ಕಥೆ – ಶೋಭಾ ಮೂರ್ತಿ
ಬಾಲ್ಯದಿಂದ ಮನೆಯ ಹಿತ್ತಲಲ್ಲಿ ಬೆಳೆದಿದ್ದ ಹಲಸಿನ ಮರ ಮುಂದೆ ನಾವೆಲ್ಲಾ ಯೌವನಕ್ಕೆ ಬಂದಾಗ, ಮನೆಗಾಗಿಯೇ ಬಲಿಯಾಗಿ ಹೋಗುವಂಥ ಪ್ರಸಂಗ ಬಂದದ್ದಾದರೂ ಏಕೆ…..?
ಅಪ್ಪ ಅಮ್ಮ ಇಲ್ಲದ ತವರಿನ ಕೊಂಡಿಯಾಗಿರುವ ಅಣ್ಣನ ಗೃಹಪ್ರವೇಶದ ಆಹ್ವಾನ ಬಂದಾಗ ನನಗಾಗಲೇ ಎರಡು ಕೋಡು ಮೂಡಿತ್ತು. ನಾನು ಚಿಕ್ಕವಳಿರುವಾಗ ಅಮ್ಮ ಅಪ್ಪ ಬೆವರು ಸುರಿಸಿ ಕಟ್ಟಿಸಿದ ಮನೆಯ ಗೃಹಪ್ರವೇಶದ ನೆನಪು ಇನ್ನೂ ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ಈಗ ಅಣ್ಣನ ಮನೆಯ ಗೃಹಪ್ರವೇಶದ ಸಮಾರಂಭ ಎಂದಾಗಲೂ ಅದೇ ಸಂಭ್ರಮ ನನಗೆ. ಒಂದೇ ವ್ಯತ್ಯಾಸವೆಂದರೆ, ಅಪ್ಪ ಕಟ್ಟಿಸಿದ ಮನೆ ಆಗ ಅದು ನಮ್ಮ ಮನೆಯಾಗಿತ್ತು. ಈಗ ಇದು ಅಣ್ಣನ ಮನೆ. ಗೃಹಪ್ರವೇಶಕ್ಕೆ ಎರಡು ದಿನಗಳಿರುವಾಗಲೇ ತವರನ್ನು ತಲುಪಿದ ನನ್ನಲ್ಲಿ ತವರುಬಳ್ಳಿಯ ಬೆಳವಣಿಗೆಯನ್ನು ಕಣ್ಣಾರೆ ಕಾಣುವ ತವಕವಿತ್ತು.
ಅಣ್ಣ ತಾನು ಕಟ್ಟಿಸಿದ ಹೊಸ ಮನೆಯನ್ನು ತೋರಿಸುತ್ತಾ, ಇದು ಹಜಾರ, ಇದು ಅಡುಗೆಮನೆ, ಮಲಗುವ ಕೋಣೆಗಳು…. ಹೀಗೆ ಎಲ್ಲವನ್ನೂ ವಿವರಿಸತೊಡಗಿದ್ದ. ನನ್ನ ಕಣ್ಣು ಹಜಾರ ಮತ್ತು ಅಡುಗೆಮನೆಯ ನಡುವೆ ಇರುವ ದೇವರಕೋಣೆಯ ಕಲಾತ್ಮಕವಾದ ಕುಸುರಿ ಕೆತ್ತನೆಯ ಕೆಲಸಗಳು, ಅಂದವಾದ ಬಾಗಿಲು, ಚೌಕಟ್ಟಿನ ಮೇಲೆ ನಿಂತಿತು. ಅದು ನನಗೇನೋ ಹೇಳುತ್ತಿರುವಂತೆ ಭಾಸವಾಗತೊಡಗಿತು.
ಮಗುವಿನ ಗಲ್ಲವನ್ನು ಸವರುವಂತೆ ನಯವಾಗಿ ಆ ಬಾಗಿಲ ಮೇಲೆ ಕೈಯಾಡಿಸಿದೆ.
ಅಲ್ಲಿಯೇ ಇದ್ದ ಅಣ್ಣ, “ಬಾಗ್ಲು ಚಂದ ಉಂಟಾ….?” ಒಗಟು ಕೇಳುವವನಂತೆ ಕೇಳಿದ.
“ಹ್ಞೂಂ ಅಣ್ಣಾ….. ಚಂದ ಉಂಟು. ಕೆತ್ತನೆ ಕೆಲಸವನ್ನು ಬಹಳ ಚೆನ್ನಾಗಿ ಮಾಡಿದ್ದಾರೆ,” ಎಂದೆ.
ಇದ್ದಕ್ಕಿದ್ದಂತೆ ನನಗೇಕೋ ಹಿತ್ತಲಲ್ಲಿದ್ದ ಹಲಸಿನಮರದ ನೆನಪಾಗಿ, “ಅಂದ್ಹಾಗೆ ಅಣ್ಣಾ….. ಹಿತ್ತಲಲ್ಲಿದ್ದ ಹಲಸಿಮರ ಏನಾಯ್ತು?” ಆತ್ಮೀಯ ಸ್ನೇಹಿತೆಯ ಬಗ್ಗೆ ವಿಚಾರಿಸುವೆತೆ ಕೇಳಿದೆ.
ಗುಟ್ಟು ರಟ್ಟಾಯಿತು ಎನ್ನುವಂತೆ ಅಣ್ಣ ನಗುತ್ತಾ, “ಅದೇ ಮರದ ಬಾಗಿಲಿದು,” ಎಂದ.
“ಹ್ಞಾಂ….” ಎಂದ ನನಗೆ ಆಘಾತಾಯ್ತು. ನನಗೆ ಏನು ಹೇಳಬೇಕೋ ತಿಳಿಯಲಿಲ್ಲ. ಕಣ್ಣಾಲಿಗಳು ಹನಿಗೂಡಿದವು. ಮನಸ್ಸು ನನ್ನ ಬಾಲ್ಯವನ್ನು ಮೆಲಕುಹಾಕಿತು.
“ಒಂದು…. ಎರಡು…. ಮೂರು….” ಎಣಿಸುತ್ತಿದ್ದವನು ನನ್ನ ತಮ್ಮ. ಅಂದರೆ ಚಿಕ್ಕಪ್ಪನ ಮಗ. ನಮಗೆ ಸ್ವಂತ ಸಹೋದರರು, ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳೆಂಬ ಬೇಧವಿರಲಿಲ್ಲ.
“ಅಕ್ಕಾ, ನಿಂದಾಯ್ತು ನೂರು, ಈಗ ನಾನಾಡ್ಬೇಕು ನೂರು,” ಚಿಕ್ಕಪ್ಪನ ಮಗ, ದೂರದ ಮುಂಬೈಯಿಂದ ಬಂದ ಇನ್ನೊಬ್ಬ ಚಿಕ್ಕಪ್ಪನ ಮಕ್ಕಳು, ನೆರೆಮನೆಯ ಶಾರದಾ, ಹಿಂದಿನ ಮನೆಯ ಮೀರಾ…. ಹಿತ್ತಲಿನ ಹಲಸಿನ ಮರಕ್ಕೆ ಕಟ್ಟಿದ ಜೋಕಾಲಿಯಲ್ಲಿ ಆಡಲು ನಮ್ಮ ಗ್ಯಾಂಗ್ ಒಳಗೆ ಒಂದು ಒಪ್ಪಂದ ಏರ್ಪಡುತ್ತಿತ್ತು.
ಹೆಚ್ಚು ಜನರಿದ್ದರೆ ಒಬ್ಬೊಬ್ಬರು ಐವತ್ತು ಸಲ ಜೀಕಾಡಬೇಕು. ಕಡಿಮೆ ಜನರಿದ್ದಾಗ ನೂರಾದರೂ ಆದೀತು. ರಜೆಯೆಲ್ಲ ಕಳೆದು ಅವರವರ ಊರಿಗೆ ಅವರು ಹೋದ ಮೇಲೆ ಒಬ್ಬಳೇ ಇದ್ದಾಗ ನಾನು ಹೆಚ್ಚು ಹೊತ್ತು ಕಳೆಯುತ್ತಿದ್ದುದು ಜೋಕಾಲಿಯಲ್ಲೇ.
ಬಾಲ್ಯ ಕಳೆದು ಹರೆಯಕ್ಕೆ ಬಂದ ಮೇಲೆ ನನಗೂ ಹಲಸಿನ ಮರಕ್ಕೂ ಇದ್ದ ನಂಟು ಇನ್ನಷ್ಟು ಬಿಗಿಯಾಗತೊಡಗಿತ್ತು. ಬದಲಾಗುತ್ತಿದ್ದ ಭಾವಗಳೊಂದಿಗೆ ಹಲಸಿನ ಮರದ ಜೊತೆಗೆ ಮಾತಿಳಿಗಿಯುತ್ತಿದ್ದೆ. ಅತಿ ಎತ್ತರಕ್ಕೆ ಬೆಳೆದ ಹಲಸಿನ ಮರನ್ನು ತಲೆ ಎತ್ತಿ, ಅದರ ತುದಿಯನ್ನು ನೋಡುವುದೇ ನನಗೆ ಅದ್ಭುತ ಎನಿಸುತ್ತಿತ್ತು. ಆಕಾಶದೊಂದಿಗೆ…. ಮೋಡಗಳ ಜೊತೆಯಲ್ಲಿ ಆಟವಾಡುವ ಅದರ ಅದೃಷ್ಟವನ್ನು ನೆನೆದು ಕರುಬಿದ್ದೂ ಉಂಟು! ಹಲಸಿನ ಮರದ ಅಡ್ಡ ಚಾಚಿದ್ದ ಕೊಂಬೆ, ನನ್ನ ಪ್ರೀತಿಯ ಭಾಗ. ಏಕೆಂದರೆ… ಜೋಕಾಲಿ ಕಟ್ಟುತ್ತಿದ್ದುದೇ ಅಲ್ಲಿ.
ಜೋಕಾಲಿ ಜೀಕುವಾಗ…. ಹಗ್ಗ ಕೊಂಬೆಯನ್ನು ಉಜ್ಜುತ್ತಾ `ಜೀಂ… ಜೀಂ…’ ಎನ್ನುವ ಶಬ್ದ ಸೇರಿ ನಾನು ಭ್ರಮಾಲೋಕಕ್ಕೆ ಹೋಗುತ್ತಿದ್ದೆ.
ಮುಂದೆ ನನ್ನ ಮದುವೆಯ ನಿಶ್ಚಿತಾರ್ಥವಾದ ಮೇಲೆ ಅದೇ ಹಲಸಿನ ಮರದ ಜೋಕಾಲಿಯಲ್ಲಿ ಕೂತು, ಮೆಲ್ಲಗೇ ಜೀಕಿಕೊಳ್ಳುತ್ತಾ, ಭವಿಷ್ಯದ ಹೊಂಗನಸನ್ನು ಹೆಣೆಯುತ್ತಾ ಕೂರುತ್ತಿದ್ದೆ.
ನಮ್ಮ ಮನೆಯ ಹಲಸಿನ ಮರಕ್ಕೆ ಫಲವಂತಿಕೆ ಬಹಳ. ಅದು ತಿಳುವೆ ಹಲಸು. ಅಂದರೆ ಹಣ್ಣಾದಾಗ ಅದರ ತೊಳೆ ಬೆಂಡೆಕಾಯಿಯಂತೆ ಜಾರುವಂತಿರುತ್ತಿತ್ತು. ಅದಕ್ಕೆ ಅಕ್ಕಪಕ್ಕದವರಿಂದ ಭಾರೀ ಬೇಡಿಕೆ ಇರುತ್ತಿತ್ತು. ಇಡ್ಲಿ, ದೋಸೆ, ಮುಳಕ, ಕಡುಬು ಇಂತಹ ಸಿಹಿ ಪದಾರ್ಥಗಳನ್ನು ಮಾಡಲು ತಿಳುವೆ ಹಣ್ಣೇ ಚೆನ್ನಾಗಿರುತ್ತದೆ ಎನ್ನುವುದು ಕಾರಣವಾಗಿತ್ತು. ಅದಲ್ಲದೇ ಪೂರ್ತಿ ಹಣ್ಣಾಗುವ ಮೊದಲು ಅದರ ತೊಳೆ ಬಿಡಿಸಿ ರಿಬ್ಬನ್ ನಂತೆ ಸೀಳಿ, ಬೇಯಿಸಿ, ಗಾಳಿಯಲ್ಲಿ ಹರಡಿ ಆರಿದ ಮೇಲೆ ಎಣ್ಣೆಯಲ್ಲಿ ಕರಿದರೆ ತಯಾರಾಗುವ ಗರಿಗರಿ ಚಿಪ್ಸ್ ಎಲ್ಲರಿಗೂ ಪ್ರಿಯವಾಗಿತ್ತು.
`ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು’ ಎನ್ನುವಂತೆ ನಾವು ಇದೇ ಮರದ ಹಣ್ಣನ್ನು ತಿಂದು ಹೊಟ್ಟೆ ತುಂಬಿಸಿಕೊಂಡಿದ್ದಿದೆ.

ಮಳೆಗಾಲದ ದಿನಗಳಲ್ಲಿ ಶಾಲೆಯಿಂದ ಮನೆಗೆ ಬರುವಷ್ಟರಲ್ಲಿ ಮೈಪೂರ್ತಿ ತೊಪ್ಪೆಯಾಗಿ, ಗದಗುಟ್ಟುವ ಚಳಿಗೆ ಬೇಸಿಗೆಯಲ್ಲಿ ಶೇಖರಿಸಿಟ್ಟ ಹಲಸಿನ ಬೀಜ ಘಮ್ಮೆನ್ನುವಂತೆ ಹುರಿಸಿಕೊಂಡು…. ನಮ್ಮ ಚಳಿಯನ್ನು ಓಡಿಸುವುದರ ಜೊತೆಗೆ ದೇಹದಲ್ಲಿ ಪೌಷ್ಟಿಕಾಂಶದ ಕೊರತೆಯನ್ನೂ ನೀಗಿಸುತ್ತಿತ್ತು. ನಮ್ಮ ಮನೆಯ ಅನ್ನಪೂರ್ಣೇಶ್ವರಿಯಾಗಿದ್ದ ಹಲಸಿನ ಮರದ ಬಗ್ಗೆ ಮನೆಯ ಎಲ್ಲರಿಗೂ ಹೆಮ್ಮೆಯಿತ್ತು.
ಹೀಗೆ ನನ್ನ ಭಾವನೆಗಳೊಂದಿಗೆ ಬೆಸೆದುಹೋದ ಹಲಸಿನ ಮರದ ಭಾವನಾತ್ಮಕ ಸಂಬಂಧಕ್ಕೆ ಏನೆಂದು ಹೆಸರಿಡಲಿ…..? ಹನಿಗಣ್ಣಾಗಿ ಬಾಗಿಲನ್ನು ಮತ್ತೊಮ್ಮೆ ತಡವಿದೆ.
ಹಣ್ಣುಗಳಿಗಷ್ಟೇ ಅಲ್ಲ…. ಭಾವನೆಗಳಿಗೂ ಸೇತುವೆ ಕಟ್ಟಿದ ಮರವದು. ಬಾಲ್ಯದಲ್ಲಿ ನಮ್ಮೊಳಗೆ ಜಗಳ, ಮುನಿಸುಗಳಾಗಿ ಠೂ ಬಿಟ್ಟಾಗ ತನ್ನ ಬಲಿಷ್ಠ ಬಾಹುವಿನಲ್ಲಿ ಜೋಕಾಲಿ ಕಟ್ಟಿಸಿ ರಾಜಿ ಮಾಡಿಸುತ್ತಿತ್ತು. ಖಿನ್ನವಾದ ಮನಸ್ಸು ಏಕಾಂತ ಬಯಸಿದಾಗ ತಾಯಿಯಂತೆ ತನ್ನ ಕರದಲ್ಲಿ ಆಡಿಸಿ ಜೋಗುಳ ಹಾಡಿದ ಮರವನ್ನು ಯಾವ ಜನ್ಮದ ಬಂಧುವೆನ್ನಲಿ….?
ಇಂಥ ಹಲಸಿನ ಮರದ ಚರಮಗೀತೆ ಹಾಡಿದ ಕಾಲದ ಕ್ರಮವನ್ನು ಅರಗಿಸಿಕೊಳ್ಳಲಾಗದೇ ತಳಮಳಿಸಿದೆ. ಅಣ್ಣನ ಹೊಸ ಮನೆಯ ದೇವರ ಕೋಣೆಯಲ್ಲಿ….. ದೇವರನ್ನು ಬೆಚ್ಚಗೆ, ಭದ್ರವಾಗಿ ಕೂರಿಸಿ, ತಾನು ಗಡಿ ಕಾಯುವ ಯೋಧನಂತೆ ಗಾಂಭೀರ್ಯದಿಂದ ಬಾಗಿಲಾಗಿ ನಿಂತಿರುವ ಹಲಸಿನ ಮರ, ಮನೆಯವರ ಜೊತೆ ಸಂಬಂಧದ ಸೇತುವೆಯಾಗಿ ಸೇವೆಗೆ ನಿಂತಿದೆ! ಮುಂದೆಯೂ ಇರುತ್ತದೆ.
ದೇವರ ಸೇವೆಗೆಂದು ಮೈಯೆಲ್ಲ ಚಿತ್ತಾರ ಮೂಡಿಸಿಕೊಂಡು ನಿಂತಿರುವ ಹಲಸಿನ ಮರ ಹೆಮ್ಮೆಪಡುತ್ತಿದೆಯೇ? ಅಥವಾ ನನ್ನನ್ನು ನೋಡಿ, `ನೋಡು ನನ್ನ ಗತಿ’ ಎಂದು ನಿಡುಸುಯ್ಯುತ್ತಿದೆಯೇ….? ದ್ವಂದ್ವದಲ್ಲಿ ಸಿಲುಕಿ, ಅದೇ ಮರಕ್ಕೆ ನನಗಾಗಿ ಜೋಕಾಲಿ ಕಟ್ಟುತ್ತಿದ್ದ ಅಣ್ಣನೆಡೆಗೆ ಆರ್ತಳಾಗಿ ನೋಡಿದೆ.





