ಬೆಂಗಳೂರಿನ ರಜನಿ ಹೈಸ್ಕೂಲೊಂದರಲ್ಲಿ ಟೀಚರ್‌. ಆಕೆಯ ಸಾವಿನ ಬಳಿಕ ಗಂಡ ಶ್ಯಾಮನನ್ನು ಬಂಧಿಸಲಾಯಿತು. ಅತ್ತೆಮನೆಯ ಇತರೆ ಆರೋಪಿ ಸದಸ್ಯರು ಪಲಾಯನ ಮಾಡಿದರು. ರಜನಿಗೆ ಇಬ್ಬರು ಮಕ್ಕಳಿದ್ದರು. 2 ವರ್ಷದ ರಶ್ಮಿ ಹಾಗೂ 10 ತಿಂಗಳಿನ ವಿಶಾಖಾ. ಇವರಿಬ್ಬರನ್ನು ರಜನಿಯ ತವರುಮನೆಯವರು ಕರೆದುಕೊಂಡು ಹೋದರು. ರಜನಿಯ ಅಣ್ಣ ರಾಜೇಶ್‌ ಹೇಳಿದ್ದೇನೆಂದರೆ, ರಜನಿ ನೌಕರಿ ಮಾಡಲು ಇಚ್ಛಿಸಿದ್ದಳು. ಆದರೆ ಅವಳ ಗಂಡ ಅದಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಅಷ್ಟೇ ಅಲ್ಲ, ಅವನು ರಜನಿಯನ್ನು ತವರಿಗೆ ಹೋಗಲು ಕೂಡ ಬಿಡುತ್ತಿರಲಿಲ್ಲ. ಈ ವಿಷಯಕ್ಕೆ ಸಂಬಂಧಪಟ್ಟಂತೆ ರಜನಿ ಹಾಗೂ ಶ್ಯಾಮ್ ನಡುವೆ ಮೇಲಿಂದ ಮೇಲೆ ಜಗಳಗಳು ನಡೆಯುತ್ತಿದ್ದವು.

ಸೆಪ್ಟೆಂಬರ್‌ 13 ರಂದು ರಜನಿ ತವರು ಮನೆಗೆ ಹೋಗುವುದಾಗಿ ಹಟ ಹಿಡಿದಿದ್ದಳು. ಆದರೆ ಶ್ಯಾಮ್ ಅವಳಿಗೆ ಹೋಗಲು ಅವಕಾಶ ಕೊಟ್ಟಿರಲಿಲ್ಲ. ಹಾಗಾಗಿ ಅವಳನ್ನು ಮೂರನೇ ಮಹಡಿಯಿಂದ ಕೆಳಕ್ಕೆ ತಳ್ಳಿಬಿಟ್ಟಿದ್ದ. ಆ ಘಟನೆಯಲ್ಲಿ ಆಕೆ ಸತ್ತು ಹೋದಳು. ಶ್ಯಾಮ್ ಪೊಲೀಸರ ಮುಂದೆ ಹೇಳಿದ ವಿಷಯವೇ ಬೇರೆ, “ರಜನಿ ತವರುಮನೆಗೆ ಹೋಗುವುದಾಗಿ ಹಟ ಹಿಡಿದಿದ್ದಳು. ನಾನು ಈಗ ಹೋಗುವುದು ಬೇಡ ಎಂದಿದ್ದೆ. ಅದರಿಂದ ಕೋಪಗೊಂಡು ಮಹಡಿಯಿಂದ ಜಿಗಿದು ಸತ್ತುಹೋದಳು,” ಎಂದು ಹೇಳಿಕೆ ಕೊಟ್ಟ. ರಜನಿಯ ಸಾವಿನ ಬಳಿಕ ಆಕೆಯ ಪತಿ ಶ್ಯಾಮ್ ನನ್ನು ಪೊಲೀಸ್‌ ಕಸ್ಟಡಿಗೆ ಕಳಿಸಲಾಯಿತು. ಪೊಲೀಸ್‌ ಇಲಾಖೆ ಮತ್ತು ನ್ಯಾಯಾಲಯಗಳು ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಿರುತ್ತವೆ. ವರ್ಷಾನುಗಟ್ಟಲೆ ಪೊಲೀಸ್‌ ತನಿಖೆ ನಡೆಯುತ್ತಿರುತ್ತದೆ. ನ್ಯಾಯಾಲಯದಲ್ಲಿ ಪ್ರಕರಣ ಒಂದು ದಿನಾಂಕದಿಂದ ಮತ್ತೊಂದು ದಿನಾಂಕಕ್ಕೆ ಮುಂದೂಡುತ್ತ ಹೋಗುತ್ತಿರುತ್ತದೆ. ಇವೆರಡರ ನಡುವೆ ಆ ಇಬ್ಬರು ಮಕ್ಕಳ ಸ್ಥಿತಿ ಏನಾಗಬಹುದು? ಈ ಪ್ರಶ್ನೆಗೆ ಕಾನೂನು ಎಂದಿನಂತೆ ಮೌನವಾಗಿಯೇ ಇದೆ. ಆ ಮಕ್ಕಳ ಜೀವನ ಹೇಗೆ ನಡೆಯಬಹುದು? ತಮ್ಮೊಂದಿಗೆ ಎಂತಹ ದೊಡ್ಡ ದುರ್ಘಟನೆ ನಡೆದಿದೆ ಎಂಬುದು ಆ ಮಕ್ಕಳಿಗೆ ಗೊತ್ತೇ ಇರಲಿಲ್ಲ. ಆ ಮಕ್ಕಳ ಅಜ್ಜಿ ತಾತಾ ಎಷ್ಟು ದಿನಗಳ ಕಾಲ ಅವರನ್ನು ಸಲಹಬಹುದು? ಅವರ ಪಾಲನೆಪೋಷಣೆ ಮತ್ತು ವಿದ್ಯಾಭ್ಯಾಸದ ಗತಿ ಏನು? ಇಂತಹ ಅನೇಕ ಪ್ರಶ್ನೆಗಳು ಇದ್ದು, ಅವುಗಳಿಗೆ ಸಮಾಜದ ಬಳಿಯಾಗಲಿ, ಕಾನೂನಿನ ಬಳಿಯಾಗಲಿ ಉತ್ತರವಿಲ್ಲ. ಮನೋವಿಜ್ಞಾನಿ ಅಜಯ್‌ ಹೀಗೆ ಹೇಳುತ್ತಾರೆ, “ಕುಟುಂಬ ಮತ್ತು ತಂದೆ ತಾಯಿಗಳ ನಡುವಿನ ಜಗಳ ಅವರನ್ನು ದೈಹಿಕವಾಗಿ ಬೌದ್ಧಿಕವಾಗಿ ಕುಸಿಯುವಂತೆ ಮಾಡುತ್ತದೆ. ಇಂತಹ ಸಾವಿರಾರು ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ.

parivarik-kala

”ಅಜಯ್‌ ತಮ್ಮ ಬಳಿಗೆ ಬಂದಿದ್ದ ದಂಪತಿಗಳ ಕಥೆಯನ್ನು ಹೀಗೆ ವಿವರಿಸುತ್ತಾರೆ. ಗಂಡಹೆಂಡತಿಯ ಜಗಳಗಳಿಂದ ಬೇಸತ್ತು ಅವರ ಮನೆಯವರು ನನ್ನ ಬಳಿ ಕೌನ್ಸೆಲಿಂಗ್‌ಗೆ ಕರೆದುಕೊಂಡು ಬಂದಿದ್ದರು. ಜೊತೆಗೆ ಇಬ್ಬರು ಮಕ್ಕಳನ್ನೂ ಕರೆತಂದಿದ್ದರು. ಗಂಡಹೆಂಡತಿ ಇಬ್ಬರನ್ನು ಮಾತನಾಡಿಸಿದ ಬಳಿಕ ಮಕ್ಕಳನ್ನು ಕೇಳಲಾಯಿತು, “ಮನೆಯಲ್ಲಿ ಅತಿ ಹೆಚ್ಚು ಜಗಳ ಯಾರು ಮಾಡುತ್ತಾರೆ?” ನನ್ನ ಆ ಪ್ರಶ್ನೆಗೆ ಕಂಗಾಲಾಗಿ ಮಕ್ಕಳು ತಂದೆತಾಯಿಯ ಮುಖ ನೋಡತೊಡಗಿದವು. ಮಕ್ಕಳನ್ನು ಬೇರೊಂದು ರೂಮಿಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದೆ. 8 ವರ್ಷದ ಮಗು ಹೇಳಿತು, ಅಪ್ಪ ಅಮ್ಮ ಯಾವಾಗಲೂ ಜಗಳ ಮಾಡ್ತಿರ್ತಾರೆ. ಅವರಿಬ್ಬರೂ ಜಗಳ ಮಾಡಿ, ನಮ್ಮನ್ನು ಕೇಳ್ತಾರೆ, “ಯಾರು ಮೊದಲು ಜಗಳ ಶುರು ಮಾಡ್ತಾರೆ? ಅಮ್ಮ ಕೇಳ್ತಾಳೆ, ಅಪ್ಪನೇ ಮೊದಲು ಜಗಳ ಶುರು ಮಾಡ್ತಾರೆ ಅಲ್ವಾ ಪುಟ್ಟು? ಅಪ್ಪ ಕೇಳ್ತಾರೆ, ಮಮ್ಮಿ ಮೊದಲು ಜಗಳ ಶುರು ಮಾಡ್ತಾಳೆ ಅಲ್ವಾ? ಅವರ ಪ್ರಶ್ನೆಗೆ ನಾನೇನು ಉತ್ತರ ಕೊಡಲಿ ಅಂಕಲ್? ಜಗಳವಾಡಿದ ಬಳಿಕ ಇಬ್ಬರೂ ಕೋಣೆಗೆ ಹೋಗಿ ಬಿಡುತ್ತಾರೆ.

“ನಂತರ ನಾವು ಬ್ರೆಡ್‌ ಜಾಮ್ ಇಲ್ಲವೆ ಬಿಸ್ಕತ್ತು ತಿಂದು ಮಲಗಬೇಕಾಗುತ್ತದೆ. ಒಮ್ಮೊಮ್ಮೆ 6-7 ದಿನಗಳ ತನಕ ಅಪ್ಪಅಮ್ಮ ಮಾತನಾಡುವುದಿಲ್ಲ. ಅವರು ಜಗಳವಾಡಿದಾಗ ನಾವು ಶಾಲೆಗೆ ಹೋಗಲು ಆಗುವುದೇ ಇಲ್ಲ. ಆ ಸಮಯದಲ್ಲಿ ಅಮ್ಮ ಸರಿಯಾಗಿ ತಿಂಡಿ ಕೂಡ ಮಾಡುವುದಿಲ್ಲ.

”ಪೊಲೀಸ್‌ ಅಧಿಕಾರಿ ಸುರೇಶ್‌ ಹೀಗೆ ಹೇಳುತ್ತಾರೆ, “ಅಪ್ಪಅಮ್ಮ ಮಕ್ಕಳ ದೃಷ್ಟಿಯಲ್ಲಿ ಹೀರೋಗಳೇ ಆಗಿರುತ್ತಾರೆ. ಜಗತ್ತಿನ ಅತಿ ಶ್ರೇಷ್ಠ ವ್ಯಕ್ತಿಗಳೆಂದರೆ ಅವರೇ. ಇಂತಹ ಸ್ಥಿತಿಯಲ್ಲಿ ಅಪ್ಪ ಅಮ್ಮ ಜಗಳವಾಡುತ್ತಿದ್ದರೆ, ತಂದೆತಾಯಿಗಳ ಬಗೆಗಿನ ಇಮೇಜ್‌ ಹೊರಟುಹೋಗುತ್ತದೆ. ಅದರಿಂದ ಮಕ್ಕಳಿಗೆ ಬಹಳ ಹಿಂಸೆಯಾಗುತ್ತದೆ. ಮಕ್ಕಳು ಕೊರಗುತ್ತ ಹೋಗುತ್ತಾರೆ. “ಇದರಿಂದ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ವ್ಯತ್ಯಯ ಉಂಟಾಗುತ್ತದೆ. ಯಾವ ಮನೆಯಲ್ಲಿ ಜಗಳಗಳು ಹೆಚ್ಚಾಗಿ ನಡೆಯುತ್ತಿರುತ್ತವೋ, ಆ ಮನೆಯ ಮಕ್ಕಳು ಮಾನಸಿಕ ರೋಗ ಹಾಗೂ ಖಿನ್ನತೆಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಇನ್ನು ಕೆಲವು ಮಕ್ಕಳು ಅತಿಯಾದ ಕೋಪಿಷ್ಟರು ಹಾಗೂ ಅಪರಾಧ ಮನೋಭಾವದವರೂ ಆಗುತ್ತಾರೆ.”

ಮಕ್ಕಳ ಜೀವನ ಅಯೋಮಯ

ತಂದೆತಾಯಿಯ ಜಗಳಗಳ ನೇರ ಪರಿಣಾಮ ಅವರ ಮುಗ್ಧ ಮಕ್ಕಳ ಮೇಲೆ ಆಗುತ್ತದೆ. ಹೆಚ್ಚು ಹಾನಿ ಅನುಭವಿಸುವವರು ಅವರೇ. ಹೈಕೋರ್ಟ್‌ ವಕೀಲ ರಾಮಕೃಷ್ಣ ಹೀಗೆ ಹೇಳುತ್ತಾರೆ, “ಗಂಡಹೆಂಡತಿ ಜಗಳ ಮಾಡಿದ ಬಳಿಕ ತಮ್ಮನ್ನು ತಾವು ಸರಿಯೆಂದು ಸಾಬೀತು ಪಡಿಸಲು ಪರಸ್ಪರರ ವಿರುದ್ಧ ಇನ್ನಷ್ಟು ಉಪ್ಪು ಖಾರ ಬೆರೆಸುತ್ತಾರೆ. ಜಗಳಗಳ ಬಳಿಕ ಹೆಂಡತಿಯರು ತಮ್ಮ ಮಕ್ಕಳಿಗೆ ನಿಮ್ಮ ಅಪ್ಪ ತುಂಬಾ ಕೆಟ್ಟವರು, ಅವರು ಸದಾ ಜಗಳ ಮಾಡ್ತಿರ್ತಾರೆ. ಅವರೊಂದಿಗೆ ಮಾತನಾಡಬಾರದು. “ಇಲ್ಲದಿದ್ದರೆ ಅವರು ನಿನಗೂ ಹೊಡೆಯಬಹುದು ಅಂತಾರೆ. ಇನ್ನೊಂದೆಡೆ ಅಪ್ಪ ತನ್ನ ಮಕ್ಕಳಿಗೆ ಹೇಳುತ್ತಾನೆ, “ಅಮ್ಮನೇ ಜಗಳ ಶುರು ಮಾಡುತ್ತಾಳೆ. ಅವಳು ತುಂಬಾ ಕೆಟ್ಟವಳು,” ಈ ತೆರನಾದ ಮಾತು ಕೇಳಿ ಕೇಳಿ ಮಕ್ಕಳು ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬ ದ್ವಂದ್ವಕ್ಕೆ ಸಿಲುಕುತ್ತಾರೆ. ತಮ್ಮ ತಂದೆತಾಯಿಗಳೇ ಜಗತ್ತಿನ ಶ್ರೇಷ್ಠರು ಎಂದು ಭಾವಿಸಿರುತ್ತಾರೆ. ಆದರೆ ಅವರೇ ಪರಸ್ಪರರನ್ನು ದೂಷಿಸುತ್ತಾರೆ.

ವಿಚ್ಛೇದನದ ಬಳಿಕ ಮಕ್ಕಳ ಸ್ಥಿತಿ

ಹಿರಿಯ ವಕೀಲ ವೆಂಕಟೇಶ್‌ ಪ್ರಸಾದ್‌ ಹೀಗೆ ಹೇಳುತ್ತಾರೆ, “ತಂದೆತಾಯಿಯ ವಿಚ್ಛೇದನದ ಬಳಿಕ ಎಲ್ಲಕ್ಕೂ ಹೆಚ್ಚು ಸವಾಲುಗಳನ್ನು ಎದುರಿಸಬೇಕಾಗಿ ಬರುವುದು ಅವರ ಮಕ್ಕಳಿಗೇ. ಹಲವು ಮೊಕದ್ದಮೆಗಳಲ್ಲಿ ಗಂಡಹೆಂಡತಿ ಇಬ್ಬರೂ ಮಕ್ಕಳು ತನ್ನ ಬಳಿಯೇ ಇರಬೇಕೆಂದು ಹಟ ಹಿಡಿಯುತ್ತಾರೆ. ಇಬ್ಬರ ವಕೀಲರು ನ್ಯಾಯಾಲಯದಲ್ಲಿ ಮಕ್ಕಳು ನನ್ನ ಕಕ್ಷಿದಾರನ ಬಳಿಯೇ ಇರುವಂತಾಗಬೇಕೆಂದು ಮನವಿ ಮಾಡಿಕೊಳ್ಳುತ್ತಾರೆ. ತಾಯಿಯ ಬಳಿಯಿದ್ದರೆ ಅವರಿಗೆ ಹೆಚ್ಚು ಸುರಕ್ಷತೆ ಇರುತ್ತದೆ,” ಎಂದು ಹೆಂಡತಿಯ ಪರ ವಕೀಲ ಹೇಳುತ್ತಾನೆ.

ಎಷ್ಟೋ ಸಲ ನ್ಯಾಯಾಲಯ ಇಬ್ಬರ ಬಳಿಯೂ ಸ್ವಲ್ಪ ಸ್ವಲ್ಪ ಅವಧಿಗಾಗಿ ಮಕ್ಕಳನ್ನು ಇಟ್ಟುಕೊಳ್ಳಲು ತೀರ್ಪು ನೀಡುತ್ತದೆ. ಇಂತಹ ಸ್ಥಿತಿಯಲ್ಲಿ ಮಕ್ಕಳು ತಮ್ಮ ತಂದೆತಾಯಿಯನ್ನೇನೋ ಭೇಟಿಯಾಗುತ್ತಾರೆ. ಆದರೆ ಸಿಗಬೇಕಾದ ನಿಜವಾದ ಪ್ರೀತಿ ಮಾತ್ರ ಸಿಗುವುದಿಲ್ಲ. ಅಮ್ಮ ತನ್ನನ್ನು ತಾನು ಒಳ್ಳೆಯವಳು ಎಂದು ಸಾಬೀತುಪಡಿಸಲು ಬಟ್ಟೆಗಳನ್ನು ಹೊಸ ಹೊಸ ಆಟಿಕೆ ಸಾಮಾನುಗಳನ್ನು ಕೊಡುತ್ತಾಳೆ. ತಂದೆಯಾದವನು ಬೆಲೆಬಾಳುವ ವಸ್ತುಗಳನ್ನು ತಂದುಕೊಟ್ಟು ತನ್ನನ್ನು ತಾನು ಅತ್ಯುತ್ತಮ ತಂದೆ ಎಂದು ಸಾಬೀತುಪಡಿಸಬಹುದು.

ಅಹಂನಲ್ಲಿ ಮುಳುಗಿರುವ ತಂದೆತಾಯಿಗೆ ಇಬ್ಬರೂ ಜೊತೆಗಿದ್ದಾಗ ಮಗುವಿಗೆ ನಿಜವಾದ ಖುಷಿ ದೊರೆಯುತ್ತದೆ ಎಂಬುದು ಮರೆತು ಹೋಗಿರುತ್ತದೆ. ಬೇರೆ ಬೇರೆಯಾಗಿರುವ ಇಬ್ಬರನ್ನೂ ಭೇಟಿಯಾಗಿ ದುಬಾರಿ ಉಡುಗೊರೆಗಳನ್ನು ಪಡೆಯುವುದರಿಂದ ಅವರ ಮುಗ್ಧ ಮನಸ್ಸಿಗೆ ಖುಷಿ ದೊರೆಯುವುದಿಲ್ಲ.

ಜಗಳಗಳಲ್ಲಿ ಸೊರಗುವ ಮಕ್ಕಳು

ಒಟ್ಟು ಕುಟುಂಬದ ಜಗಳಗಳಿಂದ ಹೆಚ್ಚು ತೊಂದರೆಗೆ ಒಳಗಾಗುವವರು ಮಕ್ಕಳೇ ಆಗಿರುತ್ತಾರೆ. ತಮ್ಮ ತಮ್ಮಲ್ಲೇ ಕಚ್ಚಾಡುವ, ಪತ್ತೇದಾರಿಕೆ ನಡೆಸುವ ತಂದೆತಾಯಿಗಳನ್ನು ಕಂಡು ಅಸಹ್ಯ ಉಂಟಾಗುತ್ತದೆ. ಒಂದು ಕಾಲಕ್ಕೆ ಅಪ್ಪ-ಚಿಕ್ಕಪ್ಪ ಒಂದೇ ಕಡೆ ವಾಸಿಸುತ್ತಿದ್ದರು. ಈಗ ಅಪ್ಪ, ಅಮ್ಮ ಜೊತೆ ಜೊತೆಗೆ ವಾಸಿಸಲು ತೊಂದರೆ ಪಡುತ್ತಿರುವುದೇಕೆ ಎಂಬುದು ಅವರಿಗೆ ಗೊತ್ತಾಗುವುದಿಲ್ಲ. ಯಾವ ವಿಷಯಕ್ಕೆ ಸಂಬಂಧಪಟ್ಟಂತೆ ಪರಸ್ಪರ ವೈರಿಗಳಾಗಿದ್ದಾರೆ ಎಂಬುದು ಅವರ ತಿಳಿವಳಿಕೆಗೆ ಸಿಗದ ವಿಷಯ. ಕೌಟುಂಬಿಕ ಪ್ರಕರಣಗಳ ವಕೀಲರಾದ ರಾಮಕುಮಾರ್‌ ಪ್ರಕರಣವೊಂದರ ಬಗ್ಗೆ ವಿವರಿಸುತ್ತಾರೆ. ಧಾರವಾಡ ಜಿಲ್ಲೆಯ ಕುಟುಂಬದ ಅಣ್ಣತಮ್ಮಂದಿರ ಜಗಳ ಕೋರ್ಟ್‌ವರೆಗೂ ತಲುಪಿತು. ಅದರಲ್ಲಿ ಒಬ್ಬ ಸೋದರ ಎಫ್‌ಐಆರ್‌ನಲ್ಲಿ ಅಣ್ಣ ಅತ್ತಿಗೆ ಅಷ್ಟೇ ಏಕೆ, ಅಣ್ಣನ 10 ವರ್ಷದ ಮಗನ ಮೇಲೂ ಪ್ರಕರಣ ದಾಖಲಿಸಿದ್ದ. ಈ ಪ್ರಕರಣ 6 ವರ್ಷದಿಂದ ನಡೆಯುತ್ತಲೇ ಇದೆ. 10 ವರ್ಷದ ಬಾಲಕ ಈಗ 16ರ ಯುವಕನಾಗಿದ್ದಾನೆ. ಅವನ ಮನಸ್ಸಿನಲ್ಲಿ ತನ್ನ ಚಿಕ್ಕಪ್ಪನ ಬಗ್ಗೆ ಅದೆಷ್ಟು ಕೋಪ ಮಡುಗಟ್ಟಿದೆಯೆಂದರೆ, ಒಮ್ಮಿದೊಮ್ಮೆಲೆ ಚಿಕ್ಕಪ್ಪನನ್ನು ಹೊಡೆದೇ ತೀರುತ್ತೇನೆಂದು ಹೇಳಿಬಿಟ್ಟ.

ಈ ಪ್ರಕರಣದಿಂದ ಸ್ಪಷ್ಟವಾಗುವ ಸಂಗತಿಯೆಂದರೆ, ಕೌಟುಂಬಿಕ ಜಗಳಗಳು ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಭಾರಿ ದುಷ್ಪರಿಣಾಮವನ್ನುಂಟು ಮಾಡುತ್ತವೆ. ಅವರನ್ನು ಅತಿಯಾಗಿ ಕೋಪಿಷ್ಟರನ್ನಾಗಿ ಮಾಡುತ್ತವೆ.

ಅಪ್ಪ ಜೈಲಿಗೆ ಹೋದರೆ ಕುಗ್ಗುವ ಮಕ್ಕಳು

ಯಾವುದೇ ನ್ಯಾಯಾಲಯಕ್ಕೆ ಹೋದರೆ ಪೊಲೀಸರು, ಕೈದಿಗಳು, ಅಪರಾಧಿಗಳು, ವಕೀಲರು, ನ್ಯಾಯಾಧೀಶರ ನಡುವೆ ಹಲವು ಮಕ್ಕಳು ಕೂಡ ಕಂಡುಬರುತ್ತವೆ. ಮಕ್ಕಳು ಎಂದೂ ತಮ್ಮ ಅಪ್ಪನನ್ನು ಬೇಡಿ ಹಾಕಿದ ಸ್ಥಿತಿಯಲ್ಲಿ ನೋಡಲು ಇಷ್ಟಪಡುವುದಿಲ್ಲ. ಹಾಗೇನಾದರೂ ಕಂಡುಬಂದರೆ ಅವರ ಮನಸ್ಸು ಕುಗ್ಗಿಹೋಗುತ್ತದೆ.

8-10 ವರ್ಷದ ಮಗುವಿಗೆ ತನ್ನ ತಂದೆ ಏನು ತಪ್ಪು ಮಾಡಿದ್ದ ಎಂಬುದು ಗೊತ್ತೇ ಆಗುವುದಿಲ್ಲ. ಆಗ ಆ ಮಗು ತಾಯಿಯ ಕಡೆಯೇ ನೋಡುತ್ತ ರೋಧಿಸುತ್ತಿರುವುದು ಕಂಡುಬರುತ್ತದೆ. ಅಮ್ಮ ಅತ್ತರೆ ಅವಕ್ಕೆ ಇನ್ನಷ್ಟು ಅಳು ಬಂದುಬಿಡುತ್ತದೆ.

`ಅಪ್ಪ ನಮ್ಮ ಜೊತೆ ಏಕೆ ಇರುವುದಿಲ್ಲ?’ ಎಂದು ಮಗು ಪ್ರಶ್ನೆ ಮಾಡಿದಾಗ ತಾಯಿಯ ಸ್ಥಿತಿ ನಿಜಕ್ಕೂ ಗಂಭೀರ. ಆಕೆ ಆ ಪ್ರಶ್ನೆಗೆ ಏನು ತಾನೆ ಉತ್ತರ ಕೊಡಬಹುದು? ತಂದೆಗೆ ಪೊಲೀಸರು ಏಕೆ ಬೇಡಿ ಹಾಕಿ ಕರೆದುಕೊಂಡು ಹೋದರು? ಅವರು ವಾಪಸ್‌ ಯಾವಾಗ ಬರುತ್ತಾರೆ? ಎಂಬೆಲ್ಲ ಪ್ರಶ್ನೆಗಳು ಆಕೆಯನ್ನು ಗಂಭೀರ ಯೋಚನೆಯಲ್ಲಿ ಮುಳುಗಿಸುತ್ತವೆ.

– ವಿ. ವತ್ಸಲಾ ಪ್ರಸಾದ್‌ 

ಮಕ್ಕಳ ಮೇಲಾಗುವ ಪರಿಣಾಮಗಳು

– ಮಕ್ಕಳು ಮೌನದಿಂದಿರುತ್ತಾರೆ. ಯಾರ ಜೊತೆಗೂ ಬೆರೆಯಲು ಹಿಂದೇಟು ಹಾಕುತ್ತಾರೆ.

– ಅವರಿಗೆ ನಿದ್ರೆ ಬರದಿರುವ ತೊಂದರೆ ಬಾಧಿಸಬಹುದು. ಕನಸಿನಲ್ಲೂ ತಂದೆತಾಯಿಯ ಜಗಳವಾಡುತ್ತಿರುವಂತೆ ಭಾಸವಾಗುತ್ತದೆ.

– ಅನೇಕ ಮಕ್ಕಳು ಮಾದಕದ್ರವ್ಯಗಳ ಚಟಕ್ಕೆ ತುತ್ತಾಗಬಹುದು.

– ಅವರು ಕೋಪಿಷ್ಟರೂ, ಜಗಳಗಂಟರೂ ಆಗಬಹುದು.

– ಅಪರಾಧ ಚಟುವಟಿಕೆಗಳತ್ತ ಹಜ್ಜೆ ಹಾಕುವ ಸಾಧ್ಯತೆಯೂ ಇರುತ್ತದೆ.

– ಓದುಬರಹದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.

– ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆ ಕುಂಠಿತಗೊಳ್ಳಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ