ಹೊಸ ಚಪ್ಪಲಿ ಕೊಳ್ಳುವಾಗ ಮುಖ್ಯವಾಗಿ ಈ ಸಲಹೆಗಳನ್ನು ಮರೆಯದೆ ನೆನಪಿಟ್ಟುಕೊಳ್ಳಿ……
ರೇಖಾ ತನಗಾಗಿ 6 ಸಾವಿರ ರೂ.ಗಳ ವಾಕಿಂಗ್ ಶೂಸ್ ನ್ನು ಬಲು ಇಷ್ಟಪಟ್ಟು ಖರೀದಿಸಿದಳು. ಮನೆಗೆ ಬಂದು ಸಾಕ್ಸ್ ಜೊತೆ ಅದನ್ನು ಧರಿಸಲು ನೋಡಿದಾಗ, ಅದು ಬಲು ಟೈಟ್ ಎನಿಸಿತು. ಹೊಸತು ಎಂದು ಕಷ್ಟಪಡುತ್ತಲೇ ವಾಕಿಂಗ್ ಹೊರಟೇಬಿಟ್ಟಳು. ಮನೆಗೆ ಬರುವಷ್ಟರಲ್ಲಿ ಸಾಕು ಸಾಕಾಯಿತು. ಒಮ್ಮೆ ಬಳಸಿದ್ದರಿಂದ ಅದನ್ನು ವಾಪಸ್ಸು ಕೊಡುವಂತೆ ಇರಲಿಲ್ಲ.
ಆಫೀಸಿಗೆ ಧರಿಸಲೆಂದು ಲಲಿತಾ ಹೊಸ ಚಪ್ಪಲಿ ಕೊಳ್ಳಲು ಹೊರಟಳು. ಹಲವು ಅಂಗಡಿ ತಡಕಾಡಿದ ಮೇಲೆ ಬಲು ಕಷ್ಟದಿಂದ, ಒಂದು ಶೋರೂಮಿನಲ್ಲಿ ಬೇಕಾದ್ದನ್ನು ಆರಿಸಿದಳು. ಅಲ್ಲಿ ಹಾಕಿಕೊಂಡೂ ನೋಡಿದ್ದಳು. ಆದರೆ ಅದನ್ನು ಧರಿಸಿ ಆಫೀಸಿಗೆ ಬಂದಾಗ, ಯಾಕೋ ಹೊಸ ಚಪ್ಪಲಿ ಬಲು ಅನ್ ಕಂಫರ್ಟೆಬಲ್ ಅನಿಸಿತು. ಏಕೆಂದರೆ ಚಪ್ಪಲಿ ಅವಳ ಪಾದಕ್ಕಿಂತ ತುಸು ಲೂಸು ಆಗಿತ್ತು.
ಹೀಗೆ ಚಪ್ಪಲಿ, ಶೂಸ್ ಪ್ರತಿ ವ್ಯಕ್ತಿಯ ಅತಿ ಅಗತ್ಯ ವಸ್ತುವಾಗಿದೆ. ಹಿಂದೆಲ್ಲ ಮಾರುಕಟ್ಟೆಯಲ್ಲಿ ಇವು ಬಲು ಕಡಿಮೆ ಬ್ರಾಂಡ್ ನಲ್ಲಿ ಸಿಗುತ್ತಿದ್ದವು. ಜನ ಹೆಚ್ಚು ತಲೆಕೆಡಿಸಿಕೊಳ್ಳದೆ 1-2 ಜೋಡಿ ಖರೀದಿಸಿ ಸುಮ್ಮನಾಗುತ್ತಿದ್ದರು. ಆದರೆ ಇವತ್ತಿನ ಕಾಲಕ್ಕೆ ಜನ ರಾಶಿ ರಾಶಿ ಬ್ರಾಂಡ್ಸ್ ನ್ನು ಆನ್ ಲೈನ್/ಆಫ್ ಲೈನ್ ನೋಡಿ ಖರೀದಿಸುತ್ತಿದ್ದಾರೆ. ವಾಕಿಂಗ್, ರನ್ನಿಂಗ್, ಪಾರ್ಟಿವೇರ್, ಅಫಿಶಿಯಲ್…. ಎಂದೆಲ್ಲ ನಾನಾ ವೆರೈಟಿ ಖರೀದಿಸುತ್ತಾರೆ.
ಇದು ಸಂದರ್ಭ ಅವಶ್ಯಕತೆಗೆ ತಕ್ಕಂತೆ, ಕುಶನಿಂಗ್ಸೋಲ್ ರಚನೆಯನ್ನು ಅನುಸರಿಸುತ್ತದೆ. ಪಾದಕ್ಕೆ ಸೂಕ್ತವಾಗಿ ಹೊಂದುವ, ಹಿತಕರ ಎನಿಸುವ ಫುಟ್ ವೇರ್ ಅತ್ಯಗತ್ಯ. ಇಲ್ಲದಿದ್ದರೆ ಪಾದಗಳಲ್ಲಿ ನೋವು, ಊತ, ಒಡೆತ ಇತ್ಯಾದಿ ಏನೋ ಒಂದು ಬಾಧೆ ಕಾಡುತ್ತದೆ. ಇತ್ತೀಚೆಗೆ ಇವುಗಳ ಬೆಲೆ ಸಹ ಸಾವಿರಾರು ರೂ. ಆಗಿದೆ. ಹೀಗಾಗಿ ನೀವು ಬಲು ಎಚ್ಚರಿಕೆಯಿಂದ ಇವನ್ನು ನೋಡಿ ಆರಿಸದಿದ್ದರೆ, ನಿಮ್ಮ ಸಾವಿರಾರು ರೂ. ಹಾಳಾಗುತ್ತದೆ. ಆದ್ದರಿಂದ ಹೊಸ ಫುಟ್ ವೇರ್ ಖರೀದಿಸುವಾಗ ಏನೆಲ್ಲ ಎಚ್ಚರಿಕೆ ವಹಿಸಬೇಕೆಂದು ವಿವರವಾಗಿ ಗಮನಿಸೋಣ :
ಎಲ್ಲಕ್ಕೂ ಮುಖ್ಯ ಸೂಕ್ತ ಅಳತೆ : ಇತ್ತೀಚಿನ ಸಂಶೋಧನೆಗಳ ಪ್ರಕಾರ, ಮಾನವ ದೊಡ್ಡವನಾದ ಮೇಲೆ, ಪಾದಗಳ ಅಳತೆಯಲ್ಲಿ ಮಾಮೂಲಿ ಅಂತರ ಇದ್ದೇ ಇರುತ್ತದೆ. ಹೀಗಾಗಿ ಶೂ/ಚಪ್ಪಲಿ ಖರೀದಿಸುವ ಮೊದಲು, ಅಳತೆ ಬಹಳ ಮುಖ್ಯ. ಈ ಅಳತೆಗಾಗಿ ನಿಮ್ಮ ಹಳೆಯ ಶೂ/ಚಪ್ಪಲಿ ಸೈಜ್ ಗುರುತಿಡಿ. ಆಗ ಅಂಗಡಿಯವನಿಗೆ ಅದೇ ನಂಬರಿನ ಅಳತೆಯದ್ದೇ ಬೇಕು ಎಂದು ಹೇಳಬಹುದು. ಇತ್ತೀಚೆಗೆ ಎಲ್ಲಾ ಚಪ್ಪಲಿ ಅಂಗಡಿಗಳಲ್ಲೂ, ಈ ಅಳತೆಗೆ ಒಂದು ಸ್ಕೇಲ್ ಇದ್ದೇ ಇರುತ್ತದೆ. ಒಮ್ಮೊಮ್ಮೆ ಇದರಲ್ಲೂ ವ್ಯತ್ಯಾಸ ಆಗಬಹುದು, ಹೀಗಾಗಿ ಈಗ ನೀವು ಬಳಸುತ್ತಿರುವ ಫುಟ್ ವೇರ್ ನ ನಂಬರ್ ನೆನಪಿಡುವುದೇ ಸರಿ.
ಪಾದಗಳ ಅಗಲದ ಕಡೆಗೂ ಗಮನವಿಡಿ : ಕೆಲವರ ಪಾದ ಗಿಡ್ಡವಾದರೂ, ಅಗಲ ಆಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಚಪ್ಪಲಿ ಆರಿಸಿದರೆ, ಕಾಲುಬೆರಳುಗಳಿಗೆ ಬಹಳ ನೋವಾಗುತ್ತದೆ, ಏನೋ ಒತ್ತಡ ಹೇರಿದಂತಿರುತ್ತದೆ. ಪಾದ ತುಸು ತೆಳು ಆಗಿದ್ದರೆ, ಅಗಲದ ಚಪ್ಪಲಿ ಧರಿಸಿದರೆ, ಪಾದಕ್ಕೆ ಬೇಕಾದ ಸಪೋರ್ಟ್ ಸಿಗುವುದಿಲ್ಲ. ಹಿಮ್ಮಡಿ, ಬೆರಳು ಸಂದಿನಲ್ಲಿ ಒಡೆತ ಕಾಣಬಹುದು. ಹೀಗಾಗಿ ನಿಮ್ಮ ಪಾದ ಅಗಲವಾಗಿದ್ದರೆ, ಮುಂದಿನ ಸಲದಿಂದ, ಮುಂಭಾಗ ಬಲು ಚೂಪಾಗಿರುವಂಥ ಶೂ/ಚಪ್ಪಲಿ ಕೊಳ್ಳುವ ಬದಲು ಅಗಲ ಮೂತಿ ಇರುವಂಥದ್ದನ್ನೇ ಕೊಳ್ಳಿರಿ.
ಸೂಕ್ತ ಸಮಯದಲ್ಲೇ ಕೊಳ್ಳಿರಿ : ಬೆಳಗಿನ ಹೊತ್ತು ಪಾದದ ಅಳತೆ ಅತಿ ಪರ್ಫೆಕ್ಟ್ ಆಗಿರುತ್ತದೆ. ಏಕೆಂದರೆ ಈ ಹೊತ್ತಿನಲ್ಲಿ ಪಾದ ತನ್ನ ಕಂಫರ್ಟ್ ಲೆವೆಲ್ ನಲ್ಲಿ ಇರುತ್ತದೆ. ಸಂಜೆ ಹೊತ್ತಿಗೆ ಎಷ್ಟೋ ಸಲ ಎಗ್ಸರ್ಶನ್ ಕಾರಣ, ತುಸು ಊತ ಕಾಣಿಸಬಹುದು. ಹೀಗಾಗಿ ಫುಟ್ ವೇರ್ ಕೊಳ್ಳಲು ಸಂಜೆ ಹೊತ್ತು ಆರಾಮವಾಗಿ ಹೋಗುವುದೇ ಸರಿ, ಆಗ ಮಾತ್ರ ನಿಮ್ಮ ಪಾದದ ಸೂಕ್ತ ಅಳತೆ ಲಭ್ಯ.
ಖಂಡಿತಾ ಕಾಂಪ್ರಮೈಸ್ ಆಗಬೇಡಿ : ಕೆಲವು ಜನ `ಸ್ವಲ್ಪ ಟೈಟ್ ಆಗಿದೆ, ಬಳಸುತ್ತಾ ಹೋದಂತೆ ಲೂಸ್ ಆಗುತ್ತದೆ,’ ಯಾ `ತುಸು ಲೂಸ್ ಆಗಿದೆ. ಸಾಕ್ಸ್ ಜೊತೆ ಸೆಟ್ ಆಗುತ್ತದೆ ಬಿಡು,’ ಎಂದುಕೊಳ್ಳುತ್ತಾ ಶೂ ಖರೀದಿಸುತ್ತಾರೆ. ಆದರೆ ಮನೆಗೆ ಬಂದ ಮೇಲೆ ಬಹಳ ಹಿಂಸೆ ಎನಿಸುತ್ತದೆ. ಹೀಗಾಗಿ ಇದನ್ನು ಕೊಳ್ಳುವಾಗ ಖಂಡಿತಾ ತುಸು ಮಾತ್ರದ ಕಾಂಪ್ರಮೈಸ್ ಗೂ ಒಪ್ಪಿಕೊಳ್ಳಬೇಡಿ. ಏಕೆಂದರೆ ಇದಕ್ಕಾಗಿ ಬಲು ದೊಡ್ಡ ಮೊತ್ತದ ಹಣ ತೆರುತ್ತಿದ್ದೀರಿ.
ನಿಮ್ಮ ಉದ್ದೇಶ ಮತ್ತು ಬಜೆಟ್
ಮೊದಲೇ ನಿಗದಿತ ಆಗಿರಲಿ : ಇತ್ತೀಚೆಗೆ ಪ್ರತಿ ಬೇರೆ ಬೇರೆ ಸಂದರ್ಭಕ್ಕೂ ಪ್ರತ್ಯೇಕವಾಗಿ ಶೂ/ಚಪ್ಪಲಿ/ಸ್ಯಾಂಡಲ್ಸ್ ಕೊಳ್ಳುವುದರಿಂದ, ಅಂಗಡಿಗೆ ಹೋಗುವ ಮೊದಲೇ ಯಾವುದಕ್ಕಾಗಿ, ಎಷ್ಟು ಬಜೆಟ್ ನಲ್ಲಿ ಕೊಳ್ಳಲಿದ್ದೀರಿ ಎಂಬುದನ್ನು ಮೊದಲೇ ಗುರುತಿಸಿಕೊಳ್ಳಿ. ಡೇಲಿ ವೇರ್, ವಾಕಿಂಗ್, ರನ್ನಿಂಗ್, ಟ್ರೆಕಿಂಗ್ ಯಾವುದಕ್ಕಾಗಿ ಎಂಬುದನ್ನು ಮೊದಲೇ ಡಿಸೈಡ್ ಮಾಡಿಕೊಳ್ಳಿ. ಇದರಿಂದ ಅಂಗಡಿಯನು ನಿಮಗೆ ಬೇಕಾದಂಥ ಚಪ್ಪಲಿ ತೋರಿಸಲಿಕ್ಕೂ ಅನುಕೂಲವಾಗುತ್ತದೆ. ನಿಮಗೂ ಆರಿಸಲು ಸುಲಭವಾಗುತ್ತದೆ.
ಸಂದರ್ಭಕ್ಕೆ ಅನುಕೂಲಕರಾಗಿ ಆರಿಸಿ : ಪ್ರತಿ ಸಂದರ್ಭಕ್ಕೂ ಬೇರೆ ಬೇರೆ ತರಹದ ಶೂ/ಚಪ್ಪಲಿ ಖರೀದಿಸಿ. ಅಂದ್ರೆ, ರನ್ನಿಂಗ್ ಗಾಗಿ ಇರುವ ಶೂನಲ್ಲಿ ವಿಭಿನ್ನ ತರಹದ ಕುಶನಿಂಗ್ ಇರುತ್ತದೆ, ಆಗ ಯಾವುದೇ ದುಷ್ಪ್ರಭಾವ ಇರುವುದಿಲ್ಲ, ಅದು ನಿಮಗೆ ಹೆಚ್ಚು ಹಿತಕರವಾಗಿಯೂ ಇರುತ್ತದೆ. ಇದೇ ತರಹ ವಾಕಿಂಗ್ ಶೂಸ್, ರನ್ನಿಂಗ್ ಶೂಸ್ ಗಿಂತ ಬಹಳ ಬಳುಕುವಂತಿರುತ್ತದೆ, ಹಾಗಾಗಿ ಅದನ್ನು ಧರಿಸಿ ಹಾಯಾಗಿ ನಡೆದಾಡಬಹುದು. ಅದೇ ತರಹ ಟ್ರೆಕ್ಕಿಂಗ್ ಗಾಗಿ ಗಟ್ಟಿಮುಟ್ಟಾದ, ಬಾಳಿಕೆ ಬರುವಂಥ, ಉತ್ತಮ ಗ್ರಿಪ್ಪಿಂಗ್ ವುಳ್ಳ, ಪಾದಕ್ಕೆ ಉತ್ತಮ ಸಪೋರ್ಟ್ ನೀಡುವಂಥ ಶೂಸ್ ನ್ನೇ ಖರೀದಿಸಬೇಕು. ಹಾಗೆಯೇ ವೆಯ್ಟ್ ಲಿಫ್ಟಿಂಗ್ ಗಾಗಿ ಇದರ ಸೋಲ್ ಫ್ಲಾಟ್ ಆಗಿರಬೇಕು, ಮಜಬೂತಾಗಿರಬೇಕು. ಆಗ ಮಾತ್ರ ಧರಿಸಿದವರ ಕಾಲಿಗೆ ಉತ್ತಮ ಸಪೋರ್ಟ್ ಸಿಗುತ್ತದೆ. ಅದೇ ತರಹ ಆಟೋಟಗಳಿಗಾಗಿ ಹಿಮ್ಮಡಿ, ಮಂಡಿಗೆ ಹೆಚ್ಚಿನ ಸಪೋರ್ಟ್ ಇರುವಂಥದ್ದನ್ನೇ ಕೊಳ್ಳಿರಿ.
ಸ್ಲಿಪ್ ಆನ್ ಸ್ನೀಕರ್ಸ್ ಗೆ ಬದಲಾಗಿ ಆ್ಯಂಕಲ್ ಶೂಸ್ ಆರಿಸಿ.
ಸೂಕ್ತ ಬ್ರಾಂಡ್ ನ್ನೇ ಆರಿಸಿ : ಅಗ್ಗದ ಆಸೆಗೆ ಬಿದ್ದು ಮುಗ್ಗಲು ಮಾಲು ಕೊಳ್ಳಬಾರದು. ಹೀಗಾಗಿ ನಿಮ್ಮ ಅವಶ್ಯಕತೆಗೆ ತಕ್ಕಂತೆ ತುಸು ದುಬಾರಿಯಾದರೂ ಸರಿ, ಉತ್ತಮ ಕಂಫರ್ಟ್ ನೀಡುವ, ಸುದೀರ್ಘ ಬಾಳಿಕ ಬರುವಂಥ ಉನ್ನತ ಬ್ರಾಂಡ್ ನ ಫುಟ್ ವೇರ್ ಖರೀದಿಸುವುದೇ ಸರಿ. ಇದರಿಂದ ಮತ್ತೆ ಮತ್ತೆ ಇಂಥವನ್ನು ಕೊಳ್ಳುವ ಕಾಟ ತಪ್ಪುತ್ತದೆ. ಉನ್ನತ ಬ್ರಾಂಡ್ ನ ಸುದೀರ್ಘ ಬಾಳಿಕೆ ಬರುತ್ತವೆ, ಲೋಕಲ್ ಬೇಗ ಸವೆಯುತ್ತವೆ.
– ಪ್ರತಿಭಾ ಕುಮಾರ್





