ಏಷ್ಯನ್ ಕ್ರೀಡಾಕೂಟದಲ್ಲಿ ನೀರು ಧಾಂಡಾ ಇತಿಹಾಸ ದಾಖಲೆ ಮಾಡಿದ್ದಾರೆ. ಟ್ರ್ಯಾಪ್ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ನೀರೂ ಧಾಂಡಾ ಪಾತ್ರರಾಗಿದ್ದಾರೆ.
ಹರಿಯಾಣದ 26 ವರ್ಷದ ಕ್ರೀಡಾಪಟು, ಕಳೆದ ಜುಲೈನಲ್ಲಿ ಇಟಲಿಯಲ್ಲಿ ನಡೆದ ಶಾಟ್‌ಗನ್ ವಿಶ್ವಕಪ್‌ನ ಟ್ರ್ಯಾಪ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಸಾಧನೆ ಮಾಡಿದ್ದರು. ಇದೀಗ ಏಷ್ಯನ್ ಕ್ರೀಡಾಕೂಟದಲ್ಲಿ 28 ಅಂಕಗಳನ್ನು ಗಳಿಸುವ ಮೂಲಕ, ಈ ಹಿಂದಿನ 24 ಅಂಕಗಳ ಏಷ್ಯನ್ ದಾಖಲೆಯನ್ನು ಮುರಿದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಏಷ್ಯನ್ ಕ್ರೀಡಾಕೂಟದಲ್ಲಿ ಟ್ರ್ಯಾಪ್ ಅಥವಾ ಸ್ಕೀಟ್ ಶೂಟಿಂಗ್ ವಿಭಾಗದಲ್ಲಿ ವೈಯಕ್ತಿಕ ಪದಕ ಗೆದ್ದ ಯಾವುದೇ ಭಾರತೀಯ ಮಹಿಳಾ ಶೂಟರ್ ಈ ಹಿಂದೆ ಇರಲಿಲ್ಲ.
ಇದು ನೀರೂ ಅವರಿಗೆ ಆ ದಿನದ ಎರಡನೇ ಪದಕವಾಗಿತ್ತು. ಇದಕ್ಕೂ ಮುನ್ನ ಅವರು ಮಹಿಳಾ ಟ್ರ್ಯಾಪ್ ತಂಡದ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಮಹಿಳಾ ತಂಡದ ವಿಭಾಗದಲ್ಲಿ ನೀರೂ ಧಾಂಡಾ (118), ಆಶಿಮಾ ಅಹ್ಲಾವತ್ (106) ಮತ್ತು ಮನೀಶಾ ಕೀರ್ (104) ಅವರನ್ನೊಳಗೊಂಡ ತಂಡವು ಒಟ್ಟು 328 ಅಂಕಗಳನ್ನು ಗಳಿಸಿತು. ಈ ಮೂಲಕ, ಚಿನ್ನದ ಪದಕ ಗೆದ್ದ ಚೀನಾ (346 ಅಂಕಗಳು) ತಂಡದ ನಂತರದ ಸ್ಥಾನವನ್ನು ಪಡೆದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು.





