– ಜಿ.ಕೆ. ತಾರಾ
ನಿಮ್ಮ ಒಳ್ಳೆಯ ವರ್ತನೆ ಮತ್ತು ಪ್ರೀತಿಯಿಂದ ಎಂಥವರ ಹೃದಯವನ್ನಾದರೂ ಗೆಲ್ಲಬಹುದು. ಅವರನ್ನು ನಿಮಗೆ ತಕ್ಕಂತೆ ಪರಿವರ್ತಿಸಿಕೊಳ್ಳಬಹುದು. ಅದಕ್ಕಾಗಿ ನಿಮ್ಮನ್ನು ನೀವು ಅವಲೋಕಿಸಿಕೊಳ್ಳಬೇಕು. ನನ್ನಲ್ಲಿ ಯಾವುದೇ ಲೋಪ ಇಲ್ಲ ತಾನೇ? ಚಿಕ್ಕಪುಟ್ಟ ಮಾತುಗಳಿಗೆ ನಾನು ಜಗಳವಾಡುತ್ತೇನಾ? ಈ ಸಂಗತಿಗಳ ಬಗ್ಗೆ ನೀವು ಗಮನಹರಿಸಿದರೆ ಜಗಳ, ಕೋಪ, ಮನಸ್ತಾಪ ಎಲ್ಲದಕ್ಕೂ ಪೂರ್ಣ ವಿರಾಮ ಹಾಕಬಹುದು.
ಅಂದಹಾಗೆ ಇದು ಎಲ್ಲರ ಕಥೆಯೂ ಹೌದು. ಎಷ್ಟೇ ಓದಿದವರಾಗಿದ್ದರೂ ಕೋಪದ ಮೇಲೆ ನಿಯಂತ್ರಣ ಹೇರಲು ಮಾತ್ರ ಆಗುವುದಿಲ್ಲ. ಗೊತ್ತಿದ್ದೊ, ಗೊತ್ತಿಲ್ಲದೆಯೋ ನಾಲಿಗೆ ತನ್ನ ಹಿಡಿತ ಕಳೆದುಕೊಳ್ಳುತ್ತದೆ. ಎದುರಿಗಿನ ವ್ಯಕ್ತಿಯ ಬಗ್ಗೆ ಮನಸ್ಸಿನಲ್ಲಿ ಯಾವುದೇ ದ್ವೇಷ ಅಸೂಯೆ ಇಲ್ಲ, ಆದರೆ ಬಾಯಲ್ಲಿ ಹೃದಯವನ್ನು ತಲ್ಲಣಗೊಳಿಸುವಂತಹ ಮಾತುಗಳು ಏಕೆ ಬರುತ್ತವೆ? ಇಂಥವೇ ಮಾತುಗಳು ಸಂಬಂಧದಲ್ಲಿ ಬಿರುಕು ಮೂಡಿಸುತ್ತವೆ. ಆ ಸಂಬಂಧವನ್ನು ಪುನಃ ಜೋಡಿಸುವುದು ಕಷ್ಟ.
ನಮ್ಮ ನೆರೆಮನೆಯ ನವವಧು ರಾಗಿಣಿ ಕೆಲವು ದಿನಗಳಿಂದ ಗಂಭೀರವಾಗಿದ್ದುದನ್ನು ಕಂಡೆ. ಸದಾ ನಗು, ಚಂಚಲ ಸ್ವಭಾವದ ಆಕೆ ಗಂಭೀರವಾಗಿರುವುದನ್ನು ನೋಡಲಾಗಲಿಲ್ಲ. ಅವಳ ಮನವೊಲಿಸಿ ಕೇಳಿದಾಗ ಗಂಡನೊಂದಿಗೆ ಮನಸ್ತಾಪ ಉಂಟಾಗಿ ಮಾತು ನಿಂತಿದೆ ಎಂದು ಆಕೆ ಹೇಳಿದಳು. `ಪ್ರೀತಿಯೇ ದೈವ, ಪ್ರೀತಿಯೇ ಎಲ್ಲ,’ ಎಂದುಕೊಂಡು ಮನೆಯವರನ್ನು ಬಿಟ್ಟು ಮದುವೆ ಬಂಧನಕ್ಕೊಳಗಾದ ಈ ಜೋಡಿ 3 ತಿಂಗಳಲ್ಲಿಯೇ ಮದುವೆ ಮುರಿದುಕೊಳ್ಳುವ ಸ್ಥಿತಿಗೆ ಬಂದಿದ್ದು ಆಶ್ಚರ್ಯವನ್ನುಂಟು ಮಾಡಿತು. ಅವರ ಅಪ್ಪಟ ಪ್ರೀತಿ ಈ ರೀತಿ ದುರಂತ ಸ್ಥಿತಿಗೆ ತಲುಪಬಾರದೆಂದು ನಾನು ಅವರಿಬ್ಬರನ್ನು ಮನೆ ಸಮೀಪವೇ ಇದ್ದ ಕೌನ್ಸೆಲರ್ ಒಬ್ಪರ ಬಳಿ ಕರೆದುಕೊಂಡು ಹೋದೆ.
ವೈವಾಹಿಕ ಸಲಹೆಗಾರ ರಾಜೇಂದ್ರ ಅವರಿಬ್ಬರನ್ನು ಕೂರಿಸಿಕೊಂಡು ಬಹಳಷ್ಟು ಸಂಗತಿಗಳ ಬಗ್ಗೆ ಚರ್ಚಿಸಿದಾಗ, ಅವರಿಗೆ ತಮ್ಮ ತಪ್ಪಿನ ಅರಿವಾಯಿತು. ಈಗ ಅವರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.
ಯೋಚಿಸಿ ಮಾತನಾಡಿ
ರಾಜೇಂದ್ರ ಹೀಗೆ ಹೇಳುತ್ತಾರೆ, “ಬಿಲ್ಲಿನಿಂದ ಹೊರಟ ಬಾಣ ಬಾಯಿಯಿಂದ ಹೊರಟ ಮಾತು ಮತ್ತೊಮ್ಮೆ ವಾಪಸ್ ಬರದು. ಹೀಗಾಗಿ ಏನೇ ಮಾತಾಡಿ, ಯೋಚಿಸಿ ಮಾತನಾಡಿ.“ಗಂಡ-ಹೆಂಡತಿ ನಡುವೆ ನಾನು ನೀನು ಎಂದು ಕಿತ್ತಾಡುವುದು ಅಸಾಮಾನ್ಯ ಸಂಗತಿಯೇನಲ್ಲ. ಅವರ ನಡುವೆ ಅಷ್ಟಿಷ್ಟು ಮನಸ್ತಾಪ, ಜಗಳ ಸಾಮಾನ್ಯ. ಅವರ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಒಮ್ಮೊಮ್ಮೆ ಅಷ್ಟಿಷ್ಟು ಮುನಿಸು ಕೋಪ ಅಗತ್ಯ. ಕೋಪ, ಮುನಿಸು ಒಂದು ಹಂತದತನಕ ಸರಿ, ಅದು ಮೇರೆ ಮೀರಿದರೆ ವಿವಾಹ ಬಂಧನವನ್ನೇ ಅಲ್ಲಾಡಿಸಿಬಿಡುತ್ತದೆ.
”ಜಗಳಗಳಾಗುವುದು ಏಕೆ? ಇದಕ್ಕೆ ಮುಖ್ಯ ಕಾರಣ ಏನು? ಒಮ್ಮೊಮ್ಮೆ ಜಗಳಗಳಾಗಲು ಗಂಡ ಕಾರಣನೊ, ಹೆಂಡತಿ ಕಾರಣವೋ ಒಂದೂ ಗೊತ್ತಾಗುವುದಿಲ್ಲ. ತನ್ನ ಯಾವ ಮಾತು ಮುನಿಸಿಕೊಳ್ಳಲು ಕಾರಣವಾಯಿತು ಎಂದು ಗಂಡನಿಗೆ ಹೊಳೆಯುವುದೇ ಇಲ್ಲ. ಅದೇ ರೀತಿ ತನ್ನ ಯಾವ ಮಾತಿಗೆ ಗಂಡ ಕೋಪಿಸಿಕೊಂಡರು ಎಂದು ಹೆಂಡತಿಯ ನೆನಪಿಗೆ ಬರುವುದೇ ಇಲ್ಲ.
ಕೆಲವೊಂದು ಮಾತುಗಳಿಗೆ ಮೌನವಹಿಸುವುದು, ಗಂಡಹೆಂಡತಿ ಇಬ್ಬರಿಗೂ ಒಳ್ಳೆಯದು. ನೀವಾಡುವ ಒಂದು ಚುಚ್ಚುಮಾತು ಜೀವನವಿಡೀ ನೆನಪು ಉಳಿಯುಂತೆ ಮಾಡಬಹುದು. ಸಂಬಂಧದಲ್ಲಿ ನಿರಾಸಕ್ತಿ ಉಂಟಾಗದಿರಲು ಕೆಲವು ಸಂಗತಿಗಳಿಂದ ದೂರ ಉಳಿಯುವುದು ಹಾಗೂ ಕೆಲವು ಸಂಗತಿಗಳ ಬಗ್ಗ ಎಚ್ಚರ ವಹಿಸುವುದು ಅವಶ್ಯಕ.
ನನ್ನ ಬಾಯ್ಫ್ರೆಂಡ್/ಗರ್ಲ್ ಫ್ರೆಂಡ್ ಆಗಿಹೋದದ್ದು ಆಗಿಹೋಯಿತು, ಇನ್ನು ಅದರ ಬಗ್ಗೆ ನೆನಪಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎನ್ನುವ ಸಂಗತಿ ನಿಮಗೆ ನೆನಪಿರಬೇಕು. ನೀವು ಪತಿಯ ಹೃದಯದಲ್ಲಿ ಹಾಗೂ ಪತಿ ನಿಮ್ಮ ಹೃದಯದಲ್ಲಿ ಭದ್ರವಾಗಿ ಬೇರೂರಿ ಬಿಟ್ಟಿದ್ದರೆ, ನಿಮ್ಮ ಹಳೆಯ ಬಾಯ್ಫ್ರೆಂಡ್ ಅಥವಾ ಪತಿಯ ಗರ್ಲ್ ಫ್ರೆಂಡ್ ಬಗ್ಗೆ ಚರ್ಚಿಸುವುದು ನಿಮ್ಮಿಬ್ಬರ ನಡುವೆ ಅತೃಪ್ತಿ ಉಂಟು ಮಾಡುತ್ತದೆ ಹೊರತು ಬೇರೇನೂ ಅಲ್ಲ. ಹೀಗಾಗಿ ನಿಮ್ಮ ಹಳೆಯ ಪ್ರೇಮಿಗಳ ನೆನಪನ್ನು ಅಪ್ಪಿತಪ್ಪಿಯೂ ಪ್ರಸ್ತಾಪಿಸಲು ಹೋಗಬೇಡಿ.
ಚಮತ್ಕಾರಿ ವಾಕ್ಯ
`ಐ ಲವ್ ಯೂ’ ಎಂಬ ಈ 3 ಪದಗಳ ವಾಕ್ಯದಲ್ಲಿ ಜೇನು ಬೆರೆತಂತಿದೆ. ಒಂದು ಹಳೆಯ ದಿನವನ್ನು ನೆನಪು ಮಾಡಿಕೊಳ್ಳೋಣ. ಭೇಟಿಯಾಗುವ ಸಮಯ 5ಕ್ಕೆ ನಿಗದಿಯಾಗಿತ್ತು. ಏನೋ ಕಾರಣದಿಂದ ನಿಮಗೆ ಸಕಾಲಕ್ಕೆ ತಲುಪಲು ಆಗುವುದಿಲ್ಲ. ಇಂಥದರಲ್ಲಿ ಅವರು ಕೋಪದಿಂದ ಕೆಂಗಣ್ಣು ಬೀರುವುದು ಸಹಜವೇ ಆಗಿದೆ.
ಆದರೆ ನೀವು ಹೇಳುವ ಒಂದು ವಾಕ್ಯ ಅದನ್ನೆಲ್ಲ ಮರೆಸಿಬಿಟ್ಟಿತು. ನೀವು ಅವರ ಕೈಹಿಡಿದು ನಿಮ್ಮ ಕೈಯಲ್ಲಿಟ್ಟುಕೊಂಡು ಹೇಳಿದಿರಿ, `ಐ ಲವ್ ಯೂ!’ ಕ್ಷಣಾರ್ಧದಲ್ಲಿ ನಿಮ್ಮ ಪ್ರೀತಿಪಾತ್ರರ ಕೋಪ ಮಾಯ. ಅದು ಪ್ರೀತಿಯಲ್ಲಿ ಪರಿವರ್ತನೆ. ಪ್ರಶ್ನೆಯೂ ಇಲ್ಲ, ಯಾವುದೇ ಉತ್ತರ ಇಲ್ಲ. ಇದೊಂದು ಚಮತ್ಕಾರಿ ವಾಕ್ಯ. ಪರಿಸ್ಥಿತಿ ಹೇಗೇ ಇರಲಿ, ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಇದೊಂದು ವಾಕ್ಯ ಸಾಕಾಗುತ್ತದೆ. ನೀವು ಗಮನ ಕೊಡಬೇಕಾದ ಒಂದು ಸಂಗತಿಯೆಂದರೆ, ನೀವು `ಐ ಲವ್ ಯೂ,’ ಎಂದು ಹೇಳಿದಾಗ ಮಹಿಳೆಯ ಮನಸ್ಸಿನಲ್ಲಿ ಭಾವನೆಗಳ ಮಹಾಪೂರವೇ ನುಗ್ಗಿಬಿಡುತ್ತದೆ. ಆಕೆ ನಿಮ್ಮನ್ನು ಪ್ರತಿಯಾಗಿ, `ನೀವು ನಿಜವಾಗಿಯೂ ಹಾಗೆ ಭಾವಿಸುತ್ತೀರಾ?’ ಎಂದು ಪ್ರಶ್ನಿಸಬಹುದು. ನೀವು ಆ ಪ್ರಶ್ನೆಗೆ ಉತ್ತರ ಕೊಡುವ ಬದಲು, ಏನನ್ನಾದರೂ ವಿಶೇಷವಾಗಿ ಹೇಳುವುದರ ಮೂಲಕ ಆಕೆಯ ಮನಸ್ಸು ಗೆಲ್ಲಲು ಪ್ರಯತ್ನ ಮಾಡಬಹುದು.
ಈಟಿಂಗ್ ಎಂಜಾಯ್ ಮಾಡಿ
ನೀವು ಊಟ ತಿಂಡಿಯ ಬಗ್ಗೆ ಅತಿಯಾಗಿ ಆಸಕ್ತಿ ಹೊಂದಿದ್ದೀರಾ? ತಮ್ಮ ಮೈಮಾಟ ಸುಂದರವಾಗಿ ಕಾಣಬೇಕು, ಸ್ಲಿಮ್ ಆಗಿ ಕಾಣಬೇಕು ಎಂದು ಹುಡುಗಿಯರು ಬಹಳಷ್ಟು ಪ್ರಯತ್ನ ಪಡುತ್ತಿರುತ್ತಾರೆ. ಆದರೆ ಹೊಸ ರುಚಿ ಸವಿಯಲು ಅವರ ಮನಸ್ಸು ಕಾತರದಿಂದಿರುತ್ತದೆ. ಮದುವೆಯ ಮುಂಚೆ ಅಥವಾ ಮದುವೆಯ ನಂತರ ನೀವಿಬ್ಬರೂ ಡಿನ್ನರ್ಗೆ ಹೋಗಿರಬಹುದು. ಮೆನು ಕಾರ್ಡ್ ನೋಡಿಕೊಂಡು ನಿಮ್ಮ ಸಂಗಾತಿ ಭಾರಿ ಡಿಶ್ಗೆ ಆರ್ಡರ್ ಮಾಡಿರಬಹುದು. ಆ ಭರ್ಜರಿ ಆರ್ಡರ್ ನೋಡಿ ದಂಗಾಗಿ `ನೀನು ಇಷ್ಟೊಂದೆಲ್ಲ ತಿಂತೀಯಾ?’ ಎಂದು ಪ್ರಶ್ನೆ ಮಾಡಲು ಹೋಗಬೇಡಿ. ಇಲ್ಲದಿದ್ದರೆ ನಿಮ್ಮ ಪರಿಸ್ಥಿತಿ ಗಂಭೀರವಾಗಬಹುದು. ಯುವತಿಯರ ಆಹಾರ ಅಭ್ಯಾಸದ ಬಗ್ಗೆ ಯಾವುದೇ ಪ್ರಶ್ನೆ ಮಾಡಬಾರದು. ಏಕೆಂದರೆ ಆಹಾರದ ಬಗೆಗೆ ಅವರು ಅತಿ ಸೂಕ್ಷ್ಮವಾಗಿರುತ್ತಾರೆ. ಹೊಸ ಹೊಸ ಆಹಾರದ ರುಚಿ ಸವಿಯುವುದು ಒಂದು ರೀತಿಯಲ್ಲಿ ಅವರ ಖಯಾಲಿಯೇ ಆಗಿಬಿಟ್ಟಿದೆ. ಆಹಾರದ ಬಗೆಗಿನ ಟೀಕೆಟಿಪ್ಪಣಿಗಳಿಂದ ಮನಸ್ತಾಪ ಎಷ್ಟೊಂದು ವಿಕೋಪಕ್ಕೆ ಹೋಗಬಹುದು ಎಂದರೆ, ನಿಮ್ಮಿಬ್ಬರ ನಡುವೆ ಮಾತುಕಥೆ ನಿಲ್ಲಬಹುದು. ನೀವು ಡೈನಿಂಗ್ ಟೇಬಲ್ ಬಳಿ ಇದ್ದಾಗ ಆ ಕ್ಷಣಗಳನ್ನು ಎಂಜಾಯ್ ಮಾಡಿ. ಜೊತೆಗೆ ಸಂಗಾತಿಗೆ ಅಸಮಾಧಾನ ಆಗಬಾರದೆಂದರೆ ಭಾರಿ ಆರ್ಡರ್ ಬಗ್ಗೆ ಪ್ರಶ್ನೆ ಮಾಡಬೇಡಿ.
ಅಭ್ಯಾಸವೇ ಆಗಿಬಿಟ್ಟಿದೆ
ಯಾವುದೇ ಒಂದು ಕೆಲಸದಲ್ಲಿ ತಪ್ಪಾಗಿದ್ದರೆ ಅಥವಾ ನೀವು ಹೇಳಿದಂತೆ ಮಾಡಿರದಿದ್ದರೆ, ನೀವು ಹಿಂದೆಮುಂದೆ ಯೋಚಿಸದೆ `ಇದು ನಿನ್ನ ಅಭ್ಯಾಸವೇ ಆಗಿಬಿಟ್ಟಿದೆ,’ ಎಂದು ಹೇಳಿಬಿಡುತ್ತೀರಿ ನಿಮಗೆ ಈ ಮಾತು ಚಿಕ್ಕದು ಎನಿಸಬಹುದು. ಆದರೆ ಈ ಮಾತು ಕಿಡಿಯತರಹ ಬೆಂಕಿಯನ್ನು ಮುಂದೆ ಮುಂದೆ ತೆಗೆದುಕೊಂಡು ಹೋಗುತ್ತಿರುತ್ತದೆ. ಅಷ್ಟೇ ಅಲ್ಲ, ಅತ್ತು ಕರೆದು ಮಾಡುವ ಅವರ ಅಭ್ಯಾಸ ಬಲವನ್ನು ಹೆಚ್ಚಿಸಲು ನೀವೇ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಇದೇ ಚಿಕ್ಕ ಪುಟ್ಟ ಮಾತು ನಾನು
ನೀನು ಎಂಬಂತಹ ಸ್ಥಿತಿ ತಂದು ಮನಸ್ತಾಪ ಉಂಟು ಮಾಡಬಹುದು.
ಹೋಲಿಕೆ ಸಲ್ಲದು
ಗರ್ಲ್ ಫ್ರೆಂಡ್ ಅಥವಾ ಸಂಗಾತಿಯನ್ನು ಆಕೆಯ ಅಮ್ಮ ಅಥವಾ ಅಕ್ಕತಂಗಿಗೆ ಹೋಲಿಸಿ ಮಾತನಾಡಲು ಹೋಗಬೇಡಿ. ಆಕೆ ಮತ್ತು ಅಕ್ಕತಂಗಿಯರ ನಡುವಿನ ಸಂಬಂಧದ ಬಗ್ಗೆ ಆಕೆಯಷ್ಟು ನಿಮಗೆ ಖಂಡಿತ ಗೊತ್ತಿರುವುದಿಲ್ಲ. ತಾಯಿಯಾಗಲಿ, ಅಕ್ಕತಂಗಿಯರ ಬಗೆಗಾಗಲಿ ಆಕೆ ಚೆನ್ನಾಗಿ ಚಿರಪರಿಚಿತಳಾಗಿರುತ್ತಾಳೆ. ಇದರ ಹೊರತಾಗಿ ಪ್ರತಿಯೊಬ್ಬ ವ್ಯಕ್ತಿ ತನ್ನದೇ ಆದ ವಿಶೇಷ ವ್ಯಕ್ತಿತ್ವ ಹೊಂದಲು ಬಯಸುತ್ತಾನೆ. ಹೀಗಾಗಿ ಅವರನ್ನು ಬೇರೆಯರ ಜೊತೆಗೆ ಹೋಲಿಸಿ ನೋಡುವುದು ಏಕೆ?
ನಿಮ್ಮನ್ನು ನೀವು ಅವಲೋಕಿಸಿ ಕೇವಲ ಕಟುಂಬದ ಶಬ್ದಗಳಲ್ಲಿ ಟೀಕೆ ಹಾಗೂ ಇತರರ ಮುಂದೆ ಅಪಹಾಸ್ಯ ಮಾಡುವುದರಿಂದ ನಾವು ಯಾರನ್ನೂ ಬದಲಿಸಲಾಗುವುದಿಲ್ಲ. ಅದರ ಬದಲು ಇತರರ ಭಾವನೆಗಳು ಏನು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಉತ್ತಮ ವರ್ತನೆ ಹಾಗೂ ಪ್ರೀತಿಯಿಂದ ಇತರರ ಹೃದಯನ್ನು ಗೆಲ್ಲಬಹುದಾದರೆ, ಸಂಗಾತಿಯ ಹೃದಯವನ್ನು ಗೆಲ್ಲಲು ಏಕೆ ಸಾಧ್ಯವಿಲ್ಲ? ಇದಕ್ಕಾಗಿ ಬೇಕಾಗಿರುವುದು ನಮ್ಮನ್ನು ನಾವು ಅವಲೋಕಿಸಿಕೊಳ್ಳುವುದು. ನಮ್ಮಲ್ಲಿ ಏನೂ ಲೋಪವಿಲ್ಲ ತಾನೇ? ಗಂಡಹೆಂಡತಿಯ ನಡುವೆ ಇದರ ಅಗತ್ಯ ಇನ್ನಷ್ಟು ಹೆಚ್ಚಿದೆ. ನಮ್ಮ ಸರಿಯಾದ ಯೋಚನೆಯೇ ನಮ್ಮನ್ನು ಸರಿದಾರಿಯಲ್ಲಿ ನಡೆಸಲು ನೆರವಾಗುತ್ತದೆ. ಆಗ ನಮಗೆ ಬೇರೆಯರ ಬಗ್ಗೆ ದೂರುಗಳೇ ಇರುವುದಿಲ್ಲ.