ಬಿರು ಬೇಸಿಗೆಯಲ್ಲೂ ನಿಮ್ಮ ಚರ್ಮ ಸದಾ ಲವಲವಿಕೆಯಿಂದ ನಳನಳಿಸುವಂಥ ಗ್ಲೋ ಹೊಂದಲು ಈ ಅಮೂಲ್ಯ ಸಲಹೆಗಳನ್ನು ಅನುಸರಿಸಿ…..!

ಬೇಸಿಗೆಯಲ್ಲಿ ದೈಹಿಕ ಆರೋಗ್ಯದ ಜೊತೆ ಜೊತೆಗೆ, ನಮ್ಮ ದೇಹದ ಅತಿ ಸೆನ್ಸಿಟಿವ್ ‌ಭಾಗವಾದ ಚರ್ಮದ ಕಡೆಗೂ ಸದಾ ಹೆಚ್ಚಿನ ಗಮನ ಕೊಡಬೇಕು. ಈ ಬಿರು ಬಿಸಿಲಿನ ಧಗೆಯ ಕಾರಣ, ಚರ್ಮದ ಸಮಸ್ಯೆಗಳು ತೀವ್ರಗೊಂಡು ಅಪಾಯಕ್ಕೂ ಸಹ ತಿರುಗಬಹುದು. ಸೂರ್ಯನ ಅತಿಯಾದ UV ಕಿರಣಗಳ ಸಂಪರ್ಕದಿಂದಾಗಿ, ಅತಿ ಬೆರುವಿಕೆ ಸಾಮಾನ್ಯ. ಇದರಿಂದ ನಮ್ಮ ಚರ್ಮದ ಸಮಸ್ಯೆಗಳು ತೀವ್ರ ಹೆಚ್ಚುತ್ತವೆ. ಹೀಗಾಗಿ ಬೇಸಿಗೆಯಲ್ಲಿ ನಮ್ಮನ್ನು ವಿಶೇಷವಾಗಿ ಕಾಡು ಚರ್ಮದ ಸಮಸ್ಯೆಗಳ ಕುರಿತಾಗಿ ವಿವರವಾಗಿ ತಿಳಿದುಕೊಳ್ಳುತ್ತಾ, ಅದರಿಂದ ಪಾರಾಗುವ ಬಗೆಯನ್ನು ಅರಿಯೋಣ.

ಆಯ್ಲಿ ಸ್ಕಿನ್‌ : ಬೇಸಿಗೆಯಲ್ಲಿ ಬೆವರಿನ ಜೊತೆ, ಧೂಳುಮಣ್ಣು ಮುಖಕ್ಕೆ ಮೆತ್ತಿಕೊಂಡು, ಮುಖದ  ಚರ್ಮದ ಪೋರ್ಸ್‌, ರೋಮರಂಧ್ರಗಳು ಬ್ಲಾಕ್‌ ಆಗಿಹೋಗುತ್ತವೆ. ಇದರಿಂದ ಚರ್ಮ ಆಯ್ಲಿ ಆಗಿಹೋಗುತ್ತದೆ. ಮುಖದಲ್ಲಿ ಮತ್ತೆ ಮತ್ತೆ ಜಿಡ್ಡು ಜಿನುಗತೊಡಗುತ್ತದೆ. ಇದು ನೋಡಲಿಕ್ಕೂ ಬಹಳ ಕೆಟ್ಟದಾಗಿದ್ದು ಇದರಿಂದ ಮುಂದೆ ಗಂಧೆ, ದದ್ದು, ಆ್ಯಕ್ನೆಗಳಾಗುವ ಸಂಭವ ಹೆಚ್ಚು.

ಆಯ್ಲಿ ಚರ್ಮವನ್ನು ನಿಯಮಿತವಾಗಿ ಮಾಯಿಶ್ಚರೈಸಿಂಗ್‌ಹೈಡ್ರೇಶನ್‌ ಮಾಡಿಸುತ್ತಿರಬೇಕು. ಹೀಗಾಗಿ ನಿಮ್ಮ ಚರ್ಮಕ್ಕೆ ನಿಯಮಿತವಾಗಿ ಆಯಿಲ್ ‌ಫ್ರೀ, ನಾನ್‌ ಕಾಮೆಡೊಜೆನಿಕ್‌, ವಾಟರ್‌ ಬೇಸ್ಡ್ ಮಾಯಿಶ್ಚರೈಸರ್ಸ್‌ ಹಚ್ಚುತ್ತಿರಬೇಕು.

ಬೇಸಿಗೆಯಲ್ಲಿ ಹೆಂಗಸರು ಫೌಂಡೇಶನ್‌ ಗೆ ಬದಲಾಗಿ ಪೌಡರ್‌ ಬೇಸ್ಡ್ ಮೇಕಪ್‌ ಬಳಸಬೇಕು. ಆದರೆ ಎಷ್ಟೋ ಸಲ ಹೆಚ್ಚಿನ ಬೆವರು ಆಯಿಲ್ ‌ಕಾರಣ, ಮುಖದಲ್ಲಿನ ಮೇಕಪ್‌ ನಲ್ಲಿ ಬ್ರೇಕ್‌ ಔಟ್ಸ್ ಕಾಣಿಸುತ್ತವೆ. ಹೀಗಾಗಿ ಫೌಂಡೇಶನ್‌ ಯಾ ಪೌಡರ್‌ ಬೇಸ್ಡ್ ಮೇಕಪ್‌ ಮಾತ್ರ ಫಾಲೋ ಮಾಡಬೇಕೆಂಬುದನ್ನು ಗಮನಿಸಿ.

ಹೀಗಾಗಿ ಆಯಿಲ್ ಚರ್ಮದಿಂದ ಅಧಿಕ ಹಿಂಸೆ ಎದುರಿಸುತ್ತಿರುವವರು, ಜೆಲ್ ‌ಬೇಸ್ಡ್ ಕ್ಲೆನ್ಸರ್‌ ಬಳಸುವುದು ಉತ್ತಮ. ಇದರಿಂದ ಸ್ಕಿನ್‌ ಇರಿಟೇಶನ್‌, ಬರ್ನಿಂಗ್‌, ಸೀಬಮ್ ಸೆಕ್ರಿಯೇಶನ್‌ ಇತ್ಯಾದಿಗಳಿಂದ ಮುಕ್ತಿ ಹೊಂದಬಹುದು. ಅಸಲಿಗೆ ಆಯಿಲ್‌ಆಲ್ಕೋಹಾಲ್ ‌ಬೇಸ್ಡ್ ಕ್ಲೆನ್ಸರ್‌ ಗಳಲ್ಲಿ ಫ್ಯಾಟಿ ಆ್ಯಸಿಡ್‌ ಇರುತ್ತದೆ. ಹೀಗಾಗಿ ಇಂಥವುಗಳನ್ನು ಬಳಸಿದರೂ, ಸ್ಕಿನ್‌ ಮೇಲಿನ ಆಯಿಲ್ ‌ಸಮಸ್ಯೆ ಹಾಗೇ ಉಳಿದುಬಿಡುತ್ತದೆ.

ಬೇಸಿಗೆಯಲ್ಲಿ ಹೆಚ್ಚು ಹೆಚ್ಚಾಗಿ ಸೌತೇಕಾಯಿ, ಕಲ್ಲಂಗಡಿ ಹಣ್ಣು, ಮೂಸಂಬಿ, ಕಿತ್ತಳೆ, ಎಳನೀರು, ಟೊಮೇಟೊ, ಮೂಲಂಗಿ, ಹಸಿ ಈರುಳ್ಳಿ ಇತ್ಯಾದಿ ಬಳಸಬೇಕು. ಇವೆಲ್ಲದರಲ್ಲಿ ಅಧಿಕಾಂಶ ನೀರಿನಿಂದಾಗಿ ಆ್ಯಂಟಿ ಆಕ್ಸಿಡೆಂಟ್ಸ್ ಸಹ ಹೇರಳವಾಗಿದೆ. ಇದು ಕೊಲೋಜೆನ್‌ ಬೂಸ್ಟ್ ಮಾಡಿ, ತನ್ನ ಕೂಲಿಂಗ್‌ ಎಫೆಕ್ಟ್ ನಿಂದಾಗಿ, ಚರ್ಮವನ್ನು ಒಳಗಿನಿಂದಲೇ ಹೈಡ್ರೇಟ್‌ ಗೊಳಿಸುವಲ್ಲಿ ಯಶಸ್ವಿಯಾಗುತ್ತದೆ.

ಬ್ರೋಕಲಿ, ಪಾಲಕ್‌ ಸೊಪ್ಪು ಇತ್ಯಾದಿ ಹಸಿರು ಸೊಪ್ಪಿನ ಬಳಕೆಯಿಂದಲೂ ಹೆಚ್ಚಿನ ಲಾಭವಿದೆ. ಇದರಿಂದ ದೇಹಕ್ಕೆ ಆಯಿಲ್‌/ ಫ್ಯಾಟ್‌ ಸೇರುವುದಿಲ್ಲ. ಬೇಸಿಗೆಯಲ್ಲಿ ಆಯ್ಲಿ ತ್ವಚೆಯ ಹೆಂಗಸರು ತಮ್ಮ ಡಯೆಟ್‌ ನಲ್ಲಿ ಫ್ಯಾಟ್‌, ಆಯಿಲ್ ‌ಅಂಶಗಳನ್ನು ಸಾಧ್ಯವಾದಷ್ಟೂ ತಗ್ಗಿಸಬೇಕು. ಇದರ ಬದಲಿಗೆ ಫೈಬರ್‌ ರಿಚ್‌ ಫುಡ್‌ ಸೇವಿಸುವುದು ಲೇಸು.

ಸನ್‌ ಬರ್ನ್‌ ಸಮಸ್ಯೆ : ಬೇಸಿಗೆಯಲ್ಲಿ ತೀವ್ರ ಬಿಸಿಲಿನ ಕಾರಣ ಚರ್ಮ ಬೇಗ ಡ್ಯಾಮೇಜ್‌ ಗೊಳ್ಳುವ ಸಾಧ್ಯತೆಗಳು ಹೆಚ್ಚು. ಇದರಿಂದ ಮುಖದ ಮೇಲೆ ಕೆಂಪು ಗುಳ್ಳೆ, ದದ್ದು ಆಗಬಹುದು. ಇದರಿಂದ ನವೆ, ಕಡಿತ, ತುರಿಕೆ ತಪ್ಪಿದ್ದಲ್ಲ. ಇದರಿಂದ ಪಾರಾಗಲು ಈ ಸಲಹೆಗಳನ್ನು ಅನುಸರಿಸಿ.

ಆದಷ್ಟು ಬಿರು ಬಿಸಿಲಿನ ತಿರುಗಾಟ ತಪ್ಪಿಸಿ. ಬೆಳಗ್ಗೆ 7-8ರ ಹೊತ್ತಿಗೆ ಯಾ ಸಂಜೆ 6ರ ನಂತರ ಹೊರಗಿನ ಕೆಲಸ ಮುಗಿಸಿಕೊಳ್ಳಿ. ಮನೆಯಿಂದ ಹೊರಗೆ ಹೊರಡುವ ಮೊದಲು ಲೈಟ್‌, ನಾನ್‌ ಸ್ಟಿಕೀ, SPF 50+ನ ಸನ್‌ ಸ್ಕ್ರೀನ್‌ ಲೋಶನ್‌ ಸವರಿಕೊಳ್ಳಲು ಮರೆಯದಿರಿ.

ಆದಷ್ಟೂ ಲೂಸ್‌ ಫಿಟ್ಟಿಂಗ್‌ ಡ್ರೆಸೆಸ್‌ ಇರಲಿ. ಈ ಉಡುಗೆಗಳು ಶುದ್ಧ ಕಾಟನ್‌ ಆಗಿದ್ದರೆ ಉತ್ತಮ. ಇದರಿಂದ ಚರ್ಮಕ್ಕೆ ತಂಪು ಎನಿಸುತ್ತದೆ. ಚರ್ಮವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಲು ಸದಾ ಹೈಡ್ರೇಟೆಡ್‌ ಆಗಿರಬೇಕು. ಇದಕ್ಕಾಗಿ ಧಾರಾಳವಾಗಿ ನೀರು ಕುಡಿಯುತ್ತಿರಿ. ಎಳನೀರು, ನೀರುಮಜ್ಜಿಗೆ ಇತ್ಯಾದಿ ಇರಲಿ. ಈ ನೆಪದಲ್ಲಿ ಸಕ್ಕರೆ ಬೆರೆತ ಜೂಸ್‌, ಕೋಲ್ಡ್ ಡ್ರಿಂಕ್ಸ್ ಗೆ ಮೊರೆಹೋಗುವ ಬದಲು, ಮೂಸಂಬಿ ಕಿತ್ತಳೆ ಹಣ್ಣುಗಳನ್ನು ಸುಲಿದು ನೇರವಾಗಿ ಸೇವಿಸಿ. ಹೊರಗೆ ಹೊರಡುವಾಗ ಹ್ಯಾಟ್‌ ಇರಲಿ, ಸನ್‌ ಗ್ಲಾಸಸ್‌ ಇರಲಿ.

ಆ್ಯಕ್ನೆ ಮೊಡವೆಗಳ ಗೊಡವೆ : ಈ ಸೀಸನ್‌ ನಲ್ಲಿ ಬೆವರು, ಧೂಳು, ಮಣ್ಣು, ಪರಿಸರ ಮಾಲಿನ್ಯಗಳ ಕಾರಣ ಆ್ಯಕ್ನೆ, ಮೊಡವೆಗಳ ಕಾಟ ತಪ್ಪಿದ್ದಲ್ಲ. ಮುಖಕ್ಕೆ ಮಾಸ್ಕ್ ಧರಿಸುವುದರಿಂದ ಇದು ಮತ್ತಷ್ಟು ಹೆಚ್ಚುತ್ತದೆ. ಮುಖದ ತುಂಬಾ ಕೆಂಪು ಗುಳ್ಳೆಗಳಾಗಿ ಕಾಡುವ ಮೊಡವೆಗಳಿಗೆ ಇನ್ನಿತರ ಕಾರಣಗಳೂ ಇರಬಹುದು. ಬೇಸಿಗೆಯ ಕಾಲದಲ್ಲಿ ಕಾಡುವ ಮೊಡವೆಯೇ ಹೀಟ್‌ ಪಿಂಪಲ್ಸ್. ಹಣೆ, ಗಲ್ಲ, ಕೆನ್ನೆಗಳನ್ನು ಇವು ಬೇಗ ಆಕ್ರಮಿಸುತ್ತವೆ.

ಹರಳೆಣ್ಣೆಯಲ್ಲಿ ರಿಸಿನೋಲೆಯಕ್ಸ್ ಆ್ಯಸಿಡ್‌ ಇದ್ದು, ಇದು ಆ್ಯಂಟಿ ಬ್ಯಾಕ್ಟೀರಿಯಾ ರೂಪದಲ್ಲಿ ಕೆಲಸ ಮಾಡುತ್ತದೆ. ಇದು ಹೀಟ್ ಪಿಂಪಲ್ಸ್ ನ್ನು ಓಡಿಸಲು ರಾಮಬಾಣ. ಹೀಗಾಗಿ ರಾತ್ರಿ ಸರಿ ಮಲಗಿದ್ದು, ಬೆಳಗ್ಗೆ ಬಿಸಿ ನೀರಿನಿಂದ ತೊಳೆಯಿರಿ.

ನೀವು ರೆಗ್ಯುಲರ್‌ ವ್ಯಾಯಾಮ ಮಾಡುವಿರಾದರೆ, ಮುಖದ ಬೆವರನ್ನು ತಕ್ಷಣ ಒರೆಸಿರಿ. ಕೂಡಲೇ ತಣ್ಣೀರಿನಿಂದ ಮುಖ ತೊಳೆಯಿರಿ. ಇದರಿಂದ ಅಲ್ಲಿ ಕೊಳೆ ಕೂಡಲು ಅವಕಾಶ ಆಗುವುದಿಲ್ಲ. ಆ್ಯಕ್ನೆ ಮೊಡವೆಗಳ ಕಾಟ ತಂತಾನೇ ಕಡಿಮೆ ಆಗುತ್ತದೆ.

ಬೇಸಿಗೆಯಲ್ಲಿ ಮೇಕಪ್‌ ಮಾಡಿಕೊಳ್ಳುವಾಗ, ಫೌಂಡೇಶನ್‌ ಸವರಿ, ಉಳಿದ ಕಾಸ್ಮೆಟಿಕ್ಸ್ ನಿಂದ ಲೇಯರ್ಸ್‌ ಹೆಚ್ಚಿಸಬೇಡಿ. ಬೇಸಿಗೆಯಲ್ಲಿ ಚರ್ಮವನ್ನು ಸದಾ ಫ್ರೆಶ್‌ನ್ಯಾಚುರಲ್ ಆಗಿ ಇರಿಸಿಕೊಳ್ಳಬೇಕು. ಇತ್ತೀಚೆಗೆ ಸನ್‌ ಸ್ಕ್ರೀನ್‌ ಮಾಯಿಶ್ಚರೈಸರ್ ಯುಕ್ತವಾಗಿಯೇ ದೊರಕುತ್ತದೆ. ಇದರ ಬಳಕೆಯಿಂದ ಬೇಸಿಗೆಯ ಅನೇಕ ಸೌಂದರ್ಯ ಸಮಸ್ಯೆಗಳನ್ನು ತಪ್ಪಿಸಬಹುದು. ಇದರ ಜೊತೆಗೆ ಲೈಟ್‌ ವೆಯ್ಟ್ ಪ್ರಾಡಕ್ಟ್ಸ್ ಮಾತ್ರ ಬಳಸಬೇಕು ಎಂದು ಮರೆಯದಿರಿ.

ಬೇಸಿಗೆಯ ದಿನಗಳಲ್ಲಿ ಅವಕಾಶವಾದಾಗ ಮುಖವನ್ನು ಸೌಮ್ಯ ಕ್ಲೆನ್ಸರ್‌ ನಿಂದ ತೊಳೆಯುತ್ತಿರಿ. ಮುಖದ ಮೇಲೆ ಹೀಗೆ ನೀರಿನ ಹನಿ ಬೀಳುತ್ತಿದ್ದರೆ, ಮುಖಕ್ಕೆ ಸಹಜವಾಗಿ ತಾಜಾತನ ಕೂಡುತ್ತದೆ. ಹೀಗೆ ಹೈಡ್ರೇಟ್‌ ಆಗುವುದರಿಂದ ಆ್ಯಕ್ನೆ, ಮೊಡವೆಗಳ ರಗಳೆ ತಪ್ಪುತ್ತದೆ. ಮುಖಕ್ಕೆ ಎಂದೂ ಕಠಿಣಕರವಾದ ಸ್ಕ್ರಬ್‌ ಬಳಸಲೇಬೇಡಿ. ಇದರಿಂದ ಡ್ರೈನೆಸ್‌, ಉರಿ ಇತ್ಯಾದಿ ಹೆಚ್ಚುತ್ತವೆ.

ಫೋಮ್ ಸಹಿತ ಫೇಸ್‌ ಕ್ಲೆನ್ಸರ್‌ ನ್ನು ದಿನಕ್ಕೆ 2 ಸಲ ಬಳಸಿರಿ. ನಿಮ್ಮ ಚರ್ಮದ ಪ್ರಕಾರಕ್ಕೆ ತಕ್ಕಂತೆ, ನೀವು ಕ್ಲೆನ್ಸರ್‌ ಆರಿಸಿ. ಬೇಸಿಗೆಯ ದಿನಗಳಲ್ಲಿ ಪದೇಪದೇ ಕ್ಲೆನ್ಸರ್‌ ಬಳಸುವುದರಿಂದಲೂ ಸಮಸ್ಯೆ ಹೆಚ್ಚಬಹುದು. ಇದರಿಂದ ಸ್ಕಿನ್‌ ಬೇಗ ಡ್ರೈ ಆದೀತು, ಆ್ಯಕ್ನೆ ಕಾಟವಂತೂ ಇನ್ನೂ ಹೆಚ್ಚು.

ಫಂಗಲ್ ಇನ್‌ ಫೆಕ್ಷನ್‌ : ಬೇಸಿಗೆಯ ದಿನಗಳಲ್ಲಿ ಸೋಂಕಿನ ಬಾಧೆ ತಪ್ಪಿದ್ದಲ್ಲ. ಹೆಚ್ಚು ಬೆವರುವಿಕೆಯೇ ಇದಕ್ಕೆ ಕಾರಣ. ಹೆಚ್ಚು ಬೆವರಿದಷ್ಟೂ, ಬಟ್ಟೆ ಮೈಗೆ ಅಂಟಿಕೊಳ್ಳುತ್ತದೆ. ಇದರಿಂದ ಬಾಡಿ ವೆಂಟಿಲೇಶನ್‌ ಗೆ ಅಡ್ಡಿಯಾಗುತ್ತದೆ. ಈ ಕಾರಣ ಕಂಕುಳ, ತೊಡೆ ಭಾಗಗಳಲ್ಲಿ ಸೋಂಕು ಆಗುತ್ತದೆ.

ಬೇಸಿಗೆಯಲ್ಲಿ ಶುಭ್ರತೆ ಸ್ವಚ್ಛತೆಗೆ ಹೆಚ್ಚಿನ ಗಮನ ಕೊಡಬೇಕು. ಇಲ್ಲದಿದ್ದರೆ, ಸೋಂಕು ತಪ್ಪಿದ್ದಲ್ಲ. ಈ ಕುರಿತಾಗಿ ತಜ್ಞರು ಹೇಳುವುದೆಂದರೆ, ಸೋಂಕಿನ ಬಾಧೆ ಉಂಟಾಗುವುದೇ ಗಲೀಜು ಸಾಕ್ಸ್, ಬದಲಾಯಿಸದ ಅಂಡರ್‌ ಗಾರ್ಮೆಂಟ್ಸ್, ಟೈಟ್‌ ಡ್ರೆಸೆಸ್ ಇತ್ಯಾದಿಗಳಿಂದ. ಆ್ದದರಿಂದ ಇಂಥವನ್ನು ದೂರವಿಡಿ.

ಎಚ್ಚರಿಕೆ ವಹಿಸಿಯೂ ಸೋಂಕು ತಗುಲಿಬಿಟ್ಟರೆ, ಮನೆಯಲ್ಲಿ ಪರಸ್ಪರ ಟವೆಲ್ ‌ಬದಲಾಯಿಸಿಕೊಳ್ಳದಿರಿ. ಹಾಗೆಯೇ ಮನೆಮಂದಿ ಎಲ್ಲಾ ಒಂದೇ ಸೋಪ್‌ ಬಳಸಬೇಡಿ. ದೇಹದಲ್ಲಿ ಕೆಂಪು ಭಾಗದ ದದ್ದು, ಹೊಪ್ಪಳ ಹೆಚ್ಚಿದರೆ ತಕ್ಷಣ ಚರ್ಮ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ಚರ್ಮ ದೀರ್ಘಾವಧಿ ಕಾಲ ಆರ್ದ್ರತೆಯಲ್ಲಿ ಇರಬೇಕಾದಾಗ, ಮನೆಗೆ ಬಂದ ತಕ್ಷಣ, ಧರಿಸಿದ ಡ್ರೆಸ್‌ ಹಿಂಡಿ ಹಾಕಿ, ಬೇರೆ ಕಾಟನ್‌ ಡ್ರೆಸ್‌ ಧರಿಸಿರಿ.

ಸಾಧ್ಯವಾದಷ್ಟೂ ಕಾಟನ್‌ ಡ್ರೆಸೆಸ್‌ ಮಾತ್ರ ಧರಿಸಿರಿ. ಅವು ಬೆವರನ್ನು ಬೇಗ ಹೀರಿಕೊಳ್ಳುತ್ತವೆ. ಇದರಿಂದ ಸೋಂಕನ್ನು ದೂರವಿಡಬಹುದು. ಹೀಗಾಗಿ ಕಾಟನ್‌ ಲಿನೆನ್‌ ನಂತ ಲೈಟ್‌, ಲೂಸ್‌ ಫಿಟಿಂಗ್‌ ನ ಉಡುಗೆ ಧರಿಸಿರಿ. ಆಗ ಮಾತ್ರ ಗಾಳಿಯ ಸಂಚಾರವಾಗಿ, ಬೆವರು ಜಮೆಗೊಳ್ಳದು, ಪ್ರತಿ ದಿನ 2 ಸಲ ಸ್ನಾನ ಮಾಡಿ,  ಒಳವಸ್ತ್ರ ಬದಲಾಯಿಸಿ, ಸಾಕ್ಸ್ ಸಹ ಪ್ರತಿದಿನ ಬದಲಾಯಿಸಿ.

ಬೇಸಿಗೆಯಲ್ಲಿ ಬಟ್ಟೆ ಒಗೆಯಲು ಮೈಲ್ಡ್ ಡಿಟರ್ಜೆಂಟ್‌ ನ್ನೇ ಬಳಸಿರಿ. ಬಟ್ಟೆ ಒಗೆದ ನಂತರ, ಚೆನ್ನಾಗಿ ನೀರಲ್ಲಿ ಜಾಲಾಡಿಸಿ. ಸೋಪಿನ ಅಂಶ ಉಳಿದಿಲ್ಲ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಇದರಿಂದ ಅಲರ್ಜಿಯ ಸಮಸ್ಯೆ ತಗ್ಗಿಸಬಹುದು. ಬೆವರನ್ನು ತಗ್ಗಿಸಲು, ಅಥ್ಲೀಟ್‌ ಫುಟ್‌ ಬಾರದಂತೆ ಇರಲು, ಚೆನ್ನಾಗಿ ಗಾಳಿಯಾಡುವಂಥ ಶೂಚಪ್ಪಲಿ ಧರಿಸಬೇಕು. ಆರ್ದ್ರತೆಯನ್ನು ಹೀರಿಕೊಳ್ಳುವಂಥ ಸಾಕ್ಸ್ ನ್ನೇ ಧರಿಸಿರಿ.

ವೈದ್ಯರ ಸಲಹ ಇಲ್ಲದೆ, ಬೆವರು ನಿವಾರಕ ಪ್ರಾಡಕ್ಟ್ಸ್ ಬಳಸಲೇಬೇಡಿ. ಇಂಥ ರಿಸ್ಕ್ ಬೇಡ, ಅವರ ಸಲಹೆಯಂತೆ ನಡೆದುಕೊಳ್ಳಿ. ಸೋಂಕಿನ ನಿವಾರಣೆಗಾಗಿ ಮೊಸರು, ನೀರು ಮಜ್ಜಿಗೆ ಇತ್ಟಾದಿ ಧಾರಾಳ ಬಳಸಿಕೊಳ್ಳಿ. ಇದರಲ್ಲಿನ ಪ್ರೊಬಯೋಟಿಕ್‌ ಅಂಶಗಳು, ಅಂದ್ರೆ ಗುಡ್‌ ಬ್ಯಾಕ್ಟೀರಿಯಾ, ನಿಮ್ಮ ಗಟ್‌ ಹೈಜೀನ್‌ ಗೆ ಪೂರಕ. ಇದರಿಂದ ಇತರೇ ವಿಧದ ಸೋಂಕುಗಳೂ ದೂರವಾಗುತ್ತವೆ. ಗುಡ್‌ ಬ್ಯಾಕ್ಟೀರಿಯಾ ನಿಮ್ಮ ಇಮ್ಯುನಿಟಿ ವರ್ಧಿಸಲು ಸಹಕಾರಿ.

ಕೊಬ್ಬರಿ ಎಣ್ಣೆ ಬಳಸಿ, ಸೋಂಕು ತಗುಲಿದ ಭಾಗಕ್ಕೆ ಮಸಾಜ್‌ ಮಾಡಿ. ಇದರಲ್ಲಿನ ಫ್ಯಾಟಿ ಆ್ಯಸಿಡ್‌ ಅಂಶಗಳು, ಸೋಂಕನ್ನು ನಿವಾರಿಸಲು ಪೂರಕ. ಹೀಗಾಗಿ ಎಳನೀರಿನ ಸೇವನೆಯಷ್ಟೇ ಪ್ರಾಮುಖ್ಯತೆಯನ್ನು ಕೊಬ್ಬರಿ ಎಣ್ಣೆ ಬಳಸಲಿಕ್ಕೂ ನೀಡಿರಿ.

– ಶೀಲಾ ಭಟ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ