ಈ ಬಾರಿ ಮಗಳ ಮನೆಗೆ ಮುಂಬೈಗೆ ಹೋದಾಗ ಹತ್ತಿರದಲ್ಲಿರುವ ಮಹಾಬಲೇಶ್ವರಕ್ಕೆ ಹೋಗೋಣವೆಂದುಕೊಂಡೆವು. ಈಗ ಎಕ್ಸ್ ಪ್ರೆಸ್ ಹೈವೇ ಕೂಡ ಆಗಿದೆ, ರಸ್ತೆ ಬಹಳ ಚೆನ್ನಾಗಿದೆ. ಪ್ರಯಾಣದ ಆಯಾಸ ಅಷ್ಟೇನೂ ಆಗದು. ದೂರ ಸ್ವಲ್ಪ ಜಾಸ್ತಿಯಾದರೂ, ದುಬಾರಿ ಟೋಲ್ ಕೊಡಬೇಕಾಗಿ ಬಂದರೂ ಪರವಾಗಿಲ್ಲ. ಆದರೆ ಪ್ರಯಾಣ ಅಷ್ಟೇ ಸುಖಕರವಾಗಿರುತ್ತದೆ ಎಂದಾಗ ಕಾರಿನಲ್ಲೇ ಮಹಾಬಲೇಶ್ವರಕ್ಕೆ ಹೊರಟೆವು.
ಪಂಚಗಣಿ ಐದು ಗಂಟೆಗಳ ಪ್ರಯಾಣ, ಬೆಳಗ್ಗೆ ಏಳು ಗಂಟೆಗೆ ಹೊರಟವರು ಹನ್ನೆರಡಕ್ಕಾಗಲೇ ಪಂಚಗಣಿ ತಲುಪಿದೆವು. ಅಲ್ಲಿಂದ ಮಹಾಬಲೇಶ್ವರ 40 ಕಿ.ಮೀ. ದೂರವಿದೆ. ಅಲ್ಲದೆ, ಪಂಚಗಣಿಯಲ್ಲೂ ನೋಡುವುದು ಬೇಕಾದಷ್ಟಿದೆ. ಅಲ್ಲಿಯ ಟೇಬಲ್ ಲ್ಯಾಂಡ್ ದಕ್ಷಿಣ ಆಫ್ರಿಕಾದ ಟೇಬಲ್ ಟಾಪ್ ಪರ್ವತವನ್ನು ನೆನಪಿಸುತ್ತದೆ. ಸಮತಟ್ಟಾದ ಸ್ಥಳ, ಮಾನವ ನಿರ್ಮಿತವೇ, ಅಲ್ಲಿಂದ ಸುತ್ತಲಿನ ಬೆಟ್ಟಗಳ ತಪ್ಪಲು ಅರ್ಥಾತ್ ಮೇಲ್ಭಾಗ ಇದರಂತೆ ಸಮತಟ್ಟಾಗಿಯೇ ಒಂದು ದುಂಡಾದ ಮೇಜಿನ ಮೇಲ್ಭಾಗದಂತೆ ಕಾಣುತ್ತಿತ್ತು. ಜೊತೆಗೆ ಆ ಎತ್ತರದ ತಾಣದಿಂದ ಸುತ್ತಲಿನ ದೃಶ್ಯ ನೋಡಲು ಆಹ್ಲಾದಕರವಾಗಿತ್ತು. ಹಸಿರು ಬೆಟ್ಟ ಮತ್ತು ಯಾವುದೋ ಶಿಲ್ಪ ಕೊರೆದಂತಿರುವ ಕಲ್ಲಿನ ಬೆಟ್ಟದ ಸಾಲು ಅಮೆರಿಕಾದ ಗ್ರ್ಯಾಂಡ್ ಕೆನ್ಯಾನ್‌ನ್ನು ನೆನಪಿಗೆ ತಂದಿತು. ಸುತ್ತಲಿನ ದೃಶ್ಯಾವಳಿಗಳನ್ನು ನೋಡಲು ಕುದುರೆಗಳಿದ್ದವು. ಅದರ ಮೇಲೆ ಕುಳಿತು ಒಂದು ಸುತ್ತು ಹಾಕಿದಾಗ ಕುದುರೆ ಸವಾರಿಯೊಡನೆ ಸುಂದರ ದೃಶ್ಯಗಳ ದರ್ಶನ ಆಯಿತು. ಅಲ್ಲಲ್ಲಿ ಬೇಯಿಸಿದ ಜೋಳಗಳನ್ನು ಮಾರುತ್ತಿದ್ದರು. ಅಲ್ಲಿನ ಜೋಳ ಬಹು ಜನಪ್ರಿಯ ಹಾಗೂ ರುಚಿಯೂ ಹೆಚ್ಚು. ಅಲ್ಲಿ ಸುತ್ತಲೂ ನೋಡಿಕೊಂಡು ಛೋಟಾ ಕಾಶ್ಮೀರ್ ಎನ್ನಿಸಿಕೊಂಡ ಮುನ್ನಾ ಲೇಕ್ ಬಳಿ ಹೋದೆವು. ಸುಂದರವಾಗಿದ್ದ ಸರೋವರದಲ್ಲಿ ಎಲ್ಲರೂ ಬೋಟಿಂಗ್ ಮಾಡುತ್ತಿದ್ದರು. ಕುದುರೆ ಸವಾರಿ ಮಾಡಿ ಬಿಸಿಬಿಸಿ ಜೋಳವನ್ನು ತಿಂದು ಮುನ್ನಾ ಸರೋವರದಲ್ಲಿ ಜಲವಿಹಾರ ನಡೆಸಬಹುದು. ಪಂಚಗಣಿಗೆ ಬಂದೊಡನೆಯೇ ಸಾಲಾಗಿ ಹೊಳೆಯುವ ಕೆಂಪನೆಯ ಸ್ಟ್ರಾಬೆರಿಯ ಅಂಗಡಿಗಳು ನಿಮ್ಮನ್ನು ಕೈಬೀಸಿ ಕರೆಯುತ್ತವೆ. ಮುಂಬೈನ ಬಿಸಿಲಿಗೆ ಆ ಕೆಂಪನೆಯ ಹಣ್ಣುಗಳನ್ನು ನೋಡಿದಾಗ ಬಾಯಲ್ಲಿ ನೀರೂರುತ್ತದೆ. ಬೆಲೆಯೂ ಬಹಳ ಕಡಿಮೆ. ಅಲ್ಲಿ ನಾವಿದ್ದ ಎರಡು ದಿನ ಊಟ ತಿಂಡಿ ತಿಂದದ್ದಕ್ಕಿಂತ ಸ್ಟ್ರಾಬೆರಿ ತಿಂದದ್ದೇ ಹೆಚ್ಚು.
ನಿಜಕ್ಕೂ ಹೊಳೆಯುವ ಕೆಂಪನೆಯ ಹಣ್ಣುಗಳು ಬಹಳ ರುಚಿಯಾಗಿದ್ದವು. ಅಂತಹ ಸ್ಟ್ರಾಬೆರಿ ಬೇರೆ ಎಲ್ಲಿಯೂ ತಿಂದಿರಲಿಲ್ಲ. ಒಮ್ಮೆ ಸ್ಯಾನ್‌ಫ್ರಾನ್ಸಿಸ್ಕೋನಲ್ಲಿ ಇದಕ್ಕಿಂತಲೂ ದಪ್ಪಗಿನ ಹಣ್ಣುಗಳನ್ನು ತಿಂದಿದ್ದೆ. ಅದು ಬಿಟ್ಟರೆ ಬೆಂಗಳೂರಿಗೆ ಬರುವ ಹುಳಿ ಸ್ಟ್ರಾಬೆರಿಗೆ ಹೋಲಿಸಿದರೆ ಇವು ಬಹಳ ರುಚಿಯಾಗಿದ್ದವು. ಸ್ಟ್ರಾಬೆರಿಯ ಹುಟ್ಟೂರಿನಲ್ಲಿ ರುಚಿಯಾಗಿರದೆ ಮತ್ತೆಲ್ಲಿ ದೊರಕೀತು ಅಲ್ಲವೇ? ಇಡೀ ಭಾರತದಲ್ಲಿ ಇಲ್ಲಿ ಮಾತ್ರವೇ ಹೆಚ್ಚು ಸ್ಟ್ರಾಬೆರಿ ಬೆಳೆಯುವುದು. ಅಲ್ಲಿಯ ತಾಪಮಾನ ಮತ್ತು ಕೆಂಪು ಮಣ್ಣು ಸ್ಟ್ರಾಬೆರಿಯ ಬೆಳೆಯುವಿಕೆಗೆ ಅನುಕೂಲವಾಗಿರುತ್ತದಂತೆ. ನಮ್ಮ ಹೋಟೆಲ್ ಹಳೆಯ ಮಹಾಬಲೇಶ್ವರದಲ್ಲಿ ಇದ್ದುದರಿಂದ ನಾವು ಸ್ವಲ್ಪ ದೂರ ಹೋಗಬೇಕಾಯಿತು. ಅಕ್ಕಪಕ್ಕ ಹಸಿರು ಮರಗಳು ಯಾವುದೋ ಕಾಡಿನೊಳಗೆ ಹೋದಂತಿತ್ತು. ಎತ್ತ ನೋಡಿದರೂ ಬರೀ ಸಿಮೆಂಟ್ ಕಟ್ಟಡಗಳ ದರ್ಶನವೀಯುವ ಮುಂಬೈ ಎಲ್ಲಿ? ಈ ಹಸಿರು ಕಾಡೆಲ್ಲಿ? ಅದಕ್ಕೆ ಏನೋ ಹತ್ತಿರದಲ್ಲೇ ಇರುವ ಈ ಸುಂದರ ನಿಸರ್ಗಧಾಮ ಮುಂಬಯಿಗರನ್ನು ಬಹಳಷ್ಟು ಆಕರ್ಷಿಸುತ್ತಿರುವುದು.
ಮಧುಚಂದ್ರಕ್ಕೆ ಹೇಳಿ ಮಾಡಿಸಿದ ತಾಣ. ಸುತ್ತಲೂ ಬೆಟ್ಟಗಳ ದೃಶ್ಯಾವಳಿ, ಅವುಗಳ ಆನಂದ ಸವಿಯಲು ಸಾಕಷ್ಟು ತಾಣಗಳಿವೆ. ವೀಕ್ಷಣಾ ತಾಣಗಳನ್ನು ಹೈ ಪಾಯಿಂಟ್‌ಗಳೆಂದು ವಿಂಗಡಿಸಲಾಗಿದೆ. ಒಟ್ಟು 22 ಹೈ ಪಾಯಿಂಟ್‌ಗಳಿದ್ದರೂ ಅವುಗಳಲ್ಲಿ ಕೆಲವು ಬಹು ಮುಖ್ಯವಾದವುಗಳು. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹಸಿರು ವನಸಿರಿಯಿಂದ ತನ್ನೊಡಲನ್ನು ತುಂಬಿಕೊಂಡಿರುವ ನಿಸರ್ಗಧಾಮವಿದು. ಮುಂಬೈ ಮತ್ತು ಪುಣೆಗೆ ಬಹು ಹತ್ತಿರದಲ್ಲಿರುವ ಬ್ರಿಟಿಷರ ಕಾಲದಲ್ಲಿ ಬೇಸಿಗೆಯ ರಾಜಧಾನಿ ಎನಿಸಿಕೊಂಡಂತಹ ಸ್ಥಳ ಇದು. ಅವರು ಸುಖ ಲೋಲುಪರು. ಎಲ್ಲಿಗೆ ಹೋದರೂ ಅನುಕೂಲಗಳನ್ನು ಚೆನ್ನಾಗಿ ಮಾಡಿಕೊಳ್ಳುವ ಸ್ವಭಾವ. ಬೇಸಿಗೆಯಲ್ಲಿ ಈ ತಂಪಾದ ತಾಣಕ್ಕೆ ಬಂದು ವಿರಮಿಸುತ್ತಿದ್ದರು.
4439 ಅಡಿ ಎತ್ತರದಲ್ಲಿರುವ ಈ ತಾಣ ಪುಣೆಯಿಂದ 120 ಕಿ.ಮೀ. ಮತ್ತು ಮುಂಬೈನಿಂದ 285 ಕಿ.ಮೀ. ದೂರದಲ್ಲಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಹರಿಯುವ ಕೃಷ್ಣಾ ನದಿಯ ಮೂಲ ಇಲ್ಲಿಂದಲೇ. ಜೊತೆಗೆ ಕೊಯ್ನಾ, ವಾರಣಾ, ಸಾವಿತ್ರಿ, ಗಾಯತ್ರಿ ನದಿಗಳೂ ಸಹ ಹರಿಯುತ್ತವೆ. ಮಹಾಬಲೇಶ್ವರ ಪ್ರವಾಸಿಗರ ಜನಪ್ರಿಯ ತಾಣ. ಮಧುಚಂದ್ರಕ್ಕೆ ಬರುವವರಿಗೆ ಪ್ರಿಯ ಪ್ರವಾಸಿ ಸ್ಥಳ. ನಾವು ಅಲ್ಲಿ ಹೋದಾಗ ಹೊಸದಾಗಿ ಮದುವೆಯಾದ ಅನೇಕ ಜೋಡಿಗಳನ್ನು ಕಂಡೆವು. ಹಿಂದೂಗಳಿಗೆ ರುದ್ರಾಕ್ಷದಂತಿರುವ ಲಿಂಗರೂಪಿ ಮಹಾಬಲೇಶ್ವರನ ದರ್ಶನ ಮಾಡುವ ಯಾತ್ರಾ ಸ್ಥಳ. ದೋಣಿ ವಿಹಾರ ಮಾಡಲು ಮುನ್ನಾ ಸರೋವರ ಪ್ರಶಸ್ತವಾಗಿದೆ. ದೋಣಿ ವಿಹಾರ ಚಂದ ಅಥವಾ ಸರೋವರದ ಪಕ್ಕದಲ್ಲಿ ನಡೆಯಲೂ ಆನಂದವಾಗಿಯೇ ಇರುತ್ತದೆ. ಸುತ್ತಲೂ ಹಸಿರು ಮರಗಳು, ತಂಗಾಳಿ ಮನಕ್ಕೆ ಮುದ ನೀಡುತ್ತದೆ.
ನಯನ ಮನೋಹರ ಹೈ ಪಾಯಿಂಟ್ಸ್
ಮಹಾಬಲೇಶ್ವರದಲ್ಲಿ ಬೇರೆಲ್ಲಕ್ಕಿಂತ ನೋಡಲಿಕ್ಕಿರುವುದು ಸುತ್ತಲಿನ ಬೆಟ್ಟಗಳ ನಿಸರ್ಗ ಸೌಂದರ್ಯ. ಯಾವುದೋ ಶಿಲ್ಪಿ ಕೊರೆದಂತಿರುವ ಅಲ್ಲಿಯ ಬೆಟ್ಟದ ಸಾಲನ್ನು ಕಂಡಾಗ ಗ್ರ್ಯಾಂಡ್ ಕೆನ್ಯಾನ್ ನೆನಪಿಗೆ ಬರುತ್ತದೆ. ನಿಜಕ್ಕೂ ಅಷ್ಟು ಸುಂದರ ದೃಶ್ಯಾವಳಿ. ನೋಡಿದಷ್ಟೂ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಮಹಾಬಲೇಶ್ವರದ ಸುತ್ತಲ ಆ ಪ್ರಕೃತಿಯ ಸವಿಯನ್ನು ಸವಿಯಲು ವಿಭಿನ್ನ ಹೆಸರುಗಳೊಂದಿಗೆ ಮೆರೆಯುತ್ತಿರುವ ಹೈ ಪಾಯಿಂಟ್‌ಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಹೌದು. ಅವುಗಳಲ್ಲಿ ಮುಖ್ಯವಾದವುಗಳು
ಆರ್ಥರ್ಸ್ ಸೀಟ್ : 1340 ಮೀ. ಎತ್ತರದಲ್ಲಿರುವ ಈ ತಾಣದಲ್ಲಿ ಆರ್ಥರ್ ಮೌಂಟ್ ಎನ್ನುವ ಬ್ರಿಟಿಷ್ ಅಧಿಕಾರಿ ತನ್ನ ಹೆಂಡತಿ, ಮಕ್ಕಳನ್ನು ನೆನಪಿಸಿಕೊಳ್ಳುತ್ತಾ ಸಾವಿತ್ರಿ ನದಿಯತ್ತ ನೋಟ ಹಾಯಿಸುತ್ತಿದ್ದನಂತೆ. ಅಲ್ಲೇ ದೋಣಿ ದುರಂತದಲ್ಲಿ ತನ್ನ ಹೆಂಡತಿ ಮಕ್ಕಳನ್ನು ಕಳೆದುಕೊಂಡದ್ದು. ಆದ್ದರಿಂದ ಅದಕ್ಕೆ ಅವನ ಹೆಸರನ್ನೇ ನೀಡಲಾಯಿತಂತೆ. ಅಲ್ಲಿಂದ ನಯನ ಮನೋಹರ ಬೆಟ್ಟದ ಸಾಲುಗಳು ಕಣ್ಣುಗಳಿಗೆ ತಂಪೆನಿಸುತ್ತದೆ. ಮಾನವ ಎಷ್ಟೇ ಬುದ್ಧಿವಂತನಾದರೂ ಆ ಸೃಷ್ಟಿಕರ್ತನ ಕುಶಲತೆಯ ಮುಂದೆ ಎಲ್ಲವೂ ತೃಣ ಸಮಾನ ಅಲ್ಲವೇ?
ಕೇಟ್ಸ್ ಪಾಯಿಂಟ್ : ಇದಂತೂ ಬಲು ಸುಂದರ. ಯಾರೋ ಶಿಲ್ಪಿ ಕೊರೆದಂತಿರುವ ಬೆಟ್ಟದ ಸಾಲುಗಳು, ಕೆಳಗೆ ಹರಿಯುವ ನೀಲ ನದಿ, ಬಾಲಕ್‌ವಾಡಿ ಮತ್ತು ದೋವ್ ಜಲಾಶಯಗಳ ಸುಂದರ ನೋಟ ಕಾಣಸಿಗುತ್ತದೆ. 1280 ಮೀ. ಎತ್ತರದಲ್ಲಿರುವ ಈ ವೀಕ್ಷಣಾ ತಾಣಕ್ಕೆ ಜೇಮ್ಸ್ ಮಾಲ್ಕಮ್ ನ ಮಗಳು ಕೇಟ್‌ನ ಹೆಸರನ್ನೇ ನೀಡಲಾಗಿದೆ.
ನೀಡಲ್ ಹೋಲ್ ಪಾಯಿಂಟ್ : ಆನೆಯ ಸೊಂಡಿಲಿನಂತಿರುವ ಶಿಲ್ಪದ ಮಧ್ಯದ ನೋಟ ಸೂಜಿಯ ತೂತನ್ನು ನೆನಪಿಸುತ್ತದೆ. ಅಂತೆಯೇ ನೀಡಲ್ ಹೋಲ್ ಎನ್ನುವ ಹೆಸರನ್ನೇ ನೀಡಲಾಗಿದೆ.
ವಿಲ್ಸನ್ ಪಾಯಿಂಟ್ : 1923-1926 ರವರೆಗೆ ಮುಂಬೈನ ಗವರ್ನರ್ ಆಗಿದ್ದ ಸರ್ ವೆಸ್ಲೀ ವಿಲ್ಸನ್‌ರ ಹೆಸರನ್ನು ಹೊಂದಿರುವ ಈ ಪಾಯಿಂಟ್ ಮಹಾಬಲೇಶ್ವರದಲ್ಲೇ ಅತ್ಯಂತ ಎತ್ತರದ ತಾಣ. ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡಲು ಪ್ರಶಸ್ತ ತಾಣ. ನೋಡುವವರಲ್ಲಿ ಬೆರಗನ್ನು ಮೂಡಿಸುತ್ತದೆ.
ಮಂಕೀಸ್ ಪಾಯಿಂಟ್ : ಮೂರು ಕೋತಿಗಳಂತೆ ಕಾಣುವ ಬೆಟ್ಟದ ಸಾಲುಗಳ ಮನೋಹರ ದೃಶ್ಯವನ್ನು ಒಳಗೊಂಡಿದೆ. ಎಲ್ಲ ಹೈ ಪಾಯಿಂಟ್‌ಗಳನ್ನು ನೋಡಿ ಸಂಜೆ ಆರೂವರೆಗೆ ಸೂರ್ಯಾಸ್ತವಾಗುವ ಸಮಯಕ್ಕೆ ಸನ್‌ಸೆಟ್ ಪಾಯಿಂಟ್‌ಗೆ ಹೋಗಿ ಅದ್ಭುತ ಸೂರ್ಯಾಸ್ತವನ್ನು ನೋಡಿದೆ. ಸೂರ್ಯಾಸ್ತದೊಂದಿಗೆ ಅಲ್ಲಿನ ಪ್ರಕೃತಿಯ ದೃಶ್ಯಾವಳಿಗಳನ್ನು ನೋಡಬಹುದು. ಇತಿಹಾಸ ಪ್ರಿಯರಾದರೆ 27 ಕಿ.ಮೀ. ದೂರದಲ್ಲಿರುವ ಪ್ರತಾಪ್ ಸಹ ನೋಡಬಹುದು. ಅಲ್ಲಿಯ ಕುದುರೆಯ ಮೇಲೆ ಕುಳಿತಿರುವ ಶಿವಾಜಿಯ ಪುತ್ಥಳಿಯನ್ನು ನೋಡಬಹುದು. ನಾವು ಈವರೆಗೂ ನೋಡದಿರುವ ಅನೇಕ ರೀತಿಯ ಕಾಡುಹಣ್ಣುಗಳು, ಅಂಜೂರ ಮತ್ತು ಅಲ್ಲಿಯೇ ಬೆಳೆಯುವ ಸ್ಟ್ರಾಬೆರಿ ಹಣ್ಣುಗಳು ಮತ್ತು ಅದರ ಐಸ್‌ಕ್ರೀಮ್ ಸವಿಯಬಹುದು. ಉದ್ದಕ್ಕೂ ಸ್ಟ್ರಾಬೆರಿ ಫಾರ್ಮ್ ಗಳು ಸಿಗುತ್ತವೆ. ಹಣ್ಣಿನ ಕಾಲದಲ್ಲಿ ನೀವೇ ಹೋಗಿ ಹಣ್ಣನ್ನು ಕಿತ್ತು ತಿನ್ನಬಹುದು.
ಹೋಗಲು ಪ್ರಶಸ್ತ ಸಮಯ
ಮಾರ್ಚ್‌ನಿಂದ ಮೇರೆಗೆ ಅತ್ಯಂತ ಪ್ರಶಸ್ತ, ನಂತರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ವಿಪರೀತ ಮಳೆ ಇರುತ್ತದೆ. ಮುಂಬೈನ ಯಾಂತ್ರಿಕ ಜೀವನದಿಂದ ಬೇಸತ್ತವರಿಗೆ ಪ್ರಕೃತಿಯ ಸಿರಿಯನ್ನು ಉಣಬಡಿಸುವ ಸುಂದರ ನಿಸರ್ಗಧಾಮವಿದು. ಮುಂಬೈಯಿಂದ ಐದು ಗಂಟೆಗಳ ಪ್ರಯಾಣ. ನಿಮ್ಮ ಕಾರುಗಳಲ್ಲೂ ಹೋಗಬಹುದು.
– ಮಂಜುಳಾ ರಾಜ್