ತನ್ನ ಸಂಬಂಧಗಳನ್ನು ತನ್ನ ಇಚ್ಛೆಯಂತೆ ನಿರ್ವಹಿಸುವ ಸ್ವಾತಂತ್ರ್ಯ ಎಲ್ಲಾ ಹೆಣ್ಣುಮಕ್ಕಳಿಗೂ ಇದೆಯೇ….?
ಇಂದು ನಾವು 21ನೇ ಶತಮಾನದಲ್ಲಿ ಬದುಕುತ್ತಿದ್ದೇವೆ. ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮಹಿಳೆಯರು ಗಣನೀಯ ಸಾಧನೆಗಳನ್ನು ಮಾಡುತ್ತಿದ್ದಾರೆ. `ಹೆಣ್ಣು ಅಬಲೆಯಲ್ಲ, ಸಬಲೆ’ ಎಂಬ ಮಾತು ಇಂದು ಸಾಮಾನ್ಯವಾಗಿ ಕೇಳಿಬರುತ್ತಿದೆ. ಆದರೂ, ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯ, ಮಾನಸಿಕ ಹಿಂಸೆ ಹಾಗೂ ಅವರ ಸ್ವಾತಂತ್ರ್ಯದ ಮೇಲಿನ ನಿಯಂತ್ರಣಗಳು ಸಂಪೂರ್ಣವಾಗಿ ಕೊನೆಗೊಂಡಿಲ್ಲ ಎಂಬುದು ವಾಸ್ತವ.
ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ ಮಾತನಾಡುವಾಗ, ನಾವು ಹೆಚ್ಚಾಗಿ ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಮಾತ್ರ ಪರಿಗಣಿಸುತ್ತೇವೆ. ಆದರೆ ಒಬ್ಬ ಮಹಿಳೆಗೆ ನಿಜವಾದ ಸ್ವಾತಂತ್ರ್ಯ ದೊರೆತಿದೆಯೇ ಎಂಬುದನ್ನು ಅಳೆಯಲು ಇವುಗಳಷ್ಟೇ ಸಾಕಾಗುವುದಿಲ್ಲ. ತನ್ನ ಬದುಕಿನ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುವ ಹಕ್ಕು, ತನ್ನ ಭಾವನೆಗಳಿಗೆ ಬೆಲೆ ದೊರೆಯುವುದು ಹಾಗೂ ತನ್ನ ಸಂಬಂಧಗಳನ್ನು ತನ್ನ ಇಚ್ಛೆಯಂತೆ ನಿರ್ವಹಿಸುವ ಅವಕಾಶ ಸ್ವಾತಂತ್ರ್ಯದ ಪ್ರಮುಖ ಭಾಗಗಳಾಗಿವೆ.

ಮನೆಯೊಳಗೆ ಮಹಿಳೆಯ ಸ್ವಾತಂತ್ರ್ಯ : ಇಂದಿಗೂ ಅನೇಕ ಮಹಿಳೆಯರು ಮನೆಯಲ್ಲಿಯೇ ಉಳಿದು ಕುಟುಂಬದ ಒಳಿತಿಗಾಗಿ ತಮ್ಮ ಜೀವನವನ್ನು ಮೀಸಲಿಡುತ್ತಾರೆ. ಮನೆ, ಮಕ್ಕಳು, ಹಿರಿಯರು ಹಾಗೂ ಕುಟುಂಬದ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ತಮ್ಮ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಬದಿಗಿಡುತ್ತಾರೆ. ಸೇರಿದ ಮನೆಯ ಪದ್ಧತಿ, ಸಂಪ್ರದಾಯ ಮತ್ತು ರೀತಿ ರಿವಾಜುಗಳಿಗೆ ಹೊಂದಿಕೊಳ್ಳುವ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ತಮ್ಮದೇ ಆದ ವ್ಯಕ್ತಿತ್ವವನ್ನು ಮರೆತು ಬದುಕುವ ಪರಿಸ್ಥಿತಿಯೂ ಎದುರಾಗುತ್ತದೆ.
ಹಾಗೆಂದ ಮಾತ್ರಕ್ಕೆ ಯಾವ ಮಹಿಳೆಗೂ ಸ್ವಾತಂತ್ರ್ಯವೇ ಇಲ್ಲ ಎಂದು ಹೇಳಲಾಗುವುದಿಲ್ಲ. ಕೆಲವರಿಗೆ ತಮ್ಮ ಬದುಕಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಅವಕಾಶವಿರುತ್ತದೆ. ಕೆಲವರು ತಮ್ಮ ಹಕ್ಕುಗಳನ್ನು ಸ್ವತಃ ಗಳಿಸಿಕೊಂಡಿರುತ್ತಾರೆ. ಆದರೆ ಕುಟುಂಬದ ಪ್ರಮುಖ ಸಂಬಂಧಗಳು ಮತ್ತು ಜವಾಬ್ದಾರಿಗಳ ವಿಚಾರಕ್ಕೆ ಬಂದಾಗ ಅವರ ಸ್ವಾತಂತ್ರ್ಯ ಎಷ್ಟರಮಟ್ಟಿಗೆ ಉಳಿಯುತ್ತದೆ ಎಂಬ ಪ್ರಶ್ನೆ ಮುಖ್ಯವಾಗುತ್ತದೆ.
ಆರ್ಥಿಕ ಸ್ವಾವಲಂಬನೆ ಮಾತ್ರ ಸಾಕೇ? : ಇಂದು ಅನೇಕ ಮಹಿಳೆಯರು ಮನೆಯ ಒಳಗೂ ಹೊರಗೂ ದುಡಿಯುತ್ತಿದ್ದಾರೆ, ಉದ್ಯೋಗ ಮಾಡುತ್ತಿದ್ದಾರೆ. ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಕೆಲವರು ಕುಟುಂಬದ ಪ್ರಮುಖ ಆದಾಯದ ಮೂಲವಾಗಿದ್ದಾರೆ. ಮನೆ ಮತ್ತು ಉದ್ಯೋಗ ಎರಡನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಆದರೂ ಆರ್ಥಿಕವಾಗಿ ಬಲಿಷ್ಠಳಾದ ಮಹಿಳೆಯೂ ತನ್ನ ಇಚ್ಛೆಯಂತೆ ಜೀವನ ನಡೆಸಲು ಸಾಧ್ಯವಾಗದೆ ಇರುವ ಸಂದರ್ಭಗಳಿವೆ.
ಎಷ್ಟೇ ಸಂಪಾದನೆ ಮಾಡಿದರೂ, ಎಷ್ಟೇ ಸಮರ್ಥಳಾಗಿದ್ದರೂ, ತನ್ನ ತಾಯಿ ತಂದೆ ಅಥವಾ ತನ್ನವರಿಗಾಗಿ ಬೇಕಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ಆ ಸ್ವಾತಂತ್ರ್ಯ ಪೂರ್ಣ ಎನಿಸಬಹುದೇ?
ಮದುವೆಯಾದ ನಂತರ ಹೆಣ್ಣು ಗಂಡನ ಮನೆಗೆ ಸೇರಿದಳು, ಅವಳ ಜವಾಬ್ದಾರಿ ಮತ್ತು ಸಂಬಂಧಗಳು ಮುಖ್ಯವಾಗಿ ಗಂಡನ ಮನೆಯವರಿಗೆ ಮಾತ್ರ ಸೀಮಿತ ಎಂಬ ಮನೋಭಾವ ಸಮಾಜದಲ್ಲಿ ಇನ್ನೂ ಸಂಪೂರ್ಣವಾಗಿ ಮಾಯವಾಗಿಲ್ಲ. ಇದು ಸಂಪ್ರದಾಯದ ಹೆಸರಿನಲ್ಲಿ ಮುಂದುವರಿಯುತ್ತಿರುವ ನಿಯಂತ್ರಣವೇ ಅಥವಾ ಸಂಬಂಧಗಳ ಮೇಲಿನ ಸ್ವಾಮಿತ್ವದ ಭಾವನೋವು ಎಂಬುದನ್ನು ಸಮಾಜವೇ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ತಾಯಿ ತಂದೆಯೊಂದಿಗೆ ಸಂಬಂಧದ ಹಕ್ಕು : ಒಬ್ಬ ಮಹಿಳೆ ಸ್ವಾವಲಂಬಿಯಾಗಲು ಅವಳ ತಾಯಿ ತಂದೆ ಹಗಲುರಾತ್ರಿ ಶ್ರಮಿಸುತ್ತಾರೆ. ಅವಳ ಶಿಕ್ಷಣ, ಭವಿಷ್ಯ ಮತ್ತು ಕನಸುಗಳಿಗಾಗಿ ಅನೇಕ ತ್ಯಾಗಗಳನ್ನು ಮಾಡಿರುತ್ತಾರೆ. ಆ ತಾಯಿ ತಂದೆಯರು ಇಳಿ ವಯಸ್ಸಿಗೆ ಬಂದಾಗ ಅವರನ್ನು ಪ್ರೀತಿಯಿಂದ ನೋಡಿಕೊಳ್ಳುವುದು, ಅಗತ್ಯವಿದ್ದರೆ ತಮ್ಮೊಂದಿಗೆ ಇರಿಸಿಕೊಳ್ಳುವುದು ಅಥವಾ ಅವರ ಆರೈಕೆಯ ಕುರಿತು ನಿರ್ಧಾರ ತೆಗೆದುಕೊಳ್ಳುವುದು ಮಗಳಿಗೂ ಸಹಜವಾದ ಹಕ್ಕಾಗಬೇಕು.
ಆದರೆ ಮದುವೆಯಾದ ನಂತರ ತನ್ನ ತಾಯಿ ತಂದೆಯರ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಎಲ್ಲ ಮಹಿಳೆಯರಿಗೂ ಸಮಾನವಾಗಿ ದೊರೆಯುತ್ತದೆಯೇ? ಈ ಪ್ರಶ್ನೆಗೆ ಸಮಾಜ ಪ್ರಾಮಾಣಿಕವಾಗಿ ಉತ್ತರಿಸಬೇಕಾಗಿದೆ.
ಒಬ್ಬ ಮಗ ತನ್ನ ತಾಯಿ ತಂದೆಯರನ್ನು ನೋಡಿಕೊಳ್ಳುವುದು ಸಹಜವಾದ ಕರ್ತವ್ಯವೆಂದು ಪರಿಗಣಿಸುವ ಸಮಾಜ, ಮಗಳು ಅದೇ ಜವಾಬ್ದಾರಿಯನ್ನು ನಿರ್ವಹಿಸಲು ಮುಂದಾದಾಗ ಅದನ್ನು ಏಕೆ ಕೆಲವೊಮ್ಮೆ ಸಮಸ್ಯೆಯಾಗಿ ನೋಡುತ್ತದೆ?
ಮಹಿಳೆಗೆ ತನ್ನ ತಾಯಿ ತಂದೆಯೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳುವ ಮತ್ತು ಅವರಿಗಾಗಿ ಜವಾಬ್ದಾರಿ ವಹಿಸುವ ಸ್ವಾತಂತ್ರ್ಯ ದೊರೆತಾಗ ಮಾತ್ರ ಆಕೆಯ ಸ್ವಾತಂತ್ರ್ಯಕ್ಕೆ ಸಂಪೂರ್ಣ ಅರ್ಥ ಸಿಗುತ್ತದೆ.

ಸಂಬಂಧಗಳು ಹಣಕ್ಕಿಂತ ದೊಡ್ಡವು : ಇಂದು ಸಂಬಂಧಗಳು ಕೇವಲ ಆರ್ಥಿಕ ಸಹಾಯಕ್ಕೆ ಸೀಮಿತವಾಗುತ್ತಿರುವುದು ಕಳವಳಕಾರಿ ಸಂಗತಿ. ಹಣ ನೀಡಿದರೆ ಕರ್ತವ್ಯ ಮುಗಿಯಿತು ಎಂಬ ಮನೋಭಾವ ಹೆಚ್ಚುತ್ತಿರುವ ಸಂದರ್ಭದಲ್ಲಿ ಪ್ರೀತಿ, ಆರೈಕೆ ಮತ್ತು ಮಾನವೀಯ ಸ್ಪರ್ಶದ ಅಗತ್ಯ ಮತ್ತಷ್ಟು ಸ್ಪಷ್ಟವಾಗುತ್ತಿದೆ. ಎಲ್ಲಾ ಸೌಲಭ್ಯಗಳಿದ್ದರೂ ತಮ್ಮವರೊಂದಿಗೆ ಬದುಕುವ ಅವಕಾಶವಿಲ್ಲದ ಪರಿಸ್ಥಿತಿ ಯಾರಿಗೂ ಬರಬಾರದು.
ಅತಿಯಾದ ನಿಯಂತ್ರಣ, ಒತ್ತಡ ಮತ್ತು ಸಂಬಂಧಗಳಲ್ಲಿ ಹಸ್ತಕ್ಷೇಪ ಮಾಡುವ ಮನೋಭಾವಗಳು ಕುಟುಂಬದ ಒಳಗಿನ ನೆಮ್ಮದಿಯನ್ನು ಹಾಳು ಮಾಡಬಹುದು. ಹೊಂದಾಣಿಕೆಯ ಹೆಸರಿನಲ್ಲಿ ಒಬ್ಬ ವ್ಯಕ್ತಿಯ ಭಾವನೆಗಳನ್ನು ನಿರಂತರವಾಗಿ ಕಡೆಗಣಿಸಿದರೆ, ಒಂದು ಹಂತದಲ್ಲಿ ಆ ವ್ಯಕ್ತಿ ತನ್ನದೇ ಆದ ಪ್ರತ್ಯೇಕ ಬದುಕಿನತ್ತ ಮುಖ ಮಾಡುವ ಸಾಧ್ಯತೆಯೂ ಇರುತ್ತದೆ. ಇದರ ಪರಿಣಾಮವಾಗಿ ಕುಟುಂಬದಲ್ಲಿ ಅಂತರ, ವೈವಾಹಿಕ ಭಿನ್ನಾಭಿಪ್ರಾಯ, ವಿಚ್ಛೇದನ, ಏಕಪೋಷಕತ್ವ ಮತ್ತು ಮಾನಸಿಕ ಒತ್ತಡದಂತಹ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ.
`ಇವಳು ನಮಗಷ್ಟೇ‘ ಎಂಬ ಮನೋಭಾವ ಬದಲಾಗಬೇಕು : ಕೆಲವು ಕುಟುಂಬಗಳಲ್ಲಿ ಮಹಿಳೆಯನ್ನು ಕೇವಲ ಮನೆಯ ಜವಾಬ್ದಾರಿ, ದುಡಿಮೆ ಮತ್ತು ಸೇವೆಗೆ ಮಾತ್ರ ಸೀಮಿತಿಗೊಳಿಸುವ ಮನೋಭಾವ ಕಾಣಿಸುತ್ತದೆ.
`ಇವಳು ನಮಗಷ್ಟೇ’ ಎಂಬ ಸ್ವಾಮಿತ್ವದ ಭಾವನೆ ಒಂದು ಕಡೆ ಇದ್ದರೆ, `ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ,’ ಎಂಬ ಹಳೆಯ ಧೋರಣೆ ಇನ್ನೊಂದು ಕಡೆ ಇದೆ. ಈ ಎರಡೂ ಮನೋಭಾವಗಳ ನಡುವೆ ಮಹಿಳೆಯೊಬ್ಬಳ ವೈಯಕ್ತಿಕ ಭಾವನೆ, ಸಂಬಂಧಗಳು ಮತ್ತು ಸ್ವಾತಂತ್ರ್ಯಗಳು ಸಿಲುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಮಹಿಳೆ ಸಹ ಒಬ್ಬ ವ್ಯಕ್ತಿ. ಅವಳಿಗೂ ತನ್ನ ತಾಯಿ ತಂದೆ, ಸಹೋದರ ಸಹೋದರಿ, ಸ್ನೇಹಿತರು ಮತ್ತು ತನ್ನದೇ ಆದ ಭಾವನಾತ್ಮಕ ಜಗತ್ತು ಇದೆ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕಾಗಿದೆ. ಸಂಬಂಧಗಳು ಸಾಮಿತ್ವದಿಂದಲ್ಲ, ಪ್ರೀತಿ ಮತ್ತು ಗೌರವದಿಂದ ಉಳಿಯುತ್ತವೆ.
ವಿಶಾಲ ಮನೋಭಾವ ಅಗತ್ಯ : ಇಂದಿನ ಸಮಾಜಕ್ಕೆ ಅಗತ್ಯವಿರುವುದು ವಿಶಾಲ ಮನೋಭಾವ ಮತ್ತು ಪರಸ್ಪರ ಗೌರವ. `ನಾವು ಬದುಕಬೇಕು, ನಮ್ಮೊಂದಿಗೆ ಬದುಕುವವರಿಗೂ ಅವರದೇ ಆದ ರೀತಿಯಲ್ಲಿ ಬದುಕಲು ಅವಕಾಶ ನೀಡಬೇಕು,’ ಎಂಬ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು.
ಕುಟುಂಬ ಎಂದರೆ, ಒಬ್ಬರ ಮೇಲೊಬ್ಬರು ನಿಯಂತ್ರಣ ಹೇರುವ ವ್ಯವಸ್ಥೆಯಾಗಬಾರದು. ಪರಸ್ಪರ ಬೆಂಬಲಿಸುವ, ಗೌರವಿಸುವ ಮತ್ತು ಕಷ್ಟದ ಸಮಯದಲ್ಲಿ ಜೊತೆಯಾಗುವ ಸಂಬಂಧವಾಗಬೇಕು. ಹೆಣ್ಣಿನ ಸಂಬಂಧಗಳನ್ನು ಕಡಿತಗೊಳಿಸುವ ಮೂಲಕ ಅಥವಾ ಅವಳ ಭಾವನೆಗಳನ್ನು ನಿಯಂತ್ರಿಸುವ ಮೂಲಕ ಕುಟುಂಬದ ಏಕತೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಬದಲಾಗಿ ಅವಳ ಸಂಬಂಧಗಳಿಗೂ ಗೌರವ ನೀಡಿದಾಗ ಕುಟುಂಬದ ಬಂಧಗಳು ಮತ್ತಷ್ಟು ಗಟ್ಟಿಯಾಗಬಹುದು.
ಮೌನ ಯಾವಾಗಲೂ ಪರಿಹಾರವಲ್ಲ : `ನಾವು ಏನು ಕೊಡುತ್ತೇವೋ ಅದು ದುಪ್ಪಟ್ಟಾಗಿ ಹಿಂದಿರುಗುತ್ತದೆ’ ಎಂಬ ಮಾತು ಜೀವನದ ಎಲ್ಲ ಸಂದರ್ಭಗಳಲ್ಲಿಯೂ ನಿಜವಾಗುವುದಿಲ್ಲ. ಕೆಲವೊಮ್ಮೆ ಮಹಿಳೆ ಎಷ್ಟೇ ಪ್ರೀತಿ ನೀಡಿದರೂ, ಎಷ್ಟೇ ತ್ಯಾಗ ಮಾಡಿದರೂ, ಅದಕ್ಕೆ ಪ್ರತಿಯಾಗಿ ಪ್ರೀತಿ, ಗೌರವ ಮತ್ತು ಕಾಳಜಿ ದೊರೆಯದೇ ಇರಬಹುದು. ತನ್ನ ಮನೆಯಲ್ಲಿಯೇ ಪರಕೀಯತೆಯನ್ನು ಅನುಭವಿಸುವ ಸಂದರ್ಭ ಎದುರಾಗಬಹುದು.
ಅಂತಹ ಸಂದರ್ಭಗಳಲ್ಲಿ ನಿರಂತರವಾಗಿ ಮೌನವಾಗಿರುವುದು ಅಥವಾ ಎಲ್ಲವನ್ನೂ ಸಹಿಸಿಕೊಂಡು ಹೋಗುವುದೇ ಪರಿಹಾರವಲ್ಲ. ತನ್ನ ಬದುಕಿನ ಕೆಲವು ಪ್ರಮುಖ ವಿಚಾರಗಳಲ್ಲಿ ಸ್ಪಷ್ಟವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯ ಮಹಿಳೆಗೆ ಇರಬೇಕು. ಆಗುತ್ತದೆ ಆಗುವುದಿಲ್ಲ, ಬೇಕು ಬೇಡ ಎಂಬುದನ್ನು ಸಂದರ್ಭಕ್ಕೆ ತಕ್ಕಂತೆ ಸ್ಪಷ್ಟವಾಗಿ ಹೇಳುವ ಅಗತ್ಯ ಇದೆ. ಸ್ವಾತಂತ್ರ್ಯ ಎಂದರೆ ಸಂಬಂಧಗಳನ್ನು ತ್ಯಜಿಸುವುದಲ್ಲ. ತನ್ನ ಸಂಬಂಧಗಳನ್ನು ಪ್ರೀತಿ, ಗೌರವ ಮತ್ತು ತನ್ನ ಇಚ್ಛೆಯೊಂದಿಗೆ ನಿರ್ವಹಿಸುವ ಹಕ್ಕು ಪಡೆಯುವುದೇ ನಿಜವಾದ ಸ್ವಾತಂತ್ರ್ಯ.
ಕೊನೆಯ ಮಾತು : ಮಹಿಳೆಯ ಸ್ವಾತಂತ್ರ್ಯವನ್ನು ಕೇವಲ ಆರ್ಥಿಕ ಸ್ವಾವಲಂಬನೆಯ ಅಳತೆಯಲ್ಲಿ ಅಳೆಯಬಾರದು. ತನ್ನ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು, ತನ್ನ ತಾಯಿತಂದೆಯೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳುವ ಅವಕಾಶ, ತನ್ನವರಿಗಾಗಿ ಜವಾಬ್ದಾರಿ ವಹಿಸುವ ಸ್ವಾತಂತ್ರ್ಯ ಮತ್ತು ತನ್ನ ಭಾವನೆಗಳಿಗೆ ಗೌರವ ದೊರೆಯುವುದು…. ಇವೆಲ್ಲ ಮಹಿಳೆಯ ಸಂಪೂರ್ಣ ಸ್ವಾತಂತ್ರ್ಯದ ಭಾಗಗಳಾಗಿವೆ.
ಒಬ್ಬ ಮಹಿಳೆ ಮದುವೆಯಾದ ನಂತರ ತನ್ನ ಮೂಲ ಸಂಬಂಧಗಳನ್ನು ಕಳೆದುಕೊಳ್ಳಬೇಕಾಗಿಲ್ಲ. ಹೊಸ ಸಂಬಂಧಗಳನ್ನು ಸ್ವೀಕರಿಸುವುದು ಎಂದರೆ ಹಳೆಯ ಸಂಬಂಧಗಳನ್ನು ತ್ಯಜಿಸುವುದಲ್ಲ. ಕುಟುಂಬಗಳು ಇದನ್ನು ಅರ್ಥ ಮಾಡಿಕೊಂಡು ಪರಸ್ಪರ ಗೌರವ ಮತ್ತು ವಿಶಾಲ ಮನೋಭಾವವನ್ನು ಬೆಳೆಸಿಕೊಂಡಾಗ ಮಾತ್ರ ಸಂಬಂಧಗಳ ನಿಜವಾದ ಮೌಲ್ಯ ಹೆಚ್ಚುತ್ತದೆ.
ಹೆಣ್ಣಿಗೆ ತನ್ನ ಬದುಕನ್ನು ಆಯ್ಕೆ ಮಾಡುವಾಗ ಸ್ವಾತಂತ್ರ್ಯ ಮಾತ್ರವಲ್ಲ, ತನ್ನ ಸಂಬಂಧಗಳನ್ನು ಪ್ರೀತಿ ಮತ್ತು ಗೌರವದಿಂದ ತನ್ನ ಇಚ್ಛೆಯಂತೆ ನಿರ್ವಹಿಸುವ ಸ್ವಾತಂತ್ರ್ಯ ದೊರೆಯಬೇಕು. ಅಂದಾಗ ಮಾತ್ರ `ಹೆಣ್ಣು ಸ್ವತಂತ್ರಳು’ ಎಂಬ ಮಾತಿಗೆ ನಿಜವಾದ ಅರ್ಥ ದೊರೆಯುತ್ತದೆ.
– ಅನುಪಮಾ ರಂಗನಾಥ್





