45 ಡಿಗ್ರಿ ತಾಪಮಾನದಲ್ಲೂ ಶ್ರೀಗಂಧದ ಮರಗಳನ್ನು ಬೆಳೆಯಬಹುದೆಂಬ ಆತ್ಮವಿಶ್ವಾಸವನ್ನು ರೈತರಲ್ಲಿ ಮೂಡಿಸಿದರು ಕವಿತಾ ಮಿಶ್ರಾ. ಅದರ ಜೊತೆಗೆ ತೋಟಗಾರಿಕೆ, ಹೈನುಗಾರಿಕೆ, ನರ್ಸರಿ, ಜೇನು ಕೃಷಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಅವರು ನಿಜವಾದ ಕೃಷಿ ಸಾಧಕಿ.
ಕವಿತಾ ಮಿಶ್ರಾ ಕೃಷಿ ಕ್ಷೇತ್ರದ ಅಪರೂಪದ ಸಾಧಕಿ. ಬಿಸಿಲು ನಾಡು ಅದರಲ್ಲೂ 45 ಡಿಗ್ರಿ ತಾಪಮಾನದಲ್ಲಿ ಶ್ರೀಗಂಧದ ಕೃಷಿಯನ್ನು ಮಾಡಬಹುದು ಎಂಬ ಆತ್ಮವಿಶ್ವಾಸವನ್ನು ರೈತರಲ್ಲಿ ಹುಟ್ಟು ಹಾಕಿದರು.
ಈ ರೀತಿಯ ವಿಶಿಷ್ಟ ಸಾಧನೆ ಮಾಡಲು ಕವಿತಾ ಕೃಷಿ ವಿಶ್ವವಿದ್ಯಾಲಯದಲ್ಲಿ ಪದವಿಯನ್ನೇನೂ ಪಡೆದಿಲ್ಲ! ಹೌದು ಇದು ನಿಜ. ಕಂಪ್ಯೂಟರ್ ಎಂಜಿನಿಯರಿಂಗ್ ಪದವಿಧರೆಯೊಬ್ಬಳು ಕೃಷಿ ಕ್ಷೇತ್ರಕ್ಕೆ ಬಂದು ಅದರ ದಿಕ್ಕುದೆಸೆಯನ್ನೇ ಬದಲಿಸಿದ್ದು ಮಾತ್ರ ಅಚ್ಚರಿಯ ಸಂಗತಿಯೇ ಸರಿ.
ಮಲೆನಾಡಿನಿಂದ ಬಿಸಿಲು ನಾಡಿಗೆ
ಕವಿತಾ ಹುಟ್ಟಿ ಬೆಳೆದದ್ದು, ಮಲೆನಾಡ ಸೆರಗಿನ ಧಾರವಾಡದಲ್ಲಿ. ಕಂಪ್ಯೂಟರ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದ ಅವರಿಗೆ ಬೆಂಗಳೂರಿಗೆ ಹೋಗಿ ಯಾವುದಾದರೊಂದು ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡಬೇಕೆಂಬ ಅಪೇಕ್ಷೆ ಇತ್ತು. ಆದರೆ ಆದದ್ದೇ ಬೇರೆ.
ಮನೆಯವರು ಆಗಲೇ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕವಿತಾಳ ಗ್ರಾಮದ ಯುವಕನ ಜೊತೆಗೆ ಮದುವೆ ಫಿಕ್ಸ್ ಮಾಡಿಬಿಟ್ಟಿದ್ದರು. ಮನೆಯವರ ಅಪೇಕ್ಷೆಗೆ ಕವಿತಾ ವಿರೋಧವನ್ನೇನೂ ವ್ಯಕ್ತಪಡಿಸಲಿಲ್ಲ. ಮದುವೆಯ ನಂತರವಾದರೂ ಅವರನ್ನು ಒಪ್ಪಿಸಿ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗ ಮಾಡಬೇಕೆಂಬ ತುಡಿತ ಅವರ ಒಳಮನಸ್ಸಿನಲ್ಲಿ ಇದ್ದೇ ಇತ್ತು. ಮದುವೆ ಮಾಡಿಕೊಂಡು ಹೋದ ಬಳಿಕ ಅಲ್ಲಿ ಹೆಣ್ಣುಮಕ್ಕಳು ಮನೆಯಿಂದ ಹೊರಗಡೆ ಕೆಲಸಕ್ಕೆ ಹೋಗಬಾರದು ಎಂಬ ಅಲಿಖಿತ ನಿಯಮ ಇರುವುದು ಅವರ ಗಮನಕ್ಕೆ ಬಂತು. ಅದನ್ನು ಕೂಡ ಅವರು ವಿರೋಧಿಸಲಿಲ್ಲ.
ಗಂಡನ ಮನೆಯ ಕುಟುಂಬಕ್ಕೆ ಸಾಕಷ್ಟು ಕೃಷಿ ಜಮೀನೇನೋ ಇತ್ತು. ಆದರೆ ಅವರಲ್ಲಿ ಸಜ್ಜೆ, ಶೇಂಗಾ, ಜೋಳ ಮಾತ್ರ ಬೆಳೆಯಲಾಗುತ್ತಿತ್ತು. ಅದು ಕುಟುಂಬಕ್ಕಷ್ಟೇ ಸಾಲುತ್ತಿತ್ತು. ಖರ್ಚು ಮಾಡಿದಷ್ಟು ಉತ್ಪನ್ನ ಕೂಡ ದೊರಕುತ್ತಿರಲಿಲ್ಲ. ಹೀಗಾಗಿ ಅಲ್ಲಿ ಕೃಷಿ ಎನ್ನುವುದು ನಷ್ಟದ ಕ್ಷೇತ್ರ ಎಂದೇ ಪರಿಗಣಿಸಲ್ಪಟ್ಟಿತ್ತು.
ಇಂತಹ ಸ್ಥಿತಿಯಲ್ಲಿ ಕವಿತಾ ಮನಸ್ಸಿನಲ್ಲಿ ಈ ಬರಡು ಜಮೀನಿನಲ್ಲಿ ತಾನು ಏನಾದರೂ ಸಾಧಿಸಿ ತೋರಿಸಲೇಬೇಕೆಂಬ ಛಲ ಮೂಡಿತ್ತು. ತವರುಮನೆ ಧಾರವಾಡದಲ್ಲಿ ಹಲವು ಕಡೆ ಮನೆಗಳೆದುರು ಶ್ರೀಗಂಧದ ಮರ, ಹುಣಿಸೆಹಣ್ಣಿನ ಮರಗಳನ್ನು ಬೆಳೆಸಿರುವುದು ಅವರ ಗಮನಕ್ಕೆ ಬಂದಿತ್ತು. ಅದನ್ನೇ ಪತಿಯ ಊರು ಕವಿತಾಳದ ಜಮೀನಿನಲ್ಲಿ ಅನುಷ್ಠಾನಕ್ಕೆ ತರಲು ಅವರು ಪಣ ತೊಟ್ಟರು.
ಬರಡು ಜಮೀನು ಫಲವತ್ತಾಯ್ತು!
ಪತಿಯ ಹೆಸರಿನಲ್ಲಿದ್ದ ಜಮೀನು ಫಲವತ್ತಾದ ಜಮೀನಾಗಿರದೇ, ಬಂಜರು ಭೂಮಿಯಾಗಿತ್ತು. ಅಲ್ಲಿ ನೀರಿನ ವ್ಯವಸ್ಥೆ ಕೂಡ ಇರಲಿಲ್ಲ. ಹೀಗಾಗಿ ಆ ಜಮೀನಿನಲ್ಲಿ ಏನಾದರೂ ಬೆಳೆ ಬೆಳೆಯಬೇಕೆಂದುಕೊಳ್ಳುವುದು ಕೂಡ ಹುಚ್ಚು ಸಾಹಸವೇ ಆಗಿತ್ತು. ಆದರೆ ಕವಿತಾರಲ್ಲಿ ಮಾತ್ರ ಅಂತಹ ಬರಡು ಜಮೀನಿನಲ್ಲೂ ಏನಾದರೂ ಬೆಳೆ ತೆಗೆಯಲೇಬೇಕೆಂಬ ಛಲದ ಮೊಳಕೆ ಆಗಲೇ ಬೆಳೆದು ನಿಂತಿತ್ತು. ಅವರ ಆ ಸಾಹಸಕ್ಕೆ ಪತಿ ಕೂಡ ಕೈ ಜೋಡಿಸಿದರು. ಮದುವೆಗೆ ಹಾಕಿದ್ದ ಬಂಗಾರದ ಆಭರಣಗಳನ್ನೆಲ್ಲ ಮಾರಿ ತಮ್ಮ ಜಮೀನಿನಲ್ಲಿ ಒಂದು ಕೊಳವೆ ಬಾವಿ ತೋಡಿಸಿದರು. ಅಲ್ಲಿ ಕೇವಲ ಒಂದೂವರೆ ಇಂಚಿನಷ್ಟು ನೀರಿನ ಲಭ್ಯತೆ ಮಾತ್ರ ಇತ್ತು. ಅಷ್ಟು ಅತ್ಯಲ್ಪ ಪ್ರಮಾಣದ ನೀರನ್ನು ಬಳಸಿಕೊಂಡು ಅವರು ಜಮೀನನ್ನು ಹದಗೊಳಿಸಿ ನಿಯಮಿತ ಬೆಳೆಗಳ ಬದಲು ಉಳ್ಳಾಗಡ್ಡಿ, ದಾಳಿಂಬೆ ಮುಂತಾದವುಗಳನ್ನು ಬೆಳೆದರು. ಆದರೆ ಅದರಲ್ಲಿ ಹೇಳಿಕೊಳ್ಳುವಂತಹ ಲಾಭವೇನೂ ಸಿಗಲಿಲ್ಲ. ಆದರೂ ಕವಿತಾ ಧೈರ್ಯಗುಂದಲಿಲ್ಲ.
ಕೃಷಿ ವಿಧಾನಗಳ ಬಗೆಗೆ ಹೆಸರಾಂತ ಲೇಖಕರೊಬ್ಬರು ಬರೆದ ಶೂನ್ಯ ಬಂಡವಾಳ ಹಾಗೂ ಅರಣ್ಯ ಕೃಷಿಯ ಕುರಿತ ಪುಸ್ತಕಗಳನ್ನು ಓದಿ ಸಾಕಷ್ಟು ಪ್ರಭಾವಿತರಾಗಿದ್ದಲ್ಲದೆ, ಕೃಷಿ ವಿಜ್ಞಾನಿಗಳ ಸಲಹೆ ಪಡೆದು ತಮ್ಮ ಜಮೀನನ್ನು ಅದರ ಪ್ರೋಗ್ರಾಂ ಶಾಖೆಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದರು.
ಕೃಷಿ ತಜ್ಞರ ಸಲಹೆಯ ಮೇರೆಗೆ ತಮ್ಮ 8 ಎಕರೆ ಜಮೀನಿನಲ್ಲಿ ಶ್ರೀಗಂಧದ ಸಸಿಗಳನ್ನು ನೆಡಲು ಸಿದ್ಧತೆ ಆರಂಭಿಸಿದರು. ಅದಕ್ಕಾಗಿ ಅವರು ಸೂಕ್ತ ತರಬೇತಿ ಕೂಡ ಪಡೆದುಕೊಂಡಿದ್ದರು. ಶ್ರೀಗಂಧ ಒಂದು ಪರಾವಲಂಬಿ ಗಿಡ. ಬೇರೊಂದು ಗಿಡದ ಆಶ್ರಯದಲ್ಲಿ ಬೆಳೆಯುತ್ತ ಹೋಗುತ್ತದೆ. ಶ್ರೀಗಂಧದ ಸಸಿಯೊಂದು ಮರವಾಗಿ ಬೆಳೆದು ಗಂಧದ ಉತ್ಪನ್ನ ದೊರಕಲು 12-15 ವರ್ಷ ಕಾಯಲೇಬೇಕು.
ಹಣ್ಣಿನ ಫಸಲು ಲಾಭದ ಹೊನಲು
ಕವಿತಾ ತಮ್ಮ ಜಮೀನಿನಲ್ಲಿ 2500 ಶ್ರೀಗಂಧದ ಸಸಿಗಳನ್ನು ನೆಟ್ಟರು. ಅವು ಉತ್ಪನ್ನ ಕೊಡುವ ತನಕ ಏನಾದರೂ ಬೆಳೆ ಬೆಳೆಯಬೇಕೆಂಬ ತೀರ್ಮಾನಕ್ಕೆ ಬಂದ ಅವರು ಅದರ ಜೊತೆ ಜೊತೆಗೆ 600 ಪೇರಲ, 600 ಸೀತಾಫಲ, 600 ಮಾವಿನ ಸಸಿಗಳನ್ನು ನೆಟ್ಟಿದ್ದರು.
100 ಹುಣಿಸೆ, 100 ಕರಿಬೇವು, 100 ನೇರಳೆ, 100 ಬೆಟ್ಟದ ನೆಲ್ಲಿಕಾಯಿ, 100 ನಿಂಬೆ, 100 ಬಾರಿ ಹಣ್ಣಿನ ಗಿಡ, 100 ಮೂಸಂಬಿ, 100 ತೆಂಗು ಹಾಗೂ 1000 ಸಾಗುವಾನಿ ಸಸಿಗಳನ್ನು ನೆಟ್ಟಿದ್ದರು.
ಶ್ರೀಗಂಧದ ಸಸಿಗಳ ಜೊತೆ ನೆಟ್ಟ ಹಣ್ಣಿನ ಗಿಡಗಳು ಈಗ ಉತ್ಪನ್ನ ಕೊಡಲಾರಂಭಿಸಿವೆ. ಬರಡು ಜಮೀನಿನಲ್ಲಿ ಕವಿತಾ ಹಾಕಿದ ಶ್ರಮದ ಬಂಡವಾಳಕ್ಕೆ ಈಗ ಪ್ರತಿಫಲ ಬರಲು ಶುರುವಾಗಿದೆ.
ಪಶು ಸಂಗೋಪನೆ ಕೋಳಿ ಸಾಕಾಣಿಕೆ
ಶೂನ್ಯ ಬಂಡವಾಳದಲ್ಲಿ ತೋಟಗಾರಿಕೆ, ಅರಣ್ಯ ಕೃಷಿಗೆ ಸಹಾಯ ಎಂಬಂತೆ ಕವಿತಾ, ತಮ್ಮ ತೋಟದ ಮನೆಯಲ್ಲಿ ಹಲವು ಹಸು, ಮೇಕೆ, ಕೋಳಿಗಳನ್ನು ಸಾಕಿದ್ದಾರೆ. ಹಸುವಿನ ಹಾಲಿಗಿಂತ ಮುಖ್ಯವಾಗಿ ಅವುಗಳಿಂದ ಲಭಿಸುವ ಗೋಮೂತ್ರ ಹಾಗೂ ಸಗಣಿ ಸಾವಯವ ಕೃಷಿಯ ಕನಸನ್ನು ನನಸು ಮಾಡಲು ನೆರವಾಗಿವೆ.
ಕವಿತಾ ತಮ್ಮ ಜಮೀನಿನಲ್ಲಿ ತೀರಾ ಅತ್ಯಗತ್ಯ ಸಂದರ್ಭದಲ್ಲಿ ಮಾತ್ರ ರಾಸಾಯನಿಕ ಗೊಬ್ಬರ ಬಳಸುತ್ತಾರೆ. ಕ್ರಿಮಿನಾಶಕ ಔಷಧಿಗಳನ್ನಂತೂ ಬಳಸುವುದೇ ಇಲ್ಲ. ಬೇವಿನ ಹಿಂಡಿ ಹಾಗೂ ದಶಪರಣಿ ಎಲೆಗಳನ್ನು ನೀರಲ್ಲಿ ಕುದಿಸಿ ಅದನ್ನೇ ಕ್ರಿಮಿನಾಶಕವಾಗಿ ಬಳಸುತ್ತಾರೆ.
ಸಸಿಗಳ ತಯಾರಿಕೆ
ಕವಿತಾ ಪರಿಶ್ರಮ ಜೀವಿ, ವಿಚಾರವಾದಿ. ಅವರ ತಲೆಯಲ್ಲಿ ಯಾವಾಗಲೂ ಹೊಸ ಹೊಸ ವಿಚಾರಗಳು ಹೊಳೆಯುತ್ತಲೇ ಇರುತ್ತವೆ. ತಮ್ಮ ಜಮೀನಿಗೆ ನೆಡಲು ಅಗತ್ಯವಿರುವ ಸಸಿಗಳನ್ನು ತಮ್ಮದೇ ತೋಟದ ಆವರಣದಲ್ಲಿ ಸಿದ್ಧಪಡಿಸಿಕೊಳ್ಳಲು ನರ್ಸರಿಯೊಂದನ್ನು ಶುರು ಮಾಡಿದ್ದಾರೆ.
ಉತ್ಕೃಷ್ಟ ದರ್ಜೆಯ ಶ್ರೀಗಂಧದ ಸಸಿಗಳು ಸೇರಿದಂತೆ ಬೇರೆ ಬೇರೆ ಹಣ್ಣಿನ ಸಸಿಗಳನ್ನು ಸಿದ್ಧಪಡಿಸಿ ಅವುಗಳನ್ನು ಬೇರೆ ರೈತರಿಗೆ ಪೂರೈಸುತ್ತಿದ್ದಾರೆ.
ಶ್ರೀಗಂಧದ ಸಸಿಗಳು ನೆರೆಯ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಛತ್ತೀಸ್ಗಢದ ರಾಯಪುರದ ತನಕ ತಲುಪಿವೆ. ಇದರ ಜೊತೆಗೆ ಶ್ರೀಗಂಧದ ಉತ್ಕೃಷ್ಟ ದರ್ಜೆಯ ಬೀಜಗಳನ್ನು ಕೂಡ ಉತ್ಪಾದಿಸಿ ರೈತರಿಗೆ ಮಾರಾಟ ಮಾಡುತ್ತಿದ್ದಾರೆ.
ಹಣ್ಣಿನ ಉತ್ಪನ್ನಗಳ ವಿಲೇವಾರಿ
ಕವಿತಾ ಅವರ ತೋಟದಲ್ಲಿ ಬೆಳೆದ ಮಾವು, ಪೇರಲ, ನೇರಳೆ, ಸೀತಾಫಲ, ಹುಣಿಸೆ ಮುಂತಾದವುಗಳನ್ನು ಖರೀದಿಸಲು ವ್ಯಾಪಾರಿಗಳೇ ಅವರ ತೋಟಕ್ಕೆ ಬರುತ್ತಾರೆ. ಇದರ ಹೊರತಾಗಿ ಕವಿತಾ ತಮ್ಮ ತೋಟದ ಸಮೀಪ ಇರುವ ಹೆದ್ದಾರಿ ಪಕ್ಕದಲ್ಲಿ ಚಿಕ್ಕ ಟೆಂಟ್ ಹಾಕಿ ಅಲ್ಲಿ ಸಾವಯವ ರೀತಿಯಲ್ಲಿ ಬೆಳೆದ ಹಣ್ಣುಗಳನ್ನು ಮಾರಾಟ ಮಾಡಿಸುತ್ತಾರೆ. ಇದರಿಂದ ಒಳ್ಳೆಯ ಲಾಭ ಅವರ ಕೈ ಸೇರುತ್ತಿದೆ. ತೋಟದಲ್ಲಿ ಬೆಳೆದ ಬೆಟ್ಟದ ನೆಲ್ಲಿಕಾಯಿಯಿಂದ ಅಡಿಕೆ ಬೀಜ ಸಿದ್ಧಪಡಿಸಿ ವ್ಯಾಪಾರಿಗಳಿಗೆ ಕಳಿಸಿಕೊಡುತ್ತಾರೆ.
ಹಲವು ಕುಟುಂಬಗಳಿಗೆ ಉದ್ಯೋಗ
ಕವಿತಾರ ತೋಟ ಹಲವು ಕುಟುಂಬಗಳಿಗೆ ಖಾಯಂ ಉದ್ಯೋಗ ನೀಡಿದೆ. ನಾಲ್ಕು ಕುಟುಂಬದ 10 ಜನರು ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ತಮ್ಮ ತೋಟದಲ್ಲಿ ಅವರಿಗೆ ಮನೆಗಳನ್ನು ಕಟ್ಟಿಸಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಅವರ ಉತ್ಪನ್ನಗಳನ್ನು ಬೇರೆ ಬೇರೆ ನಗರಗಳಿಗೆ ಸಾಗಿಸಲು ಹಲವು ವಾಹನ ಚಾಲಕರಿಗೂ ಅಪರೋಕ್ಷ ರೀತಿಯಲ್ಲಿ ಉದ್ಯೋಗ ಲಭಿಸಿದೆ.
ಶ್ರೀಗಂಧದ ಮರಗಳಿಗೆ ಸಂರಕ್ಷಣೆ
ಕವಿತಾರ ತೋಟದಲ್ಲಿ ಸುಮಾರು 2500 ಶ್ರೀಗಂಧದ ಮರಗಳಿದ್ದು, ಅವುಗಳನ್ನು ಕಳ್ಳರಿಂದ ರಕ್ಷಿಸಲು `ಇ-ಪ್ರೊಟೆಕ್ಷನ್’ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಪ್ರತಿಯೊಂದು ಶ್ರೀಗಂಧದ ಮರದಲ್ಲಿ ಒಂದು ಚಿಪ್ ಅಳವಡಿಸಲಾಗಿದ್ದು, ಅದು ಭಾರತೀಯ ಮರ ವಿಜ್ಞಾನ ಸಂಸ್ಥೆಗೆ ಮಾಹಿತಿ ರವಾನಿಸುತ್ತದೆ. ಯಾರಾದರೂ ಕಳ್ಳರು ಮರಗಳ ಸಮೀಪ ಹೋದರೆ ಅದರ ಮಾಹಿತಿ ಶೀಘ್ರ ರವಾನೆಯಾಗುತ್ತದೆ. ಅದರ ಕಣ್ಗಾವಲಿಗೆ ಒಂದು ಡ್ರೋನ್ ಕ್ಯಾಮೆರಾ ಕೂಡ ಇದೆ.
100 ಮರಗಳನ್ನು ಬೆಳೆಯುವ ಯೋಜನೆ ಹೊಂದಿರುವ ರೈತರಿಗೆ ಮರ ವಿಜ್ಞಾನ ಸಂಸ್ಥೆ (ಶ್ರೀಗಂಧ ಮರ 10 ವರ್ಷವಾದಾಗ) ಅದರಲ್ಲಿ ಚಿಪ್ ಅಳಡಿಸುತ್ತಾರೆ. ಒಂದು ಮರಕ್ಕೆ ಚಿಪ್ ಅಳವಡಿಸಲು 800 ರೂ. ಖರ್ಚು ಬರುತ್ತದೆ. ಅದರಿಂದ ನಾವು ನಿಶ್ಚಿಂತವಾಗಿ ನಿದ್ರೆ ಮಾಡಬಹುದು ಎನ್ನುತ್ತಾರೆ ಕವಿತಾ.
ರೈತರಿಗೆ ಮಾರ್ಗದರ್ಶನ
ಶ್ರೀಗಂಧ ಬೆಳೆ ಹಾಗೂ ತೋಟಗಾರಿಕೆ ಬೆಳೆಗಳನ್ನು ಕವಿತಾ ಮಿಶ್ರಾ ತಮ್ಮ ತೋಟಕ್ಕಷ್ಟೇ ಸೀಮಿತಗೊಳಿಸಿಕೊಳ್ಳಲಿಲ್ಲ. ತಮ್ಮ ತಾಲ್ಲೂಕು, ಜಿಲ್ಲೆ ಹಾಗೂ ಬೇರೆ ಜಿಲ್ಲೆಗಳ ರೈತರಿಗೂ ಶ್ರೀಗಂಧದ ಬೆಳೆ ಬೆಳೆಯುವ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕವಿತಾರ ತೋಟಕ್ಕೆ ಬಂದು ಅವರ ಕಾರ್ಯ ಚಟುವಟಿಕೆಗಳನ್ನು ನೋಡಿಕೊಂಡು ಹೋಗಿದ್ದಾರೆ. ಆ ರಾಜ್ಯದ ಕೃಷಿ ಸಚಿವ ನಿರಂಜನ ರೆಡ್ಡಿ ಹೈದರಾಬಾದಿನಲ್ಲಿ ಏರ್ಪಡಿಸಿದ್ದ ಕೃಷಿ ವರ್ಕ್ಶಾಪ್ನಲ್ಲಿ ಕವಿತಾರನ್ನು ಆಹ್ವಾನಿಸಿ ಅವರಿಂದ ರೈತರಿಗೆ ಲಾಭದಾಯಕ ಕೃಷಿ ಬಗ್ಗೆ ಮಾರ್ಗದರ್ಶನ ಕೊಡಿಸಿದ್ದಾರೆ.
ಕವಿತಾ ಕನ್ನಡ, ಇಂಗ್ಲಿಷ್, ಹಿಂದಿ ಜೊತೆಗೆ ಇನ್ನೂ ಕೆಲವು ಭಾಷೆಗಳನ್ನು ಬಲ್ಲವರಾಗಿದ್ದು, ಸಂಪರ್ಕಕ್ಕೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
ಪ್ರಶಸ್ತಿ ಪುರಸ್ಕಾರಗಳು
ಕೃಷಿ ಕ್ಷೇತ್ರದಲ್ಲಿನ ಕವಿತಾರ ಸಾಧನೆ ಪರಿಗಣಿಸಿ ಕೃಷಿ ವಿವಿಯ ಪ್ರಶಸ್ತಿ, ಅಂತಾರಾಷ್ಟ್ರೀಯ ಕೃಷಿ ಸಂಶೋಧನಾ ಪ್ರಶಸ್ತಿ, ಬಾಗಲಕೋಟೆ ತೋಟಗಾರಿಕೆ ವಿವಿಯ ಉತ್ತಮ ತೋಟಗಾರಿಕೆ ರೈತ ಮಹಿಳೆ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ.
ಕೃಷಿಯಲ್ಲಿ ತೊಡಗಿ ಲಾಭದತ್ತ ತಿರುಗಿ ಕೃಷಿಯನ್ನು ಎಲ್ಲರೂ ನಷ್ಟದ ಕ್ಷೇತ್ರ ಎಂದು ದೂರುತ್ತಿದ್ದಾರೆ. ಆದರೆ ಎಲ್ಲ ಕ್ಷೇತ್ರಗಳು ಸೋತು ಸೊರಗಿದರೂ, ಕೃಷಿ ಕ್ಷೇತ್ರ ಮಾತ್ರ ಸದಾ ಅಸ್ತಿತ್ವದಿಂದ ಕಂಗೊಳಿಸುತ್ತಿರುತ್ತದೆ. ನಮ್ಮ ಯುವಕ ಯುವತಿಯರು ನಗರಕ್ಕೆ ವಲಸೆ ಹೋಗುವ ಬದಲು ಹಳ್ಳಿಯಲ್ಲಿರುವ ತಮ್ಮ ಜಮೀನಿನಲ್ಲಿ ಶ್ರದ್ಧೆಯಿಂದ ದುಡಿದರೆ ಅದು ಕೈ ತುಂಬ ಹಣ ಕೊಡುತ್ತದೆ ಎಂಬುದು ಕವಿತಾರ ಅಭಿಪ್ರಾಯ.
“ನಿಮ್ಮ ಹಿರಿಯರು ನಿಮಗೆ ಉಳಿಸಿದ ಜಮೀನನ್ನು ನಿಮ್ಮದೇ ಕಂಪನಿಯೆಂದು ಭಾವಿಸಿ, ಅದರಲ್ಲಿ ಎಷ್ಟು ಇನ್ಪುಟ್ ಹೂಡತ್ತೀರೊ, ಭೂಮಿತಾಯಿ ಅದಕ್ಕೂ ಹೆಚ್ಚು ಔಟ್ಪುಟ್ ಕೊಡುತ್ತಾಳೆ. ಅದಕ್ಕೆ ತಾಳ್ಮೆ ಮತ್ತು ಪರಿಶ್ರಮ ಎಂಬ ಬಂಡವಾಳವನ್ನು ಅತ್ಯವಶ್ಯವಾಗಿ ತೊಡಗಿಸಿ,” ಎಂದು ನಮ್ಮ ಇಂದಿನ ಯುವಜನಾಂಗಕ್ಕೆ ಕವಿತಾ ಕರೆ ನೀಡುತ್ತಾರೆ.