ಹಿಂದಿ ಚಲನಚಿತ್ರ `ಸಾತ್‌ ಖೂನ್‌ ಮಾಫ್‌’ದಲ್ಲಿ ಸೂಸಾನ ಮೇರಿ ಜೊಹಾನ್ಸ್ ನೈಜ ಪ್ರೀತಿಯ ಹುಡುಕಾಟದಲ್ಲಿ ಏಳು ಸಲ ಮದುವೆ ಮಾಡಿಕೊಳ್ಳುತ್ತಾಳೆ. ಶ್ರೀನಗರದಲ್ಲಿ ಆಕೆಗೆ ರೊಮ್ಯಾಂಟಿಕ್‌ ಶಾಯರ್‌ ಖಾನ್‌ನ ಪರಿಚಯವಾಗುತ್ತದೆ. ಮದುವೆಯ ಬಳಿಕ ಆಕೆಗೆ ಆ ವ್ಯಕ್ತಿ ಹಾಸಿಗೆಯ ಮೇಲೆ ಭಾರಿ ವಿಕೃತನಾಗುತ್ತಾನೆ ಎಂಬುದು ತಿಳಿಯುತ್ತದೆ.

ಹಿಂಸೆಯಿಂದ ಲೈಂಗಿಕ ಸುಖ ಪಡೆಯುವ ಅವನ `ವೈವಾಹಿಕ ಬಲಾತ್ಕಾರ’ ಆಕೆಗೆ ಎಳ್ಳಷ್ಟೂ ಇಷ್ಟವಾಗಲಿಲ್ಲ. ಅದೊಂದು ದಿನ ಖಾನ್‌ನ ಶವ ಮಂಜುಗಡ್ಡೆಯಲ್ಲಿ ಹೂತ ಸ್ಥಿತಿಯಲ್ಲಿ ಕಂಡುಬಂತು. ಅಂದಹಾಗೆ ಅದೊಂದು ಕಥೆ. ಅದು ಕಥೆಯಾಗಿ ಉಳಿದರೇನೇ ಒಳ್ಳೆಯದು.

ವೈವಾಹಿಕ ಬಲಾತ್ಕಾರ ಕಾನೂನಿನ ಕುರಿತಂತೆ ಹೇಳಲು ಬಹಳಷ್ಟು ಸಂಗತಿಗಳಿವೆ. ಆದರೆ ಇಂತಹದೊಂದು ಕಾನೂನು ರೂಪುಗೊಳ್ಳುವುದರ ವಿರೋಧದ ಕುರಿತಂತೆ ಸಮರ್ಥನೆ ಮಾಡಿಕೊಳ್ಳುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಗೃಹಿಣಿಯರು ಹಾಗೂ ವೃದ್ಧ ಮಹಿಳೆಯರ ತರ್ಕ ಏನೆಂದರೆ ಮಹಿಳೆಯರಿಂದಲೇ ಕುಟುಂಬವೊಂದು ರಚನೆಗೊಳ್ಳುತ್ತದೆ. ಕುಟುಂಬವನ್ನು ಕಾಯ್ದುಕೊಂಡು ಹೋಗುವ ಜವಾಬ್ದಾರಿ ಮಹಿಳೆಯರದ್ದೇ ಆಗಿದೆ. ಒಂದುವೇಳೆ ವೈವಾಹಿಕ ಬಲಾತ್ಕಾರ ಕಾನೂನು ಆಗಿಬಿಟ್ಟರೆ ಕುಟುಂಬಗಳು ಒಡೆಯುವುದು ಖಚಿತ.

ಕುಟುಂಬಕ್ಕಾಗಿ ಹೊಂದಾಣಿಕೆ

ಪ್ರತಿಯೊಂದು ಸಮಾಜದಲ್ಲಿ ವೈವಾಹಿಕ ಬಲಾತ್ಕಾರ ಎನ್ನುವುದು ಸಾಮಾನ್ಯ ಸಂಗತಿ. ಆದರೆ ಹಿಂದಿನಿಂದಲೂ ಕುಟುಂಬವನ್ನು ಒಡೆಯದಂತೆ ಕಾಪಾಡಿಕೊಂಡು ಹೋಗಲು ಮಹಿಳೆಯೇ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದು ಹೇಳಿಕೊಂಡು ಬರಲಾಗುತ್ತಿದೆ.

ಆರಂಭದಿಂದಲೇ ಹುಡುಗಿಯರ ತಲೆಯಲ್ಲಿ ಈ ರೀತಿಯ ವಿಚಾರಗಳನ್ನು ತುಂಬಲಾಗುತ್ತದೆ. ಮನೆಯ ಹಿರಿಯ, ವೃದ್ಧ ಮಹಿಳೆಯರು ಈ ರೀತಿಯ ಪ್ರಯತ್ನ ಮಾಡುತ್ತಿರುತ್ತಾರೆ.

ಇಬ್ಬರು ಸೊಸೆಯಂದಿರ ಅತ್ತೆ ರಮಾದೇವಿ ಹೀಗೆ ಹೇಳುತ್ತಾರೆ, “ಪುರುಷರ ನಿಯಂತ್ರಣವಿರುವ ಸಮಾಜದಲ್ಲಿ ಮಹಿಳೆಯರು ಕುಟುಂಬಕ್ಕಾಗಿ ಅಷ್ಟಿಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಪುರುಷನ ಸ್ವಭಾವ ಎಂಥದೆಂದರೆ, ಅವನು ಹೆಂಡತಿಯ ರೂಪದಲ್ಲಿ ಪ್ರೇಯಸಿ ಹಾಗೂ ಸೇವಕಿ ಈ ಎರಡೂ ರೂಪಗಳನ್ನು ಕಾಣಬಯಸುತ್ತಾನೆ. ಈ ಎರಡು ರೂಪಗಳಲ್ಲಿಯೇ ಹೆಂಡತಿಯ ಜೀವದ ಸಾರ್ಥಕತೆ ಅಡಗಿದೆ.

”65 ವರ್ಷದ ಸುಲೋಚನಾ ದೇವಿ ಮೈಸೂರಿನ ಶ್ರೀಮಂತ ಕುಟುಂಬದ ಮಹಿಳೆ. ಇತ್ತೀಚೆಗೆ ಅವರ ಏಕೈಕ ಮಗಳ ಮದುವೆಯಾಯಿತು. ಮಗಳನ್ನು ಕಳುಹಿಸಿಕೊಡುವಾಗ `ಅಲಂಕಾರವೊಂದೇ ಸಾಲದು, ಕೆಲಸದ ಬಗೆಗೂ ಗಮನವಿರಬೇಕು,’ ಎಂದು ಬುದ್ಧಿವಾದ ಹೇಳಿದರು. ಕೆಲಸ ಮಾಡುವುದು ಅನಿವಾರ್ಯವೇ ಹೌದು. ಆದರೆ ಅದರ ಜೊತೆಗೆ ಅಲಂಕಾರ ಬೇಕು. ಮಹಿಳೆಯರಿಗೆ ಸೌಂದರ್ಯಪ್ರಜ್ಞೆ ಇರುವುದು ಅತ್ಯವಶ್ಯ.

ಆಕರ್ಷಣೆ ಕಾಯ್ದುಕೊಳ್ಳಿ

ನೀಳಾ ಈ ಕುರಿತಂತೆ ಹೀಗೆ ಹೇಳುತ್ತಾರೆ, “ಗಂಡನನ್ನು ಎಲ್ಲ ನಿಟ್ಟಿನಲ್ಲೂ ಖುಷಿಯಿಂದಿಡುವುದು ಹೆಂಡತಿಯ ಜವಾಬ್ದಾರಿಯೇ ಆಗಿರುತ್ತದೆ. ಹೆಂಡತಿ ಗಂಡನ ಸೇವೆ ಮಾಡುವ ಪಾತ್ರದ ಜೊತೆಗೆ ಅವನ ಲೈಂಗಿಕ ಅಭಿಲಾಷೆ ಈಡೇರಿಸುವವಳೂ ಆಗಿರುತ್ತಾಳೆ.

“ಸಮಾಜ ಎಷ್ಟೇ ಆಧುನಿಕವಾಗಿರಬಹುದು, ಆದರೆ ಕೆಲಸ, ಕಾಮ, ಶೃಂಗಾರ ಇವುಗಳಿಂದಲೇ ಮಹಿಳೆಯ ಜೀವನ ಸಾರ್ಥಕವಾಗುತ್ತದೆ. ಈ ಮೂರರಲ್ಲಿಯೇ ಅವಳ ಅಸ್ತಿತ್ವ ಅಡಗಿದೆ.“

ಮನೆಯ ಪ್ರತಿಯೊಬ್ಬ ಸದಸ್ಯರ ಯೋಗಕ್ಷೇಮ ನೋಡಿಕೊಳ್ಳುವುದಷ್ಟೇ ಅಲ್ಲ, ಅಲಂಕಾರ ಕೂಡ ಅಷ್ಟೇ ಮುಖ್ಯ. ಏಕೆಂದರೆ ಪತಿಯ ದೃಷ್ಟಿಯಲ್ಲಿ ಆಕೆಯ ಅಂದದ ಆಕರ್ಷಣೆ ಹಾಗೆಯೇ ಉಳಿಯಬೇಕು. ಮಹಿಳೆಯ ನಿಜವಾದ ಸಂಬಂಧ ಆಕೆಯ ಪತಿಯ ಜೊತೆಯೇ ಇರುತ್ತದೆ. “ಅದರಲ್ಲಿ `ಕಾಮ’ ಪ್ರಮುಖ ಪಾತ್ರ ವಹಿಸುತ್ತದೆ. ಗಂಡನನ್ನು ತೃಪ್ತಿಪಡಿಸುವುದು ಪತ್ನಿಯ ಧರ್ಮವಾಗಿದೆ. ಹೀಗಾಗಿ ಕೆಲಸ, ಕಾಮ, ಶೃಂಗಾರ ಇವು ಆದರ್ಶ ಪತ್ನಿಯೊಬ್ಬಳಲ್ಲಿ ಇರಬಹುದಾದ ಮುಖ್ಯ ಗುಣಗಳಾಗಿವೆ. ಹಾಗೆಂದೇ ಮದುವೆಯನ್ನು `ಲೀಗ್‌ ಪ್ರಾಸ್ಟಿಟ್ಯೂಶನ್‌’ ಎಂದೂ ಹೇಳಲಾಗುತ್ತದೆ.”

ಡಾ. ಅರವಿಂದ್‌ ಹೀಗೆ ಹೇಳುತ್ತಾರೆ, “ಜೈವಿಕ ಕಾರಣಗಳಿಂದಾಗಿ ಗಂಡ ಮತ್ತು ಹೆಂಡತಿಯ ನಡುವೆ ಲೈಂಗಿಕ ಅಭಿಲಾಷೆ ಒಂದೇ ರೀತಿಯಾಗಿಲ್ಲ. ಸಂಗಾತಿ ನಿಕಟದಲ್ಲಿದ್ದಾಗ ಪುರುಷನಿಗೆ ಲೈಂಗಿಕ ಕಾಮನೆಯನ್ನು ನಿಯಂತ್ರಣದಲ್ಲಿ ಇಡಲು ಆಗದು. ಆದರೆ ಮಹಿಳೆಯರ ವಿಷಯದಲ್ಲಿ ಇದು ಕಷ್ಟ.

“ಆಕೆಗೆ ಲೈಂಗಿಕ ಅರಿವು ಜಾಗೃತಗೊಳ್ಳಲು ಸಾಕಷ್ಟು ಸಮಯ ತಗುಲುತ್ತದೆ. ಅದರ ಜೊತೆಗೆ ಹಲವು ಕಾರಣಗಳಿಂದ ಅವಳ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ. ಆದರೆ ಪುರುಷರಲ್ಲಿ ಈ ರೀತಿಯ ಸಮಸ್ಯೆ ಉಂಟಾಗುವ ಸಾಧ್ಯತೆ ಕಡಿಮೆ.

“ಗೃಹಿಣಿಯರ ಬಗ್ಗೆ ಹೇಳಬೇಕೆಂದರೆ ಮೊದಲ ಮಗು ಆದ ಬಳಿಕ ಹಾಗೂ ಮುಟ್ಟು ನಿಂತ ಬಳಿಕ ಅವಳ ಲೈಂಗಿಕ ಅಭಿಲಾಷೆ ಕಡಿಮೆಯಾಗುತ್ತಾ ಹೋಗುತ್ತದೆ.

“ಉದ್ಯೋಗಸ್ಥ ಮಹಿಳೆಯರು ತಮ್ಮ ಕೆಲಸ ಕಾರ್ಯಗಳಲ್ಲಿ ಅದೆಷ್ಟು ವ್ಯಸ್ತರಾಗಿರುತ್ತಾರೆಂದರೆ, ಅಧಿಕ ಒತ್ತಡದಿಂದಾಗಿ, ಆರೋಗ್ಯ ಸಮಸ್ಯೆಗಳಿಂದ ಅವರ ಲೈಂಗಿಕ ಅಭಿಲಾಷೆ ತಂತಾನೇ ಉಸಿರುಗಟ್ಟುತ್ತಾ ಹೋಗುತ್ತದೆ. ಅದೇ ಪುರುಷರ ಬಾಬತ್ತಿನಲ್ಲಿ ಇದು ತದ್ವಿರುದ್ಧವಾಗಿದೆ. ಸೆಕ್ಸ್ ಅವರ ಒತ್ತಡವನ್ನು ನಿವಾರಿಸುತ್ತದೆ. ಹೀಗಾಗಿ ಅದನ್ನು ಸೆಲ್ಪ್ ಸ್ಟ್ರೆಸ್ ಬಸ್ಟರ್‌ ಎಂದು ಹೇಳಲಾಗುತ್ತದೆ.”

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ