ಇಂದಿರಾನಗರದ ಸಿ ವಿ ರಾಮನ್ ಆಸ್ಪತ್ರೆಯಲ್ಲಿ ಶೀಘ್ರದಲ್ಲೇ “ತಾಯಂದಿರ ಎದೆಹಾಲಿನ ಬ್ಯಾಂಕ್” ಆರಂಭಿಸಲಾಗುತ್ತದೆ.
ಕಡಿಮೆ ತೂಕ, ಅವಧಿಪೂರ್ವ ಜನನ, ತಾಯಿಯ ಅನಾರೋಗ್ಯದಿಂದ ಎದೆಹಾಲಿನಿಂದ ವಂಚಿತವಾಗಿ ಶಿಶು ಸಾವನ್ನಪ್ಪುವ ಸಾಧ್ಯತೆಗಳಿರುತ್ತವೆ. ಶಿಶು ಜನಿಸಿದ ಮೊದಲ ನಾಲ್ಕು ವಾರಗಳಲ್ಲಿ ಮರಣದ ಅಪಾಯವೂ ಹೆಚ್ಚಾಗಿರುತ್ತದೆ. ತಾಯಿಯ ಹಾಲಿಲ್ಲದೆ ಅಪೌಷ್ಠಿಕತೆ ಉಂಟಾಗುವುದೇ ಇದಕ್ಕೆ ಪ್ರಮುಖ ಕಾರಣ. ಇದನ್ನು ತಪ್ಪಿಸಲು ರಾಜ್ಯದಲ್ಲಿ ಮೊದಲ ಬಾರಿಗೆ ಸರಕಾರಿ ಆಸ್ಪತ್ರೆಗಳ ಪೈಕಿ ವಾಣಿವಿಲಾಸದಲ್ಲಿ 2022ರಲ್ಲಿ ಎದೆ ಹಾಲಿನ ಬ್ಯಾಂಕ್ ಆರಂಭಿಸಲಾಗಿತ್ತು. ಅಲ್ಲಿ ಈವರಗೆ 3-4 ಸಾವಿರಕ್ಕೂ ಅಧಿಕ ಶಿಶುಗಳು ಪ್ರಯೋಜನ ಪಡೆದಿವೆ. ತದನಂತರ ಘೋಷಾ ಆಸ್ಪತ್ರೆಯಲ್ಲೂ ಇಂಥಹುದೇ ಕೇಂದ್ರ ತೆರೆಯಲಾಗಿತ್ತು.
ಅಂತಹುದೇ ಮಾದರಿಯಲ್ಲಿ ಬೆಂಗಳೂರಿನ ಪೂರ್ವಭಾಗದ ಜನರಿಗೆ ನೆರವಾಗಲು ಸಿವಿ ರಾಮನ್ ಆಸ್ಪತ್ರೆಯಲ್ಲಿ “ತಾಯಂದಿರ ಎದೆ ಹಾಲಿನ ಬ್ಯಾಂಕ್” ಸ್ಥಾಪಿಸಲು ಉದ್ದೇಶಿಸಲಾಗಿದೆ.
ಈ ಮೂಲಕ ಆಸ್ಪತ್ರೆಯಲ್ಲಿ ಜನಿಸುವ ಹಾಗೂ ಆರೈಕೆಗಾಗಿ ಬರುವ ಶಿಶುಗಳಿಗೆ ನೆರವಾಗಲು ಯೋಜನೆ ಸಿದ್ಧಪಡಿಸಲಾಗಿದೆ. ಇದಕ್ಕೆ ರೋಟರಿ ಕ್ಲಬ್ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಆರೋಗ್ಯ ರಕ್ಷಾ ಸಮಿತಿಗೆ ಶೀಘ್ರ ಈ ಸಂಬಂಧ ಪ್ರಸ್ತಾವ ಸಲ್ಲಿಸಲಿದೆ. ಈ ಕೇಂದ್ರಕ್ಕಾಗಿ ಅಗತ್ಯ ಕೊಠಡಿ, ಸ್ಥಳ ಆಸ್ಪತ್ರೆಗೆ ಒದಗಿಸಲಾಗಿದ್ದು, ತಜ್ಞ ಸಿಬ್ಬಂದಿ, ಅಗತ್ಯ ಉಪಕರಣಗಳನ್ನು ರೋಟರಿ ಒದಗಿಸಲಿದೆ.
ಈ ಕುರಿತು ಮಾತನಾಡಿರುವ ಸಿವಿ ರಾಮನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕೆ. ಎಸ್ ರಾಜೇಶ್, “ದಾನಿಗಳಿಂದ ಹಾಲು ಪಡೆದು ಸುರಕ್ಷಿತವಾಗಿ ಇರಿಸಲಾಗುವುದು. ಹಾಲನ್ನು ಸುರಕ್ಷಿತವಾಗಿ ಸಂಸ್ಕರಿಸಲು ಅದನ್ನು 62.5 ಡಿಗ್ರಿ ಸೆ. ತಾಪಮಾನದಲ್ಲಿ 30 ನಿಮಿಷಗಳ ಕಾಲ ಬಿಸಿ ಮಾಡಲಾಗುತ್ತದೆ. ಬ್ಯಾಕ್ಟೀರಿಯಾ ತಪಾಸಣೆಯೂ ಆಗಲಿದೆ. ನಂತರ 10ರಿಂದ 12 ನಿಮಿಷಗಳಲ್ಲಿ ಅದರ ತಾಪಮಾನವನ್ನು 4 ಡಿಗ್ರಿ ಸೆ.ಗೆ ಇಳಿಸಿ, ವಿಶೇಷ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಲಾಗುತ್ತದೆ” ಎಂದು ಹೇಳಿದ್ದಾರೆ.
“ತಾಯಂದಿರ ಎದೆ ಹಾಲಿನ ಬ್ಯಾಂಕ್ನಲ್ಲಿ ಅತ್ಯಾಧುನಿಕ ಸ್ಟೇನ್ಲೆಸ್ ಸ್ಟೀಲ್ ಪಾಶ್ಚರೈಸರ್ ಉಪಕರಣಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಹಾಲಿನ ತಾಪಮಾನ, ಸಂಸ್ಕರಣೆಯ ಸಮಯ ಕಂಪ್ಯೂಟರ್ನಲ್ಲಿ ದಾಖಲಾಗಲಿದ್ದು, ಪ್ರತಿ ನಿಮಿಷಕ್ಕೂ ನಿಖರ ಮಾಹಿತಿ ಸಿಗಲಿದೆ. ಪ್ರತಿಯೊಂದು ಬ್ಯಾಚ್ ಹಾಲಿನ ಸುರಕ್ಷತಾ ವರದಿ ಪರಿಶೀಲಿಸಲು ಅವಕಾಶವಿದೆ. ಈ ಹಾಲನ್ನು 6 ತಿಂಗಳವರೆಗೆ ಸಂಗ್ರಹಿಸಿಡಬಹುದು” ಎಂದು ತಿಳಿಸಿದ್ದಾರೆ.





