2015ನೇ ಸಾಲಿನಲ್ಲಿ ಕೇರಳದ ಪ್ರಸಿದ್ಧ ಶಬರಿಮಲೈ ದೇವಸ್ಥಾನ ಟ್ರಸ್ಟಿನ ಅಧ್ಯಕ್ಷ ಪ್ರಮಾರ್‌ ಗೋಪಾಲಕೃಷ್ಣನ್‌ ಮಾಧ್ಯಮದವರ ಮುಂದೆ ಮಾತನಾಡುತ್ತ ಒಂದು ವಿಷಯ ತಿಳಿಸಿದ್ದರು. ಎಲ್ಲಿಯವರೆಗೆ ವಿಮಾನ ನಿಲ್ದಾಣಗಳಲ್ಲಿ ಶಸ್ತ್ರಾಸ್ತ್ರ ತಪಾಸಣೆ ಮಾಡಲು ಉಪಯೋಗಿಸಲಾಗುವ ಸ್ಕ್ಯಾನರ್‌ ಯಂತ್ರದಂಥದು, ಮಹಿಳೆಯರ ಪರಿಶುದ್ಧತೆಯನ್ನು ಅರಿತುಕೊಳ್ಳಲು ಲಭ್ಯವಾಗುವುದಿಲ್ಲವೋ, ಅಲ್ಲಿಯವರೆಗೆ ಮಹಿಳೆಯರಿಗೆ ದೇಗುಲದಲ್ಲಿ ಪ್ರವೇಶ ನಿಷಿದ್ಧ ಮುಂದುವರಿಯುತ್ತದೆ. ಕೇರಳದ ಈ ಪ್ರಸಿದ್ಧ ದೇಗುಲದಲ್ಲಿ 10 ರಿಂದ 50 ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡಲಾಗುವುದಿಲ್ಲ. ಆ ದೇಗುಲದಲ್ಲಿ ಅಯ್ಯಪ್ಪ ಸ್ವಾಮಿಯ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಅವನು ಬ್ರಹ್ಮಚಾರಿಯಾಗಿದ್ದ ಕಾರಣದಿಂದ ಮುಟ್ಟಾಗುವ ಮಹಿಳೆಯನ್ನು ಒಳಗೆ ಬಿಡುವುದಿಲ್ಲ. ಈ ವಿಷಯ ಗೋಪಾಲಕೃಷ್ಣನ್‌ ಅವರ ಯೋಚನೆಗೆ ಮಾತ್ರ ಸೀಮಿತವಾಗಿಲ್ಲ. ಜಗತ್ತಿನ ಬಹುದೊಡ್ಡ ಧರ್ಮಗಳು ಮತ್ತು ಪ್ರಾದೇಶಿಕ ಧರ್ಮಗಳು ಮುಂಚೆಯಿಂದಲೂ ಪುರುಷರಿಗೆ ಮಹಿಳೆಯರಿಂದ ರಕ್ಷಿಸಿಕೊಳ್ಳಲು ಸಲಹೆ ನೀಡುತ್ತ ಬಂದಿವೆ. 7ನೇ ಶತಮಾನದ ಕವಿ ಸೇಸುರಿದಾಸ ಹೇಳಿದ್ದೇನೆಂದರೆ, ಮಹಿಳೆ ಯೆಹೂದಿಗಳಿಗೆ ಅತಿ ದೊಡ್ಡ ಪಾಪ. ಪುರುಷ ಆಕೆಯ ಅವಶ್ಯಕತೆ ಮತ್ತು ಇಚ್ಛೆಗೆ ಸಂಬಂಧಪಟ್ಟಿದ್ದಾನೆ. ಮನುಸ್ಮೃತಿಯಲ್ಲಿ ಹೀಗೆ ಹೇಳಲಾಗಿದೆ, “ಪುರುಷನನ್ನು ಪುಸಲಾಯಿಸುವುದು ಮಹಿಳೆಯ ಅಭ್ಯಾಸವೇ ಆಗಿಬಿಟ್ಟಿದೆ. ತಿಳಿವಳಿಕೆಯುಳ್ಳ ಪುರುಷ ಎಂದಿಗೂ ಅವಳ ಜೊತೆ ಸುರಕ್ಷತೆರಹಿತವಾಗಿ ಇರಲು ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ಮಹಿಳೆಯರು ಕೇವಲ ಮೂರ್ಖರಿಗಷ್ಟೇ, ಅಲ್ಲ, ದೊಡ್ಡ ದೊಡ್ಡ ವಿದ್ವಾಂಸರನ್ನು ಕೂಡ ಇಚ್ಛೆ ಮತ್ತು ಅಭಿಲಾಷೆಯ ಗುಲಾಮರನ್ನಾಗಿಸಿದ್ದಾರೆ.

”ಬೈಬಲ್ ನಲ್ಲಿ ಉಲ್ಲೇಖವಾದ ಆ್ಯಡಂ ಮತ್ತು ಈವ್ ಕಥೆಯನ್ನು ಯಾರು ತಾನೆ ಕೇಳಿಲ್ಲ. ಈ ಕಥೆಯಲ್ಲೂ ಕೂಡ ಪುರುಷ ಮಹಿಳೆಯ ಸಂಪರ್ಕದಿಂದ ದೂರ ಇರಬೇಕೆಂದು ಹೇಳಲಾಗಿದೆ. ಆ್ಯಡಂ ಹುಟ್ಟಿದ್ದು ಮಣ್ಣಿನಿಂದ ಹಾಗೂ ಈವ್ ಹುಟ್ಟಿದ್ದು ಕೊಳೆಯಿಂದ.

ಆ್ಯಡಂ ಈವ್ ಳನ್ನು ಹತ್ತಿಕ್ಕಲು ನೋಡಿದಾಗ ಆಕೆ ಜೋರಾಗಿ ಚೀರಾಡತೊಡಗಿದಳು. ನಾನು ಹುಟ್ಟಿದ್ದು ಕೂಡ ಮಣ್ಣಿನಿಂದಲೇ. ನಾನೇಕೆ ಕೆಳಗೆ ಆಸೀನಳಾಗಬೇಕು ಎಂದು ಪ್ರಶ್ನಿಸುತ್ತಾಳೆ. ಆಗಲೇ ಲಿಲಿಥ್‌ ಆರಂಭವಾಯಿತು ಮತ್ತು ಮನುಷ್ಯಕುಲ ಉಗಮವಾಯಿತು. ಪಶ್ಚಿಮದಲ್ಲಿ ಲಿಲಿಥ್‌ನ್ನು ಲೈಂಗಿಕ ಸಂಬಂಧದ ಜೊತೆ ಹೋಲಿಸಿ ನೋಡಲಾಗುವುದಿಲ್ಲ. ಅದರ ಬದಲು ಮಾನವ ಜನ್ಮದೊಂದಿಗೆ ಹೋಲಿಸಿ ನೋಡಲಾಗುತ್ತದೆ.

ಪ್ರತಿಯೊಂದು ಧರ್ಮದಲ್ಲೂ ಮಹಿಳೆಯನ್ನು ಕೊಳಕು ಹಾಗೂ ಕಾಮಿ ಎಂದು ಹೇಳಲಾಗಿದೆ. ಇದರ ಮೂಲ ಮಹಿಳೆಯ ಮುಟ್ಟಿಗೆ ಸಂಬಂಧಪಟ್ಟಿದೆ. ಅದು ಕೇವಲ ಮಹಿಳೆಯ ಲೈಂಗಿಕ ವೈಶಿಷ್ಟ್ಯವಾಗಿದೆ. ಈವರೆಗಿನ ಮಾನವ ಇತಿಹಾಸದಲ್ಲಿ ಪುರುಷ, ಮಹಿಳೆಯ ಮುಟ್ಟನ್ನು ಹೇಯ, ಹೇಸಿಗೆ ಹಾಗೂ ಹೆದರಿಕೆಯ ದೃಷ್ಟಿಯಿಂದ ನೋಡಿದ್ದಾನೆ. ಧರ್ಮವಂತೂ ಮಹಿಳೆಯ ಜೊತೆಗೆ ಮತ್ತಷ್ಟೂ ಕ್ರೂರತೆಯಿಂದ ನಡೆದುಕೊಂಡಿದೆ.

ಕೆಲವು ಪುರಾತನ ಗ್ರಂಥಗಳಲ್ಲಿ ಮುಟ್ಟಿನ ಸಂದರ್ಭದಲ್ಲಿ ಮಹಿಳೆಯನ್ನು ಪುರುಷ ಮುಟ್ಟುವುದು ಕೂಡ ನಿಷಿದ್ಧ. ಕೆಲವು ಹಿಂದೂ ಧರ್ಮಗ್ರಂಥಗಳಲ್ಲಿ ಮುಟ್ಟಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ಕೂಡ ನೋಡುವುದು ನಿಷೇಧ ಎಂದು ಹೇಳಲಾಗಿದೆ. ಇಸ್ಲಾಂ ಧರ್ಮ ಸಹ ಮಹಿಳೆಯನ್ನು ಅಪವಿತ್ರ ಎಂದು ಹೇಳಿದೆ. ಬೇರೆ ಧಾರ್ಮಿಕ ಗ್ರಂಥಗಳೂ ಕೂಡ ಮುಟ್ಟಿನ ದಿನಗಳಲ್ಲಿ ಮಹಿಳೆ ಎಲ್ಲರಿಂದಲೂ ಪ್ರತ್ಯೇಕವಾಗಿ ಇರಬೇಕೆಂದು ಸಲಹೆ ನೀಡುತ್ತವೆ.

ಲೈಂಗಿಕ ಇಚ್ಛೆಗಳ ಸಮಾಧಿ

ರಾಜ್ಯಭಾರ ನಡೆಸುವುದು ಹಾಗೂ ಯುದ್ಧಗಳಿಂದ ಮಹಿಳೆಯರನ್ನು ಯಾವಾಗಲೂ ದೂರ ಇಡಲಾಗಿದೆ. ಇದರ ಮೂಲ ಉದ್ದೇಶ ಆಕೆಯ ಲೈಂಗಿಕ ಇಚ್ಛೆಗಳನ್ನು ಹತ್ತಿಕ್ಕುವುದೇ ಆಗಿತ್ತು. ಆದಾಗ್ಯೂ ನಾವು ನಿಸರ್ಗದ ನಿಯಮವನ್ನು ಮರೆತುಬಿಡುತ್ತೇವೆ. ಅದೇನೆಂದರೆ ನಿಸರ್ಗ ಸಮತೋಲನವನ್ನು ಕಾಯ್ದುಕೊಂಡು ಹೋಗುತ್ತದೆ ಎಂಬುದನ್ನು. ಈ ತೆರನಾದ ನಿರ್ಬಂಧಗಳು ತದ್ವಿರುದ್ಧ ಪರಿಣಾಮ ಬೀರುತ್ತವೆ.

ಮಹಿಳೆ ಸಮಾಜದಲ್ಲಿ ಎಷ್ಟೊಂದು ಪೂಜಾರ್ಹಳೊ, ಸಮಾಜ ಅವಳನ್ನು ಅಷ್ಟೇ ನಿಕೃಷ್ಟವಾಗಿ ಕಾಣುತ್ತದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಕಾರ, ಮಹಿಳೆ ಕೇವಲ ಚಂಚಲ ಪ್ರವೃತ್ತಿಯವಳು. ಒಬ್ಬ ವ್ಯಕ್ತಿ ಅಥವಾ ಸಮೂಹ ಬೇರೆ ವ್ಯಕ್ತಿ ಅಥವಾ ಸಮೂಹದ ಮೇಲೆ ಸೆಕ್ಸ್ ಅಥವಾ ಧರ್ಮದ ಬಗ್ಗೆ ಪ್ರಭಾವ ಬೀರಲು ಪ್ರಯತ್ನಿಸಲಾಗುತ್ತೊ, ಜಗತ್ತಿನಲ್ಲಿ ಯಾವುದೇ ಒಂದು ವಿಷಯದ ಬಗ್ಗೆ ಅಷ್ಟೊಂದು ವಿರೋಧ ವ್ಯಕ್ತವಾಗುವುದಿಲ್ಲ. ಈ ಮತಭೇದಗಳಿಗೆ ಮೂಲಕಾರಣ ಪುರುಷ ಹಾಗೂ ಮಹಿಳೆಯ ಲೈಂಗಿಕ ಪ್ರವೃತ್ತಿಯೇ ಆಗಿದೆ. ಈವರೆಗಿನ ಇತಿಹಾಸದಲ್ಲಿ ಮಹಿಳೆಯ ಲೈಂಗಿಕ ಅಭಿಲಾಷೆಯನ್ನು ಯಾವುದೇ ಧರ್ಮ ಕೂಡ ಗೌರವಿಸಿಲ್ಲ.

ಭಾರತದಲ್ಲಿ ಯಾವುದೇ ಈವ್ ಅಥವಾ ಲಿಲಿಥ್‌ ಇಲ್ಲ ಎನ್ನುವುದು ಸರಿ. ಆದರೆ ಇಲ್ಲೂ ಕೂಡ ಮಹಿಳೆಗೆ ಪುರುಷನ ಬಳಿಕವೇ ಸ್ಥಾನ ನೀಡಲಾಗುತ್ತದೆ. ಅಷ್ಟೇ ಅಲ್ಲ, ದುರ್ಬಲ ವ್ಯಕ್ತಿತ್ವದವಳು ಎಂದು ಭಾವಿಸಲಾಗಿದೆ. ಈಗಲೂ ಕೂಡ ಭಾರತದಲ್ಲಿ ಹೆಣ್ಣುಮಕ್ಕಳೆಂದರೆ ಮೂಗು ಮುರಿಯುವಂತಹ ಸ್ಥಿತಿ ಇದೆ. ಅವರನ್ನು ಹೊರೆ ಎಂದು ಭಾವಿಸಲಾಗುತ್ತದೆ.  ಕೆಲವೊಂದು ಕಡೆ ಇತ್ತೀಚಿನ ವರ್ಷಗಳ ತನಕ ಹೆಣ್ಣು ಮಗು ಹುಟ್ಟುತ್ತಲೇ ಅದನ್ನು ಸಾಯಿಸಿಬಿಡುವ ಕೆಟ್ಟ ಪರಂಪರೆ ಚಾಲ್ತಿಯಲ್ಲಿತ್ತು. ಆದರೆ ಈಗ ಅಧುನಿಕ ವಿಜ್ಞಾನದ ದುರುಪಯೋಗ ಎಂಬಂತೆ ಕೆಲವರು ಹೆಣ್ಣು ಭ್ರೂಣವನ್ನು ಹೊಟ್ಟೆಯಲ್ಲಿಯೇ ಸಾಯಿಸುವ ನೀಚಕೃತ್ಯ ಎಸಗುತ್ತಿದ್ದಾರೆ.

ಪುರುಷ ವರ್ಚಸ್ಸು ಇರುವ ಕುಟುಂಬಗಳಲ್ಲಿ ಮಹಿಳೆಯರು ಬದುಕಿ ಬಾಳಲು ಹೀಗೆ ಮಾಡಲೇಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ. ಇಲ್ಲದಿದ್ದರೆ ಅವರಿಗೆ ಬಗೆಬಗೆಯ ಚಿತ್ರಹಿಂಸೆ ಅನುಭವಿಸಬೇಕಾಗಿ ಬರುತ್ತದೆ. ಲೈಂಗಿಕತೆಯ ಏಕೈಕ ಕಾರಣದಿಂದ ಮಹಿಳೆ ಮನೆಯಲ್ಲಿ, ಹೊರಗೆ ಹಾಗೂ ಕಾರ್ಯಸ್ಥಳದಲ್ಲಿ ದೌರ್ಜನ್ಯಕ್ಕೊಳಗಾಗುತ್ತಿದ್ದಾಳೆ.

ಒಮ್ಮುಖ ಯೋಚನೆ

ಸಕಲ ವಿಚಾರಗಳು ಪುರುಷತ್ವಕ್ಕಷ್ಟೇ ಸರಿ ಎನಿಸುತ್ತವೆ. ಏಕೆಂದರೆ ಪುರುಷರು ತಮ್ಮ ವರ್ಚಸ್ಸು ಕಾಯ್ದುಕೊಂಡು ಹೋಗಲು ಇಚ್ಛಿಸುತ್ತಿರುತ್ತಾರೆ. ಇದರ ಪ್ರಭಾವ ಕೇವಲ ಮಹಿಳೆಯರ ಮೇಲಷ್ಟೇ ಅಲ್ಲ, ಸ್ವತಃ ಅವರ ಮೇಲೂ ಆಗುತ್ತದೆ. ಇದರ ಪರಿಣಾಮ ಎಂಬಂತೆ ಮಹಿಳೆಯರ ಹೊಸ ಅವತಾರ ಚಲನಚಿತ್ರ ಮತ್ತು ಟಿ.ವಿ. ಪರದೆಗಳಲ್ಲಿ ನೋಡಲು ಸಿಗುತ್ತಿದೆ. ಮಹಿಳೆಯರು ತಮ್ಮ ತೊಡೆ ಭಾಗವನ್ನಷ್ಟೇ ತೋರಿಸುವುದಿಲ್ಲ, ಸ್ತನಗಳನ್ನು ತೋರಿಸುವಷ್ಟರ ಮಟ್ಟಿಗೆ ಬೋಲ್ಡ್ ಆಗಿದ್ದಾರೆ. ಸಿನಿಮಾದಲ್ಲಿ ಕೂಡ ಮಹಿಳೆಯನ್ನು ಹತ್ತಿಕ್ಕುವಂತಹ ಡೈಲಾಗ್‌ಗಳು ಕೇಳಲು ಸಿಗುತ್ತವೆ. ಇಂತಹ ಡೈಲಾಗ್‌ಗಳು ಹಿಂದಿ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕೇಳಲು ಸಿಗುತ್ತವೆ. ಹುಡುಗಿ ಬೋಲ್ಡ್ ಆಗಿ ನರ್ತಿಸುತ್ತಿದ್ದರೆ, ಹುಡುಗರ ಸಮೂಹವೊಂದು ಅವಳಿಗೆ ಯೌವನದ ಮದ, ನಾವು ಅವಳ ಸೊಕ್ಕು ಅಡಗಿಸಬೇಕು, ಎಂಬಂತಹ ಅರ್ಥ ಕೊಡುವ ಹಾಡಿನ ಸಾಲುಗಳು ಕೇಳಿಸುತ್ತವೆ.

ಯಾವುದೇ ಭೇದಭಾವ ಇರಬಾರದು

ಆ ರೀತಿಯ ಹಾಡುಗಳು ಹಾಗೂ ಧಾರಾವಾಹಿಗಳಿಂದಾಗಿ ನಾವು ಅಪರಾಧವನ್ನು ಹೆಚ್ಚಿಸುತ್ತಿದ್ದೇವೆ. ಏಕೆಂದರೆ ಎಲೆಕ್ಟ್ರಾನಿಕ್‌ ಹಾಗೂ ಪ್ರಿಂಟ್‌ ಮೀಡಿಯಾದಲ್ಲಿ ಕಾಣುವ ಮಹಿಳೆಯನ್ನು ಪುರುಷ ದೃಷ್ಟಿಕೋನದಿಂದಲೇ ನೋಡಲಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಮಹಿಳೆಯನ್ನು ಬೋಲ್ಡ್ ಆಗಿ ತೋರಿಸುವುದು ಅಥವಾ ಪುರುಷರ ವಿರೋಧದಲ್ಲಿ ನಿಲ್ಲುವುದಕ್ಕಲ್ಲ. ನಮ್ಮ ಚಲನಚಿತ್ರಗಳಲ್ಲಿ, ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮಗಳಲ್ಲಿ ಸ್ತ್ರೀಯರ ಕುರಿತಾಗಿ ವಾಸ್ತವ ಹಾಗೂ ಸರಿಯಾದ ದೃಷ್ಟಿಕೋನ ಬಿಂಬಿಸಬೇಕು. ಸ್ತ್ರೀಯರನ್ನು ಕೇವಲ ದೈಹಿಕವಾಗಷ್ಟೇ ನೋಡಬಾರದು. ಅವಳದ್ದೇ ಆದ ಒಂದು ಸರಿಯಾದ ಇಮೇಜ್‌ ಸೃಷ್ಟಿಯಾಗಬೇಕು. ಏಕೆಂದರೆ ಪುರುಷತ್ವ ನಾರಿತ್ವದ ದುರುಪಯೋಗ ಆಗಬಾರದು. ಹಾಗಾದಲ್ಲಿ ಸಮಾಜದಲ್ಲಿ ಮಹಿಳೆಯಾಗಿ ಹುಟ್ಟುವುದು ಅಪರಾಧವಲ್ಲ ಎಂದು ಭಾವಿಸಲಾಗುವುದು.

ಪಟಿಯಾಲಾದಲ್ಲಿ ಸ್ನಾತಕೋತ್ತರ ಅಭ್ಯಾಸ ಮಾಡುತ್ತಿರುವ 20 ವರ್ಷದ ನಿಕಿತಾ ಆರದ್‌ ಆನ್‌ಲೈನ್‌ ಯುವ ವೇದಿಕೆಯೊಂದರ ಮುಖಾಂತರ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮಹಿಳೆಯರ ಬಗ್ಗೆ ತೋರುವ ಭೇದಭಾವ, ಸಾಮಾಜಿಕ ಅನಿಷ್ಟಗಳನ್ನು ವಿರೋಧಿಸಿದ್ದಾರೆ. ಈ ತೆರನಾದ ಸಾಮಾಜಿಕ ಅನಿಷ್ಟಗಳನ್ನು ತೊರೆಯಲು ಅವರು ಮಹಿಳೆಯರಿಗೆ ಕರೆ ಕೊಡುತ್ತಿದ್ದಾರೆ. ಅದರ ಜೊತೆ ಜೊತೆಗೆ `ಹ್ಯಾಪಿ ಟು ಬ್ಲೀಡ್‌’ ಎಂದು ಸ್ಯಾನಿಟರಿ ನ್ಯಾಪ್‌ಕಿನ್‌ ಮೇಲೆ ಸಂದೇಶ ಬರೆದು ತಮ್ಮ ಚಿತ್ರವನ್ನು ಪೋಸ್ಟ್ ಮಾಡುತ್ತಿದ್ದಾರೆ.

– ಡಾ. ಪ್ರೇಮಲತಾ  

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ