ಉತ್ತಮ ಕೂದಲು ಹೊಂದಬೇಕೆಂದು ಬೇರೆ ಬೇರೆ ವಿಧದಲ್ಲಿ ನಾವು ಪ್ರಯೋಗ ಮಾಡುತ್ತೇವೆ. ಅದರ ಬದಲಿಗೆ ಸೂಕ್ತ ಹೋಮ್ ಮೇಡ್ ಹೇರ್ ಮಾಸ್ಕ್ ಬಳಸಿ ಕೇಶ ಸೌಂದರ್ಯಕ್ಕೆ ಪೂರಕವಾಗಿ ಮಾಡಿಕೊಂಡರೆ ಒಳ್ಳೆಯದಲ್ಲವೇ……..?
ಪ್ರಸ್ತುತ ಮಾರುಕಟ್ಟೆಯಲ್ಲಿ ಕೂದಲಿನ ಟ್ರೀಟ್‌ಮೆಂಟ್‌ಗಾಗಿ ಎಷ್ಟೋ ಬಗೆಯ ಹೇರ್ ಮಾಸ್ಕ್ ಲಭ್ಯವಿವೆ. ಆದರೆ ಅವು ಅತಿ ದುಬಾರಿ ಮಾತ್ರವಲ್ಲದೆ, ಅವುಗಳಲ್ಲಿ ಅತ್ಯಧಿಕ ಕೆಮಿಕಲ್ಸ್ ಸಹ ಬೆರೆತಿರುತ್ತವೆ. ಈ ಅಂಶ ಖಂಡಿತಾ ಕೂದಲಿಗೆ ಹಾನಿ ಮಾಡುತ್ತದೆ. ಇಂಥ ಸಂದರ್ಭದಲ್ಲಿ ಮನೆಯಲ್ಲೇ ತಯಾರಿಸಬಹುದಾದ ಹೇರ್ ಮಾಸ್ಕ್ ಬಲು ಉಪಕಾರಿ. ಈ ಕುರಿತಾಗಿ ತಜ್ಞೆಯರ ಸಲಹೆ ಪಡೋಣ.
ಕೂದಲಿನ ಪ್ರಕಾರ ತಿಳಿದುಕೊಳ್ಳಿ
ಯಾವುದೇ ಬಗೆಯ ಹೇರ್ ಮಾಸ್ಕ್ ಆರಿಸಿಕೊಳ್ಳುವ ಮೊದಲು ನಿಮ್ಮ ಕೂದಲು ಯಾವ ಪ್ರಕಾರದ್ದು ಎಂದು ಖಾತ್ರಿಪಡಿಸಿಕೊಳ್ಳಿ. ಕೂದಲು ಮುಖ್ಯವಾಗಿ 3 ಬಗೆಯವು ಡ್ರೈ ಹೇರ್, ಆಯ್ಲಿ ಹೇರ್, ನಾರ್ಮಲ್ ಹೇರ್.
ಡ್ರೈ ಮತ್ತು ಸೀಳು ಕೂದಲಿಗೆ ಕಾರಣಗಳು
- ಕೂದಲನ್ನು ಸುರಕ್ಷಿತವಾಗಿ ಇಡುವಂಥ ಪ್ರೊಟೆಕ್ಟಿವ್ ಕ್ಯುಟಿಕಲ್ಸ್, ಕಡಿಮೆ ಅಥವಾ ಮುಗಿದೇ ಹೋದಾಗ ಅಥವಾ ಕೂದಲಿನ ನ್ಯಾಚುರಲ್ ಆಯಿಲ್ ಸ್ಕಾಲ್ಪ್ ನಿಂದ ಕೂದಲಿನ ತುದಿಯವರೆಗೂ ತಲುಪಲು ಆಗದಿದ್ದಾಗ, ಕೂದಲಿನ ತುದಿ ತುಂಬಾ ಡ್ರೈ ಆಗಿ ಎರಡಾಗಿ ಸೀಳಿಹೋಗುತ್ತದೆ.
- ಸ್ಟ್ರಾಂಗ್ ಹೇರ್ ಕಲರ್ ಹೇರ್ ಡ್ರೈಯರ್‌ನ ಸತತ ಬಳಕೆ, ಅತಿ ಹೆಚ್ಚಿನ ಬಿಸಿಲು, ಶುಷ್ಕ ಹವೆಯ ಒಡನಾಟ, ಜೋರಾಗಿ ಬಾಚಣಿಗೆಯಿಂದ ಕೂದಲನ್ನು ಎಳೆದು ಸಿಕ್ಕು ಬಿಡಿಸುವಿಕೆ ಇತ್ಯಾದಿಗಳಿಂದಾಗಿ ಕೂದಲಿನ ನ್ಯಾಚ್ಯುರಲ್ ಆಯಿಲ್ ಖಾಲಿಯಾಗುತ್ತದೆ. ಹೀಗಾಗಿ ಸೀಳು ತುದಿಯ ಕೂದಲು ಹೆಚ್ಚುತ್ತದೆ.
- ಮೆಟಾಲಿಕ್ ಕೂಂಬ್ ಬಳಕೆ, ಒದ್ದೆ ಕೂದಲನ್ನು ಬಾಚುವಿಕೆ, ಬಹಳ ಹೊತ್ತು ಒದ್ದೆ ಕೂದಲಿಗೆ ಟವೆಲ್ ಸುತ್ತಿಕೊಂಡಿರುವಿಕೆ, ಒದ್ದೆ ಕೂದಲನ್ನು ತಲೆ ಬಗ್ಗಿಸಿ ರಪರಪನೆ ಬಾರಿಸುವಿಕೆ ಇತ್ಯಾದಿಗಳಿಂದ ಸೀಳು ತುದಿಯ ಕೂದಲು ಹೆಚ್ಚುತ್ತದೆ.
- ಮಲಗುವಾಗ ದಿಂಬಿಗೆ ಸ್ಯಾಟಿನ್ ಪಿಲ್ಲೋ ಕವರ್ ಬಳಸಬೇಡಿ. ಇದೂ ಸೀಳು ತುದಿಗೆ ಕಾರಣ.
- ಆಹಾರದಲ್ಲಿ ಪೌಷ್ಟಿಕತೆಯ ಕೊರತೆಯೂ ಕೂದಲು ಡ್ಕೈ ಆಗಲು, ಸೀಳು ತುದಿ ಮೂಡಲು ಕಾರಣ.
- ತಲೆಗೆ ಸದಾ ಬಿಗಿಯಾದ ಸ್ಕಾರ್ಫ್ ಅಥವಾ ಟೇಪು ಕಟ್ಟಿರುವುದು ಕೂಡ ಈ ಸಮಸ್ಯೆಗೆ ಒಂದು ಕಾರಣ ಎನ್ನಬಹುದು.
- ಹೆಚ್ಚು ಹೇರ್‌ಪಿನ್ ಬಳಕೆಯೂ ಕೂದಲ ಹಾನಿಗೆ ಮೂಲ.
ಡ್ರೈ ಕೂದಲನ್ನು ಆರೋಗ್ಯಕರವಾಗಿಸಲು ಕೆಳಗಿನ ಹೋಮ್ ಮೇಡ್ ಹೇರ್ ಮಾಸ್ಕ್ ಬಳಸಬಹುದು :
ಫ್ರೂಟ್ ಮಾಸ್ಕ್ : ಡ್ರೈ ಸ್ಪ್ಲಿಟ್ ಹೇರ್‌ಗೆ ಪರಂಗಿ ಹಣ್ಣಿನ ಮಾಸ್ಕ್ ಉತ್ತಮ ಪರಿಹಾರ. ಇದಕ್ಕಾಗಿ ಮಾಗಿದ ಪುಟ್ಟ ಪರಂಗಿಹಣ್ಣಿನ ಸಿಪ್ಪೆ ಹೆರೆದು, ಹೋಳನ್ನು ಮಿಕ್ಸಿಯಲ್ಲಿ ಮೊಸರಿನೊಂದಿಗೆ ಪೇಸ್ಟ್ ಮಾಡಿ. ಇದನ್ನು ನಾವು ತಲೆಗೂದಲಿಗೆ ಮೆಹಂದಿ ಹಚ್ಚುವಂತೆ ಹಚ್ಚಿಕೊಂಡು 45 ನಿಮಿಷಗಳ ನಂತರ ತಣ್ಣೀರಿನಲ್ಲಿ ತೊಳೆಯಿರಿ.
ಕ್ರೀಂ ಟಾನಿಕ್ ಮಾಸ್ಕ್ : ಅರ್ಧ ಕಪ್ ಹಾಲಿಗೆ 2 ಚಮಚ ಫ್ರೆಶ್ ಕ್ರೀಂ ಬೆರೆಸಿ ಚೆನ್ನಾಗಿ ಕದಡಿಕೊಳ್ಳಿ. ಇದನ್ನು ಕೂದಲಿಗೆ ಹಚ್ಚಿಕೊಂಡು 30 ನಿಮಿಷಗಳ ನಂತರ ತಣ್ಣೀರಿನಲ್ಲಿ ತೊಳೆಯಿರಿ.