ನಿಮ್ಮ ಪತಿ ಅಡುಗೆ ಕೆಲಸದಲ್ಲಿ ನಿಮಗೆ ಸಹಾಯ ಮಾಡಬೇಕೆಂದು ನೀವು ಬಯಸಿದರೆ, ಈ ವಿಷಯಗಳನ್ನು ನೆನಪಿನಲ್ಲಿಡಿ…..

ಕುಕಿಂಗ್‌ ಪ್ರೇಮಿ ಚಿನ್ಮಯ್‌ ವಾರಾಂತ್ಯದಲ್ಲಿ ಬಟರ್‌ ಪನ್ನೀರ್‌ ಮಸಾಲಾ ಮಾಡಲು ಅಡುಗೆಮನೆಗೆ ಬಂದ ತಕ್ಷಣ, ಸ್ವಲ್ಪ ಸಮಯದ ನಂತರ ಬೇಸರಗೊಂಡು ತನ್ನ ಪತ್ನಿ ಜೂಲಿಯನ್ನು ಕೂಗಿ ಕರೆದು, “ನಾನು ಅಡುಗೆಮನೆಗೆ ಬಂದಾಗೆಲ್ಲಾ ನನ್ನ ಕೈಗೆ ಏನೂ ಸಿಗುವುದಿಲ್ಲ. ಕೆಲವೊಮ್ಮೆ ಉಪ್ಪು ಸಿಗದಿದ್ದರೆ, ಮತ್ತೆ ಕೆಲವೊಮ್ಮೆ ಮೆಣಸಿನಪುಡಿ ಸಿಗುವುದಿಲ್ಲ. ನೀನು ಹೇಗೆ ಅಡುಗೆ ಮಾಡ್ತೇವೋ ನನಗಂತೂ ಅರ್ಥವಾಗುವುದಿಲ್ಲ,” ಎಂದ.

“ಉಫ್‌…. ಅದು ಮುಗಿದಿತ್ತು ಬೇರೆ ತುಂಬಿಡಲು ಮರೆತಿದ್ದೆ. ಈಗ ಅದನ್ನು ತುಂಬಿಸಿಡ್ತೀನಿ,” ಎಂದಳು.

ಆದರೆ ಅಷ್ಟು ಹೊತ್ತಿಗಾಗಲೇ ಚಿನ್ಮಯ್‌ ನ ಅಡುಗೆ ಮಾಡುವ ಮೂಡ್‌ ಹಾಳಾಗಿ ಹೋಗಿತ್ತು. ನಂತರ ಜೂಲಿಯೇ ಇಡೀ ಭೋಜನವನ್ನು ತಯಾರಿಸಬೇಕಾಯಿತು.

ಶಾಲಿನಿ ಮತ್ತು ಅವಳ ಪತಿ ಅನಿಲ್ ‌ಒಂದೇ ಆಫೀಸ್‌ ನಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ ಆಫೀಸ್‌ ನಿಂದ ಹಿಂದಿರುಗಿದ ನಂತರ, ಶಾಲಿನಿ ಸ್ಟವ್ ಮೇಲೆ ಚಹಾಕ್ಕೆ ಇಟ್ಟು, ಗಂಡ ಅನಿಲ್ ‌ಗೆ ಉಪಾಹಾರ ತಯಾರಿಸಲು ಹೇಳಿದಳು. ಆದರೆ ಸ್ವಲ್ಪ ಸಮಯದಲ್ಲೇ ಇಬ್ಬರೂ ಜಗಳವಾಡಲು ಪ್ರಾರಂಭಿಸಿದರು.

“ಇದೇಕೆ ಅಡುಗೆ ಸಾಮಗ್ರಿಗಳು ಬಾಕ್ಸ್ ನಲ್ಲಿ ಒಂದೂ ಇರುವುದಿಲ್ಲ. ಪ್ರತಿ ಭಾನುವಾರ ಅವುಗಳನ್ನು ಆಯಾ ಕಂಟೇನರ್‌ ನಲ್ಲಿ ತುಂಬಿಸಿಡು.”

“ನೀನೇ ಆ ಕೆಲಸ ಮಾಡಿದರೆ ಏನಾಗುತ್ತೇ…..?”

“ಆಯಾ ಕಂಟೇನರ್‌ ನಲ್ಲಿ ಆಯಾ ವಸ್ತುಗಳನ್ನು ತುಂಬಿಸಿಡುವುದು ದೊಡ್ಡ ಕೆಲಸವಲ್ಲ. ವಸ್ತುಗಳನ್ನು ಹುಡುಕುವುದೇ ದೊಡ್ಡ ಸಮಸ್ಯೆ. ನೀನು ಇಟ್ಟಿರುವ ವಸ್ತುಗಳು ನಿನಗೇ ಸಿಗುವುದಿಲ್ಲ… ಇನ್ನು ನನಗೆ ಹೇಗೆ ಸಿಗುತ್ತೆ…..?”

ಹೀಗೆ ಅವರಿಬ್ಬರ ನಡುವೆ ವಾದವಿವಾದವಾಗಿ ಅವರಲ್ಲಿದ್ದ ಸಾಮರಸ್ಯ ಎಲ್ಲಿ ಕಳೆದುಹೋಯಿತು ಎಂಬ ಅರಿವೇ ಅವರಿಗೆ ಬರಲಿಲ್ಲ.

ಇದು ಕೇವಲ ಚಿನ್ಮಯ್‌ ಹಾಗೂ ಅನಿಲ್ ‌ರ ಸಮಸ್ಯೆ ಮಾತ್ರವಲ್ಲ, ಹೆಚ್ಚಿನ ಪುರುಷರ ಸಮಸ್ಯೆ ಇದೇ ಆಗಿದೆ. ಅವರು ತಮ್ಮ ಪತ್ನಿಯರಿಗೆ ಅಡುಗೆಮನೆಯಲ್ಲಿ ಸಹಾಯ ಮಾಡಲು ಪ್ರಯತ್ನಿಸಿದಾಗಲೆಲ್ಲಾ ಅವರಿಗೆ ಬೇಕಾದ ವಸ್ತುಗಳು ಯಾವುದೂ ಅವರ ಕೈಗೆ ಸಿಗುವುದಿಲ್ಲ.

ಶತಮಾನಗಳಿಂದ, ಮಹಿಳೆಯರು ತಮ್ಮ ಮನೆಗಳಲ್ಲಿ ಅಡುಗೆಮನೆಯನ್ನು ನಿರ್ವಹಿಸುತ್ತಿದ್ದಾರೆ. ಅಡುಗೆಮನೆ ಮತ್ತು ಅದರ ವಸ್ತುಗಳನ್ನು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಜೋಡಿಸಿಕೊಂಡಿರುತ್ತಾರೆ. ಅದರ ಪರಿಣಾಮ, ಅವರಿಗೆ ಅಲ್ಲಿ ಕೆಲಸ ಮಾಡುವುದು ಸುಲಭವಾಗಿರುತ್ತದೆ. ಆದರೆ, ಬೇರೆಯವರಿಗೆ ಅದು ಅಷ್ಟೇ ಕಷ್ಟಕರವಾಗಿರುತ್ತದೆ.

ಇಂದು ಹೆಚ್ಚಿನ ದಂಪತಿ ಉದ್ಯೋಗಸ್ಥರಾಗಿರುತ್ತಾರೆ. ಹಾಗಾಗಿ ಪತ್ನಿ ತನ್ನ ಪತಿ ಸಹ ಅಡುಗೆಮನೆಯ ಜವಾಬ್ದಾರಿ ಹಂಚಿಕೊಳ್ಳಲಿ ಎಂದು ಬಯಸುತ್ತಾಳೆ. ಇತ್ತೀಚಿನ ದಿನಗಳಲ್ಲಿ ಪುರುಷರು ಸಹ ತಮ್ಮ ಪತ್ನಿಗೆ ಕೆಲಸದಲ್ಲಿ ಸಹಾಯ ಮಾಡಲು ಬಯಸುತ್ತಾರೆ. ಆದರೆ ಮೊದಲನೆಯದಾಗಿ ಅವರಿಗೆ ಬಾಲ್ಯದಿಂದಲೂ ಅಡುಗೆಮನೆಯ ಕೆಲಸ ನಿಭಾಯಿಸಲು ಕಲಿಸಿರುವುದಿಲ್ಲ. ಮತ್ತೊಂದೆಡೆ ಅವರು ಅಡುಗೆಮನೆಯಲ್ಲಿ ಕೆಲಸ ಮಾಡಲು ಬಯಸಿದಾಗೆಲ್ಲಾ ಅಡುಗೆಮನೆಯ ವ್ಯವಸ್ಥೆಯಲ್ಲಿ ಅನಾನುಕೂಲತೆ ಅನುಭವಿಸುತ್ತಾರೆ.

ಇಂತಹ ಪರಿಸ್ಥಿತಿಯಲ್ಲಿ ಇಂದಿನ ಕಾಲದಲ್ಲಿ ನಿಮ್ಮ ಪತಿ ಸಹ ಅದರಲ್ಲಿ ಆರಾಮವಾಗಿ ಕೆಲಸ ಮಾಡುವ ರೀತಿಯಲ್ಲಿ ಅಡುಗೆಮನೆಯನ್ನು ಜೋಡಿಸುವುದು ಅವಶ್ಯಕ. ನಿಮ್ಮ ಪತಿ ಅಡುಗೆ ಕೆಲಸದಲ್ಲಿ ನಿಮಗೆ ಸಹಾಯ ಮಾಡಬೇಕೆಂದು ಬಯಸಿದರೆ, ನಿಮ್ಮ ಅಡುಗೆಮನೆಯಲ್ಲಿ ಈ ಕೆಳಗಿನ ವಿಷಯಗಳನ್ನು ಪಾಲಿಸುವುದು ಒಳ್ಳೆಯದು :

ಕಂಟೇನರ್‌ ಗಳು ಪಾರದರ್ಶಕಾಗಿರಲಿ

ಸ್ನೇಹಾ ಮತ್ತು ಸುಮಿತ್‌ ಇಬ್ಬರೂ ಮನೆಯಿಂದಲೇ ಕೆಲಸ ಮಾಡುತ್ತಾರೆ. ಹಾಗಾಗಿ ಯಾರಿಗೆ ರಜೆ ಇರುತ್ತದೋ ಅವರು ಅಡುಗೆ ಕೆಲಸ ಮಾಡಬೇಕು ಎಂದು ಪರಸ್ಪರ ಒಪ್ಪಿಗೆಯಿಂದ ನಿರ್ಧರಿಸಿಕೊಂಡಿದ್ದಾರೆ. ರಜೆಯ ದಿನ ಸುಮಿತ್‌ ತೊವ್ವೆ ಮಾಡಲು ಬೇಳೆಗಾಗಿ ಹುಡುಕಿದಾಗ, ಅವನಿಗೆ ಅದು ಸಿಗಲಿಲ್ಲ.

ಇದರಿಂದ ಬೇಸರಗೊಂಡ ಸುಮಿತ್‌, “ಸ್ನೇಹಾ, ಅರ್ಧಗಂಟೆಯಿಂದ ಬೇಳೆ ಹುಡುಕುತ್ತಿದ್ದೇನೆ. ಆದರೆ ಬೇಳೆ ಕಂಟೇನರ್‌ ನನಗೆ ಸಿಗುತ್ತಲೇ ಇಲ್ಲ,” ಎಂದು ಕೂಗಿದ. ಸ್ನೇಹಾ ಎಲ್ಲಾ ಬೇಳೆಕಾಳುಗಳನ್ನು ಸ್ಟೀಲ್ ಬಾಕ್ಸ್ ನಲ್ಲಿ ಇಟ್ಟಿದ್ದರಿಂದ ಬೇಳೆ ಬಾಕ್ಸ್ ಸುಮಿತ್ ಗೆ ಸಿಕ್ಕಿರಲಿಲ್ಲ. ಇತ್ತೀಚಿನ ದಿನಗಳಲ್ಲಿ, ಪಾರದರ್ಶಕ ಬಾಕ್ಸ್ ಗಳು ಮಾರುಕಟ್ಟೆಯಲ್ಲಿ ಬಹಳ ಕಡಿಮೆ ಬೆಲೆಗೆ ಲಭ್ಯವಾಗುತ್ತವೆ. ಆದ್ದರಿಂದ ಅಡುಗೆಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಆಹಾರ ಪದಾರ್ಥಗಳು ಸುಲಭವಾಗಿ ಕಾಣುವಂತೆ ಬೇಳೆಕಾಳು, ಅಕ್ಕಿ, ಉಪ್ಪು, ಸಕ್ಕರೆ, ಮತ್ತು ಮಸಾಲೆ ಪದಾರ್ಥ ಇತ್ಯಾದಿಗಳನ್ನು ಪಾರದರ್ಶಕ ಬಾಕ್ಸ್ ಗಳಲ್ಲಿ ಇಡುವುದು ಒಳ್ಳೆಯದು.

ಲೇಬಲ್ ಅಂಟಿಸುವುದು ಮುಖ್ಯ

ನಮಿತಾ ಕೆಲವು ದಿನಗಳ ಮಟ್ಟಿಗೆ ತನ್ನ ತವರುಮನೆಗೆ ಹೋಗಿದ್ದಾಗ, ಚೇತನ್‌ ಅಡುಗೆ ಮಾಡಿಕೊಳ್ಳುತ್ತಿದ್ದ. ಬಾಕ್ಸ್ ಗಳ ಮೇಲೆ ಲೇಬಲ್ ಇಲ್ಲದ ಕಾರಣ ಅವನಿಗೆ ಕಡಲೆಬೇಳೆ, ತೊಗರಿಬೇಳೆಗೆ ವ್ಯತ್ಯಾಸವೇ ಗೊತ್ತಾಗಲಿಲ್ಲ. ಕಡಲೆಬೇಳೆಯನ್ನೇ ತೊಗರಿಬೇಳೆ ಎಂದುಕೊಂಡು ಅಡುಗೆ ಮಾಡಿಕೊಳ್ಳುತ್ತಿದ್ದ.

ಉಪ್ಪು, ಅಡುಗೆ ಸೋಡಾ, ಕಾಳುಮೆಣಸಿನ ಪುಡಿ, ಹುರಿದ ಜೀರಿಗೆ ಪುಡಿಯಂತಹ ಅನೇಕ ಅಹಾರ ಪದಾರ್ಥಗಳು ಒಂದೇ ರೀತಿ ಕಾಣುತ್ತವೆ. ಇದು ಪುರುಷರನ್ನು ಹೆಚ್ಚು ಗೊಂದಲಕ್ಕೀಡು ಮಾಡುತ್ತದೆ. ಆದ್ದರಿಂದ ಅಡುಗೆಮನೆಯಲ್ಲಿರುವ ಪ್ರತಿಯೊಂದು ಬಾಕ್ಸ್ ಮೇಲೆ ಒಂದು ಲೇಬಲ್ ಅಂಟಿಸಿದರೆ ಆಯಾ ವಸ್ತುಗಳನ್ನು ಗುರುತಿಸುವುದು ಸುಲಭ ಹಾಗೂ ಸಮಯ ಉಳಿತಾಯವಾಗುತ್ತದೆ.

ವಿಭಾಗಗಳನ್ನು ಮಾಡಿ

“ನನ್ನ ಅಡುಗೆಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ನಾನು ಒಂದು ವಿಭಾಗವನ್ನು ಗೊತ್ತುಪಡಿಸಿದ್ದೇನೆ. ಇದರಿಂದ ನನ್ನ ಪತಿ ಮಾತ್ರವಲ್ಲದೆ, ಅಪರಿಚಿತರು ಸಹ ನನ್ನ ಅಡುಗೆಮನೆಗೆ ಹೋಗಿ ಅಡುಗೆ ಮಾಡಲು ಸಾಧ್ಯವಾಗುವಂತೆ, ಯಾವುದನ್ನು ಎಲ್ಲಿ ಇಡಬೇಕು ಎಂದು ತೆಳುವಾದ ಪಟ್ಟಿಯ ಮೇಲೆ ಬರೆದಿದ್ದೇನೆ,” ಎಂದು ಸಾಫ್ಟ್ ವೇರ್‌ ಎಂಜಿನಿಯರ್‌ ರಶ್ಮಿಕಾ ಹೇಳುತ್ತಾರೆ.

ನಿಮ್ಮ ಅಡುಗೆಮನೆಯಲ್ಲಿನ ಜಾಗಕ್ಕೆ ಅನುಗುಣವಾಗಿ ಪ್ರತಿಯೊಂದು ವಸ್ತುವಿಗೂ ಒಂದು ಸ್ಥಳವನ್ನು ನಿಗದಿಪಡಿಸಿ. ಮಸಾಲೆ, ಬೇಳೆಕಾಳು, ಚಹಾ/ಕಾಫಿಪುಡಿ, ಉಪ್ಪು, ತಿಂಡಿಗಳು ಇತ್ಯಾದಿಗಳನ್ನು ವಿವಿಧ ವಿಭಾಗಗಳಲ್ಲಿ ಇರಿಸಿ.

ಆಧುನಿಕ ಗ್ಯಾಜೆಟ್ಸ್ ಬಳಸಿ

“ನನಗೆ ಅಡುಗೆ ಮಾಡುವುದು ತುಂಬಾ ಇಷ್ಟ. ಆದರೆ ಹಿಟ್ಟನ್ನು ಬೆರೆಸುವುದು ನನಗೆ ಇಷ್ಟವಿಲ್ಲ,” ಎಂದು ಪ್ರೇಮ್ ಹೇಳುತ್ತಾರೆ.

ಮತ್ತೊಂದೆಡೆ, ಸಾಫ್ಟ್ ವೇರ್‌ ಎಂಜಿನಿಯರ್‌ ರೋಹಿತ್‌ ಗೆ ತರಕಾರಿ ಹೆಚ್ಚುವುದು ಇಷ್ಟವಿಲ್ಲ. ಮಾರುಕಟ್ಟೆಯಲ್ಲಿ ಬ್ಲೆಂಡರ್‌, ಚಾಪರ್, ಬ್ರೆಡ್‌ ಮೇಕಪ್‌, ಎಲೆಕ್ಟ್ರಿಕ್‌ ಕೆಟಲ್ ಮುಂತಾದ ಅನೇಕ ಅಡುಗೆ ಸಲಕರಣೆಗಳು ಲಭ್ಯವಿವೆ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನೀವು ಅವಕ್ಕೆ ನಿಮ್ಮ ಅಡುಗೆಮನೆಯಲ್ಲಿ ಸ್ಥಳಾವಕಾಶ ನೀಡಬೇಕು.

ಫ್ರಿಜ್‌ ವ್ಯವಸ್ಥಿತವಾಗಿಡಿ

ಸುಮಂತ್‌ ಹಾಲು ತೆಗೆಯಲು ಫ್ರಿಜ್‌ ತೆಗೆದಾಗ, ಅದರ ಮೇಲೆ ಇಟ್ಟಿದ್ದ ಮೊಸರಿನ ಬಟ್ಟಲು ಕೆಳಗೆ ಬಿದ್ದು ಇಡೀ ಅಡುಗೆಮನೆ ಗಲೀಜಾಯಿತು. ಆಧುನಿಕ ಕಾಲದಲ್ಲಿ ಫ್ರಿಜ್‌ ಇಲ್ಲದೆ ಅಡುಗೆ ಮಾಡಲು ಸಾಧ್ಯವಿಲ್ಲ. ಫ್ರಿಜ್‌ ನಲ್ಲಿಯೂ ಸಹ, ಒಂದರ ಮೇಲೊಂದು ಬಾಕ್ಸ್ ಇಡಿ, ಇದರಿಂದ ಜಾಗ ಉಳಿಯುತ್ತದೆ, ಸಾಧ್ಯವಾದಷ್ಟೂ ಗಾಜಿನ ಬಾಕ್ಸ್ ಗಳನ್ನು ಬಳಸಿ. ಅಡುಗೆಮನೆಯಲ್ಲಿ ಕೆಲಸ ಮಾಡಲು ಸುಲಭವಾಗುವಂತೆ ವಸ್ತುಗಳನ್ನು ವಿಭಾಗಿಸಿ ಇರಿಸಿ.

– ಪ್ರತಿಭಾ ಎ.ಜಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ