ಬೇಸಿಗೆ ಕಾಲಿಡುತ್ತಿದ್ದಂತೆ ಚರ್ಮದಲ್ಲಿ ಆರ್ದ್ರತೆಯ ಪ್ರಮಾಣ ಕುಗ್ಗುತ್ತದೆ. ಇದಕ್ಕೆ ಕಾರಣ ಬಿರು ಬಿಸಿಲು, ಧೂಳು, ಬಿಸಿ ಗಾಳಿ, ಮಲಿನತೆ, ಬೆವರು ಇತ್ಯಾದಿ. ತ್ವಚೆಯಲ್ಲಿ ಆರ್ದ್ರತೆ ಕಡಿಮೆ ಆಗುವುದರಿಂದ ಅದು ನಿರ್ಜೀವವಾಗಿ ಶುಷ್ಕವಾಗುತ್ತದೆ. ಹೀಗಾದಾಗ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು, ಸಮತೋಲಿತ ಆಹಾರ ಸೇವಿಸುವುದು, ಸನ್‌ಸ್ಕ್ರೀನ್ ರಕ್ಷಣೆ ಪಡೆಯುವುದು, ಬಿಸಿಲಿಗೆ ಛತ್ರಿ ಹಿಡಿಯುವುದು ಇತ್ಯಾದಿ ಮುಖ್ಯವಾಗುತ್ತದೆ.
ಸೌಂದರ್ಯ ತಜ್ಞೆಯರ ಸಲಹೆಯಂತೆ, ಬೇಸಿಗೆಯಲ್ಲಿ ತ್ವಚೆಯ ಆರ್ದ್ರತೆಯ ಕಡೆ ಗಮನಹರಿಸಬೇಕಾದುದು ಬಲು ಮುಖ್ಯ. ಇಲ್ಲದಿದ್ದರೆ ಹಲವು ಬಗೆಯ ರಾಶೆಸ್, ರೆಡ್‌ನೆಸ್, ಅಲರ್ಜಿ ಇತ್ಯಾದಿ ಅಪಾಯಗಳು ಎದುರಾಗುತ್ತವೆ. ಹೀಗಾದಾಗ ಸನ್‌ಸ್ಕ್ರೀನ್ ಮತ್ತು ಮಾಯಿಶ್ಚರೈಸರ್ ಉತ್ತಮ ಕಂಪನಿಯದೇ ಆಗಿರಬೇಕು, ಆಗ ಚರ್ಮ ಸುರಕ್ಷಿತವಾಗಿರುತ್ತದೆ. ಮನೆಯಿಂದ ಹೊರಡುವ 20 ನಿಮಿಷಗಳ ಮೊದಲು ಇವನ್ನು ಹಚ್ಚಿಕೊಳ್ಳಬೇಕು. ಕನಿಷ್ಠ 15 spf ಇರುವಂಥ ಸನ್‌ಸ್ಕ್ರೀನ್ ಆಗಿರಲಿ, ಗರಿಷ್ಠ ಇದ್ದಷ್ಟೂ ಒಳ್ಳೆಯದು.
ನೀವು spf ಹೆಚ್ಚಿಸಿದಷ್ಟೂ ದುಬಾರಿ ಎಂದು ಅಗ್ಗದ ಮಾಲಿಗೆ ಹೋದರೆ, ಆಗ ನಿಮ್ಮ ಅಸಲಿ ವಯಸ್ಸಿಗಿಂತ ನಿಮ್ಮ ಚರ್ಮದ ವಯಸ್ಸು ಹೆಚ್ಚಿರುವಂತೆ ಕಾಣುತ್ತದೆ. ಆದ್ದರಿಂದ ಅಗ್ಗದ ಆಸೆ ಬಿಟ್ಟು, ತಜ್ಞೆಯರ ಸಲಹೆ ಅನುಸರಿಸಿ.
ಬೇಸಿಗೆಯಲ್ಲಿ ಸೆಲೆಬ್ರಿಟೀಸ್ ಮುಖ್ಯವಾಗಿ ತಮ್ಮ ಚರ್ಮದ ಕುರಿತಾಗಿ ಬಹಳ ಸಂವೇದನಾಶೀಲರಾಗಿರುತ್ತಾರೆ. ಏಕೆಂದರೆ ಅವರುಗಳು ಸದಾ ಉರಿ ಬಿಸಿಲು, ಧೂಳು, ಮಲಿನ ವಾತಾವರಣ, ಬೆವರಿನೊಂದಿಗೆ ಶೂಟಿಂಗ್ ಮಾಡಬೇಕಾಗುತ್ತದೆ. ಬನ್ನಿ, ಅವರು ಈ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾರೋ ನೋಡೋಣ.
ಶ್ರದ್ಧಾ ಕಪೂರ್ : ವೀಟ್‌ನ ಬ್ರಾಂಡ್ ಅಂಬಾಸಿಡರ್ ನಟಿ ಶ್ರದ್ಧಾ ಹೇಳುತ್ತಾಳೆ, “ಬೇಸಿಗೆಯಲ್ಲಿ ನಾನು ಬಲು ಸಾಧಾರಣ ದಿನಗಳಂತೆಯೇ ಇರುತ್ತೇನೆ. ಆಗ ಮಾತ್ರ ನನ್ನ ತ್ವಚೆಯ ಸೌಂದರ್ಯ ಉಳಿಯಬಲ್ಲದು. ನಾನು ಆಗ ಧಾರಾಳ ನೀರು ಕುಡಿಯುತ್ತೇನೆ. ಜೊತೆಗೆ ತಾಜಾ ಹಸಿ ತರಕಾರಿ, ಸೊಪ್ಪು, ಹಣ್ಣುಗಳು ನನ್ನ ಡಯೆಟ್‌ನಲ್ಲಿ ಇದ್ದೇ ಇರುತ್ತವೆ. ನಾನು ದಿನಾಲೂ ಹಲವು ಸಲ ತಣ್ಣೀರಿನಲ್ಲಿ ಮುಖ ತೊಳೆಯುತ್ತೇನೆ. ಆಗ ಮಾತ್ರ ಮಲಿನತೆ, ಮಣ್ಣಿನ ಧೂಳಿನಿಂದ ದೂರವಿರಲು ಸಾಧ್ಯ.“ನಾನು 200-300 spf ಸನ್‌ಸ್ಕ್ರೀನ್ ಇಲ್ಲದೆ ಹೊರಗೆ ಹೋಗುವುದೇ ಇಲ್ಲ. ಇವೆಲ್ಲವನ್ನೂ ನಾನು ಅಮ್ಮನಿಂದ ಕಲಿತಿದ್ದೇನೆ. ಶೂಟಿಂಗ್‌ನಲ್ಲಿದ್ದಾಗಲೂ ಸಹ ನಾನು ಈ ಮೇಲಿನ ಮಾತುಗಳನ್ನು ಅಕ್ಷರಶಃ ಪಾಲಿಸುತ್ತೇನೆ. ಬೇಸಿಗೆಯಲ್ಲಿ ನಾನು ಹೆಚ್ಚು ಕಡಿಮೆ ಮೇಕಪ್ ಮಾಡಿಕೊಳ್ಳುವುದೇ ಇಲ್ಲ.”
ಕರೀನಾ ಕಪೂರ್ ಖಾನ್ : ಪ್ರತಿಯೊಬ್ಬ ಹುಡುಗಿಯೂ ಸಿನಿಮಾದಲ್ಲಿ ಕರೀನಾಳನ್ನು ನೋಡಿದ ಬಳಿಕ ಅವಳಂಥ ಚರ್ಮ ಹೊಂದಬೇಕೆಂದು ಬಯಸುತ್ತಾಳೆ. ತನ್ನ ಚರ್ಮದ ಕಾಂತಿಯ ಶ್ರೇಯಸ್ಸನ್ನು ಅವಳು ತಾಯಿತಂದೆಯರಿಗೆ ಅರ್ಪಿಸುತ್ತಾಳೆ. ಅವಳು ಸದಾ ತನ್ನ ಚರ್ಮವನ್ನು ಆರ್ದ್ರತೆಯಿಂದ ಕೂಡಿರುವಂತೆ ನೋಡಿಕೊಳ್ಳುತ್ತಾಳೆ. ಬೇಸಿಗೆಯಲ್ಲಿ ಆಕೆ ಧಾರಾಳವಾಗಿ ನೀರು, ಜೂಸ್, ಸೂಪ್ ಇತ್ಯಾದಿ ಕುಡಿಯುತ್ತಾಳೆ, ಆಗ ತ್ವಚೆ ಡೀಹೈಡ್ರೇಟ್ ಆಗುವುದಿಲ್ಲ.ಕರೀನಾ ಹೇಳುತ್ತಾಳೆ, “ನಾನು ಪಂಜಾಬಿ ಪರಿವಾರದವಳು. ಅಲ್ಲಿ ಊಟ, ತಿಂಡಿ ಎಲ್ಲ ಭಲೇ ಧಾರಾಳ. ನಾನು ಗಡದ್ದಾಗಿ ತಿಂತೀನಿ. ಮುಖ್ಯವಾಗಿ ಪಂಜಾಬ್‌ಗೆ ಹೋದಾಗಲೆಲ್ಲ ಅಲ್ಲಿನ ಅಮೃತಸರದ ಕುಲ್ಚಾ ಮಿಸ್ ಮಾಡೋಲ್ಲ. ಹಿಂದೆ ಇದ್ದಂತೆ ಈಗ ಝೀರೋ ಫಿಗರ್‌ಗೆ ನಾನು ಜೋತು ಬೀಳುವುದಿಲ್ಲ, ಈಗಂತೂ ನನಗೆ ಸಲ್ವಾರ್ ಸೂಟ್ ಧರಿಸಿ ಏನೂ ಆಗಬೇಕಿಲ್ಲ. `ಟಶನ್’ ಚಿತ್ರಕ್ಕಾಗಿ ಆಗ ನಾನು ಹಾಗೆಲ್ಲ ಪಾಡುಪಟ್ಟಿದ್ದೆ. ಈಗ ಡೋಂಟ್ ಕೇರ್…. ಮಜವಾಗಿ ಎಲ್ಲನ್ನೂ ತಿಂತೀನಿ! ಆದರೆ ಜಿಮ್ ಗೆ ಹೋಗಿ ವರ್ಕ್‌ಔಟ್ ಮಾಡುವುದನ್ನು ಮಾತ್ರ ತಪ್ಪಿಸೋಲ್ಲ. ಫಿಟ್‌ನೆಸ್ ನನಗೆ ಮುಖ್ಯ, ಮೇಕಪ್ ಅಲ್ಲ. ಬಿಸಿಲಿಗೆ ಹೊರಡುವ ಮುಂಚೆ ಅಧಿಕ spfವುಳ್ಳ ಸನ್‌ಸ್ಕ್ರೀನ್ ಕ್ರೀಂ ಹಚ್ಚುತ್ತೇನೆ.
“ರಾತ್ರಿ ಮಲಗುವ ಮುನ್ನ ಅಗತ್ಯ ಮಾಯಿಶ್ಚರೈಸರ್ ಹಚ್ಚಿಕೊಳ್ಳುತ್ತೇನೆ. ಊಟದಲ್ಲಿ ಅಧಿಕ ತಾಜಾ ತರಕಾರಿ, ಹಣ್ಣುಗಳಿರಬೇಕು. ಇದರ ಜೊತೆ ನಾನು ಸದಾ ಸಾದಾಸೀದಾ ಆಗಿರಲು ಬಯಸುತ್ತೇನೆ. ಮನೆಯಿಂದ ಹೊರಡುವಾಗ ಕಂಗಳ ಮೇಕಪ್‌ಗಾಗಿ ಕಾಜಲ್, ಜೊತೆಗೆ ದೇಹಕ್ಕಾಗಿ ಮಾಯಿಶ್ಚರೈಸರ್ ಇರಿಸಿಕೊಳ್ಳಲು ಮರೆಯುವುದಿಲ್ಲ.”
ನರ್ಗಿಸ್ ಪಾಖ್‌ರೀ : ತ್ವಚೆ ಸದಾ ನಳನಳಿಸುತ್ತಾ, ಕಾಂತಿಯುತವಾಗಿರಲು ನರ್ಗಿಸ್ ಕ್ಲೆನ್ಸಿಂಗ್, ಫೇಶಿಯಲ್, ಸ್ಕ್ರಬ್, ಮಾಸ್ಕ್ ಇತ್ಯಾದಿ ಬಳಸುತ್ತಾಳೆ. ಆಕೆ ಹೊರಗೆ ಶೂಟ್ ಮಾಡುವಾಗಲೆಲ್ಲ, ವಾಲ್‌ನಟ್ ಸ್ಕ್ರಬ್ ಬಳಸಿ ಮೇಕಪ್ ತೆಗೆಯುತ್ತಾಳೆ. ಇದರಿಂದ ಮೇಕಪ್ ರೋಮರಂಧ್ರಗಳ ಮೂಲಕ ಹೊರಹೋಗುತ್ತದೆ. ಜೊತೆಗೆ ಇದರಿಂದ ಮುಖದ ರಕ್ತಸಂಚಾರ ಹೆಚ್ಚುತ್ತದೆ. ರಾತ್ರಿ ಮಲಗುವ ಮುನ್ನ ತಪ್ಪದೆ ಮಾಯಿಶ್ಚರೈಸರ್ ಹಚ್ಚುತ್ತಾಳೆ.
ನರ್ಗಿಸ್ ಹೀಗೆ ಹೇಳುತ್ತಾಳೆ, “ನನಗೆ ಸೂಟ್ ಆಗುವಂಥ ಪ್ರಾಡಕ್ಟ್ಸನ್ನು ಮಾತ್ರವೇ ನಾನು ಬಳಸುತ್ತೇನೆ. ನನಗೆ ಅಧಿಕ ಮೇಕಪ್‌ನ ಆಸೆಯಿಲ್ಲ. ಬಿಸಿಲಿನಲ್ಲಿ ಹೆಚ್ಚಾಗಿ ಓಡಾಡುವುದಿಲ್ಲ. ಸಮತೋಲಿತ ಆಹಾರ ಸೇವಿಸುತ್ತೇನೆ. ಬೈ ಚಾನ್ಸ್, ನಾನು ವೆಜಿಟೇರಿಯನ್. ಆಯಾ ಸೀಸನ್ನಿನ ತಾಜಾ ಹಸಿ ತರಕಾರಿ, ಹಣ್ಣುಗಳನ್ನು ಧಾರಾಳ ಸೇವಿಸುತ್ತೇನೆ. ಹಾಗೆಯೇ ಅದರ ಪೇಸ್ಟ್ ನಿಂದ ಮಾಸ್ಕ್ ಮಾಡಿ ಧರಿಸುತ್ತೇನೆ. ಇದರಿಂದ ನನ್ನ ಚರ್ಮ ಬಲು ಸುಂದರ ಎನಿಸುತ್ತದೆ. ಮುಂಬೈನ ಬೇಸಿಗೆಯಲ್ಲಿ ಬೆಳಗ್ಗೆ 6 ಗಂಟೆ ನಂತರ ವಾಕಿಂಗ್, ಜಾಗಿಂಗ್ ಮಹಾ ಕಷ್ಟಕರ! ಹೀಗಾಗಿ ಬೆಳಗ್ಗೆ ಇವನ್ನು ಮಿಸ್ ಮಾಡಿಕೊಂಡಾಗ ಮನೆಯಲ್ಲೇ ಡಿವಿಡಿ ಹಾಕಿಕೊಂಡು ತುಂಬಾ ವರ್ಕ್‌ಔಟ್ಸ್ ಮಾಡುತ್ತೇನೆ. ಕೂದಲಿಗಾಗಿ ಅಗತ್ಯ ಹಾಟ್ ಆಯಿಲ್ ಮಸಾಜ್ ಮಾಡಿಸುತ್ತೇನೆ. ಎಂದೂ ಅಧಿಕ ಸಿಹಿ ತಿನ್ನುವುದಿಲ್ಲ. ವೆರಿ ಲಿಮಿಟೆಡ್. ನೆಮ್ಮದಿಯಾಗಿ ನಿದ್ದೆ ಮಾಡುವುದೂ ಅತ್ಯಗತ್ಯ.”
ದೀಪಿಕಾ ಪಡುಕೋಣೆ : ದೀಪಿಕಾ ಬೇಸಿಗೆಯ ಋತುವಿನಲ್ಲಿ ತನ್ನ ಚರ್ಮದ ಆರೈಕೆಯ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಾಳೆ. ಆಕೆ ಹೇಳುವುದೆಂದರೆ, “ರಾತ್ರಿ ಹೊತ್ತು ನನ್ನಲ್ಲಿ ಉಳಿಯುವ ಯಾವುದೇ ಮೇಕಪ್ ಆಗಲಿ, ಅದನ್ನು ತೆಗೆದು ಹೈಡ್ರೇಟಿಂಗ್ ಕ್ರೀಂ ಹಚ್ಚುತ್ತೇನೆ. ಜೊತೆಗೆ ಧಾರಾಳವಾಗಿ 10-12 ಗ್ಲಾಸ್ ನೀರು ಕುಡಿಯುತ್ತೇನೆ. ಸದಾ ಪೌಷ್ಟಿಕ ಆಹಾರ ಸೇವಿಸುತ್ತೇನೆ. ನಿಯಮಿತವಾಗಿ ವರ್ಕ್‌ಔಟ್ಸ್ ಮಾಡುತ್ತೇನೆ. ನಿದ್ದೆ ಅಪೂರ್ಣ ಆಗಲು ಬಿಡುವುದಿಲ್ಲ. ಈ ಋತುವಿನಲ್ಲಿ ಬಿಸಿ ಹಾಗೂ ಶುಷ್ಕ ಹವೆಯಿಂದ ತಲೆಗೂದಲು ನಿರ್ಜೀವವಾಗುತ್ತದೆ. ಹೀಗಾಗಿ ವಾರಕ್ಕೆ 2 ಸಲ ಕೊಬ್ಬರಿ ಎಣ್ಣೆ ಬಳಸಿ ತಲೆಗೆ ಮಸಾಜ್ ಮಾಡುವುದರಿಂದ ತಲೆಗೂದಲಿನ ಆರೋಗ್ಯ ಎಷ್ಟೋ ಸುಧಾರಿಸುತ್ತದೆ.
“ನಾನು ಹೆಚ್ಚಾಗಿ ಮೇಕಪ್ ಇಷ್ಟಪಡುವುದಿಲ್ಲ. ಆದರೆ ಬ್ಯೂಟಿ ಕ್ರೀಂ ಹಚ್ಚದೆ ಬಿಡುವುದಿಲ್ಲ. ನನಗೆ ಕೆಂಪು ಲಿಪ್‌ಸ್ಟಿಕ್ ಬಹಳ ಇಷ್ಟ. ಅದನ್ನು ಲೈನರ್ ಜೊತೆ ಅಗತ್ಯವಾಗಿ ಬಳಸುತ್ತೇನೆ.”
– ಜಿ. ಸುಮಾ
ಬೇಸಿಗೆಯಲ್ಲಿ ಸೌಂದರ್ಯ ಸಂರಕ್ಷಣೆ
– ಮನೆಯಿಂದ ಹೊರಗೆ ಹೊರಡುವಾಗ ಅಗತ್ಯ 200-300 spf ಯುಕ್ತ ಸನ್‌ಸ್ಕ್ರೀನ್ ಹಚ್ಚಿಕೊಳ್ಳಲು ಮರೆಯದಿರಿ.
– ಬಿಸಿಲಲ್ಲಿ ಓಡಾಡುವಾಗ ಸೆರಗು, ದುಪಟ್ಟಾದಿಂದ ತಲೆ ಮುಖ ಮರೆಸಿಕೊಳ್ಳಿ. ಕೈಯಲ್ಲೊಂದು ಛತ್ರಿ ತೆಗೆದುಕೊಳ್ಳಲು ಮರೆಯದಿರಿ.
– ಹೊರಗೆ ಹೊರಡುವಾಗ 2 ಲೀಟರ್‌ನ ದೊಡ್ಡ ನೀರಿನ ಬಾಟಲ್ ಅಗತ್ಯ ನಿಮ್ಮ ಜೊತೆಗಿರಲಿ.
– ಕಲ್ಲಂಗಡಿ, ಕರ್ಬೂಜಾ, ಕಿತ್ತಳೆ, ಮೂಸಂಬಿ ಹಣ್ಣುಗಳು, ಸೌತೇಕಾಯಿ, ಟೊಮೇಟೊ ಇತ್ಯಾದಿ ಹಸಿಯಾಗಿ ಅಧಿಕ ಸೇವಿಸಿ.
– ವಾರದಲ್ಲಿ 2 ಸಲ ನ್ಯಾಚುರಲ್ ಫೇಸ್‌ಪ್ಯಾಕ್ ಬಳಸಿರಿ. ಇದರಲ್ಲಿ ಚಂದನದ ಲೇಪ, ಅರಿಶಿನದ ಲೇಪ, ಆ್ಯಲೋವೆರಾ, ಸೌತೆ, ಟೊಮೇಟೊ ಮಾಸ್ಕ್ ಇರಲಿ.
– ಕಾಫಿ/ಟೀ ಬಿಟ್ಟು ಆದಷ್ಟೂ ಗ್ರೀನ್ ಟೀ ಎಳನೀರು, ಕಾದಾರಿದ ಬಾರ್ಲಿ ನೀರು ಕುಡಿಯಿರಿ.
– ಆ್ಯಲೋವೆರಾ ಜೆಲ್, ರೋಸ್ ವಾಟರ್, ಗ್ಲಿಸರಿನ್ ಬೆರೆಸಿ ಪೇಸ್ಟ್ ಮಾಡಿ, ಸೆಖೆಯಲ್ಲಿ ದಣಿದಾಗೆಲ್ಲ ಮುಖಕ್ಕೆ ಹಚ್ಚಿರಿ. ಫ್ರೆಶ್‌ನೆಸ್, ರೇಡಿಯೆನ್ಸ್ ಸಿಗುತ್ತದೆ.