಕಾರವನ್ನು ತ್ಯಜಿಸಿ ಭಗವಂತನಿಗೆ ಸಂಪೂರ್ಣ ಶರಣಾಗುವ ಭಕ್ತನ ಕಥೆಯಾಗಿಯೂ ಅರ್ಥೈಸಲಾಗುತ್ತದೆ.

. ಮುಂದೇ ನಾರದರ ಸಲಹೆಯ ಮೇಲೆ ಲಕ್ಷ್ಮೀ ದೇವಿಯು ಶ್ರಾವಣ ಮಾಸದ ಹುಣ್ಣಿಮೆಯಂದು ತಂಗಿಯ ರೂಪದಲ್ಲಿ ಬಲಿ ಚಕ್ರವರ್ತಿಗೆ ರಕ್ಷೆಯನ್ನು ಕಟ್ಟಿ, ರಕ್ಷಾಬಂಧನ ಕಾಣಿಕೆಯ ರೂಪದಲ್ಲಿ ಮಹಾವಿಷ್ಣುವಿನನ್ನು ಬಲಿ ಚಕ್ರವರ್ತಿಯನ್ನು ಬಿಡಿಸಿಕೊಂಡು ಹೋದಳು ಎಂಬ ಪ್ರತೀಕವಿದೆ.

ಬಲಿಗೆ ದೊರೆತ ವರ,  ಬಲಿ ಪಾಡ್ಯಮಿ, ಓಣಂ ಸಂಬಂಧ

ಈ ರೀತಿಯಾಗಿ ತನ್ನ ಆರಾಧ್ಯ ದೈವ ಮಹಾವಿಷ್ಣುವಿನ ಆಶೀರ್ವಾದದಿಂದ ಶಾಶ್ವತ ಲೋಕವನ್ನು ಪಡೆಯುವ ದಿನ ಬಲಿ ಪಾಡ್ಯಮಿ ಆಗಿದ್ದರೆ, ವರ್ಷಕ್ಕೊಮ್ಮೆ ತನ್ನ ರಾಜ್ಯವನ್ನು ಭೇಟಿ ಮಾಡಲು ಅವಕಾಶ ಕೊಡಬೇಕೆಂದು ಬಲಿಯು ವಿಷ್ಣುವನ್ನು ಕೋರಿದಾಗ ಅದಕ್ಕೆ ಅನುವು ಮಾಡಿಕೊಟ್ಟಾಗ, ಬಲಿಯು ಪಾತಳದಿಂದ ಭೂಲೋಕಕ್ಕೆ ಬಂದು ತನ್ನ ರಾಜ್ಯದ ಜನರನ್ನು ಭೇಟಿ ಮಾಡುವ ದಿನವನ್ನು ಕೇರಳ ರಾಜ್ಯದಲ್ಲಿ ಜಾತಿ, ಮತ ಮತ್ತು ಪಂಥಗಳ ಬೇಧವಿಲ್ಲದೇ, ಓಣಂ ಎಂದು ಸಡಗರ ಸಂಭ್ರಮಗಳಿಂದ ಆಚರಿಸಲಾಗುತ್ತದೆ. ಅದೇ ರೀತಿಯಲ್ಲಿ ತಾನು ಪ್ರತಿದಿನವೂ ಮಾಹಾ ವಿಷ್ಣುವನ್ನು ಪೂಜಿಸಲು ಅನುವಾಗುವಂತೆ ವಿಷ್ಣುವು ತನ್ನೊಂದಿಗೆ ಸದಾ ಕಾಲವೂ ಇರುವಂತೆ ಕೇಳಿಕೊಂಡದ್ದರಿಂದ ಸಂತುಷ್ಟನಾದ ಭಗವಾನ್ ವಿಷ್ಣುವು ಬಲಿಚಕ್ರವರ್ತಿಯ ದ್ವಾರಪಾಲಕನಾಗಲು ಒಪ್ಪಿಕೊಳ್ಳುತ್ತಾನೆ . ಹೀಗೆ ವಾಮನ ಕಥೆ ಕೇವಲ ಧಾರ್ಮಿಕ ಆಚರಣೆಯಲ್ಲದೆ, ಭಾರತದ ವಿವಿಧ ಪ್ರದೇಶಗಳಲ್ಲಿ ವಿಭಿನ್ನ ಸಾಂಸ್ಕೃತಿಕ ರೂಪಗಳಲ್ಲಿ ಜೀವಂತವಾಗಿರುವ ಪುರಾಣ ಪರಂಪರೆಯಾಗಿದೆ.

ಬಲಿ ಚಕ್ರವರ್ತಿಗೆ ರಕ್ಷೆಯನ್ನು ಕಟ್ಟಿದ ಲಕ್ಷ್ಮೀ ದೇವಿ

ಮುಂದೇ ನಾರದರ ಸಲಹೆಯ ಮೇಲೆ ಲಕ್ಷ್ಮೀ ದೇವಿಯು ಶ್ರಾವಣ ಮಾಸದ ಹುಣ್ಣಿಮೆಯಂದು ತಂಗಿಯ ರೂಪದಲ್ಲಿ ಬಲಿ ಚಕ್ರವರ್ತಿಗೆ ರಕ್ಷೆಯನ್ನು ಕಟ್ಟಿ, ರಕ್ಷಾಬಂಧನ ಕಾಣಿಕೆಯ ರೂಪದಲ್ಲಿ ಮಹಾವಿಷ್ಣುವಿನನ್ನು ಬಲಿ ಚಕ್ರವರ್ತಿಯನ್ನು ಬಿಡಿಸಿಕೊಂಡು ಹೋದಳು ಎಂಬ ಪ್ರತೀಕವಿದೆ.

ವಾಮನ ಜಯಂತಿಯ ಪೂಜಾ ವಿಧಾನ

ವಾಮನ ಜಯಂತಿಯಂದು ಭಕ್ತರು ಸಾಮಾನ್ಯವಾಗಿ ವಿಷ್ಣುವಿನ ವಾಮನ ರೂಪವನ್ನು ಆರಾಧಿಸುತ್ತಾರೆ. ಮನೆಗಳಲ್ಲಿ ಅಥವಾ ದೇವಾಲಯಗಳಲ್ಲಿ ವಾಮನನ ಚಿತ್ರ ಅಥವಾ ವಿಗ್ರಹವನ್ನು ಪೂಜಿಸಿ, ವಿಷ್ಣು ಸಹಸ್ರನಾಮ, ವಾಮನ ಸ್ತೋತ್ರ ಮತ್ತು ವಿಷ್ಣು ಸಂಬಂಧಿತ ಮಂತ್ರಗಳನ್ನು ಪಠಿಸುವ ಸಂಪ್ರದಾಯವಿದೆ. ಕೆಲವು ಸಂಪ್ರದಾಯಗಳಲ್ಲಿ ಉಪವಾಸ ಅಥವಾ ನಿಯಮಿತ ಆಹಾರಾಚರಣೆ ಮಾಡಲಾಗುತ್ತದೆ. ವಾಮನನಿಗೆ ಅನ್ನ, ಮೊಸರು ಮತ್ತು ಸಿಹಿ ಪದಾರ್ಥಗಳನ್ನು ನೈವೇದ್ಯವಾಗಿ ಅರ್ಪಿಸಿ, ನಂತರ ಬ್ರಾಹ್ಮಣರು ಅಥವಾ ವಟುಗಳಿಗೆ ದಾನ ನೀಡುವ ಪದ್ಧತಿಯೂ ಕಂಡುಬರುತ್ತದೆ.  ದಾನಕ್ಕೆ ವಿಶೇಷ ಮಹತ್ವ ನೀಡುವುದಕ್ಕೂ ಬಲಿಚಕ್ರವರ್ತಿಯ ದಾನಶೀಲತೆಯ ಕಥೆಯೇ ಹಿನ್ನೆಲೆಯಾಗಿದೆ.

vamana7

ಇನ್ನು ವಾಮನನ ದೇವಾಲಯವಿರುವ ಖಜುರಾಹೋ, ಚೆರುಕೂರು, ತೃಕ್ಕಕ್ಕ ಮತ್ತು ತಮಿಳುನಾಡಿನ ಕಾಂಚೀಪುರಂನಲ್ಲಿ ಕಡೆಗಳಲ್ಲಿ ವಾಮನನಿಗೆ ವಿಶೇಷವಾದ ಪೂಜೆಯನ್ನು ಮಾಡುವುದನ್ನು ನೋಡಲು ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತಾದಿಗಳು ಈ ಶ್ರೀಕ್ಷೇತ್ರದ ವಾಮನನ ದೇವಾಲಯಗಳಿಗೆ ಬಂದು ಶ್ರದ್ಧಾ ಭಕ್ತಿಗಳಿಂದ ವಾಮನನನ್ನು ಪೂಜಿಸಿ ಆತನ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಇನ್ನು ಭಕ್ತಿ ಪಂಥ ಇಸ್ಕಾನ್ ದೇವಾಲಯಗಳಲ್ಲಿ ವಾಮನ ದ್ವಾದಶಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಶ್ರೀ ಕೃಷ್ಣನ ಅರ್ಚಾ ವಿಗ್ರಹವನ್ನು ಕಾವಿ ವಸ್ತ್ರ, ಕೈಯಲ್ಲಿ ದಂಡ, ಛತ್ರಿ ಮತ್ತು ಕಮಂಡಲುಗಳಿಂದ ವಾಮನದೇವನ ರೂಪದಲ್ಲಿ ಅಲಂಕರಿಸಲಾಗುತ್ತದೆ.

ವಾಮನ ಜಯಂತಿ ಮತ್ತು ವಟುಗಳಿಗೆ ದಾನ

vamana6

ಈ ರೀತಿ ಭೂಲೋಕದ ಜನರ ಪೀಡಕನಾಗಿದ್ದ ಬಲಿಯನ್ನು ನಿಗ್ರಹಿಸಿದ ವಾಮನ ಜಯಂತಿಯ ದಿನ ವಾಮನನಿಗೆ ಇಷ್ಟವಾದ ಅನ್ನ ಮತ್ತು ಮೊಸರನ್ನು ನೇವೇದ್ಯ ಮಾಡಿ ಯಥಾ ಶಕ್ತಿ ವಟುಗಳಿಗೆ ದಾನ ಮಾಡುವುದು ಶ್ರೇಷ್ಠ ಎಂಬುದಾಗಿ ಪುರಾಣದಲ್ಲಿ ತಿಳಿಸಲಾಗಿದೆ. ವಾಮನನು ಬ್ರಹ್ಮಚಾರಿ ವಟುವಿನ ರೂಪದಲ್ಲಿ ಬಂದಿದ್ದರಿಂದ, ಕೆಲವು ಪ್ರದೇಶಗಳಲ್ಲಿ ಈ ದಿನ ವಟುಗಳಿಗೆ ಅನ್ನ, ವಸ್ತ್ರ, ಛತ್ರಿ, ಪುಸ್ತಕಗಳು ಅಥವಾ ಅಗತ್ಯ ವಸ್ತುಗಳನ್ನು ದಾನ ಮಾಡುವ ಸಂಪ್ರದಾಯವಿದೆ. ದಾನವೆಂದರೆ ಕೇವಲ ಹಣ ನೀಡುವುದಲ್ಲ; ಅಗತ್ಯವಿರುವವರಿಗೆ ಅವರ ಅವಶ್ಯಕತೆಗೆ ಅನುಗುಣವಾಗಿ ಸಹಾಯ ಮಾಡುವುದಾಗಿದೆ. ಭಾದ್ರಪದ ಮಾಸದ ಏಕಾದಶಿ ಮತ್ತು ದ್ವಾದಶಿಯ ದಿನದಂದು ಎರಡೂ ದಿನಗಳು ಬೆಳಿಗ್ಗೆಯೇ ಎದ್ದು ಸ್ನಾನ ಸಂಧ್ಯಾವಂಧನೆಗಳ್ನು ಮುಗಿಸಿ ಎರಡೂ ದಿನಗಳೂ ಸಹಾ ಉಪವಾಸವಿದ್ದು, ವಿಷ್ಣು ಮತ್ತು ವಾಮನ ಪಟ ಇಲ್ಲವೇ ಪ್ರತಿಮೆಯನ್ನು ದೇವರ ಮನೆಯಲ್ಲಿಟ್ಟು ಯಥಾಶಕ್ತಿ ಭಕ್ತಿ ಭಾವನೆಗಳಿಂದ ಪೂಜೆಯನ್ನು ಮಾಡಿ, ತಮ್ಮ ಜೀವನದಲ್ಲಿನ ಕಷ್ಟ ನಷ್ಟಗಳು ಮರೆಯಾಗಲು ಯಥಾ ಶಕ್ತಿ ವಿಷ್ಣು ಸಹಸ್ತ್ರನಾಮವನ್ನು ಪಠಿಸಿ, ಸೂರ್ಯಾಸ್ತದ ವೇಳೆಯಲ್ಲಿ ಮತ್ತೊಮ್ಮೆ ಪೂಜೆ ಮಾಡಿ ವಾಮನ ಕಥೆಯನ್ನು ಆಲಿಸಿ ಮನೆಗೆ ಬಂದ ಬಂಧು ಮಿತ್ರರಿಗೆ ವಾಮನನ ಇಷ್ಟವಾದ ಮೊಸರನ್ನವನ್ನು ಪ್ರಸಾದವಾಗಿ ವಿತರಿಸುವುದಲ್ಲದೇ, ವಟುಗಳಿಗೆ ಕೊಡೆ ಮತ್ತಿತರ ಉಡುಗೊರೆಗಳನ್ನು ನೀಡುವ ಮೂಲಕ ವಾಮನ ಜಯಂತಿಯನ್ನು ಸಂಪೂರ್ಣಗೊಳಿಸುತ್ತಾರೆ.

ಭಾರತದ ವಿವಿಧ ಭಾಗಗಳಲ್ಲಿ ವಾಮನ ಆರಾಧನೆ

ವಾಮನ ಆರಾಧನೆ ಭಾರತದಲ್ಲಿ ವಿವಿಧ ರೂಪಗಳಲ್ಲಿ ಕಂಡುಬರುತ್ತದೆ. ವಾಮನನಿಗೆ ಸಂಬಂಧಿಸಿದ ಪ್ರಸಿದ್ಧ ಕ್ಷೇತ್ರಗಳಲ್ಲಿ ಕೇರಳದ ತ್ರಿಕ್ಕಕ್ಕರ, ಉತ್ತರ ಭಾರತದ ಕೆಲವು ವೈಷ್ಣವ ಕ್ಷೇತ್ರಗಳು ಹಾಗೂ ದಕ್ಷಿಣ ಭಾರತದ ದೇವಾಲಯಗಳು ಪ್ರಮುಖವಾಗಿವೆ. ಕೇರಳದ ತ್ರಿಕ್ಕಕ್ಕರ ಕ್ಷೇತ್ರಕ್ಕೆ ವಾಮನ ಮತ್ತು ಮಹಾಬಲಿ ಪರಂಪರೆಯೊಂದಿಗೆ ವಿಶೇಷ ಸಂಬಂಧವಿದೆ. ಓಣಂ ಆಚರಣೆಯಲ್ಲಿಯೂ ಈ ಪುರಾಣಕಥೆಗೆ ಪ್ರಮುಖ ಸ್ಥಾನವಿದೆ. ಅದೇ ರೀತಿ ವೈಷ್ಣವ ಪರಂಪರೆಯ ವಿವಿಧ ಮಠಗಳು ಮತ್ತು ದೇವಾಲಯಗಳಲ್ಲಿ ವಾಮನ ದ್ವಾದಶಿಯನ್ನು ವಿಶೇಷ ಪೂಜೆ, ಭಜನೆ, ಪಾರಾಯಣ ಮತ್ತು ಪ್ರಸಾದ ವಿತರಣೆಯೊಂದಿಗೆ ಆಚರಿಸಲಾಗುತ್ತದೆ.

ವಾಮನನ ಕೈಯಲ್ಲಿರುವ ಛತ್ರಿ, ದಂಡ ಮತ್ತು ಕಮಂಡಲದ ಸಂಕೇತವೇನು?

ವಾಮನನ ಚಿತ್ರಣವನ್ನು ಗಮನಿಸಿದರೆ ಸಾಮಾನ್ಯವಾಗಿ ಛತ್ರಿ, ದಂಡ ಮತ್ತು ಕಮಂಡಲ ಕಾಣಿಸುತ್ತವೆ. ಇವು ಕೇವಲ ಅಲಂಕಾರಿಕ ವಸ್ತುಗಳಲ್ಲ. ವಾಮನನು ರಾಜನಂತೆ ಶಸ್ತ್ರಸಜ್ಜಿತನಾಗಿ ಬರುವುದಿಲ್ಲ; ಬದಲಾಗಿ ಸರಳ ಬ್ರಹ್ಮಚಾರಿ ವಟುವಿನ ರೂಪದಲ್ಲಿ ಬರುತ್ತಾನೆ. ಇದರ ಮೂಲಕ ಪುರಾಣ ಕಥನವು ಶಕ್ತಿ ಯಾವಾಗಲೂ ಬಾಹ್ಯ ಬಲದಲ್ಲೇ ಇರಬೇಕೆಂದಿಲ್ಲ ಎಂಬ ಸಂಕೇತವನ್ನು ನೀಡುತ್ತದೆ. ಒಬ್ಬ ಪುಟ್ಟ ವಟುವಿನ ರೂಪದಲ್ಲಿ ಬಂದವನೇ ಕ್ಷಣಾರ್ಧದಲ್ಲಿ ತ್ರಿವಿಕ್ರಮನಾಗಿ ವಿಶ್ವವನ್ನು ಆವರಿಸುವುದು ಈ ಕಥೆಯ ಅತ್ಯಂತ ನಾಟಕೀಯ ಭಾಗವಾಗಿದೆ.

ವಾಮನ ಕಥೆಯ ಜೀವನ ಸಂದೇಶ

ವಾಮನ ಜಯಂತಿಯ ಮಹತ್ವವನ್ನು ಕೇವಲ ಧಾರ್ಮಿಕ ಆಚರಣೆಗೆ ಸೀಮಿತಗೊಳಿಸದೆ ಅದರಲ್ಲಿರುವ ಜೀವನ ಸಂದೇಶವನ್ನೂ ಗಮನಿಸಬಹುದು.

  • ಅಹಂಕಾರ ಎಷ್ಟೇ ದೊಡ್ಡದಾದರೂ ಅದಕ್ಕೆ ಮಿತಿ ಇರುತ್ತದೆ.
  • ಸಂಪತ್ತು ಮತ್ತು ಅಧಿಕಾರ ಶಾಶ್ವತವಲ್ಲ.
  • ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ವ್ಯಕ್ತಿತ್ವದ ಪ್ರಮುಖ ಗುಣ.
  • ದಾನಶೀಲತೆ ಮನುಷ್ಯನನ್ನು ದೊಡ್ಡವನನ್ನಾಗಿಸುತ್ತದೆ.
  • ಭಕ್ತಿಯಲ್ಲಿ ಶರಣಾಗತಿಯೂ ಒಂದು ಮಹತ್ವದ ಮೌಲ್ಯ.

ಮತ್ತು ಅತ್ಯಂತ ಮುಖ್ಯವಾಗಿ—ವಾಮನನ ಮೂರು ಹೆಜ್ಜೆಗಳು ಮನುಷ್ಯನ ಸ್ವಾಮಿತ್ವದ ಭಾವನೆಗೆ ಒಂದು ಆಧ್ಯಾತ್ಮಿಕ ಪ್ರಶ್ನೆಯನ್ನು ಎತ್ತುತ್ತವೆ: “ನನ್ನದು” ಎಂದು ನಾವು ಹೇಳಿಕೊಳ್ಳುವ ಈ ಜಗತ್ತಿನಲ್ಲಿ ನಿಜವಾಗಿ ನಮ್ಮದಾಗಿರುವುದು ಎಷ್ಟು?

ವಾಮನನಿಂದ ತ್ರಿವಿಕ್ರಮನವರೆಗೆ…

ಪುಟ್ಟ ವಟುವಾಗಿ ಬಂದು ಮೂರು ಹೆಜ್ಜೆ ಭೂಮಿಯನ್ನು ಕೇಳಿದ ವಾಮನನು, ತನ್ನ ವಿಶ್ವರೂಪದಿಂದ ಮೂರು ಲೋಕಗಳನ್ನೇ ಆವರಿಸಿದ ತ್ರಿವಿಕ್ರಮನಾದನು. ಈ ಕಾರಣದಿಂದಲೇ ವಿಷ್ಣುವಿನ ನಾಮಾವಳಿಯಲ್ಲಿ ತ್ರಿವಿಕ್ರಮಾಯ ನಮಃ ಮತ್ತು ವಾಮನಾಯ ನಮಃ ಎಂಬ ನಾಮಗಳಿಗೆ ವಿಶೇಷ ಸ್ಥಾನವಿದೆ. ವಾಮನ ಜಯಂತಿ ಹೀಗಾಗಿ ಕೇವಲ ಒಂದು ಅವತಾರದ ಜನ್ಮದಿನವಲ್ಲ. ಅದು ವಿನಯದ ಶಕ್ತಿ, ದಾನದ ಮಹತ್ವ, ವಚನಪಾಲನೆಯ ಮೌಲ್ಯ, ಅಹಂಕಾರದ ಮಿತಿ ಮತ್ತು ಭಕ್ತಿಯ ಶರಣಾಗತಿಯ ಸಂದೇಶವನ್ನು ನೆನಪಿಸುವ ಪರ್ವವಾಗಿದೆ. ಭಗವಂತನ ಮುಂದೆ ತನ್ನ ಸಂಪತ್ತು, ಅಧಿಕಾರ ಮತ್ತು ಸಾಮ್ರಾಜ್ಯವನ್ನೆಲ್ಲ ಬಿಟ್ಟು ತನ್ನ ತಲೆಯನ್ನೇ ಅರ್ಪಿಸಿದ ಬಲಿಚಕ್ರವರ್ತಿಯ ಕಥೆ ಇಂದಿಗೂ ಜನಮಾನಸದಲ್ಲಿ ಜೀವಂತವಾಗಿರುವುದಕ್ಕೆ ಇದೇ ಕಾರಣ.

ವಾಮನನು ನಮಗೆ ಕಲಿಸುವ ಪಾಠ ಒಂದೇ—ಎತ್ತರವನ್ನು ಅಳೆಯುವುದು ದೇಹದ ಗಾತ್ರದಿಂದಲ್ಲ; ವ್ಯಕ್ತಿಯ ವಿನಯ, ದಾನಶೀಲತೆ ಮತ್ತು ಧರ್ಮನಿಷ್ಠೆಯಿಂದ, ವಾಮನಾಯ ನಮಃ । ತ್ರಿವಿಕ್ರಮಾಯ ನಮಃ ।

ಹೀಗೆ ವಾಮನ ಜಯಂತಿಯು ಕೆಡುಕಿನ ಮೇಲೆ ಒಳಿತಿನ ವಿಜಯದ ದಿನವಾಗಿದ್ದು ಹೆಮ್ಮೆಯ ಮೇಲೆ ನಮ್ರತೆ ಮತ್ತು ಅಹಂಕಾರದ ಮೇಲೆ ಭಕ್ತಿಯ ವಿಜಯವನ್ನು ಆಚರಿಸುವ ಹಬ್ಬವಾಗಿದೆ. ಇದು ವಿನಮ್ರ, ಉದಾರ ಮತ್ತು ದೇವರಿಗೆ ನಂಬಿಗಸ್ತರಾಗಿರುವುದರ ಮಹತ್ವವನ್ನು ಜಗತ್ತಿಗೆ ನೆನಪಿಸುವ ದಿನವಾದ್ದರಿಂದ, ಈ ದಿನದಂದು ನಾವೆಲ್ಲರೂ ಭಕ್ತಿಯಿಂದ ಭಗವಾನ್ ವಾಮನನನ್ನು ಪೂಜಿಸುವ ಮೂಲಕ ಹಿಂದಿನ ಜನ್ಮ ಮತ್ತು ಈ ಜನ್ಮದಲ್ಲಿ ತಿಳಿದೋ ಇಲ್ಲವೇ ತಿಳಿಯದೋ ಮಾಡಿರಬಹುದಾದ ಪಾಪವನ್ನು ಕಳೆದುಕೊಂಡು ಮೋಕ್ಷವನ್ನು ಪಡೆಯೋಣ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

ನಮ್ಮ ಸನಾತನದ ಧರ್ಮದಲ್ಲಿ ವಾಮನ ಜಯಂತಿಗೆ ಹೆಚ್ಚಿನ ಮಹತ್ವವಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ