ಜೀವನದಲ್ಲಿ ಹೆಚ್ಚುತ್ತಿರುವ ವ್ಯಸ್ತತೆಯ ನಡುವೆ ಅಪಾಯಗಳ ಪ್ರಮಾಣ ಹೆಚ್ಚುತ್ತಿವೆ. ಇಂತಹ ಸ್ಥಿತಿಯಲ್ಲಿ ಅಪಘಾತ, ಮೃತ್ಯು ಅಥವಾ ಅಂಗವಿಕಲತೆಯಂತಹ ಸ್ಥಿತಿಗಳು ನಿಮ್ಮ ಕುಟುಂಬದವರನ್ನು ತೊಂದರೆಗೀಡು ಮಾಡಬಹುದು. ಅಂತಹ ಸ್ಥಿತಿ ಬರದೇ ಇರುವಂತೆ ನೋಡಿಕೊಳ್ಳುವುದು ಅಸಾಧ್ಯ. ಆದರೆ ಅದನ್ನು ಎದುರಿಸಲು ನಿಮ್ಮ ಬಳಿ ಆರ್ಥಿಕ ವ್ಯವಸ್ಥೆ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು.
ವಿಮೆ ತಜ್ಞ ಅವಿನಾಶ್ ಹೀಗೆ ಹೇಳುತ್ತಾರೆ, “ಬಹಳಷ್ಟು ಜನರಿಗೆ ಗೊತ್ತಿರುವ ಸಂಗತಿಯೆಂದರೆ, ಆರೋಗ್ಯ ವಿಮೆ ಅಪಾಯಗಳಂತಹ ಸಂದರ್ಭದಲ್ಲಿ ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಸುರಕ್ಷತೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಹೊರತಾಗಿ ಒಂದು ಉಪಯುಕ್ತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಆಯ್ಕೆ ಮಾಡುವುದು ಎಲ್ಲರಿಗೂ ಸುಲಭದ ಸಂಗತಿಯೇನಲ್ಲ. ಅಂದಹಾಗೆ ಇದು ಅಷ್ಟು ಕಷ್ಟದ ಕೆಲಸವೂ ಅಲ್ಲ. ಅಷ್ಟಿಷ್ಟು ತಿಳಿವಳಿಕೆ ಮತ್ತು ಎಚ್ಚರಿಕೆಯಿಂದ ನಿಮಗಾಗಿ ಉಪಯುಕ್ತ ವಿಮೆ ಪಾಲಿಸಿಯೊಂದನ್ನು ಆಯ್ಕೆ ಮಾಡಿಕೊಳ್ಳಬಹುದು.
ಗಮನವಿರಲಿ
ಪಾಲಿಸಿಯ ಆಯ್ಕೆ : ಪಾಲಿಸಿ ಆಯ್ಕೆ ಮಾಡುವ ಮೊದಲು ಮಾರುಕಟ್ಟೆಯಲ್ಲಿ ಎರಡು ಬಗೆಯ ವಿಮೆ ಪಾಲಿಸಿಗಳಿವೆ ಎನ್ನುವ ಸಂಗತಿ ನಿಮಗೆ ಅರಿವಿರಬೇಕು. ಅವುಗಳೆಂದರೆ ಇಂಡೆಮ್ನಿಟಿ ಪಾಲಿಸಿ ಹಾಗೂ ಬೆನಿಫಿಟ್ ಪಾಲಿಸಿ. ಆಸ್ಪತ್ರೆಗೆ ಅಡ್ಮಿಟ್ ಆದ ಸ್ಥಿತಿಯಲ್ಲಿ ಇಂಡೆಮ್ನಿಟಿ ಪಾಲಿಸಿ ನಿಮ್ಮ ವೈದ್ಯರ ಖರ್ಚು, ಔಷಧಿ ಹಾಗೂ ರೂಮ್ ಚಾರ್ಜ್ ಮುಂತಾದವುಗಳ ಪಾವತಿ ಮಾಡುತ್ತದೆ. ಗಂಭೀರ ರೋಗದ ಸ್ಥಿತಿಯಲ್ಲಿ ಬೆನಿಫಿಟ್ ಪಾಲಿಸಿ ನೆರವಿಗೆ ಬರುತ್ತದೆ. ಈ ಪಾಲಿಸಿಯಿಂದ ಚಿಕಿತ್ಸೆಗಾಗಿ ಒಂದೇ ಕಂತಿನಲ್ಲಿ ಮೊತ್ತ ದೊರಕುತ್ತದೆ. ಇದು ನಿಮ್ಮ ಮೊದಲ ಪಾಲಿಸಿಯಾಗಿದ್ದರೆ ನೀವು ಇಂಡೆಮ್ನಿಟಿ ಪಾಲಿಸಿ ಆಯ್ಕೆ ಮಾಡಿಕೊಳ್ಳುವುದು ಸೂಕ್ತ.
ಟಾಪ್ ಅಪ್ ಪ್ಲಾನ್
ಆರೋಗ್ಯದ ಮೇಲೆ ಮಾಡುವ ಖರ್ಚಿನಲ್ಲಿ ಪ್ರತಿವರ್ಷ ಶೇ.15 ರಿಂದ 18ರಷ್ಟು ಹೆಚ್ಚಳವಾಗುತ್ತಿದೆ. ಅಂದಹಾಗೆ ಇದು ಪ್ರತಿಯೊಬ್ಬ ವ್ಯಕ್ತಿಗೂ ನಿಲುಕುವ ವಿಷಯವಲ್ಲ. ಭಾರಿ ಪ್ರೀಮಿಯಮ್ ತುಂಬಿ ಹೆಚ್ಚೆಚ್ಚು ರೋಗಗಳಿಗೆ ಕವರೇಜ್ ಮಾಡಿಕೊಳ್ಳಲು ಇದು ಪ್ರತಿಯೊಬ್ಬರಿಗೂ ಸಾಧ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಟಾಪ್ ಅಪ್ ಪ್ಲಾನ್ಗಳು ಸಾಕಷ್ಟು ಉಪಯೋಗಕ್ಕೆ ಬರುತ್ತವೆ. ನಿಮ್ಮ ಚಿಕಿತ್ಸೆಯ ಖರ್ಚು ಮೇರೆ ಮೀರಿದಾಗ ಈ ಪ್ಲಾನ್ ಉಪಯೋಗಕ್ಕೆ ಬರುತ್ತದೆ.
ಉದಾಹರಣೆಗಾಗಿ ಚಿಕಿತ್ಸೆಯ ಸಂದರ್ಭದಲ್ಲಿ ನಿಮಗೆ 3 ಲಕ್ಷ ರೂ.ನಷ್ಟು ಖರ್ಚು ಬಂದಿದ್ದರೆ, ಇಂಡೆಮ್ನಿಟಿ ಪ್ಲಾನ್ ಪ್ರಕಾರ ನಿಮಗೆ 2 ಲಕ್ಷ ರೂ. ಅಷ್ಟೇ ದೊರಕುತ್ತದೆ. ಒಂದು ವೇಳೆ ನೀವು ಟಾಪ್ಆಪ್ ಪ್ಲಾನ್ ತೆಗೆದುಕೊಂಡಿದ್ದರೆ, ಅದು ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಉಪಯೋಗಕ್ಕೆ ಬರುತ್ತದೆ. ಹೀಗಾಗಿ ಅದನ್ನು ನಿಮ್ಮ ಸೌಲಭ್ಯಕ್ಕನುಗುಣವಾಗಿ ಆಯ್ಕೆ ಮಾಡಿ.
ಮೆಟರ್ನಿಟಿ ಕವರ್
ಭವಿಷ್ಯದಲ್ಲಿ ಏನೇನು ಘಟಿಸಲಿದೆ ಎಂದು ಯಾರೂ ಹೇಳಲು ಆಗದು. ಇದನ್ನು ಮೊದಲೇ ಊಹಿಸುವುದು ಕಷ್ಟ. ಅಂದಹಾಗೆ ಕೆಲವು ಪರಿಸ್ಥಿತಿಗಳಲ್ಲಿ ವ್ಯಕ್ತಿಗೆ ಅದರ ಸೂಚನೆ ಮೊದಲೇ ಸಿಗುತ್ತದೆ. ಪ್ರತಿಯೊಂದು ಕುಟುಂಬದಲ್ಲಿ ಒಂದಿಲ್ಲೊಮ್ಮೆ ಮಗು ಆಗಿಯೇ ಆಗುತ್ತದೆ. ಮಗು ಜನಿಸಲಿದೆ ಎಂದರೆ ಖರ್ಚಿನ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ.
ನೀವು ವಿಮೆ ಪಾಲಿಸಿಯನ್ನು ಆಯ್ಕೆ ಮಾಡಿಕೊಂಡರೆ ಮೆಟರ್ನಿಟಿಯ ಕವರ್ ಪಡೆಯುವುದನ್ನು ಮರೆಯಬೇಡಿ. ಈವರೆಗೆ ಯಾವುದೇ ಕಂಪನಿ ಮೆಟರ್ನಿಟಿ ಕವರ್ ಮಾಡುತ್ತಿರಲಿಲ್ಲ ಎಂದಲ್ಲ. ಮಾರುಕಟ್ಟೆಯಲ್ಲಿ ಈ ತೆರನಾದ ಪಾಲಿಸಿಗಳು ಮೊದಲಿನಿಂದಲೇ ಲಭ್ಯವಿದ್ದವು. ಈಗ ಕಂಪನಿಗಳು ಪಾಲಿಸಿಯ ವೇಟಿಂಗ್ ಪೀರಿಯಡ್ನ್ನು ತಗ್ಗಿಸಿವೆ.
ವೇಟಿಂಗ್ ಪೀರಿಯಡ್ನ ಅರ್ಥ ಪಾಲಿಸಿ ಪಡೆದ ಬಳಿಕ ಒಂದು ನಿಗದಿತ ಸಮಯದ ಬಳಿಕವೇ ನಿಮಗೆ ಮೆಟರ್ನಿಟಿ ಕ್ಲೇಮ್ ದೊರೆಯುತ್ತದೆ. ಉದಾಹರಣೆಗಾಗಿ ಹಲವು ಕಂಪನಿಗಳು ಈಗ ಅದಕ್ಕಾಗಿ 9 ತಿಂಗಳಿನಿಂದ 1 ವರ್ಷದ ವೇಟಿಂಗ್ ಪೀರಿಯಡ್ ಮಾಡಿವೆ. ಆ ಬಳಿಕವೇ ನಿಮಗೆ ಮೆಟರ್ನಿಟಿಯ ಲಾಭ ದೊರೆಯಲಿದೆ.
ವೇಟಿಂಗ್ ಪೀರಿಯಡ್
ನಿಮಗೆ ಯಾವುದೇ ರೋಗದ ಕ್ಲೇಮ್ ಅದರ ವೇಟಿಂಗ್ ಪೀರಿಯಡ್ ನಂತರವೇ ದೊರಕುತ್ತದೆ. ಉದಾಹರಣೆಗಾಗಿ ನೀವು ಪಾಲಿಸಿ ತೆಗೆದುಕೊಂಡ ತಕ್ಷಣವೇ ನಿಮಗೆ ಮಧುಮೇಹ ಇದೆ ಎಂದು ಗೊತ್ತಾದರೆ, ಆಗ ನಿಮ್ಮ ಚಿಕಿತ್ಸೆಗಾಗಿ ಪಾಲಿಸಿಯಿಂದ ಯಾವುದೇ ನೆರವು ದೊರೆಯಲಾರದು. ಇದಕ್ಕೆ ಒಳ್ಳೆಯ ಉಪಾಯವೆಂದರೆ, ನೀವು 30-40ರ ಮಯೋಮಿತಿಯಲ್ಲಿ ಅಂದರೆ ಚೆನ್ನಾಗಿ ಗಳಿಸುತ್ತಿರುವಾಗಲೇ ಪಾಲಿಸಿ ತೆಗೆದುಕೊಳ್ಳಿ. ಏಕೆಂದರೆ ಆ ವಯೋಮಿತಿಯಲ್ಲಿ ರೋಗಗಳು ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಜೊತೆಗೆ ನೀವು ಯಾವ ಯಾವ ರೋಗದ ಕವರ್ ಪಡೆದಿದ್ದೀರೊ, ಅವೆಲ್ಲವುಗಳ ವೇಟಿಂಗ್ ಪೀರಿಯಡ್ ಕೂಡ ಮುಗಿದುಹೋಗಿರುತ್ತದೆ.
ಪಾಲಿಸಿಯ ಖರ್ಚು
ಎಷ್ಟೋ ಸಲ ಜನರು ಹೆಚ್ಚು ಕವರ್ ತೆಗೆದುಕೊಳ್ಳುವ ಭರದಲ್ಲಿ ಹೆಚ್ಚುವರಿ ಭಾರ ಎಳೆದುಕೊಳ್ಳುತ್ತಾರೆ. ಇದು ಜಾಣತನದ ವಿಷಯವಲ್ಲ. ಪಾಲಿಸಿ ತೆಗೆದುಕೊಳ್ಳುವ ಮುನ್ನ ನಿಮ್ಮ ಅಗತ್ಯತೆ, ಅಪಾಯ ಹಾಗೂ ಪಾಲಿಸಿಗೆ ತಗುಲುವ ಖರ್ಚುಗಳ ಬಗ್ಗೆ ವಿವರವಾಗಿ ಅವಲೋಕನ ಮಾಡಿಕೊಳ್ಳಿ. ಉದಾಹರಣೆಗಾಗಿ ನಿಮ್ಮ ಆದಾಯಕ್ಕೆ ತಕ್ಕಂತೆ ನೀವು ಪ್ರತಿ ತಿಂಗಳು 10,000 ರೂ. ಖರ್ಚು ಮಾಡಲು ಶಕ್ತರಾಗಿದ್ದೀರಿ. ಇಂತಹ ಸ್ಥಿತಿಯಲ್ಲಿ ನೀವು ನಿಮ್ಮ ಸಾಮರ್ಥ್ಯಕ್ಕೆ ಮೀರಿ ಹೆಚ್ಚು ಪ್ರೀಮಿಯಂನ ಪಾಲಿಸಿ ತೆಗೆದುಕೊಂಡರೆ, ಅದನ್ನು ನಿಯಮಿತವಾಗಿ ಭರಿಸುವುದು ನಿಮಗೆ ಕಷ್ಟಕರವಾಗಿ ಪರಿಣಮಿಸಬಹುದು.
ಅವಶ್ಯ ಹೋಲಿಕೆ ಮಾಡಿ ಮಾರುಕಟ್ಟೆಯಲ್ಲಿ ಹಲವು ಕಂಪನಿಗಳು ಬೇರೆ ಬೇರೆ ವಿಶೇಷತೆಗಳುಳ್ಳ ಹಲವು ಪಾಲಿಸಿಗಳನ್ನು ಲಭ್ಯವಾಗುವಂತೆ ಮಾಡಿವೆ. ಒಂದು ವೇಳೆ ಪಾಲಿಸಿಯ ಆಯ್ಕೆ ತಪ್ಪಾಗಿದ್ದಲ್ಲಿ, ಮುಂದೆ ನೀವು ಅದರಿಂದ ದೊರೆಯುವ ಲಾಭದಿಂದಲೂ ವಂಚಿತರಾಗುಳಿಯುವಿರಿ. ಹೀಗಾಗಿ ಬೇರೆ ಬೇರೆ ಪಾಲಿಸಿಗಳ ನಡುವೆ ಹೋಲಿಕೆ ಮಾಡಿ. ನೆಟ್ನಲ್ಲಿ ಹಲವು ವೆಬ್ಸೈಟ್ಗಳಿದ್ದು, ಅವುಗಳ ಬಗ್ಗೆ ನೀವು ಆನ್ಲೈನ್ಲ್ಲಿಯೇ ಹೋಲಿಕೆ ಮಾಡಿ ನೋಡಬಹುದು. ಇದರಿಂದಾಗಿ ನಿಮಗೆ ನಿರ್ಧರಿಸಲು ಬಹಳ ಸುಲಭವಾಗುತ್ತದೆ. ಕೊನೆಗೊಮ್ಮೆ ಯಾವ ಪಾಲಿಸಿ ಸೂಕ್ತ ಎಂದು ನಿರ್ಧರಿಸಬಹುದು.
– ರೇಣುಕಾ ದೇಶಪಾಂಡೆ
ಎಚ್ಚರಿಕೆಗಳು
– ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ತೆಗೆದು ಕೊಳ್ಳುವಾಗ ಆತುರ ತೋರಿಸಬೇಡಿ.
– ನಿಮ್ಮ ಅಗತ್ಯಕ್ಕೆ ತಕ್ಕಂತೆ, ಬಜೆಟ್ಗೆ ಅನುಗುಣವಾಗಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಆಯ್ಕೆ ಮಾಡಿ.
– ಪಾಲಿಸಿಯ ದಾಖಲೆ ಪತ್ರಗಳು, ನಿಯಮಗಳು, ಷರತ್ತುಗಳನ್ನು ಗಮನವಿಟ್ಟು ಓದಿ ಏಕೆಂದರೆ ಯಾರೂ ನಿಮ್ಮನ್ನು ಮೋಸಗೊಳಿಸದಿರಲಿ.
– ಪಾಲಿಸಿಯನ್ನು ಸಕಾಲದಲ್ಲಿ ನವೀಕರಣಗೊಳಿಸಿ. ಏಕೆಂದರೆ ನಿಮ್ಮ ಪಾಲಿಸಿ ಲ್ಯಾಪ್ಸ್ ಆಗದಿರಲಿ. ಇಲ್ಲದಿದ್ದರೆ ನೀವು ಹೊಸ ಪಾಲಿಸಿ ಖರೀದಿಸಬೇಕಾಗುತ್ತದೆ.
– ಪಾಲಿಸಿಯನ್ನು ಸಾಧ್ಯವಿದ್ದಷ್ಟು ತಾರುಣ್ಯದ ವಯಸ್ಸಿನಲ್ಲಿಯೇ ಖರೀದಿಸಿ. ಆಗ ಅಪಾಯ ಕಡಿಮೆ ಇರುತ್ತದೆ. ಅದಕ್ಕೆ ತಗಲುವ ವೆಚ್ಚ ಕಡಿಮೆ ಇರುತ್ತದೆ ಹಾಗೂ ನಿಮಗೆ ಒಳ್ಳೆಯ ಕವರ್ ಕೂಡ ದೊರೆಯುತ್ತದೆ.