ಮಹಾನಗರಗಳಲ್ಲಿ ಮಕ್ಕಳಿಗಾಗಿ ಹೋಂಕೇರ್, ಪ್ರೀ ನರ್ಸರಿ, ಪ್ಲೇಹೋಮ್, ಕಿಂಡರ್ಗಾರ್ಟನ್ ಹೆಸರುಗಳಲ್ಲಿ ಅನೇಕ ಸಂಸ್ಥೆಗಳು, ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶಗಳಲ್ಲಿ ಅಗತ್ಯವೆನಿಸುತ್ತವೆ. ಉದ್ಯೋಗಸ್ಥ ತಂದೆತಾಯಿ ಆಫೀಸಿನ ಸಮಯದಲ್ಲಿ ತಮ್ಮ ಮಕ್ಕಳನ್ನು ಇಂತಹ ಕಡೆ ಬಿಟ್ಟುಹೋಗುತ್ತಾರೆ.
ಹೆಚ್ಚುತ್ತಿರುವ ಆಧುನಿಕ ಅಗತ್ಯಗಳು, ನೆರೆಹೊರೆಯರ ಒಡನಾಟ ಇಲ್ಲದಿರುವುದು, ಒಡೆಯುತ್ತಿರುವ ಒಟ್ಟು ಕುಟುಂಬಗಳು ಇವುಗಳ ನಡುವೆ ಈ ಆಯ್ಕೆಯೇ ಉತ್ತಮ. ಮಕ್ಕಳ ಪಾಲನೆ, ಪೋಷಣೆ, ಸ್ನೇಹ ವರ್ತನೆ, ಮಾತುಕಥೆಯ ಶಿಕ್ಷಣ ಇತ್ಯಾದಿಗಳನ್ನು ಹಣ ಪಡೆದು ಅಲ್ಲಿ ನಿರ್ವಹಿಸಲಾಗುತ್ತದೆ. ತಂದೆ ತಾಯಿ ತಮ್ಮ ಮಕ್ಕಳು ಒಳ್ಳೆಯ ಪರಿಸರದಲ್ಲಿ ಪೋಷಣೆ ಪಡೆದು ಬದುಕಿನ ಪ್ರಾರಂಭಿಕ ಪಾಠ ಕಲಿಯುತ್ತಾರೆಂದು ನಿಶ್ಚಿಂತರಾಗಿರುತ್ತಾರೆ.
ಪೋಷಕರು ಎಚ್ಚರದಿಂದಿರಬೇಕು
ಸಂಚಾಲಕರು ಕೇಳಿದಷ್ಟು ಹಣ ತೆತ್ತ ನಂತರ ಈ ನಿಶ್ಚಿಂತತೆ ಇನ್ನಷ್ಟು ಹೆಚ್ಚಾಗುತ್ತದೆ. ಆದರೆ ವಾಸ್ತವದಲ್ಲಿ ಈ ನಿಶ್ಚಿಂತತೆಯನ್ನೇ ಒಪ್ಪಿಕೊಳ್ಳುವುದೇ? ಹೀಗೆ ಮಾಡುವ ಪೋಷಕರು ಅನೇಕ ಬಾರಿ ಎಚ್ಚರಿಕೆ ಮತ್ತು ತರ್ಕದಿಂದ ವರ್ತಿಸುವ ಸ್ಥಿತಿ ಕಳೆದುಕೊಳ್ಳುತ್ತಿದ್ದಾರೆ. ಏನಾದರೂ ತೊಂದರೆಯಾದಾಗ ಪೋಷಕರು ಹಾಗೂ ಅವರ ಮಕ್ಕಳ ಕೋಮಲ ಮನಸ್ಸಿಗೆ ಬಹಳ ಆಘಾತವಾಗುತ್ತದೆ.
ಬೆಂಗಳೂರಿನ ಒಬ್ಬ ದಂಪತಿಗೂ ಇದೇ ರೀತಿ ನಿಶ್ಚಿಂತತೆ ಇತ್ತು. ಘಟಿಸಿದ ವಿಚಾರದ ಬಗ್ಗೆ ಅವರು ಇಂದಿನವರೆಗೂ ಪಶ್ಚಾತ್ತಾಪ ಪಡುತ್ತಿದ್ದಾರೆ. ಪ್ರೀತಿ ಮತ್ತು ಅಜಯ್ (ಹೆಸರು ಬದಲಾಯಿಸಿದೆ) ಇಬ್ಬರೂ ಒಂದು ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ 4 ವರ್ಷದ ಒಬ್ಬ ಮಗಳಿದ್ದಳು. ಪ್ರಾರಂಭದ ಪೋಷಣೆಯ ನಂತರ ಅವರು ಮಗಳನ್ನು ಪ್ಲೇ ಹೋಮ್ಗೆ ಸೇರಿಸಲು ನಿರ್ಧರಿಸಿದರು. ಅವರು ಒಂದು ದೊಡ್ಡ ಸೊಸೈಟಿಯಲ್ಲಿದ್ದ ಕ್ರೆಶ್ಗೆ ಮಗಳನ್ನು ಸೇರಿಸಿದರು. ಅವರು ಹೋಗಿ ಆಡಳಿತ ವರ್ಗದವರನ್ನು ಮಾತನಾಡಿಸಿದಾಗ ತಿಂಗಳಿಗೆ ನಾಲ್ಕೂವರೆ ಸಾವಿರ ರೂ. ಫೀಸ್. ಅಲ್ಲಿನ ಸಂಚಾಲಕರು ಮಗುವನ್ನು ನೋಡಿಕೊಳ್ಳುತ್ತಾರೆ. ಮಕ್ಕಳಿಗೆ ಮನೆಯಂತಹುದೇ ವಾತಾವರಣ, ಊಟ, ತಿಂಡಿ, ಸ್ನೇಹಭರಿತ ಮಾತುಕಥೆ, ಒಟ್ಟಿನಲ್ಲಿ ಮಕ್ಕಳನ್ನು ಎಲ್ಲ ರೀತಿಯಿಂದಲೂ ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ. ತಂದೆ ತಾಯಿ ಆಫೀಸ್ ಕೆಲಸ ಮುಗಿಸಿ ಬರುವವರೆಗೆ ಮಕ್ಕಳ ಬಗ್ಗೆ ಶಾಲೆಯ ಸಂಚಾಲಕರಿಗೆ ಎಲ್ಲ ರೀತಿಯ ಜವಾಬ್ದಾರಿ ಇರುತ್ತದೆ ಎಂದು ತಿಳಿಯಿತು. ಈ ದಂಪತಿಗಳು ಇದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮಗಳನ್ನು ಬೆಳಗ್ಗೆ ಅಲ್ಲಿ ಬಿಟ್ಟು ಆರಾಮವಾಗಿ ಉದ್ಯೋಗಕ್ಕೆ ಹೋಗುವುದು. ಅದರಿಂದ ಮಗಳಿಗೂ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದುಕೊಂಡು ತಂದೆ ತಾಯಿ ಮಗಳನ್ನು ಅಲ್ಲಿ ಬಿಡಲು ಶುರು ಮಾಡಿದರು.
ಕೆಲವು ತಿಂಗಳುಗಳ ನಂತರ ಪ್ರೀತಿಗೆ ಮಗಳ ಆರೋಗ್ಯ ಹದಗೆಡುತ್ತಿರುವಂತೆ ಅನುಭವವಾಯಿತು. ಈಗ ಅವಳು ಪ್ಲೇ ಹೋಮ್ ಹೆಸರು ಹೇಳಿದರೆ ಅಳತೊಡಗಿದಳು. ಒಂದು ದಿನ ಆರೋಗ್ಯ ಬಿಗಡಾಯಿಸಿತು. ಅವರು ಸೂಕ್ಷ್ಮವಾಗಿ ಗಮನಿಸಿದಾಗ ಮಗಳ ಶರೀರದ ಮೇಲೆ ಕೆಲವು ಕೊಳಕು ಗುರುತುಗಳಿದ್ದವು. ಅವರು ಅದರ ಬಗ್ಗೆ ಮಗಳನ್ನು ಕೇಳಿದಾಗ ಅವಳು ಅಳುತ್ತಾ ಅದೆಲ್ಲನ್ನೂ ಸ್ಕೂಲಿನ ತಾತಾ ಮಾಡಿದ್ದು ಎಂದಳು. ಅದನ್ನು ಕೇಳಿ ಪ್ರೀತಿಗೆ ಆಶ್ಚರ್ಯವಾಯಿತು. ತಮ್ಮ ಮಗಳೊಂದಿಗೆ ಈ ರೀತಿಯಾಗಿ ಕೊಳಕು ವ್ಯವಹಾರ ನಡೆಸುತ್ತಾರೆಂದು ಅವಳು ಕನಸು ಕಂಡಿರಲಿಲ್ಲ. ಗಂಡ ಕಂಪನಿಯ ಕೆಲಸಕ್ಕೆ ವಿದೇಶಕ್ಕೆ ಹೋಗಿದ್ದರು. ಪ್ರೀತಿ ಅವರು ಬಂದ ನಂತರ ಎಲ್ಲ ವಿಷಯಗಳನ್ನೂ ಹೇಳಿದರು. ಕಡೆಗೆ ಶಾಲೆಯ ವ್ಯವಸ್ಥಾಪಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಫೈಲ್ ಮಾಡಿಸಿದರು.
ಪೊಲೀಸರು ಅಪ್ರಾಕೃತಿಕ ಲೈಂಗಿಕ ಶೋಷಣೆ ಮತ್ತು ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸಲು ಮಾಡಿರುವ ಕಾನೂನಿನ ಅಡಿಯಲ್ಲಿ ತನಿಖೆ ನಡೆಸಿದರು. ಮೆಡಿಕಲ್ ರಿಪೋರ್ಟ್ನಲ್ಲೂ ಇದಕ್ಕೆ ಪುಷ್ಟಿ ಸಿಕ್ಕಿತು. ವಿಷಯ ಸ್ಪಷ್ಟವಾಗಿತ್ತು. ಪೊಲೀಸರು ಅರುಣ್ ಎಂಬ ವೃದ್ಧ ವ್ಯಕ್ತಿಯನ್ನು ಬಂಧಿಸಿದರು.
ಅಂದಹಾಗೆ ಆರೋಪಿಯ ಸೊಸೆ ಪ್ಲೇ ಹೋಮ್ ನಡೆಸುತ್ತಿದ್ದಳು. ಅದಕ್ಕೆ ಆತ ಸಹಾಯ ಮಾಡುತ್ತಿದ್ದ. ಸೊಸೆ ಕೆಲಸಕ್ಕೆ ಹೊರಗೆ ಹೋದಾಗ ಆತ ಮಕ್ಕಳೊಡನೆ ಅನುಚಿತ ವ್ಯವಹಾರ ನಡೆಸುತ್ತಿದ್ದ. ಅವನು ಪ್ರೀತಿಯ ಮಗಳೊಂದಿಗೆ ಲೈಂಗಿಕ ಶೋಷಣೆ ಮಾಡುತ್ತಿದ್ದ. ಹೆಸರಾಂತ ಸೊಸೈಟಿಯಲ್ಲಿ ಇಂತಹ ಕೀಳು ಅಭಿರುಚಿಯ ವ್ಯಕ್ತಿ ಸಜ್ಜನಿಕೆಯ ಮುಖವಾಡ ಹಾಕಿಕೊಂಡು ಓಡಾಡುತ್ತಿದ್ದ. ಈ ಸತ್ಯ ಪ್ರೀತಿ ಮತ್ತು ಅಜಯ್ಗೆ ಆಘಾತ ತಂದಿತ್ತು. ಈಗ ಪ್ರೀತಿ ಮತ್ತು ಅಜಯ್ ಪಶ್ಚಾತ್ತಾಪಪಡುತ್ತಿದ್ದಾರೆ.
ಆಲೋಚಿಸಿ ಆಯ್ಕೆ ಮಾಡಿ
ಮಕ್ಕಳ ಸುರಕ್ಷತೆ ಹಾಗೂ ಅಭಿೃದ್ಧಿಯ ವಿಷಯದಲ್ಲಿ ತಂದೆ ತಾಯಿಯರು ತಮ್ಮ ಆಲೋಚನೆಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆಯೇ? ಇದು ಯೋಚಿಸಬೇಕಾದ ವಿಷಯ. ಸರಿಯಾದ ಎಚ್ಚರಿಕೆ ವಹಿಸದೆ ತಂದೆ ತಾಯಿಯರು ಮಕ್ಕಳ ಶತ್ರುಗಳಾಗಿಬಿಡುತ್ತಾರೆ. ಇಂತಹ ನರ್ಸರಿ ಸಂಸ್ಥೆಗಳು ಅಗತ್ಯವಿವೆ. ಆದರೆ ಅವುಗಳಲ್ಲಿ ಸೇರಿಸುವಾಗ ತರ್ಕ ಉಪಯೋಗಿಸಬೇಕು.
ಮುಂಬೈನ ಒಂದು ಪ್ಲೇ ಹೋಮ್ ನಲ್ಲಿ ಎರಡೂವರೆ ವರ್ಷದ ಹೆಣ್ಣುಮಗುವಿಗೆ ಹೇಗೆ ಹೊಡೆಯಲಾಯಿತೆಂದರೆ ಅದರ ತಲೆ ಒಡೆದು ಆಸ್ಪತ್ರೆಗೆ ಸೇರಿಸಲಾಯಿತು. ಅದರ ಪೋಷಕರು ಪ್ಲೇ ಹೋಮ್ ವ್ಯವಸ್ಥಾಪಕರ ಮೇಲೆ ಕೇಸ್ ಹಾಕಿದರು. ಇತ್ತೀಚೆಗೆ ಒಂದು ಪ್ಲೇ ಹೋಮ್ನಲ್ಲಿ ಅಳುತ್ತಿದ್ದ ಒಂದು ಮಗುವನ್ನು ಹೊಡೆದು, ಕಾಲಿನಲ್ಲಿ ಒದೆಯುವುದನ್ನು ಟಿ.ವಿಯಲ್ಲಿ ತೋರಿಸಲಾಯಿತು.
ಪ್ಲೇ ಹೋಮ್ ಗಳಲ್ಲಿ ನಡೆಯುವುದನ್ನು ಪ್ರತ್ಯಕ್ಷವಾಗಿ ತೋರಿಸುವುದಿಲ್ಲ. ಮಕ್ಕಳನ್ನು ಶಾಂತವಾಗಿರಿಸಲು ಮತ್ತು ಅವನ್ನು ಸಮಾಧಾನಪಡಿಸಲು ಜ್ಯೂಸ್ನಲ್ಲಿ ಅಮಲು ಪದಾರ್ಥಗಳನ್ನು ಸೇರಿಸಿ ಕುಡಿಸಲಾಗುತ್ತದೆ.
ಮಕ್ಕಳು ಹಸಿ ಮಡಕೆಯಂತಿರುತ್ತಾರೆ ಎಂಬುದನ್ನು ತಂದೆತಾಯಿ ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಯಾವ ರೂಪ ಕೊಡುತ್ತೇವೋ ಅದರಂತೆಯೇ ಅವರಾಗುತ್ತಾರೆ. ಪ್ಲೇ ಹೋಮ್ ನಲ್ಲಿ ಅವರೊಂದಿಗೆ ಸರಿಯಾಗಿ ವರ್ತಿಸದಿದ್ದರೆ ಅವರಲ್ಲಿ ಭಾವನಾತ್ಮಕವಾಗಿ ಮತ್ತು ಮಾನಸಿಕ ರೂಪದಲ್ಲಿ ವಿಕೃತಿಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಪೋಷಕರು ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದಾಗಿ ಹೇಳಿಕೊಳ್ಳುವ ಸಂಸ್ಥೆಗಳ ಬಗ್ಗೆ ಚೆನ್ನಾಗಿ ವಿಚಾರ ಮಾಡಿ ಮಕ್ಕಳನ್ನು ಸೇರಿಸಬೇಕು. ಮಕ್ಕಳಿಗೆ ಎಲ್ಲ ರೀತಿಯ ಸೌಲಭ್ಯಗಳಿವೆಯೇ ಹಾಗೂ ಸುರಕ್ಷಿತವೇ ಎಂದು ಯೋಚಿಸಬೇಕು.
– ಚಂದ್ರಕಲಾ
ಈ ವಿಷಯಗಳನ್ನು ಗಮನಿಸಿ
– ಸಂಸ್ಥೆಯ ವಿರುದ್ಧ ದೂರುಗಳಿವೆಯೇ ಎಂದು ಪತ್ತೆ ಮಾಡಿ.
– ಅಲ್ಲಿರುವ ಮಕ್ಕಳ ಪೋಷಕರಿಂದಲೂ ಮಾಹಿತಿ ಪಡೆಯಿರಿ.
– ಅಲ್ಲಿಗೆ ಬರುವ ಮಕ್ಕಳ ವರ್ತನೆ ಮತ್ತು ಭಾವನಾತ್ಮಕತೆ ಪರೀಕ್ಷಿಸಿ.
– ಸಂಸ್ಥೆಯ ವ್ಯವಸ್ಥಾಪಕರ ವರ್ತನೆ ಹೇಗಿದೆ ಎಂದು ತಿಳಿದುಕೊಳ್ಳಿ.
– ನಿಮ್ಮ ಆಫೀಸಿನ ಸಮಯ ಬಿಟ್ಟು ಅಲ್ಲಿಗೆ ಹೋಗಿ ನೋಡಿ. ಅದರಿಂದ ವಾಸ್ತವತೆ ತಿಳಿಯುತ್ತದೆ.
– ಸಂಸ್ಥೆಯ ಅಪ್ಪಣೆ ಪಡೆದು ಮಕ್ಕಳ ಮಧ್ಯೆ ಸಮಯ ಕಳೆಯಿರಿ. ಅವರಿಗೆ ಯಾರಿಂದಲೂ ತೊಂದರೆಯಿಲ್ಲವೇ ಎಂದು ತಿಳಿದುಕೊಳ್ಳಿ.
– ಆಗಾಗ್ಗೆ ಮಕ್ಕಳೊಡನೆ ಅಲ್ಲಿ ದಿನನಿತ್ಯ ಏನು ನಡೆಯಿತೆಂದು ಕೇಳಿ ತಿಳಿದುಕೊಳ್ಳಿ. ಮಗು ಏನಾದರೂ ಹೇಳಲು ಇಚ್ಛಿಸಿದರೆ ಬೈದು ಅದನ್ನು ಸುಮ್ಮನಿರಿಸಬೇಡಿ. ಅದರಲ್ಲಿ ಒಳ್ಳೆಯ ಅಭ್ಯಾಸಗಳು ಬೆಳೆಯುತ್ತವೆಯೋ ಎಂದು ನೋಡಿ.
– ಸಂಸ್ಥೆಯ ಬಗ್ಗೆ ದೂರುಗಳು ಕಂಡುಬಂದರೆ ಯಾವುದೇ ಹಿಂಜರಿಕೆಯಿಲ್ಲದೆ ಪೊಲೀಸರಿಗೆ ದೂರು ನೀಡಿ.