45 ಡಿಗ್ರಿ ತಾಪಮಾನದಲ್ಲೂ ಶ್ರೀಗಂಧದ ಮರಗಳನ್ನು ಬೆಳೆಯಬಹುದೆಂಬ ಆತ್ಮವಿಶ್ವಾಸವನ್ನು ರೈತರಲ್ಲಿ ಮೂಡಿಸಿದರು ಕವಿತಾ ಮಿಶ್ರಾ. ಅದರ ಜೊತೆಗೆ ತೋಟಗಾರಿಕೆ, ಹೈನುಗಾರಿಕೆ, ನರ್ಸರಿ, ಜೇನು ಕೃಷಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಅವರು ನಿಜವಾದ ಕೃಷಿ ಸಾಧಕಿ.
ಕವಿತಾ ಮಿಶ್ರಾ ಕೃಷಿ ಕ್ಷೇತ್ರದ ಅಪರೂಪದ ಸಾಧಕಿ. ಬಿಸಿಲು ನಾಡು ಅದರಲ್ಲೂ 45 ಡಿಗ್ರಿ ತಾಪಮಾನದಲ್ಲಿ ಶ್ರೀಗಂಧದ ಕೃಷಿಯನ್ನು ಮಾಡಬಹುದು ಎಂಬ ಆತ್ಮವಿಶ್ವಾಸವನ್ನು ರೈತರಲ್ಲಿ ಹುಟ್ಟು ಹಾಕಿದರು.
ಈ ರೀತಿಯ ವಿಶಿಷ್ಟ ಸಾಧನೆ ಮಾಡಲು ಕವಿತಾ ಕೃಷಿ ವಿಶ್ವವಿದ್ಯಾಲಯದಲ್ಲಿ ಪದವಿಯನ್ನೇನೂ ಪಡೆದಿಲ್ಲ! ಹೌದು ಇದು ನಿಜ. ಕಂಪ್ಯೂಟರ್ ಎಂಜಿನಿಯರಿಂಗ್ ಪದವಿಧರೆಯೊಬ್ಬಳು ಕೃಷಿ ಕ್ಷೇತ್ರಕ್ಕೆ ಬಂದು ಅದರ ದಿಕ್ಕುದೆಸೆಯನ್ನೇ ಬದಲಿಸಿದ್ದು ಮಾತ್ರ ಅಚ್ಚರಿಯ ಸಂಗತಿಯೇ ಸರಿ.
ಮಲೆನಾಡಿನಿಂದ ಬಿಸಿಲು ನಾಡಿಗೆ
ಕವಿತಾ ಹುಟ್ಟಿ ಬೆಳೆದದ್ದು, ಮಲೆನಾಡ ಸೆರಗಿನ ಧಾರವಾಡದಲ್ಲಿ. ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದ ಅವರಿಗೆ ಬೆಂಗಳೂರಿಗೆ ಹೋಗಿ ಯಾವುದಾದರೊಂದು ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡಬೇಕೆಂಬ ಅಪೇಕ್ಷೆ ಇತ್ತು. ಆದರೆ ಆದದ್ದೇ ಬೇರೆ.
ಮನೆಯವರು ಆಗಲೇ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕವಿತಾಳ ಗ್ರಾಮದ ಯುವಕನ ಜೊತೆಗೆ ಮದುವೆ ಫಿಕ್ಸ್ ಮಾಡಿಬಿಟ್ಟಿದ್ದರು. ಮನೆಯವರ ಅಪೇಕ್ಷೆಗೆ ಕವಿತಾ ವಿರೋಧವನ್ನೇನೂ ವ್ಯಕ್ತಪಡಿಸಲಿಲ್ಲ. ಮದುವೆಯ ನಂತರವಾದರೂ ಅವರನ್ನು ಒಪ್ಪಿಸಿ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗ ಮಾಡಬೇಕೆಂಬ ತುಡಿತ ಅವರ ಒಳಮನಸ್ಸಿನಲ್ಲಿ ಇದ್ದೇ ಇತ್ತು. ಮದುವೆ ಮಾಡಿಕೊಂಡು ಹೋದ ಬಳಿಕ ಅಲ್ಲಿ ಹೆಣ್ಣುಮಕ್ಕಳು ಮನೆಯಿಂದ ಹೊರಗಡೆ ಕೆಲಸಕ್ಕೆ ಹೋಗಬಾರದು ಎಂಬ ಅಲಿಖಿತ ನಿಯಮ ಇರುವುದು ಅವರ ಗಮನಕ್ಕೆ ಬಂತು. ಅದನ್ನು ಕೂಡ ಅವರು ವಿರೋಧಿಸಲಿಲ್ಲ.
ಗಂಡನ ಮನೆಯ ಕುಟುಂಬಕ್ಕೆ ಸಾಕಷ್ಟು ಕೃಷಿ ಜಮೀನೇನೋ ಇತ್ತು. ಆದರೆ ಅವರಲ್ಲಿ ಸಜ್ಜೆ, ಶೇಂಗಾ, ಜೋಳ ಮಾತ್ರ ಬೆಳೆಯಲಾಗುತ್ತಿತ್ತು. ಅದು ಕುಟುಂಬಕ್ಕಷ್ಟೇ ಸಾಲುತ್ತಿತ್ತು. ಖರ್ಚು ಮಾಡಿದಷ್ಟು ಉತ್ಪನ್ನ ಕೂಡ ದೊರಕುತ್ತಿರಲಿಲ್ಲ. ಹೀಗಾಗಿ ಅಲ್ಲಿ ಕೃಷಿ ಎನ್ನುವುದು ನಷ್ಟದ ಕ್ಷೇತ್ರ ಎಂದೇ ಪರಿಗಣಿಸಲ್ಪಟ್ಟಿತ್ತು.
ಇಂತಹ ಸ್ಥಿತಿಯಲ್ಲಿ ಕವಿತಾ ಮನಸ್ಸಿನಲ್ಲಿ ಈ ಬರಡು ಜಮೀನಿನಲ್ಲಿ ತಾನು ಏನಾದರೂ ಸಾಧಿಸಿ ತೋರಿಸಲೇಬೇಕೆಂಬ ಛಲ ಮೂಡಿತ್ತು. ತವರುಮನೆ ಧಾರವಾಡದಲ್ಲಿ ಹಲವು ಕಡೆ ಮನೆಗಳೆದುರು ಶ್ರೀಗಂಧದ ಮರ, ಹುಣಿಸೆಹಣ್ಣಿನ ಮರಗಳನ್ನು ಬೆಳೆಸಿರುವುದು ಅವರ ಗಮನಕ್ಕೆ ಬಂದಿತ್ತು. ಅದನ್ನೇ ಪತಿಯ ಊರು ಕವಿತಾಳದ ಜಮೀನಿನಲ್ಲಿ ಅನುಷ್ಠಾನಕ್ಕೆ ತರಲು ಅವರು ಪಣ ತೊಟ್ಟರು.
ಬರಡು ಜಮೀನು ಫಲವತ್ತಾಯ್ತು!
ಪತಿಯ ಹೆಸರಿನಲ್ಲಿದ್ದ ಜಮೀನು ಫಲವತ್ತಾದ ಜಮೀನಾಗಿರದೇ, ಬಂಜರು ಭೂಮಿಯಾಗಿತ್ತು. ಅಲ್ಲಿ ನೀರಿನ ವ್ಯವಸ್ಥೆ ಕೂಡ ಇರಲಿಲ್ಲ. ಹೀಗಾಗಿ ಆ ಜಮೀನಿನಲ್ಲಿ ಏನಾದರೂ ಬೆಳೆ ಬೆಳೆಯಬೇಕೆಂದುಕೊಳ್ಳುವುದು ಕೂಡ ಹುಚ್ಚು ಸಾಹಸವೇ ಆಗಿತ್ತು. ಆದರೆ ಕವಿತಾರಲ್ಲಿ ಮಾತ್ರ ಅಂತಹ ಬರಡು ಜಮೀನಿನಲ್ಲೂ ಏನಾದರೂ ಬೆಳೆ ತೆಗೆಯಲೇಬೇಕೆಂಬ ಛಲದ ಮೊಳಕೆ ಆಗಲೇ ಬೆಳೆದು ನಿಂತಿತ್ತು. ಅವರ ಆ ಸಾಹಸಕ್ಕೆ ಪತಿ ಕೂಡ ಕೈ ಜೋಡಿಸಿದರು. ಮದುವೆಗೆ ಹಾಕಿದ್ದ ಬಂಗಾರದ ಆಭರಣಗಳನ್ನೆಲ್ಲ ಮಾರಿ ತಮ್ಮ ಜಮೀನಿನಲ್ಲಿ ಒಂದು ಕೊಳವೆ ಬಾವಿ ತೋಡಿಸಿದರು. ಅಲ್ಲಿ ಕೇವಲ ಒಂದೂವರೆ ಇಂಚಿನಷ್ಟು ನೀರಿನ ಲಭ್ಯತೆ ಮಾತ್ರ ಇತ್ತು. ಅಷ್ಟು ಅತ್ಯಲ್ಪ ಪ್ರಮಾಣದ ನೀರನ್ನು ಬಳಸಿಕೊಂಡು ಅವರು ಜಮೀನನ್ನು ಹದಗೊಳಿಸಿ ನಿಯಮಿತ ಬೆಳೆಗಳ ಬದಲು ಉಳ್ಳಾಗಡ್ಡಿ, ದಾಳಿಂಬೆ ಮುಂತಾದವುಗಳನ್ನು ಬೆಳೆದರು. ಆದರೆ ಅದರಲ್ಲಿ ಹೇಳಿಕೊಳ್ಳುವಂತಹ ಲಾಭವೇನೂ ಸಿಗಲಿಲ್ಲ. ಆದರೂ ಕವಿತಾ ಧೈರ್ಯಗುಂದಲಿಲ್ಲ.