ಒಬ್ಬ ಚಿತ್ರಕಲಾವಿದೆಯಾಗಿ ಮಾತ್ರವಲ್ಲದೆ, ಕುಂಚದ ಜೊತೆ ಲೇಖನಿಯನ್ನೂ ಹಿಡಿದು, ಅಪೂರ್ವ ಅನನ್ಯ ಲೇಖನ ಕಥೆ, ಕಾದಂಬರಿಗಳನ್ನು ಕನ್ನಡಿಗರಿಗೆ ಇತ್ತಿರುವ ಶಾಂತಿ ವಾಸು ಅವರ ಸಂಪೂರ್ಣ ಪರಿಚಯ ಪಡೆಯೋಣವೇ……?

ದೇಹದ ಬೇನೆಗೆ ಬದಲಾಗದ ದೇವತೆ, ನಂಬಿದ ಕೆಲ, ನೀಡುವ ದ್ರೋಹದ ಪೆಟ್ಟಿಗೆ ಬದಲಾಗುವುದು….

ಸಣ್ಣ ಬಿರುಕೂ ಪ್ರವೇಶಿಸು ಗಾಳಿಯ ನೋಡಿ ತಿಳಿ….

ಸಾಂಗತ್ಯದಲ್ಲಿ ದೊರೆತ ಸಣ್ಣ ಸಾಂತ್ವಾನದಿ,

ಬಾಡಿದ ಮನ ಚಿಗುರಿಸಲು ಕಲಿ……

ಅದೆಷ್ಟು ಒಳ ಅರ್ಥಗಳಿಂದ ತುಂಬಿದೆ ಈ ವಚನಗಳು!

ಜೀವನದ ಸುಖ ಸೌಕರ್ಯಗಳನ್ನು ಅನುಭವಿಸುವ ದಿನಗಳಲ್ಲಿ ಆಘಾತಗಳು ಸುಳಿವು ಕೊಡದೆ ಬಂದೆರಗಿದಾಗ ಕೋಮಲ ಮನಸ್ಸಿಗಾಗುವ ಘಾಸಿಗಳು, ಹೇಳತೀರದ ಬಾಧೆಗಳನ್ನು ತಂದೊಡ್ಡುತ್ತದೆ. ವಿಪರ್ಯಾಸವೇ, ಇಲ್ಲ ವಿಧಿಯಾಟವೇ…? ಏನ್ನೆನ್ನೋಣ ಇದಕ್ಕೆ!

ನಿಶ್ಶಬ್ದ ವಾತಾವರಣ, ಸುಂದರವಾದ ಗೃಹ ನಿರ್ಮಾಣ. ಒಳ ಅಡಿಯಿಡುತ್ತಿದ್ದಂತೆಯೇ ಎದುರಾಯಿತು ಈ ಕವಿಯಿತ್ರಿಯ ಭಾವಾಲೋಕದ ಪ್ರಪಂಚಕುಲದ ಮನ ಚಿಂತಿಸದೆ, ಒಂದರೆ ಕ್ಷಣ ಇರದು ನೋಡು, ಚಿಂತೆ ತೊರೆದು, ದೇವತೆಯ ಮನಕೆ ಗುರುವನ್ನು ನೀಡಿ ನೋಡು.

ಕುಲದೇವತೆ ಕಾವ್ಯ ನಾಮಾಂಕಿತ ಕಾವ್ಯನಾಮದವರು ಇವರು. ಈ ಅದ್ಭುತ ಸಾಲಗಳು, ನಮ್ಮನ್ನು ಸ್ವಾಗತಿಸಿದ್ದು ಹೀಗೆ. ತನ್ನ ಆರಾಧ್ಯ ದೈವ ಸಾಯಿಬಾಬಾನ ಗುಡಿ, ಅಲ್ಲಲ್ಲ ಮನಮೋಹಕ ಮರದ ಕೆತ್ತನೆಯ ಮಂದಿರವದು. ನನಗೆ ಅರಿವಿಲ್ಲದಂತೆಯೇ ಹಸ್ತಗಳು ಒಂದಾಗಿ ಗುರುವಿಗೆ ನಮಸ್ಕರಿಸಿದವು. ಎಲ್ಲೆಲ್ಲೂ ಚಿತ್ತಾರ ಸುಂದರ ವಿನ್ಯಾಸದ ಮನೆ, ಬುದ್ಧನ ಧ್ಯಾನದ ಮಂದಹಾಸ ಬೀರುವ ಮೊಗ ಗೋಡೆಯ ಮೇಲೆ ಶಾಂತವಾಗಿತ್ತು. ತನ್ನದೇ ವಿನ್ಯಾಸದಲ್ಲಿ ಮನೆಯ ರೂಪುರೇಷೆಗಳು ಮೂಡಿಬಂದದ್ದನ್ನು ಬಹಳ ಹೆಮ್ಮೆಯಿಂದ ಹೇಳಿದಾಗ, ಆ ಮೊಗದಲ್ಲೇನೋ ಹೆಮ್ಮೆಯಿತ್ತು. ನೋವಿನ ಛಾಯೆಯು ಮೂಡಿತ್ತು. ಗೋಡೆಯ ಆಸುಗಳಿಗೆ ತಾವೇ ಬಿಡಿಸಿದ ಜಲವರ್ಣದ ಕಲಾಕುಂಚಗಳು ನಗುತ್ತಾ ಬೀಗುತ್ತಿದ್ದವು. ಇವರಲ್ಲೊಬ್ಬ ಕಲಾಕಾರರು, ಕವಿಯಿತ್ರಿ, ಕಥೆಗಾರ್ತಿ, ವಚನಗಾರ್ತಿ…. ಇನ್ನೂ ಮುಂದಕ್ಕೆ ಸಾಗಿದರೆ ಭಾಷಾ ಹೋರಾಟಗಾರ್ತಿ, ಛಲಗಾತಿ, ಹಿಡಿದ ಕೆಲಸ ಮಾಡಿ ಮುಗಿಸುವವರೆವಿಗೂ ಬಿಡದೇ ಸಾಗುವ ಮಾನಿನಿ. ಇವರೇ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿಗಳ ವಿಜೇತರಾದ ಶಾಂತಿ ವಾಸು.

ಬಾಲ್ಯದಿಂದಲೇ ಕಲಾಸಕ್ತಿ

ಕಸ್ತೂರಮ್ಮ ಮತ್ತು ವಾಸು ದಂಪತಿಗಳ ನಾಲ್ವರು ಪುತ್ರಿಯರಲ್ಲಿ ದ್ವಿತೀಯ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದರು. ಬಾಲ್ಯದಲ್ಲಿ ಬಹಳ ತುಂಟತನ ಚೇಷ್ಟೆಗಳಿಗೇ ಹೆಸರು ಮಾಡಿದ್ದರು. ಓದಿದ್ದು ಮಲ್ಲೇಶ್ವರದ ನಿರ್ಮಲಾ ರಾಣಿಸ್‌. ತರಗತಿಯೊಳಗೆ ಗಂಭೀರವಾಗಿ ಕುಳಿತು ಪಾಠ ಕೇಳಿದ ನೆನಪೇ ಇಲ್ಲವಂತೆ! ಬೋರ್ಡ್‌ ಮೇಲೆ ಕ್ಲಾಸ್‌ ಲೀಡರ್‌ ನಿಂದ ಹೆಸರು ಬರೆಸಿಕೊಂಡು ಹೊರಗೆ ಕುಳ್ಳಿರಿಸುತ್ತಿದ್ದ ಪ್ರಸಂಗಗಳೇ ಹೆಚ್ಚು. ಅಂದಿನ ಆ ಲೀಡರ್‌ ಗೆಳತಿ ಇಂದು ಹೇಳುತ್ತಾರಂತೆ… `ಬೋರ್ಡ್‌ ಮೇಲೆ ಹೆಸರು ಬರೆದ ನಾನೇನನ್ನೂ ಸಾಧಿಸದೇ ಹೋದೆ ಕಣೇ…. ಆದರೆ ನೀನು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿ ಸಾಧಕರ ಗುಂಪಲ್ಲಿ ಇರುವೆ. ನಿಜ ಗೆಳತಿ ನೀನು ನನ್ನ ಹೆಮ್ಮೆಯ ಗೆಳತಿ,’ ಎನ್ನುತ್ತಿರುತ್ತಾರಂತೆ.

ಓದಿನಲ್ಲಿ ಆಸಕ್ತಿ ಇರಲಿಲ್ಲ. ಚಿಕ್ಕಂದಿನಲ್ಲಿ ಅಲ್ಲಲ್ಲಿ ಕಳೆದುಹೋಗೋದೇ ಇವರ ದಿನಚರಿಯಾಗಿತ್ತಂತೆ. ತಾಯಿ ತಂದೆ ಹುಡುಕಿ ಕರೆತರೋದು ಮತ್ತೆ ಕಳೆದುಹೋಗೋದು…. ಇದನ್ನೆಲ್ಲಾ ಈಗ ನೆನೆಸಿಕೊಂಡರೆ ನಗು ಬರುತ್ತದೆ…. ಏಕೆ ಹೀಗೆ ಮಾಡುತ್ತಿದ್ದೆನೋ ಎನ್ನುತ್ತಾ ನಗುತ್ತಾರೆ, ಮಹಿಳಾ ಸಾಧಕಿ ಶಾಂತಿ ವಾಸು.

ತಾಯಿಯಿಂದ ರಾಮಾಯಣ, ಮಹಾಭಾರತ ಕಥೆಗಳನ್ನು ಕೇಳುತ್ತಿದ್ದೆ. ತಂದೆ ಲೈಬ್ರರಿಯಿಂದ ಪುಸ್ತಕಗಳನ್ನು ತಂದು ಕೊಡುತ್ತಿದ್ದರೆ, ತಾಯಿ ಓದುತ್ತಿದ್ದರು. ಅದನ್ನು ನೋಡಿ ಬೆಳೆದ ಇವರು ಪುಸ್ತಕ ಪ್ರೇಮಿಯಾದರು. ಫಿಲಂ ಹಾಡುಗಳ ರಾಗಗಳಿಗೆ ತಮ್ಮದೇ ಹೊಸ ಸಾಹಿತ್ಯ ಸೃಷ್ಟಿಸಿ ಹಾಡುತ್ತಿದ್ದುದು ಇವರ ಒಂದು ವಿಶೇಷತೆ.

IMG_20251215_230812

ಕಾದಂಬರಿ ಓದಿಗೆ ಪ್ರೇರಣೆ

ಯಂಡಮೂರಿಯವರ ಕಾದಂಬರಿಗಳಿಗೆ ಇವರು ಫಿದಾ ಆಗಿಬಿಟ್ಟಿದ್ದರು. ಯಾವಾಗ ಓದಿನ ಸೆಳೆತ ಇವರನ್ನು ಆವರಿಸಿಬಿಟ್ಟಿತೋ ಮನೆಗೆ ಪುಸ್ತಕಗಳ ಮಳೆಯೇ ಸುರಿಯಿತು. ಇವರ ಯಜಮಾನರು ತರಾಸುರವರ ಕಾದಂಬರಿಗಳನ್ನು ಓದುತ್ತಿದ್ದರೆ, ಇವರು ಭೈರಪ್ಪನವರ ಕಾದಂಬರಿಗಳನ್ನು ಓದುತ್ತಿದ್ದರು. ಒಂದೊಳ್ಳೆ ಫಿಲ್ಟರ್‌ ಕಾಫಿ ಹಿಡಿದು ದಂಪತಿಗಳು ಚರ್ಚೆಗೆ ಕುಳಿತರೆ ಸಮಯ ಹೋದದ್ದೇ ನೆನಪಾಗುತ್ತಿರಲಿಲ್ಲವಂತೆ.

ಪತ್ರೀಖನದ ವೈಶಿಷ್ಟ್ಯ

ಇವರ ಮಗದೊಂದು ವಿಶೇಷವೆಂದರೆ ಪತ್ರ ಬರೆಯುವುದು. ಇದು ಕುಶಲೋಪರಿ ಪತ್ರಗಳಲ್ಲ. ಮನೆಯವರನ್ನು ಎಚ್ಚರಿಸುವ ತಿದ್ದಿತೀಡುವ ಪತ್ರಗಳು. ಕೇಳಿ ನನಗೇ ಆಶ್ಚರ್ಯವಾಯಿತು. ಗಂಡನಿಗೆ ತನ್ನ ಮನದ ನಿವೇದನೆಗಳಿರಬಹುದು, ಮನದ ಆತಂಕ ನೋವುಗಳಿರಬಹುದು ಅದು ಸಾಗುತ್ತಿದ್ದದ್ದು ಪತ್ರದ ಮುಖೇನವೇ. ಇನ್ನು ಮಕ್ಕಳಿಗೆ ಬುದ್ಧಿವಾದ ಹೇಳಬೇಕೆಂದರೆ ಅಥವಾ ಮತ್ತೇನೋ ವಿಷಯಗಳನ್ನು ಹಂಚಿಕೊಳ್ಳಬೇಕು ಎಂದಾಗೆಲ್ಲಾ ಇವರ ಕೈ ಬರುತ್ತಿದ್ದುದೇ ಬಿಳಿಯ ಹಾಳೆ ಹಾಗೂ ಲೇಖನಿಗೆ.

ಮನೆಯಲ್ಲಿ ಯಾವುದೇ ಘಟನೆಗಳು ನಡೆದರೂ ಮೊದಲ ಪ್ರತಿಕ್ರಿಯೆ ಮುಖದ ಮೇಲೆ ಮೂಡದೆ, ಹೇಳಬೇಕೆನಿಸುವ ವಿಷಯವನ್ನು ಬರೆದು ಅವರುಗಳ ಮೇಜಿನ ಮೇಲೆ ಇಟ್ಟು ಬರುತ್ತಿರುವುದೇ ಇವರ ವಿಶೇಷತೆ!

ಚಿತ್ರಕಲೆಯಲ್ಲಿ ಪ್ರಾವೀಣ್ಯತೆ

ಜಲವರ್ಣ ಕಲೆಯಲ್ಲಿ ಇರುವ ಹೆಸರುವಾಸಿ. ಇವರ ಪ್ರಥಮ ಗುರು ಆರ್‌.ಎಸ್‌. ಅಯ್ಯಂಗಾರ್‌. ಒರಿಸ್ಸಾದ ರವೀಂದ್ರನಾಥ್ ಸಾಹುರವರ ಬಳಿ ಮಗಳನ್ನು ಚಿತ್ರಕಲೆ ಕಲಿಯಲು ಸೇರಿಸಿದ್ದು, ಗುರುಗಳಿಗೆ ಕ್ರಮೇಣ ಇವರಲ್ಲಿನ ಚಿತ್ರಕಲೆಯ ಆಸಕ್ತಿ ಕಂಡು ನೀವೇ ಏಕೆ ಕಲಿಯಬಾರದು ಎಂದರು. ಹೀಗೆ ಚಿತ್ರಕಲೆಯಲ್ಲಿ ಪ್ರಾವೀಣ್ಯತೆಯನ್ನು ಪಡೆದು 2006ರಲ್ಲಿ, ಚಿತ್ರಕಲೆಯೇ ಶಿಕ್ಷಣದ ಮೂಲವೆಂದು ಬಲವಾಗಿ ನಂಬಿ, ಮಕ್ಕಳ ಬೆಳವಣಿಗೆಗೆ ಹಾಗೂ ಪಠ್ಯಕ್ಕೆ ಪೂರಕವಾದ ಕ್ರಿಯಾತ್ಮಕ ಶೈಲಿಯ ಚಿತ್ರಕಲೆಯನ್ನು ಹೇಳಿಕೊಡುವ ಸಲುವಾಗಿ, ನಿಸರ್ಗ ಚಿತ್ರಾಲಯವನ್ನು ಒಬ್ಬ ವಿದ್ಯಾರ್ಥಿಯಿಂದ ಪ್ರಾರಂಭಿಸಿದರು.

IMG_20251215_230934

ತಮ್ಮದೇ ಪಠ್ಯಕ್ರಮ

ಇದಕ್ಕೆ ಇರದೇ ಪಠ್ಯಕ್ರಮ ಇರುವುದು ಬಹಳ ವಿಶೇಷದ ಸಂಗತಿ! ಇದುವರೆವಿಗೂ ನೂರಾರು ವಿದ್ಯಾರ್ಥಿಗಳು ಇವರ ಗರಡಿಯಲ್ಲಿ ಕಲಿತು ಹಲವೆಡೆ ಶಿಕ್ಷಕರಾಗಿ ಚಿತ್ರಕಲೆಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಎಲ್.ಕೆ.ಜಿ ಮಕ್ಕಳಿಂದ ಹಿಡಿದು ಹಿರಿಯ ಮಕ್ಕಳವರೆಗೂ ಚಿತ್ರಕಲೆಯನ್ನು ಹೇಳಿಕೊಡುತ್ತಾರೆ. ವಯೋಮಿತಿಯೇನೂ ಇಲ್ಲ. ಆಸಕ್ತಿಯಿಂದ ಬಂದವರಿಗೆ ಇವರು ಉತ್ತಮ ಗುರುಗಳಾಗುವುದಂತೂ ನಿಶ್ಚಿತ! ಇದರಿಂದ ಏಕಾಗ್ರತೆ ಹಾಗೂ ಬರವಣಿಗೆಯು ಬಹಳ ಬೆಳೆಯುತ್ತದೆ ಎನ್ನುತ್ತಾರೆ.

ಹಾಡಿಗೆ ತಕ್ಕ ಚಿತ್ರ ಬಿಡಿಸುವಿಕೆ

ಮಿಂಚು ಐಡಿಯಾಸ್‌ ಸಂಸ್ಥೆಯ ಮುಖಾಂತರ, ವೇದಿಕೆ ಮೇಲೆ ಹಾಡಿಗೆ ತಕ್ಕ ಚಿತ್ರ ಬಿಡಿಸುವ ಅದ್ಭುತ ಕಲೆಯನ್ನು ರೂಢಿಸಿಕೊಂಡು ಹತ್ತಾರು ಕಡೆ ಪ್ರದರ್ಶನ ನೀಡುತ್ತಾ ಪ್ರಸಿದ್ಧರಾಗಿದ್ದಾರೆ. ಕೇಂದ್ರ ಸರ್ಕಾರಿ ಸ್ವಾಮ್ಯದ, ಐಸಿಸಿಆರ್‌ ಸಂಸ್ಥೆ ಇವರ ಈ ಕಲೆಯನ್ನು ಗುರುತಿಸಿ ವೇದಿಕೆಯಲ್ಲಿ ಹಾಡಿಗೆ ಚಿತ್ರ ಬಿಡಿಸುವ ಕರ್ನಾಟಕದ ಮೊದಲ ಮಹಿಳೆ ಎಂಬ ಪ್ರಮಾಣಪತ್ರವನ್ನು ನೀಡಿ ಗೌರವಿಸಿದೆ.

ಹೀಗೆ ದೇಶಾದ್ಯಂತ ಸಂಚರಿಸಿ, ಹಲವಾರು ಅಭಿಯಾನಗಳಲ್ಲಿ ಪಾಲ್ಗೊಂಡು, ಪರಿಸರಕ್ಕೆ ಸಂಬಂಧಿಸಿದಂತೆ ದೇಶದ ಅನೇಕ ಅಭಿಯಾನ, ಕಾರ್ಯಾಗಾರ, ಶಿಬಿರಗಳಲ್ಲಿ ಭಾಗವಹಿಸಿ, ತಮ್ಮ ವಿಶಿಷ್ಟ ಶೈಲಿಯ ಚಿತ್ರಕಲಾ ಪ್ರತಿಭೆಯನ್ನು ಅನಾವರಣಗೊಳಿಸಿರುವರು. ಇವರು ಬಿಡಿಸಿದ ಕಲಾಕೃತಿಗಳು ಹೆಸರಾಂತ ಪತ್ರಿಕೆಗಳ ಮುಖಪುಟಗಳನ್ನು ಒಳಗೊಂಡಂತೆ ಹಲವೆಡೆ ಪ್ರಕಟವಾಗಿರುವುದು. ಇದರ ಮುಂದುವರಿದ ಭಾಗವಾಗಿ, ಸೇವೆಯ ಭಾಗವಾಗಿ, ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಪಠ್ಯ ಪೂರಕ ವಿಷಯಗಳನ್ನು ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಮುಖೇನ ತೋರಿಸುತ್ತಾ, ಮಕ್ಕಳಿಗೆ ಪಠ್ಯವನ್ನು ಸುಲಭಗೊಳಿಸುವ ಜೊತೆಗೆ ನಮ್ಮ ನಾಡಿನ ಜಲ ನೆಲ ಸಂರಕ್ಷಣೆಯ ಅರಿವು ಮೂಡಿಸುವಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಶೇಷ ಶೈಲಿಯ ಚಿತ್ರಕಲೆ

ಇವರ ವಿಶೇಷ ಶೈಲಿಯ ಚಿತ್ರಕಲೆಗಳನ್ನು ಗುರುತಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನೀಡಿದ ಧನ ಸಹಾಯ ಪಡೆದು, ತಮ್ಮದೇ ಆದ ವಿಶೇಷ ಶೈಲಿಯ ಕಲಾಕೃತಿಗಳ ಪ್ರದರ್ಶನವನ್ನು ದೇಶದ ಹಲವೆಡೆ ನೀಡುತ್ತಾ ಬಂದಿರುವರು. ಅವುಗಳಲ್ಲಿ ಮುಖ್ಯವಾಗಿ ಕೇರಳ, ಗೋವಾ, ಕೊಯಂಬತ್ತೂರು, ಮುಂಬೈ, ಕರ್ನಾಟಕದ ಬಂಡೀಪುರ, ಶಿವಮೊಗ್ಗ, ಕೆಮ್ಮಣ್ಣುಗುಂಡಿಗಳನ್ನು ಕೆಲವನ್ನಾಗಿ ಹೆಸರಿಸಬಹುದು.

ತಮ್ಮಲ್ಲಿ ವಿದ್ಯೆ ಕಲಿತ ವಿದ್ಯಾರ್ಥಿಗಳನ್ನು ಕಲಾಪ್ರಪಂಚಕ್ಕೆ ಪರಿಚಯಿಸುವ ಸಲುವಾಗಿ, ಅವರಿಗಾಗಿಯೂ ಸಹ ಹಲವು ಚಿತ್ರ ಪ್ರದರ್ಶನಗಳನ್ನು ಗ್ಯಾಲರಿಗಳಲ್ಲಿ ಹಾಗೂ ಚಿತ್ರಕಲಾ ಪರಿಷತ್ತಿನ ಚಿತ್ರಸಂತೆಯಲ್ಲೂ ಏರ್ಪಡಿಸಿರುವರು. ಕೇರಳದಲ್ಲಿ ಜನಸಂರಕ್ಷಣಾ ಅಭಿಯಾನದ ಅತಿಥಿಯಾಗಿ ಹಾಗೂ ಬಿದಿರು ಸಂರಕ್ಷಣಾ ಕಾರ್ಯಕ್ರಮದ ಉದ್ಘಾಟಕಿಯಾಗಿ ಭಾಗವಹಿಸುವ ಮೂಲಕ ಹೊರ ರಾಜ್ಯದಲ್ಲಿಯೂ ಹೆಜ್ಜೆಗುರುತು ಮೂಡಿಸಿರುವರು.

ಸಾಹಿತ್ಯ ಕ್ಷೇತ್ರದಲ್ಲಿ ಬರವಣಿಗೆ

ಸಾಹಿತ್ಯ ಕ್ಷೇತ್ರದಲ್ಲಿ ಅತ್ಯಂತ ಸರಳ ಸೂಕ್ಷ್ಮ ಹಾಗೂ ಸಂವೇದನಾಶೀಲ ಬರವಣಿಗೆಗಳನ್ನು ಉಸಿರಾಗಿಸಿಕೊಂಡು ಕನ್ನಡಿಗರ ಮನಗೆದ್ದಿರುವರು. ರಾಷ್ಟ್ರಮಟ್ಟದ ಪತ್ರಿಕೆಗಳನ್ನು ಒಳಗೊಂಡಂತೆ ಕರ್ನಾಟಕದಾದ್ಯಂತ ಕನ್ನಡದ ಪತ್ರಿಕೆಗಳಿಗೆ ಇವರ ಸರಳ ಶೈಲಿಯ ಬರವಣಿಗೆಗಳ ಮುಖೇನ ಚಿರಪರಿಚಿತರು. ಹಲವು ಲೇಖಕರ ಬರವಣಿಗೆಯ ಅಲೋಕನ, ಕಥೆಗಳು, ಮಕ್ಕಳ ಕಥೆಗಳು, ಅನುಭವದ ಕಥನಗಳು, ಕಥಾಸಂಚಿಕೆಗಳು, ಅಂಕಣಗಳು, ಪ್ರಬಂಧಗಳು, ಕಿರುನಾಟಕ, ವೈಚಾರಿಕ ಲೇಖನಗಳನ್ನು ಬರೆದು ಪ್ರಕಟಿಸುತ್ತಾ, ಹಲವು ಸ್ಥಳಗಳಲ್ಲಿ ಉಪನ್ಯಾಸಗಳನ್ನು ನೀಡುತ್ತಾ ಚಿರಪರಿಚಿತರಾಗಿ ಸಾಹಿತ್ಯ ಲೋಕವನ್ನು ಅಪ್ಪಿಕೊಂಡಿರುವರು.

ವಿಶಿಷ್ಟ ಶೈಲಿಯ ಚಿಂತನಾಕಾವ್ಯ

`ಶಾಲಾತ್ಮ ಪದಗಳು’ ಎನ್ನುವ ಶೀರ್ಷಿಕೆಯಲ್ಲಿ ರಚಿಸುವ ವಿಶಿಷ್ಟ ಶೈಲಿಯ ಚಿಂತನಾಕಾವ್ಯಗಳು ಹಲವರ ಮನ ಗೆದ್ದಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕವಿಗೋಷ್ಠಿಗಳಲ್ಲಿ ಭಾಗಹಿಸಿರುವರು. ಇವರು ಬರೆದ ಪ್ರಬಂಧ ಕವನಗಳು, ಮಕ್ಕಳ ಕಥೆಗಳು ಹಲವು ಸಂಸ್ಥೆಗಳ ಸಂಕಲನಗಳಲ್ಲಿ ಬೆಳಕು ಕಂಡಿವೆ. ಸಾಯಿಬಾಬಾರ ಕೆಲವು ಹಾಡುಗಳಿಗೆ ಸಂಗೀತ ಸಾಹಿತ್ಯವೆರಡನ್ನೂ ನೀಡಿ ಬಾಬಾರ ಆಶೀರ್ವಾದಕ್ಕೂ ಪಾತ್ರರಾಗಿರುವರು.

ಸೇವೆಯ ಭಾಗವಾಗಿ ಬೆಂಗಳೂರಿನ ಆಕಾಶವಾಣಿ ಹಾಗೂ ರೇಡಿಯೋ ಸಾರಥಿ ಸಮುದಾಯ ರೇಡಿಯೋದಲ್ಲಿ ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡುವ ಬಗ್ಗೆ ನೆಲ ಜಲ ಸಂರಕ್ಷಣೆ ಹಾಗೂ ಕೋವಿಡ್‌ ಬಗೆಗಿನ ಲೇಖನಗಳು ಹಾಗೂ ಕಥೆಗಳನ್ನು ಬರೆದು ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿರುವರು.

ರೇಡಿಯೋ ಕಾರ್ಯಕ್ರಮಗಳು

ಹಿರಿಯ ಲೇಖಕರಿಗಾಗಿ ರೇಡಿಯೋ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವಿಮರ್ಶೆಯನ್ನೂ ಮಾಡಿರುವರು. ಆಕಾಶವಾಣಿಯ ವಿವಿಧ ಭಾರತಿಯಲ್ಲಿ ಒಂದು ಗಂಟೆಯ ಸಂದರ್ಶನದ ಅತಿಥಿಯಾಗಿ ಭಾಗವಹಿಸಿದ ಹೆಮ್ಮೆಯೂ ಇವರಿಗಿರುವುದು.

ಸಾಧನೆಗೆ ಸಂದ ಪ್ರಶಸ್ತಿ

ಇವರ ಈ ಎಲ್ಲ ಸಾಧನೆಗಳಿಗೆ ದೊರತ ಪ್ರಶಸ್ತಿ ಪುರಸ್ಕಾರಗಳು ಅನೇಕ. ಯೂರೋಪಿನ ಟರ್ಕಿಯಲ್ಲಿ ನಡೆದ `ಬ್ಲೆಸ್ಡ್ ಲೇಡಿ ಅಪ್ ಅವರ್‌ ಟೈಮ್’ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಸರ್ಕಾರ ಪ್ರಶಸ್ತಿ, ಕರ್ನಾಟಕ ಕಲಾನಿಧಿ, ಶತಶೃಂಗ, ಕಲಾಕಿರಣರತ್ನ, ವೀರ ಮಹಿಳೆ, ವಿದ್ಯಾರತ್ನ, ಹಿರಿಯ ಕಲಾವಿದೆ ಪ್ರಶಂಸಾಪತ್ರ.

ಸರ್ಕಾರ ನೇಮಿಸಿದ ಜಗತ್ಪ್ರಸಿದ್ಧ ಮೈಸೂರು ದಸರಾ ಕಲಾಕೃತಿಗಳ ತೀರ್ಪುಗಾರ್ತಿ 2014, ಡಾ. ಅನುಪಮಾ ನಿರಂಜನ್ ಬಹುಮಾನ, ತ್ರಿವೇಣಿ ಸ್ಮೃತಿ, ನಂದಾದೀಪ, ಕನ್ನಡತಿ 2020, ಹೆಮ್ಮೆಯ ಕನ್ನಡತಿ, ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಅಖಿಲಭಾರತ ಕಯಿತ್ರಿಯರ ಸಮ್ಮೇಳನದಲ್ಲಿ ವಿಶೇಷ ಗೌರವ ಸನ್ಮಾನ ಗಳಿಸಿದ್ದಾರೆ.

ಪಂಜಾಬಿನ ಅಮೃತಸರದಲ್ಲಿ ರಾಷ್ಟ್ರಮಟ್ಟದ ಗೌರವ ಸನ್ಮಾನ, ಪ್ರಜಾವಾಣಿ ಪತ್ರಿಕೆಯಲ್ಲಿ ಅತ್ಯುತ್ತಮ ವಿಮರ್ಶೆ ಪಡೆದ ಇವರ `ಬಾಲ್ಯ ಕಾಣಿಸದ ಕನ್ನಡಿ’ ಕೃತಿಯನ್ನು ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ 2023ರಲ್ಲಿ ಅತ್ಯುತ್ತಮ ಕೃತಿಯೆಂದು ಪರಿಗಣಿಸಿ ರಾಂ ಕೆ ಹನುಮಂತಯ್ಯ ಹಾಗೂ ಹೆಬ್ಬಗೋಡಿ ಗೋಪಾಲಕೃಷ್ಣ ದತ್ತಿ ಪ್ರಶಸ್ತಿ ನೀಡಿ ಗೌರವಿಸಿದೆ.

ಬಜಾರಿನ ಕನ್ನಡಿ

`ಬಜಾರಿನ ಕನ್ನಡಿ’ ಕವನ ಸಂಕಲನಕ್ಕೆ ದ.ರಾ.ಬೇಂದ್ರೆ ಸಾಹಿತ್ಯ ಸನ್ಮಾನ ಪ್ರಶಸ್ತಿ ದೊರಕಿರುವದು. `ಹಂಗು ತೊರೆದಾಗ…’ ಕಥೆಗೆ ಹೆಣ್ಣಿನ ಕೈಯ ಹಣತೆ ಮನೋವೈಜ್ಞಾನಿಕ ಕಥೆಗೆ ತ್ರಿವೇಶಿ ಸ್ಮೃತಿ ಪ್ರಶಸ್ತಿ, ಆಲ್ಬಂ ದಾಟಿದ ಚಿತ್ರಗಳು ಕಥೆಗೆ ಬಹುಮಾನ ದೊರೆತು, ಅಮೆರಿಕಾದ ಮೇರಿ ಲ್ಯಾಂಡ್‌ ನ ಫಣಿ ಶ್ರೀನಾಥನಾರಾಯಣ್‌ ಕಥಾಸಂಕಲನದಲ್ಲಿ ಕಥೆ ಪ್ರಕಟವಾಗಿರುವುದು.

ಸಾಹಿತ್ಯಸಖಿ ರಾಜ್ಯಮಟ್ಟದ ಕವನ ಸ್ಪರ್ಧೆಯ ಬಹುಮಾನ, ಬೆಳಗಾವಿ, ಅಮೃತಸರ, ಒರಿಸ್ಸಾ, ಶಿವಮೊಗ್ಗ ರಾಷ್ಟ್ರಮಟ್ಟದ ಸಾಹಿತ್ಯ ವೇದಿಕೆಗಳಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿದ ಹೆಮ್ಮೆ ಇವರಿಗಿದೆ.

ನಿಸರ್ಗ ಪ್ರಕಾಶನ

ಇರದೇ ನಿಸರ್ಗ ಪ್ರಕಾಶನದ ಮೂಲಕ ಇವರ ಆರಾಧ್ಯ ದೈವ ಶಿರಡಿ ಸಾಯಿಬಾಬಾ ಜೊತೆಗಿನ ಅನುಭವಗಳ ಸರ್ವಂತರ್ಯಾಮಿ ಆತ್ಮಪದ ಕಾವ್ಯದ ಬಜಾರಿನ ಕನ್ನಡಿ ಹಾಗೂ ಲೇಖನಗಳ ಕೃತಿ `ಬಾಲ್ಯ ಕಾಣಿಸದ ಕನ್ನಡಿ’ ಹಾಗೂ `ವಚನಗನ್ನಡಿ’ (ಕುಲದೇವತೆ) ಕೃತಿಗಳು ಲೋಕಾರ್ಪಣೆಗೊಂಡಿವೆ. `ಅಂತಃಪುರ ದರ್ಪಣ’ ಕಥಾ ಸಂಕಲನ ಹಾಗೂ `ನಾನು ರಾಧೆಯಾದೆ’ ಕವನ ಸಂಕಲನಗಳು ಮುದ್ರಣದ ಹಂತದಲ್ಲಿವೆ.

`ಬಜಾರಿನ ಕನ್ನಡಿ’ ಕವನ ಸಂಕಲನದ ಕವನಗಳನ್ನು ಹಾವೇರಿಯ ಶಾಲೆಗಳಲ್ಲಿ ಪಾಠವಾಗಿ ಬೋಧಿಸಿದ್ದಾರೆ. `ಬಾಲ್ಯ ಕಾಣಿಸದ ಕನ್ನಡಿ’ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ `ಮುಕುರ’ ಎಂಬ ಕಾದಂಬರಿ ಮಂತಣಿ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದೆ.

ಆಧುನಿಕ ಅಭಿಯಾನ

ಇವರು ಇತ್ತೀಚೆಗೊಂದು ಅಭಿಯಾನವನ್ನು ಪ್ರಾರಂಭಿಸಿರುವರು. ಅಭಿಮಾನದ ಕನ್ನಡಕ್ಕೊಂದು ಅಭಿಯಾನ…. ಹೆಣ್ಣ ಗೌರವಿಸುವ ಭಾಷೆಯಾಗಲಿ ಕನ್ನಡ… ಈ ಎರಡೂ ಶೀರ್ಷಿಕೆಗಳನ್ನೂ ಮುಂದಿಟ್ಟುಕೊಂಡು, ಸುಮಾರು ವೇದಿಕೆಗಳಲ್ಲಿ ಇದರ ಬಗ್ಗೆ ಮಾತನಾಡಿದ್ದಾರೆ. ಸಾರ್ವಜನಿಕವಾಗಿ ಹೆಣ್ಣಿನ ಮೇಲಿನ ಮಾತುಗಳ ಲೈಂಗಿಕ ಶೋಷಣೆ ನಿಲ್ಲಲಿ ಎಂಬ ಜಾಗೃತಿ ಮೂಡಿಸುತ್ತಿದ್ದಾರೆ. ಶೋಷಣೆ ಎಂಬುದು ಬರೀ ದೇಹಕ್ಕಲ್ಲ, ಮಾನಸಿಕವಾಗಿಯೂ ಕೆಲವು ಕಡೆ ನಡೆಯುತ್ತಿದೆ. ಇವುಗಳಿಗೆ ಕಡಿವಾಣ ಹಾಕಬೇಕಿದೆ, ಎಂಬ ನಿಟ್ಟಿನಲ್ಲಿ ಹೋರಾಡುತ್ತಿದ್ದಾರೆ. ಇದು ಏಕಾಂಗಿ ಹಾಗೂ ಶಾಂತ ರೀತಿಯಲ್ಲೇ ಹೋರಾಡುತ್ತಿದ್ದಾರೆ. ಈಗಾಗಲೇ ಈ ಅಭಿಯಾನವನ್ನು ಮುಂದುವರಿಸುವ ಪ್ರಯತ್ನವಾಗಿ ಕವನ ಲೇಖನಗಳನ್ನು ವಕೀಲರು, ಸ್ತ್ರೀವಾದಿಗಳು, ಪ್ರೊಫೆಸರ್‌ ಗಳಿಂದಲೂ, ವಿದ್ಯಾರ್ಥಿ, ಮಾಧ್ಯಮಗಾರರಿಂದಲೂ ಪಡೆಯುತ್ತಿದ್ದಾರೆ. ಇಷ್ಟರಲ್ಲೇ ಇವೆಲ್ಲ ಪುಸ್ತಕ ರೂಪದಲ್ಲಿ ಹೊರತರು ಪ್ರಬಲ ಪ್ರಯತ್ನ ನಡೆಯುತ್ತಿದೆ.

ಒಟ್ಟಿನಲ್ಲಿ ಇವರ ಈ ಎಲ್ಲಾ ಸಾಧನೆಗಳಿಗೆ ಪತಿ ವಾಸೂರರ ಜೊತೆಗೆ, ಕುಟುಂಬದವರೆಲ್ಲರ ಸಂಪೂರ್ಣ ಪ್ರೋತ್ಸಾಹ ಬೆಂಬಲವಿರುವುದು. ಗೃಹಶೋಭಾ ಕೂಡ ಇವರನ್ನು ಹಾರೈಸುತ್ತಾಳೆ.

– ಸವಿತಾ ನಾಗೇಶ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ