– ಎನ್. ಅಂಜಲಿ
ಹೆಂಡತಿ ಉದ್ಯೋಗಸ್ಥೆಯಾಗಿ ಇರಬಹುದು ಅಥವಾ ಹೋಂಮೇಕರ್, ಮನೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ಅವಳ ಪಾತ್ರವೇನೂ ಕಡಿಮೆಯಾಗಿರುವುದಿಲ್ಲ. ಆದರೆ ನಂಬಿಕೆ, ತಿಳಿವಳಿಕೆ ಹಾಗೂ ಸಮಾನತೆ ಕುರಿತಂತೆ ಸಮತೋಲನ ಹದಗೆಟ್ಟಾಗ ನಿಮ್ಮ ನಡುವೆ ತಪ್ಪು ಕಲ್ಪನೆ ಉಂಟಾಗುತ್ತದೆ. ಆ ಬಳಿಕ ಎಂದೂ ಮುಗಿಯದ ನಾವು ನೀವು ಎಂಬ ವೈರತ್ವ ಏರ್ಪಡುತ್ತದೆ.
ಇಲ್ಲಿ ನಾವು ಕೆಲವು ಸಂಗತಿಗಳ ಬಗ್ಗೆ ಚರ್ಚಿಸುತ್ತಿದ್ದು, ಅವುಗಳಿಂದ ದೂರ ಇರುವುದರ ಮೂಲಕ ನೀವು ನಿಮ್ಮ ದಾಂಪತ್ಯ ಜೀವನವನ್ನು ಸುಖಿಯಾಗಿಟ್ಟುಕೊಳ್ಳಬಹುದು.
ಒಬ್ಬ ಹುಡುಗಿ ಮದುವೆಯ ಬಳಿಕ ಹೊಸ ಮನೆ, ಹೊಸ ವಾತಾರಣ ಹಾಗೂ ಹೊಸ ಜನರನ್ನು ಎದುರಿಸಬೇಕಾಗಿ ಬರುತ್ತದೆ. ಹೀಗಾಗಿ ಆ ಬಹಳಷ್ಟು ಸಂಗತಿಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ತನ್ನನ್ನು ತಾನು ಹೊಸ ವಾತಾವರಣಕ್ಕೆ ಒಗ್ಗಿಸಿಕೊಳ್ಳುವುದು ಅಲ್ಲಿನ ಜನರ ಅಭ್ಯಾಸಗಳು, ರೀತಿನೀತಿಗಳು, ಕಾನೂನುಗಳು, ಆಹಾರದ ವಿಧಿವಿಧಾನಗಳು ಮುಂತಾದವನ್ನು ತಿಳಿದುಕೊಳ್ಳಬೇಕು. ಅವರ ದಿನಚರಿಗನುಗುಣವಾಗಿ ನಿಮ್ಮ ದಿನಚರಿಯನ್ನು ನಿರ್ಧರಿಸಿಕೊಳ್ಳಿ. ಅವರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಳ್ಳಿ. ಆದರೆ ಆಕೆಗೆ ತನ್ನ ಪತಿ ಜತೆಗೆ ಮಧುರ ಸಂಬಂಧ ವರ್ಧಿಸಿಕೊಳ್ಳುವ ಸಂದರ್ಭದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಗಂಡಹೆಂಡತಿ ನಡುವಿನ ಸಂಬಂಧ ವಿಶ್ವಾಸ ಹಾಗೂ ತಿಳಿವಳಿಕೆಯ ಆಧಾರದಿಂದ ನಡೆಯುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಮತ್ತೊಂದು ಹೊಸ ಶಬ್ದ ಸಮಾನತೆ ಕೂಡ ಅದರೊಂದಿಗೆ ಸೇರಿಕೊಂಡಿದೆ.
ಯಾವಾಗಲೂ ನಾವೇ ಸರಿ ಎಂದುಕೊಳ್ಳಬೇಡಿ. ಕೆಲವು ಯುವತಿಯರಿಗೆ ನಾನು ಮಾಡಿದ್ದೇ ಸರಿ, ಮಾತನಾಡಿದ್ದೇ ಸರಿ ಎಂಬ ತಪ್ಪುಕಲ್ಪನೆಯಿರುತ್ತದೆ. ಒಂದು ವೇಳೆ ಗಂಡ ಯಾವುದಾದರೊಂದು ಕೆಲಸವನ್ನು ತಮ್ಮದೇ ಆದ ರೀತಿಯಲ್ಲಿ ಮಾಡಲು ಯೋಚಿಸುತ್ತಿದ್ದರೆ, ನಿಮ್ಮದೇ ಆದ ರೀತಿಯಲ್ಲಿ ಆ ಕೆಲಸ ಮಾಡಿ ಎಂದು ಅವರ ಮೇಲೆ ಒತ್ತಡ ತರುವುದು ಸರಿಯಲ್ಲ. ಆ ನಿಮ್ಮ ಯೋಚನೆಯನ್ನು ಬದಲಿಸಿಕೊಳ್ಳಬೇಕು. ನಿಮ್ಮ ಗಂಡ ಅಥವಾ ಆತನ ಕುಟುಂಬದವರ ಯೋಚನೆ ಮತ್ತು ನಡೆ ನಿಮಗಿಂತ ಭಿನ್ನವಾಗಿ ಸರಿಯಾದದ್ದಾಗಿರಬಹುದು. ನೀವು ಅದನ್ನು ಗಮನಿಸಿ ಅನುಸರಿಸಿಕೊಂಡು ಹೋಗುವುದರಲ್ಲಿಯೇ ಜಾಣತನವಿದೆ. ಕಡ್ಡಿಯನ್ನು ಗುಡ್ಡ ಮಾಡಬೇಡಿ
ಅವಿವಾಹಿತ ಜೋಡಿಗಳು ಪರಸ್ಪರ ಸಾಕಷ್ಟು ಪ್ರಶ್ನೆಗಳನ್ನು ಮಾಡುತ್ತಾರೆ. ಯಾವುದೇ ಬೇಸರ ಇಲ್ಲದೆ, ದಣಿವಿಲ್ಲದೆ ಅದಕ್ಕೆ ವಿವರಣೆ ಕೊಡುತ್ತಿರುತ್ತಾರೆ. ಆದರೆ ವೈವಾಹಿಕ ಜೀವನದಲ್ಲಿ ಹೀಗಾಗುವುದಿಲ್ಲ. ನಿಮ್ಮ ಅಗಣಿತ ಪ್ರಶ್ನೆಗಳು ಹಾಗೂ ಯಾವುದೇ ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ನೀವು ಕಡ್ಡಿಯನ್ನೇ ಗುಡ್ಡ ಮಾಡುವುದು ನಿಮ್ಮ ಕೆಟ್ಟ ಅನುಭವ ಅನಿಸುವಂತಾಗಬಾರದು. ನೀವು ಅವರ ಮೊದಲಿನ ಗರ್ಲ್ ಫ್ರೆಂಡೂ ಅಲ್ಲ, ಅವರು ನಿಮ್ಮ ಬಾಯ್‌ಫ್ರೆಂಡೂ ಅಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ. ಸಂಗಾತಿಯ ಸಾಂಗತ್ಯಕ್ಕೆ ಮಹತ್ವ ಕೊಡಿ. ಗಂಡ ಎದುರಿಗೆ ಇದ್ದಾಗ ಬೇರೆಯವರನ್ನು ಗಂಡನಿಗಿಂತ ಮಿಗಿಲು ಎಂಬಂತೆ ತೋರಿಸಿಕೊಳ್ಳಲು ಹೋಗಬೇಡಿ. ನೀವು ಹೀಗೇನಾದರೂ ಮಾಡಿದರೆ ನಿಮ್ಮ ಖುಷಿಯ ಜೀವನದಲ್ಲಿ ವಿರಸಕ್ಕೆ ಸ್ಥಾನ ಕೊಡುತ್ತಿದ್ದೀರಿ ಎಂದರ್ಥ. ಉದಾಹರಣೆಗೆ ನಿಮ್ಮ ಗಂಡ ಯಾವುದೋ ಒಂದು ಸಿನಿಮಾ ನೋಡಲು ಯೋಜನೆ ಹಾಕಿಕೊಂಡಿದ್ದಾರೆ. ಅದೇ ಸಮಯದಲ್ಲಿ ನಿಮ್ಮ ತಾಯಿ ಫೋನ್ ಮಾಡಿ, “ಶಾಪಿಂಗ್ ಮಾಲ್ಗೆ ಖರೀದಿಗೆ ಹೊಗೋಣ್ವಾ?”
ಸಾರಿ, ಇವತ್ತು ಅಮ್ಮ ಕರೀತಿದ್ದಾರೆ. ನಿಮ್ಮ ಜತೆಗೆ ಬರ್ಲಿಕ್ಕೆ ಆಗ್ತಿಲ್ಲ ಎಂದು ಖಡಾಖಂಡಿತಾಗಿ ಹೇಳಿದರೆ ಪತಿಗೆ ಅದೆಷ್ಟು ನೋವಾಗಬಹುದು ಎಂಬುದು ನಿಮಗೆ ಬಹುಶಃ ಅರಿವಿರುವುದಿಲ್ಲ. ನಿಮ್ಮ ದೃಷ್ಟಿಯಲ್ಲಿ ಪತಿಗೆ ಎರಡನೇ ಸ್ಥಾನ ಕೊಡುತ್ತಿದ್ದೀರಿ ಎಂದು ಅವರಿಗೆ ಅನಿಸಬಹುದು. ಒಂದು ವೇಳೆ ನೀವು, “ಸಾರಿ ಅಮ್ಮ. ಇಂದು ನಿಮ್ಮ ಜತೆ ಬರೋಕೆ ಆಗುವುದಿಲ್ಲ. ಮತ್ತೆಂದಾದರೂ ಹೋಗೋಣ” ಎಂದು ಹೇಳಿದರೆ ನಿಮ್ಮ ಸಂಬಂಧದಲ್ಲಿ ಯಾವುದೇ ಬಿರುಕು ಉಂಟಾಗದು.
ಬೇರೆಯವರ ಎದುರು ಗಂಡನ ಅವಮಾನ ಮಾಡಬೇಡಿ, ಬೇರೆಯವರ ಎದುರು ನಿಮ್ಮ ಗಂಡನ ತಪ್ಪುಗಳನ್ನು ಎತ್ತಿ ತೋರಿಸುವುದೆಂದರೆ, ನಿಮ್ಮ ಪತಿಗೆ ಅವಮಾನ ಮಾಡಿದಂತೆ. ಹೀಗೆ ಮಾಡುವುದರ ಮೂಲಕ ನೀವು ನಿಮ್ಮ ಪತಿಯನ್ನು ಕಡೆಗಣಿಸುತ್ತಿದ್ದೀರಿ ಎಂದರ್ಥ. ನೀವು ನಿಮ್ಮ ಪತಿಯ ಮಾತನ್ನು ನಡುಮಧ್ಯದಲ್ಲಿಯೇ ತಡೆಯುತ್ತಿದ್ದೀರಿ ಎಂದರೆ, ನಿಮಗೆ ಗಂಡನ ಬಗ್ಗೆ ಯಾವುದೇ ಬೆಲೆ ಇಲ್ಲ ಎಂದರ್ಥ.
ಬೆದರಿಕೆ ಹಾಕಬೇಡಿ
ಗಂಡ ಹೆಂಡತಿ ನಡುವೆ ಅಷ್ಟಿಷ್ಟು ಮನಸ್ತಾಪ, ಜಗಳ ಇದ್ದದ್ದೇ. ಅದರಿಂದ ಪ್ರೀತಿಯೇನೂ ಕಡಿಮೆಯಾಗುವುದಿಲ್ಲ. ಮುನಿಸಿಕೊಳ್ಳುವಿಕೆ, ರಮಿಸುವಿಕೆಯಿಂದ ಆ ಪ್ರೀತಿ ಇನ್ನಷ್ಟು ಹೆಚ್ಚುತ್ತದೆ. ಆದರೆ ಸಣ್ಣ ಪುಟ್ಟ ಮನಸ್ತಾಪದ ಸಂದರ್ಭದಲ್ಲಿ ನೀವು ಗಂಡನಿಗೆ ಬೆದರಿಕೆ ಹಾಕುವ ಮಟ್ಟಿಗೆ ಇಳಿದರೆ, ಅದು ಒಳ್ಳೆಯ ಬೆಳವಣಿಗೆ ಅಲ್ಲ. ಒಂದು ಸಣ್ಣ ಮಾತಿಗೆ ನೀವು ಪತಿಯಿಂದ ಬೇರೆಯಾಗುವ ಬೆದರಿಕೆ ಹಾಕುತ್ತಿದ್ದರೆ ಅದು ವಿಕೋಪಕ್ಕೆ ಹೋಗಬಹುದು. ಪ್ರೀತಿ ಹೆಚ್ಚಾಗುತ್ತಾ ಹೋಗಬೇಕೇ ವಿನಾ, ಅದು ಕಡಿಮೆಯಾಗಲು ಅವಕಾಶ ಕೊಡಬಾರದು.
ತಲೆ ತಗ್ಗಿಸುವಂತೆ ಮಾಡಬೇಡಿ
ಒಮ್ಮೊಮ್ಮೆ ಎಂತಹ ಘಟನೆ ಘಟಿಸಿ ಬಿಡುತ್ತದೆಂದರೆ, ಅದರಲ್ಲಿ ನಿಮ್ಮ ಪತಿಯದ್ದೇ ತಪ್ಪು ಇರುತ್ತದೆ. ಆದರೆ ಇಂತಹ ಸ್ಥಿತಿಯಲ್ಲಿ ನೀವು ತಿಳಿವಳಿಕೆಯುಳ್ಳ ಪತ್ನಿಯಾಗಿದ್ದರೆ, ನೀವು ನಿಮ್ಮ ಗಂಡನನ್ನು ಸಂಕೋಚದಿಂದ ಕುಗ್ಗುವುದರಿಂದ ಬಚಾವ್ ಮಾಡಬಹುದು. ಉದಾಹರಣೆಗೆ, ನೀವು ಎಂತಹ ಒಂದು ರೆಸ್ಟಾರೆಂಟಿಗೆ ಹೋಗುತ್ತಿದ್ದೀರಿ ಎಂದರೆ, ಪತಿ ನಿಮ್ಮನ್ನು ಅನೇಕ ಸಲ ಕರೆದುಕೊಂಡು ಹೋಗಿದ್ದಾರೆ. ಈ ಸಲ ನೀವೇ ಡ್ರೈವಿಂಗ್ ಮಾಡುತ್ತಿದ್ದೀರಿ, ಆದರೆ ಪತಿಗೆ ಆ ಹೋಟೆಲಿನ ಲೊಕೇಶನ್ ಬಗ್ಗೆ ಯಾವುದೇ ನೆನಪು ಬರದೇ ಇದ್ದರೆ, ನೀವು ಸಹನೆ ಕಳೆದುಕೊಂಡು ಕೂಗಾಡಿದರೆ ಪತಿಗೆ ಸಂಕೋಚವಾಗುವುದು ಸಹಜವೇ. ಆ ಸ್ಥಿತಿಯಲ್ಲಿ ನೀವು, “ಆ ಹೋಟೆಲ್‌ಗೆ ಮತ್ತೆಂದಾದರೂ ಹೋಗೋಣ ಈಗ ಸಮೀಪದಲ್ಲಿನ ಹೋಟೆಲಿಗೆ ಹೋಗಿ ಊಟ ಮಾಡೋಣ,” ಎಂದು ಹೇಳುವುದರ ಮೂಲಕ ಅವರನ್ನು ಮುಜುಗರದಿಂದ ತಪ್ಪಿಸಬಹುದು.
ಪತಿಯನ್ನು ಗುರುತಿಸಿ
ಕೆಲವು ಪತ್ನಿಯರು ನಾನು ಪತಿಯನ್ನು ಯಾವಾಗ ಗೌರವಿಸುತ್ತೇನೆಂದರೆ ಅವರು ಯಾವಾಗ ಅದಕ್ಕೆ ಲಾಯಕ್ ಆಗುತ್ತಾರೊ ಆಗ ಎಂದು ಹೇಳುತ್ತಾರೆ. ಹೀಗೆ ಹೇಳುವುದರ ಮೂಲಕ ನೀವು ಗೊತ್ತಿಲ್ಲದೆಯೇ ನಿಮ್ಮ ಪತಿಗೆ ಅಗೌರವ ಸೂಚಿಸಿ ಎಂದು ಸಲಹೆ ಕೊಟ್ಟಂತೆ. ಒಂದು ಸಂಗತಿ ನೆನಪಿನಲ್ಲಿರಲಿ, ಒಂದು ವೇಳೆ ನೀವು ಪತಿಯ ಜತೆಗೆ ಪ್ರೀತಿ ಹಾಗೂ ಗೌರವದಿಂದ ಮಾತನಾಡುವುದನ್ನು ರೂಢಿಸಿಕೊಂಡರೆ, ಆಗ ಗಂಡ ಕೂಡ ನಿಮ್ಮೊಂದಿಗೆ ಗೌರವದಿಂದ ಮಾತನಾಡುವ ಬಗ್ಗೆ ಯೋಚಿಸುವುದು ಅನಿವಾರ್ಯವಾಗುತ್ತದೆ. ಒಂದೇ ವಿಷಯವನ್ನು ಪುನರಾವರ್ತಿಸಬೇಡಿ.
ಯಾವುದೇ ಒಂದು ಕೆಲಸಕ್ಕೆ ಸಂಬಂಧಪಟ್ಟಂತೆ ಅವರಿಗೆ ಮತ್ತೆ ಮತ್ತೆ ನೆನಪಿಸಲು ಹೋಗಬೇಡಿ. ಉದಾಹರಣೆಗೆ: ಅವರ ಔಷಧಿ, ಫಥ್ಯ, ವಿಮೆಯ ಕಂತು ಅಥವಾ ಮನೆಯ ಯಾವುದಾದರೂ ಕೆಲಸಕ್ಕೆ ಸಂಬಂಧ ಪಟ್ಟಂತೆ. ಹೀಗೆ ಮಾಡಿದಲ್ಲಿ ನೀವು ಹೆಂಡತಿಗಿಂತ ಹೆಚ್ಚಾಗಿ ಬಾಸ್‌ನಂತೆ ಕಂಡು ಬರುವಿರಿ.
ಕೆಲಸದ ಪಟ್ಟಿ ಹೇಳಬೇಡಿ
ಪತ್ನಿಯರು ತಮ್ಮ ಪತಿಯಂದಿರಿಗಾಗಿ ಸದಾ ಕೆಲಸಗಳ ಉದ್ದನೆಯ ಪಟ್ಟಿ ತಯಾರಿಸಿ ಇಟ್ಟಿರುತ್ತಾರೆ. ಇಂದು ಅದನ್ನು ಮಾಡಬೇಕು, ರಾತ್ರಿ ಮನೆಗೆ ಬರುವಾಗ ಇದನ್ನು ಮಾಡಬೇಕು ಎಂದೆಲ್ಲ ಹೇಳುವುದರ ಮೂಲಕ ನೀವು ಪತಿಗೆ ದಾಂಪತ್ಯ ಜೀವನವನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗುವಲ್ಲಿ ವಿಫಲರಾಗುತ್ತಿದ್ದೀರಿ ಎಂದು ನೆನಪಿಸಿದಂತೆ. ಇದು ಅವರಿಗೆ ಸದಾ ಕೆಲಸದ ಹೊರೆ ಎಂಬಂತೆ ಭಾಸವಾಗುತ್ತದೆ.
ಮನೆ ಕೆಲಸಗಳ ಪಟ್ಟಿ ಒಪ್ಪಿಸಬೇಡಿ
ಗಂಡ ಮನೆಗೆ ಬರುತ್ತಿದಂತೆ ಹೆಂಡತಿಯರು ತಮ್ಮ ಇಡೀ ದಿನದ ಕೆಲಸದ ವರದಿ ಒಪ್ಪಿಸಲು ಶುರು ಮಾಡಿಬಿಡುತ್ತಾರೆ ಇಂದು ನಾನು ಆ ಕೆಲಸ ಮಾಡಿದೆ, ಇಂತಿಂಥ ಸ್ಥಳಕ್ಕೆ ಹೋಗಿದ್ದೆ, ಇಂತಿಂಥವರು ಮನೆಗೆ ಬಂದ್ದಿದ್ದರು, ಆ ಧಾರಾವಾಹಿ ನೋಡಿದೆ, ಈ ಅಡುಗೆ ಮಾಡಿದೆ ಎಂದೆಲ್ಲ ಹೇಳಿ ದಣಿದು ಬಂದ ಗಂಡನ ದಣಿವನ್ನು ಮತ್ತಷ್ಟು ಹೆಚ್ಚಿಸುತ್ತಾರೆ.
ವಿವಾದವನ್ನು ನೀವೇ ಬಗೆಹರಿಸಿ
ನಿಮ್ಮ ನಡುವೆ ಯಾವಾಗಲಾದರೂ ವಿವಾದ ಉಂಟಾಗಿದ್ದರೆ ಅದನ್ನು ನೀವೇ ಸ್ವತಃ ಬಗೆಹರಿಸಿ. ಮೂರನೇ ವ್ಯಕ್ತಿ ಅದರಲ್ಲಿ ಹಸ್ತಕ್ಷೇಪ ಮಾಡಲು ಅಕಾಶ ಕೊಡಬೇಡಿ.