ಆಲೂ ಸಬ್ಬಕ್ಕಿಯ ಕ್ರೋಕ್ಯೂಟೀಸ್
ಸಾಮಗ್ರಿ : 250 ಗ್ರಾಂ ಆಲೂಗಡ್ಡೆ, 100 ಗ್ರಾಂ ಸಬ್ಬಕ್ಕಿ, ಅರ್ಧ ಚಮಚ ಜೀರಿಗೆ, 2 ಚಮಚ ಹೆಚ್ಚಿದ ಶುಂಠಿ, 1 ದೊಡ್ಡ ಚಮಚ ಹೆಚ್ಚಿದ ಹಸಿಮೆಣಸು, 2-3 ಚಮಚ ಕಾರ್ನ್‌ಫ್ಲೋರ್, 1 ಕಪ್ ಬ್ರೆಡ್‌ಕ್ರಂಬ್ಸ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಚಾಟ್‌ಮಸಾಲ, ಪುದೀನಾ ಚಟ್ನಿ, ಕರಿಯಲು ಎಣ್ಣೆ.
ವಿಧಾನ : ಹಿಂದಿನ ರಾತ್ರಿ ಸಬ್ಬಕ್ಕಿ ನೆನೆಹಾಕಿಡಿ. ಮಾರನೆ ಬೆಳಗ್ಗೆ ಇದು ಮೃದುವಾಗುವಂತೆ ಬೇಯಿಸಿ. ಇದನ್ನು ಸೋಸಿಕೊಂಡು ಸಬ್ಬಕ್ಕಿ ಬೇರ್ಪಡಿಸಿ. ಆಲೂ ಶುಚಿಗೊಳಿಸಿ, ಒರೆಸಿ, ಬೇಕ್ ಮಾಡಿ. ಇದರ ಸಿಪ್ಪೆ ಹೆರೆದು ನೀಟಾಗಿ ತುರಿದಿಡಿ. ಇದಕ್ಕೆ ಉಪ್ಪು, ಖಾರ, ಮಸಾಲೆ, ಹೆಚ್ಚಿದ ಪದಾರ್ಥ, ಬೆಂದ ಸಬ್ಬಕ್ಕಿ ಎಲ್ಲಾ ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ. ಇದರ ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿ, ಮಧ್ಯದಲ್ಲಿ ರಂಧ್ರ ಮಾಡಿ ತುಸು ಚಟ್ನಿ ತುಂಬಿಸಿ ಅದನ್ನು ಚಪ್ಪಟೆಗೊಳಿಸಿ. ಕಾರ್ನ್‌ಫ್ಲೋರ್‌ಗೆ ಚಿಟಕಿ ಉಪ್ಪು ಬೆರೆಸಿ ಬೋಂಡ ಹದಕ್ಕೆ ನೀರು ಬೆರೆಸಿ ಹಿಟ್ಟು ಕಲಸಿ. ಅದರಲ್ಲಿ ಚಪ್ಪಟೆ ಆಕಾರ ಅದ್ದಿ, ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಬಿಸಿ ಇರುವಾಗಲೇ ಇದನ್ನು ಕಾಯಿ ಚಟ್ನಿ, ಸಲಾಡ್ ಜೊತೆ ಸವಿಯಲು ಕೊಡಿ.
ಸ್ಪೆಷಲ್ ಡಂಪ್‌ಲಿಂಗ್ಸ್
ಸಾಮಗ್ರಿ : 200 ಗ್ರಾಂ ಕಾರ್ನ್, 150 ಗ್ರಾಂ ಬದನೆ, 150 ಗ್ರಾಂ ಹೆಸರುಕಾಳು, 1 ಈರುಳ್ಳಿ, 2 ಹಸಿಮೆಣಸು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು. 2 ಚಿಟಕಿ ಜೀರಿಗೆ ಪುಡಿ, 4-5 ಚಮಚ ತುರಿದ ಚೀಸ್, ತುಸು ಖಾರ, ಗರಂಮಸಾಲ, ಚಾಟ್‌ಮಸಾಲ, ಉಪ್ಪು, ಕರಿಯಲು ಎಣ್ಣೆ.
ವಿಧಾನ : ಮೊದಲು ಹೆಸರುಕಾಳನ್ನು 2-3 ತಾಸು ನೆನೆಸಿ, ತಾಜಾ ಕಾರ್ನ್ ಜೊತೆ ರುಬ್ಬಿಕೊಳ್ಳಿ. ಇದಕ್ಕೆ ಉಳಿದ ಪದಾರ್ಥ ಹೆಚ್ಚಿಹಾಕಿ, ಎಲ್ಲವನ್ನೂ ಸೇರಿಸಿ ಪಕೋಡ ಹಿಟ್ಟಿನಂತೆ ಮಿಶ್ರಣ ಕಲಸಿಡಿ. ಕಾದ ಎಣ್ಣೆಯಲ್ಲಿ ತುಸು ಮಿಶ್ರಣ ಹಾಕುತ್ತಾ ಪಕೋಡ ತರಹ ಕರಿಯಿರಿ. ನಂತರ ಚಿತ್ರದಲ್ಲಿರುವಂತೆ ಅಲಂಕರಿಸಿ, ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.
3 ಇನ್ ಒನ್
ಸಾಮಗ್ರಿ : ಶುಚಿಗೊಳಿಸಿ ಸಣ್ಣಗೆ ಹೆಚ್ಚಿದ ಹೂಕೋಸು, ಹಸಿರು ಎಲೆಕೋಸು, ಬೀಟ್ ರೆಡ್ (ಮೆರೂನ್) ಎಲೆಕೋಸು (ತಲಾ 200 ಗ್ರಾಂ), 2 ಈರುಳ್ಳಿ, 10-12 ಎಸಳು ಬೆಳ್ಳುಳ್ಳಿ, 1 ಕಪ್ ಕಡಲೆಹಿಟ್ಟು, 1 ಕಪ್ ಹುಳಿಮೊಸರು, ಒಂದಿಷ್ಟು ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು, ಪುದೀನಾ, ಕರಿಬೇವು, ಹಸಿ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪುಖಾರ, ಅರ್ಧ ಚಮಚ ಜೀರಿಗೆ, ಕರಿಯಲು ಎಣ್ಣೆ.
ವಿಧಾನ : ಅಗತ್ಯದ ಎಲ್ಲಾ ಪದಾರ್ಥ ಹೆಚ್ಚಿಕೊಂಡು ಕಡಲೆಹಿಟ್ಟು, ಉಪ್ಪು, ಖಾರ, ಜೀರಿಗೆ ಮೊಸರು ಎಲ್ಲಾ ಸೇರಿಸಿ ಪಕೋಡ ಮಿಶ್ರಣದಂತೆ ಕಲಸಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದರಿಂದ ಚೂರು ಚೂರೇ ಮಿಶ್ರಣ ಹಾಕುತ್ತಾ, ಹೊಂಬಣ್ಣ ಬರುವಂತೆ ಪಕೋಡ ಕರಿಯಿರಿ. ಚಿತ್ರದಲ್ಲಿರುವಂತೆ ಇದನ್ನು ಅಲಂಕರಿಸಿ ಬಿಸಿ ಬಸಿಯಾಗಿ ಪುದೀನಾ ಅಥವಾ ಹುಳಿಸಿಹಿ ಚಟ್ನಿ ಜೊತೆ ಸವಿಯಲು ಕೊಡಿ.
ಮ್ಯಾಂಗೋ ಮಾಲ್ಪುವಾ
ಸಾಮಗ್ರಿ : 2 ಕಪ್ ಮೈದಾ, 1-2 ಚಿಟಕಿ ಏಲಕ್ಕಿ ಪುಡಿ, ಅರ್ಧ ಕಪ್ ಬನ್ಸಿ ರವೆ, 2 ಕಪ್ ಗಟ್ಟಿ ಹಾಲು, 4 ಚಮಚ ಮೊಸರು, 1-2 ಚಿಟಕಿ ಸೋಂಪು, 4 ಚಮಚ ಖೋವಾ, 1 ಮಾಗಿದ ಮಾವು, 1 ಕಪ್ ಸಕ್ಕರೆ, ಕರಿಯಲು ರೀಫೈಂಡ್ ಎಣ್ಣೆ.
ವಿಧಾನ : ಒಂದು ಬೇಸನ್ನಿಗೆ ಮೈದಾ, ಹುರಿದ ರವೆ, ಸೋಂಪು, ಏಲಕ್ಕಿ ಪುಡಿ, ಕಿವುಚಿದ ಮಾವಿನ ತಿರುಳು, ಮೊಸರು, ಹಾಲು ಬೆರೆಸಿ ಮೃದುವಾಗಿ ಕಲಸಿಡಿ. ಇದನ್ನು 3 ಗಂಟೆಗಳ ಕಾಲ ಫ್ರಿಜ್‌ನಲ್ಲಿರಿಸಿ. ಅದೇ ಸಮಯದಲ್ಲಿ ಸಕ್ಕರೆಯಿಂದ ಒಂದೆಳೆ ಗಟ್ಟಿ ಪಾಕ ತಯಾರಿಸಿ ಆರಲು ಬಿಡಿ. ಮಿಶ್ರಣವನ್ನು ಜಿಡ್ಡು ಸವರಿ ತಟ್ಟಿಕೊಂಡು ತವಾ ಮೇಲೆ ಹಾಕಿ, ರೀಫೈಂಡ್ ಎಣ್ಣೆ ಬಳಸಿ ಶ್ಯಾಲೊಫ್ರೈ ಮಾಡಿ. ನಂತರ ಪಾಕಕ್ಕೆ ಹಾಕಿಟ್ಟು, 1-2 ಗಂಟೆ ನಂತರ ಹೊರ ತೆಗೆದು ಸವಿಯಲು ಕೊಡಿ.
ರಾಜ್ಮಾ ಸಮೋಸಾ
ಮೂಲ ಸಾಮಗ್ರಿ : 300 ಗ್ರಾಂ ಮೈದಾ, ಅರ್ಧ ಸೌಟು ತುಪ್ಪ, 1 ಚಿಟಕಿ ಓಮ, ತುಸು ಉಪ್ಪು, ಕರಿಯಲು ಎಣ್ಣೆ.
ಹೂರಣ ಸಾಮಗ್ರಿ : 150 ಗ್ರಾಂ ರಾಜ್ಮಾ, 2 ಈರುಳ್ಳಿ, ಒಂದಿಷ್ಟು ಹೆಚ್ಚಿದ ಹಸಿಮೆಣಸು, ಶುಂಠಿ, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ.
ವಿಧಾನ : ಮೈದಾಗೆ ತುಸು ಉಪ್ಪು, ಓಮ, ನೀರು ಬೆರೆಸಿ ಪೂರಿಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಇದಕ್ಕೆ ತುಪ್ಪ ಸೇರಿಸಿ ಚೆನ್ನಾಗಿ ನಾದಿಕೊಂಡು, ಒದ್ದೆ ಬಟ್ಟೆಯಲ್ಲಿ ಸುತ್ತಿ, ನೆನೆಯಲು ಬಿಡಿ. ಹಿಂದಿನ ದಿನ ನೆನೆಹಾಕಿದ್ದ ರಾಜ್ಮಾವನ್ನು ಕುಕ್ಕರ್‌ನಲ್ಲಿ 3 ಸೀಟಿ ಬರುವಂತೆ ಬೇಯಿಸಿ, ನೀರು ಬಸಿದಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಒಗ್ಗರಣೆ ಕೊಡಿ. ಇದಕ್ಕೆ ಹೆಚ್ಚಿದ ಹಸಿಮೆಣಸು, ಶುಂಠಿ ಹಾಕಿ ಕೆದಕಿ, ಈರುಳ್ಳಿ ಸೇರಿಸಿ ಬಾಡಿಸಬೇಕು. ನಂತರ ಇದಕ್ಕೆ ಮಸೆದ ರಾಜ್ಮಾ ಸೇರಿಸಿ, ಉಪ್ಪು, ಖಾರ ಹಾಕಿ ಕೆದಕಿ ಕೆಳಗಿಳಿಸಿ. ನಂತರ ಹೆಚ್ಚಿದ ಕೊ.ಸೊಪ್ಪು, ನಿಂಬೆಹಣ್ಣು ಹಿಂಡಿಕೊಂಡು ಮಿಶ್ರಣ ಸಿದ್ಧಪಡಿಸಿ. ಈಗ ನೆನೆದ ಮೈದಾ ಮಿಶ್ರಣದಿಂದ ಸಣ್ಣ ಉಂಡೆ ಮಾಡಿ ಲಟ್ಟಿಸಿ. ಅರ್ಧ ಚಂದ್ರಾಕಾರವಾಗಿ ಕತ್ತರಿಸಿ, ಅದರಲ್ಲಿ 2-3 ಚಮಚ ರಾಜ್ಮಾ ಮಿಶ್ರಣ ತುಂಬಿಸಿ, ಶಂಖು ಆಕಾರದಲ್ಲಿ ಸಮೋಸಾ ಮಡಿಚಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಹೊಂಬಣ್ಣದ ಇವನ್ನು ಗರಿಗರಿಯಾಗಿ ಸಲಾಡ್, ಸಾಸ್ ಜೊತೆ ಸವಿಯಲು ಕೊಡಿ.
ಬೇಸನ್ ಬೂಂದಿ ಪನೀನಿ
ಸಾಮಗ್ರಿ : 150 ಗ್ರಾಂ ಸಪ್ಪೆ ಬೂಂದಿ, 1 ಈರುಳ್ಳಿ, 1-2 ಟೊಮೇಟೊ, 3-4 ಚಮಚ ಹೆಚ್ಚಿದ ಸೌತೇಕಾಯಿ, ತುಸು ಹೆಚ್ಚಿದ ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೆಯೋನೀಸ್, ಚಾಟ್‌ಮಸಾಲ, ಪುದೀನಾ ಚಟ್ನಿ, 2 ಚಮಚ ಬೆಣ್ಣೆ, 4 ಫ್ರೆಂಚ್ ಬ್ರೆಡ್ ಸ್ಲೈಸ್.
ವಿಧಾನ : ಸ್ಯಾಂಡ್‌ವಿಚ್ ಗ್ರಿಲ್ಲರ್ ಬಿಸಿ ಮಾಡಿ. ಒಂದು ಬಟ್ಟಲಿಗೆ ಬೂಂದಿ, ಹೆಚ್ಚಿದ ತರಕಾರಿ, ಉಪ್ಪು, ಮಸಾಲೆ, ಮೆಯೋನೀಸ್ ಇತ್ಯಾದಿ ಬೆರೆಸಿಕೊಳ್ಳಿ. ಈಗ ಬ್ರೆಡ್ ಸ್ಲೈಸ್‌ನ ಒಂದು ಬದಿಗೆ ಪುದೀನಾ ಚಟ್ನಿ ಸವರಿ. ಇದರ ಮೇಲೆ 2-3 ಚಮಚ ಬೂಂದಿ ಮಿಶ್ರಣ ಹರಡಿರಿ. ಇದರ ಮೇಲೆ ಇನ್ನೊಂದು ಸ್ಲೈಸ್ ಮುಚ್ಚಿರಿಸಿ. ಈ ಪನೀನಿ ಸ್ಯಾಂಡ್‌ವಿಚ್‌ನ್ನು ಹೊಂಬಣ್ಣಕ್ಕೆ ಬರುವಂತೆ ಗ್ರಿಲ್ ಮಾಡಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.
ಬೇಸನ್ ಪಿಜ್ಜಾ
ಸಾಮಗ್ರಿ : 500 ಗ್ರಾಂ ಕಡಲೆಹಿಟ್ಟು (ಬೇಸನ್), 1 ಕಪ್ ಹುಳಿ ಮೊಸರು, 2 ಚಿಟಕಿ ಯೀಸ್ಟ್, ಅರ್ಧ ಸೌಟು ಆಲಿವ್ ಎಣ್ಣೆ, 200 ಗ್ರಾಂ ಟೊಮೇಟೊ ಪಿಜ್ಜಾ ಸಾಸ್, 1 ಕಪ್ ತುರಿದ ಮೋಜರೆಲಾ ಚೀಸ್, 200 ಗ್ರಾಂ ಹೆಚ್ಚಿದ ಮಿಶ್ರ ತರಕಾರಿ, ತುಸು ಬಿಸಿ ನೀರು.
ವಿಧಾನ : ಒಂದು ಬಟ್ಟಲಿಗೆ ಅರ್ಧ ಕಪ್ ನೀರು ಹಾಕಿ, 2 ಚಿಟಕಿ ಸಕ್ಕರೆ, ಯೀಸ್ಟ್ ಬೆರೆಸಿ ನೆನೆಯಲು ಬಿಡಿ. ಒಂದು ಬೇಸನ್ನಿಗೆ ಕಡಲೆಹಿಟ್ಟು, ಮೊಸರು, ಉಪ್ಪು, ಆಲಿವ್ ಎಣ್ಣೆ, ಯೀಸ್ಟ್ ಮಿಶ್ರಣ ಬೆರೆಸಿ, ತುಸು ನೀರು ಸಮೇತ ಹಿಟ್ಟು ಕಲಸಿಕೊಳ್ಳಿ. ಸ್ವಲ್ಪ ಹೊತ್ತು ನೆನೆಯಲು ಬಿಟ್ಟು ಇದರಿಂದ 4 ಉಂಡೆ ಮಾಡಿ. ಇದರ ಮೇಲೆ ಒದ್ದೆ ಬಟ್ಟೆ ಹಾಕಿ 2-4 ಗಂಟೆ ಹಾಗೇ ಬಿಡಿ. ಮೊದಲೇ 201 ಡಿಗ್ರಿ ಸೆಂ. ಶಾಖದಲ್ಲಿ ಓವನ್ ಬಿಸಿಯಾಗಿರಲಿ. ಉಂಡೆಗಳನ್ನು ದಪ್ಪ ಚಪಾತಿಯಾಗಿ ಲಟ್ಟಿಸಿ. ಇದರ ಮೇಲೆ ಅರ್ಧ ಸೌಟು ಸಾಸ್ ಹರಡಿ, ಚೀಸ್ ಉದುರಿಸಿ. ಅದರ ಮೇಲೆ ತರಕಾರಿ ಹರಡಿ, 12-15 ನಿಮಿಷ ಬೇಕ್ ಮಾಡಿ ಬಿಸಿ ಬಿಸಿಯಾಗಿ ಸವಿಯಲು ಕೊಡಿ.
ರೈಸ್ ರೋಲ್ಸ್ ವಿತ್ ರಗ್ಡ್ ಚನಾ
ಮೂಲ ಸಾಮಗ್ರಿ : 250 ಗ್ರಾಂ ಅಕ್ಕಿ, 1 ಗಿಟುಕು ತೆಂಗಿನ ತುರಿಯ ಹಾಲು, ರುಚಿಗೆ ಉಪ್ಪು, ತುಸು ಜೀರಿಗೆ.
ರಗ್ಡ್ ಚನಾ : 150 ಗ್ರಾಂ ಕಡಲೆಕಾಳು (ಚನಾ), 1 ಈರುಳ್ಳಿ, 2 ಹಸಿಮೆಣಸು, 1 ಟೊಮೇಟೊ, ತುಸು ಹೆಚ್ಚಿದ ಕೊ.ಸೊಪ್ಪು, ಶುಂಠಿ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಇಂಗು, ಜೀರಿಗೆ ಪುಡಿ, 2 ಚಿಟಕಿ ಅರಿಶಿನ, ದಾಳಿಂಬೆ ಬೀಜದ ಪುಡಿ (ರೆಡಿಮೇಡ್ ಲಭ್ಯ), ಅಗತ್ಯವಿದ್ದಷ್ಟು ಎಣ್ಣೆ.
ವಿಧಾನ : ಅಕ್ಕಿ ತೊಳೆದು 2-3 ಗಂಟೆ ನೆನೆಸಿಡಿ. ನಂತರ ಮಿಕ್ಸಿಗೆ ಹಾಕಿ ತುಸು ಉಪ್ಪು, ತೆಂಗಿನ ಹಾಲು ಬೆರೆಸಿ ಹಿಟ್ಟು ರುಬ್ಬಿಕೊಳ್ಳಿ. ಇದನ್ನು ಇಡೀ ರಾತ್ರಿ ಹಾಗೇ ನೆನೆಯಲು ಬಿಡಿ. ಅದೇ ತರಹ ಹಿಂದಿನ ದಿನವೇ ಕಡಲೆಕಾಳು ನೆನೆಹಾಕಿರಬೇಕು. ಮಾರನೇ ಬೆಳಗ್ಗೆ ಪ್ರೆಷರ್ ಕುಕ್ಕರ್‌ನಲ್ಲಿ ಬೇಯಿಸಿಕೊಂಡು, ಆರಲು ಬಿಡಿ. ನಂತರ ಫ್ಯಾನಿನಡಿ, ಬಟ್ಟೆ ಮೇಲೆ ಹರಡಿರಿ. ಇದರ ಮೇಲೆ ಲಟ್ಟಣಿಗೆ ಒತ್ತುತ್ತಾ ಮ್ಯಾಶ್ ಮಾಡಿ. ನಂತರ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ, ಹಸಿಮೆಣಸು, ಶುಂಠಿ, ಟೊಮೇಟೊ ಇತ್ಯಾದಿ ಬಾಡಿಸಿ. ಇದಕ್ಕೆ ಉಪ್ಪು, ಮಸಾಲೆ ಹಾಕಿ ಕೆದಕಬೇಕು. ಕೊನೆಯಲ್ಲಿ ಮ್ಯಾಶ್ಡ್ ಕಾಳು ಹಾಕಿ ಚೆನ್ನಾಗಿ ಕೆದಕಿ ಕೆಳಗಿಳಿಸಿ. ನೆನೆದ ಹಿಟ್ಟಿನಿಂದ ಒಂದೊಂದಾಗಿ ದೋಸೆ ತಯಾರಿಸಿ. ಅದರ ಮಧ್ಯೆ 3-4 ಚಮಚ ಕಾಳಿನ ಮಿಶ್ರಣ ಹರಡಿ, ಮಡಿಚಿರಿ. ಬಿಸಿ ಇರುವಾಗಲೇ ಇದನ್ನು ಕಾಯಿ ಚಟ್ನಿ ಜೊತೆ ಸವಿಯಲು ಕೊಡಿ.
ಅನಾನಸ್ ಕ್ಯೂಬ್ಸ್
ಸಾಮಗ್ರಿ : 2 ಕಪ್ ಮೊಸರು, 4-5 ಬಿಲ್ಲೆ ಅನಾನಸ್, ಒಂದಿಷ್ಟು ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು, ಈರುಳ್ಳಿ, ಹಸಿ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಜೀರಿಗೆಪುಡಿ, ಕರಿಯಲು ಎಣ್ಣೆ, ಅರ್ಧ ಬಟ್ಟಲು ಬ್ರೆಡ್ ಕ್ರಂಬ್ಸ್.
ವಿಧಾನ : ಹಿಂದಿನ ರಾತ್ರಿಯೇ ಮೊಸರನ್ನು ತೆಳುಬಟ್ಟೆಯಲ್ಲಿ ಕಟ್ಟಿ ತೇವಾಂಶ ಹಿಂಗುವಂತೆ ಒಂದು ಕಡೆ ತೂಗುಹಾಕಿ. ಅನಾನಸ್‌ನ್ನು ಅತಿ ಸಣ್ಣದಾಗಿ ಹೆಚ್ಚಿಟ್ಟು, ಬಟ್ಟೆಯಲ್ಲಿ ಹಾಕಿ ತೇವಾಂಶ ಹಿಂಗುವಂತೆ ಹಿಂಡಿಕೊಳ್ಳಿ. ಉಳಿದೆಲ್ಲಾ ಸಾಮಗ್ರಿ ಜೊತೆ ಇದನ್ನು ಗಟ್ಟಿ ಮೊಸರಿಗೆ ಹಾಕಿ, ತುಸು ಬ್ರೆಡ್ ಕ್ರಂಬ್ಸ್ ಸಹ ಸೇರಿಸಿ. ಇದನ್ನು ಸಣ್ಣ ಉಂಡೆ ಮಾಡಿ, ಚಿತ್ರದಲ್ಲಿರುವಂತೆ ಸುರುಳಿ ಆಕಾರ ನೀಡಿ, ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ.
ಸ್ಪೆಷಲ್ ಟಿಕ್ಕಿ
ಸಾಮಗ್ರಿ : 2 ಕಂತೆ ತಾಜಾ ಪಾಲಕ್ ಸೊಪ್ಪು, 250 ಗ್ರಾಂ ಸಿಹಿಗೆಣಸು, 4 ಚಮಚ ಹೆಚ್ಚಿದ ಜೆಲ್‌ಪೀನೋ, 1 ಈರುಳ್ಳಿ, ತುಸು ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, 1 ಚಿಟಕಿ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ನಿಂಬೆರಸ, ಕರಿಯಲು ಎಣ್ಣೆ.
ವಿಧಾನ : ಮೊದಲು ಗೆಣಸು ಬೇಯಿಸಿ ಮಸೆದಿಡಿ. ಪಾಲಕ್‌ಸೊಪ್ಪು ಹೆಚ್ಚಿಕೊಂಡು ಲಘುವಾಗಿ ಬೇಯಿಸಿ ನೀರು ಬಸಿದು ಬೇರೆ ಮಾಡಿ. ಇದಕ್ಕೆ ಉಳಿದೆಲ್ಲ ಹೆಚ್ಚಿದ ಪದಾರ್ಥ, ಉಪ್ಪು, ಖಾರ, ಮಸಾಲೆ ಸೇರಿಸಿ ಪಕೋಡ ಹದಕ್ಕೆ ಕಲಸಿಡಿ. ಇದರಿಂದ ಸಣ್ಣ ಉಂಡೆ ಮಾಡಿ, ಜಿಡ್ಡು ಸವರಿದ ಅಂಗೈ ಮೇಲೆ ತಟ್ಟಿ ಚಪ್ಪಟೆ ಮಾಡಿಕೊಂಡು, ಕಾದ ಎಣ್ಣೆಯಲ್ಲಿ ಕರಿಯಿರಿ. ಚಿತ್ರದಲ್ಲಿರುವಂತೆ ಸಲಾಡ್ ಜೊತೆ ಅಲಂಕರಿಸಿ ಬಿಸಿಯಾಗಿ, ಸಾಸ್ ಜೊತೆ ಸವಿಯಲು ಕೊಡಿ.