ಒಳ್ಳೆಯ ಗಳಿಗೆ, ಕೆಟ್ಟ ಗಳಿಗೆ, ರೀತಿ ನೀತಿ ಹಾಗೂ ಮುಹೂರ್ತದ ಜಾಲದಲ್ಲಿ ಪುರೋಹಿತರು ಅರ್ಚಕರು, ಜ್ಯೋತಿಷಿಗಳು ಜನರನ್ನು ಹೇಗೆ ಸಿಲುಕಿಸಿ ಬಿಟ್ಟಿದ್ದಾರೆಂದರೆ, ಅವರು ಹಬ್ಬದ ವಾಸ್ತವ ಅರ್ಥವನ್ನೇ ಮರೆತುಬಿಟ್ಟಿದ್ದಾರೆ.

ಕಂಪ್ಯೂಟರ್‌, ಇಂಟರ್‌ನೆಟ್‌ ಹಾಗೂ ಸೋಶಿಯಲ್ ಮೀಡಿಯಾಗಳು ಜಗತ್ತಿನ ರೂಪುರೇಷೆಯನ್ನೇ ಬದಲಿಸಿಬಿಟ್ಟಿವೆ. ಈಗ ಎಲ್ಲ  ಒಂದೇ ಕ್ಲಿಕ್‌ನಲ್ಲಿ ಹಾಜರಾಗುತ್ತದೆ. ಮೊದಲು ಯಾವ ಕೆಲಸ ತಿಂಗಳಿನಲ್ಲಿ ಆಗುತ್ತಿತೊ, ಅದೀಗ ನಿಮಿಷದಲ್ಲಿ ಆಗಿಬಿಡುತ್ತದೆ. ಈ ವೈಜ್ಞಾನಿಕ ಚಮತ್ಕಾರಗಳ ಮೇಲೆ ಸವಾರಿ ಮಾಡುತ್ತಿರುವ ಧರ್ಮ ಈ ಗೆಜೆಟ್‌ಗಳ ಉಪಯೋಗವನ್ನಷ್ಟೇ ಮಣ್ಣುಪಾಲು ಮಾಡಿಲ್ಲ, ಅವುಗಳ ಮಹತ್ವವನ್ನೂ ಬದಲಿಸಿಬಿಟ್ಟಿದೆ. ಇವೆಲ್ಲದರಲ್ಲಿ ಧರ್ಮದ ಬೂಟಾಟಿಕೆ ಇದೆ, ಮೂಢನಂಬಿಕೆ ಇದೆ, ಧಾರ್ಮಿಕ ಚಮತ್ಕಾರವಿದೆ.

ಧರ್ಮವನ್ನು ಶಾಶ್ವತ ಷಡ್ಯಂತ್ರ ಎಂದು ಏಕೆ ಕರೆಯಲಾಗುತ್ತದೆಂದರೆ, ಅದು ಈ ಗೆಜೆಟ್‌ಗಳ ಮುಖಾಂತರ ಜನರ ಮನಸ್ಸಿನ ಮೇಲೆ ಮತ್ತಷ್ಟು ಪ್ರಭಾವ ಬೀರಿವೆ. ಇಂಟರ್‌ನೆಟ್‌, ಫೇಸ್‌ಬುಕ್‌, ಲ್ಯಾಟ್‌ಟ್ಯಾಪ್ಸ್ ಆ್ಯಪ್‌ನಲ್ಲಿ ಧರ್ಮದ ಮಹಾಪೂರವೇ ಇದೆ. ದೇವಿ-ದೇವತೆಗಳ ಜಯಜಯಕಾರ ನಡೆಯುತ್ತಿದೆ. ದೈನಂದಿನ ಪೂಜೆಯೂ ಈಗ ಆನ್‌ಲೈನ್‌ನಲ್ಲಿ ನಡೆಯುತ್ತಿದೆ.

ಹಬ್ಬ ಹುಣ್ಣಿಮೆಗಳು ಕೂಡ ಇದರಿಂದ ಹೊರತಾಗಿಲ್ಲ. ಧರ್ಮವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಯಾವುದೇ ಅವಕಾಶವನ್ನು ಧರ್ಮದ ಗುತ್ತಿಗೆದಾರರು ಬಿಟ್ಟುಕೊಡುವುದಿಲ್ಲ. ಯಾವ ಆವಿಷ್ಕಾರಗಳನ್ನು ಸಾಮಾಜಿಕ ಹಾಗೂ ಆರ್ಥಿಕ ಉನ್ನತಿಗಾಗಿ ಬಳಸಬೇಕಾಗುತ್ತವೋ, ಅವನ್ನು ಧರ್ಮದ ಆಡಂಬರದ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಈ ಪ್ರಶ್ನೆಗೆ ಉತ್ತರ ಕಷ್ಟವೇ ಇದೆ. ಧರ್ಮದ ಕಪಿಮುಷ್ಟಿಯಲ್ಲಿ ನಾವು ಸಿಲುಕುತ್ತಲೇ ಹೊರಟಿದ್ದೇವೆ. ಹೊಸ ಯುಗದ ಆವಿಷ್ಕಾರಗಳ ದುರುಪಯೋಗ ಧರ್ಮದ ಪ್ರಕಾರದಲ್ಲಿ ಆಗುತ್ತಿದೆ. ಜನರು ಆಧುನಿಕರಾಗಿರುವ ಭ್ರಮೆ ತುಂಬಿ ತುಳುಕುತ್ತಿದೆ. ವಾಸ್ತವದಲ್ಲಿ ಅವರು ಯಾವ ಸಂಪ್ರದಾಯಗಳಲ್ಲಿ, ರೀತಿ ನೀತಿಗಳಲ್ಲಿ ಮೂಢನಂಬಿಕೆಗಳಲ್ಲಿ ಸಿಲುಕಿದ್ದಾರೆ ಎಂಬುದು ಹಬ್ಬದ ದಿನಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ನಮ್ಮ ಸಮಸ್ತ ಹಬ್ಬಗಳು ಧರ್ಮದ ಉಡುಗೊರೆಯಾಗಿವೆ. ಧರ್ಮದ ಹೊರತಾಗಿ ಇವುಗಳ ಆಚರಣೆಯನ್ನು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ದೀಪಾವಳಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅದು ಕೂಡ ಅಪವಾದವಾಗಿ ಉಳಿದಿಲ್ಲ. ಹೇಳಿಕೊಳ್ಳಲು ಇದು ಬೆಳಕಿನ, ಉಲ್ಲಾಸದ ಹಾಗೂ ಖುಷಿಯನ್ನು ಬಿಂಬಿಸುವ ಹಬ್ಬ. ಜನರು ಹಬ್ಬದ ಪ್ರಯುಕ್ತ ಬಣ್ಣಬಣ್ಣದ ಬಲ್ಬುಗಳನ್ನು ಉರಿಸುತ್ತಾರೆ. ಯಥೇಚ್ಛವಾಗಿ ಖರೀದಿಸುತ್ತಾರೆ. ಪರಸ್ಪರರು ಶುಭ ಹಾರೈಸಿ ಸುಖ-ಸಮೃದ್ಧಿ ಹಾಗೂ ಆರೋಗ್ಯದ ಹಾರೈಕೆ ಮಾಡುತ್ತಾರೆ. ಆದರೆ ಇವೆಲ್ಲ ಮನವೊಲಿಸುವ ವಿಧಾನಗಳು.

ದೀಪಾವಳಿಯ ಸಮಸ್ತ ಆಚರಣೆಯ ಹಿಂದೆ ಧಾರ್ಮಿಕ ಮೂಢನಂಬಿಕೆಯ ಬೇರುಗಳಿವೆ. ಅವೆಷ್ಟು ಆಳವಾಗಿ ಜನರ ಮನಸ್ಸಿನಲ್ಲಿ ಬೇರೂರಿವೆ ಎಂದರೆ, ಜನರು ಒತ್ತಡದಿಂದಲೇ ಈ ಹಬ್ಬವನ್ನು ಆಚರಿಸುವುದು ಗೊತ್ತಾಗುತ್ತದೆ.

society

ದೀಪಾವಳಿ ಹಬ್ಬವನ್ನು ಧರ್ಮದಿಂದ ಪ್ರತ್ಯೇಕಗೊಳಿಸಿ ಯಾರೂ ಆಚರಿಸುವ ಸಾಹಸ ಮಾಡಲಾರರು. ಹಾಗೊಮ್ಮೆ ಯಾರಾದರೂ ಅಂಥ ಮಾಡುವ ಪ್ರಯತ್ನ ಮಾಡಿದ್ದೇ ಆದರೆ, ಅವರನ್ನು ಧರ್ಮವಿರೋಧಿ ಎಂದು ಘೋಷಣೆ ಮಾಡಿಬಿಡಬಹುದು. ಇಲ್ಲಿ ಹೆಜ್ಜೆ ಹೆಜ್ಜೆಗೂ ಧರ್ಮ ಇದೆ. ಯಾರೊಬ್ಬರೂ ತಮ್ಮ ಅಪೇಕ್ಷೆಗನುಗುಣವಾಗಿ ಹಬ್ಬದ ದಿನಗಳಲ್ಲಿ ಇರುವುದು ಸಾಧ್ಯವಾಗುವುದಿಲ್ಲ. ತಮ್ಮ ಇಚ್ಛೆಗನುಗುಣವಾಗಿ, ತಮ್ಮ ಅನುಕೂಲಕ್ಕೆ ತಕ್ಕಂತೆ ಹಬ್ಬ ಆಚರಿಸುವ ಸ್ವಾತಂತ್ರ ಯಾರಿಗೂ ಇಲ್ಲ. ಆ ಕುರಿತಂತೆ ಯಾರೂ ಪ್ರಯತ್ನ ಕೂಡ ಮಾಡುವುದಿಲ್ಲ. 2-3 ದಶಕಗಳ ಹಿಂದಿನ ಹಳೆಯ ಪೀಳಿಗೆ ಮತ್ತು ಧಾರ್ಮಿಕ ಸಾಹಿತ್ಯದ ಪರಂಪರೆ ಇತ್ತು, ಅದೀಗ ಪರಿಪೂರ್ಣವಾಗಿ ಬದಲಾಗಿಬಿಟ್ಟಿದೆ. ಈಗ ಅದು ಜನರ ಕೈಯಲ್ಲಿದೆ. ಲಕ್ಷ್ಮಿ ಪೂಜೆ ಹೇಗೆ ಮಾಡಬೇಕು? ವಾಸ್ತು ಏನು ಹೇಳುತ್ತದೆ? ಶ್ರಿಮಂತಿಕೆ ಪರಿಶ್ರಮದಿಂದಲ್ಲ, ಪೂಜೆ ಪುನಸ್ಕಾರದಿಂದ ಬರುತ್ತದೆ ಎಂದೆಲ್ಲ ಹೇಳಲಾಗುತ್ತದೆ. ಈ ಕಾರಣದಿಂದ ಜನರು ಈಗಲೂ ಭಯಭೀತರಾಗಿದ್ದಾರೆ. ಇಂತಹದರಲ್ಲಿ ತಮ್ಮನ್ನು ತಾವು ಆಧುನಿಕರು, ಸುಶಿಕ್ಷಿತರೆಂದು ಹೇಳಿಕೊಳ್ಳುವುದು ಅಷ್ಟೇ ತಪ್ಪು ಕಲ್ಪನೆಯಾಗಿದೆ.

ಮುಹೂರ್ತದ ಸುಳಿವು ಜನರ ಸ್ವಾತಂತ್ರ್ಯದ ಮೇಲೆ ದಾಳಿ ಮಾಡಲು ಹಬ್ಬಹರಿದಿನಗಳು ಕಾರಣವಾಗಬಹುದು. ಧರ್ಮದ ಬೇಡಿಕೆಗೆ ಸಿಲುಕಿದವರನ್ನು ಅದು ಇನ್ನಷ್ಟು ದಾಳಿ ಮಾಡುತ್ತದೆ. ಧರ್ಮದ ಕಪಿಮುಷ್ಟಿಯಲ್ಲಿ ಜನ ಹೇಗೆ ಸಿಲುಕುತ್ತಾ ಹೋಗುತ್ತಾರೆ ಎಂದು ಸೂಕ್ಷ್ಮವಾಗಿ ಗಮನಿಸಬೇಕು. ಏಕೆಂದರೆ ಜನರು ಪಂಡಿತ-ಪುರೋಹಿತರು, ರೀತಿ-ನೀತಿಗಳು ಹಾಗೂ ಮೂಢನಂಬಿಕೆಯನ್ನು ಹೇಗೆ ಹೊತ್ತುಕೊಂಡು ತಿರುಗುತ್ತಿದ್ದಾರೆ ಎನ್ನುವುದು ಅರಿವಿಗೆ ಬರುತ್ತದೆ.

ಬೇರೆ ಹಬ್ಬಗಳ ಹಾಗೆ ದೀಪಾವಳಿ ಹಬ್ಬದಂದು ಲಕ್ಷ್ಮಿ ಪೂಜೆಯನ್ನು ವಿಶೇಷ ಮುಹೂರ್ತದಲ್ಲಿಯೇ ಮಾಡಬೇಕೆಂದು ಅನಿವಾರ್ಯತೆ ಸೃಷ್ಟಿಸಿರುವುದು ದೀಪಾವಳಿಯ ಸಂಪೂರ್ಣ ಮಜವನ್ನು ಕಿರಿಕಿರಿ ಮಾಡುತ್ತದೆ. ದೀಪಾವಳಿ ಸಡಗರ ಹಾಗೂ ಶುಭಾಶಯ ವಿನಿಮಯದ ನಡುವೆ ಮುಹೂರ್ತದ ಒತ್ತಡ ಆವರಿಸಿಕೊಂಡಿರುತ್ತದೆ. ಏಕೆಂದರೆ ಪೂಜೆಯ ಸಮಯ ಮೀರಿ ಹೋದರೆ ತಮ್ಮಿಂದ ಲಕ್ಷ್ಮಿ ಅರ್ಥಾತ್‌ ಸಂಪತ್ತು ಹೊರಟುಹೋಗುತ್ತದೆ ಎಂದು ಅವರು ಭಾವಿಸುತ್ತಾರೆ. ಈ ಮುಹೂರ್ತವನ್ನು ಹೆಸರಾಂತ ಪಂಡಿತ-ಪುರೋಹಿತರು ನಿರ್ಧರಿಸುತ್ತಾರೆ. ಕ್ಯಾಲೆಂಡರ್‌ಗಳು ಅದನ್ನು ಪ್ರಕಟಿಸುತ್ತವೆ. ವಿವಿಧ ಚಾನೆಲ್‌ಗಳಲ್ಲಿ ಕೆಲವು ಜ್ಯೋತಿಷಿಗಳು ಆ ಮುಹೂರ್ತದ ಬಗ್ಗೆ ಒತ್ತಿ ಒತ್ತಿ ಹೇಳುತ್ತಾರೆ.

ಪತ್ರಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳು ಕೂಡ ಇದೇ ಮುಹೂರ್ತದ ಬಗ್ಗೆಯೇ ಒತ್ತುಕೊಡುತ್ತಿರುತ್ತವೆ. ಮುಹೂರ್ತ ರಾತ್ರಿ 7 ಗಂಟೆಗೆ ಇದ್ದರೆ, ಸಂಜೆ 5 ರಿಂದಲೇ ಮನೆಯಲ್ಲಿ ಕರ್ಫ್ಯೂ ರೀತಿಯ ವಾತಾರಣ ಸೃಷ್ಟಿಯಾಗುತ್ತದೆ. ಮನೆಯ ಎಲ್ಲ ಸದಸ್ಯರಿಗೂ ಪೂಜೆಯ ಸಿದ್ಧತೆಗೆ ತೊಡಗಿಕೊಳ್ಳಬೇಕು ಎಂಬ ಆದೇಶ ದೊರಕುತ್ತದೆ. ಏನೇ ಆದರೂ ಮುಹೂರ್ತದ ವೇಳೆ ಮೀರಬಾರದು ಎಂಬುದು ಪುರೋಹಿತರ ಆದೇಶವಾಗಿರುತ್ತದೆ. ಈ ಕಾರಣದಿಂದಾಗಿ ಕುಟುಂಬದ ಬಹುತೇಕ ಸದಸ್ಯರ ನೆಮ್ಮದಿ ಭಂಗವಾಗುತ್ತದೆ ಅದರಲ್ಲೂ ವಿಶೇಷವಾಗಿ ಮಕ್ಕಳು ಶಿಕ್ಷೆ ಅನುಭವಿಸುವಂತಾಗುತ್ತದೆ. ಅಪ್ಪ ಅಮ್ಮ ಹೇಳಿದ್ದಾರೆಂದು ಮಾತನಾಡದೆ ನಿಂತುಕೊಳ್ಳಬೇಕಾಗುತ್ತದೆ.

ಗೂಬೆಯ ಮೇಲೆ ಕುಳಿತ ಲಕ್ಷ್ಮಿ 2 ಗಂಟೆಯಲ್ಲಿ ಕೋಟ್ಯಂತರ ಮನೆಗಳಿಗೆ ಹೇಗೆ ತಾನೆ ಭೇಟಿ ಕೊಡಲು ಸಾಧ್ಯ? ಧಾರ್ಮಿಕ ನಂಬಿಕೆಯ ಒತ್ತಡದ ನಡುವೆ ಯಾವೊಬ್ಬ ವ್ಯಕ್ತಿ ಕೂಡ ಪೂಜೆಯ ನಿಶ್ಚಿತ ಮುಹೂರ್ತದಲ್ಲಿಯೇ ಏಕೆ ಆಗಬೇಕು ಎಂದು ಯೋಚಿಸಲು ಇದರ ಹಿಂದೆ ಪಂಡಿತರು-ಪುರೋಹಿತರ ಕರಾಮತ್ತು ಇದೆ. ಜನರನ್ನು ಹೆದರಿಸಿ ತಾವು ಹೇಳಿದಂತೆಯೇ ನಡೆಯಬೇಕೆಂದು ಇಂತಹ ನಿರ್ದೇಶನಗಳನ್ನು ಜನರ ಮೇಲೆ ಹೇರುತ್ತಾರೆ.

ಪೂಜಾ ಸಾಮಗ್ರಿ

ಲಕ್ಷ್ಮಿ ಮನೆಗೆ ಸುಮ್ಮನೇ ಬರುವುದಿಲ್ಲ. ಆಕೆಯ ಸ್ವಾಗತಕ್ಕಾಗಿ ವಿಧಿ-ವಿಧಾನಬದ್ಧ ಪೂಜೆಗಾಗಿ ಅದೆಷ್ಟು ಸಾಮಗ್ರಿಗಳನ್ನು ತರಬೇಕಾಗಿ ಬರುತ್ತದೆ ಎಂದರೆ, ಒಂದು ಕೋಣೆ ಕೂಡ ಚಿಕ್ಕದೆನಿಸುತ್ತದೆ. ಬೇರೆ ಹಬ್ಬಗಳ ಹಾಗೆ ಕಡಿಮೆ ಸಾಮಗ್ರಿ ಮತ್ತು ಕಡಿಮೆ ಸಮಯದಲ್ಲಿ ಪೂಜೆ ನೆರೆವೇರಿಸಿಬಿಟ್ಟರೆ ಅದಕ್ಕೆ ಯಾವುದೇ ಮಹತ್ವ ಇರುವುದಿಲ್ಲ. ಹೀಗಾಗಿ ಧರ್ಮದ ಗುತ್ತಿಗೆದಾರರು ಎಂತಹ ವ್ಯವಸ್ಥೆ ಮಾಡಿಬಿಟ್ಟಿದ್ದಾರೆಂದರೆ, ಜನರು ಬೇರೆ ಎಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು, ಇತರರ ಭೇಟಿಯನ್ನು ರದ್ದುಗೊಳಿಸಿ ಇಡೀ ದಿನ ಸಾಮಾನುಗಳ ಖರೀದಿ ಮತ್ತು ಪೂಜೆಗಾಗಿ ಮೀಸಲಿಡಬೇಕಾಗುತ್ತದೆ.

5 ಬಗೆಯ ಹಣ್ಣುಗಳು, ಬಣ್ಣ ಬಣ್ಣದ ಹೂಗಳು, ಅದರ ಜೊತೆಗೆ ಎಲೆ, ಅಡಕೆ, ಹಾಲು ತುಪ್ಪ, ಬೆಂಡು ಬತ್ತಾಸು, ಕಡ್ಲೆಪುರಿ ಮುಂತಾದವು ಕೂಡ ಬೇಕಾಗುತ್ತದೆ. ಲಕ್ಷ್ಮಿ ಪೂಜೆಯ ಜೊತೆ ಇತರ ದೇವಿ-ದೇವತೆಯರಿಗೆ ಪೂಜೆ ಮಾಡಬೇಕಿರುವುದರಿಂದ ಪೂಜೆಗೆ ಕನಿಷ್ಠ 2-3 ಗಂಟೆ ಅವಶ್ಯವಾಗಿ ತಗುಲುತ್ತದೆ.

ಹೀಗಾಗಿ ಜನರು ಇಡೀ ದಿನ ಧರ್ಮದ ಕೈಕೋಳದಿಂದ ಸೆರೆಯಾಗಿರುತ್ತಾರೆ. ಮಹಿಳೆಯರಂತೂ ಬೆಳಗ್ಗೆಯಿಂದ ಮಧ್ಯರಾತ್ರಿತನಕ ಅವರಿವರ ಸೇವೆ ಮಾಡುವುದರಲ್ಲಿಯೇ ಕಳೆದುಹೋಗುತ್ತಾರೆ.

ಪೂಜಾ ಸಾಮಗ್ರಿಗಳು ಮೊದಲಿನ ಹಾಗೆ ಅಗ್ಗದ ದರದಲ್ಲಿ ದೊರೆಯುವುದಿಲ್ಲ. ಸಂದರ್ಭ ನೋಡಿಕೊಂಡು ಅಂಗಡಿಕಾರರು ಧಾರಣೆ ಹೆಚ್ಚಿಸಿ ಜನರನ್ನು ಸುಲಿಗೆ ಮಾಡುತ್ತಾರೆ. ಇಷ್ಟಾಗಿಯೂ ಮನೆಗೆ ಲಕ್ಷ್ಮಿ ಬರುತ್ತಾಳೆಂಬ ಯಾವ ಗ್ಯಾರಂಟಿಯೂ ಇಲ್ಲ.  ಹಬ್ಬವನ್ನು ವೈಭವದಿಂದ ಆಚರಿಸಲು ಕೈಯಲ್ಲಿ ಇದ್ದಬದ್ದ ಹಣವನ್ನೆಲ್ಲಾ ಕಳೆದುಕೊಂಡು ನಂತರ ಪಶ್ಚಾತ್ತಾಪಪಡುತ್ತಾ ಕೂರಬೇಕಾಗುತ್ತದೆ.

ನೂರೆಂಟು ಕಾಲ್ಪನಿಕ ಕಥೆಗಳು

ದೀಪಾವಳಿ ಒಂದು ಅಥವಾ ಎರಡು ದಿನಗಳ ಕಥೆಯಲ್ಲ. ಅದು ಅನೇಕ ದಿನಗಳ ಕಾಲ ಆಚರಿಸುವ ಹಬ್ಬ.

ಉ. ಭಾರತದಲ್ಲಿ ದೀಪಾವಳಿಯ ಎರಡು ದಿನದ ಮುಂಚೆಯೇ ಆಚರಿಸಲಾಗುವ `ಧನತೇರಸ್‌’ಗೆ ಹಿತ್ತಾಳೆ ಹಾಗೂ ಬೆಳ್ಳಿಯ ಪಾತ್ರೆಗಳನ್ನು ಖರೀದಿಸುವುದು ಶುಭ ಎಂದು ಹೇಳಲಾಗುತ್ತದೆ. ಯಾರ ಹತ್ತಿರ ಲಕ್ಷ್ಮಿ ಬರದೇ ಇದ್ದರೂ ಪಾತ್ರೆ ಅಂಗಡಿಯವನ ಹತ್ತಿರ ಮಾತ್ರ ಖಂಡಿತ ಬಂದೇ ಬರುತ್ತಾಳೆ.

ನರಕಚತುರ್ದಶಿಯಂದು ಎಣ್ಣೆ ಸ್ನಾನ ಮಾಡಿ ಪೂಜೆ ಪುನಸ್ಕಾರ ನೆರವೇರಿಸುವುದರಿಂದ ಯಮರಾಜ ಖುಷಿಯಾಗುತ್ತಾನೆಂದು ಹೇಳಲಾಗುತ್ತದೆ. ಈ ರೀತಿಯಾಗಿ ಆ ವ್ಯಕ್ತಿ ನರಕಕ್ಕೆ ಹೋಗುವುದು ತಪ್ಪುತ್ತದೆ.

ರಂಚಿದೇವ ಎಂಬ ರಾಜನ ಆಸ್ಥಾನದಿಂದ ಸಾವಿರಾರು ವರ್ಷಗಳ ಹಿಂದೆ ಒಬ್ಬ ಬ್ರಾಹ್ಮಣ ಹಸಿದ ಹೊಟ್ಟೆಯಲ್ಲಿಯೇ ಹೋಗಿದ್ದನಂತೆ. ಹೀಗಾಗಿ ಆತನಿಗೆ ನರಕದ ಶಿಕ್ಷೆ ಅನುಭವಿಸಬೇಕಾಗಿ ಬಂತು. ಬ್ರಾಹ್ಮಣರಿಗೆ ದಾನ ಕೊಡುವ ಪರಂಪರೆಯನ್ನು ಮುಂದುವರಿಸಲು ಈ ರೀತಿಯ ಕಥೆಗಳನ್ನು ಹೆಣೆಯಲಾಗುತ್ತದೆ. ಏಕೆಂದರೆ ಪಂಡಿತರು-ಪುರೋಹಿತರಿಗೆ ಯಥೇಚ್ಛವಾಗಿ ದಾನ ದೊರಕುತ್ತಿರಬೇಕು.

ದೀಪಾವಳಿ ಅಮಾವಾಸ್ಯೆ, ಪಾಡ್ಯ ಹೀಗೆ ಸರಣಿ ರೂಪದಲ್ಲಿ ಪೂಜೆಗಳು ಇದ್ದೇ ಇರುತ್ತವೆ. ಹೀಗಾಗಿ ಹಬ್ಬದ ಮಜವನ್ನು ಅನುಭವಿಸಲು ಆಗುವುದೇ ಇಲ್ಲ. ಒಟ್ಟಾರೆ ಹಬ್ಬದ ವ್ಯವಸ್ಥೆಯನ್ನು ಹೇಗೆ ರೂಪಿಸಲಾಗಿದೆ ಎಂದರೆ, ಜನರು ಈ ರೀತಿಯಲ್ಲಾದರೂ ಧರ್ಮದ ಜೊತೆ ನಂಟು ಹೊಂದಿರಬೇಕು. ಯಾರು ಧರ್ಮವನ್ನು ಪಾಲಿಸುವುದಿಲ್ಲ ಅವರಿಗೆ  ಆರೋಗ್ಯ ತೊಂದರೆ, ವ್ಯಾಪಾರದಲ್ಲಿ ಹಾನಿ, ಪರೀಕ್ಷೆಯಲ್ಲಿ ವಿಫಲ ಹೀಗೆ ಅನೇಕ ತೊಂದರೆಗಳು ಉಂಟಾಗುತ್ತವೆ ಎಂದು ಹೆದರಿಸಲಾಗುತ್ತದೆ.

ಅಪಾಯಕಾರಿ ಹಬ್ಬ

ಭಾರತದ ಬೇರೆ ಬೇರೆ ಹಬ್ಬಗಳಲ್ಲಿ ಪ್ರಾಣಿ ಬಲಿ ಕೊಡುವ ಪದ್ಧತಿ ಕೂಡ ಇದೆ. ಒಂದು ವೇಳೆ ಪ್ರಾಣಿ ಬಲಿ ಕೊಡದೇ ಇದ್ದರೆ, ವೈಫಲ್ಯ ಸುತ್ತುವರೆಯುತ್ತದೆ ಎಂದು ಹೆದರಿಸಲಾಗುತ್ತದೆ. ಈ ಕಾರಣದಿಂದ ಹಬ್ಬಗಳ ಸಂದರ್ಭದಲ್ಲಿ ಸಾವಿರಾರು ಪ್ರಾಣಿಗಳು ಬಲಿಯಾಗುತ್ತವೆ.

ಮಹಿಳೆ ಟಾರ್ಗೆಟ್

ಹಬ್ಬದಲ್ಲಿ ಶಕುನ ಮತ್ತು ಅಪಶಕುನಗಳದ್ದೇ ದರ್ಬಾರು. ಉ. ಭಾರತದಲ್ಲಿ ದೀಪಾವಳಿ ಹಬ್ಬದಲ್ಲಿ ಜೂಜಾಟ ಆಡುವುದನ್ನು ಒಂದು ಶುಭ ಶಕುನ ಎಂದು ಭಾವಿಸಲಾಗುತ್ತದೆ. ಕೆಲವು ವರ್ಷಗಳ ಹಿಂದಿನ ತನಕ ಪುರುಷರಷ್ಟೇ ಇದರಲ್ಲಿ ತಮ್ಮ ಭಾಗ್ಯ ಪರೀಕ್ಷೆ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಮಹಿಳೆಯರು ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಕೆಲವು ಮನೆಗಳಲ್ಲಂತೂ ಪುರುಷರೇ ಮಹಿಳೆಯರಿಗೆ ಜೂಜಾಟಕ್ಕೆ ಪ್ರೋತ್ಸಾಹ ನೀಡುವುದು ಕಂಡುಬರುತ್ತದೆ. ಈ ಒಂದು ಕೆಟ್ಟ ಪರಂಪರೆಯ ಬಗ್ಗೆ ಯಾರೊಬ್ಬರೂ ಚಕಾರ ಎತ್ತುವುದಿಲ್ಲ.

ಜೂಜಾಟದ ಚಟ ಒಂದು ಸಲ ಅಂಟಿಕೊಂಡರೆ ಅದನ್ನು ಅಷ್ಟು ಸುಲಭವಾಗಿ ಬಿಟ್ಟುಬಿಡುವುದು ಕಷ್ಟ.  ಇದು ನಿಜಕ್ಕೂ ಚಿಂತೆಯ ವಿಷಯ. ಧರ್ಮದ ಗುತ್ತಿಗೆದಾರರು ಮಾತ್ರ ಈ ಬಗ್ಗೆ  ಮೌನದಿಂದಿರುತ್ತಾರೆ. ಆದರೆ ಧರ್ಮಗ್ರಂಥಗಳಲ್ಲಿ ಈ ಬಗ್ಗೆ ಉಲ್ಲೇಖ ಇಲ್ಲ.

ಮುಟ್ಟಿನ ಸಮಯ ಶುಭ ಕಾರ್ಯಗಳಿಗಲ್ಲ

ಮುಟ್ಟಿನ ಸಮಯದಲ್ಲಿ ಯಾವುದೇ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬಾರದೆಂದು ನಿರ್ಬಂಧ ಹೇರಲಾಗುತ್ತದೆ. ಅಷ್ಟೇ ಏಕೆ, ಅಡುಗೆಮನೆಯಲ್ಲೂ ಅವರಿಗೆ ಪ್ರವೇಶವಿಲ್ಲ. ಆಕೆ ಚಾಪೆ ಹಾಸಿಕೊಂಡು ಮಲಗಬೇಕೆಂದು, ಪತಿಯನ್ನು ಮುಟ್ಟಕೂಡದೆಂದು, ಕುಡಿಯುವ ನೀರಿನ ಪಾತ್ರೆಯನ್ನೂ ಕೂಡ ಮುಟ್ಟಬಾರದೆಂದು ಧಾರ್ಮಿಕ ನಿರ್ಬಂಧ ಹೇರಲಾಗಿದೆ.

ಇಂದಿನ ನಗರಪ್ರದೇಶದ ಮಹಿಳೆಯರು ಬಹಳಷ್ಟು ರೀತಿನೀತಿಗಳಿಂದ ಮುಕ್ತರಾಗಿದ್ದಾರೆ. ಆದರೆ ಮುಟ್ಟಿನ ಸಂದರ್ಭದಲ್ಲಿ ಪೂಜೆಪುನಸ್ಕಾರಗಳಲ್ಲಿ ಪಾಲ್ಗೊಳ್ಳಲು ಭಯಭೀತರಾಗುತ್ತಾರೆ. ಏಕೆಂದರೆ ಹಾಗೆ ಮಾಡುವುದರಿಂದ ಯಾವುದಾದರೂ ಅನಿಷ್ಟ ಸಂಭವಿಸಬಹುದೆಂಬ ಆತಂಕ ಅವರಿಗಿರುತ್ತದೆ. ದೀಪಾವಳಿಯ ಸಮಯದಲ್ಲಿ ಮುಟ್ಟಾಗಿದ್ದರೆ, ಅವಳು ದೀಪಾಳಿಯ ಮಜ ಪಡೆಯಲಾಗುವುದಿಲ್ಲ. ಅವಳು ಮನೆಯವರಿಂದ ಪ್ರತ್ಯೇಕವಾಗಿ ಅಸ್ಪೃಶ್ಯರ ರೀತಿಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ.

ಹಬ್ಬದ ಖುಷಿ ಮತ್ತು ಉಲ್ಲಾಸದ ಮೇಲೆ ಈ ಪೀರಿಯಡ್ಸ್ ಹೇಗೆ ಗ್ರಹಣದಂತೆ ಕೆಲಸ ಮಾಡುತ್ತದೆಂದು ಬೆಂಗಳೂರಿನ ಗೃಹಿಣಿ ರಾಜಶ್ರೀ ಹೀಗೆ ವಿವರಿಸುತ್ತಾರೆ, “ಕಳೆದ ದೀಪಾವಳಿಯ ಸಂದರ್ಭದಲ್ಲಿ ಮುಟ್ಟಿನಿಂದಾಗಿ ನಾನು ಮನೆಯಲ್ಲಿ ಯಾವುದೇ ವಿಶೇಷ ತಿಂಡಿಗಳನ್ನು ತಯಾರಿಸಲು ಆಗಲಿಲ್ಲ.”

ಮಹಿಳೆಯರ ಮನಸ್ಸಿನ ಮೇಲೆ ಮೂಢನಂಬಿಕೆಯನ್ನು ಅದೆಷ್ಟು ಬಲವಾಗಿ ಬಿತ್ತಲಾಗಿದೆ ಎಂದರೆ, ಹಬ್ಬದ ಸಂದರ್ಭದಲ್ಲಿ ಅದರಲ್ಲೂ ದೀಪಾವಳಿಯಲ್ಲಿ ಮಹಿಳೆ ಖಿನ್ನತೆಗೆ ತುತ್ತಾಗುತ್ತಾಳೆ. ಆದರೆ ಪುರುಷರಿಗೆ ಈ ರೀತಿಯ ಯಾವುದೇ ನಿರ್ಬಂಧಗಳಿಲ್ಲ.

ರಾಜಶ್ರೀ ಅವರ ಪತಿ ಮನೋಜ್‌ ಹೀಗೆ ವಿವರಿಸುತ್ತಾರೆ, “ಧಾರ್ಮಿಕ ನಿರ್ಬಂಧದಿಂದಾಗಿ ನಮ್ಮ ಕುಟುಂಬ ಸಾಕಷ್ಟು ನೋವನ್ನು ಅನುಭವಿಸುವಂತಾಯಿತು. ಯಾರೊಬ್ಬರೊಂದಿಗೂ ಮುಕ್ತವಾಗಿ ಬೆರೆಯಲು ಆಗಲಿಲ್ಲ.”

ಆ ಬಳಿಕ ಯಾರೊಬ್ಬರೂ ನಾನು ನನ್ನ ಇಚ್ಛೆಯಂತೆ ಹಬ್ಬ ಆಚರಿಸಿದೆ ಎಂದು ಹೇಳುವುದಿಲ್ಲ. ಎಲ್ಲರೂ ಒಮ್ಮೊಮ್ಮೆ ಹಬ್ಬದ ಶಿಕ್ಷೆ ಅನುಭವಿಸಿಯೇ ಇರುತ್ತಾರೆ. ನಾವು ಎಲ್ಲಿಯವರೆಗೆ ಈ ಜ್ಯೋತಿಷಿಗಳು ಪುರೋಹಿತರ ಮಾತಿಗೆ ಹೀಗೆ ಕುಣಿಯುತ್ತಿರಬೇಕು? ನಮ್ಮದೇ ಇಚ್ಛೆಯ ಮೇರೆಗೆ ಖರೀದಿ, ಊಟತಿಂಡಿ ಸೇವನೆ, ನಾವು ಗಳಿಸಿದ ಹಣವನ್ನು ನಮ್ಮದೇ ಆದ ರೀತಿಯಲ್ಲಿ ಖರ್ಚು ಮಾಡುವಂತಹ ಸಂಗತಿಗಳು ಖುಷಿ ಕೊಡುತ್ತಲ್ಲವೇ? ಆದರೆ ವಾಸ್ತವದಲ್ಲಿ ಆಗುವುದೇ ಬೇರೆ. ಧರ್ಮದ ಗುತ್ತಿಗೆದಾರರು ಹೇಳಿದ್ದನ್ನೇ ನಾವು ಖರೀದಿಸುತ್ತೇವೆ, ಇಂಥದ್ದನ್ನೇ ತಿನ್ನಬೇಕೆಂದು ಆದೇಶ ಕೊಟ್ಟರೆ ಅಂಥದ್ದನ್ನೇ ಸೇವಿಸುತ್ತೇವೆ. ಏಕೆಂದರೆ ಧರ್ಮದ ಸೂತ್ರ ನಮ್ಮನ್ನು ಕುಣಿಸುತ್ತಿರುತ್ತದೆ. ಇದರ ವಿರುದ್ಧ ಹೋರಾಡುವ ಶಕ್ತಿ ಜನರಲ್ಲಿಲ್ಲ.

ಧರ್ಮದ ಗುತ್ತಿಗೆದಾರರ ಪ್ರಯತ್ನ ಏನಾಗಿರುತ್ತದೆ ಎಂದರೆ, ಜನರು ಪೂಜೆ-ಪುನಸ್ಕಾರಗಳಲ್ಲಿ ಸದಾ ಮಗ್ನರಾಗಿರಬೇಕು, ಎಲ್ಲರೂ ಒಗ್ಗಟ್ಟಾಗಿ ಸೇರಿ ಹಬ್ಬವನ್ನು ಆಚರಿಸಬಾರದು, ಇಲ್ಲದಿದ್ದರೆ ತಮ್ಮ ಧರ್ಮದ ಅಂಗಡಿಗೆ ಅಪಾಯ ಉಂಟಾಗುತ್ತದೆ ಎನ್ನುವುದು ಅವರಿಗೆ ಗೊತ್ತಿರುತ್ತದೆ. ಆರ್ಥಿಕವಾಗಿ ಹಾನಿ ಅನುಭವಿಸಬೇಕಾಗುತ್ತದೆ ಎಂಬುದು ಅವರಿಗೆ ತಿಳಿದಿರುತ್ತದೆ. ಈ ಕಾರಣದಿಂದ ಅವರು ಮೂಢನಂಬಿಕೆ, ರೀತಿನೀತಿಯ ಕಟ್ಟುಪಾಡು ಹಾಕಿ ಜನರನ್ನು ಅದರಲ್ಲಿ ಬಂಧಿಸಿಬಿಟ್ಟಿದ್ದಾರೆ. ಜನರು ಅದರಿಂದ ಹೊರಬರಲು ಆಗದೇ ಆ ವಿಧಿವಿಧಾನಗಳನ್ನು ಅನುಸರಿಸುತ್ತಾ ಪೀಳಿಗೆಯಿಂದ ಪೀಳಿಗೆಗೆ ಸಾಗಿಸುತ್ತಿದ್ದಾರೆ.

ಈಗ ಧರ್ಮದ ಗುತ್ತಿಗೆದಾರರು ಫೇಸ್‌ಬುಕ್‌, ವಾಟ್ಯ್ಆ್ಯಪ್‌, ಮೆಸೆಂಜರ್‌, ಟೆಲಿಗ್ರಾಂ ಮುಖಾಂತರ ಜನರ ಭಾವನೆಯ ಜೊತೆಗೆ ಚೆಲ್ಲಾಟ ಆಡುತ್ತಿದ್ದಾರೆ. ಅಲ್ಲಿ ಬಗೆಬಗೆಯ ಸಂದೇಶಗಳನ್ನು ರವಾನಿಸಿ ತಮ್ಮದೇ ಆದ ತರ್ಕ ಮಂಡಿಸಿ ಅದನ್ನೇ ಸತ್ಯ ಎಂಬಂತೆ ಬಿಂಬಿಸುತ್ತಿದ್ದಾರೆ.

ದೃಶ್ಯ ಬದಲಾಗಿದೆ, ಆದರೆ ಪ್ರೇಕ್ಷಕರು ಮಾತ್ರ ಅವರೇ ಇದ್ದಾರೆ. ಧಾರ್ಮಿಕ ಮನರಂಜನೆ ನೀಡುತ್ತ ಹಾಗೆಯೇ ಹೊರಟಿದ್ದಾರೆ.

– ಭರತ್‌ ಭೂಷಣ್‌

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ