– ಜಿ. ಸೀಮಾ, ಬೆಂಗಳೂರು.
ನಿಹಾರಿಕಾ ತನ್ನ ಗಂಡನಿಂದ ವಿಚ್ಛೇದನ ಬಯಸಿದ್ದಾಳೆ. ಗಂಡ ಚಂದ್ರಕಾಂತ ಇನ್ನೊಬ್ಬ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡಿರುವುದೇ ಇದಕ್ಕೆ ಕಾರಣ. ನಿಹಾರಿಕಾ 2 ವರ್ಷದ ಹಿಂದಷ್ಟೇ ಚಂದ್ರಕಾಂತನ ಕೈ ಹಿಡಿದಿದ್ದಳು. ಮದುವೆಯಾದ ಆರಂಭದಲ್ಲಿ ಎಲ್ಲ ಸರಿಯಾಗಿಯೇ ಇತ್ತು. ಆದರೆ ಅದೊಂದು ದಿನ ನಿಹಾರಿಕಾಗೆ ತಿಳಿದ ವಿಷಯವೇನೆಂದರೆ, ಗಂಡ ಆಫೀಸ್ ಮುಗಿಸಿಕೊಂಡು ಇನ್ನೊಬ್ಬ ಮಹಿಳೆಯ ಮನೆಗೆ ಹೋಗುತ್ತಾನೆಂದು ಕೇಳಿ ಆಘಾತವೇ ಆಯಿತು. ನಿಹಾರಿಕಾ ಇನ್ನೂ ತಾಯಿಯಾಗಿಲ್ಲ. ಹಾಗಾಗಿ ಚಂದ್ರಕಾಂತನಿಂದ ಪ್ರತ್ಯೇಕವಾಗಲು ಆಕೆಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ಬಹಳಷ್ಟು ಮಹಿಳೆಯರು ಹೇಗಿದ್ದಾರೆಂದರೆ, ಎಲ್ಲ ಗೊತ್ತಿದ್ದೂ ಕುಟುಂಬ ಹಾಗೂ ಮಕ್ಕಳಿಗಾಗಿ ವಿಚ್ಛೇದನ ತೆಗೆದುಕೊಳ್ಳುವ ಯೋಚನೆ ಕೂಡ ಮಾಡಲು ಆಗದು.
ಒಂದು ನೈಜ ಸಂಗತಿಯೆಂದರೆ, ನಂಬಿಕೆದ್ರೋಹ ಮಾಡಿದ ಸಂಗಾತಿ ಎಂದೂ ಒಳ್ಳೆಯ ಸಂಗಾತಿ ಆಗಲಾರ. ಒಂದು ಸಲ ನಂಬಿಕೆ ಹೊರಟುಹೋದ ಬಳಿಕ ಸಂಬಂಧದಲ್ಲಿ ಯಾವುದೇ ಸ್ವಾರಸ್ಯ ಉಳಿಯುವುದಿಲ್ಲ. ಗಮನಿಸಬೇಕಾದ ಒಂದು ಸಂಗತಿಯೆಂದರೆ ಗಂಡನ ನಂಬಿಕೆದ್ರೋಹವನ್ನು ಸಹಿಸಿಕೊಳ್ಳುವ ಹೆಣ್ಣು ಕೇವಲ ಹೆಂಡತಿ ಅಷ್ಟೇ ಆಗಿರುವುದಿಲ್ಲ, ತಾಯಿಯೂ ಕೂಡ ಆಗಿರುತ್ತಾಳೆ. ಗಂಡನೊಂದಿಗಿನ ಸಂಬಂಧ ಕೆಟ್ಟುಹೋದರೆ, ಅದರ ದುಷ್ಪರಿಣಾಮ ಮಕ್ಕಳ ಪಾಲನೆ ಪೋಷಣೆಯ ಮೇಲೂ ಆಗುತ್ತದೆ.
ನಂಬಿಕೆದ್ರೋಹ ಎಂತಹ ಮಹಿಳೆಯನ್ನಾದರೂ ಕಂಗೆಡಿಸುತ್ತದೆ. ಆ ವ್ಯಕ್ತಿಯ ವಯಸ್ಸು ಎಷ್ಟೇ ಆಗಿರಬಹುದು, ಅಂತಹ ವ್ಯಕ್ತಿಯ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಯೋಚಿಸಿ, ವಿಚಾರ ವಿಮರ್ಶೆ ಮಾಡಿ ನಿರ್ಧಾರಕ್ಕೆ ಬರಬೇಕು.
ಸರಿಯಾದ ನಿರ್ಣಯ ತೆಗೆದುಕೊಳ್ಳಿ
ನಿಮ್ಮೊಂದಿಗೆ ನಂಬಿಕೆದ್ರೋಹ ಆಗುತ್ತಿದೆ ಎಂಬ ಅರಿವು ಉಂಟಾಗುತ್ತಿದ್ದಂತೆ, ಒಬ್ಬ ತಾಯಿಯಾಗಿ ನೀವು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬರುತ್ತದೆ. ನೀವು ಆತ್ಮವಿಶ್ವಾಸದ ವಾತಾವರಣದಲ್ಲಿ ಇರುವುದಕ್ಕಿಂತ ಪ್ರತ್ಯೇಕವಾಗಿರಲು ಇಚ್ಛಿಸುವಿರಿ ಹಾಗೂ ಸಂಬಂಧ ಮುರಿದುಕೊಳ್ಳಲು ಬಯಸುವಿರಿ. ಆದರೆ ನೀವು ನಿಮ್ಮ ಮಕ್ಕಳ ಎದುರಿಗೆ ವಿಫಲ ಸಂಬಂಧದ ಉದಾಹರಣೆಯನ್ನು ಇಡಲು ಇಚ್ಛಿಸುವುದಿಲ್ಲ. ಕುಟುಂಬದವರು ಕೂಡ ನೀವು ನಿಮ್ಮ ಸಂಬಂಧ ಕೊನೆಗೊಳಿಸುವುದನ್ನು ಇಷ್ಟಪಡುವುದಿಲ್ಲ. ನೀವು ಮನಸ್ಸಿನಲ್ಲಿಯೇ ಕೊರಗುತ್ತಿದ್ದಲ್ಲಿ ಖಿನ್ನತೆಗೆ ತುತ್ತಾಗಿದ್ದಲ್ಲಿ, ನಿಮ್ಮ ಜೀವನ ಅತ್ಯಂತ ಹೀನಾಯವಾಗಿದ್ದಲ್ಲಿ, ನಿಮಗೆ ನಿರ್ಧಾರ ತೆಗೆದುಕೊಳ್ಳುವ ಸಂದರ್ಭ ಬಂದಿದೆ ಎಂದರ್ಥ.
ಮಕ್ಕಳಿಗೆ ಭರವಸೆ ಕೊಡಿ
ನೀವು ನಿಮ್ಮ ಗಂಡನ ವರ್ತನೆಯಿಂದ ಬೇಸತ್ತು ಪ್ರತ್ಯೇಕವಾಗಲು ನಿರ್ಧಾರ ಕೈಗೊಂಡಿದ್ದಲ್ಲಿ, ನಿಮ್ಮ ಈ ನಿರ್ಧಾರ ಪರಸ್ಪರ ಒಪ್ಪಿಗೆಯಿಂದ ಆಗಬೇಕು. ಈ ಕುರಿತಂತೆ ಮಕ್ಕಳಿಗೆ ಈಗಿರುವುದಕ್ಕಿಂತ ಒಳ್ಳೆಯ ಜೀವನ ಕೊಡುವುದಾಗಿ, ವಿಚ್ಛೇದನ ನಿಮ್ಮ ಜೀವನಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ ಎಂಬ ಭರವಸೆ ಕೊಡಬೇಕು.
ಒಂದು ಸಂಗತಿ ನೆನಪಿನಲ್ಲಿರಲಿ. ನಿಮ್ಮ ಸಂಬಂಧ ಮುರಿದುಹೋದ ಬಳಿಕ ಎಷ್ಟು ತೊಂದರೆ ನಿಮಗಾಗುತ್ತೊ, ಅದಕ್ಕೂ ಹೆಚ್ಚಿನ ತೊಂದರೆ ಮಕ್ಕಳಿಗೆ ಆಗತ್ತದೆ. ಒಂದು, ತಮ್ಮ ತಾಯಿಗೆ ವಿಚ್ಛೇದನವಾದ ನೋವು, ಇನ್ನೊಂದೆಡೆ ತಮ್ಮ ತಂದೆಯಿಂದ ದೂರಾದ ದುಃಖ ಅವರಿಗೆ ಇದ್ದೇ ಇರುತ್ತದೆ.
ಮಕ್ಕಳ ಪ್ರಶ್ನೆಗಳಿಗೆ ಸಿದ್ಧರಾಗಿ
ಒಂದು ಸಂಗತಿ ಗಮನದಲ್ಲಿರಲಿ, ತಂದೆ ಅಥವಾ ತಾಯಿಯಿಂದ ಬೇರ್ಪಟ್ಟ ಬಳಿಕ ತಮ್ಮ ಜೀವನದಲ್ಲಿ ಏನೇನು ಬದಲಾವಣೆಗಳಾಗಬಹುದು ಎಂಬ ಚಿಂತೆ ಮಕ್ಕಳನ್ನು ಸದಾ ಕಾಡುತ್ತಿರುತ್ತದೆ. ಹೀಗಾಗಿ ಅವರು ಕೇಳಬಹುದಾದ ಪ್ರಶ್ನೆಗಳಿಗೆ ಉತ್ತರಿಸಲು ಮುಂಚಿನಿಂದಲೇ ಸಿದ್ಧರಾಗಿ. ಮನೆ ಬಿಟ್ಟು ಯಾರು ಹೋಗುತ್ತಾರೆ? ನಮ್ಮ ರಜೆಗಳು ಹೇಗೆ ಕಳೆಯಬಹುದು? ಅಪ್ಪನ ಜಾಬ್ದಾರಿಗಳನ್ನು ಯಾರು ನಿಭಾಯಿಸುತ್ತಾರೆ? ಹೀಗೆ ಅವರ ಪ್ರಶ್ನೆಗಳು ಪುಂಖಾನುಪುಂಖವಾಗಿ ಬರಬಹುದು.
ನೀವು ಕ್ಷಮಿಸಲು ಸಿದ್ಧರೆ?
ಒಂದು ವೇಳೆ ನಿಮ್ಮ ಪತಿ ತಾನು ಮಾಡಿದ ಕೃತ್ಯದ ಬಗ್ಗೆ ಪಶ್ಚಾತ್ತಾಪಪಟ್ಟರೆ, ಮೇಲಿಂದ ಮೇಲೆ ಆ ಬಗ್ಗೆ ಕ್ಷಮೆ ಯಾಚಿಸುತ್ತಿದ್ದರೆ, ನೀವೊಮ್ಮೆ ಕೂಲಾಗಿ ಆ ಬಗ್ಗೆ ಯೋಚಿಸಿ, `ನಾನು ಅವರನ್ನು ಕ್ಷಮಿಸಬಹುದಾ?’ ಭವಿಷ್ಯದಲ್ಲಿ ಅವರ ಬಗ್ಗೆ ನಂಬಿಕೆ ಇಡಬಹುದಾ? ಅವರ ಹಳೆಯ ಕೃತ್ಯಗಳನ್ನು ಮರೆಯಬಹುದಾ? ಇಂತಹ ಅದೆಷ್ಟೋ ಪ್ರಶ್ನೆಗಳಿದ್ದವು, ಅವುಗಳಿಗೆ ನೀವು ಪ್ರಾಮಾಣಿಕವಾಗಿ ಉತ್ತರ ಕೊಡಬೇಕು. ಒಂದು ಸಂಗತಿ ನೆನಪಿನಲ್ಲಿರಲಿ, ಅದೆಲ್ಲವನ್ನೂ ಮರೆತು ನೀವು ಸಂಬಂಧ ಕಾಯ್ದುಕೊಂಡು ಹೋಗುತ್ತೇನೆ ಎಂಬ ನಿರ್ಧಾರಕ್ಕೆ ಬಂದರೆ, ನೀವು ಗಂಡನ ತಪ್ಪಿಗೆ ಶಿಕ್ಷೆ ಕೊಡಲು ಆಗುವುದಿಲ್ಲ.
ಸಂಬಂಧ ಕಾಯ್ದುಕೊಳ್ಳಿ
ನಿಮ್ಮ ಗಂಡ ಒಂದೇ ಸಲ ತಪ್ಪು ಮಾಡಿದ್ದರೆ, ಅದಕ್ಕಾಗಿ ಕ್ಷಮೆ ಕೂಡ ಯಾಚಿಸುತ್ತಿದ್ದರೆ, ಅಂತಹ ಸ್ಥಿತಿಯಲ್ಲಿ ನೀವು ವಿಚ್ಛೇದನದಂತಹ ಕಠಿಣ ನಿರ್ಧಾರ ಕೈಗೊಳ್ಳುವುದು ಸಮರ್ಪಕವಾಗಿರುವುದಿಲ್ಲ. ಈ ಸಂಗತಿಯನ್ನು ನಿಮಗೆ ಕೇಳಲು ಸರಿ ಎನಿಸುವುದಿಲ್ಲ, ಆದರೆ ಇದು ವಾಸ್ತವ ಸಂಗತಿ. ಗಂಡ ಒಂದು ಸಲ ಮೋಸ ಮಾಡಿದ್ದರೆ ಆತ ಪದೇ ಪದೇ ಮೋಸ ಮಾಡುತ್ತಾನೆ ಎಂದು ಕೆಲವರು ಹೇಳುವುದುಂಟು. ಆದರೆ ಅದು ಪೂರ್ಣ ಸತ್ಯವಲ್ಲ. ಹಾಗೆ ಯೋಚಿಸುವುದು ಸರಿಯಲ್ಲ. ಒಂದು ಸಲ ಮೋಸ ಮಾಡಿದವರು ಮತ್ತೆ ಮತ್ತೆ ಮೋಸ ಮಾಡುತ್ತಾರೆನ್ನುವುದು ತಪ್ಪು. ನೀವು ನಿಮ್ಮ ಸಂಬಂಧ ಕಾಯ್ದುಕೊಂಡು ಹೋಗುವುದರ ಮೂಲಕ ನೀವು ನಿಮ್ಮ ಹಾಗೂ ಮಕ್ಕಳ ಜೀವನವನ್ನು ಕಾಪಾಡಬಹುದು.
ಮಕ್ಕಳಿಗೆ ವಿಷಯ ತಿಳಿಸಬೇಡಿ
ನಿಮ್ಮ ತಂದೆ ಬೇರೊಬ್ಬ ಮಹಿಳೆಯ ಜೊತೆ ಸಂಬಂಧ ಹೊಂದಿರುವ ಕಾರಣದಿಂದ ನಾನು ಅವರಿಂದ ದೂರ ಆಗಲು ಇಚ್ಛಿಸುತ್ತಿದ್ದೇನೆ ಎಂಬ ವಿಷಯವನ್ನು ಮಕ್ಕಳ ಮುಂದೆ ಅಪ್ಪಿತಪ್ಪಿಯೂ ತಿಳಿಸಲು ಹೋಗಬೇಡಿ. ಅವರು ನಿಮಗೆ ಒಳ್ಳೆಯ ಗಂಡ ಅನಿಸಿಕೊಂಡಿರದಿದ್ದರೂ ಮಕ್ಕಳ ದೃಷ್ಟಿಯಲ್ಲಿ ಒಳ್ಳೆಯ ಅಪ್ಪ ಆಗಿರಬಹುದು. ಹೀಗಾಗಿ ಆ ಎಳೆಯ ಮಕ್ಕಳ ಮುಂದೆ ಅಫೇರ್ ಕುರಿತು ಹೇಳಿದರೆ ಅವುಗಳಿಗೆ ಆಘಾತ ಉಂಟಾಗಬಹುದು. ಆ ಬಳಿಕ ಅದರಿಂದ ಹೊರಬರಲು ಸಾಕಷ್ಟು ಸಮಯ ಹಿಡಿಯಬಹುದು.
ಮಕ್ಕಳನ್ನು ಅಸ್ತ್ರವಾಗಿ ಬಳಸಬೇಡಿ
ಕೆಲವು ಸಂದರ್ಭಗಳಲ್ಲಿ ನೀವು ಗಂಡನನ್ನು ಅವಮಾನಿಸಲು ಮಕ್ಕಳನ್ನು ಅಸ್ತ್ರವಾಗಿ ಬಳಸಿಕೊಳ್ಳಬಹುದು. ಆದರೆ ಇದು ಸರಿಯಾದುದಲ್ಲ. ಹೀಗೆ ಮಾಡುವುದರ ಮೂಲಕ ನೀವು ತಂದೆಮಕ್ಕಳ ಸಂಬಂಧದಲ್ಲಿ ಬಿರುಕು ಮೂಡಿಸಬಹುದು. ಮಕ್ಕಳಿಗೆ ಈ ಕುರಿತಂತೆ ಸ್ವತಃ ನಿರ್ಧಾರಕ್ಕೆ ಬರಲು ಅವಕಾಶ ಕೊಡಿ. ಸ್ವಲ್ಪ ದೊಡ್ಡವರಾದ ಮೇಲೆ ಅವರು ಹೀಗೆ ಮಾಡಬಹುದು. ಈಗ ನಗರ ಪ್ರದೇಶಗಳಲ್ಲಿ ವಿಚ್ಛೇದನದ ಪ್ರಮಾಣ ಭಾರಿ ಹೆಚ್ಚಾಗಿದೆ. ಇದರಲ್ಲಿ ಶೇ.80ರಷ್ಟು ವಿಚ್ಛೇದನಗಳು ನಂಬಿಕೆದ್ರೋಹದಿಂದ ಆಗುತ್ತಿವೆ. ಈಗ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದಾರೆ. ಸಂಬಂಧದಲ್ಲಿ ಈ ರೀತಿಯ ಕಹಿ ಅವರಿಗೆ ಅಸಹನೆ ಉಂಟು ಮಾಡುತ್ತದೆ. ನಂಬಿಕೆದ್ರೋಹ ಮಾಡಿದ ವ್ಯಕ್ತಿಯ ಜೊತೆ ಜೀವಿಸಲು ಕಷ್ಟ ಆಗುತ್ತದೆ ಎನ್ನುವುದು ಅಷ್ಟೇ ಸತ್ಯ. ಆದರೆ ಒಂದು ಸಂಬಂಧದ ಚಿಂತೆಯಲ್ಲಿ ಹಲವು ಸಂಬಂಧಗಳು ಹಾಳಾಗುವಂತಾಗಬಾರದು. ಈ ಬಗ್ಗೆ ನಿರ್ಧರಿಸಿ, ನೀವು ಸಂಬಂಧವನ್ನು ಕಾಯ್ದುಕೊಂಡು ಹೋಗಲು ಯೋಚಿಸಬೇಕು.
ಗಂಡನಿಂದ ಬೇರೆಯಾಗುವ ನಿರ್ಧಾರದಿಂದ ಅವನ ಕುಟುಂಬದವರು ಕೂಡ ದೂರವಾಗುತ್ತಾರೆ. ಮಕ್ಕಳಿಗೆ ತಂದೆಯನ್ನು ಕಳೆದುಕೊಳ್ಳುವುದರ ಜೊತೆ ಜೊತೆಗೆ ಅಜ್ಜಿ ತಾತನ ಪ್ರೀತಿಯನ್ನು ಕೂಡ ಕಳೆದುಕೊಳ್ಳಬೇಕಾಗಿ ಬರುತ್ತದೆ. ವಿಚ್ಛೇದನದಿಂದ ನೀವಷ್ಟೇ ಏಕಾಂಗಿಯಾಗುವುದಿಲ್ಲ, ಹಲವು ಜೀವಗಳು ಛಿದ್ರಛಿದ್ರವಾಗುತ್ತವೆ. ಹೀಗಾಗಿ ಸಂಬಂಧವನ್ನು ಕಾಯ್ದುಕೊಂಡು ಹೋಗಲು ಪ್ರಯತ್ನ ಮಾಡದೇ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದು ಸೂಕ್ತವಲ್ಲ. ಎಲ್ಲರ ಜೊತೆಗೆ ಬಾಳುವ ಖುಷಿ ಏಕಾಂಗಿಯಾಗಿ ವಾಸಿಸುವುದರಲ್ಲಿ ಖಂಡಿತ ಸಿಗುವುದಿಲ್ಲ.
– ಜಿ. ಸರಸ್ವತಿ
ಅಲ್ಲಿ ನೀನಿರಲಿಲ್ಲ!
ಕೈಗಳಿಗೆ ಹಚ್ಚಿದ್ದರೂ ಮದರಂಗಿ
ಅದಕ್ಕೆ ಏರಿರಲಿಲ್ಲ ರಂಗು.
ಏನೋ ಹೇಳಬೇಕಿತ್ತು ಒಂದಿಷ್ಟು ಮಾತು
ಆದರೆ ನೀನು ಅಲ್ಲಿರಲಿಲ್ಲ.
ಆಗಿತ್ತು ಎಲ್ಲಾ ಶೃಂಗಾರ ಆದರದು ಅಪೂರ್ಣ
ನಿನ್ನ ಕುರಿತೇ ಹೇಳಬೇಕಿತ್ತು…..ಆದರೆ ನೀನೇ ಅಲ್ಲಿರಲಿಲ್ಲ….
ದೃಷ್ಟಿ ಮೇಲೆದ್ದರೂ ನಿನ್ನನೇ ಅರಸುತ್ತಿತ್ತು
ಮದುವೆಯ ದಿಬ್ಬಣವೇನೋ ಬಂದಿತು,
ಅದರಲ್ಲಿ ನೀನು ಇರಲಿಲ್ಲ.
ಮದುವೆ ಮುಗಿದು ಅತ್ತೆಮನೆಗೆ ಹೊರಟಿದ್ದೆ
ಇಡೀ ನಗರ ಕೋರಿತ್ತು ನನಗೆ ವಿದಾಯ
ಆದರೆ… ಅಲ್ಲಿ ನೀನಿರಲಿಲ್ಲ.
ಸಂಜೆ ಎಂದಿನಂತೆ ಗೋಧೂಳಿ ಹರಡಿತ್ತು
ಎಲ್ಲೆಲ್ಲೂ ತಂಗಾಳಿ ಹಾಯಾಗಿ ಬೀಸಿತ್ತು.
ಆದರೆ…. ಅಲ್ಲಿ ನೀನಿರಲಿಲ್ಲ.
ಹುಣ್ಣಿಮೆ ಹರಡಿತ್ತು ಚಂದ್ರನಿಂದ
ಬೆಳದಿಂಗಳು ಬರಡಾಗಿ ಕಾಣುತಿತ್ತು
ಮುಂದೆ….. ಎಲ್ಲುಂಟು ಭವಿಷ್ಯ
ಅಲ್ಲಿ ಇರುವುದಿಲ್ಲವಲ್ಲ…. ನೀನು!