ಉತ್ತಮ ಕೂದಲು ಹೊಂದಬೇಕೆಂದು ಬೇರೆ ಬೇರೆ ವಿಧದಲ್ಲಿ ನಾವು ಪ್ರಯೋಗ ಮಾಡುತ್ತೇವೆ. ಅದರ ಬದಲಿಗೆ ಸೂಕ್ತ ಹೋಮ್ ಮೇಡ್ ಹೇರ್ ಮಾಸ್ಕ್ ಬಳಸಿ ಕೇಶ ಸೌಂದರ್ಯಕ್ಕೆ ಪೂರಕವಾಗಿ ಮಾಡಿಕೊಂಡರೆ ಒಳ್ಳೆಯದಲ್ಲವೇ……..?
ಪ್ರಸ್ತುತ ಮಾರುಕಟ್ಟೆಯಲ್ಲಿ ಕೂದಲಿನ ಟ್ರೀಟ್‌ಮೆಂಟ್‌ಗಾಗಿ ಎಷ್ಟೋ ಬಗೆಯ ಹೇರ್ ಮಾಸ್ಕ್ ಲಭ್ಯವಿವೆ. ಆದರೆ ಅವು ಅತಿ ದುಬಾರಿ ಮಾತ್ರವಲ್ಲದೆ, ಅವುಗಳಲ್ಲಿ ಅತ್ಯಧಿಕ ಕೆಮಿಕಲ್ಸ್ ಸಹ ಬೆರೆತಿರುತ್ತವೆ. ಈ ಅಂಶ ಖಂಡಿತಾ ಕೂದಲಿಗೆ ಹಾನಿ ಮಾಡುತ್ತದೆ. ಇಂಥ ಸಂದರ್ಭದಲ್ಲಿ ಮನೆಯಲ್ಲೇ ತಯಾರಿಸಬಹುದಾದ ಹೇರ್ ಮಾಸ್ಕ್ ಬಲು ಉಪಕಾರಿ. ಈ ಕುರಿತಾಗಿ ತಜ್ಞೆಯರ ಸಲಹೆ ಪಡೋಣ.
ಕೂದಲಿನ ಪ್ರಕಾರ ತಿಳಿದುಕೊಳ್ಳಿ
ಯಾವುದೇ ಬಗೆಯ ಹೇರ್ ಮಾಸ್ಕ್ ಆರಿಸಿಕೊಳ್ಳುವ ಮೊದಲು ನಿಮ್ಮ ಕೂದಲು ಯಾವ ಪ್ರಕಾರದ್ದು ಎಂದು ಖಾತ್ರಿಪಡಿಸಿಕೊಳ್ಳಿ. ಕೂದಲು ಮುಖ್ಯವಾಗಿ 3 ಬಗೆಯವು ಡ್ರೈ ಹೇರ್, ಆಯ್ಲಿ ಹೇರ್, ನಾರ್ಮಲ್ ಹೇರ್.
ಡ್ರೈ ಮತ್ತು ಸೀಳು ಕೂದಲಿಗೆ ಕಾರಣಗಳು
– ಕೂದಲನ್ನು ಸುರಕ್ಷಿತವಾಗಿ ಇಡುವಂಥ ಪ್ರೊಟೆಕ್ಟಿವ್ ಕ್ಯುಟಿಕಲ್ಸ್, ಕಡಿಮೆ ಅಥವಾ ಮುಗಿದೇ ಹೋದಾಗ ಅಥವಾ ಕೂದಲಿನ ನ್ಯಾಚುರಲ್ ಆಯಿಲ್ ಸ್ಕಾಲ್ಪ್ ನಿಂದ ಕೂದಲಿನ ತುದಿಯವರೆಗೂ ತಲುಪಲು ಆಗದಿದ್ದಾಗ, ಕೂದಲಿನ ತುದಿ ತುಂಬಾ ಡ್ರೈ ಆಗಿ ಎರಡಾಗಿ ಸೀಳಿಹೋಗುತ್ತದೆ.
– ಸ್ಟ್ರಾಂಗ್ ಹೇರ್ ಕಲರ್ ಹೇರ್ ಡ್ರೈಯರ್‌ನ ಸತತ ಬಳಕೆ, ಅತಿ ಹೆಚ್ಚಿನ ಬಿಸಿಲು, ಶುಷ್ಕ ಹವೆಯ ಒಡನಾಟ, ಜೋರಾಗಿ ಬಾಚಣಿಗೆಯಿಂದ ಕೂದಲನ್ನು ಎಳೆದು ಸಿಕ್ಕು ಬಿಡಿಸುವಿಕೆ ಇತ್ಯಾದಿಗಳಿಂದಾಗಿ ಕೂದಲಿನ ನ್ಯಾಚ್ಯುರಲ್ ಆಯಿಲ್ ಖಾಲಿಯಾಗುತ್ತದೆ. ಹೀಗಾಗಿ ಸೀಳು ತುದಿಯ ಕೂದಲು ಹೆಚ್ಚುತ್ತದೆ.
– ಮೆಟಾಲಿಕ್ ಕೂಂಬ್ ಬಳಕೆ, ಒದ್ದೆ ಕೂದಲನ್ನು ಬಾಚುವಿಕೆ, ಬಹಳ ಹೊತ್ತು ಒದ್ದೆ ಕೂದಲಿಗೆ ಟವೆಲ್ ಸುತ್ತಿಕೊಂಡಿರುವಿಕೆ, ಒದ್ದೆ ಕೂದಲನ್ನು ತಲೆ ಬಗ್ಗಿಸಿ ರಪರಪನೆ ಬಾರಿಸುವಿಕೆ ಇತ್ಯಾದಿಗಳಿಂದ ಸೀಳು ತುದಿಯ ಕೂದಲು ಹೆಚ್ಚುತ್ತದೆ.
– ಮಲಗುವಾಗ ದಿಂಬಿಗೆ ಸ್ಯಾಟಿನ್ ಪಿಲ್ಲೋ ಕವರ್ ಬಳಸಬೇಡಿ. ಇದೂ ಸೀಳು ತುದಿಗೆ ಕಾರಣ.
– ಆಹಾರದಲ್ಲಿ ಪೌಷ್ಟಿಕತೆಯ ಕೊರತೆಯೂ ಕೂದಲು ಡ್ಕೈ ಆಗಲು, ಸೀಳು ತುದಿ ಮೂಡಲು ಕಾರಣ.
– ತಲೆಗೆ ಸದಾ ಬಿಗಿಯಾದ ಸ್ಕಾರ್ಫ್ ಅಥವಾ ಟೇಪು ಕಟ್ಟಿರುವುದು ಕೂಡ ಈ ಸಮಸ್ಯೆಗೆ ಒಂದು ಕಾರಣ ಎನ್ನಬಹುದು.
– ಹೆಚ್ಚು ಹೇರ್‌ಪಿನ್ ಬಳಕೆಯೂ ಕೂದಲ ಹಾನಿಗೆ ಮೂಲ.
ಡ್ರೈ ಕೂದಲನ್ನು ಆರೋಗ್ಯಕರವಾಗಿಸಲು ಕೆಳಗಿನ ಹೋಮ್ ಮೇಡ್ ಹೇರ್ ಮಾಸ್ಕ್ ಬಳಸಬಹುದು :
ಫ್ರೂಟ್ ಮಾಸ್ಕ್ : ಡ್ರೈ ಸ್ಪ್ಲಿಟ್ ಹೇರ್‌ಗೆ ಪರಂಗಿ ಹಣ್ಣಿನ ಮಾಸ್ಕ್ ಉತ್ತಮ ಪರಿಹಾರ. ಇದಕ್ಕಾಗಿ ಮಾಗಿದ ಪುಟ್ಟ ಪರಂಗಿಹಣ್ಣಿನ ಸಿಪ್ಪೆ ಹೆರೆದು, ಹೋಳನ್ನು ಮಿಕ್ಸಿಯಲ್ಲಿ ಮೊಸರಿನೊಂದಿಗೆ ಪೇಸ್ಟ್ ಮಾಡಿ. ಇದನ್ನು ನಾವು ತಲೆಗೂದಲಿಗೆ ಮೆಹಂದಿ ಹಚ್ಚುವಂತೆ ಹಚ್ಚಿಕೊಂಡು 45 ನಿಮಿಷಗಳ ನಂತರ ತಣ್ಣೀರಿನಲ್ಲಿ ತೊಳೆಯಿರಿ.
ಕ್ರೀಂ ಟಾನಿಕ್ ಮಾಸ್ಕ್ : ಅರ್ಧ ಕಪ್ ಹಾಲಿಗೆ 2 ಚಮಚ ಫ್ರೆಶ್ ಕ್ರೀಂ ಬೆರೆಸಿ ಚೆನ್ನಾಗಿ ಕದಡಿಕೊಳ್ಳಿ. ಇದನ್ನು ಕೂದಲಿಗೆ ಹಚ್ಚಿಕೊಂಡು 30 ನಿಮಿಷಗಳ ನಂತರ ತಣ್ಣೀರಿನಲ್ಲಿ ತೊಳೆಯಿರಿ.
ಆಲಿವ್ ಎಗ್ ಮಾಸ್ಕ್ : ಆಲಿವ್ ಆಯಿಲ್ ಮತ್ತು ಮೊಟ್ಟೆಯ ಹಳದಿ ಭಾಗವನ್ನು ಚೆನ್ನಾಗಿ ಬೆರೆಸಿಕೊಂಡು ಕೂದಲಿಗೆ ನೀಟಾಗಿ ಸವರಬೇಕು. 1 ಗಂಟೆ ಬಿಟ್ಟು ಹರ್ಬಲ್ ಶ್ಯಾಂಪೂ ಬಳಸಿ ಬಿಸಿ ನೀರಿನಲ್ಲಿ ತಲೆಗೂದಲನ್ನು ತೊಳೆಯಿರಿ. ಇದಾದ ಮೇಲೆ ಕೂದಲಿಗೆ ಕಂಡೀಶನರ್ ಬಳಸಿರಿ.
ಬೀರ್ ಮಾಸ್ಕ್ : ಡ್ರೈ, ನಾರ್ಮಲ್ ಹೇರ್ ಎರಡಕ್ಕೂ ಇದನ್ನು ಬಳಸಬಹುದು. ಕೂದಲಿಗೆ ಸಂಪೂರ್ಣ ರಕ್ಷಣೆ ನೀಡಲು, ಮೊಟ್ಟೆಯ ಬಿಳಿ ಭಾಗಕ್ಕೆ ತುಸು ಬೀರ್ ಬೆರೆಸಿ ಗೊಟಾಯಿಸಿ. ಇದನ್ನು ತಲೆಗೆ ಹಚ್ಚಿ 30 ನಿಮಿಷಗಳ ನಂತರ, ಹರ್ಬಲ್ ಶ್ಯಾಂಪೂನಿಂದ ಬಿಸಿ ನೀರು ಬಳಸಿ ತಲೆ ತೊಳೆಯಿರಿ.
ತೆಂಗಿನ ಮಾಸ್ಕ್ : ಈ ಮಾಸ್ಕ್ ನಲ್ಲಿ ಕೂದಲಿಗೆ ಮಾಯಿಶ್ಚರೈಸೇಷನ್‌ಗೆ ಅಗತ್ಯವಿರುವ ಅಂಶಗಳಿದ್ದು, ಕೂದಲನ್ನು ಮೃದುಗೊಳಿಸಿ, ಹೊಳೆ ಹೊಳೆಯುವಂತೆ ಮಾಡುತ್ತದೆ. ಕೊಬ್ಬರಿ ಎಣ್ಣೆಗೆ ಹಿಪ್ಪೆ ಎಣ್ಣೆ (ಆಲಿವ್ ಆಯಿಲ್) ಬೆರೆಸಿ ಕೂದಲಿನ ಬುಡಕ್ಕೆ ಚೆನ್ನಾಗಿ ತಿಕ್ಕಿ, ಅದರ ತುದಿಯವರೆಗೂ ಮಸಾಜ್ ಮಾಡಿ. ನಂತರ ಕೂದಲನ್ನು 1 ಗಂಟೆ ಕಾಲ ಕವರ್ ಮಾಡಿ. ಆಮೇಲೆ ಶ್ಯಾಂಪೂ, ಕಂಡೀಶನರ್ ಹಾಕಿ ತಲೆ ತೊಳೆಯಿರಿ.
ಬಾಳೆಕ್ರೀಂ ಮಾಸ್ಕ್ : ಈ ಮಾಸ್ಕ್ ದುರ್ಬಲ ಹಾಗೂ ಶುಷ್ಕ ಕೂದಲಿಗೆ ಹೊಸ ಜೀವ ನೀಡುತ್ತದೆ. ಇದು ಕೂದಲಿನ ಬುಡವನ್ನು ಹಾನಿಯಿಂದ ರಕ್ಷಿಸಿ, ಕೂದಲನ್ನು ಸಶಕ್ತಗೊಳಿಸುತ್ತದೆ. ಬಾಳೆಹಣ್ಣಿನ ಕಬ್ಬಿಣಾಂಶ ಮತ್ತು ವಿಟಮಿನ್ಸ್ ಕೂದಲಿಗೆ ಪೋಷಣೆ ಒದಗಿಸುತ್ತವೆ.
ಇದನ್ನು ತಯಾರಿಸಲು ಮಾಗಿದ 2 ಬಾಳೆಹಣ್ಣುಗಳನ್ನು ಮಿಕ್ಸಿಯಲ್ಲಿ ಪೇಸ್ಟ್ ಮಾಡಿಡಿ. ಆಮೇಲೆ ಇದಕ್ಕೆ 1 ಚಮಚ ಜೇನುತುಪ್ಪ, 2 ಚಮಚ ಫ್ರೆಶ್ ಕ್ರೀಂ ಬೆರೆಸಿ ಕದಡಿಕೊಳ್ಳಿ. ಈ ಮಿಶ್ರಣವನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಬೇಕು. 20 ನಿಮಿಷ ಹಾಗೇ ಇರಲು ಬಿಡಿ. ನಂತರ ಉಗುರು ಬೆಚ್ಚಗಿನ ಬಿಸಿ ನೀರಲ್ಲಿ ತೊಳೆಯಿರಿ. ಈ ಮಿಶ್ರಣದ ಮರುಬಳಕೆಗಾಗಿ ಇದನ್ನು ಫ್ರಿಜ್‌ನಲ್ಲಿರಿಸಿ ಬೇಕಾದಾಗ ಬಳಸಿಕೊಳ್ಳಬಹುದು.
ನಾರ್ಮಲ್ ಕೂದಲಿಗಾಗಿ ಹೇರ್ ಮಾಸ್ಕ್
ನರೀಶಿಂಗ್ ಹನೀ ಮಾಸ್ಕ್ ಪ್ಯಾಕ್ : ಅರ್ಧ ಕಪ್ ಹಾಲಿಗೆ 2 ಚಮಚ ಜೇನುತುಪ್ಪ ಬೆರೆಸಿ ಚೆನ್ನಾಗಿ ಗೊಟಾಯಿಸಿ. ನಂತರ ಇದನ್ನು ತಲೆಯ ನೆತ್ತಿಗೆ ತಿಕ್ಕಿ, ಲಘುವಾಗಿ ಮಸಾಜ್ ಮಾಡಿ. 30 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ.
ಪ್ರೋಟೀನ್ ಪ್ಯಾಕ್ : ಅರ್ಧ ಕಪ್ ಸಿಪ್ಪೆ ಸಹಿತ (ಗುಂಡಗಿನ) ಉದ್ದಿನ ಕಾಳಿಗೆ 1 ಚಮಚ ಮೆಂತ್ಯ ಸೇರಿಸಿ 1 ತಾಸು ನೆನೆಹಾಕಿ. ನಂತರ ಅರ್ಧ ಕಪ್ ಮೊಸರು ಬೆರೆಸಿ ನುಣ್ಣಗೆ ಅರೆಯಿರಿ. ಆಮೇಲೆ ಇದನ್ನು ತಲೆಗೂದಲಿಗೆ ಹಚ್ಚಿ, 1 ತಾಸು ಒಣಗಿಸಿ. ಆನಂತರ ತಣ್ಣೀರಿನಿಂದ ತೊಳೆಯಿರಿ.
ಗುಂಗುರು ಕೂದಲಿಗೆ ಹೇರ್ ಮಾಸ್ಕ್ : 15-20 ಕರಿಬೇವಿನ ಎಸಳು, 1 ತುಂಡು ಕೆಂಪು ಚಂದನ, ಅರ್ಧ ಕಪ್ ಕೊಬ್ಬರಿ ಎಣ್ಣೆ ಇರಲಿ. ಕರಿಬೇವನ್ನು ನೀರಲ್ಲಿ ಮತ್ತು ಕೆಂಪು ಚಂದನವನ್ನು ಎಣ್ಣೆಯಲ್ಲಿ ಇಡೀ ರಾತ್ರಿ ನೆನೆಯಲು ಬಿಡಿ. ಮಾರನೇ ಬೆಳಗ್ಗೆ ಕೆಂಪು ಚಂದನವನ್ನು ಎಣ್ಣೆಯಿಂದ ತೆಗೆದುಬಿಡಿ. ನಂತರ ನೀರಿಗೆ ಎಣ್ಣೆ ಬೆರೆಸಿ ಚೆನ್ನಾಗಿ ಗೊಟಾಯಿಸಿ, ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಇದನ್ನು ತಲೆಗೂದಲು ಮತ್ತು ಬುಡಕ್ಕೆ ಒತ್ತಿ, ನೆತ್ತಿಯಲ್ಲಿ ಇಳಿಯುವಂತೆ ನಿಧಾನವಾಗಿ ಮಸಾಜ್ ಮಾಡಿ. ಹೀಗೆ 1 ತಾಸು ಕಳೆಯಲಿ. ನಂತರ ತಣ್ಣೀರಿನಲ್ಲಿ ಕೂದಲನ್ನು ತೊಳೆಯಿರಿ. ಈ ಹೇರ್ ಮಾಸ್ಕ್ ಗುಂಗುರು ಕೂದಲಿಗೆ ಬಹಳ ಪ್ರಯೋಜನಕಾರಿ.
ಆಯ್ಲಿ ಹೇರ್‌ಗಾಗಿ ಹೇರ್ ಮಾಸ್ಕ್
ಆಯ್ಲಿ ಕೂದಲುಳ್ಳವರು ಮನೆಯಲ್ಲಿ ಈ ರೀತಿ ಹೇರ್ ಮಾಸ್ಕ್ ಸಿದ್ಧಪಡಿಸಿಕೊಳ್ಳಿ :
ಜವೆ ಗೋಧಿಯ ಹೇರ್ ಮಾಸ್ಕ್ : ಈ ಹೇರ್ ಮಾಸ್ಕ್ ತಲೆಯ ಆಯ್ಲಿ ಸ್ಕಿನ್, ಹೊಟ್ಟು, ನವೆ ಕಡಿತ, ಉರಿ ಇತ್ಯಾದಿಗಳಿಗೆ ಬಲು ಲಾಭಕಾರಿ.ಇದನ್ನು ತಯಾರಿಸಲು 2 ಚಮಚ ಜವೆ ಗೋಧಿಯ ಪೇಸ್ಟ್ 1-1 ಚಮಚ ಹಾಲು, ಬಾದಾಮಿ ಎಣ್ಣೆಯನ್ನು ಒಟ್ಟಿಗೆ ಬೆರೆಸಿಕೊಳ್ಳಿ. ಈ ಮಿಶ್ರಣದಲ್ಲಿ ಗಂಟುಗಳಾಗದಂತೆ ಎಚ್ಚರವಹಿಸಿ. ನಂತರ ನೀಟಾಗಿ ತಲೆಗೂದಲಿಗೆ ಹಚ್ಚಬೇಕು. ಇದನ್ನು 20 ನಿಮಿಷ ಹಾಗೇ ಬಿಡಿ. ಆಮೇಲೆ ತುಸು ಬಿಸಿ ನೀರಿನಲ್ಲಿ ತಲೆಗೂದಲನ್ನು ತೊಳೆಯಿರಿ.
ಎಗ್ ಮಾಸ್ಕ್ ವಿತ್ ಆಲಿವ್ ಆಯಿಲ್ : ಮೊಟ್ಟೆಯ ಹೇರ್ ಮಾಸ್ಕ್ ನಲ್ಲಿ ಧಾರಾಳ ಪ್ರೋಟೀನ್, ವಿಟಮಿನ್ ಮತ್ತು ಫ್ಯಾಟಿ ಆ್ಯಸಿಡ್ಸ್ ಇರುತ್ತವೆ. ಇದರ ಬಳಕೆಯಿಂದ ಕೂದಲು ಉದುರುವಿಕೆಯ ಸಮಸ್ಯೆ ಎಷ್ಟೋ ತಗ್ಗುತ್ತದೆ. ಜೊತೆಗೆ ಆಲಿವ್ ಎಣ್ಣೆ ಇರುವುದರಿಂದ ನಿಮ್ಮ ಕೂದಲು ಸಶಕ್ತಗೊಂಡು, ಮೃದುವಾಗುತ್ತದೆ.
ಇದನ್ನು ತಯಾರಿಸಲು 2 ಮೊಟ್ಟೆಗಳ ಬಿಳಿ ಭಾಗ, 1 ಚಮಚ ಜೇನುತುಪ್ಪ, 1 ಚಮಚ ಆಲಿವ್ ಆಯಿಲ್ ಸೇರಿಸಿ ಚೆನ್ನಾಗಿ ಕದಡಿಕೊಳ್ಳಿ. ನಂತರ ಇದನ್ನು ಕೂದಲಿಗೆ ಸವರಿ, 15 ನಿಮಿಷ ಹಾಗೇ ಬಿಟ್ಟು, ಶವರ್ ಕ್ಯಾಪ್ ಹಾಕಿ 30 ನಿಮಿಷ ಹಾಗೇ ಇರಿ. ಆಮೇಲೆ ಹರ್ಬಲ್ ಶ್ಯಾಂಪೂ ಬಳಸಿ ಕೂದಲು ತೊಳೆಯಿರಿ. ಈ ಮಾಸ್ಕ್ ನ್ನು ತಿಂಗಳಿಗೆ 2 ಸಲ ಬಳಸಬೇಕು.
ಮಾಸ್ಕ್ ನಲ್ಲಿ ಎಣ್ಣೆಯ ಪಾತ್ರ
ನೀವು ಮೊದಲ ಸಲ ಮಾಸ್ಕ್ ತಯಾರಿಸುತ್ತಿದ್ದರೆ, ಪ್ರಾರಂಭದಲ್ಲಿ ನೀವು ಆದಷ್ಟೂ ಹಿಪ್ಪೆ (ಆಲಿವ್ ಆಯಿಲ್) ಎಣ್ಣೆ (ತುಸು ದುಬಾರಿ ಆದರೂ ಸರಿ) ಬಳಸುವುದೇ ಸರಿ. ಪೌಷ್ಟಿಕ ದೃಷ್ಟಿಯಿಂದ ಇದು ದಿ ಬೆಸ್ಟ್! ನಂತರ ಬಾದಾಮಿ ಎಣ್ಣೆ, ಕೊಬ್ಬರಿ ಎಣ್ಣೆ ಬಳಸಬಹುದು.
ಜೋಜೋಬಾ ಆಯಿಲ್ : ಇದು ಸಾಮಾನ್ಯ ಅಥವಾ ಆಯ್ಲಿ ಹೇರ್‌ಗೆ ಸೂಕ್ತ.
ಬಾದಾಮಿ ಎಣ್ಣೆ : ಇದು ಸಾಮಾನ್ಯ ಅಥವಾ ಶುಷ್ಕ ಕೂದಲಿಗೆ ಸೂಕ್ತ.
ಕೊಬ್ಬರಿ ಎಣ್ಣೆ : ಇದು ಶುಷ್ಕ ಕೂದಲಿಗೆ ಸರಿ.
ಹಸುವಿನ ಹಾಲಿನ ತುಪ್ಪ : ಕೂದಲಿಗೆ ಕಂಡೀಶನಿಂಗ್ ಒದಗಿಸಿ, ಅದು ಅಕಾಲಿಕ ನರೆಗಟ್ಟದಿರಲು ಪೂರಕ.
ಅತ್ಯಧಿಕ ಶುಷ್ಕ ಕೂದಲಿಗಾಗಿ
ನಿಮ್ಮ ಕೂದಲು ಎಂದಿಗಿಂತ ಬಹಳಷ್ಟು ಜಾಸ್ತಿ ಡ್ರೈ ಆಗಿದ್ದು, ನಯನಾಜೂಕೇ ಇಲ್ಲದಿದ್ದರೆ, ಮೊಟ್ಟೆಯ ಜೊತೆ ಹಿಪ್ಪೆ ಎಣ್ಣೆ, ಜೇನುತುಪ್ಪ, ಆ್ಯಲೋವೆರಾ ಜೆಲ್, ಹಸುವಿನ ಹಾಲು, ಕಿವುಚಿದ ಬಾಳೆಹಣ್ಣು ಅಥವಾ ಅವಕ್ಯಾಡೋ ಬಳಸಬಹುದು.
ಕಲರ್ಡ್ ಹೇರ್‌ಗಾಗಿ : ನೀವು ನಿಯಮಿತವಾಗಿ ಕೂದಲಿಗೆ ಬಣ್ಣ ಹಚ್ಚುವವರಾಗಿದ್ದರೆ, ಪ್ರತಿ ಸಲ ನೀವು ಜೋಜೋಬಾ ಆಯಿಲ್ (ರೆಡಿಮೇಡ್ ಲಭ್ಯ) ಬಳಸುವುದು ಸೂಕ್ತ. ಇದರಿಂದ ಹಾನಿಗೊಂಡ ಕಲರ್ಡ್ ಹೇರ್, ಡ್ರೈ ಹೇರ್‌ನ್ನು ರಿಪೇರ್ ಮಾಡಬಹುದು.
ಕೂದಲು ಉದುರುವಿಕೆ ತಡೆಗಟ್ಟಲು
ಈ ಕೆಳಗಿನ ಎಲ್ಲಾ ಬಗೆಯ ಕೂದಲಿಗೂ ಸೂಕ್ತ.
ಹೇರ್ ಪ್ಯಾಕ್ ಪೌಡರ್
ನೆಲ್ಲಿ, ಸೀಗೆ, ಚಿಗರೆ, ಹರಳೆಬೀಜ, ಭೃಂಗರಾಜ, ಬ್ರಾಹ್ಮಿ, ಮೆಂತ್ಯ, ಮಿನರಲ್ ಕ್ಲೇ, ರೋಸ್‌ಮೆರಿ, ಆ್ಯಲೋವೇರಾ, ಸಾಗಾ ಪೌಡರ್ ಇತ್ಯಾದಿ ಎಲ್ಲವನ್ನೂ ಪುಡಿ ಮಾಡಿ ಬೆರೆಸಿಕೊಳ್ಳಿ. ಈ ಪೌಡರ್ ಮಿಶ್ರಣಕ್ಕೆ ತುಸು ಬಿಸಿ ನೀರು ಬೆರೆಸಿ ಪೇಸ್ಟ್ ತರಹ ಕಲಸಿ ತಲೆಗೆ ಹಚ್ಚಿ ತಿಕ್ಕಬೇಕು. ಕೂದಲು ಆಯ್ಲಿ ಆಗಿದ್ದರೆ ಇದನ್ನು ಹೀಗೆ ನೇರವಾಗಿ ಬಳಸಬಹುದು, ತೀರಾ ಡ್ರೈ ಕೂದಲಾಗಿದ್ದರೆ ಜೊತೆಗೆ ಮೊಟ್ಟೆ ಒಡೆದು ಹಾಕಿ. ಇದನ್ನು ಕೂದಲಿಗೆ ಹಚ್ಚಿ 30 ನಿಮಿಷ ಹಾಗೇ ಬಿಡಿ. ನಂತರ ಬಿಸಿ ನೀರಲ್ಲಿ ಕೂದಲನ್ನು ತೊಳೆಯಿರಿ. ಆಮೇಲೆ ಸೀರಮ್ ಹಚ್ಚಿ, ಆಗ ಅದು ಹೊಳೆ ಹೊಳೆಯುತ್ತದೆ.
ದುರ್ಬಲ ಕೂದಲ ಬುಡಕ್ಕಾಗಿ….
ಹೈಬಿಸ್ಕಸ್ ಹೇರ್ ಮಾಸ್ಕ್ : ನಿಮ್ಮ ಕೂದಲಿನ ಬುಡದ ಭಾಗ ಬಹಳ ದುರ್ಬಲವಾಗಿದ್ದರೆ, ಈ ಪ್ಯಾಕ್ ನಿಮಗೆ ಬಲು ಪ್ರಯೋಜನಕಾರಿ. ಈ ಮಾಸ್ಕ್ ಸ್ಕಾಲ್ಪ್‌ನಲ್ಲಿ ರಕ್ತದ ಸಂಚಾರವನ್ನು ಚುರುಕುಗೊಳಿಸುತ್ತದೆ ಹಾಗೂ ರೋಮರಂಧ್ರಗಳು ಮುಚ್ಚಿಕೊಳ್ಳುವುದನ್ನು ತಡೆಯುತ್ತದೆ. ಇದು ಕೂದಲಿನ ಬುಡದವರೆಗೂ ಪೋಷಣೆ ಒದಗಿಸಿ ಅದನ್ನು ದಟ್ಟವಾಗಿಸುತ್ತದೆ.
ವಿಧಾನ : 1 ಕಪ್ ನೀರಿಗೆ 7-8 ದಾಸವಾಳದ ಪಕಳೆಗಳನ್ನು ಹಾಕಿ ಇಡೀ ರಾತ್ರಿ ನೆನೆಯಲು ಬಿಡಿ. ಮಾರನೇ ದಿನ ಇದರ ಕಾಲುಭಾಗದಷ್ಟು ನೀರಿಗೆ, 2 ಚಮಚ ಹಾಲು ಬೆರೆಸಿ ಪಕಳೆ ಸಮೇತ ತಿರುವಿಕೊಳ್ಳಿ. ನಂತರ ಇದನ್ನು ಕೂದಲಿಗೆ ಮೃದುವಾಗಿ ಹಚ್ಚಿರಿ. ಅರ್ಧ ಗಂಟೆ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡುತ್ತಿರಬೇಕು.
– ಪ್ರಭಾ ಮಾಧವ್