ಪತ್ರಿಕಾ ವರದಿ, ಚುನಾವಣಾ ಆಯೋಗದ ಸ್ಪಷ್ಟನೆ ಮತ್ತು ಸುಪ್ರೀಂ ಕೋರ್ಟ್ ನೋಟಿಸ್, ಆರೋಪದಾಚೆ ಸತ್ಯವನ್ನು ಹುಡುಕಬೇಕಾದ ಸಮಯ
ಚುನಾವಣಾ ಆಯೋಗದ ಒಳಚರ್ಚೆಯಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ಆದರೆ ಅಂತಿಮ ನಿರ್ಣಯಗಳು ಒಮ್ಮತ ಅಥವಾ ಬಹುಮತದಿಂದಲೇ ಆಗಿದ್ದರೆ ಏಕಪಕ್ಷೀಯ ನಿರ್ಧಾರ ಎಂಬ ಆರೋಪಕ್ಕೆ ದಾಖಲೆಗಳೇ ಉತ್ತರಿಸಬೇಕು. ಅದೇ ಸಮಯದಲ್ಲಿ, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ರಾಜಕೀಯ ಪ್ರತಿಭಟನೆ ಹೆಸರಿನಲ್ಲಿ ಅವರ ಕುಟುಂಬದ ನಿವಾಸದ ಮೇಲೆ ದಾಳಿ ಅಥವಾ ಅವಹೇಳನಕಾರಿ ಘೋಷಣೆಗಳನ್ನು ಬರೆಯುವುದು ಯಾವುದೇ ರೀತಿಯಲ್ಲೂ ಪ್ರಜಾಸತ್ತಾತ್ಮಕ ಪ್ರತಿಭಟನೆಯ ಆರೋಗ್ಯಕರ ರೂಪವಲ್ಲ.
ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಕುರಿತ ಚರ್ಚೆ ಕಳೆದ ಕೆಲವು ವಾರಗಳಿಂದ ತೀವ್ರಗೊಂಡಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದ ತನಿಖಾ ವರದಿಯಲ್ಲಿ, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ ಹತ್ತು ತಿಂಗಳಲ್ಲಿ ಚುನಾವಣಾ ಆಯೋಗದ ಕೆಲವು ನಿರ್ಧಾರಗಳು ಮತ್ತು ಪ್ರಕ್ರಿಯೆಗಳ ಕುರಿತು ಕನಿಷ್ಠ 14 ಬಾರಿ ಲಿಖಿತ ಆಕ್ಷೇಪಣೆಗಳನ್ನು ದಾಖಲಿಸಿದ್ದರು ಎಂದು ವರದಿಯಾಯಿತು. ಮತದಾರರ ಪಟ್ಟಿ, Form-6, ಮತದಾರರ ಮಾಹಿತಿಯ ನಿರ್ವಹಣೆ, SIR ಸೇರಿದಂತೆ ಹಲವು ವಿಷಯಗಳು ಈ ವರದಿಯ ಕೇಂದ್ರದಲ್ಲಿದ್ದವು. ಇದರಿಂದ ಸಹಜವಾಗಿಯೇ ಒಂದು ಗಂಭೀರ ಪ್ರಶ್ನೆ ಉದ್ಭವಿಸಿತು:
ಮೂರು ಸದಸ್ಯರ ಚುನಾವಣಾ ಆಯೋಗದಲ್ಲಿ ನಿಜವಾಗಿಯೂ ಒಬ್ಬರೇ ನಿರ್ಧಾರ ತೆಗೆದುಕೊಂಡರೇ? ಲಿಖಿತ ಆಕ್ಷೇಪಣೆ ಎಂದರೆ ಅಂತಿಮ ನಿರ್ಧಾರದ ಮೇಲಿನ ಭಿನ್ನಮತವೇ? ಇದರ ಕುರಿತಾಗಿ ಸೂಕ್ತವಾದ ಉತ್ತರ ಸಿಗುವವರೆಗೂ, ಜನರಿಂದ ಚುನಾಯಿತವಾಗಿರುವ ಸರ್ಕಾರಕ್ಕೆ ಮತ್ತು ಸಾಂವಿಧಾನಯುತವಾದ ಹುದ್ದೆಯಲ್ಲಿರುವ ಚುನಾವಣಾ ಆಯುಕ್ತರನ್ನು ಬೀದಿ ಬೀದಿಗಳಲ್ಲಿ ಅಸಹ್ಯಕರ ರೀತಿಯಲ್ಲಿ ಬಯ್ಯುತ್ತಾ, ವಯಕ್ತಿಯವಾಗಿ ಅವರ ಕುಟುಂಬಕ್ಕೆ ಬೆದರಿಕೆ ಒಡ್ಡುವ ಮೂಲಕ ದೇಶದಲ್ಲಿ ಅರಾಜಕತೆ ಉಂಟು ಮಾಡಲು ಪ್ರಯತ್ನಿಸುತ್ತಿರುವ ವಿರೋಧ ಪಕ್ಷಗಳ ಹೋರಾಟ ನಿಜಕ್ಕೂ ಹೇಡಿತನ ಎಂದು ಜನರು ಆಡಿಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ಏನಿತ್ತು?
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ನವೆಂಬರ್ 2025ರಿಂದ ಸೆಪ್ಟೆಂಬರ್ 2026ರವರೆಗೆ ಇಬ್ಬರು ಚುನಾವಣಾ ಆಯುಕ್ತರು 14 ಸಂದರ್ಭಗಳಲ್ಲಿ ಅಧಿಕೃತವಾಗಿ ಆಕ್ಷೇಪಣೆಗಳನ್ನು ದಾಖಲಿಸಿದ್ದರು. ಅವುಗಳಲ್ಲಿ ಮತದಾರರ ನೋಂದಣಿ, ಮತದಾರರ ಹೆಸರು ಅಳಿಸುವುದು ಅಥವಾ ಮರುಸೇರ್ಪಡೆ, Form-6 ಬದಲಾವಣೆ, ಚುನಾವಣಾ ದತ್ತಾಂಶಕ್ಕೆ ಪ್ರವೇಶ ಮತ್ತು ತಂತ್ರಜ್ಞಾನ ವ್ಯವಸ್ಥೆಗಳ ನಿರ್ವಹಣೆ ಮುಂತಾದ ವಿಷಯಗಳು ಸೇರಿದ್ದವು. ಈ ವರದಿಯೇ ದೇಶಾದ್ಯಂತ ರಾಜಕೀಯ ಚರ್ಚೆಗೆ ಕಾರಣವಾಯಿತು.
2014 ರಿಂದಲೂ ಸುಮಾರು 100 ಕ್ಕೂ ಹೆಚ್ಚಿನಚುನಾವಣೆಗಳಲ್ಲಿ ಸೋಲನ್ನು ಅನುಭವಿಸಿ ಶತಾಯ ಗತಾಯ ಅಧಿಕಾರಕ್ಕೇರಲು ಬಹಸುತ್ತಿರುವ ರಾಹುಲ್ ಗಾಂಧಿ, ದೆಹಲಿಯಲ್ಲಿ ಸೋತು ಸುಣ್ಣವಾಗಿ ಪಂಜಾಬಿನಲ್ಲಿಯೂ ಅಧಿಕಾರವನ್ನು ಕಳೆದುಕೊಳ್ಳುವ ಭಯದಲ್ಲಿರುವ ಕೇಜ್ರೀವಾಲ್, ಜೆನ್ ಝೀಗಳ ಮೂಲಕ ದೇಶಾದ್ಯಂತ ಅರಾಜಕತೆ ಎಬ್ಬಿಸಿ ನೇಪಾಳ, ಬಾಂಗ್ಲಾ ದೇಶದಲ್ಲಾದಂತೆ ದಿಢೀರ್ ಎಂದು ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಕೇಜ್ರೀವಾಲನ ಬಿ-ಟೀಮ್ ಸಿಜೆಪಿ ಸೇರಿದಂತೆ ಅನೇಕ ವಿರೋಧ ಪಕ್ಷಗಳು ಇದನ್ನು ಚುನಾವಣಾ ಆಯೋಗದ ಒಳಗಿನ ಗಂಭೀರ ಭಿನ್ನಾಭಿಪ್ರಾಯ ಎಂದು ಬಣ್ಣಿಸಿದವು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಯನ್ನೂ ಹಲವು ಪಕ್ಷಗಳು ಆಗ್ರಹಿಸಿದವು. ಆದರೆ ಚುನಾವಣಾ ಆಯೋಗದ ಪ್ರತಿಕ್ರಿಯೆ ವಿಭಿನ್ನವಾಗಿತ್ತು.
ಚುನಾವಣಾ ಆಯೋಗವೇ ನೀಡಿದ ಪ್ರಮುಖ ಸ್ಪಷ್ಟನೆ
ವಿವಾದ ತೀವ್ರಗೊಳ್ಳುತ್ತಿದ್ದ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಮೂರೂ ಅಯುಕ್ತರೂ ಒಟ್ಟಾಗಿಯೇ ಪತ್ರಿಕಾಗೋಷ್ಠಿಯನ್ನು ನಡೆಸಿ, ಆಂತರಿಕ ಚರ್ಚೆಯಲ್ಲಿ ಭಿನ್ನ ಅಭಿಪ್ರಾಯ, ಸಲಹೆ, ಆಕ್ಷೇಪಣೆ ಅಥವಾ ತಾಂತ್ರಿಕ ಸೂಚನೆಗಳು ಬರುವುದು ಸಾಮಾನ್ಯ. ಅವು ಅಂತಿಮ ನಿರ್ಧಾರವನ್ನು ಪ್ರತಿನಿಧಿಸುವುದಿಲ್ಲ. ಕಳೆದ ಒಂದು ವರ್ಷದ ಎಲ್ಲಾ ಅಂತಿಮ ನಿರ್ಧಾರಗಳು, SIR ಸೇರಿದಂತೆ, ಮೂವರು ಆಯುಕ್ತರ ಅನುಮೋದನೆಯೊಂದಿಗೆ ಸರ್ವಾನುಮತದಿಂದಲೇ ಕೈಗೊಳ್ಳಲಾಗಿದೆ.
- ಆಂತರಿಕ ಚರ್ಚೆಯ ಸಮಯದಲ್ಲಿ ವೈಯಕ್ತಿಕ ಅಭಿಪ್ರಾಯಗಳು ಇರಬಹುದು.
- ಅಧಿಕಾರಿಗಳು ಸಲಹೆ ಮತ್ತು ಆಕ್ಷೇಪಣೆಗಳನ್ನು ದಾಖಲಿಸಬಹುದು.
- ಕರಡು ಹಂತದಲ್ಲಿ ಬದಲಾವಣೆಗಳನ್ನು ಸೂಚಿಸುವುದು ಸಾಮಾನ್ಯ.
- ಆದರೆ ಅಂತಿಮ ನಿರ್ಧಾರಗಳು ಮೂವರ ಅನುಮೋದನೆಯೊಂದಿಗೆ ಕೈಗೊಳ್ಳಲಾಗಿದೆ.
- ವಿಶೇಷವಾಗಿ SIR ಸಂಬಂಧಿಸಿದ ನಿರ್ಧಾರಗಳು ಸರ್ವಾನುಮತವಾಗಿದ್ದವು.
ಮುಂದೆ ಪಾರದರ್ಶಕತೆಯನ್ನು ಹೆಚ್ಚಿಸಲು ಸಭೆಗಳ Agenda ಅನ್ನು ಮುಂಚಿತವಾಗಿ ನೀಡುವುದು ಮತ್ತು Minutes of Meeting ಅನ್ನು ಅಧಿಕೃತವಾಗಿ ದಾಖಲಿಸುವ ಕ್ರಮಗಳನ್ನು ಬಲಪಡಿಸುವುದಾಗಿ ಆಯೋಗ ತಿಳಿಸಿದೆ. ಆಯೋಗದ ಭವಿಷ್ಯದ ಡಿಜಿಟಲ್ ಉಪಕ್ರಮಗಳಿಗೆ ಹೆಚ್ಚಿನ ಚರ್ಚೆ ಮತ್ತು ಪರಿಶೀಲನೆ ಇರಲಿದೆ ಎಂಬುದನ್ನೂ ಅದು ತಿಳಿಸಿದೆ.
ಹಾಗಾದರೆ ವಿರೋಧ ಪಕ್ಷಗಳ ಪ್ರತಿಭಟನೆ ತಪ್ಪೇ?
ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುವ ಹಕ್ಕು ಇದೆ. CEC ರಾಜೀನಾಮೆ ಕೇಳುವ ರಾಜಕೀಯ ಹಕ್ಕು ಇದೆ. SIR ವಿರುದ್ಧ ಆಕ್ಷೇಪ ವ್ಯಕ್ತಪಡಿಸುವ ಹಕ್ಕು ಇದೆ. ಸುಪ್ರೀಂ ಕೋರ್ಟ್‌ಗೆ ಹೋಗುವ ಹಕ್ಕು ಇದೆ. ಇವೆಲ್ಲವೂ ಪ್ರಜಾಪ್ರಭುತ್ವದ ಭಾಗ. ಆದರೆ, ವಿರೋಧ ವ್ಯಕ್ತಪಡಿಸುವುದು ಒಂದು ವಿಷಯ. ವ್ಯಕ್ತಿಯ ಕುಟುಂಬವನ್ನು ಗುರಿಯಾಗಿಸುವುದು ಮತ್ತೊಂದು ವಿಷಯ.
ಈ ಹಿಂದೆಯೂ ಇವಿಎಂ ಹ್ಯಾಕ್ ಮಾಡುವ ಮೂಲಕ ಬಿಜೆಪಿ ಗೆಲ್ಲುತ್ತಿದೆ ಎಂಬ ಗುಲ್ಲೆಬ್ಬಿಸಿ, ದೇಶದ ಜನರನ್ನು ಅವಮಾನಿಸಿದ್ದರ ವಿರೋಧವಾಗಿ ಚುನಾವಣಾ ಆಯೋಗ ಬಹಿರಂಗವಾಗಿ ಇವಿಎಂ ಹ್ಯಾಕ್ ಮಾದಿ ತೋರಿಸಿ ಎಂದು ನೀಡಿದ್ದ ಪಂಥಾಹ್ವಾನವನ್ನು ಎದುರಿಸಲಾಗದ ವಿರೋಧ ಪಕ್ಷಗಳು ಅಂಡು ಸುಟ್ಟ ಬೆಕ್ಕಿನಂತಾಗಿದ್ದ ಪ್ರಕರಣವನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು.
ಆಗ್ರಾದಲ್ಲಿ ಜ್ಞಾನೇಶ್ ಕುಮಾರ್ ಅವರ ಪೋಷಕರ ನಿವಾಸದ ಮುಂದೆ ನಡೆದ ಘಟನೆ
ಸೆಪ್ಟೆಂಬರ್ 28ರಂದು ಕಾಂಗ್ರೆಸ್ ಕಾರ್ಯಕರ್ತರು ಉತ್ತರ ಪ್ರದೇಶದ ಆಗ್ರಾದಲ್ಲಿರುವ ಜ್ಞಾನೇಶ್ ಕುಮಾರ್ ಅವರ ಪೋಷಕರ ನಿವಾಸದ ಮುಂದೆ ಪ್ರತಿಭಟನೆ ನಡೆಸಿ, ಮನೆಯ ಗೇಟ್ ಮತ್ತು ಗೋಡೆಯ ಮೇಲೆ ಅವಹೇಳನಕಾರಿ ಘೋಷಣೆಗಳನ್ನು ಕಪ್ಪು ಬಣ್ಣದಲ್ಲಿ ಬರೆದಿರುವುದು ಪ್ರಜಾಸತ್ತಾತ್ಮಕ ಪ್ರತಿಭಟನೆಯ ಮಿತಿಗಳ ಬಗ್ಗೆ ಗಂಭೀರ ಪ್ರಶ್ನೆ ಎಬ್ಬಿಸುತ್ತದೆ. ಘಟನೆಯ ಸಂಬಂಧದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಕೆಲವರನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ಒಬ್ಬ CECನ ನಿರ್ಧಾರ ತಪ್ಪಾಗಿದೆ ಎಂದು ಯಾರಿಗಾದರೂ ಅನಿಸಿದರೆ, ಸುಪ್ರೀಂ ಕೋರ್ಟ್‌ಗೆ ಹೋಗಬಹುದು. ಸಂಸತ್ತಿನ ಪ್ರಕ್ರಿಯೆ ಕೇಳಬಹುದು. ಚುನಾವಣಾ ಆಯೋಗಕ್ಕೆ ದಾಖಲೆ ಸಲ್ಲಿಸಬಹುದು. ಸಾರ್ವಜನಿಕ ಚರ್ಚೆ ನಡೆಸಬಹುದು. ಪ್ರತಿಭಟನೆ ನಡೆಸಬಹುದು. ಆದರೆ ಒಬ್ಬ ಸಾರ್ವಜನಿಕ ಅಧಿಕಾರಿಯ ಕುಟುಂಬದ ನಿವಾಸಕ್ಕೆ ಹೋಗಿ ಅವಹೇಳನಕಾರಿ ಘೋಷಣೆಗಳನ್ನು ಬರೆಯುವುದು ಅಥವಾ ಕುಟುಂಬದ ಸದಸ್ಯರನ್ನು ರಾಜಕೀಯ ಸಂಘರ್ಷದೊಳಗೆ ಎಳೆಯುವುದು ವಿಷಯದ ಕಾನೂನಾತ್ಮಕ ಪರಿಹಾರವಲ್ಲ. ಅದರಲ್ಲೂ ಆರೋಪಗಳು ಇನ್ನೂ ನ್ಯಾಯಾಂಗ ಪರಿಶೀಲನೆಯಲ್ಲಿರುವಾಗ ಇಂತಹ ವೈಯಕ್ತಿಕ ಗುರಿಸಾಧನೆ ಪ್ರಜಾಸತ್ತಾತ್ಮಕ ಚರ್ಚೆಯ ಗುಣಮಟ್ಟವನ್ನು ಕುಗ್ಗಿಸುತ್ತದೆ.
CJP ಮತ್ತು ದೇಶಾದ್ಯಂತದ ಪ್ರತಿಭಟನೆಗಳು
ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಮರು ಪರೀಕ್ಷೆಯ ಕುರಿತಾಗಿ ವಿದ್ಯಾರ್ಥಿಗಳ ಪರವಾಗಿ ಹೋರಾಟ ಮಾಡುವ ಸಲುವಾಗಿ ಹುಟ್ಟುಕೊಂಡ CJP (Cockroach Janta Party) ದೆಹಲಿಯ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳ ಸೋಗಿನಲ್ಲಿದ್ದ ಗೂಂಡಾಗಳ ಸಹಾಯದಿಂದ ದೊಂಬಿ ಎಬ್ಬಿಸಿ, ಪರಿಸ್ಥಿತಿ ಕೈ ಮೀರಿ ಹೋಗುವುದನ್ನು ತಡೆಗಟ್ಟುವ ಸಲುವಾಗಿ ಅಂದಿನ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರಿಂದ ಕೇಂದ್ರ ಸರ್ಕಾರ ರಾಜೀನಾಮೆ ಕೊಡಿದುತ್ತಿದ್ದಂತೆಯೇ, ಈ ದೇಶದಲ್ಲಿ ಅರಾಜಕತೆ ಮತ್ತು ದೊಂಬಿಯನ್ನು ಎಬ್ಬಿಸಿ ದಿಧೀರ್ ಎಂದು ಅಧಿಕಾರಕ್ಕೆ ಬರಬಹುದು ಎಂದೆಣಿಸಿರುವ ಜಿರಲೆಗಳು ಕೂಡ 48 ಗಂಟೆಗಳ ಒಳಗೆ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ನೀಡದೇ ಹೋದರೆ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಸಲಾಗುವುದು ಎಂದು ಘೋಷಿಸಿ ಅದು ಸಾಧ್ಯವಾಗದು ಎಂದರಿತು, ಅಕ್ಟೋಬರ್ 2ರಂದು ಮುಂಬೈನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಇಲ್ಲದೇ ಇದ್ದರೂ SIR ವಿರುದ್ಧ ಪ್ರತಿಭಟನೆ ನಡೆದುವಾಗ ಒಬ್ಬ ಅಮಾಯಕರು ನಿಧನರಾಗಿದ್ದು, ಈ ಎರಡೂ ಪ್ರಕರಣಗಳ ಕುರಿತಾಗಿ ಕೇಸ್ ಧಾಖಲಾಗಿದೆ.
ಸುಪ್ರೀಂ ಕೋರ್ಟ್ ನೋಟಿಸ್ ನೀಡಿರುವುದನ್ನು ಹೇಗೆ ನೋಡಬೇಕು?
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ SIR ಕುರಿತಾದ ಆಂತರಿಕ ಭಿನ್ನಾಭಿಪ್ರಾಯಗಳ ಬಗ್ಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಾಧಾರಿತವಾಗಿ ದೆಹಲಿ ಮೂಲದ ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಅವರು ಹಿರಿಯ ವಕೀಲ ವಿಕಾಸ್ ಸಿಂಗ್ ಮತ್ತು ವಕೀಲ ಗುರುಸ್ವಾಮಿ ಅವರಂತಹ ಹಿರಿಯ ಕಾನೂನು ತಜ್ಞರ ಮೂಲಕ ಸುಪ್ರೀಕೋರ್ಟಿನಲ್ಲಿ ದಾಖಲಿಸಿದ ದೂರಿನನ್ವಯ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್
ಆದರೆ ಇಲ್ಲಿ ನೋಟಿಸ್ ಎಂದರೆ ಆರೋಪ ಸಾಬೀತಾಗಿದೆ ಎಂದಲ್ಲ. ನ್ಯಾಯಾಲಯವು ಜ್ಞಾನೇಶ್ ಕುಮಾರ್ ತಪ್ಪು ಮಾಡಿದ್ದಾರೆ ಎಂದು ತೀರ್ಪು ನೀಡಿಲ್ಲ. ಅದೇ ರೀತಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಪ್ಪು ಎಂದೂ ನ್ಯಾಯಾಲಯ ಹೇಳಿಲ್ಲ. ನ್ಯಾಯಾಲಯವು ಚಾರಣೆಯ ಭಾಗವಾಗಿ ಸಂಬಂಧಪಟ್ಟವರಿಂದ ಉತ್ತರ ಕೇಳಿದೆ.
ಪತ್ರಿಕಾ ವರದಿ ಆಧರಿಸಿ ಮಾತ್ರ ಆದೇಶ ಕೊಡಲು ಸಾಧ್ಯವಿಲ್ಲ ಎಂದ ನ್ಯಾಯಾಲಯ
ವಿಚಾರಣೆ ವೇಳೆ ಅರ್ಜಿದಾರರ ವಾದದ ಪ್ರಮುಖ ಆಧಾರವೇ ಮಾಧ್ಯಮದ ವರದಿಯಾಗಿತ್ತು. ಪತ್ರಿಕಾ ವರದಿ ಸಂಪೂರ್ಣ ಸರಿಯಾಗಿರಬಹುದು, ಭಾಗಶಃ ಸರಿಯಾಗಿರಬಹುದು ಅಥವಾ ತಪ್ಪಾಗಿರಬಹುದು. ಆದ್ದರಿಂದ ಕೇವಲ ಪತ್ರಿಕಾ ವರದಿಯನ್ನು ಆಧಾರವಾಗಿಸಿಕೊಂಡು ತಕ್ಷಣವೇ ಮುಖ್ಯ ಚುನಾವಣಾ ಆಯುಕ್ತರನ್ನು ಅಮಾನತುಗೊಳಿಸುವಂತಹ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಮೊದಲು ಅಧಿಕೃತ ಮತ್ತು ಪ್ರಮಾಣೀಕೃತ ದಾಖಲೆಗಳನ್ನು ನೋಡಬೇಕು ಎಂಬ ನಿಲುವನ್ನು ಅದು ವ್ಯಕ್ತಪಡಿಸಿತು.
ಅದೇ ಸಮಯದಲ್ಲಿ ನ್ಯಾಯಾಲಯವು ಪ್ರಸ್ತುತ ಹಂತದಲ್ಲಿ ಎಲ್ಲಾ ನಿರ್ಧಾರಗಳನ್ನೂ CEC ಒಬ್ಬರೇ ತೆಗೆದುಕೊಂಡಿದ್ದಾರೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿತು. ಅಂದರೆ ನ್ಯಾಯಾಲಯದ ಮುಂದೆ ಈಗಿರುವ ಪ್ರಶ್ನೆ, ಯಾವ ನಿರ್ಧಾರಗಳು ಹೇಗೆ ತೆಗೆದುಕೊಳ್ಳಲ್ಪಟ್ಟವು? ಅದಕ್ಕೆ ಉತ್ತರವನ್ನು ಅಧಿಕೃತ ದಾಖಲೆಗಳಿಂದ ಕಂಡುಹಿಡಿಯಬೇಕಿದೆ. ಒಂದು ವೇಳೆ ಕಾನೂನುಬದ್ಧ ಪ್ರಕ್ರಿಯೆ ಪಾಲಿಸದೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದಾಖಲೆಗಳಿಂದ ಸಾಬೀತಾದರೆ, ಅಂತಹ ನಿರ್ಧಾರಗಳನ್ನು ರದ್ದುಗೊಳಿಸುವ ಅಧಿಕಾರ ನ್ಯಾಯಾಲಯಕ್ಕಿದೆ ಎಂದು ಪೀಠ ಸೂಚಿಸಿದ್ದು, ಇದು ಬಹಳ ಸಮತೋಲನದ ನ್ಯಾಯಾಂಗ ನಿಲುವಾಗಿದೆ
ಹಾಗಾದರೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಪ್ಪು ಎನ್ನಬಹುದೇ?
ವರದಿಯಲ್ಲಿ 14 ಆಕ್ಷೇಪಣೆಗಳು ದಾಖಲಾಗಿವೆ ಎಂಬುದನ್ನು ಚುನಾವಣಾ ಆಯೋಗವೇ ಸಂಪೂರ್ಣವಾಗಿ ನಿರಾಕರಿಸಿಲ್ಲ. ಬದಲಾಗಿ, ಆಯೋಗದ ವಾದ, ಆಕ್ಷೇಪಣೆಗಳು ಇದ್ದವು. ಆದರೆ ಅವು ಅಂತಿಮ ನಿರ್ಧಾರದ ಮೇಲಿನ ಭಿನ್ನಮತವನ್ನು ಸೂಚಿಸುವುದಿಲ್ಲ. ಹೀಗಾಗಿ, ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ಉಲ್ಲೇಖಿಸಿದ ಆಕ್ಷೇಪಣೆಗಳು ಇದ್ದವು ಆದರೆ ಅವು ಅಂತಿಮ ನಿರ್ಧಾರಗಳ ಮೇಲಿನ ಸಂಸ್ಥಾತ್ಮಕ ಭಿನ್ನಮತವೇ ಎಂಬುದು ಇನ್ನೂ ಪರಿಶೀಲನೆಯಲ್ಲಿದೆ.
ರಾಜಕೀಯವಾಗಿ ಬಿಜೆಪಿ ಎದುರಿಸಲು ಸಾಧ್ಯವಾಗದಿದ್ದರೆ…?
ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗದಿರುವುದನ್ನು ಚುನಾವಣಾ ಆಯೋಗದ ವಿರುದ್ಧದ ಆರೋಪಗಳಿಗೆ ನೇರ ಸಾಕ್ಷಿಯೆಂದು ಪರಿಗಣಿಸಲಾಗುವುದಿಲ್ಲ. ಅದೇ ರೀತಿ, ಬಿಜೆಪಿ ಗೆದ್ದಿದೆ ಎಂದ ಮಾತ್ರಕ್ಕೆ ಚುನಾವಣಾ ಆಯೋಗ ತಪ್ಪಾಗಿದೆ/ಸರಿಯಾಗಿದೆ ಎಂಬ ಸಮೀಕರಣವೂ ಸರಿಯಲ್ಲ.
ಚುನಾವಣೆಯ ವಿಶ್ವಾಸಾರ್ಹತೆಯನ್ನು ನಿರ್ಧರಿಸುವ ಮಾನದಂಡ ಯಾರು ಗೆದ್ದರು ಎಂಬುದಲ್ಲ. ಪ್ರಕ್ರಿಯೆ ಕಾನೂನುಬದ್ಧ, ಪಾರದರ್ಶಕ ಮತ್ತು ಪರಿಶೀಲಿಸಬಹುದಾಗಿತ್ತೇ ಎಂಬುದು. ಆದ್ದರಿಂದ ವಿರೋಧ ಪಕ್ಷಗಳು ಚುನಾವಣೆಯಲ್ಲಿ ಸೋತಿದ್ದರೆ, ಅದರ ರಾಜಕೀಯ ಕಾರಣಗಳನ್ನು ಅವು ಸ್ವತಃ ವಿಶ್ಲೇಷಿಸಬೇಕು. ಆದರೆ ಚುನಾವಣಾ ಆಯೋಗದ ಮೇಲೆ ನಿಜವಾದ ಕಾನೂನುಬದ್ಧ ಪ್ರಶ್ನೆ ಇದ್ದರೆ ಅದನ್ನು ದಾಖಲೆಗಳ ಮೂಲಕ ಎತ್ತಬೇಕು. ಜ್ಞಾನೇಶ್ ಕುಮಾರ್ ಅವರ ಯಾವ ನಿರ್ಧಾರಗಳು ಬಿಜೆಪಿಗೆ ಸಹಕಾರಿಯಾಗಿ ಬಿಜೆಪಿ ಅಧಿಕಾರಕ್ಕೇರಲು ಸಹಾಯವಾದವು ಎಂಬುದನ್ನೂ ಸೂಕ್ತ ದಾಖಲೆಗಳ ಮೂಲಕ ತೋರಿಸಬೇಕು. ಅದುಬಿಟ್ಟು ತಮ್ಮ ಸತತ ಚುನಾವಣಾ ಸೋಲಿನ ಕೋಪವನ್ನು ಸಂಸ್ಥೆಯ ಮೇಲೆ ಹೊರಿಸುವುದೂ ತಪ್ಪು. ಹಾಗಾಗಿ ಸಂಸ್ಥೆಯ ವಿರುದ್ಧದ ಇಂತಹ ಕ್ಷುಲ್ಲಕ ಆರೋಪಗಳು ಸ್ಪಷ್ಟವಾಗಿ ವಿರೋಧ ಪಕ್ಷ ಹತಾಶೆ ತನವನ್ನು ಜಗಜ್ಜಾಹೀರಾತು ಮಾಡಿದೆ
ವಿರೋಧ ಪಕ್ಷಗಳಿಗೂ ಒಂದು ಪ್ರಶ್ನೆ
ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪಗಳಿದ್ದರೆ, ಅವುಗಳನ್ನು ಸುಪ್ರೀಂ ಕೋರ್ಟ್ ಮುಂದೆ ದಾಖಲೆಗಳೊಂದಿಗೆ ಸಾಬೀತುಪಡಿಸುವುದು ಹೆಚ್ಚು ಪರಿಣಾಮಕಾರಿ. ಅದನ್ನು ಬಿಟ್ಟು ಸುಮ್ಮನೆ ಹಾದಿ ಬಿದಿಯಲ್ಲಿ ರಂಪಾಟ ಮಾಡುವುದು, ಪ್ರಧಾನಿಗಳು, ಗೃಹಮಂತ್ರಿಗಳು ಮತ್ತು ಮುಖ್ಯಾ ಚುನಾವಣಾ ಆಯುಕ್ತರ ವಯಕ್ತಿಕ ತೇಜೋವಧೆ ಮಾಡುವುದರಿಂದ ಯಾವುದೇ ಅನುಕೂಲಕವಾಗದೇ, ಚುನಾವಣಾ ಸುಧಾರಣೆಯ ಮೂಲ ಪ್ರಶ್ನೆ ಹಿಂದೆ ಸರಿಯುತ್ತದೆ.
ಆಗ ಸಾರ್ವಜನಿಕ ಚರ್ಚೆ, SIR ಕಾನೂನುಬದ್ಧವೇ? ಎಂಬ ಪ್ರಶ್ನೆಯಿಂದ ಯಾರು ಯಾರನ್ನು ಯಾವರೀತಿಯಾಗಿ ಅವಮಾನಿಸಿದರು? ಪ್ರತಿಭಟನೆಯ ಹೆಸರಿನಲ್ಲಿ ಯಾರು ಯಾರು ಎಂತಹ ಘೋಷಣೆಗಳನ್ನು ಕೂಗಿದರು? ಯಾರು ಯಾರು ತಮ್ಮ ತಮ್ಮ ತೆವಲುಗಳನ್ನು ಹೇಗೆ ತೀರಿಸಿಕೊಂಡರು ಎಂಬ ವಿಷಯವೇ ಮುನ್ನಲೆಗೆ ಬರುವುದರಿಂದ ವಿರ್ಫ್ಧ ಪಕ್ಷಗಳಿಗೆ ಪರಿಸ್ಥಿತಿಯ ಲಾಭಕ್ಕಿಂತಲೂ ನಷ್ಟವೇ ಹೆಚ್ಚಾಗಿ ಮುಂಬರುವ ಚುನಾವಣೆಗಳಲ್ಲಿ ತೀವ್ರತರನಾದ ಹಿನ್ನಡೆಯನ್ನು ಅನುಭವಿಸಬೇಕಾಗಿ ಬಂದರೂ ಅಚ್ಚರಿ ಇಲ್ಲಾ.
SIR ವಿವಾದದ ಬೆನ್ನಲ್ಲೇ 20 ವರ್ಷ ಹಳೆಯ ಪ್ರಕರಣ ಏಕೆ? ಕೇರಳ ಸರ್ಕಾರದ ಕ್ರಮದ ಹಿಂದೆ ರಾಜಕೀಯವೇ?
SIR ವಿಚಾರವಾಗಿ ದೇಶಾದ್ಯಂತ ರಾಜಕೀಯ ಸಂಘರ್ಷ ನಡೆಯುತ್ತಿರುವ ಸಮಯದಲ್ಲೇ ಅಕ್ಟೋಬರ್ 1ರಂದು ಕೇರಳ ಗೃಹ ಇಲಾಖೆ, ಕೇರಳ ಸರ್ಕಾರವು 2006ರ ಜ್ಞಾನೇಶ್ ಕುಮಾರ್ ಅವರಿಗೆ ಸಂಬಂಧಿಸಿದ ಹಳೆಯ ವಿಜಿಲೆನ್ಸ್ ದಾಖಲೆಗಳನ್ನು ಮತ್ತೆ ಪರಿಶೀಲಿಸಲು ಮುಂದಾಗಿರುವುದು ಸ್ಪಷ್ಟವಾಗಿ ರಾಜಕೀಯದ ವಾಸನೆ ಬಡಿಯುತ್ತಿದೆ
ಸುಮಾರು 20 ವರ್ಷಗಳ ಹಿಂದಿನ Kerala State Transport Project (KSTP)ಗೆ ಸಂಬಂಧಿಸಿದ ಪ್ರಕರಣದ ಸಮಯದಲ್ಲಿ ಆಗ ಜ್ಞಾನೇಶ್ ಕುಮಾರ್ ಕೇರಳ PWD ಕಾರ್ಯದರ್ಶಿಯಾಗಿದ್ದರು. ಯೋಜನೆಗೆ ಸಂಬಂಧಿಸಿದ ಅಕ್ರಮಗಳು, ಗುತ್ತಿಗೆ ಪ್ರಕ್ರಿಯೆ ಮತ್ತು ಮಲೇಷ್ಯಾದ ಇಂಜಿನಿಯರ್ ಲೀ ಸೀ ಬೀನ್ ಅವರ ಆತ್ಮಹತ್ಯೆ ಸೇರಿದಂತೆ ಹಲವು ವಿಚಾರಗಳು ಆಗಲೇ ವಿವಾದಕ್ಕೀಡಾಗಿದ್ದವು. ಅವರ ಹೆಸರಿರುವುದಾಗಿ ಹೇಳಲಾದ ಆತ್ಮಹತ್ಯೆ ಪತ್ರವೂ ಈ ಪ್ರಕರಣದ ಪ್ರಮುಖ ಅಂಶವಾಗಿದ್ದು ಆಗ ತಣ್ಣಗಾಗಿದ್ದ ವಿಚಾರವನ್ನು ಈಗ ಕೇರಳದ ಕಾಂಗ್ರೇಸ್ ಸರ್ಕಾರ ಕೈಗೆತ್ತಿಕೊಂಡಿರುವುದು ಸೇಡಿನ ರಾಜಕೀಯ ಎನ್ನುವುದನ್ನು ಸ್ಪಷ್ಟ ಪಡಿಸುತ್ತಿದೆ.
ಕೊನೆಯ ಮಾತು
ಚುನಾವಣಾ ಆಯೋಗವನ್ನು ಪ್ರಶ್ನಿಸುವುದು ತಪ್ಪಲ್ಲ. ಆದರೆ ಸೂಕ್ತವಾದ ಸಾಕ್ಷಿಯಿಲ್ಲದೆ ವಯಕ್ತಿಕ ಪ್ರತಿಭಟನೆ ನಡೆಸುವುದು ತಪ್ಪು
ಭಾರತದ ಚುನಾವಣಾ ಆಯೋಗವು ದೇಶದ ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ಸಂಸ್ಥೆಗಳಲ್ಲಿ ಒಂದು. ಅದನ್ನು ಪ್ರಶ್ನಿಸುವ ಹಕ್ಕು ನಾಗರಿಕರಿಗಿದೆ. ಅದನ್ನು ಟೀಕಿಸುವ ಹಕ್ಕು ವಿರೋಧ ಪಕ್ಷಗಳಿಗಿದೆ. ಅದರ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಕ್ಕು ಯಾರಿಗಾದರೂ ಇದೆ. ಮಾಧ್ಯಮಕ್ಕೆ ಅದರ ಕಾರ್ಯವೈಖರಿಯನ್ನು ತನಿಖೆ ಮಾಡುವ ಹಕ್ಕು ಇದೆ. ಆದರೆ ಅದೇ ಸಮಯದಲ್ಲಿ,
ಒಬ್ಬ ಸಾರ್ವಜನಿಕ ಅಧಿಕಾರಿಯ ವಿರುದ್ಧದ ಆರೋಪ ಇನ್ನೂ ನ್ಯಾಯಾಲಯದ ಪರಿಶೀಲನೆಯಲ್ಲಿರುವಾಗ ಅವರನ್ನು ವೈಯಕ್ತಿಕವಾಗಿ ಅವಮಾನಿಸುವುದು ಸರಿಯಲ್ಲ. ಅವರ ಕುಟುಂಬದ ನಿವಾಸವನ್ನು ರಾಜಕೀಯ ಪ್ರತಿಭಟನೆಯ ವೇದಿಕೆಯನ್ನಾಗಿ ಮಾಡುವುದು ಇನ್ನೂ ಹೆಚ್ಚು ಅಸಮಂಜಸ. ಅದೇ ರೀತಿ ಇಂಡಿಯನ್ ಎಕ್ಸ್‌ಪ್ರೆಸ್ 14 ಆಕ್ಷೇಪಣೆಗಳನ್ನು ವರದಿ ಮಾಡಿದೆ ಎಂಬ ಕಾರಣಕ್ಕೆ ಅದೇ ಸತ್ಯ ಎಂದು ಹೇಗೆ ಆಗುವುದಲ್ಲವೋ ಅದೇ ರೀತಿಯಾಗಿ ಮೂವರೂ ಒಟ್ಟಿಗೆ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂಬ ಕಾರಣಕ್ಕೆ ಅವರ ನಡುವಿನ ಆಕ್ಷೇಪಣೆಗಳ ಕುರಿತಾದ ಮೂಲಭೂತ ಪ್ರಶ್ನೆ ಸ್ವಯಂಚಾಲಿತವಾಗಿ ಮುಗಿಯುವುದಿಲ್ಲ.
ಈ ಎರಡರ ಮಧ್ಯದಲ್ಲಿರುವ ಸತ್ಯವನ್ನು ಸುಪ್ರೀಂ ಕೋರ್ಟ್ ಈಗ ದಾಖಲೆಗಳ ಮೂಲಕ ಪರಿಶೀಲಿಸಲಿದೆ. ಅಕ್ಟೋಬರ್ 5ರಂದು ನ್ಯಾಯಾಲಯ CEC ಅವರನ್ನು ತಕ್ಷಣ ಅಮಾನತುಗೊಳಿಸುವ ಮಧ್ಯಂತರ ಆದೇಶ ನೀಡಲಿಲ್ಲ; ಬದಲಿಗೆ ECI, ಕೇಂದ್ರ ಸರ್ಕಾರ, CEC ಮತ್ತು ಇತರ ಸಂಬಂಧಪಟ್ಟವರಿಂದ ಉತ್ತರ ಕೇಳಿದೆ. ಕಾನೂನುಬದ್ಧ ಪ್ರಕ್ರಿಯೆ ಪಾಲಿಸದ ನಿರ್ಧಾರಗಳು ಕಂಡುಬಂದರೆ ಅವುಗಳನ್ನು ನಂತರ ರದ್ದುಗೊಳಿಸುವ ಸಾಧ್ಯತೆಯನ್ನು ನ್ಯಾಯಾಲಯ ಸೂಚಿಸಿದೆ. ಆದ್ದರಿಂದ ಇಂದಿನ ಪರಿಸ್ಥಿತಿಯಲ್ಲಿ ಅತ್ಯಂತ ಜವಾಬ್ದಾರಿಯುತ ನಿಲುವು ಒಂದೇ,
“ಆರೋಪವಿದ್ದರೆ ತನಿಖೆಯಾಗಲಿ. ತಪ್ಪಿದ್ದರೆ ಕ್ರಮವಾಗಲಿ. ಆದರೆ ತನಿಖೆ ಮುಗಿಯುವ ಮುನ್ನ ಯಾರನ್ನೂ ಅಪರಾಧಿ ಎಂದು ಘೋಷಿಸಬಾರದು. ಅದೇ ರೀತಿ ಕುಟುಂಬದ ಮೇಲೆ ದಾಳಿ ನಡೆಸುವುದನ್ನು ವಿರೋಧ ಪಕ್ಷಗಳು ಮುಂದುವರೆಸಬಾರದು
ಭಾರತದ ಚುನಾವಣೆಯ ವಿಶ್ವಾಸಾರ್ಹತೆ ಬಿಜೆಪಿ ಗೆಲ್ಲುವುದರಿಂದಲೂ, ಕಾಂಗ್ರೆಸ್ ಸೋಲುವುದರಿಂದಲೂ ನಿರ್ಧಾರವಾಗುವುದಿಲ್ಲ. ಅದು ಚುನಾವಣಾ ಪ್ರಕ್ರಿಯೆಯ ಮೇಲೆ ಜನರಿಗೆ ಇರುವ ನಂಬಿಕೆಯಿಂದ ನಿರ್ಧಾರವಾಗುತ್ತದೆ. ಮತ್ತು ಆ ನಂಬಿಕೆಯನ್ನು ಉಳಿಸುವ ಜವಾಬ್ದಾರಿ ಚುನಾವಣಾ ಆಯೋಗಕ್ಕೂ ಇದೆ, ಸರ್ಕಾರಕ್ಕೂ ಇದೆ, ವಿರೋಧ ಪಕ್ಷಗಳಿಗೂ ಇದೆ, ಮಾಧ್ಯಮಕ್ಕೂ ಇದೆ, ನ್ಯಾಯಾಂಗಕ್ಕೂ ಇದೆ. ಅಂತಿಮವಾಗಿ ಪ್ರತಿಯೊಬ್ಬ ನಾಗರಿಕನಿಗೂ ಇದೆ ಅಲ್ವೇ?





