“ಸುಮಾರು 50 ವರ್ಷದ ಆ ವ್ಯಕ್ತಿ ನನ್ನ ಬೈಕ್‌ ಬಳಿ ಇದ್ದ ತಮ್ಮ ಕಾರು ತೆಗೆದರು. ನಂತರ ತಮ್ಮ ವಿಂಡೋ ಗ್ಲಾಸ್‌ ಕೆಳಗಿಳಿಸಿದಾಗ ಕೋಪಗೊಂಡ ಅವರ ಮುಖ ಕಾಣಿಸಿತು. ಅವರ ಬೈಗುಳಗಳು ನನಗೆ ಸ್ಪಷ್ವವಾಗಿ ಕೇಳಿಸುತ್ತಿದ್ದವು. ಅವರು ಇದ್ದಕ್ಕಿದ್ದಂತೆ ನನ್ನ ಬಳಿ ಬಂದು, “ಯೂ ಬಿಚ್‌, ನಿಲ್ಲಿಸು ಇಲ್ಲಾಂದರೆ ಚೆನ್ನಾಗಿ ಹೊಡೀತೀನಿ,” ಎಂದರು.

ನಾನು ಬೈಕ್‌ ನಿಲ್ಲಿಸಿ, “ಆಯ್ತು ಚೆನ್ನಾಗಿ ಹೊಡೆದುಬಿಡಿ. ಆದ್ರೆ ಬೇಗನೆ ಮುಗಿಸಿ. ನನಗೆ ತುಂಬಾ ಕೆಲಸ ಇದೆ,” ಎಂದು ಹೇಳಿ ನನ್ನ ಹೆಲ್ಮೆಟ್‌ ತೆಗೆದು ಉದ್ದನೆಯ ಕೂದಲನ್ನು ಆಡಿಸಿದಾಗ ನನ್ನನ್ನು ಕಂಡು ಅವರು ಬೆಚ್ಚಿದರು. ಅವರ ಮುಖ ನೋಡಬೇಕಿತ್ತು. ನಂತರ ಒಂದು ಕ್ಷಣ ಅಲ್ಲಿ ನಿಲ್ಲದೆ ಮಾಯವಾಗಿಬಿಟ್ಟರು.

ಈ ಅನುಭವ ನ್ಯೂಯಾರ್ಕ್‌ನ ಪ್ರೊಫೆಶನಲ್ ಬಿಎಂಎಕ್ಸ್ ರೇಸರ್‌ ಮತ್ತು ಆಟೋ ಜರ್ನಲಿಸ್ಟ್ ಜ್ಯಾಕ್‌ ಬರುಥ್‌ರವರದು. ಅವರು ಹುಡುಗಿಯರಂತೆ ಉದ್ದ ಕೂದಲನ್ನು ಬಿಡತೊಡಗಿದಾಗ ಅಮೆರಿಕಾದ ರಸ್ತೆಗಳಲ್ಲಿ ಹೇಡಿ ರೇಸರ್‌ಗಳು ಹೇಗೆ ಮಹಿಳೆಯರನ್ನು ರೇಗಿಸುತ್ತಾರೆ, ಪೀಡಿಸುತ್ತಾರೆಂದು ತಿಳಿಯಿತು. ಈ ಘಟನೆಯಲ್ಲಿ ಜ್ಯಾಕ್‌ ಬರುಥ್‌ರ ಉದ್ದ ಕೂದಲನ್ನು ಕಂಡು ಕಾರಿನ ಡ್ರೈವರ್‌ನ್ನು ಹೆಣ್ಣು ಎಂದು ಮೋಸ ಹೋಗಿದ್ದರು. ಜ್ಯಾಕ್‌ ಬರುಥ್‌ ಹೇಳುತ್ತಾರೆ, “ಇಂತಹ ಘಟನೆಗಳು ನನ್ನೊಂದಿಗೆ ಸಾಕಷ್ಟು ನಡೆದಿವೆ. ರಸ್ತೆಯಲ್ಲಿ ಮಹಿಳೆ ಎಂದುಕೊಂಡು ದುರ್ವರ್ತನೆ ತೋರಿದ್ದಾರೆ. ಆದರೂ ನನ್ನ ಉದ್ದ ಕೂದಲನ್ನು ಕಂಡ ಯಾರಾದರೂ ಮಹಿಳೆಯೆಂದು ಮೋಸ ಹೋದರೆ ಅದು ಅವರ ತಪ್ಪು. ಏಕೆಂದರೆ ನಾನು 6 ಅಡಿ ಎರಡು 2 ಇಂಚು ಉದ್ದ ಹಾಗೂ 109 ಕೆ.ಜಿ. ತೂಕ ಇರುವ ಯುವಕ.”

ಅವರು ಮುಂದುವರಿಸುತ್ತಾ, “ಅಂದಹಾಗೆ ನಾನು ರಸ್ತೆಯಲ್ಲಿ ಪುರುಷ ಡ್ರೈವರ್‌ಗಳನ್ನು ಸತಾಯಿಸಲು ಅವರ ಎದುರಿನಿಂದ ಲೇನ್‌ ಚೇಂಜ್‌ ಮಾಡುತ್ತಾ ಅವರನ್ನು  ಓವರ್‌ಟೇಕ್‌ ಮಾಡಿದಾಗ ಹಿಂದಿನಿಂದ ಅವರು ನನ್ನ ಉದ್ದ ಕೂದಲನ್ನು ಕಂಡು ಸಹಿಸಿಕೊಳ್ಳುವುದಿಲ್ಲ. ಒಬ್ಬ ಮಹಿಳೆ ಇಷ್ಟು ಚೆನ್ನಾಗಿ ಡ್ರೈವ್‌ ಮಾಡಲು ಹೇಗೆ ಸಾಧ್ಯ? ಎಂದುಕೊಂಡು ಅವರು ನನ್ನನ್ನು ಹಿಂಬಾಲಿಸುತ್ತಾರೆ, ದುರುಗುಟ್ಟುತ್ತಾರೆ.

“ನನ್ನ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಆದರೆ ನಾನು ಹೆಲ್ಮೆಟ್‌ ತೆಗೆದ ಕೂಡಲೇ ತಮ್ಮ ಎದುರಿಗೆ ಒಬ್ಬ ಪುರುಷನನ್ನು ಕಂಡು ಹೆದರಿ ಏನೂ ಹೇಳದೆ ಏನೂ ನಡೆದೇ ಇಲ್ಲವೇನೋ ಎಂಬಂತೆ ಮುಂದೆ ಹೋಗಿಬಿಡುತ್ತಾರೆ,” ಎಂದರು.

“ಅಮೆರಿಕಾದ ರಸ್ತೆಗಳಲ್ಲಿ ಮಹಿಳೆಯರನ್ನು ಕಿಚಾಯಿಸುವ ಇನ್ನೊಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಒಮ್ಮೆ ನಾನು ನಮ್ಮ ಆಫೀಸ್‌ನ ಪಾರ್ಕಿಂಗ್‌ ಏರಿಯಾದಿಂದ ನನ್ನ ಕಾರನ್ನು ತೆಗೆಯಲು ಪ್ರಯತ್ನಿಸುತ್ತಿದ್ದೆ. ನನ್ನ ಕಾರು 3ನೇ ನಂಬರ್‌ನಲ್ಲಿತ್ತು. ನನ್ನ ಮುಂದಿನ ಕಾರಿನಲ್ಲಿ ಒಬ್ಬ ಮಹಿಳಾ ಡ್ರೈವರ್‌ ಹಾಗೂ ಅವಳ ಕಾರಿನ ಮುಂದೆ ಒಬ್ಬ ಪುರುಷ ಡ್ರೈವರ್‌ ತನ್ನ ಕಾರಿನಲ್ಲಿ ಕುಳಿತಿದ್ದ. ಪುರುಷ ಡ್ರೈವರ್‌ ಸಾಕಷ್ಟು ಜಾಗವಿದ್ದರೂ ತನ್ನ ಕಾರನ್ನು ತೆಗೆಯಲು ಕಷ್ಟಪಡುತ್ತಿದ್ದ.

“ನಾನು ಬೇಸರದಿಂದ ಹಾರ್ನ್‌ ಮಾಡುತ್ತಿದ್ದೆ. ಆಗ ಆ ಪುರುಷ ಡ್ರೈವರ್‌ ಹೊರಗೆ ಇಳಿದು ಹಿಂದಿನ ಕಾರಿನ ಕಿಟಕಿಯನ್ನು ಜೋರಾಗಿ ಗುದ್ದತೊಡಗಿದ. ಆಗ ನಾನು ಕಾರಿನಿಂದ ಇಳಿದು ಅವನ ಬಳಿ ಹೋಗಿ ಹಾರ್ನ್‌ ಮಾಡುತ್ತಿದ್ದುದು ನಾನು, ಈ ಮಹಿಳೆ ಹಾರ್ನ್‌ ಮಾಡುತ್ತಿರಲಿಲ್ಲ ಎಂದು ತಿಳಿಹೇಳಿದೆ. ಕೆಲವು ಪುರುಷರು ಟ್ರ್ಯಾಫಿಕ್‌ ಝೋನ್‌ನ ಲಾಭ ಪಡೆದು ಮಹಿಳೆಯರಿಗೆ ತೊಂದರೆ ಕೊಡುತ್ತಾರೆ ಹಾಗೂ ಅವರನ್ನು ಹೆದರಿಸುತ್ತಾರೆ.”ಜ್ಯಾಕ್‌ ಬರುಥ್‌ ಮುಂದುವರಿಸುತ್ತಾರೆ, “ನಾನು ಯಾವುದೇ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಕ್ರಾಂತಿಕಾರಿಯಲ್ಲ. ಆದರೆ ನನ್ನ ಉದ್ದ ಕೂದಲಿನಿಂದಾಗಿ ನಾನು ನೋಡಿದ್ದನ್ನು ಹಾಗೂ ಅನುಭವಿಸಿದ್ದನ್ನು ಖಂಡಿಸಲಾಗುವುದಿಲ್ಲ. ಅಮೆರಿಕಾ ರಸ್ತೆಗಳಲ್ಲೂ ದಿನ ಮಹಿಳೆಯರು ಪುರುಷರಿಂದ ಬೈಗುಳಗಳನ್ನು ಕೇಳುತ್ತಾರೆ. ನಾನು ನನ್ನ ಕೂದಲನ್ನು ಕತ್ತರಿಸಿಕೊಳ್ಳಬೇಕು ಮತ್ತು ನನ್ನ ಗರ್ಲ್ ಹೆಲ್ಮೆಟ್‌ ಬದಲಿಸಬೇಕು ಎಂದು ನನ್ನ ಗೆಳೆಯರು ಹೇಳುತ್ತಾರೆ. “ಆದರೆ ನಾನು ಯಾವುದೇ ಕಾರಣಕ್ಕೂ ಹಾಗೆ ಮಾಡಿಸಿಕೊಳ್ಳುವುದಿಲ್ಲ. ಏಕೆಂದರೆ ಮಹಿಳೆಯರೊಂದಿಗಿನ ವರ್ತನೆ ಹಾಗೂ ವೈರತ್ವದಿಂದ ಪಾರಾಗಲು ಅಲ್ಲ. ನನ್ನ ಉದ್ದವಾದ ತಲೆಗೂದಲಿನಿಂದ ನನಗೆ ಆಗುತ್ತಿರುವ ಸಂಗತಿಗಳಿಂದ ಪುರುಷರು ಪಾಠ ಕಲಿಯಬೇಕು. ಮಹಿಳೆಯರ ಬಗ್ಗೆ ತಮ್ಮ ವರ್ತನೆ ಬದಲಿಸಿಕೊಳ್ಳಬೇಕು, ಅವರನ್ನು ಗೌರವಿಸಬೇಕು.”

ಭಾರತೀಯ ರಸ್ತೆಗಳಲ್ಲಿ ಮಹಿಳೆಯರ ಸ್ಥಿತಿ

ಭಾರತೀಯ ರಸ್ತೆಗಳಲ್ಲಿ ಮಹಿಳಾ ಡ್ರೈವರ್‌ಗಳೊಂದಿಗೆ ನಡೆಯುತ್ತಿರುವ ವರ್ತನೆ ಬಗ್ಗೆ ಹೇಳುವುದಾದರೆ ಇಲ್ಲಿಯೂ ಪರಿಸ್ಥಿತಿ ಬೇರೆಯಾಗಿಲ್ಲ. ಭಾರತದಂತಹ ಪುರುಷ ಪ್ರಧಾನ ದೇಶದಲ್ಲಿ ಹಿಂದೆ ಮಹಿಳೆಯರು ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರು ಮತ್ತು ಪುರುಷರ ಕೈಗಳಲ್ಲಿ ಸ್ಟೆಯರಿಂಗ್‌ ಇರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಮಹಿಳೆಯರು ಮನೆಯಲ್ಲಿ ಹಾಗೂ ಹೊರಗಡೆ ಜವಾಬ್ದಾರಿಗಳನ್ನು ನಿಭಾಯಿಸತೊಡಗಿದ್ದಾರೆ. ಹೀಗಾಗಿ ಅವರಿಗೆ ಸ್ಟೆಯರಿಂಗ್‌ ಸಂಭಾಳಿಸುವ ಅವಕಾಶ ಸಿಕ್ಕಿದೆ. ಆದರೆ ಮಹಿಳಾ ಡ್ರೈವರ್‌ಗಳನ್ನು ಕಂಡು ಪುರುಷರಿಗೆ ಅವರ ಈ ಸ್ವಾತಂತ್ರ್ಯವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. “ಇಂದಿಗೂ ಅವರು ಯಾರಾದರೂ ಮಹಿಳೆ ಡ್ರೈವ್‌ ಮಾಡುವುದನ್ನು ನೋಡಿದರೆ ಸೈರಿಸಿಕೊಳ್ಳುವುದಿಲ್ಲ. ಆಗ ಅವರ ಬಾಯಿಂದ ಹೊರಬೀಳುವ ಮಾತು, ಇವರಿಗೆಲ್ಲಾ ಕಾರು ಓಡಿಸೋಕೆ ಯಾಕೆ ಬಿಡ್ತಾರೋ ಎಂದು. ಮಹಿಳೆಯರು ನಿಧಾನವಾಗಿ ಕಾರು ಓಡಿಸುತ್ತಿದ್ದರೆ ಓಹೋ, ಇನ್ನೂ ಹೊಸದಾಗಿ ಕಲೀತಿದ್ದಾರೆ ಅಂತಾರೆ. ಒಂದುವೇಳೆ ಅವಳು ಕಾನ್ಛಿಡೆಂಟ್‌ ಆಗಿ ಸ್ಪೀಡಾಗಿ ಗಾಡಿ ಓಡಿಸುತ್ತಿದ್ದರೆ ಅವಳನ್ನು ಹಿಂಬಾಲಿಸಿ ಓವರ್‌ಟೇಕ್‌ ಮಾಡಲು ಪ್ರಯತ್ನಿಸುತ್ತಾರೆ. ಅವಳೊಂದಿಗೆ ರೇಸ್‌ ಮಾಡುತ್ತಾರೆ.

ಆಲೋಚನೆ ಬದಲಿಸಿ

40 ವರ್ಷದ ರೂಪಾ ಶ್ರೀನಿವಾಸ್‌ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಡ್ರೈವಿಂಗ್‌ ಮಾಡುತ್ತಿದ್ದರು. ಅವರು ಪರ್ಫೆಕ್ಟ್ ಆಗಿ ಡ್ರೈವ್ ಮಾಡುತ್ತಾರೆ. ಅದರ ಬಗ್ಗೆ ಹೀಗೆ ಹೇಳುತ್ತಾರೆ, “ರಸ್ತೆಗಳಲ್ಲಿ ಮಹಿಳಾ ಡ್ರೈವರ್‌ಗಳ ಬಗ್ಗೆ ಪುರುಷರ ವರ್ತನೆ ಬಹಳ ಕೆಟ್ಟದ್ದಾಗಿರುತ್ತದೆ. ಅವರು ಯಾವಾಗಲೂ ಮಹಿಳಾ ಡ್ರೈವರ್‌ಗಳ ಗಮನ ಸೆಳೆಯಲು ಪ್ರಯತ್ನಿಸುತ್ತಿರುತ್ತಾರೆ.

“ಒಂದು ವೇಳೆ ಪುರುಷ ಡ್ರೈವರ್‌ಗಳು, ಅವರೊಂದಿಗೆ ರೇಸ್‌ ಮಾಡುತ್ತಿದ್ದರೆ ಮಹಿಳೆಯರು ತಮ್ಮ ಸ್ಪೀಡ್‌ ಕಡಿಮೆ ಮಾಡಿ ಮುಂದೆ ಹೋಗಲು ಬಿಟ್ಟರೆ ಅವರು ಖುಷಿಯಾಗಿ ಅದನ್ನು ತಮ್ಮ ಗೆಲುವು ಎಂದು ತಿಳಿದುಕೊಳ್ಳುತ್ತಾರೆ. ಕೆಲವು ಪುರುಷರು ಮಹಿಳೆಯರು ಡ್ರೈವಿಂಗ್‌ ಸೀಟ್‌ನಲ್ಲಿರುವುದನ್ನು ಕಂಡು ಅವರ ಫೋಟೋ ತೆಗೆಯುತ್ತಾರೆ.

ಅದರ ಹಿಂದಿನ ಅವರ ಉದ್ದೇಶವೇನೆಂದರೆ ಮಹಿಳೆ ಡ್ರೈವ್ ಮಾಡುವುದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸುವುದು ಅಥವಾ ಹೊಗಳುವುದು ಬಿಟ್ಟು ಅವಳನ್ನು ವಿಚಲಿತಗೊಳಿಸುವುದಾಗಿರುತ್ತದೆ. ಅವರ ಈ ಬಾಲಿಶ ವರ್ತನೆಯಿಂದ ನಗು ಬರುತ್ತದೆ.  ಡ್ರೈವ್ ಮಾಡುವ ಮಹಿಳೆ ಯಾವುದೇ ವಿಚಿತ್ರ ಪ್ರಾಣಿಯಲ್ಲ. ಅವಳೂ ನಿಮ್ಮ ಹಾಗೇ ಒಬ್ಬ ವ್ಯಕ್ತಿ. ಹೀಗಿರುವಾಗ ಅವಳ ಸಾಮರ್ಥ್ಯ ಹೆಚ್ಚಿಸುವ ಬದಲು ಅಂಡರ್‌ ಎಸ್ಟಿಮೇಟ್‌ ಮಾಡುವ ಪ್ರಯತ್ನ ಅವರ ಸಣ್ಣತನ ತೋರಿಸುತ್ತದೆ. ಪುರುಷರು ಡ್ರೈವ್ ಮಾಡುವ ಮಹಿಳೆಯರ ಬಗ್ಗೆ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಬೇಕು ಮತ್ತು ಅವರನ್ನು ಕಡಿಮೆ ಎಂದು ತಿಳಿದುಕೊಳ್ಳಬಾರದು.

ರಸ್ತೆಗಳಲ್ಲಿ ಸಂಭವಿಸುವ ಆಘಾತಗಳು

ಪುರುಷರಿಂದ ಪೀಡಿಸಲ್ಪಟ್ಟರೂ ರಸ್ತೆಗಳಲ್ಲಿ ಶಿಸ್ತಿನಿಂದ ಡ್ರೈವ್ ಮಾಡುವ ಹುಡುಗಿಯರು ಮತ್ತು ಮಹಿಳೆಯರನ್ನು ಮೆಚ್ಚಲೇಬೇಕು. ಮಹಿಳೆಯರು ಕಾರು ಓಡಿಸುವುದನ್ನು ನೋಡಿದರೆ ಪುರುಷರಿಗೆ ತಡೆದುಕೊಳ್ಳಲಾಗುವುದಿಲ್ಲ. ಮಹಿಳೆಯರ ಆತ್ಮವಿಶ್ವಾಸ ಕಡಿಮೆ ಮಾಡಲು ಅವರು ರಸ್ತೆಗಳಲ್ಲಿ ಹೀಗೆ ಹುಡುಗಾಟ ಆಡುತ್ತಾರೆ. ಅದು ಡ್ರೈವ್‌ ಮಾಡುವ ಮಹಿಳೆಯರಿಗೆ ಆಘಾತದಂತಿರುತ್ತದೆ.

ಭಾರತೀಯ ರಸ್ತೆಗಳಲ್ಲಿ ಪುರುಷರು ಡ್ರೈವ್ ಮಾಡುವ ಮಹಿಳೆಯರಿಗೆ ತೋರುವ ದುರ್ವರ್ತನೆ ಬಗ್ಗೆ ತಿಳಿಯೋಣ ಬನ್ನಿ.

– ಒಂದು ವೇಳೆ ಯಾರಾದರೂ ಮಹಿಳೆ ಪುರುಷನ ಕಾರನ್ನು ಓವರ್‌ಟೇಕ್‌ ಮಾಡಿದರೆ ಅವರ ಅಹಂಗೆ ಪೆಟ್ಟು ನೀಡಿದಂತೆ. ಅವರು ವಿಭಿನ್ನ ವಿಧಾನಗಳಿಂದ ಮಹಿಳಾ ಡ್ರೈವರ್‌ಳ ಮನಸ್ಸಿನಲ್ಲಿ ಗಾಬರಿ ಉಂಟು ಮಾಡುತ್ತಾರೆ. ಉದಾಹರಣೆಗೆ ಪುರುಷರು ಓವರ್‌ಟೇಕ್‌ ಮಾಡುವಾಗ ಸಿಗ್ನಲ್ ಕೊಡದೆ ಥಟ್ಟನೆ ತಿರುಗಿಬಿಡುತ್ತಾರೆ. ಹಾಗೆ ಮಾಡುವಾಗ ತಮ್ಮ ಪ್ರಾಣಕ್ಕೂ ಅಪಾಯ ತಂದುಕೊಳ್ಳುತ್ತಾರೆ. ಆದರೆ ಆ ಮಹಿಳೆಯ ಮನಸ್ಸಿನಲ್ಲಿ ಗಾಬರಿ ಉಂಟು ಮಾಡಿದ ಮಜಾ ಅಂತೂ ಅವರಿಗೆ ಸಿಗುತ್ತದೆ. ಅವರು ಅದನ್ನು ತಮ್ಮ ಗೆಲುವೆಂದು ತಿಳಿಯುತ್ತಾರೆ.

– ಒಬ್ಬ ಮಹಿಳೆ ಒಂದು ಬಾರ್‌ನ ಬಳಿ ಪಾರ್ಕಿಂಗ್‌ನಲ್ಲಿ ಕಾರನ್ನು ಪಾರ್ಕ್‌ ಮಾಡಿದರೆ ಅವಳು ಅಷ್ಟು ಸುಲಭವಾಗಿ ಕಾರನ್ನು ಹೇಗೆ ಪಾರ್ಕ್‌ ಮಾಡಿದಳು ಎಂದು ಅವಳನ್ನು ದುರುಗುಟ್ಟಿ ನೋಡುತ್ತಾನೆ. ಇಲ್ಲೂ ಅವರು ಮಹಿಳೆಯರನ್ನು ಕಡಿಮೆ ಅಂದಾಜು ಮಾಡುತ್ತಾರೆ. ಮಹಿಳೆಯರು ಪರ್ಫೆಕ್ಟ್ ಆಗಿ ಕಾರು ಡ್ರೈವ್‌ ಮಾಡುವುದು ಅವರಿಗೆ ಜೀರ್ಣಿಸಿಕೊಳ್ಳಲು ಆಗುವುದಿಲ್ಲ.

– ಒಂದು ವೇಳೆ ಮಹಿಳೆ ಪುರುಷರ ಕಾರನ್ನು ಓವರ್‌ಟೇಕ್‌ ಮಾಡಿದರೆ ಅದು ಅವರಿಗೆ ಪ್ರೆಸ್ಟೀಜ್‌ ಇಶ್ಯೂ ಆಗಿಬಿಡುತ್ತದೆ. ಅವರು ತಮ್ಮ ಸ್ಪೀಡ್‌ ಹೆಚ್ಚಿಸಿ ಮಹಿಳೆಯ ಕಾರನ್ನು ಓವರ್‌ಟೇಕ್‌ ಮಾಡುತ್ತಾರೆ. ಮಹಿಳೆ ಲೇನ್‌ ಚೇಂಜ್‌ ಮಾಡುವಾಗ ಎಲ್ಲ ಪುರುಷ ಡ್ರೈವರ್‌ಗಳೂ ಅವಳ ಸಾಮರ್ಥ್ಯದ ಬಗ್ಗೆ ನಂಬಿಕೆ ಇಲ್ಲದವರಂತೆ ಆಶ್ಚರ್ಯದಿಂದ ನೋಡುತ್ತಾರೆ.

– ಯಾರಾದರೂ ಮಹಿಳೆ ಕಾರನ್ನು ಪಾರ್ಕ್‌ ಮಾಡುತ್ತಿದ್ದರೆ ಪುರುಷರು ಅವಳಿಗೆ ಸಹಾಯ ಮಾಡಲು ಧಾವಿಸುತ್ತಾರೆ. ಆ ಕೆಲಸ ಅವಳಿಂದ ಆಗುವುದಿಲ್ಲ ಎಂದು ಅವರಿಗೆ ಅನ್ನಿಸುತ್ತದೆ. ಅವರು ಅವಳಿಗೆ ಸ್ವಲ್ಪ ಹಿಂದೆ, ಸ್ವಲ್ಪ ಮುಂದೆ ಎಂದು ನಿರ್ದೇಶನ ನೀಡುತ್ತಿರುತ್ತಾರೆ. ನಿಮ್ಮಿಂದ ಆಗಲ್ಲ. ನಾನು ಪಾರ್ಕ್‌ ಮಾಡಿ ಕೊಡ್ತೀನಿ ಎಂದು ಹೇಳುತ್ತಾರೆ.

– ಕೆಲವು ಪುರುಷರಂತೂ ಡ್ರೈವ್ ಮಾಡುವ ಮಹಿಳೆ ಏನಾದರೂ ತಪ್ಪು ಮಾಡಲಿ, ಅವಳನ್ನು ಹಾಸ್ಯ ಮಾಡುವ ಸಂದರ್ಭ ಸಿಗಲಿ ಎಂದು ಕಾಯುತ್ತಿರುತ್ತಾರೆ.

– ಕೆಲವು ಅಲೆಮಾರಿಗಳು ಹಿಂಬಾಲಿಸಲೂ ಹಿಂದೆ ಬೀಳುವುದಿಲ್ಲ. ಹೀಗೆ ಮಾಡುವಾಗ ಅವರು ತಮ್ಮ ದಾರಿಯನ್ನು ಮರೆಯುತ್ತಾರೆ.

– ಕೆಲವು ಪುರುಷ ಡ್ರೈವರ್‌ಗಳು ಜೊತೆಯಲ್ಲಿ ಬರುವ ಮಹಿಳೆಯ ಕಾರಿನ ಸಮೀಪಕ್ಕೆ ತಮ್ಮ ಕಾರನ್ನು ತಂದು ಟೀಕೆ ಮಾಡಲು ಹಿಂಜರಿಯುವುದಿಲ್ಲ. ಕೆಲವು ಪುರುಷರು ತಮ್ಮ ಮ್ಯೂಸಿಕ್‌ ಸಿಸ್ಟಂನ್ನು ಹೈ ವಾಲ್ಯೂಮ್ ಮಾಡಿ ಮಹಿಳಾ ಚಾಲಕರ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ.

– ಕೆಲವು ಪುರುಷರಿಗೆ ತಾವು ಮಹಿಳೆಯರ ಕಾರನ್ನು ಹಿಂಬಾಲಿಸಬೇಕೇ ಅಥವಾ ಓವರ್‌ಟೇಕ್‌ ಮಾಡಬೇಕೇ ಎಂದು ರಸ್ತೆಯಲ್ಲಿ ನಿರ್ಧರಿಸಲು ಆಗುವುದಿಲ್ಲ. ಅವರು ತಮ್ಮ ಕಾರನ್ನು ಅವರ ಕಾರಿನ ಹಿಂದಿಡುತ್ತಾರೆ. ಒಂದೇ ಸಮನೆ ಡಿಪ್ಪರ್‌ ಹೊಡೆಯುತ್ತಿರುತ್ತಾರೆ. ಹಗಲಿನಲ್ಲಾದರೆ ಹಾಂಕಿಂಗ್‌ ಮಾಡಿ ತೊಂದರೆ ಕೊಡುತ್ತಾರೆ.

– ಲಲಿತಾ ಗೋಪಾಲ್

ಸುರಕ್ಷಿತ ಡ್ರೈವರ್

ಇತ್ತೀಚೆಗೆ ನ್ಯೂ ಸೌತ್‌  ಟ್ರ್ಯಾನ್ಸ್ ಪೋರ್ಟ್‌ ಮತ್ತು ರೋಡ್‌ ಸೇಫ್ಟಿ ಯೂನಿಟ್‌ ಮೂಲಕ ಮಾಡಿದ ಸಂಶೋಧನೆಯಲ್ಲಿ ತಿಳಿದುಬಂದ ವಿಷಯವೇನೆಂದರೆ ಮಹಿಳಾ ಡ್ರೈವರ್‌ಗಳು ಹೆಚ್ಚು ಸುರಕ್ಷಿತವಾಗಿ ಡ್ರೈವ್ ಮಾಡುತ್ತಾರೆ. ಟ್ರ್ಯಾಫಿಕ್‌ ನಿಯಮಗಳನ್ನು ಪಾಲಿಸುತ್ತಾರೆ. ಕಡಿಮೆ ಓವರ್‌ಟೇಕ್‌ ಮಾಡುತ್ತಾರೆ. ಪುರುಷರಂತೆ ಅಧಿಕ ವೇಗವಾಗಿ ಗಾಡಿ ಓಡಿಸುವುದಿಲ್ಲ. ಸೀಟ್‌ ಬೆಲ್ಟ್ ಮತ್ತು ಹೆಲ್ಮೆಟ್‌ ಧರಿಸುವಲ್ಲಿ ಮಹಿಳೆಯರು ಪುರುಷರಿಗಿಂತ ಮುಂದಿದ್ದಾರೆ. ಅವರು ಅತ್ಯಂತ ಎಚ್ಚರಿಕೆಯೊಂದಿಗೆ ಡ್ರೈವ್‌ ಮಾಡುತ್ತಾರೆ. ಈ ಕಾರಣದಿಂದಲೇ ರಸ್ತೆ ಅಪಘಾತಗಳಲ್ಲಿ ಮಹಿಳೆಯರಿಗೆ ಹೋಲಿಸಿದರೆ ಪುರುಷರು ಹೆಚ್ಚು ಅಪಘತಕ್ಕೀಡಾಗುತ್ತಿದ್ದಾರೆ.

ಮಹಿಳೆಯರ ಡ್ರೈವಿಂಗ್‌ ಬಗ್ಗೆ ಜೋಕ್ಸ್

ನಾನು ಹುಡುಗಿಯರ ಡ್ರೈವಿಂಗ್‌ನ್ನೂ ಎಂದಿಗೂ ವಿರೋಧಿಸುವುದಿಲ್ಲ. ಆದರೆ ಅಪಘಾತದ ಸಮಯದಲ್ಲಿ ಬ್ರೇಕ್‌ ಹಾಕೋದು ಬಿಟ್ಟು ಬೊಬ್ಬೆ ಹಾಕೋದು ಯಾವ ಸೀಮೆ ನ್ಯಾಯ?

ಡಾಕ್ಟರ್‌ : ಕಾರನ್ನು ಒಬ್ಬ ಹುಡುಗಿ ಓಡಿಸುತ್ತಿದ್ದಾಳೆಂದು ತಿಳಿದಾಗ ನೀನು ರಸ್ತೆಯಿಂದ ದೂರ ಓಡಬೇಕಿತ್ತು.

ಗಾಯಾಳು : ಯಾವ ರಸ್ತೆ ಡಾಕ್ಟ್ರೆ? ನಾನು ಪಾರ್ಕ್‌ನಲ್ಲಿ ಕುಳಿತು ಮುಸುಕಿನ ಜೋಳ ತಿಂತಿದ್ದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ