ಕಥೆ –  ಶ್ರೀನಾಥ್‌ ಎಚ್‌.ಸಿ.

ಎಲ್ಲರಂತೆ ಮಾಮೂಲಾಗಿ ಅಲ್ಲದೆ, ತಾನೂ ಆದರ್ಶ ವಿವಾಹವಾಗಬೇಕು ಎಂದು ಆಸೆಪಟ್ಟಿದ್ದ ರಾಕೇಶನಿಗೆ ತಾಯಿ ರಾಧಮ್ಮ ಅತಿಯಾದ ಹುಚ್ಚು ಬೇಡ ಎಂದು ಅಡ್ಡಿಪಡಿಸಿದರು. ಮುಂದೆ ಪವಾಡದಂತೆ ರಾಕೇಶ್‌ ಒಬ್ಬ ಅಂಗವಿಕಲ ಹುಡುಗಿಯನ್ನು ಮದುವೆ ಆದದ್ದಾದರೂ ಹೇಗೆ…..?

“ಗಂಟೆ 8 ಆಯ್ತು ಎದ್ದೇಳು ರಾಕೇಶ್‌, ದಿನಾ ಆಫೀಸಿಗೆ ಲೇಟ್‌ ಆಯ್ತು ಅಂತ ಓಡ್ತೀಯಾ….?” ಎಂದು ರಾಧಮ್ಮ ಕೂಗುತ್ತಿದ್ದಂತೆ, ರಾಕೇಶ್‌ ಕಣ್ಣು ಕೈ ಉಜ್ಜಿಕೊಂಡು ಮುಖಕ್ಕೆ ಒತ್ತಿ ರಾಯರ ಫೋಟೋಗೆ ನಮಸ್ಕರಿಸಿ ಎದ್ದು ಕುಳಿತ.

ನಂತರ ಅವನು ಬೇಗ ಸಿದ್ಧನಾಗಿ ತಿಂಡಿಗೆ ಬಂದು ಕೂತಾಗ ರಾಧಮ್ಮ ನಿಧಾನವಾಗಿ, “ರಾಕೇಶ್‌, ಒಂದು ಒಳ್ಳೆ ಜಾತಕ ಬಂದಿದೆ. ತುಂಬಾ ಚೆನ್ನಾಗಿ ಹೊಂದಿಕೊಂಡಿದೆ. ಹುಡುಗಿ ತುಂಬಾ ಚೆನ್ನಾಗಿದ್ದಾಳೆ ನೋಡೋ ಇಲ್ಲಿ…..” ಎಂದು ತೋರಿಸಿದರು.

ಅಮ್ಮನ ಒತ್ತಾಯಕ್ಕೆ ಫೋಟೋ ಕಡೆ ನೋಡಿದ ರಾಕೇಶ್‌, “ಹೌದಮ್ಮಾ…. ತುಂಬಾ ಚೆನ್ನಾಗಿದ್ದಾಳೆ. ಆದರೆ ನನಗೆ ಈಗ 28 ವರ್ಷ. ಇನ್ನು ಎರಡು ವರ್ಷವಾದರೂ ಸ್ವಲ್ಪ ಆರಾಮವಾಗಿ ಇರುತ್ತೇನೆ. ಅಲ್ಲಿಯವರೆಗೂ ನನ್ನನ್ನು ಕಾಡಿಸಬೇಡ…..” ಎಂದು ಕಡ್ಡಿ ತುಂಡಾದಂತೆ ಹೇಳಿಬಿಟ್ಟ.

ರಾಧಮ್ಮ ದುಃಖ ತಡೆಯಲಾರದೆ, “ಯಾಕೋ ಹೀಗೆ ಮಾಡ್ತೀಯಾ….? ನಿನಗೆ 28 ಆದರೆ ನನಗೆ 60 ಕಣೋ, ನಾನು ಇನ್ನು ಎಷ್ಟು ದಿಸ ಅಂತ ನಾನು ಗಟ್ಟಿಯಾಗಿ ಇರೋಕಾಗುತ್ತೆ…? ಅದೂ ಅಲ್ಲದೆ ಇರೋ ಒಬ್ಬ ಮಗನ ಮದುವೆ ಕಣ್ತುಂಬ ನೋಡಿ, ಒಂದೆರಡು ಮೊಮ್ಮಕ್ಕಳನ್ನು ಆಡಿಸಿಕೊಟ್ಟು ನಂತರ ಕಣ್ಮುಚ್ಚಬೇಕು ಎಂಬುದು ನನ್ನ ಆಸೆ, ಯಾಕೋ ನೀನು ನನ್ನನ್ನು ಅರ್ಥ ಮಾಡಿಕೊಳ್ಳಲ್ಲ….? ನಿಮ್ಮಪ್ಪ ನಿನ್ನನ್ನು ನನ್ನ ಜವಾಬ್ದಾರಿಗೆ ಒಪ್ಪಿಸಿ ಹೋಗಿಬಿಟ್ಟರು. ಬೇಗ ನಿನಗೊಂದು ಮದುವೆ ಮಾಡಿದರೆ ನನ್ನ ಜವಾಬ್ದಾರಿ ಮುಗಿಯುತ್ತದೆ. ಆಮೇಲೆ ರಾಮಕೃಷ್ಣ ಅಂತ ಇರುತ್ತೇನೆ,” ಎಂದು ಗೋಳಾಡಿದರು.

ಯಾಕೋ ರಾಕೇಶನಿಗೆ ಅಮ್ಮನ ಬಗ್ಗೆ ಕನಿಕರವಾಯಿತು, “ಸರಿಯಮ್ಮಾ….. ಇನ್ನೊಂದು ವರ್ಷವಾದರೂ ಸಮಯ ಕೊಡು,” ಎಂದ.

ರಾಧಮ್ಮನರ ಮನಸ್ಸಿಗೆ ಏನೋ ಒಂದು ರೀತಿ ಅಲ್ಪ ಸಮಾಧಾನ ಆದಂತಾಗಿ, “ನೋಡು ರಾಕೇಶ್‌, ಇನ್ನು ಆರು ತಿಂಗಳಿಗೆ ಹುಡುಗಿ ಹುಡುಕುತ್ತೇನೆ. ಹುಡುಗಿ ಸೆಟ್‌ ಆದ ಮೇಲೆ ಮದುವೆ ಮಾಡಲು ಅವರಿಗೆ ಆರು ತಿಂಗಳ ಸಮಯವಾದರೂ ಕೊಡಬೇಕಾಗುತ್ತದೆ. ಅಲ್ಲಿಗೆ ನಿನ್ನ ಒಂದು ವರ್ಷದ ವಾಯಿದೆ ತೀರುತ್ತದೆ. ಇನ್ನು ಹೆಚ್ಚು ತರಲೆ ಮಾಡಬೇಡ,” ಎಂದು ತುಸು ಗಂಭೀರವಾಗಿ ಹೇಳಿದರು.

jabjab-wah-muskraye-story

ಸರಿ ಎಂದು ತಲೆ ಅಲ್ಲಾಡಿಸಿ ಬೈಕ್‌ ಏರಿ ಆಫೀಸಿಗೆ ಹೊರಟ. ಸಂಜೆ ಆಫೀಸ್‌ ನಿಂದ ಬರುವಾಗ ಟೌನ್‌ ಹಾಲ್ ‌ಬಳಿ ವಿಜಯಾನಂದ ಸ್ವಾಮಿಗಳ ಪ್ರವಚನ ನಡೆಯುತ್ತಿತ್ತು. ಅವರೆಂದರೆ ರಾಕೇಶನಿಗೆ ಬಹಳ ಇಷ್ಟ. ಅವರು ಸ್ವಾಮಿಗಳಾಗಿದ್ದರೂ ಕೂಡ ಜನರಿಗೆ ಉಪಯುಕ್ತವಾಗುವಂತ ಲೌಕಿಕ ಸಲಹೆ, ಸಮಸ್ಯೆಗಳಿಗೆ ಉಪಾಯಗಳನ್ನು ಕೊಡುತ್ತಿದ್ದರು.

ಅಂದು ಸ್ವಾಮೀಜಿ, ಮದುವೆಯ ಬಗ್ಗೆ ಮಾತನಾಡುತ್ತಾ, `ಎಲ್ಲಾ ಹುಡುಗರು ಚೆನ್ನಾಗಿರುವ ಹುಡುಗಿ ಬೇಕು, ದುಡಿಯೋ ಹುಡುಗಿ ಬೇಕು, ಅದು ಬೇಕು, ಇದು ಬೇಕು ಇತ್ಯಾದಿ ಬಯಕೆಗಳ ಬೆಟ್ಟವನ್ನೇ ಹೊತ್ತಿರುತ್ತಾರೆ. ಅದೇ ಪ್ರಕಾರ ಹುಡುಗಿಯರು ಕೂಡ ಹುಡುಗ ಚೆನ್ನಾಗಿರಬೇಕು, ದೊಡ್ಡ ಕೆಲಸದಲ್ಲಿರಬೇಕು, ಸಿಕ್ಕಾಪಟ್ಟೆ ಸಂಬಳ ಬರಬೇಕು, ಕಾರು, ಬಂಗಲೆ ಇತ್ಯಾದಿ ಇರಬೇಕು…. ಹೀಗೆ ಎಲ್ಲರೂ ಅತಿಯಾದ ಆಸೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು ಬಿಟ್ಟರೆ ಅವರೆಲ್ಲಾ ಹೇಗೆ ತಮ್ಮ ಗುರಿ ಸಾಧಿಸಲು ಸಾಧ್ಯ….?

`ನೂರಕ್ಕೆ 30 ಭಾಗ ಮಾತ್ರ ಸುಂದರ ಹುಡುಗ ಹುಡುಗಿಯರು ಲಭ್ಯವಿರುತ್ತಾರೆ. ಆದರೆ ಉಳಿದವರು ಸಾಧಾರಣ ಹಾಗೂ ಅಷ್ಟೇನೂ ಒಪ್ಪಿಗೆ ಆಗುವಂತೆ ಇರುವುದಿಲ್ಲ. ನಮಗೆ ನಾವು ಬಯಸಿದ್ದು ಸಿಕ್ಕಾಗ ಸಿಗುವ ಸಂತೋಷಕ್ಕಿಂತ ಇನ್ನೊಬ್ಬರಿಗೆ ಅವರು ಬಯಸದೇ ಇದ್ದದ್ದು ನಾವು ಕೊಟ್ಟರೆ ಅವರಿಗಾಗುವ ಸಂತೋಷ ಅದರಿಂದ ನಮಗಾಗುವ ಸಂತೋಷ ದುಪ್ಪಟ್ಟು,’ ಎಂದು ಹೇಳುತ್ತಿದ್ದರು.

ಅದು ಹೇಗೆ ಎಂದು ತಲೆ ಕೆರೆದುಕೊಂಡು ನೋಡುತ್ತಿದ್ದ ರಾಕೇಶನಿಗೆ ಸ್ವಾಮಿಗಳ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯನ್ನು ತೋರಿಸಿ, `ನೋಡಿ ಇವರು ಸುಂದರೇಶ ಎಂದು. ನೋಡಲು ಕೂಡ ಬಹಳ ಸುಂದರವಾಗಿದ್ದಾರೆ. ಇವರು ಬಹಳ ಆದರ್ಶವಾದಿಗಳು, ಈಗ ತಾನೇ ನಾನು ಹೇಳಿದಂತೆ ಇವರು ತಮ್ಮ ಜೀವನದಲ್ಲಿ ಸಾಧಿಸಿದ್ದಾರೆ. ಒಬ್ಬ ಅಂಗವಿಕಲ ಹುಡುಗಿಯನ್ನು ತಮ್ಮ ಪತ್ನಿಯನ್ನಾಗಿ ಸ್ವೀಕರಿಸುವ ಮೂಲಕ ಆ ಹುಡುಗಿಗೆ ದಿವ್ಯವಾದ ಬಾಳನ್ನು ನೀಡಿದ್ದಾರೆ. ಇದೇ ರೀತಿ ಎಲ್ಲರೂ ಉದಾರ ಮನಸ್ಸಿನಿಂದ ತಮಗೆ ಸಿಕ್ಕ ಹುಡುಗ ಅಥವಾ ಹುಡುಗಿಯನ್ನು ಮೆಚ್ಚಿ ಮದುವೆಯಾದರೆ ಇವತ್ತು ಸಮಾಜದಲ್ಲಿ ಬೃಹದಾಕಾರವಾಗಿ ಬೆಳೆದಿರುವ ಮದುವೆಯ ಸಮಸ್ಯೆ ಎಂಬುದೇ ಇರುವುದಿಲ್ಲ,’ ಎಂದರು.

ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದ್ದರು. ತನಗರಿಯದೆ ತಾನೂ ಚಪ್ಪಾಳೆ ತಟ್ಟಿದ ರಾಕೇಶನ ತಲೆಯಲ್ಲಿ, `ನಾನೇಕೆ ಅಂಥ ಆದರ್ಶ ವಿವಾಹ ಆಗಬಾರದು?’ ಎಂಬ ಹುಳು ಹೊಕ್ಕಿತ್ತು.

ಮಾರನೇ ದಿನ ಭಾನುವಾರವಾದ್ದರಿಂದ ನಿಧಾನವಾಗಿ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ತಿಂಡಿ ತಿನ್ನುತ್ತಾ, “ಅಮ್ಮಾ…. ನಿನ್ನೆ ವಿಜಯಾನಂದ ಸ್ವಾಮಿಗಳ ಭಾಷಣ ಕೇಳುತ್ತಿದ್ದೆ,” ಎಂದು ಎಲ್ಲವನ್ನೂ ವಿವರವಾಗಿ ಹೇಳಿ, “ನಾನೂ ಅಂಥ ಆದರ್ಶ ವಿವಾಹವಾಗಬೇಕೆಂದು ಬಯಸುತ್ತೇನೆ,” ಎಂದ.

ರಾಧಮ್ಮನವರಿಗೆ ನಖಶಿಖಾಂತ ಕೋಪ ಉಕ್ಕಿ ಬಂದಿತು. “ಅಯ್ಯೋ ಅಯೋಗ್ಯ….. ಸುಂದರವಾಗಿರೋ ಹುಡುಗಿಯ ಜಾತಕ ಹೊಂದಿ ಬಂದಿದೆ, ಮದುವೆ ಮಾಡಿಕೋ ಎಂದರೆ, ಅದನ್ನು ಬಿಟ್ಟು ಯಾವುದೋ ಕೈಕಾಲು ಇಲ್ಲದ ಹುಡುಗಿಯನ್ನು ಮದುವೆ ಆಗ್ತೀನಿ ಅಂತ ಇದೀಯಲ್ಲ. ನಿನ್ನ ಬುದ್ಧಿಗೆ ತುಕ್ಕು ಹಿಡಿದಿದ್ಯಾ…..” ಎಂದು ಅಬ್ಬರಿಸಿದರು.

ಇನ್ನು ಅಮ್ಮನ ಜೊತೆ ವಾದಕ್ಕೆ ಇಳಿದರೆ ತನಗೇ ತೊಂದರೆ. ಇರುವ ಒಂದು ಭಾನುವಾರ ಹಾಳಾಗಿಬಿಡುತ್ತದೆ, ಎಂದುಕೊಂಡು “ಸರಿಯಮ್ಮಾ….. ಆಯ್ತು. ಆಗಲ್ಲ ಬಿಡು,” ಎಂದುಬಿಟ್ಟ.

ಒಂದು ತಿಂಗಳ ಬಳಿಕ ಅದೊಂದು ಭಾನುವಾರ ಸಾಯಂಕಾಲ ಬ್ಯಾಡ್ಮಿಂಟನ್‌ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ, ಸ್ನೇಹಿತ ಮೋಹನ ಸಿಕ್ಕಿ, `ನಮ್ಮ ಮನೆಗೆ ಬಾರೋ,’ ಎಂದು ಹತ್ತಿರದಲ್ಲೇ ಇದ್ದ ಅವನ ಮನೆಗೆ ಹೋಗುತ್ತಿದ್ದಾಗ, ಇವರ ಮುಂದೆ ಒಬ್ಬ ಹುಡುಗಿ ತನ್ನ ಎಡಗಾಲನ್ನು ಕೊಂಚ ಎಳೆಯುತ್ತಾ ಹಗುರವಾಗಿ ಕುಂಟುತ್ತಾ, ಪಕ್ಕದ ಮನೆಯ ಒಳಗೆ ಹೋದಳು.

ಅದನ್ನು ಗಮನಿಸಿದ ರಾಕೇಶ್‌, “ಯಾರು ಈ ಹುಡುಗಿ?” ಎಂದು ವಿಚಾರಿಸಿದ.

ಆ ಹುಡುಗಿ ಒಬ್ಬ ಅನಾಥೆ ಖಾಸಗಿ ಕೆಲಸದಲ್ಲಿದ್ದು, ಇನ್ನು ಮೂವರು ಹುಡುಗಿಯರ ಜೊತೆ ಪಕ್ಕದ ಮನೆಯಲ್ಲಿದ್ದಾಳೆ ಎಂಬ ವಿಷಯ  ತಿಳಿಯಿತು.

ರಾಕೇಶನ ಕುತೂಹಲ ಕಂಡ ಗೆಳೆಯ ಮೋಹನ್‌, “ಏನಪ್ಪಾ ಸಮಾಚಾರ…. ಹುಡುಗಿ ಏನೋ ಸುಂದರವಾಗಿದ್ದಾಳೆ, ಆದರೆ ಅನಾಥೆ. ಜೊತೆಗೆ ಎಡಗಾಲು ಕುಂಟು, ಅವಳ ಬಗ್ಗೆ ನಿನಗೆ ಏಕೆ ಚಿಂತೆ…..?” ಎಂದು ಕೇಳಿದ.

ಆಗ ರಾಕೇಶ್‌ ತನ್ನ ಆದರ್ಶ ಮದುವೆಯ ಬಯಕೆಯನ್ನು ವ್ಯಕ್ತಪಡಿಸಿದ. ಅದನ್ನು ಕೇಳಿ ಮೊದಲು ನಕ್ಕುಬಿಟ್ಟ ವೋಹನ್‌, ನಂತರ ತನ್ನ ಗೆಳೆಯನ ಆದರ್ಶ ವಿಚಾರವನ್ನು ಗಂಭೀರವಾಗಿ ಅವಲೋಕಿಸಿ, “ಆಯ್ತು. ಆ ಹುಡುಗಿಯ ಹೆಸರು ಮಯೂರಿ ಅಂತ. ಆಕೆ ನನಗೆ ತುಂಬಾ ಚೆನ್ನಾಗಿ ಪರಿಚಯ, ಬೇಕಾದರೆ ಹಾಗೆ ಕ್ಯಾಶುಯಲ್ ಆಗಿ ವಿಚಾರಿಸಿ ನೋಡ್ತೀನಿ. ಜೊತೆಗೆ ನಿನ್ನ ಫೋಟೋ ಕೂಡ ತೋರಿಸ್ತೀನಿ. ನಿನ್ನ ಅದೃಷ್ಟ ಚೆನ್ನಾಗಿದ್ದು, ಅವಳೇನಾದರೂ ಒಪ್ಪಿಗೆ ವ್ಯಕ್ತಪಡಿಸಿದರೆ, ನಿನಗೆ ತಿಳಿಸ್ತೀನಿ ಸರೀನಾ…..” ಎಂದ.

ಇದರಿಂದ ಸಂತುಷ್ಟನಾದ ರಾಕೇಶ್‌, “ಅಷ್ಟು ಮಾಡು ಮಾರಾಯ…” ಎಂದ.

3-4 ದಿನ ಕಳೆದ ಮೇಲೆ ರಾಕೇಶನ ಫೋನ್‌ ರಿಂಗ್‌ ಆಯಿತು. ನೋಡಿದರೆ ಮೋಹನ್‌ ಕಾಲ್ ಮಾಡಿದ್ದ. ಕುತೂಹಲದಿಂದ ಫೋನ್‌ ರಿಸೀವ್ ‌ಮಾಡಿದ ರಾಕೇಶ್‌, “ಹೇಳು ಮೋಹನ್‌,” ಎಂದು ಆತಂಕದಿಂದ ಕೇಳಿದ.

ಅತ್ತ ಕಡೆಯಿಂದ ಮೋಹನ್‌, “ರಾಕೇಶ್‌ ಗುಡ್‌ ನ್ಯೂಸ್‌ ಕಣೋ. ಮಯೂರಿ ನಿನ್ನನ್ನು ಭೇಟಿಯಾಗಲು ಒಪ್ಪಿಗೆ ಸೂಚಿಸಿದ್ದಾಳೆ. ಇನ್ನು ಮುಂದೆ ನಿನಗೆ ಬಿಟ್ಟಿದ್ದು,” ಎಂದ.

ರಾಕೇಶನ ಕಣ್ಮುಂದೆ ಒಂದು ಕಡೆ ಮಯೂರಿ, ಮತ್ತೊಂದು ಕಡೆ ಅಮ್ಮ ಇಬ್ಬರೂ ಗಿರಕಿ ಹೊಡೆದಂತೆ ಭಾಸವಾಯಿತು. ಈ ವಿಷಯ `ಅಮ್ಮನಿಗೆ ಹೇಳಿದರೆ ದೊಡ್ಡ ರಾದ್ಧಾಂತ ಮಾಡಿಬಿಡುತ್ತಾರೆ. ಏನು ಮಾಡೋದು…?’ ಎಂದು ವಿಚಾರ ಮಾಡತೊಡಗಿದ.

ಕೊನೆಗೂ ಒಂದು ಉಪಾಯ ಹುಡುಕಿದ. ಆಫೀಸ್‌ ನಿಂದ ಬರುವಾಗ ಮೋಹನನ ಮನೆಗೆ ಹೋಗಿ ಆ ಹುಡುಗಿಯನ್ನು ಭೇಟಿಯಾಗಿ ಮಾತನಾಡಿಸಿದ.

“ನೋಡಿ ನಾನು ಅಂಗವಿಕಲೆ. ನಿಮ್ಮ ಮನೆಯಲ್ಲಿ ನನ್ನನ್ನು ಒಪ್ಪುತ್ತಾರೆಯೇ? ನೀವು ಯಾವುದೋ ಆದರ್ಶಕ್ಕೆ ಕಟ್ಟುಬಿದ್ದು ನನ್ನನ್ನು ಮದುವೆಯಾದ ಮೇಲೆ ಮುಂದೆ ಪಶ್ಚಾತ್ತಾಪಪಡಬಾರದು,” ಎಂದು ನೇರವಾಗಿ ಕೇಳಿದಳು.

ಮಯೂರಿಯ ಸರಳ ನೇರ ನುಡಿಗಳು ರಾಕೇಶನಿಗೆ ಬಹಳ ಇಷ್ಟವಾಯಿತು. “ಹಾಗೇನೂ ಇಲ್ಲ. ನನಗೆ ನೀವು ಇಷ್ಟವಾಗಿದ್ದೀರಿ,” ಎಂದು ದನಿಯಲ್ಲಿ ಪ್ರಾಮಾಣಿಕತೆ ಮತ್ತು ಪ್ರೀತಿಯನ್ನು ಬೆರೆಸಿ ಹೇಳಿದ ರಾಕೇಶ್‌.

`ತಾನು ಅವಳನ್ನು ಆದರ್ಶಕ್ಕಾಗಿ ಮದುವೆಯಾಗುತ್ತಿದ್ದೇನೆ,’ ಎಂದು ಮಯೂರಿಗೆ ಹೇಳಬೇಡ ಎಂದು ರಾಕೇಶ್‌ ಗೆಳೆಯನನ್ನು ಮೊದಲೇ ಎಚ್ಚರಿಸಿದ್ದ. ಅದರಂತೆ ರಾಕೇಶ್‌, ಮಯೂರಿಯನ್ನು ಮನಸಾರೆ ಒಪ್ಪಿರುವುದಾಗಿ ತಿಳಿಸಿ, ತನ್ನ ತಾಯಿಯೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿಹೊರಟ.

ರಾತ್ರಿ ಊಟ ಮುಗಿದ ಮೇಲೆ, “ಅಮ್ಮಾ…. ನಾನು ಒಂದು ಹುಡುಗಿಯನ್ನು ಇಷ್ಟಪಟ್ಟಿದ್ದೇನೆ,” ಎಂದ ರಾಕೇಶ್‌ ಮೊಬೈಲ್ ‌ನಲ್ಲಿದ್ದ ಮಯೂರಿಯ ಫೋಟೋ ತೋರಿಸಿದ.

ಫೋಟೋ ನೋಡಿದ ರಾಧಮ್ಮ, “ಹುಡುಗಿ ತುಂಬಾ ಚೆನ್ನಾಗಿದ್ದಾಳೆ. ಕೊನೆಗೂ ರಾಯರು ವರ ಕೊಟ್ಟರು. ಆ ಹುಡುಗಿ ಯಾರು, ಎಲ್ಲಿದ್ದಾಳೆ?” ಎಂದು ಕೇಳಿದರು.

“ಅವಳು ಅನಾಥೆ. ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾಳೆ. ನನ್ನ ಸ್ನೇಹಿತ ಮೋಹನ್‌ ಮನೆಯ ಪಕ್ಕ ವಾಸವಾಗಿದ್ದಾಳೆ,” ಎಂದ.

ಇದನ್ನು ಕೇಳಿ ಹೌಹಾರಿದ ರಾಧಮ್ಮ, “ಅಯ್ಯೋ ಅನಾಥ ಹುಡುಗಿನಾ…. ಹಾಗಾದ್ರೆ ಅವಳ ಮದುವೆ ಯಾರು ಮಾಡಿಕೊಡುತ್ತಾರೆ….? ನೀನೇ ಎರಡೂ ಕಡೆ ಖರ್ಚು ಹಾಕಿ ಮಾಡಿಕೊಳ್ಳಬೇಕಷ್ಟೆ….” ಎಂದರು.

“ಅಮ್ಮಾ….. ಯಾವ ಖರ್ಚು ವೆಚ್ಚ ಎಲ್ಲಾ ಏನೂ ಬೇಡ. ಸಿಂಪಲ್ಲಾಗಿ ದೇವಸ್ಥಾನದಲ್ಲಿ ಮದುವೆಯಾದರೆ ಆಯಿತು. ನಿನಗೆ ಅರ್ಜೆಂಟಾಗಿ ಸೊಸೆ ಬೇಕೆಂದರೆ ಒಪ್ಪಿಗೆ ಕೊಡು,” ಎಂದ ರಾಧಮ್ಮನಿಗೆ ಏನು ಹೇಳಬೇಕೆಂದು ತೋಚಲಿಲ್ಲ.

“ಸರಿ, ಒಮ್ಮೆ ನಾನು ಆ ಹುಡುಗಿಯನ್ನು ನೋಡಿ ಮಾತನಾಡಿಸಬೇಕು. ಆಮೇಲೆ ಒಪ್ಪಿಗೆ ಕೊಡ್ತೀನಿ,” ಎಂದುಬಿಟ್ಟರು.

ಇದರಿಂದ ಕಷ್ಟಕ್ಕೆ ಸಿಕ್ಕವನಂತೆ ರಾಕೇಶ್‌ ಒದ್ದಾಡತೊಡಗಿದ.

ಅದೊಂದು ಭಾನುವಾರ ಮೋಹನ್‌ ಸಹಾಯದಿಂದ ಮಯೂರಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದ. ರಾಧಮ್ಮ ಹೊರಗೆ ಬಂದು ನೋಡುವಷ್ಟರಲ್ಲಿ ಮಯೂರಿ ಸೋಫಾ ಮೇಲೆ ಕುಳಿತಿದ್ದಳು. ರಾಧಮ್ಮ ಅದೂ ಇದೂ ಮಾತನಾಡಿಸುತ್ತಾ ಮನೆಯ ಕೆಲಸ, ಅಡುಗೆ ಕೆಲಸ, ಪೂಜೆ ಪುನಸ್ಕಾರ ಎಲ್ಲಾ ಗೊತ್ತಿದೆಯಾ ಎಂದು ಕೇಳಿ ತಿಳಿದುಕೊಂಡರು. ಮಯೂರಿಗೆ ಮೊದಲೇ ಇದರ ಬಗ್ಗೆ ಅರಿತಿದ್ದರಿಂದ ಅದಕ್ಕೆ ತಕ್ಕಂತೆ ಸೂಕ್ತ ಉತ್ತರ ಕೊಟ್ಟಳು. ಇದೆಲ್ಲಾ ಕೇಳಿ ರಾಧಮ್ಮನಿಗೆ ಇಷ್ಟವಾಯಿತು.

ಎದ್ದು ಹೊರಡುವಾಗ, ಲಘುವಾಗಿ ಕುಂಟುತ್ತ ಮುಂದೆ ಬಂದು ರಾಧಮ್ಮನ ಕಾಲಿಗೆ ಬಗ್ಗಿ ನಮಸ್ಕರಿಸಿದಳು. ಇದನ್ನು ಗಮನಿಸಿದ ರಾಧಮ್ಮ, “ಕಾಲಿಗೆ ಏನಾಯ್ತಮ್ಮ……” ಎಂದು ಕೇಳಿದರು.

ರಾಕೇಶನ ಮುಖ ಬಿಳಿಚಿಕೊಂಡಿತು. ಮಯೂರಿ ಜಾಣತನದಿಂದ, “ಅಮ್ಮಾ…. ಅದು ಒಂದು ಚಿಕ್ಕ ಆಕ್ಸಿಡೆಂಟ್‌ ಆಯ್ತು. ಹಾಗಾಗಿ ಕಾಲಿಗೆ ಏಟಾಗಿದೆ. ನಾನು ನಡೆಯುವಾಗ ಕಾಲನ್ನು ಸ್ವಲ್ಪ ಎಳೆದುಕೊಂಡು ನಡೆಯಬೇಕು. ಹಾಗಾಗಿ….” ಎಂದಳು.

ರಾಧಮ್ಮ ಆತಂಕದಿಂದ, “ಅದು ಸರಿ ಹೋಗುವುದಿಲ್ಲವೇ….?” ಎಂದು ಕೇಳಿದರು.

“ಇಲ್ಲಮ್ಮ…. ಅದಕ್ಕೆ ಬಹಳ ವರ್ಷ ಬೇಕೆಂದು ಡಾಕ್ಟರ್‌ ಹೇಳಿದ್ದಾರೆ,” ಎಂದಳು.

ಇದರಿಂದ ವಿಚಲಿತರಾದ ರಾಧಮ್ಮ , “ಸರಿಯಮ್ಮ ಹೋಗಿ ಬಾ,” ಎಂದರು.

ಅವಳು ಆ ಕಡೆ ಹೋದ ಕೂಡಲೇ, ಮಗನ ಕಿವಿ ಹಿಂಡುತ್ತಾ, “ನನಗೇ ಯಾಮಾರಿಸಲು ನೋಡ್ತಾ ಇದ್ದೀಯಾ…..? ನೀನು ಅವತ್ತು ಅಂಗವಿಕಲೆಯನ್ನು ಮದುವೆ ಆಗ್ತೀನಿ ಅಂತ ಹೇಳಿದ್ದೆ. ಆದರೆ ಇವಳು ಅನಾಥೆಯಾಗಿದ್ದಾಳೆ. ಯಾವ ವಂಶವೋ, ಯಾರ ಕುಡಿಯೋ ಒಂದೂ ಗೊತ್ತಿಲ್ಲ. ಹೀಗಿದ್ದೂ ಹೇಗೋ ಇವಳನ್ನು ನನ್ನ ಸೊಸೆ ಮಾಡಿಕೊಳ್ಳಲಿ? ಯಾಕೋ ನನ್ನನ್ನು ಹೀಗೆ ಉರಿಸ್ತೀಯಾ….” ಎಂದು ಇಡೀ ದಿನ ರಾದ್ಧಾಂತ ಮಾಡಿದ್ದರು.

ರಾಕೇಶನಿಗೆ ಭ್ರಮನಿರಸನವಾಯಿತು. ಹೇಗಾದರೂ ಮಾಡಿ ತಾಯಿಯನ್ನು ಒಪ್ಪಿಸಿ ಮಯೂರಿಯನ್ನು ಮದುವೆ ಆಗಲೇಬೇಕೆಂದು ಅಂದುಕೊಂಡಿದ್ದ ಅವನಿಗೆ ನಿರಾಶೆ ಕಾದಿತ್ತು.

ಒಂದು ವಾರ ಕಳೆದರೂ ಮನೆಯಲ್ಲಿ ಬಿಗುವಿನ ವಾತಾವರಣವಿತ್ತು. ಅದೊಂದು ದಿನ ಆಫೀಸಿನಿಂದ ಮನೆಗೆ ಹೋಗಿ ಅಮ್ಮನ ಮುಖ ನೋಡಲು ಧೈರ್ಯ ಸಾಲದೆ ಗೆಳೆಯ ಮೋಹನ್‌ ಮನೆಗೆ ಹೋದ. ಮೋಹನ್‌ ಅವನಿಗೆ ಸಮಾಧಾನ ಹೇಳಿ, “ಚಿಂತೆ ಮಾಡಬೇಡ ರಾಕೇಶ್‌, ಮನೆಗೆ ಹೋಗು. ಕ್ರಮೇಣ ಎಲ್ಲಾ ಸರಿಹೋಗುತ್ತೆ,” ಎಂದು ಹೇಳಿ ಕಳುಹಿಸಿದ.

ಮನೆಗೆ ಬಂದ ರಾಕೇಶನಿಗೆ ಆಶ್ಚರ್ಯ ಕಾದಿತ್ತು. ರಾಧಮ್ಮ ಖುಷಿಯಿಂದ ಅವನನ್ನು ಬರಮಾಡಿಕೊಂಡು, “ರಾಕೇಶ್‌, ಬೇಸರ ಮಾಡಿಕೊಳ್ಳಬೇಡ. ಆ ಹುಡುಗಿಯನ್ನು ನೀನು ಮದುವೆಯಾಗಲು ನಾನು ಒಪ್ಪಿಗೆ ಕೊಡ್ತೀನಿ,” ಎಂದು ಹೇಳುತ್ತಾ ಅವನಿಗೆ ಕಾಫಿ ಕೊಟ್ಟರು.

ಕಳೆದುಹೋದ ವಸ್ತು ತಂತಾನೇ ಕೈ ಸೇರಿದಂತೆ ಭಾಸವಾಗಿ ಇದು ಕನಸೋ… ನನಸೋ ಎಂಬಂತಾಗಿತ್ತು ರಾಕೇಶನಿಗೆ. ಸ್ನೇಹಿತರು ಹಾಗೂ ಹತ್ತಿರದ ಸಂಬಂಧಿಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ದೇವಸ್ಥಾನದಲ್ಲಿ ಮದುವೆಯಾಯಿತು. ಅತ್ತೆ ಸೊಸೆ ಇಬ್ಬರೂ ಬಹಳ ಅನ್ಯೋನ್ಯವಾಗಿ ಹೊಂದಿಕೊಂಡರು. ಅತ್ತೆ ಬಾಯಿಬಿಟ್ಟು ಹೇಳು ಮೊದಲೇ ಸೊಸೆ ಎಲ್ಲಾ ಕೆಲಸಗಳನ್ನು ಅವರ ಇಚ್ಛೆಯಂತೆ ಮಾಡಿಕೊಡುತ್ತಿದ್ದಳು.

ಆರು ತಿಂಗಳಲ್ಲಿ ಅವಳಿಗೆ ಸರ್ಕಾರಿ ಉದ್ಯೋಗ ಪ್ರಾಪ್ತವಾಯಿತು. ಜೊತೆಗೆ ರಾಕೇಶನಿಗೆ ದೊಡ್ಡ ಕಂಪನಿಯಲ್ಲಿ ದೊಡ್ಡ ಹುದ್ದೆ ಸಿಕ್ಕಿತ್ತು. ಎರಡು ವರ್ಷ ಕಳೆಯುವಷ್ಟರಲ್ಲಿ ರಾಧಮ್ಮನ ಆಸೆಯಂತೆ ಪುಟ್ಟ ಮೊಮ್ಮಗ ಅವರ ತೊಡೆಯ ಮೇಲೆ ಮಲಗಿ ನಗುತ್ತಿದ್ದ. ರಾಕೇಶನ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಇದಕ್ಕೆಲ್ಲ ಕಾರಣನಾದ ಮೋಹನನ ಬಳಿ ಬಂದು ತನ್ನ ಸಂತಸವನ್ನು ಹಂಚಿಕೊಂಡ.

“ಎಲ್ಲಾ ಸರಿ, ಆದರೆ ಮದುವೆಗೆ ನಮ್ಮಮ್ಮ ಹೇಗೆ ಒಪ್ಪಿಕೊಂಡರು ಎಂಬುದೇ ಚಿದಂಬರ ರಹಸ್ಯವಾಗಿದೆ.”

ಅದಕ್ಕೆ ಮೋಹನ್‌ ನಗುತ್ತಾ, “ಎಲ್ಲದಕ್ಕೂ ಕಾರಣ ಈ ಮೋಹನ ಕಣಯ್ಯಾ….” ಎಂದ.

ರಾಕೇಶ್‌ ಆಶ್ಚರ್ಯದಿಂದ ಅದು ಹೇಗೆ ಎಂದು ಕೇಳಲು, ಮೋಹನ್‌ ನಿಧಾನವಾಗಿ ಎಲ್ಲವನ್ನೂ ವಿವರಿಸಿದ.

“ನಾನು ನಿಮ್ಮ ಮನೆಗೆ ಹೋಗಿ ನಿಮ್ಮ ತಾಯಿಯರ ಬಳಿ ಮುಕ್ತವಾಗಿ ಮಾತನಾಡಿದೆ. ಅವರಿಗೆ ಮಯೂರಿ ಅನಾಥ ಹುಡುಗಿ ಎಂಬುದು ಬಹಳ ಚಿಂತೆಗೆ ಗುರಿ ಮಾಡಿತ್ತು. ಅದಕ್ಕೆ ನಾನು ಅವಳು ಅನಾಥಳಿರಬಹುದು, ಆದರೆ ಉತ್ತಮ ಕುಲಕ್ಕೆ ಸೇರಿದವಳು.  ಅವಳ ತಂದೆ ಪುರೋಹಿತರಾಗಿದ್ದರು. ಅವಳ ತಾಯಿ ಹೆರಿಗೆಯಲ್ಲಿ ತೀರಿಕೊಂಡಿದ್ದರಿಂದ ಆತ ಮಗುವನ್ನು ಅನಾಥಾಶ್ರಮಕ್ಕೆ ಕೊಟ್ಟು ತಾವು ವೈರಾಗ್ಯಾಕ್ಕೆ ಒಳಗಾಗಿ ಸನ್ಯಾಸಿಗಳಾಗಿ ಬಿಟ್ಟರು.

“ಹಾಗೆ ಅವಳನ್ನು ಅನಾಥಾಶ್ರಮಕ್ಕೆ ಬಿಡುವಾಗ, ಅವಳು ಹುಟ್ಟಿದ ದಿನಾಂಕ ಹಾಗೂ ಸಮಯವನ್ನು ಅಲ್ಲಿ ದಾಖಲಿಸಿದ್ದರು. ಅದನ್ನು ಪಡೆದುಕೊಂಡು ನಾನು ಒಂದು ಜಾತಕ ಬರೆಸಿದೆ. ಅದನ್ನು ನಿನ್ನ ಜಾತಕಕ್ಕೆ ಹೋಲಿಸಿದಾಗ ಅತ್ಯುತ್ತಮವಾಗಿ ಹೊಂದಾಣಿಕೆ ಆಯಿತು. ಜೊತೆಗೆ ನೀವಿಬ್ಬರೂ ಮದುವೆಯಾದರೆ ನಿಮಗೆ ಉತ್ತಮ ಭವಿಷ್ಯವಿದೆ ಎಂದು ನಿಮ್ಮ ತಾಯಿಗೆ ಗೊತ್ತಿರುವ ಜ್ಯೋತಿಷಿಗಳ ಬಾಯಲ್ಲಿ ಹೇಳಿಸಿದೆ.

“ಇದರಿಂದ ನಿಮ್ಮ ತಾಯಿ ಸಂತೋಷದಿಂದ ಒಪ್ಪಿಕೊಂಡರು. ಇನ್ನು ಮಯೂರಿ ಅಂಗವಿಕಲೆಯಾಗಿರುವುದರಿಂದ ಅವಳಿಗೆ ಸುಲಭವಾಗಿ ಸರ್ಕಾರಿ ಕೆಲಸ ದೊರೆಯುವುದೆಂದು ನಾನೇ ತಿಳಿಸಿದ್ದೆ. ಅದಕ್ಕಾಗಿ ಕೆಲವೊಂದು ವ್ಯಕ್ತಿಗಳನ್ನು ಭೇಟಿಯಾಗಿ ಅವಳಿಗೆ ಕೆಲಸ ಸಿಗುವ ರೀತಿ ನಾನೇ ನೋಡಿಕೊಂಡೆ. ನಿನಗೂ ಕೂಡ ನೀನು ಈಗಿರುವ ಕಂಪನಿಯಲ್ಲಿ ಕೆಲಸ ಸಿಗುವ ಹಾಗೆ ನನ್ನ ಪರಿಚಯದವರ ಮೂಲಕ ಹೇಳಿಸಿ ಅನುಕೂಲ ಮಾಡಿಸಿದೆ.

“ಈಗ ಹೇಳು ಈ ಮೋಹನ್‌, ಕೃಷ್ಣ ಪರಮಾತ್ಮ ತಾನೇ….” ಎಂದು ಜೋರಾಗಿ ನಕ್ಕ.

ಇದೆಲ್ಲ ಕೇಳಿ ಪುಳುಕಿತನಾದ ರಾಕೇಶ್‌, “ನನಗಾಗಿ ಎಷ್ಟೊಂದು ಮಾಡಿದ್ದೀಯಾ….” ಎಂದು ಆತ್ಮೀಯವಾಗಿ ತಬ್ಬಿಕೊಂಡ.

“ಮತ್ತೆ ನೀನು ನನ್ನ ಫ್ರೆಂಡ್‌ ಅಲ್ವಾ…. ಅದಕ್ಕೆ ಎಲ್ಲಾ ಮಾಡಿದೆ….”

“ನೀನು ನನ್ನ ಆಪ್ತಮಿತ್ರ ಅಷ್ಟೇ ಅಲ್ಲ. ಆಪತ್ಬಾಂಧ ಹಾಗೂ ಅನಾಥ ರಕ್ಷಕ ಸಾಕ್ಷಾತ್‌ ಪರಮಾತ್ಮನೇ ಆಗಿರುವೆ…..” ಎಂದು ಗಟ್ಟಿಯಾಗಿ ತಬ್ಬಿಕೊಂಡ.

ಇಬ್ಬರೂ ಗೆಳೆಯರು ಆತ್ಮೀಯವಾಗಿ ಆಲಂಗಿಸಿಕೊಂಡರು. ರಾಕೇಶ್‌ ನ ಕಣ್ಣಲ್ಲಿ ಆನಂದಬಾಷ್ಪ ತುಂಬಿತ್ತು. ಗೆಳೆಯನ ಆದರ್ಶದ ಗುಣಕ್ಕೆ ತಾನೂ ಕೊಂಚ ಸಹಾಯ ಮಾಡಿದೆ ಎನ್ನುವ ತೃಪ್ತಿ ಮೋಹನ್‌ ನ ಮನದಲ್ಲಿ ಮೂಡಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ