ಬಿದಿರಿನ ವಾದ್ಯ ಎಂದೊಡನೆ ನೆನಪಾಗುವುದು ಕೊಳಲು. ಆದರೆ ಇಲ್ಲಿನ ಬಿದಿರಿನ ಕಾಂಡ ಹೊಮ್ಮಿಸುವ ನಾದ ಅಖಂಡ, ಅದುವೇ ಆಂಕ್‌ಲೂಂಗ್‌! ಏನಿದು? ವಿದೇಶೀ ವಾದ್ಯವೇ? ಇದರಲ್ಲಿ ಪರಿಣತಿ ಗಳಿಸಿ ಸಂಗೀತ ಕಚೇರಿ ನಡೆಸಬಹುದೇ….? ಬನ್ನಿ, ಡಾ. ಅನಸೂಯಾರ ಪರಿಚಯ ಪಡೆದು ಎಲ್ಲವನ್ನೂ ವಿವರವಾಗಿ ತಿಳಿಯೋಣ.

ಆದಿ ಮಾನವನಿಗೆ ಸಂಗೀತ ವಾದ್ಯಗಳ ಕಲ್ಪನೆಯೂ ನಿಸರ್ಗದಿಂದಲೇ ಮೂಡಿ ಬಂದಿದ್ದು ವಸ್ತುಗಳ ಕಂಪನದಿಂದ ಉಂಟಾಗುವ ನಾದ ಮಾಧುರ್ಯಕ್ಕೆ ಅವನು ಮನಸೋತಂದಿನಿಂದಲೇ ವಾದ್ಯಗಳ ಕಲ್ಪನೆ ಮೂಡಿಬಂದಿರಬೇಕು. ವಿಧವಿಧವಾದ ಶಬ್ದೋತ್ಪತ್ತಿಯಿಂದ ಪ್ರೇರಿತವಾಗಿ ವಿವಿಧ ಬಗೆಯ ವಾದ್ಯ ವಿಶೇಷಗಳ ರಚನಾ ತಂತ್ರವನ್ನು ಕಂಡುಕೊಂಡನೆಂದು ಹೇಳಬಹುದು. ವೀಣೆ, ತಂಬೂರಿ, ತಬಲಾ, ಕೊಳಲು ಹೀಗೆ ತಂತಿ, ಮರದಿಂದ ರೂಪುಗೊಳ್ಳುತ್ತಾ ಬಂದು ಅದರ ವಾದನದಿಂದ ಆನಂದಗೊಳ್ಳುವ ಕ್ರಿಯೆ ಆರಂಭವಾಯಿತು.

soc

ಹಳೆಯ ವಾದ್ಯಗಳ ಜೊತೆಗೆ ಇತ್ತೀಚೆಗೆ ತನ್ನ ಅಸ್ತಿತ್ವದ ಛಾಪು ಮೂಡಿಸುತ್ತಿರುವ ವಾದ್ಯವೆಂದರೆ ಭಾರತದಲ್ಲಿ ಆಂಕ್‌ಲೂಂಗ್‌ ವಾದ್ಯ. ಈ ವಾದ್ಯದ ತವರು ಇಂಡೋನೇಷ್ಯಾ. ಅನೇಕ ಬೊಂಬುಗಳ ತುಂಡುಗಳನ್ನು ಒಂದು ಮರದ ಚೌಕಟ್ಟಿನಲ್ಲಿ ವ್ಯವಸ್ಥಿತವಾಗಿ ನೇತು ಹಾಕಿ ಅದನ್ನು ಬೆರಳುಗಳಿಂದ ಅಲ್ಲಾಡಿಸುತ್ತಾ ನಾದ ಹೊಮ್ಮಿಸುವ ಒಂದು ಅಪರೂಪದ ವಾದ್ಯ. ಇಂಡೋನೇಷ್ಯಾದಲ್ಲಿ ಆದಿವಾಸಿಗಳು, ಗುಡ್ಡಗಾಡಿನ ಜನರು ನುಡಿಸುವ ಈ ದೇಶೀಯ ವಾದ್ಯ ಪಾಶ್ಚಾತ್ಯ ಶೈಲಿಗೂ ಹೊಂದಿಕೊಳ್ಳಲು ಬಲ್ಲುದಾಗಿದ್ದು ಇದಕ್ಕೆ ವಿಶೇಷ ತರಬೇತಿ ಅಗತ್ಯ. ಇದನ್ನು ಇಂಡೋನೇಷ್ಯಾದಲ್ಲೇ ಬಲ್ಲವರಿಂದ ಕಲಿತು ಕರ್ನಾಟಕ ಸಂಗೀತಕ್ಕೂ ಅಳವಡಿಸಿಕೊಂಡು ಸಂಗೀತ ಸಾಮ್ರಾಜ್ಯದಲ್ಲೇ ಒಂದು ನವ್ಯ  ಲಹರಿಯನ್ನೆಬ್ಬಿಸಿದ ಕೀರ್ತಿ ಡಾ. ಅನಸೂಯಾ ಕುಲಕರ್ಣಿಯವರದು.

ವಿಶ್ವಸಂಸ್ಥೆ ಅಧಿಕಾರಿ ಪತಿಯೊಡನೆ ಇಂಡೋನೇಷ್ಯಾದಲ್ಲಿದ್ದಾಗ ಆಂಕ್‌ಲೂಂಗ್‌ ವಾದ್ಯರಚನೆ, ಧ್ವನಿ ಉಗಮ, ಕಂಪನಗಳನ್ನು ಸ್ಥಳೀಯ ಗುರುವಿನಿಂದಲೇ ಕಲಿತು ಅದನ್ನು ತಮ್ಮ ಸಾಧನೆಯಿಂದ ಕರ್ನಾಟಕ  ಶಾಸ್ತ್ರೀಯ ಸಂಗೀತಕ್ಕೂ ಅಳವಡಿಸಿ ಸೈ ಎನಿಸಿಕೊಂಡಿದ್ದು ಆಕೆಯ ಸಾಮರ್ಥ್ಯ.

so

ಆಂಕ್‌ಲೂಂಗ್‌ ಹುಟ್ಟು, ರಚನೆ, ವಾದನ ಇದೊಂದು  ಸಮೂಹ ವಾದನದ ಕ್ರಿಯೆ. ಸುಮಾರು 50 ಜನ ನಿಂತು ನುಡಿಸುವ ಬೃಹತ್‌ ವಾದ್ಯ. ಒಂದು ದೊಡ್ಡ ಮರದ ಸ್ಟಾಂಡಿಗೆ ಅಂದಾಜು 50 ಚಿಕ್ಕ ದೊಡ್ಡ ಬೊಂಬಿನ ಕೊಳವೆಗಳನ್ನು ತೂಗಿಸಿರುತ್ತಾರೆ. ಒಂದೊಂದು ರಾಗಕ್ಕೆ ಒಂದೊಂದು ಕೊಳವೆ. ಒಂದೊಂದು ಕೊಳವೆಗೆ ಒಬ್ಬೊಬ್ಬರು ನಿಂತು ರಾಗ ನಿರ್ದೇಶಕ ಕೊಡುವ ಸೂಚನೆಯಂತೆ ಅವರವರ ಕೊಳವೆಗಳನ್ನು ಅಲ್ಲಾಡಿಸುತ್ತಾ ಇರಬೇಕು. ಆಗ ಅದು ಹಾಡಿನ ರೂಪ ತಾಳುತ್ತದೆ. ರಾಗ ನಾದಗಳಿಗೆ ಅವರವರದೇ ಶೈಲಿಯ ಬೆರಳಿನ ಸಂಕೇತಗಳಿರುತ್ತವೆ. ಅದೇ ಆಂಕ್‌ಲೂಂಗ್‌ನ ಆಂತರ್ಯ. ರಾಗ ನಿರ್ದೇಶಕರನ್ನು ಕಂಡಕ್ಟರ್‌ ಎನ್ನುತ್ತಾರೆ. ಬೆರಳುಗಳ ಶೀಘ್ರ ಚಲನೆ ಅತಿ ಮುಖ್ಯವಾದುದು. ಕಂಡಕ್ಟರ್‌ ತನ್ನ ಕೈಬೆರುಳುಗಳನ್ನು ತೋರಿಸುತ್ತಾ ಅದರಂತೆ ವಾದಕರು ಅವನ ಕೈಚಲನೆಯನ್ನು ಎಚ್ಚರಿಕೆಯಿಂದ ಗಮನಿಸುತ್ತಿರಬೇಕು. ವೇದಿಕೆಯಲ್ಲಿ ಇದನ್ನು ನಿಂತುಕೊಂಡೇ ನುಡಿಸಬೇಕು. ಈ ವಾದ್ಯದಲ್ಲಿ ಸುಮಾರು 30-50 ಕೊಳವೆಗಳು ಇರುತ್ತವೆ. ಇದು ಜನರು ಬೀದಿಗಳಲ್ಲಿಟ್ಟುಕೊಂಡೇ ನುಡಿಸುವ ವಾದ್ಯ. ಹೊಲಗದ್ದೆಗಳಲ್ಲಿ ಮದುವೆ ಮುಂತಾದವು ಸಂತೋಷದ ಸಮಯದಲ್ಲಿ ನುಡಿಸುವ ವಾದ್ಯವೇ ಹೊರತು, ಶಿಶುಗೀತೆಗಳು, ದುಃಖದ ಸಮಯದಲ್ಲಿ ನುಡಿಸುವ ವಾದ್ಯವಲ್ಲ.

ಇಂತಹ ಆದಿವಾಸಿಗಳ ಬೃಹತ್‌ ಗಾತ್ರದ ವಾದ್ಯವನ್ನು ಅನಸೂಯಾರವರು ಹ್ರಸ್ವಗೊಳಿಸಿ ನಾದ ಸ್ವರೂಪಕ್ಕೆ ಭಂಗ ಬಾರದಂತೆ ರೂಪಿಸಿಕೊಂಡಿದ್ದಾರೆ. ಕಚೇರಿಗೆ ಹೋಗಲು ಸೌಕರ್ಯವಾಗುವಂತೆ ಒಂದು ಸೂಟ್‌ಕೇಸಿನಲ್ಲಿ ಬಿಚ್ಚಿ ಇಡಬಹುದಾದಷ್ಟು ಗಾತ್ರಕ್ಕೆ ಅಳವಡಿಸಿಕೊಂಡಿದ್ದಾರೆ.

ಭಾರತೀಯ ಸ್ವರಮಂಡಲದ ರೀತಿಯಲ್ಲಿ ಸಪ್ತ ಸ್ವರಗಳಾದ ಸರಿಗಮ ಪದನಿಸಗಳ ಕೊಳವೆಗಳು, ಚೌಕಟ್ಟು, ಕೊಕ್ಕೆ, ಪೀಠ ಎಲ್ಲವನ್ನೂ ಅಣಿಯಾಗಿ ಜೋಡಿಸಿಕೊಂಡಿದ್ದಾರೆ. ಇದರ ಹಿಂದೆ ಅಪಾರ ಶ್ರದ್ಧೆ, ಆಸಕ್ತಿ, ಕೌಶಲ್ಯ, ಸಾಮರ್ಥ್ಯ, ತನ್ಮಯತೆ ಅಡಗಿದೆ. ದೇವರನಾಮ, ರಾಗ, ತಾಳ, ಪಲ್ಲವಿ, ಕೀರ್ತನೆಗಳನ್ನು 3 ಗಂಟೆಗಳ ಕಾಲ ಕುಳಿತುಕೊಂಡೇ ಹಾಡಬಲ್ಲರು.

ಪ್ರಪಂಚದ ಮೂಲೆಮೂಲೆಗಳಲ್ಲೂ ಆಂಕ್‌ಲೂಂಗ್‌ ಕಚೇರಿ ನಡೆಸಿ ಅದಕ್ಕೆ ಹೊಸ ಆಯಾಮ, ಪ್ರಚಾರ ಗಳಿಸಿಕೊಟ್ಟಿದ್ದಾರೆ. ಶಿಷ್ಯೆಯರನ್ನು ತರಬೇತುಗೊಳಿಸಿ ಅವರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ.

ಇವರು ಮನೆಯಲ್ಲಿಯೇ ಇನ್‌ಸ್ಟಿಟ್ಯೂಟ್‌ ಆಫ್‌ ಎಥ್ನೋ ಮ್ಯೂಸಿಕ್‌ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಮನೆಯಲ್ಲಿ ಪ್ರಪಂಚದ ಎಲ್ಲಾ ರೀತಿಯ ವಾದ್ಯಗಳನ್ನು ಇಟ್ಟುಕೊಂಡು ಅವುಗಳನ್ನು ನುಡಿಸುವ ಕಲೆಯೂ ಇವರಿಗೆ ಒಲಿದಿದೆ. ಇವರಿಗೆ ಬಂದಿರುವ ಸನ್ಮಾನ, ಪದಕ, ಪ್ರಶಸ್ತಿಗಳಿಗೆ ಲೆಕ್ಕವಿಲ್ಲ.

society

7ನೇ ವಯಸ್ಸಿನಲ್ಲೇ ಸಂಗೀತಾಭ್ಯಾಸ ನಡೆಸಿ ಮುಂದೆ ಆಕಾಶವಾಣಿಯಲ್ಲಿ ಈಗ್ಗೆ ಸುಮಾರು 2 ದಶಕಗಳ ಹಿಂದೆ ಭಾವಗೀತೆ ಮತ್ತು ಶಾಸ್ತ್ರೀಯ ಸಂಗೀತಗಳ ಸುಪ್ರಸಿದ್ಧ ಗಾಯಕಿಯಾಗಿದ್ದರು. ವಿಶ್ವ ಸಂಗೀತ ಸಭೆಗಳಲ್ಲಿ ಸಂಗೀತ ನುಡಿಸಿ, ಹಾಡಿ ಅದರ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ.

ಪತಿಯೊಡನೆ ವಿದೇಶಗಳಲ್ಲಿ ವಾಸ್ತವ್ಯ ಹೂಡಿದ ಸಮಯದಲ್ಲಿ ಕೇವಲ ಅಲ್ಲಿಯ ವಸ್ತುಗಳನ್ನು ಕೊಳ್ಳುವುದು, ಸತ್ಕಾರ ಕೂಟದಲ್ಲಿ ಭಾಗವಹಿಸುವುದು ಇದರಲ್ಲಿ ಕಾಲ, ಹಣವನ್ನು ವ್ಯಯಿಸದೆ ನಾದದೇವಿಗೆ ಒಂದು ವಿಶೇಷ ಆಭರಣವನ್ನೇ ತೊಡಿಸಿದ್ದಾರೆ!

ಸದ್ಯ ನಿವೃತ್ತ ಪತಿ ನಾರಾಯಣ ಕುಲಕರ್ಣಿಯವರೊಡನೆ ಬೆಂಗಳೂರಿನಲ್ಲಿ ವಾಸ. ಇಬ್ಬರು ಗಂಡುಮಕ್ಕಳು ವಿದೇಶದಲ್ಲಿ ನೆಲೆಸಿದ್ದಾರೆ.

– ಎಚ್‌.ಆರ್‌. ಸೀತಮ್ಮ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ