– ಕೆ. ಸರಸ್ವತಿ
ನೀವು ಇಲ್ಲಿ ಕೊಟ್ಟಿರುವ ಕೆಲವು ಸಂಗತಿಗಳನ್ನು ಗಮನಿಸಿದರೆ ಹೊಸದಾಗಿ ಬಂದ ನೆರೆಮನೆಯವರ ಜೊತೆ ಮಧುರ ಸಂಬಂಧ ಕಾಯ್ದುಕೊಂಡು ಹೋಗುವಲ್ಲಿ ಯಶಸ್ವಿಯಾಗುವಿರಿ.
ಅದೆಷ್ಟೋ ತಿಂಗಳಿನಿಂದ ನೀವು ಎದುರು ಮನೆಯ ಫ್ಲ್ಯಾಟ್ ಮುಂದೆ `ಫಾರ್ ಸೇಲ್ ` ಫಲಕವನ್ನು ಕಂಡಿರುತ್ತೀರಿ. ಒಂದು ದಿನ ಅದೇ ಜಾಗದಲ್ಲಿ `ಸೋಲ್ಡ್’ ಫಲಕ ಕಂಡು ಬರುತ್ತದೆ. ಆಗ ನಿಮಗೆ ಬಂದ ತಕ್ಷಣದ ವಿಚಾರವೆಂದರೆ, ಆ ಮನೆಯನ್ನು ಯಾರು ಖರೀದಿಸಿದರು? ನಮ್ಮ ಮನೆ ಪಕ್ಕದಲ್ಲಿ ಬರುವ ಹೊಸಬರು ಯಾರು? ಯಾರೋ ನಮಗೆ ಅಪರೂಪದ ವಸ್ತುವೊಂದನ್ನು ಉಡುಗೊರೆಯಾಗಿ ಕೊಟ್ಟಾಗ ಹೇಗೆ ಖುಷಿಯಾಗುತ್ತೋ, ಅದೇ ರೀತಿ ಪಕ್ಕದಲ್ಲಿ ಹೊಸಬರು ಬಂದಾಗ ಕೂಡ ಅಷ್ಟೇ ಖುಷಿಯಾಗುತ್ತದೆ. ನೆರೆಮನೆಯವರೊಂದಿಗೆ ಮಧುರ ಬಾಂಧವ್ಯ ನಾಗರಿಕ ಸಮಾಜದ ಗುರುತು. ನಾವು ಹೊಸ ಸ್ನೇಹಿತರನ್ನೇನೊ ಮಾಡಿಕೊಳ್ಳುತ್ತೇವೆ. ಆದರೆ ನೆರೆಮನೆಯವರನ್ನು ಬದಲಿಸುವುದು ಸುಲಭದ ಸಂಗತಿಯಲ್ಲ. ಪ್ರಧಾನಮಂತ್ರಿ ಕುರ್ಚಿ ಅಲಂಕರಿಸಿದ ಬಳಿಕ ನರೇಂದ್ರ ಮೋದಿ ಅವರು ಕೂಡ ನೆರೆಯ ದೇಶಗಳೊಂದಿಗೆ ಸಂಬಂಧ ಸುಧಾರಣೆ ಮಾಡಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದಾರೆ. ನೆರೆಯ ದೇಶಗಳಷ್ಟೇ ಅಲ್ಲ, ಜಗತ್ತಿನ ಬೇರೆ ಬೇರೆ ದೇಶಗಳೊಂದಿಗೆ ಸ್ನೇಹ ಹಸ್ತ ಚಾಚುತ್ತಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿ ಕೂಡ ನೆರೆಹೊರೆಯವರೊಂದಿಗೆ ಉತ್ತಮ ಸೌಹಾರ್ದ ಸಂಬಂಧ ಹೊಂದಬೇಕೆಂದು ಹೇಳುತ್ತದೆ. ಏಕೆಂದರೆ ಒಬ್ಬ ಒಳ್ಳೆಯ ನೆರೆಮನೆಯು 10 ಸಂಬಂಧಿಕರಿಗೆ ಸಮ. ನೆರೆಮನೆಯವರೊಂದಿಗೆ ಸಂಬಂಧಗಳ ಆರಂಭ ಹೇಗೆ ಮಾಡಬೇಕು ಎಂಬ ಬಗ್ಗೆ ತಿಳಿದುಕೊಳ್ಳಿ.
ನೆರೆಮನೆಯವರು ಯಾರು?
ಎಲ್ಲಕ್ಕೂ ಮುಂಚೆ ನೀವು ತಿಳಿದುಕೊಳ್ಳಬೇಕಾದ ವಿಷಯವೆಂದರೆ, ನಿಮ್ಮ ಮನೆ ಪಕ್ಕದಲ್ಲಿ ಬಂದಿರುವವರು ಯಾರು? ಅದು ಮಕ್ಕಳಿರುವ ಮನೇನಾ? ಆ ಮನೆಯಲ್ಲಿ ಯಾರಾದರೂ ವೃದ್ಧರು ಇದ್ದಾರಾ? ಆ ಕುಟುಂಬದಲ್ಲಿರುವವರು ನವವಿವಾಹಿತ ಜೋಡಿಯಾ? ಎಂಬುದನ್ನು ತಿಳಿದುಕೊಳ್ಳಬೇಕು.
ಹೊಸ ಮನೆಗೆ ಶಿಫ್ಟ್ ಆದನಂತರ ನಿಮ್ಮ ನೆರೆಮನೆಯವರಿಗೆ ಮೊದಲು ಯಾವ ಸಂಗತಿಯ ಅವಶ್ಯಕತೆ ಬೀಳಬಹುದು ಎಂಬುದನ್ನು ತಿಳಿದುಕೊಳ್ಳಿ.
ನೆರೆಮನೆಯ ಹೊಸ ಅತಿಥಿಗಳನ್ನು ಸ್ವಾಗತಿಸುವ ಕುರಿತಂತೆ ಟಿ.ವಿ.ಯಲ್ಲಿ ಒಂದು ಜಾಹೀರಾತು ನೋಡಿರುತ್ತೀರಿ. ವೃದ್ಧ ದಂಪತಿಗಳು ತಮ್ಮ ವಾಹನದಲ್ಲಿ ಮನೆಯ ಸಾಮಾನುಗಳನ್ನು ತೆಗೆದುಕೊಂಡು ಬರುತ್ತಾರೆ. ಆ ಕಟ್ಟಡದ ಎಲ್ಲ ನಾಗರಿಕರು ಅವರ ಫೋಟೋವನ್ನು ಮೊಬೈಲ್ ಮೂಲಕ ರವಾನಿಸಿ ಅವರ ಸಾಮಾನುಗಳನ್ನು ಮನೆಗೆ ರವಾನಿಸುವಲ್ಲಿ ನೆರವಾಗುತ್ತಾರೆ. ಒಂದು ವೇಳೆ ಇದು ವಾಸ್ತವದಲ್ಲಿ ನಡೆದದ್ದಾದರೆ ಆ ವೃದ್ಧ ದಂಪತಿಗಳಿಗೆ ಹೊಸಮನೆಯ ವಾತಾವರಣ ಅದೆಷ್ಟು ಖುಷಿ ಕೊಡಬಹುದು ನೀವೇ ಯೋಚಿಸಿ.
ಟೀ ಪಾರ್ಟಿಗೆ ಆಫರ್ ಕೊಡಿ
ನೀವು ನಿಮ್ಮ ನೆರೆಮನೆಯವರಿಗೆ ಒಂದು ವೆಲ್‌ಕಮ್ ಬ್ಯಾಸ್ಕೆಟ್ ರೆಡಿ ಇಟ್ಟುಕೊಂಡು ಕೂಡ ಅವರನ್ನು ಸ್ವಾಗತಿಸಬಹುದು. ಮಾರುಕಟ್ಟೆಯಿಂದ ಒಂದು ವಿಶಿಷ್ಟ ಆಕಾರದ ಬ್ಯಾಸ್ಕೆಟ್ ತಂದು, ಅದರಲ್ಲಿ ಶೋಪೀಸ್ ಅಲಂಕರಿಸಿಟ್ಟು ಜೊತೆಗೊಂದು ಕಾರ್ಡ್ ಇಟ್ಟು ನೆರೆಮನೆಯವರನ್ನು ಆಹ್ವಾನಿಸಿ. ಪಕ್ಕದಮನೆಗೆ ಹೊಸಬರು ಬಂದ ದಿನವೇ ಕೊಟ್ಟರೆ ಅದಕ್ಕೊಂದು ವಿಶೇಷ ಅರ್ಥ ಬರುತ್ತದೆ. ಬಂದ ದಿನವೇ ಶಿಫ್ಟಿಂಗ್ ಕಾರಣದಿಂದ ಅವರು ಸುಸ್ತಾಗಿದ್ದರೆ ಮರುದಿನ ಅವರಿಗೆ ಟೀ ಪಾರ್ಟಿಗೆ ಬರಲು ಆಮಂತ್ರಣ ಕೊಡಬಹುದು.
ಸಸಿ ಅಥವಾ ಡೈರೆಕ್ಟರಿ ಕೊಡಿ
ನೀವು ನಿಮ್ಮ ನೆರೆಯವರಿಗೆ ಯಾವುದಾದರೂ ಸಸಿ ಅಥವಾ ಹೂವಿನ ಕುಂಡವನ್ನು ಕೂಡ ಉಡುಗೊರೆಯಾಗಿ ಕೊಡಬಹುದು. ಅವರು ತಮ್ಮ ಮನೆಯೆದುರು ಹೂದೋಟ ಮಾಡುತ್ತಿದ್ದರೆ, ಅವರಿಗೆ ಈ ನಿಟ್ಟಿನಲ್ಲಿ ಸಲಹೆ ಕೊಡಬಹುದು. ಕೆಲಸದಲ್ಲೂ ಕೂಡ ಅಷ್ಟಿಷ್ಟು ಪ್ರಮಾಣದಲ್ಲಿ ನೆರವಾಗಬಹುದು. ನಿಮ್ಮ ಮನೆ ಪಕ್ಕ ಬಂದಿರುವವರು ಬೇರೆ ನಗರದಿಂದ ಬಂದದ್ದಾಗಿದ್ದರೆ, ಅವರಿಗೆ ನೀವು ಇರುವ ನಗರದ ಮ್ಯಾಪ್ನ್ನು ಉಡುಗೊರೆಯಾಗಿ ಕೊಡಬಹುದು. ಡೈರೆಕ್ಟರಿ ಅಥವಾ ಉಪಯುಕ್ತ ಪುಸ್ತಕವೊಂದನ್ನು ಕೊಡಬಹುದು. ನೆರೆಯವರ ಜೊತೆ ಮೊದಲ ಬಾರಿ ಒಂದು ಸಲ ಶಾಪಿಂಗ್ ಮಾಲ್ಗೂ ಹೋಗಿ ಬನ್ನಿ. ಹೀಗೆ ಮಾಡುವುದರಿಂದ ಅವರಿಗೆ ಒಳ್ಳೆಯ ಅಭಿಪ್ರಾಯ ಉಂಟಾಗುತ್ತದೆ.
ವೈಯಕ್ತಿಕವಾಗಿಯೂ ಭೇಟಿಯಾಗಿ
ನೆರೆಮನೆಯವರು ಹೊಸದಾಗಿ ಸೆಟ್ ಆದ ಬಳಿಕ, ಅವರನ್ನು ಮುಖತಃ ಭೇಟಿ ಮಾಡಿ ಅವರ ಕುಟುಂಬದವರ ಬಗ್ಗೆ ವಿಚಾರಿಸಿ. ನಿಮ್ಮ ಕುಟುಂಬದ ಬಗೆಗೂ ತಿಳಿಸಿ. ನೀವು ಅವರ ಮನೆಯಲ್ಲಿ ಯಾರದ್ದಾದರೂ ಫೋಟೋ ತೂಗು ಹಾಕಿದ್ದನ್ನು ನೋಡಿದರೆ, ಆ ವ್ಯಕ್ತಿಯ ಬಗೆಗೂ ಕೇಳಬಹುದು. ನೀವು ಅವರ ಗಾರ್ಡನ್ ನೋಡಿ ನಿಮಗೆ ಗೊತ್ತಿರುವ ವಿಚಾರವನ್ನು ಅವರಿಗೆ ತಿಳಿಸಬಹುದು. ಅವರ ಮನೆಯಲ್ಲಿ ಹಾಬಿ ಎಕ್ವಿಪ್ಮೆಂಟ್ ನೋಡಿದರೆ, ಅದರ ಬಗೆಗೂ ಕೇಳಿ ತಿಳಿದುಕೊಳ್ಳಬಹುದು. ಆದರೆ ಒಂದು ಸಂಗತಿ ಗಮನದಲ್ಲಿರಲಿ, ಅವರ ವ್ಯಯಕ್ತಿಕ ವಿಷಯಗಳ ಬಗ್ಗೆ ಹೆಚ್ಚು ಕೆದಕಲು ಹೋಗಬೇಡಿ.
ವೆಲ್ ಕಮ್ ಡಿನ್ನರ್
ನಿಮ್ಮ ನೆರೆಮನೆಯವರಿಗೆ ಒಂದು ಒಳ್ಳೆಯ ಡಿನ್ನರ್ನ ಆಫರ್ ಕೂಡ ಕೊಡಬಹುದು. ಅವರ ಡಯೆಟ್ ಬಗ್ಗೆ ನಿಮಗೆ ಸಂದೇಹಗಳಿದ್ದರೆ, ಅವರಿಗೆ ಈ ಬಗ್ಗೆ ಕೇಳಿ ತಿಳಿದುಕೊಳ್ಳಬಹುದು. ನಾವು ಕೊಡುವ ಡಿನ್ನರ್ ಕ್ಯಾಷ್ಯಯಲ್ ಎನ್ನುವುದನ್ನು ಅವರಿಗೆ ಮೊದಲೇ ಸ್ಪಷ್ಟಪಡಿಸಿ. ಅವರು ಈ ಸಂದರ್ಭದಲ್ಲಿ ಯಾವುದೇ ಗಿಫ್ಟ್ ತರುವ ಅವಶ್ಯಕತೆ ಇಲ್ಲ ಎಂದು ತಿಳಿಯಪಡಿಸಿ.
ಈ ಮೇಲ್ಕಂಡ ಟಿಪ್ಸ್ ಅನುಸರಿಸುವುದರಿಂದ ನಿಮಗೆ ಅದರ ಪರಿಣಾಮಗಳು ಶೀಘ್ರವೇ ನೋಡಲು ಸಿಗುತ್ತವೆ. ಸಂಕಷ್ಟದ ಸಮಯಲ್ಲಿ ನೀವು ಏಕಾಂಗಿಯಲ್ಲ ಎನ್ನುವುದು ಗೊತ್ತಾಗುತ್ತದೆ.