ಅಪ್ಪಟ ಗೃಹಿಣಿಯಾದ ಜಯಾ ತುಂಬೇಮನೆ, ಮಲೆನಾಡ ಗ್ರಾಮ ನಿವಾಸಿಯಾಗಿ ಕಷ್ಟಗಳನ್ನು ಕಂಡುಂಡು ಬೆಳೆದವರು. ಮನೆಯನ್ನೇ ಮಂತ್ರಾಲಯವಾಗಿಸಿಕೊಂಡು ತಮ್ಮ ಅಪ್ಪಟ ಬಹುಮುಖ ಪ್ರತಿಭೆಯಿಂದ ಏನೆಲ್ಲಾ ಸಾಧಿಸಿದ್ದಾರೆ ಎಂದು ವಿವರವಾಗಿ ತಿಳಿಯೋಣವೇ.....?
ಆಕಾಶದ ನೀಲಿಯಲಿ ಚಂದ್ರತಾರೆ ತೊಟ್ಟಿಲಲಿ
ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೇ?
ಮನೆಮನೆಯಲಿ ದೀಪ ಮುಡಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗು ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೆ....?
ಸ್ತ್ರೀ ಎಂದರೆ ಅಷ್ಟೇ ಸಾಕೇ...?
- ಡಾ. ಜಿ.ಎಸ್. ಶಿವರುದ್ರಪ್ಪ
ಇಂದಿನ ಮಹಿಳೆ ಕೇವಲ ಅಡುಗೆಮನೆಯ ನಾಲ್ಕು ಗೋಡೆಗಳ ಮಧ್ಯೆಯೇ ಸೀಮಿತವಾಗಿಲ್ಲ. ಅವಳು ಹೆಜ್ಜೆ ಇಟ್ಟ ನೆಲವೆಲ್ಲಾ ವೇದಿಕೆಯಾಗಿ ಬೆಳಗಿದೆ. ಅವಳು ತನಗಿ ಸಿಕ್ಕ ಅವಕಾಶವನ್ನೇ ಸದುಪಯೋಗ ಪಡಿಸಿಕೊಂಡು ಸುಂದರ ಬದುಕನ್ನು ಹೆಣೆದುಬಿಡುತ್ತಾಳೆ. ತನ್ನ ಪ್ರತಿಭೆ, ಆಸಕ್ತಿ, ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಶಕ್ತಿ ಅವಳಿಗಿದೆ.
ಮಲೆನಾಡಿನ ಹಚ್ಚ ಹಸಿರಿನ ಮಡಿಲಿನಲ್ಲಿ ಚಿಗುರಿ ಟಿಸಿಲೊಡೆದು ಹೂವಾಗಿ ಅರಳಿದ ಬಹುಮುಖ ಪ್ರತಿಭೆ ಜಯಾ ತುಂಬೇಮನೆ. ಕೃಷಿ ಕುಟುಂಬದ ಅಪ್ಪಟ ಗೃಹಿಣಿಯಾಗಿರುವ ಇವರು ಕಸೂತಿ, ಕ್ರಾಫ್ಟಿಂಗ್, ಪೇಂಟಿಂಗ್, ರಂಗೋಲಿ, ಹಾಡು, ಹೊಲಿಗೆ, ಗಾರ್ಡನಿಂಗ್, ತರಕಾರಿ ಬೆಳೆಯುವುದು, ಹಪ್ಪಳ, ಸಂಡಿಗೆ ಮಾಡುವುದೇ ಅಲ್ಲದೆ, ಜೇನು ಸಾಕಾಣಿಕೆ, ಹೈನುಗಾರಿಕೆ ಎಂದು ಬೇರೆ ಬೇರೆ ರೀತಿಯ ಕಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ಆಸಕ್ತಿ, ಶ್ರದ್ಧೆ, ತಾಳ್ಮೆ ಇವುಗಳನ್ನೇ ಸಾಧನವಾಗಿಸಿಕೊಂಡು, ತಮ್ಮನ್ನು ತಾವು ಗುರುತಿಸಿಕೊಂಡಿರುವ ಅಪರೂಪದ ಪ್ರತಿಭೆ. ಹವ್ಯಾಸವಾಗಿ ರೂಪುಗೊಂಡ ಈ ಕಲೆ ಇವರ ಸ್ವಾವಲಂಬಿ ಬದುಕಿಗೂ ದಾರಿಯಾಗಿದೆ. ಎಲೆಮರೆಯ ಕಾಯಿಯಾಗಿಯೇ ಉಳಿದುಕೊಂಡಿದ್ದ ಇವರು, ತಮಗೆ ಅರಿವಿಲ್ಲದೇ ಸುತ್ತಣ ಜನರನ್ನು ಆಕರ್ಷಿಸಿದ್ದಾರೆ.
ಜಯಾರವರ ಮನೆಯ ಅಂಗಳದಲ್ಲಿ ಕಾಲಿಡುತ್ತಿದ್ದಂತೇ ಮನಮೋಹಕ ಹೂದೋಟ ತನ್ನ ವಯ್ಯಾರದಿಂದ ನಮ್ಮನ್ನು ಸ್ವಾಗತಿಸುತ್ತದೆ. ಮನೆಯ ಒಳಗಡೆಯ ಜಗುಲಿಗೆ ಬರುತ್ತಿದ್ದಂತೇ ಅವರದೇ ಕೈಚಳಕದ ಪೇಂಟಿಂಗ್, ಕಸೂತಿ, ಕ್ರಾಫ್ಟ್ ಗಳನ್ನೆಲ್ಲಾ ನೋಡಿದಾಗ ಬೇರೊಂದು ಹೊಸ ಲೋಕಕ್ಕೇ ಬಂದಂತೆ ಭಾಸವಾಗುತ್ತದೆ.
ಒಂದೇ ಸೂರಿನಡಿಯಲ್ಲಿ ಎಲ್ಲ ಒಬ್ಬರಿಂದಲೇ ಸಾಧ್ಯವೇ.....? ಎಂದು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ಹೌದು. ಇವೆಲ್ಲ ಒಂದು ಸೂರನಡಿಯಲ್ಲಿ ಹೇಗೆ ಸಾಧ್ಯವಾಯಿತು? ಇದನ್ನೆಲ್ಲಾ ಜಯಾರಿಂದಲೇ ಕೇಳಿ ತಿಳಿದುಕೊಳ್ಳೋಣ.

ನಿಮ್ಮ ಪರಿಚಯ ಹೇಳಿ.
ನನ್ನ ಹೆಸರು ಜಯಲಕ್ಷ್ಮಿ ಗಣಪತಿ ಹೆಗಡೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ತುಂಬೇಮನೆ ನನ್ನ ಊರು.
ನಿಮ್ಮ ದಿನಚರಿ ಶುರುವಾಗುವುದು ಹೇಗೆ....?
ನಾನು ಮುಂಜಾನೆ 5 ಗಂಟೆಗೆಲ್ಲಾ ಎದ್ದು ಅರ್ಧ ಗಂಟೆ ಕಾಲ ಯೋಗ, ಪ್ರಾಣಾಯಾಮ ಮಾಡುತ್ತೇನೆ. ನಂತರ ಮನೆಯ ದಿನದ ಕೆಲಸಗಳನ್ನು ಶುರು ಮಾಡುತ್ತೇನೆ. ಸಾಯಂಕಾಲ ಅರ್ಧ ಗಂಟೆ ಕಾಲ ವ್ಯಾಯಾಮ ಮಾಡುವ ರೂಢಿ ಇಟ್ಟುಕೊಂಡಿದ್ದೇನೆ.

ನಿಮ್ಮದು ಬಹುಮುಖ ಪ್ರತಿಭೆ ಎಂದು ಹೇಳುತ್ತಾರೆ. ನಿಮ್ಮ ಹವ್ಯಾಸಗಳೇನು?
ಹಾಗೆನಿಲ್ಲ.... ನನಗೆ ಚಿಕ್ಕಂದಿನಿಂದಲೂ ಕಸೂತಿ, ರಂಗೋಲಿ, ಕ್ರಾಫ್ಟಿಂಗ್, ಪೇಂಟಿಂಗ್ ಇಂಥವುಗಳಲ್ಲಿ ಆಸಕ್ತಿ ಇತ್ತು. ಅದೇ ಮುಂದುವರಿದಿದೆ ಅಷ್ಟೆ.
ನಿಮ್ಮ ಮನೆಯಲ್ಲಿ ಅಮ್ಮಅಪ್ಪ, ಅಜ್ಜಅಜ್ಜಿ ಯಾರಾದರೂ ಇವುಗಳನೆಲ್ಲಾ ಮಾಡುತ್ತಿದ್ದರಾ....?





