ಜೀವನದಿ ಕಾವೇರಿ ಕನ್ನಡಿಗರ ಅದರಲ್ಲೂ ವಿಶೇಷವಾಗಿ ಕೊಡಗು, ಮಂಡ್ಯ, ಮೈಸೂರು, ಬೆಂಗಳೂರು ಅಷ್ಟೇ ಏಕೆ ತಮಿಳುನಾಡು, ಕೇರಳ ಮತ್ತು ಪಾಂಡಿಚೆರಿ ರಾಜ್ಯಗಳ ಬಹುಭಾಗದ ಜೀವನಾಡಿಯಾಗಿರುವುದೇ ಅಲ್ಲದೆ, ಕನ್ನಡನಾಡು, ನುಡಿ ಮತ್ತು ಸಂಸ್ಕೃತಿಗಳ ಸಂಕೇತವಾಗಿರುವುದಷ್ಟೇ ಅಲ್ಲದೆ, ಕನ್ನಡಿಗರ ಸ್ವಾಭಿಮಾನದ ಪ್ರತೀಕ ಆಗಿದೆ.

ಕರ್ನಾಟಕದ ಕಾಶ್ಮೀರವೆಂದೇ ಖ್ಯಾತವಾಗಿರುವ ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿ ಸಮೀಪ ನಿತ್ಯ ಹರಿದ್ವರ್ಣದ ಸಾಲುಸಾಲು ಸಹ್ಯಾದ್ರಿ ಗಿರಿಶಿಖರ, ಕಾಡುಕಣಿವೆಯಿಂದ ಕೂಡಿದ ಸ್ವರ್ಗೀಯ ನಿಸರ್ಗದ ಮಡಿಲಲ್ಲಿರುವ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಶಿರದಲ್ಲಿ ಉಗಮವಾಗುವ ಕಾವೇರಿ ಅರಬ್ಬಿ ಸಮುದ್ರ ಸೇರುವ ಮಾರ್ಗದುದ್ದಕ್ಕೂ ಅಲ್ಲಲ್ಲಿ ಅನೇಕ ನಿಸರ್ಗಧಾಮ, ದ್ವೀಪ, ಜಲಪಾತ, ಕಟ್ಟೆ, ಉದ್ಯಾನವನ ಮೊದಲಾದವುಗಳಿಗೆ ಜನ್ಮ ನೀಡಿದ್ದಾಳೆ.

ಅವುಗಳಲ್ಲಿ ಮೈಸೂರು, ಶ್ರೀರಂಗಪಟ್ಟಣಕ್ಕೆ ಸಮೀಪವಿರುವ ಕಾವೇರಿ ತೀರದ ಸಿನಿ ಗ್ರಾಮ ಖ್ಯಾತಿಯ ಮಹದೇವಪುರ ಕೂಡ ಒಂದು. ಇಲ್ಲಿ ಕಾವೇರಿ ಎತ್ತರದ ಶಿಲಾಸ್ತರದಿಂದ ಜಲಪಾತದಂತೆ ಭೋರ್ಗರೆಯುತ್ತಾ ಧುಮ್ಮಿಕ್ಕದಿದ್ದರೂ ಪ್ರಶಾಂತ ಪರಿಸರದಲ್ಲಿ ನೀಲಾಗಸ ಮತ್ತು ಬೆಟ್ಟಗುಡ್ಡಗಳ ಹಿನ್ನಲೆಯಲ್ಲಿ ತನ್ನ ಅಡ್ಡಕ್ಕೂ ನಿರ್ಮಿಸಲಾಗಿರುವ ಸುಮಾರು ಒಂದು ಕಿ.ಮೀ.ಗೂ ಹೆಚ್ಚಿರುವ ಕಟ್ಟೆಯುದ್ದಕ್ಕೂ ಮೈದುಂಬಿ ಜಲಧಾರೆಯಂತೆ ಜಿಗಿದು ಬಂಡೆಗಲ್ಲುಗಳ ಮೇಲೆ ಕುಣಿದು ಕುಪ್ಪಳಿಸುತ್ತಾ ತನ್ನೆರಡೂ ತೀರಗಳಲ್ಲಿ ಜಲಕ್ರೀಡೆಗಳಿಗೆ ವಿಪುಲ ಅವಕಾಶ ಕಲ್ಪಿಸಿ ಜಲಪಾತದ ಅನುಭವವನ್ನು ನೀಡುತ್ತಿದ್ದಾಳೆ.

ಇಂದಿನ ಬದಲಾವಣೆ ಪರ್ವದಲ್ಲೂ ಮಹದೇಪುರ ಅತ್ತಿತ್ತ ಹೊರಳದೆ ಗ್ರಾಮೀಣ ಸೊಗಡಿನ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡಿದೆ. ಒಂದು ಕಾಲದಲ್ಲಿ ಸಿನಿ ಗ್ರಾಮವೆಂದೇ ಖ್ಯಾತವಾಗಿದ್ದ ಮಹದೇವಪುರ ಗ್ರಾಮೀಣ ಪರಿಸರ ಮತ್ತು ಬದುಕಿನ ಹಂದರದ ಕಥೆಗಳನ್ನು ಹೊಂದಿರುತ್ತಿದ್ದ ಅಂದಿನ ಬಹುತೇಕ ಎಲ್ಲಾ ಭಾಷೆಯ ಚಿತ್ರಗಳಿಗೆ ಆ ಗ್ರಾಮ ಪೋಸು ನೀಡಿದೆ.

ಎವರ್‌ಗ್ರೀನ್‌ ಸೌಂದರ್ಯ ಮತ್ತು ಪರಿಸರದ ಪ್ರಾಕೃತಿಕ ದೃಶ್ಯಾವಳಿಗಳಾದ ನದಿ, ತೊರೆ, ಹಸುರಿನಿಂದ ಕಂಗೊಳಿಸುವ ಬೆಟ್ಟಗುಡ್ಡ ಹಾಗೂ ಕಾಡುಮೇಡು ಮೊದಲಾದವುಗಳಿಂದ ನಿಸರ್ಗ ನಿರ್ಮಿತ ಸೆಟ್‌ನಂತಿರುವ ಮಹದೇವಪುರ, ನಿರ್ಮಾಪಕರು ಕೃತಕವಾಗಿ ಗ್ರಾಮೀಣ ಪರಿಸರದ ಸೆಟ್‌ಗಳನ್ನು ನಿರ್ಮಿಸುವ ಖರ್ಚನ್ನು ಉಳಿಸಿ 1980-90ರ ದಶಕದ ಕನ್ನಡ ಚಿತ್ರರಂಗದ ಏಳುಬೀಳುಗಳಿಗೆ ಸಾಕ್ಷಿಯಾಗಿ `ಸಿನಿಮಾ ಹಳ್ಳಿ' ಎಂದೇ ಹೆಸರು ಮಾಡಿತ್ತು. ಈ ಸಿನಿಮಾ ಗ್ರಾಮ ಕೇವಲ ಕನ್ನಡ ಭಾಷಾ ಚಿತ್ರಗಳೇ ಅಲ್ಲದೇ, ತಮಿಳು, ತೆಲುಗು, ಮಲೆಯಾಳಂ, ಹಿಂದಿಯೂ ಸೇರಿದಂತೆ ಹಾಲಿವುಡ್‌ನ ಸುಮಾರು 200ಕ್ಕೂ ಹೆಚ್ಚಿನ ಚಿತ್ರಗಳೇ ಅಲ್ಲದೆ, ಹಲವಾರು ಧಾರಾವಾಹಿಗಳಲ್ಲೂ ಚಿತ್ರೀಕರಣಗೊಂಡಿದೆ.

ದಿವಂಗತ ಡಾ. ರಾಜ್‌ಕುಮಾರ್‌, ಡಾ. ವಿಷ್ಣುವರ್ಧನ್‌ ಹಾಗೂ ಖ್ಯಾತ ನಟ ರಜನೀಕಾಂತ್‌ ಮೊದಲಾದ ಕಲಾ ದಿಗ್ಗಜರ ನೆಚ್ಚಿನ ಚಿತ್ರೀಕರಣ ತಾಣವಾಗಿದ್ದವು. ಮಹದೇವಪುರದ ಎಡ ತುದಿಯಲ್ಲಿ ಕಾವೇರಿ ನದಿಯ ಬಲ ದಂಡೆಯ ಮೇಲೆ ಮೈಸೂರಿನ ರಾಜವಂಶಸ್ಥರು ಕಟ್ಟಿಸಿದ್ದೆಂದು ಹೇಳಲಾಗುವ ಎರಡು ಅಂತಸ್ತಿನ (ಸಿನಿಮಾ) ಮನೆ 60ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಜಮೀನುದಾರ ಅಥವಾ ಊರಿನ ಗೌಡರ ಮನೆಯಾಗಿ ಚಿತ್ರೀಕರಣಗೊಂಡಿದೆ.

ಹಚ್ಚಹಸುರಿನಿಂದ ಕಂಗೊಳಿಸುವ ಸುತ್ತಮತ್ತಲ ಭತ್ತ, ಕಬ್ಬು ತಲೆದೂಗುವ ತೆಂಗಿನ ಕೃಷಿ ಭೂಮಿ ಹಾಗೂ ಕಾವೇರಿ ನದಿಗೆ ಹೊಂದಿಕೊಂಡಂತಿರುವ ಕಾಡುಮೇಡು ಯಾವುದೇ ಸಂಭಾವನೆ ಅಪೇಕ್ಷಿಸದೆ ಕ್ಯಾಮೆರಾಗಳಿಗೆ ಪೋಸು ನೀಡಿ ಹಳೆಯ ಮತ್ತು ಹೊಸ ತಲೆಮಾರಿನ ಕಲಾವಿದರ ನಟನೆಗೆ ಸಾಕ್ಷಿಯಾಗಿತ್ತು. ಆದರೆ, ಇತ್ತೀಚಿನ ಚಿತ್ರಗಳೆಲ್ಲಾ ಹೆಚ್ಚಾಗಿ ನಗರ ಪ್ರದೇಶದ ದೊಡ್ಡ ದೊಡ್ಡ ಕಟ್ಟಡಗಳಾದ ಅರಮನೆಗಳು, ಭವ್ಯ ಬಂಗಲೆಗಳು ಮತ್ತು ಮಾಲ್‌ಗಳಿಗೆ ಶಿಫ್ಟಾಗಿ ಸಿನಿಮಾ ಕಥೆಗಳು ಪ್ರೀತಿ, ಪ್ರೇಮ, ರಾಜಕೀಯ, ರೌಡಿಸಂ, ಗೂಂಡಾಯಿಸಂ, ಮಚ್ಚು, ಲಾಂಗಿನ ಕಥೆಗಳಿಗೇ ಮೀಸಲಾಗಿರುವುದರಿಂದ ಈ ಗ್ರಾಮ ಚಿತ್ರೋದ್ಯಮದಿಂದ ನೇಪಥ್ಯಕ್ಕೆ ಸರಿಯುವಂತಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ