ಕೇವಲ ಟೈಂಪಾಸ್ ಮಾಡುತ್ತಾ ಕೂರದೇ, ಏನಾದರೂ ಕ್ರಿಯೇಟಿವ್ ಆಗಿ ನಾಲ್ಕು ಜನ ಮೆಚ್ಚುವಂಥ ಉದ್ಯಮ ಪ್ರಾರಂಭಿಸುವುದು ಲೇಸು. ಇದನ್ನು ಫ್ಯಾಷನ್ ಡಿಸೈನರ್ ಸರಿತಾ ಶ್ರೀಜಿತ್ ಹೇಗೆ ನಿಜ ಮಾಡಿ ತೋರಿಸಿದ್ದಾರೆ ಎಂಬುದನ್ನು ಅವರ ಮಾತುಗಳಿಂದ ತಿಳಿಯೋಣವೇ....?
ಫ್ಯಾಷನ್ ಜಗತ್ತು ಇಂದು ಅತ್ಯಂತ ವೇಗದಲ್ಲಿ ಬದಲಾಗುತ್ತಿರುವುದನ್ನು ನಾವು ನೀವುಗಳು ಕಾಣುತ್ತಿದ್ದೇವೆ. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಪ್ರತಿಯೊಂದು ದಿನ ಟ್ರೆಂಡ್ ಬದಲಾಗುತ್ತದೆ. ಅದರಲ್ಲಿಯೂ ಉಡುಗೆ ತೊಡುಗೆಗಳ ವಿಚಾರದಲ್ಲಿ ಇದು ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಪುರುಷ ಹಾಗೂ ಮಹಿಳೆಯರಿಬ್ಬರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಟ್ರೆಂಡಿ ಫ್ಯಾಷನ್ ಉಡುಪುಗಳನ್ನು ತೊಡುವವರ ಸಂಖ್ಯೆ ಹೆಚ್ಚಿದೆ. ಹಾಗೆಯೇ ತಾವು ಸುಂದರವಾಗಿ, ಆಕರ್ಷಕವಾಗಿ ಕಾಣಿಸಿಕೊಳ್ಳಬೇಕು ಎನ್ನುವುದು ಪ್ರತಿ ಮಹಿಳೆಯ ಮೂಲ ಬಯಕೆಯಾಗಿದೆ. ಇದೆಲ್ಲಾ ಒಂದೆಡೆಯಾಗಿದ್ದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತಾವು ಸ್ವಂತ ಉದ್ಯೋಗ ಮಾಡಿಕೊಂಡು ಸ್ವಾವಲಂಬಿಯಾಗಿ ಬದುಕುವುದನ್ನು ಕಲಿತಿದ್ದಾರೆ. ಪುರುಷರಿಗೆ ಸರಿಸಮನವಾಗಿ ಪ್ರತಿ ಕ್ಷೇತ್ರದಲ್ಲಿಯೂ ಮಹಿಳೆ ಕಾರ್ಯ ನಿರ್ವಹಿಸಬಲ್ಲಳು. ಹಾಗೆಯೇ ತನಗಿಷ್ಟವಾಗಿರುವ ಫ್ಯಾಷನ್ ಲೋಕದಲ್ಲಿ ಸಹ ಫ್ಯಾಷನ್ ಡಿಸೈನ್, ಮಾಡೆಲಿಂಗ್ ನಂತಹ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮನ್ನು ತಾವು ತೊಡಗಿಸಿಕೊಂಡು ದಿನನಿತ್ಯ ಸಾವಿರ ಸಂಖ್ಯೆಯಲ್ಲಿ ಹಣ ಮಾಡಿಕೊಳ್ಳುತ್ತಿದ್ದಾರೆ.
ಜೊತೆಗೆ ತಮ್ಮ ಹವ್ಯಾಸವನ್ನೇ ಜೀವನಾಧಾರ ಆಗಿಸಿಕೊಂಡು ದುಡಿಯುವ ಮಹಿಳೆಯರೂ ಇದ್ದಾರೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಇಂದು ಕುಟುಂಬದ ಒಬ್ಬ ವ್ಯಕ್ತಿ ದುಡಿದು ಮನೆ ನಡೆಸುವುದು, ಕಷ್ಟವಾಗಿರುವಾಗ ಮನೆಯೊಡತಿಯಾಗಿರುವ ಮಡದಿ ಸಹ ತನಗಿಷ್ಟವಾದ, ಸುಲಭ ಮಾರ್ಗದಲ್ಲಿ ದುಡಿದು ಹಣ ಗಳಿಸಿ ಸಂಸಾರ ನಿಭಾಯಿಸುವುದು ಸಾಮಾನ್ಯವಾಗಿದೆ. ಇದು ಕೆಲವರಿಗೆ ಅನಿವಾರ್ಯವಾಗಿದೆ. ಇನ್ನೂ ಕೆಲವರಿಗೆ ಬೇಸರ ಕಳೆಯುವುದಕ್ಕಾಗಿ, ತಮ್ಮ ಪ್ರತಿಭೆ ಪ್ರದರ್ಶಿಸಲು ಇರುವ ಮಾರ್ಗವೂ ಹೌದು.
ಹವ್ಯಾಸದಿಂದ ಉದ್ಯಮ
ಇಂತಹವರ ನಡುವೆ ಬೆಂಗಳೂರಿನಲ್ಲಿ ನೆಲೆಸಿರುವ ಸರಿತಾ ಸಹ ತಾವು ಮದುವೆಯಾದ ನಂತರ ತಮ್ಮ ಅಕ್ಕ ಹಾಗೂ ತಂದೆಯ ಸ್ಛೂರ್ತಿಯಿಂದ ಬುಟಿಕ್ ಒಂದನ್ನು ಪ್ರಾರಂಭಿಸಿದ್ದು ಕಳೆದು ಐದು ವರ್ಷಗಳಲ್ಲಿ ಸುಮಾರು ಹತ್ತಕ್ಕೂ ಹೆಚ್ಚಿನ ಜನರಿಗೆ ಉದ್ಯೋಗ ನೀಡುವಷ್ಟರ ಮಟ್ಟಿಗೆ ಉದ್ಯಮವನ್ನು ಬೆಳೆಸಿದ್ದಾರೆ. ತಮ್ಮಿಷ್ಟದ ಕಾರ್ಯಕ್ಷೇತ್ರವಾಗಿರುವ ಫ್ಯಾಷನ್ ಡಿಸೈನ್ ನ್ನು ತಮ್ಮ ಸ್ವಂತ ಉದ್ಯೋಗವಾಗಿಸಿಕೊಂಡು ಮನೆಯವರ ಸಹಕಾರದೊಂದಿಗೆ ಬೃಹತ್ ಮಟ್ಟದ ಬ್ರ್ಯಾಂಡ್ ಆಗಿಸಲು ಹೊರಟಿರುವ ಈ ನಾರಿಯ ಯಶೋಗಾಥೆಯನ್ನು `ಗೃಹಶೋಭಾ' ನಿಮಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದಾಳೆ.
ಮನೆಯಲ್ಲಿ ಸಾಮಾನ್ಯ ಗೃಹಿಣಿಯಾಗಿದ್ದ ಸರಿತಾ, ಬುಟಿಕ್ ತೆರೆದು ಹತ್ತಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ಕೊಡುತ್ತಿದ್ದಾರೆ ಎಂದರೆ ಅದಕ್ಕೆ ಅವರ ತಂದೆ ಹಾಗೂ ಅವರ ಅಕ್ಕ (ಪತಿಯ ಸೋದರಿ) ಮೂಲಪ್ರೇರಣೆಯಾಗಿದ್ದಾರೆ. `ನಿನಗೆ ಆಸೆ ಇದ್ದರೆ ಹೊಸದು ಏನಾದರೂ ಮಾಡಬೇಕೆಂದರೆ ಆ ಕೆಲಸ ಪ್ರಾರಂಭಿಸಿಯೇ ಬಿಡಬೇಕು,' ಎನ್ನುವುದಾಗಿ ಅವರಂದು ಹೇಳಿದ ಮಾತು ಇಂದು ಸರಿತಾರನ್ನು ಬುಟಿಕ್ ಒಡತಿಯನ್ನಾಗಿ ಮಾಡಿದೆ.
ಸರಿತಾ ಮೂಲತಃ ಬೆಂಗಳೂರಿನ ನವರತ್ನ ಅಗ್ರಹಾರದವರು. ಅವರ ತಂದೆ ಎ.ಪಿ. ಕೃಷ್ಣಪ್ಪ ಉದ್ಯಮಿಯಾಗಿದ್ದರೆ ತಾಯಿ ಗೌರಮ್ಮ ದೊಡ್ಡಜಾಲ ಗ್ರಾಮಪಂಚಾಯಿತಿಯಲ್ಲಿ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೋದರರೂ ಸಹ ರಾಜಕೀಯ ಕ್ಷೇತ್ರದಲ್ಲಿದ್ದಾರೆ. ಇನ್ನು ಅವರ ಪತಿ ಶ್ರೀಜಿತ್ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದು ಪ್ರಸ್ತುತ ಸ್ವಂತ ಉದ್ಯೋಗ ನಡೆಸುತ್ತಿದ್ದಾರೆ. ಸರಿತಾರಿಗೆ ಇಬ್ಬರು ಮಕ್ಕಳಿದ್ದು ಅವರು ಶಾಲಾ ವಿದ್ಯಾಭ್ಯಾಸ ನಡೆಸಿದ್ದಾರೆ.





