ಕಥೆ - ಶೋಭಾ ಮೂರ್ತಿ
ಬಾಲ್ಯದಿಂದ ಮನೆಯ ಹಿತ್ತಲಲ್ಲಿ ಬೆಳೆದಿದ್ದ ಹಲಸಿನ ಮರ ಮುಂದೆ ನಾವೆಲ್ಲಾ ಯೌವನಕ್ಕೆ ಬಂದಾಗ, ಮನೆಗಾಗಿಯೇ ಬಲಿಯಾಗಿ ಹೋಗುವಂಥ ಪ್ರಸಂಗ ಬಂದದ್ದಾದರೂ ಏಕೆ.....?
ಅಪ್ಪ ಅಮ್ಮ ಇಲ್ಲದ ತವರಿನ ಕೊಂಡಿಯಾಗಿರುವ ಅಣ್ಣನ ಗೃಹಪ್ರವೇಶದ ಆಹ್ವಾನ ಬಂದಾಗ ನನಗಾಗಲೇ ಎರಡು ಕೋಡು ಮೂಡಿತ್ತು. ನಾನು ಚಿಕ್ಕವಳಿರುವಾಗ ಅಮ್ಮ ಅಪ್ಪ ಬೆವರು ಸುರಿಸಿ ಕಟ್ಟಿಸಿದ ಮನೆಯ ಗೃಹಪ್ರವೇಶದ ನೆನಪು ಇನ್ನೂ ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ಈಗ ಅಣ್ಣನ ಮನೆಯ ಗೃಹಪ್ರವೇಶದ ಸಮಾರಂಭ ಎಂದಾಗಲೂ ಅದೇ ಸಂಭ್ರಮ ನನಗೆ. ಒಂದೇ ವ್ಯತ್ಯಾಸವೆಂದರೆ, ಅಪ್ಪ ಕಟ್ಟಿಸಿದ ಮನೆ ಆಗ ಅದು ನಮ್ಮ ಮನೆಯಾಗಿತ್ತು. ಈಗ ಇದು ಅಣ್ಣನ ಮನೆ. ಗೃಹಪ್ರವೇಶಕ್ಕೆ ಎರಡು ದಿನಗಳಿರುವಾಗಲೇ ತವರನ್ನು ತಲುಪಿದ ನನ್ನಲ್ಲಿ ತವರುಬಳ್ಳಿಯ ಬೆಳವಣಿಗೆಯನ್ನು ಕಣ್ಣಾರೆ ಕಾಣುವ ತವಕವಿತ್ತು.
ಅಣ್ಣ ತಾನು ಕಟ್ಟಿಸಿದ ಹೊಸ ಮನೆಯನ್ನು ತೋರಿಸುತ್ತಾ, ಇದು ಹಜಾರ, ಇದು ಅಡುಗೆಮನೆ, ಮಲಗುವ ಕೋಣೆಗಳು.... ಹೀಗೆ ಎಲ್ಲವನ್ನೂ ವಿವರಿಸತೊಡಗಿದ್ದ. ನನ್ನ ಕಣ್ಣು ಹಜಾರ ಮತ್ತು ಅಡುಗೆಮನೆಯ ನಡುವೆ ಇರುವ ದೇವರಕೋಣೆಯ ಕಲಾತ್ಮಕವಾದ ಕುಸುರಿ ಕೆತ್ತನೆಯ ಕೆಲಸಗಳು, ಅಂದವಾದ ಬಾಗಿಲು, ಚೌಕಟ್ಟಿನ ಮೇಲೆ ನಿಂತಿತು. ಅದು ನನಗೇನೋ ಹೇಳುತ್ತಿರುವಂತೆ ಭಾಸವಾಗತೊಡಗಿತು.
ಮಗುವಿನ ಗಲ್ಲವನ್ನು ಸವರುವಂತೆ ನಯವಾಗಿ ಆ ಬಾಗಿಲ ಮೇಲೆ ಕೈಯಾಡಿಸಿದೆ.
ಅಲ್ಲಿಯೇ ಇದ್ದ ಅಣ್ಣ, ``ಬಾಗ್ಲು ಚಂದ ಉಂಟಾ....?'' ಒಗಟು ಕೇಳುವವನಂತೆ ಕೇಳಿದ.
``ಹ್ಞೂಂ ಅಣ್ಣಾ..... ಚಂದ ಉಂಟು. ಕೆತ್ತನೆ ಕೆಲಸವನ್ನು ಬಹಳ ಚೆನ್ನಾಗಿ ಮಾಡಿದ್ದಾರೆ,'' ಎಂದೆ.
ಇದ್ದಕ್ಕಿದ್ದಂತೆ ನನಗೇಕೋ ಹಿತ್ತಲಲ್ಲಿದ್ದ ಹಲಸಿನಮರದ ನೆನಪಾಗಿ, ``ಅಂದ್ಹಾಗೆ ಅಣ್ಣಾ..... ಹಿತ್ತಲಲ್ಲಿದ್ದ ಹಲಸಿಮರ ಏನಾಯ್ತು?'' ಆತ್ಮೀಯ ಸ್ನೇಹಿತೆಯ ಬಗ್ಗೆ ವಿಚಾರಿಸುವೆತೆ ಕೇಳಿದೆ.
ಗುಟ್ಟು ರಟ್ಟಾಯಿತು ಎನ್ನುವಂತೆ ಅಣ್ಣ ನಗುತ್ತಾ, ``ಅದೇ ಮರದ ಬಾಗಿಲಿದು,'' ಎಂದ.
``ಹ್ಞಾಂ....'' ಎಂದ ನನಗೆ ಆಘಾತಾಯ್ತು. ನನಗೆ ಏನು ಹೇಳಬೇಕೋ ತಿಳಿಯಲಿಲ್ಲ. ಕಣ್ಣಾಲಿಗಳು ಹನಿಗೂಡಿದವು. ಮನಸ್ಸು ನನ್ನ ಬಾಲ್ಯವನ್ನು ಮೆಲಕುಹಾಕಿತು.
``ಒಂದು.... ಎರಡು.... ಮೂರು....'' ಎಣಿಸುತ್ತಿದ್ದವನು ನನ್ನ ತಮ್ಮ. ಅಂದರೆ ಚಿಕ್ಕಪ್ಪನ ಮಗ. ನಮಗೆ ಸ್ವಂತ ಸಹೋದರರು, ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳೆಂಬ ಬೇಧವಿರಲಿಲ್ಲ.
``ಅಕ್ಕಾ, ನಿಂದಾಯ್ತು ನೂರು, ಈಗ ನಾನಾಡ್ಬೇಕು ನೂರು,'' ಚಿಕ್ಕಪ್ಪನ ಮಗ, ದೂರದ ಮುಂಬೈಯಿಂದ ಬಂದ ಇನ್ನೊಬ್ಬ ಚಿಕ್ಕಪ್ಪನ ಮಕ್ಕಳು, ನೆರೆಮನೆಯ ಶಾರದಾ, ಹಿಂದಿನ ಮನೆಯ ಮೀರಾ.... ಹಿತ್ತಲಿನ ಹಲಸಿನ ಮರಕ್ಕೆ ಕಟ್ಟಿದ ಜೋಕಾಲಿಯಲ್ಲಿ ಆಡಲು ನಮ್ಮ ಗ್ಯಾಂಗ್ ಒಳಗೆ ಒಂದು ಒಪ್ಪಂದ ಏರ್ಪಡುತ್ತಿತ್ತು.
ಹೆಚ್ಚು ಜನರಿದ್ದರೆ ಒಬ್ಬೊಬ್ಬರು ಐವತ್ತು ಸಲ ಜೀಕಾಡಬೇಕು. ಕಡಿಮೆ ಜನರಿದ್ದಾಗ ನೂರಾದರೂ ಆದೀತು. ರಜೆಯೆಲ್ಲ ಕಳೆದು ಅವರವರ ಊರಿಗೆ ಅವರು ಹೋದ ಮೇಲೆ ಒಬ್ಬಳೇ ಇದ್ದಾಗ ನಾನು ಹೆಚ್ಚು ಹೊತ್ತು ಕಳೆಯುತ್ತಿದ್ದುದು ಜೋಕಾಲಿಯಲ್ಲೇ.
ಬಾಲ್ಯ ಕಳೆದು ಹರೆಯಕ್ಕೆ ಬಂದ ಮೇಲೆ ನನಗೂ ಹಲಸಿನ ಮರಕ್ಕೂ ಇದ್ದ ನಂಟು ಇನ್ನಷ್ಟು ಬಿಗಿಯಾಗತೊಡಗಿತ್ತು. ಬದಲಾಗುತ್ತಿದ್ದ ಭಾವಗಳೊಂದಿಗೆ ಹಲಸಿನ ಮರದ ಜೊತೆಗೆ ಮಾತಿಳಿಗಿಯುತ್ತಿದ್ದೆ. ಅತಿ ಎತ್ತರಕ್ಕೆ ಬೆಳೆದ ಹಲಸಿನ ಮರನ್ನು ತಲೆ ಎತ್ತಿ, ಅದರ ತುದಿಯನ್ನು ನೋಡುವುದೇ ನನಗೆ ಅದ್ಭುತ ಎನಿಸುತ್ತಿತ್ತು. ಆಕಾಶದೊಂದಿಗೆ.... ಮೋಡಗಳ ಜೊತೆಯಲ್ಲಿ ಆಟವಾಡುವ ಅದರ ಅದೃಷ್ಟವನ್ನು ನೆನೆದು ಕರುಬಿದ್ದೂ ಉಂಟು! ಹಲಸಿನ ಮರದ ಅಡ್ಡ ಚಾಚಿದ್ದ ಕೊಂಬೆ, ನನ್ನ ಪ್ರೀತಿಯ ಭಾಗ. ಏಕೆಂದರೆ... ಜೋಕಾಲಿ ಕಟ್ಟುತ್ತಿದ್ದುದೇ ಅಲ್ಲಿ.





