ಆಟದ ಮೈದಾನದಿಂದ ಬೆಳ್ಳಿ ಪರದೆಯವರೆಗಿನ ಪಯಣ
ಇಂದಿನ ಅಧುನಿಕ ತರುಣಿಯರು ಕೇವಲ ಕನಸಷ್ಟೇ ಕಾಣುವುದಿಲ್ಲ, ಅದನ್ನು ನನಸಾಗಿಸುವ ಪ್ರಯತ್ನ ನಡೆಸುತ್ತಾರೆ! ಇಂಥದ್ದೇ ಹುಡುಗಿ ಪ್ರಾಚೀ, ತನ್ನಲ್ಲಿ ಅಡಗಿದ್ದ ಪ್ರತಿಭೆಯನ್ನು ಹೊರತರಲು ಇನ್ನಿಲ್ಲದ ಕಷ್ಟಗಳನ್ನು ಎದುರಿಸಿ, ಇತರರಿಗೆ ಮಾರ್ಗದರ್ಶಿ ಆಗಿದ್ದಾಳೆ…..
ಪ್ರಾಚೀ ತೆಹ್ಲಾನ್ ಎಂದರೆ ಆಟದ ಮೈದಾನದಿಂದ ಹಿಡಿದು ಬೆಳ್ಳಿ ಪರದೆಯವರೆಗೂ ನೀವು ಗಮನಿಸಬಹುದು. ಈಕೆಯ ಪಯಣ ಆರಂಭಗೊಂಡದ್ದು ಭಾರತೀಯ ನೆಟ್ ಬಾಲ್ ತಂಡದಿಂದ. ಅಲ್ಲಿ ಆಕೆ ದೇಶದ ಪ್ರತಿನಿಧಿ ಮಾತ್ರ ಆಗಿರಲಿಲ್ಲ, ಬದಲಿಗೆ ಕಾಮನ್‌ವೆಲ್ತ್‌ಗೇಮ್ಸ್ ನಂಥ ದೊಡ್ಡ ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಈ ಆಟಗಳು ಆಕೆಗೆ ಕೇವಲ ಗೆಲುವನ್ನಷ್ಟೇ ಕಲಿಸಲಿಲ್ಲ, ಪ್ರತಿಯೊಂದು ಸ್ಥಿತಿಯಲ್ಲೂ ಕಷ್ಟಸಹಿಷ್ಣುತೆ, ಸಿಡಿದೆದ್ದು ನಿಲ್ಲುವುದನ್ನು ಕಲಿಸಿದೆ.
ಇಂಥ ಕ್ರೀಡಾಕ್ಷೇತ್ರದಲ್ಲಿ ಸೈ ಎನಿಸಿಕೊಂಡ ನಂತರ ಈಕೆಗೆ ಮತ್ತೊಂದು ತಿರುವು ನೀಡಿದ್ದು ಸಿನಿಮಾ ಕ್ಷೇತ್ರ. ಕಳೆದ 8 ವರ್ಷಗಳಲ್ಲಿ ಈಕೆ ಹಲವಾರು ಭಾಷೆಗಳ ಚಿತ್ರಗಳಲ್ಲಿ ದುಡಿದಿದ್ದಾರೆ, ಟಿವಿ ಶೋ ನೀಡಿದ್ದಾರೆ. ಒಬ್ಬ ನುರಿತ ಕಲಾವಿದೆಯಾಗಿ ಈಕೆ ತನ್ನನ್ನು ತಾನು ಎಲ್ಲಾ ಬಗೆಯ ಪಾತ್ರಗಳಲ್ಲೂ ಪರಕಾಯ ಪ್ರವೇಶ ಪಡೆದಿದ್ದಾರೆ. ಅದು ಐತಿಹಾಸಿಕ, ಸಾಮಾಜಿಕ, ಪತ್ತೇದಾರಿ, ಆ್ಯಕ್ಷನ್ ಭರಿತ ಮಾರಾಮಾರಿ, ಹೃದಯಸ್ಪರ್ಶಿ ಮಾರ್ಮಿಕ ಚಿತ್ರಗಳಿರಲಿ ಎಲ್ಲದರಲ್ಲೂ ಸೈ ಎನಿಸಿದ್ದಾರೆ. ಈಗ ಆಕೆಯ ಕಣ್ಣೋಟ ಹಾಲಿವುಡ್ ಕಡೆಗಿದೆ!
ಈಕೆಯ ಕಥೆ ಇಷ್ಟಕ್ಕೇ ಮುಗಿಯುವುದಿಲ್ಲ. ಆಕೆ ಒಬ್ಬ ಸೋಶಿಯಲ್ ಎಂಟರ್ ಪ್ರೆನ್ಸೋರ್ ಕೂಡ ಹೌದು. `ಪ್ರಾಚೀ ತೆಹ್ಲಾನ್’ ಫೌಂಡೇಶನ್ ಮೂಲಕ ಈಕೆ ಹೆಂಗಸರ ಸಶಕ್ತೀಕರಣದ ಹೋರಾಟ ನಡೆಸುತ್ತಾ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದುಡಿಯುತ್ತಿದ್ದಾರೆ. ಈಗ ಈಕೆ ಆಟೋಟದ ಚಟುವಟಿಕೆ ಹಾಗೂ ಟೂರ್ನಮೆಂಟ್ಸ್ ನ್ನು ಸಹ, ತನ್ನ ಫೌಂಡೇಶನ್ನಿನ ಭಾಗವಾಗಿಸಿಕೊಳ್ಳಲು ಹೊರಟಿದ್ದಾರೆ. ಆ ಮೂಲಕ ಮುಂದಿನ ಪೀಳಿಗೆಗೆ ಉನ್ನತ ಮಾರ್ಗದರ್ಶನ ನೀಡುತ್ತಿದ್ದಾರೆ.
ಸಿನಿಮಾ ಕುರಿತು ತನಗಿರುವ ಅತಿಯಾದ ಅಭಿಮಾನಕ್ಕೆ ಒಂದು ಹೊಸ ದಿಕ್ಕು ತೋರಿಸಲೆಂಬಂತೆ ಆಕೆ ತನ್ನ ಪ್ರೊಡಕ್ಷನ್ ಹೌಸ್ ಸಹ ಪ್ರಾರಂಭಿಸಿಕೊಂಡಿದ್ದಾರೆ. ಜೀವನದ ಪ್ರತಿ ಕ್ಷಣವನ್ನೂ ಎಂಜಾಯ್ ಮಾಡಬೇಕೆಂಬುದೇ ಆಕೆಯ ಪ್ರಾಕ್ಟಿಕಲ್ ಫಿಲಾಸಫಿ. ಆಕೆಗೆ ಕಾದಂಬರಿ ಓದುವುದು, ಹೊಸ ಜಾಗಗಳಿಗೆ ಪ್ರವಾಸ ಹೊರಡುವುದು ಎಂದರೆ ಹಿಗ್ಗು! ಅದರಲ್ಲೂ ಬೆಟ್ಟ ಗುಡ್ಡಗಳ ಪರ್ವತಾರೋಹಣ, ವೈಲ್ಡ್ ಲೈಫ್ ಫೋಟೋಗ್ರಫಿ ಬಲು ಅಚ್ಚುಮೆಚ್ಚು.
ಕ್ರೀಡೆಯಿಂದ ನಟನೆಯತ್ತ ಪಯಣ
ಈ ಕಥೆ 2016 ರಂದು. ಆಗ ಆಕೆ ಕನ್ಸಲ್ಟೆಂಟ್ ಆಗಿ ದುಡಿಯುತ್ತಿದ್ದರು. ಆಟದ ಮೈದಾನದಿಂದ ಹಿಡಿದು ಕಾರ್ಪೊರೇಟ್ ವರ್ಡ್ ವರೆಗೂ ಪ್ರಯಾಣ ಬೆಳೆಸಿದ್ದರು. ಇದ್ದಕ್ಕಿದ್ದಂತೆ ಒಂದು ದಿನ ತಮ್ಮ FBನಲ್ಲಿ ಒಂದು ಸಂದೇಶ ಗಮನಿಸಿದರು. ಈ ಪೇಜ್ ನ್ನು ಅbರು ತಮ್ಮ ಸ್ಟೋರ್ಟ್ಸ್ ಕೆರಿಯರ್ ಗೆಂದೇ ಮೀಸಲಿಟ್ಟಿದ್ದರು.
ಆ ಸಂದೇಶ ಟಿವಿ ಇಂಡಸ್ಟ್ರಿಯ ಒಂದು ದೊಡ್ಡ `ದಿಯಾ ಔರ್ ಬಾತಿ ಹಂ’ ತಂಡದಿಂದ ಬಂದಿತ್ತು. ಅವರು ಈಕೆಯನ್ನು ಆರ್ಝೂ ರಾಠಿ ಪಾತ್ರಕ್ಕಾಗಿ ಕೇಳಿದರು. ಈ ಶೋನಲ್ಲಿ ಈಕೆಗೆ ಒಂದು ಪ್ಯಾರೆಲ್ ಲೀಡ್ ರೋಲ್ ದೊರಕಿತು. ತಾನು ಮುಂದೊಂದು ದಿನ ಕ್ಯಾಮೆರಾ ಎದುರಿಸಿ ನಟಿಸುವೆ ಎಂದು ಆಕೆ ಕನಸು ಕಂಡವರಲ್ಲ. ಆ ಸ್ಕ್ರಿಪ್ಟ್ ಓದಿ, ತನಗಾಗಿಯೇ ಈ ಪಾತ್ರ ರಚಿಸಲಾಗಿದೆ ಎಂದು ಭಾವಿಸಿ, ತನ್ನೊಳಗಿನ ಪ್ರತಿಭೆ ಹೊರಬರಲು ದಾರಿ ಮಾಡಿಕೊಂಡರು. ಇನ್ನೇನು? ಇದ್ದ ಅನುಕೂಲಕರ ನೌಕರಿ ಬಿಟ್ಟು, ತನ್ನ ಹೊಸ ಕನಸನ್ನು ನನಸಾಗಿಸಿಕೊಳ್ಳಲು ಹೊರಟೇಬಿಟ್ಟರು. ಈ ರೀತಿ ಆಕೆಯ ನಟನೆಯ ಪ್ರಯಾಣ ಶುರುವಾಯಿತು. ಆಟದ ಮೈದಾನದಿಂದ ಬೆಳ್ಳಿ ಪರದೆವರೆಗೂ ಈ ಪ್ರಯಾಣ ಎಷ್ಟು ಅನಪೇಕ್ಷಿತವಾಗಿತ್ತೋ, ಅಷ್ಟೇ ರೋಮಾಂಚಕ ಆಗಿತ್ತು.
ಈ ರೀತಿ ಆಕೆ ತನ್ನ ಆ್ಯಕ್ಟಿಂಗ್ ಕೆರಿಯರ್ ನ್ನು ಸ್ಟಾರ್ ಪ್ಲಸ್ ನಲ್ಲಿ 2 ಪ್ರಮುಖ ಶೋ ಮುಖಾಂತರ, ಲೀಡ್ ರೋಲ್ಸ್ ಮೂಲಕ ನಿಭಾಯಿಸಿದರು. ಇವುಗಳಲ್ಲಿ ಮೊದಲು `ದಿಯಾ ಔರ್ ಬಾತಿ ಹಂ,’ ನಂತರದ್ದು `ಇಕ್ಯಾನ್.’ ಇದಾದ ಮೇಲೆ ಈಕೆ ಪಂಜಾಬಿ ಸಿನಿಮಾನಗಳಲ್ಲಿ ಕಾಣಿಸಿಕೊಂಡರು. ಅ `ಬೈಲಾರಸ್‌ಅರ್ಜನ್.’
ನಂತರ ಆಕೆ ದಕ್ಷಿಣದತ್ತ ಮುಖ ಮಾಡಿ ಮಲೆಯಾಳಂನಲ್ಲಿ ಮೊದಲನೆಯದಾಗಿ `ಮಮಂಗಂ’ ಚಿತ್ರದಲ್ಲಿ ಸೂಪರ್ ಸ್ಟಾರ್ ಮಮ್ಮುಟಿ ಜೊತೆ ನಟಿಸಿದರು. ಇದು ಆಕೆಯ ಚಿತ್ರರಂಗದ ಕೆರಿಯರ್ ನ ಮೈಲಿಗಲ್ಲು ಮಾತ್ರವಲ್ಲದೆ, ದಕ್ಷಿಣದ ಚಿತ್ರಗಳಿಗೆ ಖಾಯಂ ಆಗಿ ಅಂಟಿಕೊಳ್ಳಲು ಒಂದು ಸಾಧನವಾಯಿತು. ಇದಾದ ಮೇಲೆ ಆಕೆ ಮಲೆಯಾಳಂನ ಹಲವು ಚಿತ್ರಗಳಲ್ಲಿ ನಟಿಸಿದರು.

ಮುಂದಿನದು ಪ್ರವಾಸ
ಪೆಟ್ರೋಲಿಯಂ ಖಾತೆಯ ಮಂತ್ರಿ ಸುರೇಶ್ ಗೋಪಿಯೊಡನೆ ನಟಿಸಿದ ಚಿತ್ರವಾಗಿತ್ತು. ಇದು ಇಷ್ಟರಲ್ಲೇ ರಿಲೀಸ್ ಆಗಲಿದೆ. ಮುಂದೆ ಈಕೆ ತೆಲುಗು ಚಿತ್ರಗಳಲ್ಲೂ ಕಾಣಿಸಿಕೊಂಡರು. ಈಕೆಯ ಎದುರಾಗಿ ಬಾಲಿವುಡ್ ನ ನಟಿ ರಾಕುಲ್ ಪ್ರೀತ್ ರ ತಮ್ಮ ಅಮನ್ ಪ್ರೀತ್ ನಟಿಸಿದ್ದರು.
“ದಕ್ಷಿಣದ ಪ್ರತಿಯೊಂದು ಪ್ರಾಜೆಕ್ಟ್ ನನಗೆ ಒಂದಲ್ಲ ಒಂದು ಹೊಸ ವಿಷಯ ಕಲಿಯಲು ಪ್ರೇರಣಾದಾಯಕ. ಮಮ್ಮುಟಿಯವರ ಜೊತೆ ನಟನೆ, ಸುಶೀಲಾ ಪಾರೇಖ್ ಪಾತ್ರ ಎಂದೂ ಮರೆಯುವಂಥದ್ದಲ್ಲ. ಈ ಎರಡೂ ಪಾತ್ರಗಳೂ ನನ್ನ ಫಿಲ್ಮಿ ಕೆರಿಯರ್ ಗೆ ಅಡಿಪಾಯ,” ಎನ್ನುತ್ತಾರೆ.
ಎತ್ತರದ ವ್ಯಕ್ತಿತ್ವ ಒಂದು ಪ್ಲಸ್ ಪಾಯಿಂಟ್
ಬ್ಯೂಟಿಫುಲ್, ಆತ್ಮವಿಶ್ವಾಸ ತುಂಬಿದ, ಎತ್ತರದ ಈಕೆಯ ಯಶಸ್ಸಿನ ಮೂಲ ಗುಟ್ಟು, ತನ್ನ ಎತ್ತರದ ವ್ಯಕ್ತಿತ್ವ ಎನ್ನುತ್ತಾರೆ. ಬಾಸ್ಕೆಟ್ ಬಾಲ್, ನೆಟ್ ಬಾಲ್ ಆಡುವುದಿರಲಿ ಅಥವಾ `ದಿಯಾಬಾತಿ’ಯಲ್ಲಿ ಅವಕಾಶ ಸಿಗುವುದಿರಲಿ, ಈ ಹೈಟ್ ನಿಂದಲೇ ಅದು ಸಾಧ್ಯವಾಯಿತಂತೆ. ಆ ಶೋಗೆ ಎತ್ತರದ ಹುಡುಗಿಯ ಅಗತ್ಯವಿತ್ತು. ಈ ನೆಪದಲ್ಲಿ ಆಕೆ ನಟನೆಗೆ ಇಳಿದರು.
ದಕ್ಷಿಣದ ಚಿತ್ರಗಳಲ್ಲಿ ಆಸಕ್ತಿ
ದೆಹಲಿಯಲ್ಲಿ ಹುಟ್ಟಿ, ಹರಿಯಾಣಾದ ಜಾಟ್ ಪರಿವಾರದಲ್ಲಿ ಬೆಳೆದು ಬಂದ ಪ್ರಾಚೀಗೆ, ಈ ಇಡೀ ದೇಶವೇ ತನ್ನ ತವರು ಎಂದು ಸ್ಪೋರ್ಟ್ಸ್ ಚಟುವಟಿಕೆಗಳು ಕಲಿಸಿದವು. ಹೀಗಾಗಿ ದೇಶದ ಯಾವ ಮೂಲೆಯೇ ಆಗಲಿ, ಅದನ್ನು ತನ್ನ ಮನೆ ಎಂಬಂತೆ ಆಕೆ ಅಲ್ಲಿ ಬೆರೆತುಹೋಗುತ್ತಾರೆ. ಇತ್ತೀಚೆಗೆ ಈಕೆ ಕೇರಳದ ಕೊಚ್ಚಿನ್ ನಲ್ಲೇ ವಾಸಿಸುತ್ತಿದ್ದಾರೆ. `ಮಮಂಗಂ’ ಚಿತ್ರದಲ್ಲಿ ಈಕೆಗೆ ಅಲ್ಲಿ ಉತ್ತಮ ಐಡೆಂಟಿಟಿ ಸಿಕ್ಕಿದೆ.
ದಕ್ಷಿಣದ ಚಿತ್ರಗಳ ವಿಷಯವೇ ಬೇರೆ!
ಇಲ್ಲಿನ ಕಥೆಗಳು ಭಾರತೀಯ ಸಂಸ್ಕೃತಿಯ ಆಳದಿಂದ ಹೆಕ್ಕಿರುವಂಥ ಬಲು ಗಟ್ಟಿ, ಭಾವುಕ, ಹೃದಯಸ್ಪರ್ಶಿ ಆದಂಥ. ಇಲ್ಲಿನ ತಂತ್ರಜ್ಞರು, ಫಿಲ್ಮ್ ಮೇಕಪ್ ನಲ್ಲಿ ಒಂದು ವಿಭಿನ್ನ ಕ್ರೇಝ್ ತುಂಬಿರುತ್ತದೆ. ಪ್ರತಿ ಸೀನ್, ಪ್ರತಿ ಫ್ರೇಮ್ ನಲ್ಲಿಯೂ ಅವರ ಆಳವಾದ ಪರಿಶ್ರಮ, ಪ್ಯಾಶನ್ ಕಂಡು ಬರುತ್ತದೆ. ಇಲ್ಲಿ ಕೇವಲ ಕಲೆಯ ಔಪಾಸನೆ ನಡೆಯುತ್ತದೆ! ದಕ್ಷಿಣದವರಿಗೆ ಸಿನಿಮಾ ಕೇವಲ ಮನರಂಜನೆಯ ಮಾಧ್ಯಮ ಅಲ್ಲ, ಬದಲಿಗೆ ಬಲು ದೊಡ್ಡ ಎಮೋಶನ್ ಕನೆಕ್ಷನ್! ಆದ್ದರಿಂದಲೇ ಇಲ್ಲಿನ ಪ್ರೇಕ್ಷಕರು ಅಷ್ಟು ಪ್ಯಾಶನೇಟ್ ಆಗಿದ್ದಾರೆ. ಅವರುಗಳ ಪ್ರೀತಿ, ಕ್ರೇಝ್ ನಿಂದಲೇ ಸೌತ್ ಇಂಡಸ್ಟ್ರಿ ಈ ಮಟ್ಟಕ್ಕೆ ಏರಿದೆ. ಹಾಗಾಗಿಯೇ ಇಲ್ಲಿನ ಚಿತ್ರಗಳು ದಿನೇದಿನೇ ಪ್ರಗತಿ ಕಾಣುತ್ತಿವೆ. ಅಷ್ಟಲ್ಲದೆ ಬಾಹುಬಲಿ ಚಿತ್ರಗಳು ಈ ಮಟ್ಟಕ್ಕೆ ಹೆಸರು ಗಳಿಸಿತೇ? ಎನ್ನುತ್ತಾರೆ.
ಇಂದಿನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ
ಪ್ರಾಚೀ ಪ್ರಕಾರ, ಇಂದಿನ ಭಾರತೀಯ ಹೆಣ್ಣು ಹಿಂದಿನ 2030 ವರ್ಷದ ಹಳೆಯ ಅಬಲೆಯಂತಲ್ಲ. ಇದೀಗ ಆಕೆ ಹೆಚ್ಚು ಸಶಕ್ತಳು, ಜಾಗರೂಕಳು, ಮಹತ್ವಾಕಾಂಕ್ಷಿ ಆಗಿದ್ದಾಳೆ. ಮನೆಯಲ್ಲಿ ಕುಳಿತೇ ಗಳಿಸುವುದಾಗಲಿ, ಯಾವುದೇ ಇಂಡಸ್ಟ್ರಿಯಲ್ಲಿ ಬೆಳೆಯುವುದಾಗಲಿ, ಇಂದು ಆಕೆ ಬಳಿ ಎಲ್ಲಾ ಅವಕಾಶಗಳಿವೆ. ಇಂದಿನ ಹೆಣ್ಣು ಕೇವಲ ಕನಸು ಕಾಣುತ್ತಾ ಕೂರುವುದಿಲ್ಲ. ಆಕೆ ಪ್ರತಿ ಕ್ಷೇತ್ರದಲ್ಲೂ ಮುನ್ನುಗ್ಗುತ್ತಿದ್ದಾಳೆ ಶಿಕ್ಷಣ, ಕ್ರೀಡೆ, ಉದ್ಯಮ, ಸಿನಿಮಾ….. ಇತ್ಯಾದಿ. ಎಷ್ಟೋ ಕ್ಷೇತ್ರಗಳಲ್ಲಿ ಗಂಡಸರಿಗಿಂತ ಹೆಂಗಸರೇ ಮುಂದಿದ್ದಾರೆ. ಹೀಗಾಗಿ ಇದು ಹೆಣ್ಣಿನ ಯುಗ ಎಂದರೆ ಉತ್ಪ್ರೇಕ್ಷೆಯಲ್ಲ! ಹೆಣ್ಣು ಅಬಲೆಯಲ್ಲ, ಬದಲಿಗೆ ಎಲ್ಲಾ ವಿಧದಲ್ಲೂ ಸಶಕ್ತೆ! ಆಕೆ ತನ್ನದೇ ಷರತ್ತುಗಳ ಪ್ರಕಾರ ಬದುಕುತ್ತಿದ್ದಾಳೆ, ತನ್ನ ಹಕ್ಕುಗಳಿಗಾಗಿ ದನಿ ಎತ್ತುತ್ತಾಳೆ. ತನ್ನನ್ನು ತಾನು ಎಷ್ಟೋ ಪರಿಪಕ್ವಳೆಂದು ಸಾಬೀತುಪಡಿಸುತ್ತಿದ್ದಾಳೆ. ಹೀಗಾಗಿ ಅವಳನ್ನು ಅಬಲೆ ಎನ್ನುವ ಕಾಲ ಹೋಯಿತು. ಇಂದಿನ ಆಧುನಿಕ ಹೆಣ್ಣು ಹೆಚ್ಚಿನ ತಾಕತ್ತು, ಆತ್ಮವಿಶ್ವಾಸ, ಈ ಯುಗವನ್ನು ತನ್ನದಾಗಿಸಿಕೊಳ್ಳಲು ಅಕ್ಷರಶಃ ತಯಾರಿದ್ದಾಳೆ.
“ನಿಜ ಹೇಳಬೇಕೆಂದರೆ, ನಾನು ನನ್ನ ಬೆಸ್ಟ್ ನೀಡುತ್ತಿದ್ದೇನೆ. ಇದರಿಂದ ನನಗೆ ಬಹಳ ಹೆಮ್ಮೆ ಎನಿಸುತ್ತದೆ. ನನ್ನ ಸುತ್ತಮುತ್ತಲಿನ ಗಂಡಸರು ನನ್ನ ಕನಸು, ಗುರಿಯನ್ನು ಮನಃಪೂರ್ವಕವಾಗಿ ಆದರಿಸುತ್ತಾರೆ. ಅವರು ನನಗೆ ಹೆಚ್ಚಿನ ಸಪೋರ್ಟ್ ನೀಡುತ್ತಾರೆ. ಪ್ರತಿ ಹೆಜ್ಜೆಯಲ್ಲೂ ನನಗೆ ಸಾಥ್ ನೀಡುತ್ತಾರೆ. ನನ್ನ ಪ್ರಗತಿ ಕಂಡು ಖುಷಿ ಪಡುತ್ತಾರೆ. ನಮ್ಮ ಇಡೀ ಸಮಾಜ ಹೇಗಿದೆಯೋ ನನಗೆ ಗೊತ್ತಿಲ್ಲ, ಆದರೆ ನನ್ನ ಸುತ್ತಲಿನ ಪ್ರಪಂಚದ ಗಂಡಸರು ಆದರ್ಶವಾದಿಗಳಾಗಿದ್ದಾರೆ. ನನ್ನ ಅಣ್ಣ, ತಂದೆ, ಫ್ರೆಂಡ್ಸ್ ಪ್ರತಿಯೊಬ್ಬರೂ ನನ್ನ ಏಳಿಗೆಗೆ ಸಹಾಯ ಮಾಡುತ್ತಾರೆ!”

ಜೀವನವನ್ನೇ ಬದಲಿಸಿದ ಘಟನೆ
“ಲಾಕ್ ಡೌನ್ ನನ್ನ ಇಡೀ ಜೀವನವನ್ನೇ ಬದಲಾಯಿಸಿತು ಎನ್ನಬಹುದು. ಜೀವನ ಬಲು ಅನಿಶ್ಚಿತ ಎಂದು ಕೊರೋನಾ ಕಲಿಸಿತು. ಜೀವನದಲ್ಲಿ ಯಾವುದು ಅಮೂಲ್ಯ, ಇದನ್ನು ಕೊರೋನಾ ಕಾಲದಲ್ಲಿ ಕಲಿತೆ. ನಾವು ಮಹತ್ವಾಕಾಂಕ್ಷಿ ಆಗಿರಲೇಬೇಕು. ಆದರೆ ಜೀವನದಲ್ಲಿ ಬ್ಯಾಲೆನ್ಸ್ ಮೇಂಟೇನ್ ಮಾಡಬೇಕಾದುದೂ ಅತಿ ಅನಿವಾರ್ಯ. ನಮಗೆ ಸದಾ ಓಡುತ್ತಿರುವುದೇ ಜೀವನ ಆಗಿದೆ. ಸದಾ ಪೈಪೋಟಿಯ ಸ್ಪರ್ಧೆಗಳೇ ಆಗಿಹೋಗಿದೆ. ನಾವು ನಮ್ಮವರೊಂದಿಗೆ ಸಮಯ ಕಳೆಯಬೇಕು, ಸಿಹಿ ನೆನಪುಗಳನ್ನು ತಾಜಾಗೊಳಿಸುವುದು, ಸದಾ ಖುಷಿ ಖುಷಿಯಾಗಿರುವುದನ್ನೂ ಆಗಲೇ ಕಲಿತೆ. ಕೊರೋನಾದಿಂದಾಗಿ ನಾನು ನನ್ನ ಜೀವನದ ದೃಷ್ಟಿಕೋನವನ್ನೇ ಬದಲಾಯಿಸಿಕೊಂಡೆ.
ನಮ್ಮನ್ನು ನಾವು ನೋಡುವ ಸ್ಟೈಲೇ ಬದಲಾಯಿತು. ಈ ರೀತಿ ಲಾಕ್ ಡೌನ್ ಒಂದು ವರದಾನವೇ ಆಯಿತು. ಆ ಕಾಲಘಟ್ಟ ನನ್ನನ್ನು ಹೆಚ್ಚು ಸಶಕ್ತಳನ್ನಾಗಿಸಿ, ಈ ಮಟ್ಟಕ್ಕೆ ಬೆಳೆಸಿದೆ! ನಿಲುಗಡೆಯ ಸ್ಥಿತಿ ಏಳಿಗೆಗೆ ಪೂರಕವಂತೆ. ಈ ರೀತಿ ಸ್ಟಾಂಡ್ ಸ್ಟಿಲ್ ಆಗಿದ್ದ ಲಾಕ್ ಡೌನ್ ನನ್ನ ಏಳಿಗೆಗೆ ಕಾರಣವಾಯಿತು!”
ಭಾವುಕಗೊಳಿಸಿದ ಕ್ಷಣಗಳು
ನಮ್ಮ ಜೀವನದ ಕೆಲವು ಕ್ಷಣಗಳು ಹೇಗಿರುತ್ತವೆ ಎಂದರೆ, ಅದು ಸದಾ ಮನದಲ್ಲಿ ಸ್ಥಿರವಾಗಿ ಉಳಿದುಬಿಡುತ್ತವೆ. ಪ್ರಾಚೀಯ ಪಾಲಿಗೂ ಅಂತಹ ಕೆಲವು ಘಳಿಗೆಗಳಿದ್ದವು :
ಮೊದಲು ಆಕೆಗೆ 2010ರಲ್ಲಿ ಕಾಮನ್ ವೆಲ್ತ್ ಗೇಮ್ಸ್ ಗಾಗಿ ಭಾರತೀಯ ತಂಡಕ್ಕೆ ಕ್ಯಾಪ್ಟನ್ ಆಗುವ ಅವಕಾಶ ಒದಗಿಬಂದದ್ದು. ಈ ಕ್ಷಣದ ಖುಷಿ ಇಂದಿಗೂ ಆಕೆಯ ಮನದಲ್ಲಿ ಮಡುಗಟ್ಟಿದೆ. ಆಕೆ ತಂದೆಗೆ ಫೋನ್ ಮಾಡಿ ಈ ವಿಷಯ ತಿಳಿಸಿದಾಗ, ಅವರು ಅತಿ ಹೆಮ್ಮೆ, ವಾತ್ಸಲ್ಯದಿಂದ ಕಂಬನಿ ಮಿಡಿದರು. ಅಂಥ ಅಮೂಲ್ಯ ಕ್ಷಣ ಮರೆತೋರುಂಟೆ?
ಮತ್ತೊಂದು ಘಟನೆ ಅಂದ್ರೆ ಆಕೆ ದಕ್ಷಿಣದ ಚಿತ್ರಕ್ಕೆ ಸೈನ್ ಮಾಡಿದಾಗ! ಅದೂ ಸೂಪರ್ ಸ್ಟಾರ್ ಮಮ್ಮುಟಿ ಜೊತೆಯಲ್ಲಿ…. ಮುಂಬೈನಲ್ಲಿ ಶೂಟಿಂಗ್ ನಂತರ ಆಕೆ ಅಗ್ರಿಮೆಂಟ್ ಸೈನ್ ಮಾಡಿ, ಮತ್ತೆ ತಂದೆಗೆ ಫೋನ್ ಮಾಡಿದರು. ಖುಷಿಯ ಪುನರಾವರ್ತನೆಯ ಆ ಕ್ಷಣಗಳನ್ನು ತಂದೆ-ಮಗಳು ಎಂದಿಗೂ ಮರೆಯಲಾಗದು ಅಂತಾರೆ.
ಹೆಂಗಸರ ಧೀಶಕ್ತಿ
ಪ್ರಾಚೀ ಪ್ರಕಾರ, ಹೆಂಗಸರ ಅತಿ ಮುಖ್ಯ ಧೀಶಕ್ತಿ ಅಂದ್ರೆ ಭಾವನಾತ್ಮಕವಾಗಿ ತುಡಿಯುವ ಅವರ ಮನಸ್ಸು, ಜೊತೆಗೆ ಇಂಟ್ಯೂಶನ್ಸ್ ಈ 2 ಅಸ್ತ್ರಗಳನ್ನು ಸಮರ್ಪಕ ರೀತಿಯಲ್ಲಿ ಸಕಾಲಕ್ಕೆ ಬಳಸಿಕೊಂಡಾಗ, ಒಬ್ಬ ಹೆಣ್ಣು ತನ್ನದೇ ಹಿತರಕ್ಷಣೆಗಳ ಸಲುವಾಗಿ ಮುನ್ನುಗ್ಗು ಪ್ರಬಲ ಶಕ್ತಿ ಗಳಿಸುತ್ತಾಳೆ. ಜೊತೆಗೆ ತನ್ನ ಜೀವನದ ಕೆಲವು ಮಗ್ಗಲುಗಳ ಕಂಟ್ರೋಲ್ ಸಿಕ್ಕಿದಾಗ, ಆಕೆ ತನ್ನ ಭಾವನಾತ್ಮಕ ತಿಳಿವು ಹಾಗೂ ಜ್ಞಾನದ ನೆರವಿನಿಂದ ಕಾರ್ಯ ಸಿದ್ಧಿಸಿಕೊಳ್ಳುವಂತೆ ಬೇರಾರೂ ಮಾಡಲಾರರು. ಹೃದಯದ ಮಾತು ಕೇಳುತ್ತಾ ವಿವೇಕವಾಗಿ ವರ್ತಿಸಬೇಕು, ಎಂಬುದು ಹಿರಿಯರ ನಾಣ್ಣುಡಿ.
ಹೆಣ್ಣು ನಡೆದುಕೊಳ್ಳುವುದೇ ಹಾಗೆ. ತನ್ನ ಮನಸ್ಸಿನಂತೆ ಸ್ಪಂದಿಸುತ್ತಾ, ವಿವೇಕಯುತ ಹೆಜ್ಜೆ ಹಾಕುತ್ತಾಳೆ. ಇದುವೇ ಅವಳ ನಿಜವಾದ ಧೀಶಕ್ತಿ! ಇದರ ಹೊರತಾಗಿ ನಮ್ಮ ಸಮಾಜದಲ್ಲಿ ಸ್ತ್ರೀಯರ ಸ್ಥಿತಿ ಸಶಕ್ತಗೊಳ್ಳಲು, ಹೆಂಗಸರು ಸೆಲ್ಫ್ ಡಿಫೆನ್ಸ್ ಮಾಡಿಕೊಳ್ಳಲು ಕಲಿಯಬೇಕು. ಅವರು ಸುಶಿಕ್ಷಿತರಾಗಿ, ಇಲ್ಲಿನ ಸಿಸ್ಟಂ ಸರಿಪಡಿಸುವಂತಾದರೆ, ಆಗ ಮಾತ್ರ ಸಮಾಜದ ದುಷ್ಟ ಶಕ್ತಿಗಳು ತಾನು ತಪ್ಪು ಮಾಡುವುದಕ್ಕೆ ಮುನ್ನ 10 ಸಲ ಯೋಚಿಸುವಂತಾಗುತ್ತದೆ. ಹೆಣ್ಣುಮಕ್ಕಳು ಪರಸ್ಥಳಗಳಲ್ಲಿ ಕಲಿಕೆಗೆಂದು ಹೋದಾಗ, ಕೆಲಸ ಅರಸಿ ಹೊರಟಾಗ, ಒಬ್ಬಳೇ ಹೇಗೋ ಏನೋ ಎಂದು ಅಂಜಿಕೊಳ್ಳುವ ಭಾವನೆ ಬಿಟ್ಟು `ಧೈರ್ಯಂ ಸರ್ವತ್ರ ಸಾಧನಂ’ ಎಂದು ಮುನ್ನುಗ್ಗಬೇಕು!
– ಜಿ. ಪಂಕಜಾ
ಸಾಧನೆ ಪ್ರಶಸ್ತಿಗಳು
ಪ್ರಾಚೀಯ ಅತಿ ಹೆಚ್ಚಿನ ಸಾಧನೆ ಎಂದರೆ 21ರ ಪ್ರಾಯದಲ್ಲೇ ಭಾರತದ ತಂಡಕ್ಕೆ ತನ್ನ ಕ್ಯಾಪ್ಟನ್ ಶಿಪ್ ನಲ್ಲಿ ಮೊದಲ ಮೆಡಲ್ ಕೊಡಿಸಿದ್ದು. ಇಂಡಿಯನ್ ನೆಟ್ ಬಾಲ್ ನ ಮಾಜಿ ಕ್ಯಾಪ್ಟನ್ ಪ್ರಾಚೀಯ ನೇತೃತ್ವದಲ್ಲಿ 2011ರಲ್ಲಿ ಭಾರತೀಯ ತಂಡ ದಕ್ಷಿಣ ಏಷ್ಯನ್ ಬೀಚ್ ಆಟದಲ್ಲಿ ತನ್ನ ಮೊದಲ ಪದಕ ಪಡೆಯಿತು. ಇದು ಮುಂದುವರಿದು ಈಕೆ ಲಿಮ್ಕಾ ಬುಕ್ ರೆಕಾರ್ಡ್ಸ್ ನಲ್ಲಿ, ಎಲ್ಲಕ್ಕಿಂತ ಕಿರಿಯ ಭಾರತೀಯ ಕ್ಯಾಪ್ಟನ್ ರೂಪದಲ್ಲಿ ಗುರುತಾದರು. ಈಕೆಯ ಮತ್ತೊಂದು ಕನಸು ಎಂದರೆ ಕಲಿಯುವಿಕೆ. ಅದನ್ನು ಸಾಧಿಸಲಾಗದಿದ್ದರೂ ಸ್ಪೀಕರ್ ಆಗಿ, ಅಲ್ಲಿ ತನ್ನ ಕಥೆ ಹೇಳಿಕೊಂಡದ್ದು ಆಕೆಯ ಕನಸು ನನಸಾಗಿದ್ದಷ್ಟೇ ಸತ್ಯ. ಫಿಲ್ಮೀ ಕೆರಿಯರ್ ನಲ್ಲಿ ಪ್ರತಿ ಭಾಷೆಯ ಮೊದಲ ಚಿತ್ರಕ್ಕೆ ಆಕೆಗೆ ಬೆಸ್ಟ್ ಡೆಬ್ಯೂ ಎಂದು ನಾಮಿನೇಶನ್ ಸಿಕ್ಕಿತು.
ವೈಲ್ಡ್ ಲೈಫ್ ಫೋಟೋಗ್ರಾಫಿಯ ಬ್ರಾಂಡ್ ಅಂಬಾಸಿಡರ್ ಆಗಿಯೂ ಸೆಲೆಕ್ಟ್ ಆದರು.





