ಕೇವಲ ಟೈಂಪಾಸ್ ಮಾಡುತ್ತಾ ಕೂರದೇ, ಏನಾದರೂ ಕ್ರಿಯೇಟಿವ್ ಆಗಿ ನಾಲ್ಕು ಜನ ಮೆಚ್ಚುವಂಥ ಉದ್ಯಮ ಪ್ರಾರಂಭಿಸುವುದು ಲೇಸು. ಇದನ್ನು ಫ್ಯಾಷನ್ ಡಿಸೈನರ್ ಸರಿತಾ ಶ್ರೀಜಿತ್ ಹೇಗೆ ನಿಜ ಮಾಡಿ ತೋರಿಸಿದ್ದಾರೆ ಎಂಬುದನ್ನು ಅವರ ಮಾತುಗಳಿಂದ ತಿಳಿಯೋಣವೇ….?
ಫ್ಯಾಷನ್ ಜಗತ್ತು ಇಂದು ಅತ್ಯಂತ ವೇಗದಲ್ಲಿ ಬದಲಾಗುತ್ತಿರುವುದನ್ನು ನಾವು ನೀವುಗಳು ಕಾಣುತ್ತಿದ್ದೇವೆ. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಪ್ರತಿಯೊಂದು ದಿನ ಟ್ರೆಂಡ್ ಬದಲಾಗುತ್ತದೆ. ಅದರಲ್ಲಿಯೂ ಉಡುಗೆ ತೊಡುಗೆಗಳ ವಿಚಾರದಲ್ಲಿ ಇದು ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಪುರುಷ ಹಾಗೂ ಮಹಿಳೆಯರಿಬ್ಬರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಟ್ರೆಂಡಿ ಫ್ಯಾಷನ್ ಉಡುಪುಗಳನ್ನು ತೊಡುವವರ ಸಂಖ್ಯೆ ಹೆಚ್ಚಿದೆ. ಹಾಗೆಯೇ ತಾವು ಸುಂದರವಾಗಿ, ಆಕರ್ಷಕವಾಗಿ ಕಾಣಿಸಿಕೊಳ್ಳಬೇಕು ಎನ್ನುವುದು ಪ್ರತಿ ಮಹಿಳೆಯ ಮೂಲ ಬಯಕೆಯಾಗಿದೆ. ಇದೆಲ್ಲಾ ಒಂದೆಡೆಯಾಗಿದ್ದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತಾವು ಸ್ವಂತ ಉದ್ಯೋಗ ಮಾಡಿಕೊಂಡು ಸ್ವಾವಲಂಬಿಯಾಗಿ ಬದುಕುವುದನ್ನು ಕಲಿತಿದ್ದಾರೆ. ಪುರುಷರಿಗೆ ಸರಿಸಮನವಾಗಿ ಪ್ರತಿ ಕ್ಷೇತ್ರದಲ್ಲಿಯೂ ಮಹಿಳೆ ಕಾರ್ಯ ನಿರ್ವಹಿಸಬಲ್ಲಳು. ಹಾಗೆಯೇ ತನಗಿಷ್ಟವಾಗಿರುವ ಫ್ಯಾಷನ್ ಲೋಕದಲ್ಲಿ ಸಹ ಫ್ಯಾಷನ್ ಡಿಸೈನ್, ಮಾಡೆಲಿಂಗ್ ನಂತಹ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮನ್ನು ತಾವು ತೊಡಗಿಸಿಕೊಂಡು ದಿನನಿತ್ಯ ಸಾವಿರ ಸಂಖ್ಯೆಯಲ್ಲಿ ಹಣ ಮಾಡಿಕೊಳ್ಳುತ್ತಿದ್ದಾರೆ.
ಜೊತೆಗೆ ತಮ್ಮ ಹವ್ಯಾಸವನ್ನೇ ಜೀವನಾಧಾರ ಆಗಿಸಿಕೊಂಡು ದುಡಿಯುವ ಮಹಿಳೆಯರೂ ಇದ್ದಾರೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಇಂದು ಕುಟುಂಬದ ಒಬ್ಬ ವ್ಯಕ್ತಿ ದುಡಿದು ಮನೆ ನಡೆಸುವುದು, ಕಷ್ಟವಾಗಿರುವಾಗ ಮನೆಯೊಡತಿಯಾಗಿರುವ ಮಡದಿ ಸಹ ತನಗಿಷ್ಟವಾದ, ಸುಲಭ ಮಾರ್ಗದಲ್ಲಿ ದುಡಿದು ಹಣ ಗಳಿಸಿ ಸಂಸಾರ ನಿಭಾಯಿಸುವುದು ಸಾಮಾನ್ಯವಾಗಿದೆ. ಇದು ಕೆಲವರಿಗೆ ಅನಿವಾರ್ಯವಾಗಿದೆ. ಇನ್ನೂ ಕೆಲವರಿಗೆ ಬೇಸರ ಕಳೆಯುವುದಕ್ಕಾಗಿ, ತಮ್ಮ ಪ್ರತಿಭೆ ಪ್ರದರ್ಶಿಸಲು ಇರುವ ಮಾರ್ಗವೂ ಹೌದು.
ಹವ್ಯಾಸದಿಂದ ಉದ್ಯಮ
ಇಂತಹವರ ನಡುವೆ ಬೆಂಗಳೂರಿನಲ್ಲಿ ನೆಲೆಸಿರುವ ಸರಿತಾ ಸಹ ತಾವು ಮದುವೆಯಾದ ನಂತರ ತಮ್ಮ ಅಕ್ಕ ಹಾಗೂ ತಂದೆಯ ಸ್ಛೂರ್ತಿಯಿಂದ ಬುಟಿಕ್ ಒಂದನ್ನು ಪ್ರಾರಂಭಿಸಿದ್ದು ಕಳೆದು ಐದು ವರ್ಷಗಳಲ್ಲಿ ಸುಮಾರು ಹತ್ತಕ್ಕೂ ಹೆಚ್ಚಿನ ಜನರಿಗೆ ಉದ್ಯೋಗ ನೀಡುವಷ್ಟರ ಮಟ್ಟಿಗೆ ಉದ್ಯಮವನ್ನು ಬೆಳೆಸಿದ್ದಾರೆ. ತಮ್ಮಿಷ್ಟದ ಕಾರ್ಯಕ್ಷೇತ್ರವಾಗಿರುವ ಫ್ಯಾಷನ್ ಡಿಸೈನ್ ನ್ನು ತಮ್ಮ ಸ್ವಂತ ಉದ್ಯೋಗವಾಗಿಸಿಕೊಂಡು ಮನೆಯವರ ಸಹಕಾರದೊಂದಿಗೆ ಬೃಹತ್ ಮಟ್ಟದ ಬ್ರ್ಯಾಂಡ್ ಆಗಿಸಲು ಹೊರಟಿರುವ ಈ ನಾರಿಯ ಯಶೋಗಾಥೆಯನ್ನು `ಗೃಹಶೋಭಾ’ ನಿಮಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದಾಳೆ.
ಮನೆಯಲ್ಲಿ ಸಾಮಾನ್ಯ ಗೃಹಿಣಿಯಾಗಿದ್ದ ಸರಿತಾ, ಬುಟಿಕ್ ತೆರೆದು ಹತ್ತಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ಕೊಡುತ್ತಿದ್ದಾರೆ ಎಂದರೆ ಅದಕ್ಕೆ ಅವರ ತಂದೆ ಹಾಗೂ ಅವರ ಅಕ್ಕ (ಪತಿಯ ಸೋದರಿ) ಮೂಲಪ್ರೇರಣೆಯಾಗಿದ್ದಾರೆ. `ನಿನಗೆ ಆಸೆ ಇದ್ದರೆ ಹೊಸದು ಏನಾದರೂ ಮಾಡಬೇಕೆಂದರೆ ಆ ಕೆಲಸ ಪ್ರಾರಂಭಿಸಿಯೇ ಬಿಡಬೇಕು,’ ಎನ್ನುವುದಾಗಿ ಅವರಂದು ಹೇಳಿದ ಮಾತು ಇಂದು ಸರಿತಾರನ್ನು ಬುಟಿಕ್ ಒಡತಿಯನ್ನಾಗಿ ಮಾಡಿದೆ.
ಸರಿತಾ ಮೂಲತಃ ಬೆಂಗಳೂರಿನ ನವರತ್ನ ಅಗ್ರಹಾರದವರು. ಅವರ ತಂದೆ ಎ.ಪಿ. ಕೃಷ್ಣಪ್ಪ ಉದ್ಯಮಿಯಾಗಿದ್ದರೆ ತಾಯಿ ಗೌರಮ್ಮ ದೊಡ್ಡಜಾಲ ಗ್ರಾಮಪಂಚಾಯಿತಿಯಲ್ಲಿ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೋದರರೂ ಸಹ ರಾಜಕೀಯ ಕ್ಷೇತ್ರದಲ್ಲಿದ್ದಾರೆ. ಇನ್ನು ಅವರ ಪತಿ ಶ್ರೀಜಿತ್ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದು ಪ್ರಸ್ತುತ ಸ್ವಂತ ಉದ್ಯೋಗ ನಡೆಸುತ್ತಿದ್ದಾರೆ. ಸರಿತಾರಿಗೆ ಇಬ್ಬರು ಮಕ್ಕಳಿದ್ದು ಅವರು ಶಾಲಾ ವಿದ್ಯಾಭ್ಯಾಸ ನಡೆಸಿದ್ದಾರೆ.

ಬಾಲ್ಯದ ಕನಸು
ಮದುವೆಯಾಗಿ ಹಲವು ವರ್ಷಗಳವರೆಗೆ ಗೃಹಿಣಿಯಾಗಿದ್ದರೂ ತಾನು ಸುಮ್ಮನೆ ಸ್ನೇಹಿತರೊಡನೆ ಹೊರಗೆ ಸುತ್ತಾಡುವುದು ಸೇರಿದಂತೆ ಅಗತ್ಯವಿಲ್ಲದ ಕೆಲಸಗಳಲ್ಲಿ ಸಮಯ ವ್ಯರ್ಥ ಮಾಡುತ್ತಿರುವುದನ್ನು ಮನಗಂಡ ಸರಿತಾ, ತಮ್ಮ ಬಾಲ್ಯದ ಕನಸಾಗಿದ್ದ ಫ್ಯಾಷನ್ ಡಿಸೈನಿಂಗ್ ನಲ್ಲಿ ತೊಡಗಿಕೊಳ್ಳಲು ಬಯಸಿದರು. ಅದಕ್ಕೆ ಸರಿಯಾಗಿ ಅವರ ಮನೆಯವರ ಸಹಕಾರ ಸಿಕ್ಕಿದ ಕಾರಣ ಬುಟಿಕ್ ಪ್ರಾರಂಭಿಸಿದರು. ಮೊದಲಿಗೆ ಚಿಕ್ಕದಾಗಿ ಇಬ್ಬರೇ ಸೇರಿ ಬುಟಿಕ್ ತೆರೆದಿದ್ದು, ಈಗ ಹತ್ತಕ್ಕೂ ಹೆಚ್ಚು ಉದ್ಯೋಗಿಗಳಾಗಿದ್ದಾರೆ.
ಸರಿತಾರ ಪತಿಯ ಸೋದರಿ, ಡಾ. ನಾಗಾಂಬಿಕಾ ದೇವಿ ಶರ್ಮ ಒಬ್ಬ ನಿವೃತ್ತ ಐ.ಎ.ಎಸ್ ಅಧಿಕಾರಿಯಾಗಿದ್ದು, ಸರಿತಾ ಮಾತ್ರವಲ್ಲ, ಇನ್ನೂ ಹಲವಾರು ಮಹಿಳೆಯರಿಗೆ ಅವರು ಸ್ಛೂರ್ತಿದಾಯಕ ಸಲಹೆ ಕೊಡುತ್ತಾ ಬಂದಿದ್ದಾರೆ.
“ನನ್ನ ಅಕ್ಕ ನನಗಷ್ಟೇ ಅಲ್ಲದೆ, ಇನ್ನೂ ಹಲವಾರು ಮಹಿಳೆಯರಿಗೆ ಸ್ವಂತ ಕಾಲ ಮೇಲೆ ನಿಲ್ಲಲು ನೆರವಾಗಿದ್ದಾರೆ. ಅವರು ನೀಡುವ ಅತ್ಯಮೂಲ್ಯ ಸಲಹೆಗಳಿಂದ ಹಲವಾರು ಮಹಿಳೆಯರು ತಮ್ಮ ಜೀವನದಲ್ಲಿ ಸ್ವಾವಲಂಬಿಗಳಾಗಿ ಉತ್ತಮ ಸಾಧನೆ ಮಾಡುತ್ತಿದ್ದಾರೆ,” ಎಂದು ಸರಿತಾ ತಮ್ಮ ಮಾತುಗಳಲ್ಲಿ ವಿವರಿಸಿದರು.
ಭಾರತೀಯ ಶೈಲಿಯ ಡಿಸೈನಿಂಗ್
ಪ್ರಮುಖವಾಗಿ ಭಾರತೀಯ ಶೈಲಿಯ ಉಡುಪುಗಳ ಡಿಸೈನಿಂಗ್ ನಲ್ಲಿ ಹೆಚ್ಚು ವಿನ್ಯಾಸ ರೂಪಿಸುವ ಸರಿತಾ, ಬ್ರೈಡಲ್ ವಿನ್ಯಾಸದಲ್ಲಿ ಹೆಚ್ಚು ನುರಿತವರಾಗಿದ್ದಾರೆ. ಸಾಂಪ್ರದಾಯಿಕ ಉಡುಪುಗಳು ಎಂದರೆ ಮದುವೆ ಮತ್ತಿತರೆ ಕಾರ್ಯಕ್ರಮಗಳಿಗೆ ಎಂದು ವಿಶೇಷವಾಗಿ ವಿನ್ಯಾಸಗೊಳಿಸಿದ ಉಡುಪುಗಳನ್ನು ಇಲ್ಲಿ ನೋಡಬಹುದು. ಅಲ್ಲದೆ ಫ್ಯಾಮಿಲಿ ಕಾಂಬೋ ಆಗಿ ತಾಯಿ ಮಗಳಿಗಾಗಿ, ಅಕ್ಕ ತಂಗಿಯರಿಗೆ ಎಂದೇ ವಿಶೇಷ ವಿನ್ಯಾಸಗಳ ರಚನೆ ಇಲ್ಲಿದೆ. ಅಲ್ಲದೆ ಸರಿತಾರವರು ವಿದೇಶಿ ಶೈಲಿಯ ಫ್ಯಾಷನ್ ವಿನ್ಯಾಸವನ್ನು ಸಹ ಕಲಿಯುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ವಿದೇಶೀ ಶೈಲಿಯ ಡಿಸೈನ್ ವಿನ್ಯಾಸಗೊಳಿಸುವ ಆಲೋಚನೆ ಇದೆ.
ಅಲ್ಲದೆ ವಿವಿಧ ನಗರಗಳಲ್ಲಿ ನಡೆಯುವ ವಿವಿಧ ಸ್ತರದ ಫ್ಯಾಷನ್ ಶೋಗಳಲ್ಲಿ ಸರಿತಾ, ತಮ್ಮ `ಯುವ ಲೋಗ್ ಬುಟಿಕ್’ನ ಫ್ಯಾಷನ್ ವಿನ್ಯಾಸವನ್ನು ಒಂದು ಬ್ರ್ಯಾಂಡ್ ಆಗಿ ಪ್ರಸ್ತುತಪಡಿಸುವ ಆಲೋಚನೆ ಹೊಂದಿದ್ದಾರೆ. ಅದಲ್ಲದೆ, ತಮ್ಮಿಂದ ಇನ್ನೂ ಹೆಚ್ಚಿನ ಮಹಿಳೆಯರಿಗೆ ನೆರವಾಗಬೇಕು ಎನ್ನುವುದು ಸರಿತಾರ ಆಲೋಚನೆಯಾಗಿದೆ.
ಯುವ ಲೋಗ್ ಬುಟಿಕ್ ಸರಿತಾರ ಬುಟಿಕ್ ನಲ್ಲಿ ಕೆಲಸದ ಒತ್ತಡದಿಂದ ಬುಟಿಕ್ ಗೆ ಬರಲಾಗದವರಿಗೆ, ಮನೆಯಲ್ಲಿ ಒಬ್ಬರೇ ಹಿರಿಯರಿದ್ದಾಗ ಅವರಿಗೆ ಅವರ ಮನೆಗಳಿಗೇ ನೇರವಾಗಿ ಉತ್ಪನ್ನಗಳನ್ನು ತಲುಪಿಸಲಾಗುತ್ತದೆ. ಅಂದರೆ ಯಾರಿಗೇ ಅಗತ್ಯವಾದರೆ ಅವರು ಬುಟಿಕ್ ಗೆ ಬರಲಾಗದಿದ್ದಲ್ಲಿ ಅವರಿಗೆ ಅವರಿರುವ ಜಾಗದಲ್ಲೇ ಉತ್ತಮ ಗುಣಮಟ್ಟದ ಡಿಸೈನಿಂಗ್ ಉಡುಪುಗಳನ್ನು ಪೂರೈಸುವುದು ಸರಿತಾರ ಈ ಬುಟಿಕ್ ನ ವಿಶೇಷತೆಯಾಗಿದೆ.

ಮುಂದಿನ ಯೋಜನೆಗಳು
ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಅಗತ್ಯವಿರುವ, ಅವರು ಬಯಸುವ ವಿನ್ಯಾಸದ ಉಡುಪುಗಳನ್ನು ಗ್ರಾಹಕಸ್ನೇಹಿ ಬೆಲೆಯಲ್ಲಿ ಒದಗಿಸುವ ಆಲೋಚನೆ ಇರದು. ಅಲ್ಲದೆ ಆನ್ ಲೈನ್ ಹಾಗೂ ಮೊಬೈಲ್ ಅಪ್ಲಿಕೇಶನ್ ಪ್ರಾರಂಭಿಸಿ, ಅದರ ಮೂಲಕ ಮತ್ತಷ್ಟು ಹೆಚ್ಚಿನ ಗ್ರಾಹಕರನ್ನು ತಲುಪುವ ಗುರಿ ಇವರದಾಗಿದೆ.
ಇತರ ಹವ್ಯಾಸಗಳು
ಸರಿತಾ ಕೇವಲ ಬುಟಿಕ್ ಹಾಗೂ ಫ್ಯಾಷನ್ ಡಿಸೈನಿಂಗ್ ಕೆಲಸ ಮಾಡುವುದಲ್ಲದೆ, ಹಾಡುಗಳನ್ನು ಸಹ ಹಾಡಬಲ್ಲರು. ಜೊತೆಗೆ ಚಿತ್ರಕಲೆಯಲ್ಲಿಯೂ ಸಹ ಆಸಕ್ತಿ ಹೊಂದಿದ್ದಾರೆ. ತಾವು ಬಿಡುವಾಗಿದ್ದಾಗಲೆಲ್ಲಾ ಸಿಂಗಿಂಗ್, ಡ್ರಾಯಿಂಗ್ ಹಾಗೂ ಪೇಂಟಿಂಗ್ ಮಾಡುವುದಾಗಿ ಹೇಳುವ ಅವರು, ಆಗಾಗ ಹಳೆಯ ಸಿನಿಮಾಗಳನ್ನು ವೀಕ್ಷಿಸುತ್ತಾರೆ. ಅಲ್ಲದೆ, ಹಳೆಯ ಸಿನಿಮಾ ಹಾಡುಗಳನ್ನು ಸುಮಧುರವಾಗಿ ಹಾಡಬಲ್ಲರು. ಕುಟುಂಬದವರ ಜೊತೆ ಬಿಡುವಿನ ವೇಳೆಯಲ್ಲಿ ಹೆಚ್ಚು ಕಾಲ ಕಳೆಯುವ ಸರಿತಾರಿಗೆ, ಪ್ರಕೃತಿ ಸೌಂದರ್ಯ ಎಂದರೆ ಬಹಳ ಅಚ್ಚುಮೆಚ್ಚು. ಅವರು ಆಗಾಗ ಪ್ರಕೃತಿದತ್ತವಾದ ಸುಂದರ ತಾಣಗಳಿಗೆ ಪ್ರವಾಸ ಕೈಗೊಳ್ಳುವುದರೊಡನೆ ತಮ್ಮ ಪತಿ, ಮಕ್ಕಳೊಂದಿಗೆ ಆನಂದವಾಗಿರಲು ಬಯಸುತ್ತಾರೆ.

ಹೆಣ್ಣುಮಕ್ಕಳಿಗೆ ಕಿವಿಮಾತು
“ಮದುವೆಯಾದ ನಂತರ ನಮ್ಮ ಜೀವನ ಮುಗಿದೇ ಹೋಯಿತು ಎಂದುಕೊಳ್ಳುವವರ ಸಂಖ್ಯೆ ಹೆಚ್ಚು. ದೃಢ ಮನಸ್ಸು ಹೊಂದಿದ್ದು, ಕ್ರಿಯೇಟಿವ್ ಆಗಿರುವವರಿಗೆ ಅವಕಾಶಗಳು ತಾವಾಗಿ ಸಿಗುತ್ತವೆ. ಇದಕ್ಕೆ ಹಳ್ಳಿ, ನಗರ ಎಂದೇನಿಲ್ಲ. ಇಂದಿನ ಹೆಣ್ಣುಮಕ್ಕಳು ತಮ್ಮ ಕನಸನ್ನು ಹಾಗೆಯೇ ಕಮರಿ ಹೋಗಲು ಬಿಡದೆ, ಏನಾದರೂ ಪ್ರಯತ್ನ ಮಾಡಿ ಕನಸು ನನಸಾಗಿಸಲು ಮುಂದಾಗಬೇಕು,” ಎನ್ನುವುದು ಸರಿತಾರ ಮಾತುಗಳು.
ಮುಂಬರುವ ದಿನಗಳಲ್ಲಿ ಸರಿತಾ, `ಯುವ ಲೋಗ್ ಬುಟಿಕ್’ ಮತ್ತಷ್ಟು ಉನ್ನತ ಮಟ್ಟದ ಬ್ರ್ಯಾಂಡಿಂಗ್ ಆಗಿ ಬೆಳೆದು, ಇನ್ನೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇರಂತೆಯೇ ಸ್ವಾವಲಂಬಿ ಜೀವನ ನಡೆಸುವಂತಾಗಲಿ, ಎನ್ನುವುದು ಗೃಹಶೋಭಾಳ ಶುಭಾಕಾಂಕ್ಷೆಯಾಗಿದೆ.
– ರಾಘವೇಂದ್ರ ಅಡಿಗ ಎಚ್ಚೆನ್.





