ಸ್ಪೆಷಲ್ ಠಂಡಾಯಿ

ಸಾಮಗ್ರಿ : 1 ಲೀ. ಕೆನೆಭರಿತ ಗಟ್ಟಿ ಹಾಲು, 1 ಕಪ್‌ ಸಕ್ಕರೆ, ತುಂಡರಿಸಿದ ಇಡಿಯಾದ ಗೋಡಂಬಿ, ಪಿಸ್ತಾ, ಬಾದಾಮಿ, ದ್ರಾಕ್ಷಿ, ಖರ್ಜೂರ, ಅಂಜೂರ, ಕರ್ಬೂಜಾ, ಕಲ್ಲಂಗಡಿ, ಕುಂಬಳಬೀಜ (1-1 ದೊಡ್ಡ ಚಮಚ), ರುಚಿಗೆ ತಕ್ಕಷ್ಟು ಧನಿಯಾ, ಸೋಂಪು, ಏಲಕ್ಕಿ, ಚಕ್ಕೆ, ಲವಂಗ, ಮೊಗ್ಗು, ಮೆಣಸು, ಫ್ರೆಶ್‌ ಕ್ರೀಂ.

ವಿಧಾನ: ಹಾಲನ್ನು ಕಾಯಿಸಿ, ಅರ್ಧ ಹಿಂಗುವವರೆಗೂ ಸಕ್ಕರೆ ಹಾಕಿ ಕುದಿಸಬೇಕು. ಇದನ್ನು ಕೆಳಗಿಳಿಸಿ ಚೆನ್ನಾಗಿ ಆರಿಸಿ, ಫ್ರಿಜ್‌ನಲ್ಲಿಟ್ಟು ಕೂಲ್ ಮಾಡಿ. ಕಾದ ಹೆಂಚಿಗೆ ಧನಿಯಾ, ಸೋಂಪು, ಇತ್ಯಾದಿ ಮಸಾಲೆ ಸಾಮಗ್ರಿ ಹಾಕಿ ಡ್ರೈ ಹುರಿಯಿರಿ. ಇದು ಆರಿದ ನಂತರ ಮಿಕ್ಸಿಗೆ ತುಂಡರಿಸಿದ ಖರ್ಜೂರ, ಅಂಜೂರ, ಕುಂಬಳಬೀಜ ಇತ್ಯಾದಿ ಜೊತೆ ನುಣ್ಣಗೆ ಅರೆದು ಹಾಲಿಗೆ ಬೆರೆಸಿ, ಮೇಲೆ ಗೋಡಂಬಿ, ದ್ರಾಕ್ಷಿ, ಪಿಸ್ತಾ ಚೂರಿನೊಂದಿಗೆ ಕ್ರೀಂ ಬೆರೆಸಿ ಗೊಟಾಯಿಸಿ ತಣ್ಣಗೆ ಸವಿಯಿರಿ.

 

ಡ್ರೈಫ್ರೂಟ್ಸ್ ಕಚೋರಿ

ಸಾಮಗ್ರಿ : ತುಂಡರಿಸಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ, ಅಖರೋಟು (ಒಟ್ಟಾರೆ 2 ಕಪ್‌), ಅರ್ಧ ಕಪ್‌ ತುಪ್ಪ, 1-1 ಕಪ್‌ ಕೊಬ್ಬರಿ ತುರಿ, ಖೋವಾ, ಸಕ್ಕರೆ, 2 ಚಿಟಕಿ ಏಲಕ್ಕಿಪುಡಿ, ಪಚ್ಚಕರ್ಪೂರ, 500 ಗ್ರಾಂ ಮೈದಾ, ಕರಿಯಲು ರೀಫೈಂಡ್‌ ಎಣ್ಣೆ.

ವಿಧಾನ : ಒಂದು ಚಿಕ್ಕ ನಾನ್‌ಸ್ಟಿಕ್‌ ಪ್ಯಾನ್‌ನಲ್ಲಿ ತುಸು ತುಪ್ಪ ಬಿಸಿ ಮಾಡಿ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ, ಅಖರೋಟುಗಳನ್ನು ಹಾಕಿ ಹುರಿಯಿರಿ. ಮಂದ ಉರಿಯಲ್ಲಿ ಇದಕ್ಕೆ ಖೋವಾ ಸೇರಿಸಿ ಕೆದಕಬೇಕು. ಆಮೇಲೆ ಇದಕ್ಕೆ ಏಲಕ್ಕಿಪುಡಿ, ಹಾಲಲ್ಲಿ ನೆನೆದ ಕೇಸರಿ, ಕೊನೆಯಲ್ಲಿ ಅರ್ಧ ಕಪ್‌ ಸಕ್ಕರೆ, ಕೊಬ್ಬರಿ ತುರಿ ಹಾಕಿ ಕೈಯಾಡಿಸಿ ಕೆಳಗಿಳಿಸಿ. ಮೈದಾ ಹಿಟ್ಟಿಗೆ ಚಿಟಕಿ ಉಪ್ಪು, ಅರಿಶಿನ, ತುಸು ನೀರು ಬೆರೆಸಿ ಪೂರಿ ಹಿಟ್ಟಿನ ಹದಕ್ಕೆ ಮೃದುವಾಗಿ ಕಲಸಿಕೊಂಡು, 4-5 ಚಮಚ ತುಪ್ಪ ಬೆರೆಸಿ ಹದನಾಗಿ ನಾದಿಕೊಳ್ಳಿ. 1 ತಾಸು ನೆನೆಯಲು ಬಿಟ್ಟು, ಸಣ್ಣ ಉಂಡೆಗಳಾಗಿಸಿ, ಲಟ್ಟಿಸಿ, ಅದರಲ್ಲಿ 2-2 ಚಮಚ ಗೋಡಂಬಿ ಮಿಶ್ರಣವಿರಿಸಿ ಗುಂಡಗೆ ಬರುವಂತೆ ಮಡಿಸಿ, ಎಲ್ಲವನ್ನೂ ಸಿದ್ಧಪಡಿಸಿ. ಇದನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಉಳಿದರ್ಧ ಕಪ್‌ ಸಕ್ಕರೆಗೆ ಅಷ್ಟೇ ನೀರು ಬೆರೆಸಿ ಕುದಿಸಬೇಕು. ಇದಕ್ಕೆ ಏಲಕ್ಕಿ ಪುಡಿ, ಕೇಸರಿ ಬೆರೆಸಿ ಒಂದೆಳೆಯ ಪಾಕ ತಯಾರಿಸಿ. ಕಚೋರಿ ಸರ್ವ್‌ ಮಾಡುವ ಮೊದಲು, ಅದರ ಮಧ್ಯೆ ತುಸು ರಂಧ್ರ ಮಾಡಿ, ಈ ಪಾಕ ತುಸು ಹಾಕಿ, ತುಪ್ಪದಲ್ಲಿ ಹುರಿದ ಒಂದಿಷ್ಟು ಗೋಡಂಬಿ, ಪಿಸ್ತಾಗಳನ್ನು ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ರೋಸ್‌ ಖೀರು

ಸಾಮಗ್ರಿ : 100 ಗ್ರಾಂ ಗುಲಾಬಿ ದಳ, 2 ಲೀ. ಕೆನೆಭರಿತ ಹಾಲು, 1 ಕಪ್‌ ಸಕ್ಕರೆ, 2 ಚಿಟಕಿ ರೋಸ್‌ ಎಸೆನ್ಸ್.

ವಿಧಾನ : ದಪ್ಪ ತಳದ ಪಾತ್ರೆಯಲ್ಲಿ ಹಾಲು ಕಾಯಿಸಿ. ಅದಕ್ಕೆ ಗುಲಾಬಿ ದಳ ಸೇರಿಸಿ. ಮಂದ ಉರಿಯಲ್ಲಿ ಹಾಲು ಅರ್ಧ ಹಿಂಗುವವರೆಗೂ ಕುದಿಸಬೇಕು. ಇದಕ್ಕೆ ಈಗ ಸಕ್ಕರೆ ಹಾಕಿ, ಅದು ಕರಗುವವರೆಗೂ ಕೆದಕಬೇಕು. ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ನಂತರ ರೋಸ್‌ ಎಸೆನ್ಸ್ ಬೆರೆಸಿ, ಕದಡಿಕೊಂಡು 2 ತಾಸು ಫ್ರಿಜ್‌ನಲ್ಲಿರಿಸಿ. ಆಮೇಲೆ ಹೊರತೆಗೆದು ಸೋಸಿಕೊಂಡು ದಳ ಬೇರ್ಪಡಿಸಿ. ಚಿತ್ರದಲ್ಲಿರುವಂತೆ ಪಿಸ್ತಾ ಚೂರು, ತಾಜಾ ಗುಲಾಬಿ ದಳಗಳಿಂದ ಅಲಂಕರಿಸಿ ಸವಿಯಲು ಕೊಡಿ.

ಎಳ್ಳು-ಬಾದಾಮಿ ಲಡ್ಡು

ಸಾಮಗ್ರಿ : 1 ಕಪ್‌ ಎಳ್ಳು, 2 ಚಿಟಕಿ ಏಲಕ್ಕಿ ಪುಡಿ, ಅರ್ಧರ್ಧ ಕಪ್‌ ಬಾದಾಮಿ ಪುಡಿ (ತರಿ ಇರಲಿ), ಅಗತ್ಯವಿದ್ದಷ್ಟು ಪುಡಿ ಮಾಡಿದ ಬೆಲ್ಲ, ಕೊಬ್ಬರಿ ತುರಿ.

ವಿಧಾನ :  ಎಳ್ಳನ್ನು ತುಸು ತುಪ್ಪದಲ್ಲಿ ಘಮ್ಮೆನ್ನುವಂತೆ ಹುರಿಯಿರಿ. ಆರಿದ ನಂತರ ಇದನ್ನು ಏಲಕ್ಕಿಪುಡಿ, ಬೆಲ್ಲದ ಜೊತೆ ಮಿಕ್ಸಿಯಲ್ಲಿ ಪುಡಿ ಮಾಡಿಡಿ. ಇದಕ್ಕೆ ಬಾದಾಮಿ ಪುಡಿ, ಕೊಬ್ಬರಿ ಬೆರೆಸಿ ಸಣ್ಣ ಸಣ್ಣ ಉಂಡೆ ಕಟ್ಟಿ, ಏರ್‌ಟೈಟ್‌ ಡಬ್ಬದಲ್ಲಿರಿಸಿ, ಅತಿಥಿಗಳು ಬಂದಾಗ ಸವಿಯಲು ಕೊಡಿ.

ಜಾವಾ ಪ್ಲಮ್ ಮಾಕ್‌ಟೇಲ್

‌ಸಾಮಗ್ರಿ : 1 ಕಪ್‌ ನೇರಳೆಹಣ್ಣಿನ (ಜಾವಾ ಪ್ಲಮ್) ರಸ, 1 ಹೋಳು ನಿಂಬೆರಸ, ಅಗತ್ಯವಿದ್ದಷ್ಟು ಸೋಡ, ಶುಗರ್‌ ಸಿರಪ್‌, ಅಲಂಕರಿಸಲು ನೇರಳೆ ಹೋಳು.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಮಿಕ್ಸಿಯಲ್ಲಿ ಒಮ್ಮೆ ಬ್ಲೆಂಡ್‌ ಮಾಡಿ. 3-4 ಗ್ಲಾಸುಗಳಿಗೆ ಸಮನಾಗಿ ಬಗ್ಗಿಸಿ, ಮೇಲೆ ಸೋಡಾ ಸುರಿದು, ನೇರಳೆ ಹೋಳು ತೇಲಿಬಿಟ್ಟು ಸವಿಯಲು ಕೊಡಿ.

 

ಸ್ಪೆಷಲ್ ಮೆದು ವಡೆ

ಸಾಮಗ್ರಿ : 2 ಕಪ್‌ ಉದ್ದಿನ ಬೇಳೆ (3 ತಾಸು ನೆನೆಸಿ ರುಬ್ಬಿಕೊಳ್ಳಿ), ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೆಣಸು, ಏಲಕ್ಕಿಪುಡಿ, ದಾಲ್ಚಿನ್ನಿಪುಡಿ, ಲವಂಗದ ಪುಡಿ, 4 ಚಮಚ ತುಪ್ಪ, 2-3 ಈರುಳ್ಳಿ, 3-4 ಎಸಳು ಬೆಳ್ಳುಳ್ಳಿ, 2 ಕಪ್‌ ಹುಳಿ ಮೊಸರು, ಜೊತೆಗೆ ಪುದೀನಾ ಚಟ್ನಿ, ಕರಿಯಲು ಎಣ್ಣೆ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಹಸಿಮೆಣಸು.

ವಿಧಾನ : ಗಟ್ಟಿಯಾಗಿ ರುಬ್ಬಿಕೊಂಡ ಉದ್ದಿನಹಿಟ್ಟಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ. ಜೊತೆಗೆ ಕೊ.ಸೊಪ್ಪು. ಪುದೀನಾ ಕೂಡ. ಇದನ್ನು ಜಿಡ್ಡು ಸವರಿದ ಅಂಗೈ ಮೇಲೆ ವಡೆಗಳಾಗಿ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಬರುವಂತೆ ಕರಿಯಿರಿ. ಇದನ್ನು ಪುದೀನಾ ಚಟ್ನಿ ಜೊತೆ ನೇರವಾಗಿ ಸವಿಯಬಹುದು ಅಥವಾ ಕಡೆದ ಮೊಸರಿನಲ್ಲಿ ಇದನ್ನು 1 ತಾಸು ನೆನೆಹಾಕಿ, ಮೇಲೆ ಒಂದಿಷ್ಟು ತುರಿದ ಕ್ಯಾರೆಟ್‌, ಕೊ.ಸೊಪ್ಪು ಉದುರಿಸಿ ಮೊಸರುವಡೆ ಆಗಿಯೂ ಸವಿಯಬಹುದು.

ಸ್ಪೆಷಲ್ ಚಾಟ್

ಮೂಲ ಸಾಮಗ್ರಿ : 1 ಕಪ್‌ ಮೈದಾ, ಅರ್ಧ ಕಪ್‌ ರವೆ, ಅರ್ಧ ಸಣ್ಣ ಚಮಚ ಓಮ, 3-4 ಚಮಚ ತುಪ್ಪ, ರುಚಿಗೆ ಉಪ್ಪು, ಕರಿಯಲು ಎಣ್ಣೆ.

ಅಲಂಕರಿಸಲು ಸಾಮಗ್ರಿ : 1 ಕಪ್‌ ಮೊಸರು, 2 ಬೆಂದ ಆಲೂ, 1-2 ಈರುಳ್ಳಿ, 1 ಕಪ್‌ ಬೆಂದ ಕಡಲೆಕಾಳು, ರುಚಿಗೆ ತಕ್ಕಷ್ಟು ಉಪ್ಪು, ಹುಳಿಸಿಹಿ ಚಟ್ನಿ, ಪುದೀನಾ ಚಟ್ನಿ, ಪುಡಿಸಕ್ಕರೆ,  2 ಸಣ್ಣ ಚಮಚ ಹುರಿದು ಪುಡಿ ಮಾಡಿದ ಜೀರಿಗೆ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಖಾರಾಸೇವೆ, ಖಾರಾಬೂಂದಿ.

ವಿಧಾನ : ಒಂದು ಬೇಸನ್ನಿಗೆ ರವೆ, ಮೈದಾ, ಓಮ, ಉಪ್ಪು, ತುಸು ನೀರು ಬೆರೆಸಿ ಗಟ್ಟಿಯಾದ ಹಿಟ್ಟು ಕಲಸಿಕೊಳ್ಳಿ. ಇದಕ್ಕೆ ತುಸು ತುಪ್ಪ ಬೆರೆಸಿ ನಾದಿಕೊಂಡು ಅರ್ಧ ಗಂಟೆ ನೆನೆಯಲು ಬಿಡಿ. ಇದರಿಂದ ದಪ್ಪ ಚಪಾತಿ ಲಟ್ಟಿಸಿ, ಪುಟ್ಟ ಸ್ಟೀಲ್ ಬಟ್ಟಲಿನಿಂದ ಗುಂಡಗೆ ಕತ್ತರಿಸಿ. ಹೀಗೆ ಒಂದಷ್ಟು ಮಾಡಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ತೆಳು ಬಟ್ಟೆಗೆ ಮೊಸರು ಹಾಕಿ ಕಟ್ಟಿ, 1-2 ತಾಸು ನೇತುಹಾಕಿ. ನಂತರ ಅದರ ತೇವಾಂಶ ಹೋದಾಗ, ಇದನ್ನು ಒಂದು ಬಟ್ಟಲಿಗೆ ಹಾಕಿ, ಮೇಲೆ ಪುಡಿಸಕ್ಕರೆ ಸೇರಿಸಿ ಕದಡಿಕೊಳ್ಳಿ. ಈಗ ಒಂದು ಟ್ರೇನಲ್ಲಿ ಪುಟ್ಟ ಪೂರಿ ಜೋಡಿಸಿಕೊಂಡು ಅದರ ಮೇಲೆ ಕಿವುಚಿದ ಆಲೂ, ಕಡಲೆ ಕಾಳು, ಹೆಚ್ಚಿದ ಈರುಳ್ಳಿ, ಕೊ.ಸೊಪ್ಪು, ಮೊಸರು, ಅದರ ಮೇಲೆ ಉಪ್ಪು, 2 ಬಗೆಯ ಚಟ್ನಿ, ಜೀರಿಗೆ, ಖಾರಾಸೇವೆ, ಖಾರಾಬೂಂದಿ ಉದುರಿಸಿ. ಹೀಗೆ ಸಿದ್ಧಗೊಂಡ ಸ್ಪೆಷಲ್ ಚಾಟ್‌ನ್ನು ಬಿಸಿ ಬಿಸಿ ಕಾಫಿ/ಟೀ ಜೊತೆ ಸವಿಯಲು ಕೊಡಿ.

ಮಾವಿನ ಹುಳಿ ತೊವ್ವೆ

ಸಾಮಗ್ರಿ : 1 ಹುಳಿ ಮಾವಿನಕಾಯಿ, ಅರ್ಧರ್ಧ ಕಪ್‌ ತೊಗರಿಬೇಳೆ, ಹೆಸರುಬೇಳೆ, 2 ಈರುಳ್ಳಿ, 5-6 ಎಸಳು ಬೆಳ್ಳುಳ್ಳಿ, 2 ಟೊಮೇಟೊ, 1 ತುಂಡು ಹಸಿಶುಂಠಿ, 2 ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಬೆಲ್ಲ, ಉದ್ದಕ್ಕೆ ಸೀಳಿದ ಹಸಿ ಮೆಣಸು, ಒಗ್ಗರಣೆಗೆ 5-6 ಚಮಚ  ತುಪ್ಪ, ಸಾಸುವೆ, ಜೀರಿಗೆ, ಉದ್ದಿನಬೇಳೆ, ಕರಿಬೇವು, 4-5 ಬ್ಯಾಡಗಿ ಒಣಮೆಣಸಿನಕಾಯಿ, ಹೆಚ್ಚಿದ ಕೊ.ಸೊಪ್ಪು.

ವಿಧಾನ : ಕುಕ್ಕರ್‌ನಲ್ಲಿ ಬೇಳೆ ಬೇಯಿಸಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಒಗ್ಗರಣೆ ಸಾಮಗ್ರಿ ಹಾಕಿ ಚಟಪಟಾಯಿಸಿ. ನಂತರ ಸಣ್ಣಗೆ ಹೆಚ್ಚಿದ ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಟೊಮೇಟೊ ಹಾಗೂ ಮಾವಿನ ತುರಿ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಬೆಂದ ಬೇಳೆ (ನೀರು ಸಮೇತ) ಸೇರಿಸಿ, ಉಪ್ಪು, ಖಾರ, ಬೆಲ್ಲ, ಅರಿಶಿನ ಇತ್ಯಾದಿ ಬೆರೆಸಿ ಕುದಿಸಬೇಕು. ಕೆಳಗಿಳಿಸಿದ ಮೇಲೆ ಹೆಚ್ಚಿದ ಕೊ.ಸೊಪ್ಪು ಹಾಕಿ ಬಿಸಿಬಿಸಿಯಾಗಿ ಅನ್ನ, ಚಪಾತಿ ಜೊತೆ ಸವಿಯಲು ಕೊಡಿ.

 

ಪಿಕಲೀ ಚನಾ ಮಸಾಲ

ಮೂಲ ಸಾಮಗ್ರಿ : 2 ಕಪ್‌ ಬೆಂದ ಕಾಬೂಲ್‌ ಕಡಲೆಕಾಳು, 2 ಈರುಳ್ಳಿ, 2 ಟೊಮೇಟೊ, ಅರ್ಧ ಸೌಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅಮ್ಚೂರ್‌ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗಸಗಸೆ ಪೇಸ್ಟ್, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಒಗ್ಗರಣೆಗೆ ಜೀರಿಗೆ, ಕರಿಬೇವು.

ಪಿಕಲ್ ಸ್ಪೈಸ್‌ ಸಾಮಗ್ರಿ : ಧನಿಯಾ, ಸೋಂಪು, ಸಾಸುವೆ, ಕಾಳುಮೆಣಸು (ತಲಾ ಅರ್ಧರ್ಧ ಚಮಚ).

ವಿಧಾನ : ಮೇಲಿನ ಸಾಮಗ್ರಿ ಹುರಿದುಕೊಂಡು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಹೆಚ್ಚಿದ ಈರುಳ್ಳಿ, ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗಸಗಸೆ ಪೇಸ್ಟ್ ಹಾಕಿ ಕೆದಕಿ, ಉಪ್ಪು, ಖಾರ, ಅಮ್ಚೂರ್‌ ಪುಡಿ, ಅರಿಶಿನ ಸೇರಿಸಿ. ಆಮೇಲೆ ಬೆಂದ ಕಡಲೆಕಾಳು ನೀರು ಸಮೇತ ಹಾಕಿ, ಪಿಕಲೀ ಮಸಾಲ ಹಾಕಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈಯಾಡಿಸಿ. ಗ್ರೇವಿ ಕುದ್ದು ಗಟ್ಟಿಯಾದಾಗ ಕೆಳಗಿಳಿಸಿ, ಹೆಚ್ಚಿದ ಕೊ.ಸೊಪ್ಪು ಉದುರಿಸಿ ಬಿಸಿಬಿಸಿಯಾಗಿ ಪೂರಿ, ಚಪಾತಿ ಜೊತೆ ಸವಿಯಲು ಕೊಡಿ.

ಪಾನ್‌ ಮಾಕ್‌ಟೇಲ್

ಸಾಮಗ್ರಿ : ಹೆಚ್ಚು ಘಾಟು ಇರದ 3-4 ವೀಳ್ಯದೆಲೆ (ಸಣ್ಣದಾಗಿ ಹೆಚ್ಚಿಡಿ), ಅಗತ್ಯವಿದ್ದಷ್ಟು ನಿಂಬೆರಸ, ಸಕ್ಕರೆ, ಪುಡಿಐಸ್‌, 500 ಮಿಲಿ ಸ್ಪ್ರೈಟ್‌, ಅರ್ಧ ಸಣ್ಣ ಚಮಚ ಕ್ರಶ್ಡ್ ಸೋಂಪು, 1 ದೊಡ್ಡ ಚಮಚ ಮೌತ್‌ ಫ್ರೆಶ್‌ನರ್‌, ಅಲಂಕರಿಸಲು ಒಂದು ವೀಳ್ಯದೆಲೆ.

ವಿಧಾನ : ಒಂದು ಬಟ್ಟಲಿಗೆ ಹೆಚ್ಚಿದ ವೀಳ್ಯದೆಲೆ, ಕ್ರಶ್ಡ್ ಸೋಂಪು, ನಿಂಬೆರಸ, ಸಕ್ಕರೆ, ಪುಡಿ ಐಸ್‌ ಸೇರಿಸಿ ಚೆನ್ನಾಗಿ ಕದಡಿಕೊಳ್ಳಿ. ಇದು ಚೆನ್ನಾಗಿ ಮಿಕ್ಸ್ ಆದಾಗ, ಇದನ್ನು 2-3 ಗ್ಲಾಸುಗಳಿಗೆ ಬಗ್ಗಿಸಿ. ಇದರ ಮೇಲೆ ಇನ್ನಷ್ಟು ಪುಡಿಐಸ್‌ ಹಾಕಬೇಕು. ಇದರ ಮೇಲೆ ಈಗ ಸ್ಪ್ರೈಟ್‌ ಸುರಿಯಿರಿ. ಕೊನೆಯಲ್ಲಿ ಮೌತ್‌ ಫ್ರೆಶ್‌ನರ್‌, ದೊಡ್ಡ ವೀಳ್ಯದೆಲೆಯನ್ನು ಪ್ರತಿ ಗ್ಲಾಸಿಗೂ ಹಾಕಿ ಊಟಕ್ಕೆ ಮೊದಲು ಸವಿಯಲು ಕೊಡಿ.

ಆಲೂ ಬಾಳೆಯ ಕಬಾಬ್

ಸಾಮಗ್ರಿ : 1 ಕಿಲೋ ಬಾಳೇಕಾಯಿ, 300 ಗ್ರಾಂ ಆಲೂ, 7-8 ಹಸಿಮೆಣಸು, ಅರ್ಧರ್ಧ ಚಮಚ ಜೀರಿಗೆ, ಬಿಳಿ ಮೆಣಸು, ಸೋಂಪು, ಧನಿಯಾಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ ಗರಂಮಸಾಲ, ಚಾಟ್‌ಮಸಾಲ, ಅಮ್ಚೂರ್‌ಪುಡಿ, ಒಂದಿಷ್ಟು ಹೆಚ್ಚಿದ ಶುಂಠಿ ಕರಿಬೇವು, ಕೊ.ಸೊಪ್ಪು, ಮಸೆದ ಖೋವಾ, ಅರ್ಧ ಸೌಟು ಎಣ್ಣೆ, 100 ಗ್ರಾಂ ಏಪ್ರಿಕಾಟ್ಸ್.

ವಿಧಾನ :  ಬಾಳೇಕಾಯಿ, ಆಲೂ ಸೇರಿಸಿ ಕುಕ್ಕರ್‌ನಲ್ಲಿ ಬೇಯಿಸಿಕೊಂಡು, ಅದರ ಸಿಪ್ಪೆ ಸುಲಿದು ಚೆನ್ನಾಗಿ ಮಸೆದಿಡಿ. ಏಪ್ರಿಕಾಟ್ಸ್ ನ್ನು ನೀರಲ್ಲಿ ನೆನೆಹಾಕಿ, ಸಣ್ಣಗೆ ತುಂಡರಿಸಿ. ಇದಕ್ಕೆ ಖೋವಾ ಬೆರೆಸಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಸೋಂಪಿನ ಒಗ್ಗರಣೆ ಕೊಡಿ. ಆಮೇಲೆ ಇದಕ್ಕೆ ಪುಡಿ ಮಾಡಿದ ಬಿಳಿ ಮೆಣಸು, ಧನಿಯಾಪುಡಿ, ಉಪ್ಪು, ಖಾರ, ಉಳಿದ ಮಸಾಲೆ, ಹೆಚ್ಚಿದ ಶುಂಠಿ, ಹಸಿ ಮೆಣಸು ಹಾಕಿ ಬೇಗ ಬೇಗ ಕೆದಕಬೇಕು. ನಂತರ ಮಸೆದ ಆಲೂ ಮಿಶ್ರಣ ಸೇರಿಸಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಕೆದಕಿ ಕೆಳಗಿಳಿಸಿ. ಇದಕ್ಕೆ ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು. ತುಸು ಆರಿದ ನಂತರ ಉಂಡೆ ಮಾಡಿ ಚಿತ್ರದಲ್ಲಿರುವಂತೆ ಟಿಕ್ಕಿ ತರಹ ತಟ್ಟಿಕೊಳ್ಳಿ ಇದರ ಮಧ್ಯೆ ತುಸು ಖೋವಾ ಮಿಶ್ರಣ ತುಂಬಿಕೊಳ್ಳುವಂತೆ ಒತ್ತಬೇಕು. ನಂತರ ಅಳ್ಳಕ ತವಾ ಬಳಸಿ, ಟಿಕ್ಕಿಗಳಾಗಿ ಇವನ್ನು ಶ್ಯಾಲೋ ಫ್ರೈ ಮಾಡಿ. ಇದರ ಮೇಲೆ ಟೊಮೇಟೊ ಸಾಸ್‌ ಸವರಿ, ಬಿಸಿ ಕಾಫಿ/ಟೀ ಜೊತೆ ಸವಿಯಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ