ಇಂದಿನ ಯಾಂತ್ರಿಕ ಜೀವನದಲ್ಲಿ ನಗರದ ಬದುಕು ವಿಭಿನ್ನವಾಗಿದೆ. ಇಂತಹ ವ್ಯಸ್ತ ಜೀವನ ಶೈಲಿಯಲ್ಲಿ ಡೇಟಿಂಗ್ ಹೊರಡುವುದು ಸಹಜ, ಸಾಮಾನ್ಯ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣವೇ…….?

ಇಂದಿನ ವ್ಯಸ್ತ ಜೀವನಶೈಲಿಯಲ್ಲಿ ಪ್ರೀತಿಯ ದಾರಿಯಲ್ಲಿ ಕಾಲಿಡುವ ಯುವಕಯುವತಿಯರು ಎಲ್ಲಕ್ಕೂ ಮುಂಚೆ ಪರಸ್ಪರರ ಬಗ್ಗೆ ತಿಳಿದು ಕೊಳ್ಳಲು ಉತ್ಸುಕರಾಗಿರುತ್ತಾರೆ. ಅದಕ್ಕಾಗಿ ಅವರು ಡೇಟ್‌ಗೆ ಹೋಗಲು ಯೋಜನೆ ಮಾಡುತ್ತಾರೆ. ಅಂದಹಾಗೆ ಯಾವುದೇ ಪ್ರೀತಿಭರಿತ ಸಂಬಂಧಗಳನ್ನು ಪೂರ್ತಿಗೊಳಿಸಲು ಕೆಲವು ಮಾತುಕತೆಗಳು ಅತ್ಯವಶ್ಯ. ಈ ಮಾತುಕತೆಗಳೇ ನಿಮ್ಮ ಮುಂದಿನ ಜೀವನ ಹೇಗಿರಬಹುದು ಎಂಬುದನ್ನು ನಿರ್ಧರಿಸಬಹುದು.

`ಲೈಫ್‌ ಇನ್‌ ಮೆಟ್ರೋ’ದ ನಾಯಕ ಇರ್ಫಾನ್‌ ಖಾನ್‌ ಮತ್ತು ಕೊಂಕಣಾ ಸೇನ್‌ ಪ್ಲಾನ್‌ ಮಾಡಿಕೊಂಡು ಮೊದಲ ಡೇಟ್‌ನಲ್ಲಿ ಭೇಟಿಯಾಗುತ್ತಾರೆ. ಆದರೆ ಆ ಭೇಟಿಯಲ್ಲಿ ಇರ್ಫಾನ್‌ ಖಾನ್‌ ದೃಷ್ಟಿ ಕೊಂಕಣಾ ಸೇನ್‌ಗಿಂತ ಹೆಚ್ಚಾಗಿ ಅವಳ ಬಟ್ಟೆ ಹಾಗೂ ಮೈಮಾಟದ ಮೇಲೆಯೇ ಇರುತ್ತದೆ. ಅದನ್ನು ಕಂಡು ಕೊಂಕಣಾಳ ಮೂಡ್‌ ಹಾಳಾಗಿ ಹೋಗುತ್ತದೆ. ಆಗಲೇ ಅವಳು ಅವನು ಹೇಗಿರಬಹುದು ಎಂದು ಯೋಚಿಸಲಾರಂಭಿಸುತ್ತಾಳೆ. ನನ್ನ ಬಟ್ಟೆ ಹಾಗೂ ಮೈಮಾಟದ ಬಗೆಗಷ್ಟೇ ಇವನ ಗಮನವಿದೆ. ಹೀಗಾಗಿ ಕೊಂಕಣಾಗೆ ಡೇಟ್‌ ಇಷ್ಟ ಆಗುವುದೇ ಇಲ್ಲ. ಇಂತಹದರಲ್ಲಿ ನಿಮ್ಮ ಡೇಟಿಂಗ್‌ನ್ನು ಸ್ಮರಣಾರ್ಹಗೊಳಿಸಿಕೊಳ್ಳಬೇಕೆಂದರೆ, ಕೆಲವು ಸಂಗತಿಗಳನ್ನು ಅರ್ಥ ಮಾಡಿಕೊಳ್ಳಿ. ಇವು ನಿಮ್ಮನ್ನು ಪ್ರೀತಿಯ ಉತ್ತುಂಗಕ್ಕೆ ಏರಿಸುತ್ತವೆ ಹಾಗೂ ಕೆಲವೇ ಸಲದ ಮಾತುಕತೆಯಲ್ಲಿ ನಿಕಟತೆಯೂ ಹೆಚ್ಚುವಂತೆ ಮಾಡುತ್ತದೆ.

ಡೇಟಿಂಗ್‌ ಏಕೆ ಅತ್ಯವಶ್ಯ?

ಮನೋಚಿಕಿತ್ಸಕಿ ಪ್ರಜ್ಞಾ ಹೀಗೆ ಹೇಳುತ್ತಾರೆ, ವಿರುದ್ಧ ಲಿಂಗದ ವ್ಯಕ್ತಿ ಜೊತೆ ಮಾತುಕತೆ ನಡೆಸುವುದೆಂದರೆ ಅದು ಯಾರಿಗೇ ಆದರೂ ರೋಮಾಂಚನ ಉಂಟುಮಾಡುತ್ತದೆ. ಡೇಟಿಂಗ್‌ ತನ್ನ ದೈನಂದಿನ ಕೆಲಸದಿಂದ ಹೊರಬಂದ ವ್ಯಕ್ತಿಯೊಬ್ಬನಿಗೆ ಜೀವನದಲ್ಲಿ ಸ್ಪಾರ್ಕ್‌ನ ರೀತಿಯಲ್ಲಿ ಕೆಲಸ ಮಾಡುತ್ತದೆ.

ಇದರಿಂದಲೇ ಒಳ್ಳೆಯ ಫೀಲಿಂಗ್ಸ್  ಬರಲಾರಂಭಿಸುತ್ತದೆ. ನೀವು ಕೇವಲ ನಿಮ್ಮ ಬಗೆಗಷ್ಟೇ ಗಮನ ಕೊಡುವುದಿಲ್ಲ. ನಿಮ್ಮ ಪೋಷಾಕು, ವರ್ತನೆಯ ಬಗೆಗೂ ಗಮನ ಕೊಡಲು ಶುರು ಮಾಡುವಿರಿ. ಅಂದಹಾಗೆ, ನಮ್ಮಲ್ಲೊಂದು ಸೆಕ್ಷುಯಲ್ ಎನರ್ಜಿ ಇರುತ್ತದೆ. ಅದು ಮೈಮನಸ್ಸಿನಲ್ಲಿ ರೋಮಾಂಚನವನ್ನು ಉಂಟು ಮಾಡುತ್ತದೆ. ನಾವು ಯಾರೊಂದಿಗಾದರೂ ಭೇಟಿ ಆಗಬೇಕೆಂದಿದ್ದರೆ, ಮನಸ್ಸಿನಲ್ಲಿ ಎಂತಹ ಭಾವನೆ ತುಂಬುತ್ತದೆ ಎಂದರೆ, ಅದನ್ನು ಶಬ್ದಗಳಲ್ಲಿ ವರ್ಣಿಸಲು ಆಗದು. ನಾನು ಇನ್ನೊಬ್ಬರಿಗೆ ಎಷ್ಟೊಂದು ಇಂಪಾರ್ಟೆಂಟ್‌ ಆಗಿರುವೆ, ಆ ಕಾರಣದಿಂದ ಅವರು ನನ್ನನ್ನು ಭೇಟಿಯಾಗಲು ಉತ್ಸುಕರಾಗಿದ್ದಾರೆ ಎಂದು ಅವರಿಗೆ ಅನಿಸತೊಡಗುತ್ತದೆ. ಡೇಟಿಂಗ್‌ ನಮಗೆ ಸಾಮಾಜಿಕ ಶಿಷ್ಟಾಚಾರಗಳನ್ನು ಕಲಿಸುತ್ತದೆ.

ಹುಮ್ಮಸ್ಸಿನಿಂದ ಡೇಟಿಂಗ್‌ ಮಾಡಿ

ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಡೇಟಿಂಗ್‌ಗೆ ಹೋಗುತ್ತಿರಬಹುದು, ಇಲ್ಲಿ ಫ್ರೆಂಡ್‌ಶಿಪ್‌ಗಾಗಿ ಡೇಟಿಂಗ್‌ಗೆ ಹೋಗುವುದು ಒಂದು ವಿಶಿಷ್ಟ ಅನುಭವ ನೀಡುತ್ತದೆ. ಇದರ ಮುಖಾಂತರ ಪರಸ್ಪರರನ್ನು ಅರಿತುಕೊಳ್ಳಲು ಸಹಾಯವಾಗುತ್ತದೆ.

ಮೊದಲ ಡೇಟ್

ಡೇಟ್‌ಗೆ ಹೋಗುವುದೆಂದರೆ ಅದೊಂದು ಬಹುದೊಡ್ಡ ಟಾಸ್ಕ್ ಗಿಂತ ಕಡಿಮೆ ಏನಿಲ್ಲ. ಅದು ಹುಡುಗ ಅಥವಾ ಹುಡುಗಿಗೆ ಮಹತ್ವದ ಕ್ಷಣವೇ ಆಗಿರುತ್ತದೆ. ಮೊದಲನೆ ಸಲ ಡೇಟ್‌ಗೆ ಹೋಗುವುದಾಗಿದ್ದರೆ, ಅದನ್ನು ಮತ್ತಷ್ಟು ಸ್ಮರಣಾರ್ಹವಾಗಿಸಲು ಅದು ಇನ್ನಷ್ಟು ಅತ್ಯವಶ್ಯವಾಗಿರುತ್ತದೆ. ನೀವು ಎಂತಹದೊಂದು ಪ್ರಭಾವ ಮೂಡಲು ಪ್ರಯತ್ನಿಸಬೇಕೆಂದರೆ, ಎದುರಿನ ವ್ಯಕ್ತಿ ನಿಮ್ಮನ್ನು ಮತ್ತೊಮ್ಮೆ ಭೇಟಿಯಾಗಲು ಕಾತುರನಾಗಿರಬೇಕು. ಕೆಲವು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಿ:

– ವೇಳೆ ಹಾಗೂ ಸ್ಥಳವನ್ನು ಮೊದಲೇ ನಿರ್ಧರಿಸಿಕೊಳ್ಳಿ. ನಿಗದಿತ ಸಮಯಕ್ಕಿಂತ ಮುಂಚೆಯೇ ಅಲ್ಲಿಗೆ ತಲುಪಿ.

– ಮೊದಲ ಸಲ ಡೇಟಿಂಗ್‌ಗೆ ಹೋಗುತ್ತಿರುವಿರಿ ಎಂದಾದರೆ ಹೆಚ್ಚು ಪ್ರಖರ ಬಟ್ಟೆಗಳನ್ನು ಧರಿಸದೆ, ಸಿಂಪಲ್ ಸೋಬರ್‌ ಪೋಷಾಕುಗಳನ್ನು ಧರಿಸಿ. ಮೇಕಪ್‌ ಕೂಡ ಸಿಂಪಲ್ ಆಗಿರಲಿ.

– ಮೊದಲ ಸಲ ಸಂಗಾತಿಯನ್ನು ಭೇಟಿ ಆಗಲು ಹೋಗುತ್ತಿರುವಿರಾದರೆ, ಸಂಗಾತಿಗೆ ಒಂದು ಗಿಫ್ಟ್ ಒಯ್ಯಲು ಮರೆಯಬೇಡಿ.

– ಮೊದಲ ಡೇಟ್‌ ಬಗ್ಗೆ ಹೆಚ್ಚು ಎಕ್ಸೈಟ್‌ ಆಗಬೇಡಿ. ನಿಮ್ಮ ವರ್ತನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಅದರಲ್ಲಿ ಆಡಂಬರ ಬೇಡ.

ಡೇಟಿಂಗ್‌ನ್ನು ಯಶಸ್ವಿಗೊಳಿಸಲು ಡ್ರೆಸ್‌ನ ಆಯ್ಕೆ : ನೀವು ಎಂತಹ ಪೋಷಾಕುಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದರೆ, ಅದು ನಿಮ್ಮ ವ್ಯಕ್ತಿತ್ವಕ್ಕೆ ಮೆರುಗು ಕೊಡಬೇಕು. ಜೊತೆಗೆ ಅದು ನಿಮಗೆ ಕಂಫರ್ಟಬಲ್ ಕೂಡ ಅನಿಸಬೇಕು.

ಡೇಟಿಂಗ್‌ಗಾಗಿ ಸ್ಥಳ ಮತ್ತು ಸಮಯ : ಮೊದಲ ಸಲದ ಡೇಟ್‌ಗಾಗಿ ಸಾರ್ವಜನಿಕ ಸ್ಥಳವೊಂದನ್ನು ಆಯ್ಕೆ ಮಾಡಿ. ಏಕೆಂದರೆ ನೀವು ಅಲ್ಲಿ ಸಹಜ ಹಾಗೂ ಸುರಕ್ಷತೆಯ ಅನುಭೂತಿ ಮಾಡಿಕೊಳ್ಳಬೇಕು. ಮೊದಲ ಡೇಟಿಂಗ್‌ಗೆ ಹೆಚ್ಚು ಸಮಯ ವ್ಯಯಿಸಬೇಡಿ. ಸಾಧ್ಯವಾದರೆ ಮಧ್ಯಾಹ್ನದ ಊಟ ಅಥವಾ ರಾತ್ರಿ ಊಟಕ್ಕೆ ಸೇರಿ. ಇದರಿಂದ ಸಂಗಾತಿ ಸಮಯದ ಬಗೆಗಿನ ನಿಮ್ಮ ಮಹತ್ವವನ್ನು ಅರಿತುಕೊಳ್ಳಬಹುದು. ಮೊದಲ ಡೇಟ್‌ನಲ್ಲಿ ಬಂದ ಹೋಟೆಲ್ ಬಿಲ್‌ನ್ನು ಇಬ್ಬರೂ ಶೇರ್‌ ಮಾಡಿಕೊಳ್ಳಿ.

ಏನು ಮಾಡಬಾರದು?

ಡೇಟಿಂಗ್‌ನ್ನು ಕೇವಲ ಟೈಮ್ ಪಾಸ್‌ ಅಥವಾ ವೋಜು ಮಜಾ ಎಂದು ಭಾವಿಸಬೇಡಿ. ಅದರ ಬದಲಿಗೆ ಎದುರಿನ ವ್ಯಕ್ತಿಗೆ ನಿಮ್ಮನ್ನು ಅರಿತುಕೊಳ್ಳಲು ಅವಕಾಶ ಕೊಡಿ.

– ಡೇಟಿಂಗ್‌ ಸಂದರ್ಭದಲ್ಲಿ ಫ್ಲರ್ಟಿಂಗ್‌ ಬೇಡ.

– ಡೇಟಿಂಗ್‌ ಅವಧಿಯಲ್ಲಿ ಧೂಮಪಾನ, ಮಾದಕ ಪದಾರ್ಥಗಳ ಸೇವನೆ ಬೇಡ.

– ಮೊದಲ ಡೇಟಿಂಗ್‌ ಸಂದರ್ಭದಲ್ಲಿಯೇ ಹೆಚ್ಚು ನಿಕಟವಾಗುವ ಪ್ರಯತ್ನ ಮಾಡಬೇಡಿ.

– ಸಂಗಾತಿಯ ಯಾವುದಾದರೂ ಮಾತು ಇಷ್ಟವಾಗದಿದ್ದರೆ ಮೌನದಿಂದಿರಿ. ಯಾವುದೇ ಮಾತಿಗೂ ವಾದವಿವಾದ ಬೇಡ.

– ಮೊದಲೇ ದೈಹಿಕ ಸಂಪರ್ಕ ಬೇಡ.

– ಮೊದಲ ಡೇಟ್‌ ಸಂದರ್ಭದಲ್ಲಿ ನೀವಷ್ಟೇ ಮಾತನಾಡುತ್ತಿರಬೇಡಿ. ಅವರಿಗೂ ಒಂದಿಷ್ಟು ಮಾತನಾಡಲು ಅವಕಾಶ ಕೊಡಿ.

– ಡೇಟಿಂಗ್‌ ಇಂಟರ್‌ವ್ಯೂ ರೀತಿ ಆಗಬಾರದು ಹಾಗೂ ಹಾಸ್ಯ-ತಮಾಷೆ ಕೂಡ ನೋಡಿಕೊಂಡು ಮಾಡಿ.

ಸಂಗಾತಿ ಇಷ್ಟ ಆಗದೇ ಇದ್ದಾಗ….

ಯಾರನ್ನಾದರೂ ಭೇಟಿಯಾಗಲು ಹೋಗುವ ಮುಂಚೆ ನೀವು ಅವರ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿಯೇ ಹೋಗುತ್ತೀರಿ. ಆ ವ್ಯಕ್ತಿಯನ್ನು ಭೇಟಿ ಮಾಡಿದ ಬಳಿಕ ಅವರ ಲುಕ್‌, ವರ್ತನೆ ಹೇಗಿದೆ ಎಂಬುದರ ವಾಸ್ತವ ದರ್ಶನ ಅರಿವಾಗುತ್ತದೆ. ದೂರದಿಂದ ಎಲ್ಲರೂ ಒಳ್ಳೆಯವರೇ ಎನಿಸುತ್ತಾರೆ. ಒಂದು ವೇಳೆ ಸಂಗಾತಿ ಇಷ್ಟ ಆಗದಿದ್ದರೆ ಈ ಸಂಗತಿಗಳ ಬಗ್ಗೆ ಗಮನ ಕೊಡಿ.

ಫಸ್ಟ್ ಡೇಟ್‌ನ್ನು ಈಕ್ವಲ್ ಟು ಮದುವೆ ಎಂದು ಭಾವಿಸಬೇಡಿ. ಸಂಗಾತಿ ಇಷ್ಟ ಆಗದೇ ಇದ್ದಾಗ ಫ್ರೆಂಡ್‌ಶಿಪ್‌ ಅಷ್ಟೇ ಮುಂದುವರಿಸಬಹುದು.

– ಆ ವ್ಯಕ್ತಿ ಇಷ್ಟ ಆಗದೇ ಇದ್ದಾಗ, ಅವರೊಂದಿಗೆ ಸಮಯ ವ್ಯಯಿಸಬೇಡಿ.

– ಫಸ್ಟ್ ಡೇಟ್‌ ಇಷ್ಟವಾಗದೇ ಇದ್ದಾಗ ನಿಮ್ಮ ಅತೃಪ್ತಿಯನ್ನು ಅವರ ಮುಂದೆ ತೋರಿಸಿಕೊಳ್ಳಲು ಹೋಗಬೇಡಿ.

– ನೀವು ಯಾರೊಂದಿಗಾದರೂ ಮೊದಲ ಸಲ ಡೇಟಿಂಗ್‌ ಹೋಗುವ ಮುಂದೆ, ಆ ವ್ಯಕ್ತಿ ಹೇಗೆ ಎಂಬ ಬಗ್ಗೆ ಪರಿಚಿತರಿಂದ ಕೇಳಿ ತಿಳಿದುಕೊಳ್ಳಬಹುದು.

– ಕೆ. ವಾರಿಜಾ 

ಡೇಟಿಂಗ್‌ ರೋಮಾಂಚಕಾಗಿರಲಿ…

– ಲಾಂಗ್‌ ಡ್ರೈವ್‌ : ಯುವಕ-ಯುವತಿಯರಲ್ಲಿ ಲಾಂಗ್‌ ಡ್ರೈವ್ ನ ಕ್ರೇಜ್‌ ಹೆಚ್ಚಾಗಿರುತ್ತದೆ. ನಿಮಗೆ ಇಷ್ಟವಾಗುವ ಸ್ಥಳಕ್ಕೆ ಇಬ್ಬರೂ ಲಾಂಗ್‌ ಡ್ರೈವ್‌ ಕೂಡ ಹೋಗಬಹುದು.

– ಸಿನಿಮಾ/ಪಾರ್ಕ್‌ : ಡೇಟಿಂಗ್‌ಗಾಗಿ ಸಿನಿಮಾ ನೋಡಲು ಹೋಗಬಹುದು. ಪಾರ್ಕ್‌ನಲ್ಲಿ ಕುಳಿತುಕೊಳ್ಳಬಹುದು.

– ವಿನೂತನ ಉಪಾಯ : ಡೇಟಿಂಗ್‌ನ್ನು ರೋಮಾಂಚಕಗೊಳಿಸಲು ಬೋಟಿಂಗ್‌, ಫಿಶಿಂಗ್‌ ಅಥವಾ ಮತ್ತೆ ಯಾವುದಾದರೂ ಉಪಾಯ ಶೋಧಿಸಬಹುದು.

– ವಿಂಡೋ ಶಾಪಿಂಗ್‌ : ನೀವು ಮತ್ತು ಸಂಗಾತಿ ಡೇಟಿಂಗ್‌ನ ಒಂದು ಭಾಗವೆಂಬಂತೆ ಶಾಪಿಂಗ್‌ ಕೂಡ ಮಾಡಬಹುದು.

– ಗೆಟ್‌ ಟು ಗೆದರ್‌ : ಯಾರ ಬಗೆಗಾದರೂ ಚೆನ್ನಾಗಿ ತಿಳಿದುಕೊಳ್ಳಬೇಕೆಂದರೆ, ಗೆಟ್‌ ಟು ಗೆದರ್‌ ಏರ್ಪಡಿಸಬೇಕು. ನಿಮ್ಮ ಸಂಗಾತಿಗೆ ಹೆಚ್ಚು ಕಂಫರ್ಟಬಲ್ ಅನಿಸಲು ಮನೆಯಲ್ಲಿಯೇ ಒಂದು ಗೆಟ್‌ ಟು ಗೆದರ್‌ ಅಥವಾ ಕ್ಯಾಂಡಲ್ ಡಿನ್ನರ್‌ ಏರ್ಪಡಿಸಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ