ಒಗ್ಗರಣೆ ಇಲ್ಲದೆ ಎಂದಾದರೂ ಅಡುಗೆಯ ವ್ಯಂಜನಗಳು ರುಚಿ ಕಟ್ಟಿದ್ದುಂಟೇ? ತಿಳಿ ಸಾರು, ತೊವ್ವೆ, ಮಜ್ಜಿಗೆ ಹುಳಿ, ಪಳಿದ್ಯ, ರಾಯ್ತಾ, ಗೊಜ್ಜು, ಬೇಳೆಹುಳಿ, ಸಾಂಬಾರ್‌….. ಇತ್ಯಾದಿ ಯಾವುದೇ ಇರಲಿ, ಕೆಲ ಬೆಳಗಿನ ಉಪಾಹಾರಗಳಿಗೂ (ಇಡ್ಲಿ  ಬ್ರೆಡ್‌ ಉಪ್ಪಿಟ್ಟು, ಢೋಕ್ಲಾ ಇತ್ಯಾದಿ) ಇದು ಅತ್ಯಗತ್ಯ, ಅಷ್ಟೇ ಆರೋಗ್ಯಕರ ಹೌದು. ಸಾಮಾನ್ಯವಾಗಿ ಒಗ್ಗರಣೆ ಕೊಡುವುದರಲ್ಲಿ 2 ವಿಧ. ಒಂದು, ತಯಾರಾದ ವ್ಯಂಜನದ ಮೇಲೆ ಇದನ್ನು ಉದುರಿಸುವುದು, ಅಂದರೆ…. ದಾಲ್, ಮಜ್ಜಿಗೆ ಹುಳಿ, ರಸಂ, ಸಾಂಬಾರ್‌, ಢೋಕ್ಲಾ, ಖಾಂಡ್ವಿ ಇತ್ಯಾದಿ ಸಿದ್ಧಗೊಂಡ ಮೇಲೆ ಅದಕ್ಕೆ ಬೆರೆಸುವುದು. ಇಲ್ಲದಿದ್ದರೆ ಮೊದಲೇ ಕಂಟೇನರ್‌ನಲ್ಲಿ ಒಗ್ಗರಣೆ ಕೊಟ್ಟು ನಂತರ  ವ್ಯಂಜನ ತಯಾರಿ ಮುಂದುರಿಸುವುದು. ಪಲಾವ್‌, ಖಿಚಡಿ, ಪೊಂಗಲ್ ಪಲ್ಯಗಳೆಲ್ಲ ಹೀಗೆ ಮಾಡುವುದು. ಎರಡೂ ಬಗೆಯ ಒಗ್ಗರಣೆಗಳಿಂದ ಸುವಾಸನೆ, ರುಚಿ ಹೆಚ್ಚುತ್ತದೆ. ಬನ್ನಿ, ವಿವಿಧ ಬಗೆಯ ಒಗ್ಗರಣೆಗಳನ್ನು ತಿಳಿಯೋಣ.

 

ಒಗ್ಗರಣೆ ಮತ್ತು ಆರೋಗ್ಯ

ಒಗ್ಗರಣೆಗಾಗಿ ನಾವು ಬಳಸುವ ಮಸಾಲೆ ಸಾಮಗ್ರಿ, ನಮ್ಮ ಆರೋಗ್ಯಕ್ಕೆ ಹೆಚ್ಚು ಪೂರಕ. ಒಗ್ಗರಣೆಗೆ ಟೊಮೇಟೊ ಬಳಸುವುದರಿಂದ ಒಸಡಿನಿಂದ ರಕ್ತ ಸೋರುವಿಕೆ, ಚರ್ಮದಲ್ಲಿ ಹೊಪ್ಪಳ ಏಳುವುದು, ಹಲ್ಲುನೋವು ಇತ್ಯಾದಿಗಳಿಂದ ಮುಕ್ತಿ ಸಿಗುತ್ತದೆ. ಇಂಗು ಮಲಬದ್ಧತೆಯನ್ನು ಓಡಿಸಿ ಜೀರ್ಣಶಕ್ತಿ ವರ್ಧಿಸುತ್ತದೆ. ಗ್ಯಾಸ್‌ ಪದಾರ್ಥಗಳಿಂದ ಓಮ ರಕ್ಷಿಸುತ್ತದೆ. ಧನಿಯಾ, ಮೆಂತ್ಯ, ಕೀಲು ಮಂಡಿ ನೋವನ್ನು ಓಡಿಸುತ್ತದೆ. ಒಣ ಮೆಣಸು ಕೊಲೆಸ್ಟ್ರಾಲ್ ತಗ್ಗಿಸಿದರೆ, ಕಾಳು ಮೆಣಸು ಕಫಕ್ಕೆ ರಾಮಬಾಣ. ಮೆಂತ್ಯ ಜೀರ್ಣಶಕ್ತಿ ವರ್ಧಿಸಿ. ಸೋಂಕು ನಿವಾರಕ ಕೆಲಸ ಮಾಡುತ್ತದೆ. ಮಧುಮೇಹಕ್ಕೆ ಮೆಂತ್ಯ ಬಳಕೆ ಕಡ್ಡಾಯ ಎನ್ನುತ್ತದೆ ಆಯುರ್ವೇದ. ಸೋಂಪು ಉಸಿರಿನ ದುರ್ವಾಸನೆ ತಡೆಯುತ್ತದೆ. ಬೆಳ್ಳುಳ್ಳಿ ಆ್ಯಂಟಿ ಆಕ್ಸಿಡೆಂಟ್‌, ಆ್ಯಂಟಿ ಬ್ಯಾಕ್ಟಿರಿಯಲ್ ಕೆಲಸ ಮಾಡಿದರೆ ಅರಿಶಿನ ಉತ್ತಮ ಆ್ಯಂಟಿಸೆಪ್ಟಿಕ್‌ ಆಗಿದೆ. ಕೋಸಂಬರಿ, ಸಲಾಡ್‌, ಚಟ್ನಿಗಳಿಗೆ ಬಳಸಬಹುದಾದ ಅಗಸೆಬೀಜ (ಫ್ಲಾಕ್ಸ್ ಸೀಡ್ಸ್) ಕೊಲೆಸ್ಟ್ರಾಲ್ ತಗ್ಗಿಸಿ, ಬಿ.ಪಿ. ದೂರವಿಡುತ್ತದೆ.

– ನೀರಜಾ ಕುಮಾರ್‌

ಮಜ್ಜಿಗೆಹುಳಿಯ ಸ್ಪೆಷಲ್ ಒಗ್ಗರಣೆ

ಒಗ್ಗರಣೆ ಕೊಡುವುದರಿಂದ ಮಜ್ಜಿಗೆಹುಳಿ, ಪಳಿದ್ಯ, ತಂಬುಳಿಗಳ ರುಚಿ ಹೆಚ್ಚುತ್ತದೆ. ನಾಲ್ವರಿಗಾಗಿ ತಯಾರಿಸಲಾದ ಪಳಿದ್ಯಕ್ಕೆ, 1 ದೊಡ್ಡ ಚಮಚ ಎಣ್ಣೆ ಬಿಸಿ ಮಾಡಿ ಅದಕ್ಕೆ 1-1 ಸಣ್ಣ ಚಮಚ ಜೀರಿಗೆ, ಮೆಂತ್ಯ, ಸಾಸುವೆ ಹಾಕಿ ಚಟಪಟಾಯಿಸಿ. ನಂತರ ಇದಕ್ಕೆ ಅರ್ಧ ಚಮಚ ಖಾರದಪುಡಿ, 3 ಇಡಿಯಾದ ಒಣಮೆಣಸಿನಕಾಯಿ ಹಾಕಿ ಬಾಡಿಸಿ. ಆಮೇಲೆ 2 ಚಿಟಕಿ ಇಂಗು, 2-3 ಎಸಳು ಕರಿಬೇವು ಸೇರಿಸಿ ಒಗ್ಗರಣೆ ಕೊಡಿ. ಎಲ್ಲಕ್ಕೂ ಮೇಲೆ ಹೆಚ್ಚಿದ ಕೊ.ಸೊಪ್ಪು, ಪುದೀನಾ ಉದುರಿಸಿ.

ಗ್ರೇವಿಗೊಂದು ಒಗ್ಗರಣೆ

ಯಾವುದೇ ಬಗೆಯ ಗ್ರೇವಿ, ತೊವ್ವೆ, ದಾಲ್‌, ಕುರ್ಮಾಗಳಿಗೆ ಇದು ಸೂಕ್ತ. ಅರ್ಧ ಸೌಟು ತುಪ್ಪ ಬಿಸಿ ಮಾಡಿ ಇಂಗು, ಜೀರಿಗೆ, ಇಡೀ ಒಣ ಮೆಣಸು, ಬ್ಯಾಡಗಿ ಮೆಣಸು ಸೇರಿಸಿ ಒಗ್ಗರಣೆ ಕೊಡಿ. ಇದಕ್ಕೆ ನಾಲ್ವರಿಗೆ ಬೇಕಾದ ದಾಲ್, ಅರ್ಧ ಕಪ್‌ ಟೊಮೇಟೊ ಪ್ಯೂರಿ ಬೆರೆಸಿ ಮಂದ ಉರಿಯಲ್ಲಿ ಕುದಿಸಬೇಕು. ಇದರಿಂದ ದಾಲ್‌ ಬಣ್ಣ ಸುಧಾರಿಸುತ್ತದೆ, ಟೊಮೇಟೊ ಪ್ಯೂರಿಯಿಂದ ರುಚಿ ಹೆಚ್ಚುತ್ತದೆ. ಇದನ್ನೇ ಗ್ರೀನ್‌ಪೀಸ್‌ ಗ್ರೇವಿ, ಪನೀರ್‌ಮಟರ್‌, ಚನಾಮಸಾಲ ಇತ್ಯಾದಿಗಳಿಗೆ ಇದರ ಜೊತೆ ರುಬ್ಬಿದ 1 ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಮಿಶ್ರಣ ಸಹ ಬೆರೆಸಿಕೊಳ್ಳಬೇಕು. ತೊಗರಿ, ಉದ್ದಿನ ತೊವ್ವೆಗೆ ಮೇಲಿನ ಒಗ್ಗರಣೆ ಜೊತೆ ಚಾಟ್‌ಮಸಾಲ, ತುಸು ಕೊ.ಸೊಪ್ಪು ಉದುರಿಸಬೇಕು. ಆಗ ರುಚಿ ಹೆಚ್ಚುತ್ತದೆ.

ಮುಖ್ಯವಾಗಿ ಹೆಸರುಬೇಳೆ ತೊವ್ವೆಗೆ ಈ ಒಗ್ಗರಣೆ ಜೊತೆ 10-12 ಕಾಳುಮೆಣಸು, 2 ಲವಂಗ, ತರಿತರಿ ಕುಟ್ಟಿದ  ಏಲಕ್ಕಿ ಸೇರಿಸಿದರೆ ಈ ದಾಲ್ ಬಲು ಸ್ವಾದಿಷ್ಟ ಎನಿಸುತ್ತದೆ.

ಒಗ್ಗರಣೆಗೆ ಓಮ

ಸಿಹಿ ಕುಂಬಳಕಾಯಿ, ಸೀಮೆಗೆಣಸಿನ ಪಲ್ಯಕ್ಕೆ ಈ ಒಗ್ಗರಣೆ ಸೂಕ್ತ. ರಾಜ್ಮಾ ಗ್ರೇವಿ, ಕಡಲೆಕಾಳಿನ ಉಸುಲಿಗೂ ನಡೆಯುತ್ತದೆ. ಇದಕ್ಕೆ ಮೇಲಿನಿಂದ ಓಮ, ಬ್ಯಾಡಗಿ ಮೆಣಸಿನ ಒಗ್ಗರಣೆ ಕೊಡಬೇಕು. ಈ ಒಗ್ಗರಣೆಯಿಂದ ರಾಜ್ಮಾದಂಥ ಕಾಳು ಸಹ ಸುಲಭವಾಗಿ ಜೀರ್ಣವಾಗುತ್ತದೆ. ಇದನ್ನೇ ನೀವು ಟೊಮೇಟೊ ಸೂಪ್‌, ಬಾಳೇಕಾಯಿ ಪಲ್ಯ, ಸಿಹಿಗೆಣಸಿನ ಪಲ್ಯ, ಸುವರ್ಣಗೆಡ್ಡೆ ಪಲ್ಯ ಇತ್ಯಾದಿಗಳಿಗೂ ಬಳಸಬಹುದು.

ಪಂಚಮಸಾಲೆ ಒಗ್ಗರಣೆ

ಈ ತರಹದ ಒಗ್ಗರಣೆಗಳು ಬಂಗಾಳ, ಅಸ್ಸಾಂ ರಾಜ್ಯಗಳ ಶುಧ್ಧ ಸಸ್ಯಾಹಾರಿ ಪರಿವಾರಗಳಲ್ಲಿ ಸಹಜ. ಸಾಸುವೆ, ಸೋಂಪು, ಮೆಂತ್ಯ, ಜೀರಿಗೆ, ಧನಿಯಾ ಎಲ್ಲವನ್ನೂ ಅರ್ಧರ್ಧ ಸಣ್ಣ ಚಮಚದಷ್ಟು ತೆಗೆದು ಬಿಸಿ ಎಣ್ಣೆಗೆ ಒಗ್ಗರಣೆ ಕೊಡಬೇಕು. ಇದನ್ನು ಕುಂಬಳ, ಸೋರೆ, ಬೇಬಿ ಪೊಟೇಟೋ ಇತ್ಯಾದಿ ಪಲ್ಯ, ಗ್ರೇವಿಗಳಿಗೆ ಬಳಸುತ್ತಾರೆ, ಬಹಳ ಸ್ವಾದಿಷ್ಟ ಹೌದು.

ಢೋಕ್ಲಾ, ಖಾಂಡ್ವಿಗೆ ಒಗ್ಗರಣೆ

1-2 ಚಮಚ ಎಣ್ಣೆ ಬಿಸಿ ಮಾಡಿ. ಇದಕ್ಕೆ ಅರ್ಧರ್ಧ ಸಣ್ಣ ಚಮಚ ಸಾಸುವೆ, ಎಳ್ಳು, ಇಂಗು, ಕಾಳುಮೆಣಸು, ಇಡಿಯಾದ ಬ್ಯಾಡಗಿ ಮೆಣಸು 2 ಎಸಳು ಕರಿಬೇವು ಸೇರಿಸಿ ತಕ್ಷಣ ಸಾಂಬಾರ್‌, ರಸಂ, ದಾಲ್, ಗೊಜ್ಜು ಇತ್ಯಾದಿಗಳಿಗೆ ಒಗ್ಗರಣೆ ಕೊಡಿ. ಇದರ ಜೊತೆ ಚಿಟಕಿ ಕ/ಉ ಬೇಳೆ ಸಹ ಬೆರೆಸಿ. ಢೋಕ್ಲಾ, ಖಾಂಡ್ವಿ (ಗುಜರಾತಿ ಡಿಶೆಸ್‌)ಗಳಿಗೆ ಇದು ಅತ್ಯಗತ್ಯ.

ಇಡಿಯಾದ ಮಸಾಲೆಗಳ ಒಗ್ಗರಣೆ

ಇಡಿಯಾದ ಒಣ ಮಸಾಲೆಗಳು ಅಂದ್ರೆ ಜೀರಿಗೆ, ಕಾಳುಮೆಣಸು, ಏಲಕ್ಕಿ (ದೊಡ್ಡ  ಸಣ್ಣ), ಚಕ್ಕೆ, ಲವಂಗ, ಮೊಗ್ಗು, ಲವಂಗದೆಲೆ ಇತ್ಯಾದಿ ಸೇರಿಸಿ ರೀಫೈಂಡ್‌ ಆಯಿಲ್‌, ತುಪ್ಪದಲ್ಲಿ ಒಗ್ಗರಣೆ ಕೊಟ್ಟು ಕಲಸನ್ನ, ಪಲಾವ್, ವೆಜಿಟೆಬ್‌ ಬಿರಿಯಾನಿ, ಗೋಭಿ ಇತ್ಯಾದಿಗಳಿಗೆ ಬೆರೆಸಿ. ವ್ಯಂಜನದ ಸ್ವಾದ ಹೆಚ್ಚುತ್ತದೆ.

ಆನಿಯನ್‌ ಟೊಮೇಟೊ ಫ್ರೈ

ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಟೊಮೇಟೋಗಳನ್ನು ಉದ್ದಕ್ಕೆ ಹೆಚ್ಚಿದ ಹಸಿ ಮೆಣಸಿನೊಂದಿಗೆ ಎಣ್ಣೆಯಲ್ಲಿ ಹದನಾಗಿ ಬಾಡಿಸಿ ಉದ್ದು, ಕಡಲೆ, ಹಸಿರು, ತೊಗರಿ, ಮಸೂರ್‌ ದಾಲ್ ಗಳಿಗೆ ಒಗ್ಗರಣೆ ಕೊಟ್ಟರೆ ಫೈನ್‌ ಆಗಿರುತ್ತದೆ. ಹೀರೇಕಾಯಿ, ಸೋರೆಕಾಯಿ ತೊವ್ವೆ, ತೊಂಡೇಕಾಯಿಯ ಕಾಯಿಸಾಸುವೆ ಗೊಜ್ಜಿಗೂ ಸೂಕ್ತ. ದಾಲ್‌ ಒಂದು ಹಂತಕ್ಕೆ ಕುದ್ದು ರೆಡಿಯಾದಾಗ, ಪಕ್ಕದ ಒಲೆಯಲ್ಲಿ ಬಿಸಿಯಾದ ಎಣ್ಣೆಗೆ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಶುಂಠಿ, ಹಸಿಮೆಣಸು, ಟೊಮೇಟೊ ಎಲ್ಲಾ ಸೇರಿಸಿ ಫ್ರೈ ಮಾಡಿ ಅದನ್ನು ದಾಲ್‌ಗೆ ಬೆರೆಸಿರಿ.

ಕಾಶ್ಮೀರಿ ಒಗ್ಗರಣೆ

ರೈಸ್‌ ಕೇಸರಿಭಾತ್‌ಗೆ  ತುಪ್ಪದಲ್ಲಿ ಹುರಿದ ಲವಂಗ, ಕುಟ್ಟಿದ ಏಲಕ್ಕಿ, ಪಚ್ಚ ಕರ್ಪೂರದ ಒಗ್ಗರಣೆ ಕೊಡಿ. ಇದಕ್ಕೆ ಅಕ್ಕಿ ಸೇರಿಸಿ ಇನ್ನಷ್ಟು ತುಪ್ಪದಲ್ಲಿ ಹುರಿದು ವ್ಯಂಜನ ಮುಂದುವರಿಸಿ, ಸುವಾಸನೆ ಇರುತ್ತದೆ.

ಬೆಳ್ಳುಳ್ಳಿಈರುಳ್ಳಿ ತೆನೆಗಳ ಒಗ್ಗರಣೆ

ಈ ಒಗ್ಗರಣೆಯನ್ನು ದಾಲ್‌, ಗ್ರೇವಿಗಳಿಗೆ ಬಳಸಬಹುದು. ಅತ್ತ ದಾಲ್‌ ಕುದ್ದು ರೆಡಿಯಾಗಲಿ. ಇತ್ತ ಚಿಕ್ಕ ಒಲೆಯಲ್ಲಿ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಬೆಳ್ಳುಳ್ಳಿ, ಹಸಿರಾದ ಈರುಳ್ಳಿ ತೆನೆ ಸೇರಿಸಿ ಫ್ರೈ ಮಾಡಿ. ಇದಕ್ಕೆ ತುಸು ಖಾರದ ಪುಡಿ ಹಾಕಿ ಕೆದಕಿ ತಕ್ಷಣ ದಾಲ್‌ಗೆ ರವಾನಿಸಿ. ಇದು ತೊಗರಿಬೇಳೆ, ಉದ್ದಿನಬೇಳೆ ದಾಲ್‌ಗೆ ಹೆಚ್ಚು ಸೂಕ್ತ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ