ಹೆಜ್ಜೆ ಹೆಜ್ಜೆಗೂ ಹೆಂಡತಿಯನ್ನು ಟೀಕಿಸುವ ಪತಿಯಲ್ಲಿ ಯಾವುದಾದರೂ ದೋಷ ಇರುತ್ತದಾ? ಆತನ ಈ ಸ್ವಭಾವ ಸರಿಪಡಿಸುವ ಬಗ್ಗೆ ನೀವೇ ಅರಿತುಕೊಳ್ಳಿ!
ಪ್ರತಿಮಾ ಸ್ನಾತಕೋತ್ತರ ಪದವೀಧರೆ. ನೋಡಲು ಆಕರ್ಷಕವಾಗಿದ್ದಾಳೆ. ಚೆನ್ನಾಗಿ ಅಡುಗೆ ಕೂಡ ಮಾಡುತ್ತಾಳೆ. ವ್ಯವಹಾರ ಜ್ಞಾನ ಉಳ್ಳವಳು. ಸಂಬಂಧಿಕರು, ಅಕ್ಕಪಕ್ಕದವರು ಎಲ್ಲರೂ ಅವಳನ್ನು ಹೊಗಳುತ್ತಾರೆ. ಆದರೆ ಗಂಡನ ದೃಷ್ಟಿಯಲ್ಲಿ ಮಾತ್ರ ಅವಳು ಏನೂ ಗೊತ್ತಿಲ್ಲದವಳು. ಏಕೆ? ಈ ಪ್ರಶ್ನೆ ಕೇವಲ ಪ್ರತಿಮಾ ಒಬ್ಬಳದೇ ಅಲ್ಲ, ಅಂತಹ ಅನೇಕ ಮಹಿಳೆಯರು ಇದೇ ಪ್ರಶ್ನೆ ಕೇಳುತ್ತಾರೆ.
ಅವರ ಅಭ್ಯಾಸಗಳು, ರೀತಿ ನೀತಿಗಳು, ಜೀವನಶೈಲಿಗಳು ಗಂಡಂದಿರಿಗೆ ಹಿಡಿಸುವುದೇ ಇಲ್ಲ. ಈ ಕಾರಣದಿಂದ ಅವರು ಹೆಜ್ಜೆ ಹೆಜ್ಜೆಗೂ ತಪ್ಪು ಕಂಡುಹಿಡಿಯುತ್ತಾರೆ. ಇಂತಹ ಪತಿಯಂದಿರು ಎಲ್ಲ ನಿಟ್ಟಿನಲ್ಲೂ ಪರ್ಫೆಕ್ಟ್ ಆಗಿರುತ್ತಾರಾ?
ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ವಭಾವ, ತನ್ನದೇ ಆದ ರೀತಿನೀತಿ, ದೃಷ್ಟಿಕೋನ ಹಾಗೂ ಆಸಕ್ತಿ ಇರುತ್ತವೆ. ಎಲ್ಲರೂ ನನ್ನ ಸ್ವಭಾವದ ಹಾಗೆ ಇರುವುದಿಲ್ಲ. ಹೀಗಾಗಿ ಯಾರೊಬ್ಬರೂ ಪರ್ಫೆಕ್ಟ್ ಅಲ್ಲ ಎಂದು ಯೋಚಿಸಿ, ಪ್ರತಿಯೊಬ್ಬರಲ್ಲೂ ತಪ್ಪು ಕಂಡುಹಿಡಿಯುವವರಲ್ಲಿ ಯಾವುದೇ ವಿಶೇಷ ಗುಣಗಳು ಇರುವುದಿಲ್ಲ ಎಂದು ಹೇಳುವುದು ಅತಿಶಯೋಕ್ತಿಯಾಗುತ್ತದೆ. ಪ್ರತಿಮಾಳ ಉದಾಹರಣೆಯನ್ನೇ ತೆಗೆದುಕೊಳ್ಳಿ. ಆಕೆ ಚೆನ್ನಾಗಿ ಅಡುಗೆ ಮಾಡುತ್ತಾಳೆ. ವ್ಯವಹಾರ ನಿಪುಣೆ. ಆದರೆ ಆ ವಿಶೇಷಗಳೇನೂ ಗಂಡನಲ್ಲಿಲ್ಲ. ಬೇರೆಯವರ ತಪ್ಪು ಕಂಡುಹಿಡಿಯುವ ವ್ಯಕ್ತಿಯಲ್ಲಿ ಯಾವುದಾದರೂ ವಿಶೇಷ ಗುಣಗಳಿರಬೇಕು. ಅವನಲ್ಲಿ ಯಾವುದೇ ಬೌದ್ಧಿಕ ಪ್ರತಿಭೆಯೂ ಇಲ್ಲ. ಆಟೋರಿಕ್ಷಾದಿಂದ ದುಡಿಯುತ್ತಾನೆ, ಹಣ ಗಳಿಸುತ್ತಾನೆ. ಅದಕ್ಕೆ ಅವನಿಗೆ ಹೆಮ್ಮೆಯಿದೆ. ಪ್ರತಿಭಾ ಮನೆಯಲ್ಲಿ ಟ್ಯೂಶನ್ ಮಾಡಿ ತಿಂಗಳಿಗೆ 8-10 ಸಾವಿರ ರೂ. ಗಳಿಸುತ್ತಾಳೆ. ಮುಂಜಾನೆ 5 ಗಂಟೆಗೆ ಏಳುವುದು, ಮಕ್ಕಳಿಗೆ ತಿಂಡಿ ತಯಾರಿಸುವುದು, ಬಳಿಕ ಅವರನ್ನು ರೆಡಿ ಮಾಡುವುದು, ಅಷ್ಟೇ ಅಲ್ಲ ಮನೆಯನ್ನು ಅಚ್ಚುಕಟ್ಟಾಗಿ ಇಡುವುದರ ಮೂಲಕ ಸಂಜೆ ಕೂಡ ಪತಿಗೆ ಎಲ್ಲ ವ್ಯವಸ್ಥಿತ ಎನಿಸಿರಬೇಕು. ಸಂಜೆ ಮನೆಗೆ ಬಂದ ಮಕ್ಕಳಿಗೆ ಓದಿಸುವುದು, ಹೋಂವರ್ಕ್ ಮಾಡಲು ಏನಾದರೂ ತೊಂದರೆ ಎನಿಸಿದಲ್ಲಿ ಅವರಿಗೆ ಸಹಾಯ ಮಾಡುವುದು ಇತ್ಯಾದಿ.
ಅತಿಯಾದ ಅಪೇಕ್ಷೆ
ಗಂಡ 7ಕ್ಕಿಂತ ಮುಂಚೆ ಎಂದೂ ಏಳುವುದಿಲ್ಲ. ಇದಕ್ಕೆ ಮುಖ್ಯ ಕಾರಣ ನಾನು ಗಳಿಸುತ್ತೇನೆಂಬ ಅಹಂ. ಮುಂಜಾನೆ ಎಲ್ಲಕ್ಕೂ ಮುಂಚೆ ಏಳುವುದು ಹಾಗೂ ರಾತ್ರಿ ಎಲ್ಲರೂ ಮಲಗಿದ ನಂತರ ಮಲಗುವುದು ಪ್ರತಿಮಾಳ ದಿನಚರಿ. ಇಂತಹದರಲ್ಲಿ ಅವಳ ಗಂಡ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ತಪ್ಪು ಕಂಡುಹಿಡಿಯುತ್ತಾನೆ. ಗಂಡ ಬರುವ ಸದ್ದು ಕೇಳಿಯೇ ಇವತ್ತೇನು ತಪ್ಪು ಕಂಡುಹಿಡಿಯುತ್ತಾರೋ? ಎಂದು ಆಕೆಗೆ ಆತಂಕ ಶುರುವಾಗುತ್ತದೆ. ಗಂಡ ಬರುತ್ತಲೇ ಕೂಗಾಡಲು ಶುರು ಮಾಡುತ್ತಾನೆ, “ನೀನು ದಿನವಿಡೀ ಮನೆಯಲ್ಲಿ ಮಾಡುವುದಾದರೂ ಏನು? ಮಕ್ಕಳ ಬಟ್ಟೆಗಳು ಹಾಸಿಗೆಯ ಮೇಲೆ ಹಾಗೆಯೇ ಬಿದ್ದಿವೆ. ಕಪಾಟುಗಳು ಬಾಯಿ ತೆರೆದುಕೊಂಡಿವೆ. ಇಂದು ಪಲ್ಯದಲ್ಲಿ ಹೆಚ್ಚು ಉಪ್ಪು ಸುರಿದಿದ್ದೆ. ಅದನ್ನು ಕಸದ ಬುಟ್ಟಿಗೆ ಹಾಕೋ ಅಷ್ಟು ಕೋಪ ಬಂದಿತ್ತು.”
ಆ ಮಾತುಗಳನ್ನು ಕೇಳಿ ಅವಳಿಗೆ ಕಹಿ ಗುಳಿಗೆ ನುಂಗಿದಂತೆ ಆಯಿತು. ಅದು ದೈನಂದಿನ ನಾಟಕವೇ ಆಗಿಬಿಟ್ಟಿತ್ತು. ನಿನ್ನೆ ಕಪಾಟು ಮುಚ್ಚಿತ್ತು. ಇಂದು ಅದನ್ನು ಮುಚ್ಚಲು ಆಗಲಿಲ್ಲ. ಏಕೆಂದರೆ ಅದೇ ಸಮಯಕ್ಕೆ ನೆರೆಮನೆಯಾಕೆ ಬಂದಿದ್ದರು. ಗಮನ ಅತ್ತ ಕಡೆ ಹೋಯಿತು. ಮಗುವಿನ ಅಂಗಿಯ ಬಟನ್ ಕಿತ್ತು ಹೋಗಿತ್ತು. ಅದನ್ನು ಹಚ್ಚಲೆಂದು ಅವಳು ಹಾಸಿಗೆಯ ಮೇಲೆ ಇಟ್ಟಿದ್ದಳು. ಈಗ ಅದರ ಬಗ್ಗೆ ಸ್ಪಷ್ಟನೆ ಕೊಡುವರಾರು? ಹೀಗೆ ಸ್ಟಷ್ಟೀಕರಣ ಕೊಡುತ್ತಾ 20 ವರ್ಷ ಕಳೆದುಹೋಗಿದ್ದವು. ಆದರೆ ಗಂಡನ ಅಭ್ಯಾಸಗಳು ಮಾತ್ರ ಬದಲಾಗಿರಲಿಲ್ಲ. ಒಮ್ಮೊಮ್ಮೆ ಅವಳ ಕಣ್ಣುಗಳು ತುಂಬಿ ಬರುತ್ತಿದ್ದವು. ಆದರೆ ಗಂಡ ತನಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತಿರುತ್ತಿದ್ದ. ಅವನಿಗೆ ಮಾತ್ರ ಎಲ್ಲ ಪರ್ಫೆಕ್ಟ್ ಬೇಕು.
ಪತಿಯ ಹಿಟ್ಲರ್‌ಗಿರಿ
ಪರ್ಫೆಕ್ಟ್ ವ್ಯಾಖ್ಯೆ ಏನು ಎಂಬ ಬಗ್ಗೆ ಇಲ್ಲಿ ಪ್ರಶ್ನೆ ಏಳುತ್ತದೆ. ಅಡುಗೆಯಲ್ಲಿ ಉಪ್ಪು ಕಡಿಮೆ ಇದೆಯಾ, ಹೆಚ್ಚಾಗಿದೆಯಾ ಎಂಬುದು ಪರ್ಫೆಕ್ಟ್ ಎಂದು ಹೇಳುವುದು ಹೇಗೆ? ಬಹುಶಃ ಅವನಿಗೆ ಎಷ್ಟು ಉಪ್ಪು ಇರಬೇಕೊ ಅದು ಪ್ರತಿಮಾಳಿಗೆ ಇಷ್ಟ ಇರಲಿಕ್ಕಿಲ್ಲ. ಪ್ರತಿಮಾಳಿಗೆ ಅಷ್ಟೇ ಏಕೆ ಆಕೆಯ ಮನೆಗೆ ಬರುವ ಪ್ರತಿಯೊಬ್ಬರಿಗೂ ಅವಳು ಮಾಡುವ ಅಡುಗೆ, ತಿಂಡಿ ಎಂದರೆ ಬಹಳ ಇಷ್ಟ. ಇಂತಹದರಲ್ಲಿ ಗಂಡನ ಪರ್ಫೆಕ್ಟ್ ವ್ಯಾಖ್ಯೆ ಎಂತಹ ರೂಪ ಪಡೆದುಕೊಂಡಿದೆ? ತಾನೇ ಪರ್ಫೆಕ್ಟ್ ಎಂದು ಹೇಳಿಕೊಳ್ಳುವ ಪತಿಯ ಧೋರಣೆ ಹಿಟ್ಲರ್‌ಗಿರಿ ಅಲ್ಲವೇ?
ಎಲ್ಲರಲ್ಲೂ ತಪ್ಪು ಕಂಡುಹಿಡಿಯುವುದು ಒಂದು ರೀತಿಯ ಮನೋರೋಗವೇ ಹೌದು. ಪ್ರತಿಭಾಳ ಗಂಡನಿಗಾದದ್ದು ಅದೇ ರೋಗ. ಸುಮ್ಮನೆ ಕುಳಿತುಕೊಳ್ಳುವುದು ಅವರ ಜಾಯಮಾನವೇ ಅಲ್ಲ. ಎಲ್ಲಿಯೇ ಹೋಗಲಿ, ಅಲ್ಲೆಲ್ಲ ತಪ್ಪು ಕಂಡುಹಿಡಿಯುವುದೇ ಆಗಿಬಿಡುತ್ತದೆ. ಅವರ ದೃಷ್ಟಿ ಹೋಗುವುದು ಕೇವಲ ತಪ್ಪುಗಳ ಮೇಲೆಯೇ ಒಬ್ಬರಿಗೆ ಐಬ್ರೋನಲ್ಲಿ ತಪ್ಪು ಕಂಡುಬರುತ್ತದೆ. ಇನ್ನೊಬ್ಬರಿಗೆ ಲಿಪ್‌ಸ್ಟಿಕ್ ಹರಡಿಕೊಂಡಿರುವುದು ಗೋಚರಿಸುತ್ತದೆ. ಮತ್ತೆ ಕೆಲವರು ಸೀರೆಯ ಬಗ್ಗೆ ಕಮೆಂಟ್ ಮಾಡುತ್ತಾರೆ.
ಒಬ್ಬರು ಇನ್ನೊಬ್ಬರಂತೆ ಇರುವುದಿಲ್ಲ. ಪ್ರತಿಮಾಳ ಗಂಡನಿಗೆ ಎಲ್ಲ ಪರ್ಫೆಕ್ಟ್ ಆಗಿರಬೇಕು. ಪ್ರತಿಮಾ ಒಬ್ಬಳಿಂದಲೇ ತಪ್ಪು ಘಟಿಸುತ್ತದೆ ಎಂಬುದರ ಬಗ್ಗೆ ಅವಳ ಗಂಡ ಯೋಚಿಸಬೇಕಿತ್ತು. ಆದರೆ ಇದರರ್ಥ ಅವಳನ್ನು ಸದಾ ನಿಂದಿಸುತ್ತಿರಬೇಕು ಎಂದಲ್ಲ. ಆಫೀಸ್ ಹಾಗೂ ಮನೆಯಲ್ಲಿ ವ್ಯತ್ಯಾಸವಿದೆ. ಆಫೀಸ್‌ನಲ್ಲಿ ಸ್ವಚ್ಛತೆ ಕೆಲಸಕ್ಕೆಂದೇ ಕೆಲವರನ್ನು ನೇಮಿಸಿರುತ್ತಾರೆ. ಆದರೆ ಮನೆಯಲ್ಲಿ ಪತ್ನಿಯ ಪಾಲಿಗೆ ನೂರೆಂಟು ಕೆಲಸಗಳು ಬರುತ್ತವೆ. ಪ್ರತಿಯೊಂದು ಕೆಲಸದಲ್ಲಿ ಆಕೆ ಸಮಾನ ಆಸಕ್ತಿ ತೋರಿಸುತ್ತಾಳೆಂದು ಹೇಳುವುದು ಕಷ್ಟ. ಹೀಗಾಗಿ ಪರ್ಫೆಕ್ಟ್ ನ್ನು ಬಯಸುವ ಗಂಡ ಹೆಂಡತಿಯ ಕೆಲಸ ಕಾರ್ಯಗಳಲ್ಲಿ ಅಷ್ಟಿಷ್ಟು ಸಹಾಯ ಮಾಡಬೇಕು.
ಜಗಳದ ಆರಂಭ
ಯಾವುದೂ ಅತಿಯಾದರೆ ಒಳ್ಳೆಯದಲ್ಲ. ಪರ್ಫೆಕ್ಟ್ ನ ಅಪೇಕ್ಷೆಯಲ್ಲಿ ಮನೆ ಜೈಲಿನಂತಾಗಿ ಬಿಡುತ್ತದೆ. ಇಂತಹ ಮನೆಗೆ ಯಾರೊಬ್ಬರೂ ಹೋಗಲೂ ಇಷ್ಟಪಡುವುದಿಲ್ಲ. ತವರಿನಿಂದ ಯಾರೇ ಬಂದರೂ ಗಂಡ ಅವರೆದುರಿಗೆ ಸುಮ್ಮನಿರುತ್ತಾನೆ. ಅವರು ಹೋಗುತ್ತಿದ್ದಂತೆ, “ನಿನ್ನ ತಂದೆತಾಯಿಗೆ, ಅಣ್ಣತಮ್ಮಂದಿರಿಗೆ ಸ್ವಲ್ಪವೂ ಬುದ್ಧಿ ಇಲ್ಲ. ಕಳಪೆ ದರ್ಜೆ ಸಿಹಿ ತಿಂಡಿ/ಖಾರಾ ತಂದು ಬಿಡುತ್ತಾರೆ,” ಎಂದು ತನ್ನ ಅದೇ ಹಳೆಯ ರಾಗ ಹಾಡಲಾರಂಭಿಸುತ್ತಾನೆ.
ತವರಿನ ಬಗ್ಗೆ ಕೀಳಾಗಿ ಮಾತಾಡಿದರೆ ಯಾವುದೇ ಮಹಿಳೆಗೆ ಸಹಿಸಲು ಆಗುವುದಿಲ್ಲ. ಹಸನ್ಮುಖಿ ಪ್ರತಿಮಾಳಿಗೂ ಕೋಪ ಉಕ್ಕಿ ಬರುತ್ತದೆ. ಆಗ ಇಬ್ಬರ ನಡುವೆ ಜಗಳ ಶುರುವಾಗುತ್ತದೆ. ಪದೇ ಪದೇ ಹಂಗಿಸುವ, ಕೆಣಕುವ ಗಂಡನ ಮಾತುಗಳಿಂದ ರೋಸಿ ಹೋದ ಪತ್ನಿಯರು ಆ ಕೋಪವನ್ನು ಮಕ್ಕಳ ಮೇಲೆ ತೀರಿಸಿಕೊಳ್ಳುತ್ತಾರೆ. ಕಾರಣವಿಲ್ಲದೆಯೇ ಮಕ್ಕಳನ್ನು ಹೊಡೆಯುತ್ತಾರೆ. ಇದರಿಂದಾಗಿ ಮಕ್ಕಳ ಪಾಲನೆ ಪೋಷಣೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕ್ರಮೇಣ ಹೆಂಡತಿಯ ಸ್ವಭಾವದಲ್ಲಿ ಸಿಡಿಮಿಡಿತನ ಕಾಣಲಾರಂಭಿಸುತ್ತದೆ. ಅವಳು ತನ್ನಲ್ಲಿನ ವೈಶಿಷ್ಟ್ಯತೆಗಳನ್ನು ಮರೆಯತೊಡಗುತ್ತಾಳೆ. ಬಹುತೇಕವಾಗಿ ಇಂತಹ ಮಹಿಳೆಯರು ಖಿನ್ನತೆಗೆ ತುತ್ತಾಗುತ್ತಾರೆ. ಅದು ಕುಟುಂಬಕ್ಕೆ ಘಾತುಕವಾಗುತ್ತದೆ.
ಗಂಡನ ತಪ್ಪು ಕಂಡುಹಿಡಿಯುವ ಅಭ್ಯಾಸದಿಂದಾಗಿ ಪ್ರತಿಮಾ ತವರು ಮನೆಗೆ ಹೋಗಿಬಿಟ್ಟರೆ ಗಂಡನ ಮನೆಗೆ ವಾಪಸ್ ಬರುವ ಮಾತೇ ಎತ್ತುವುದಿಲ್ಲ. ಹೋದರೆ ಪುನಃ ಅದೇ ಅದೇ ಮಾತುಗಳನ್ನು ಕೇಳಬೇಕಾಗಿ ಬರುತ್ತದೆ. ಗಂಡ ಎಲ್ಲಿಯವರೆಗೆ ಆಫೀಸ್‌ಗೆ ಹೋಗುವುದಿಲ್ಲವೋ ಅಲ್ಲಿಯವರೆಗೆ ಆಕೆಯ ಜೀವ ಕುತ್ತಿಗೆಗೆ ಬರುತ್ತದೆ. ಗಂಡನಿಂದ ಯಾವುದೇ ಕೊಂಕು ಮಾತು ಕೇಳುವ ಅವಕಾಶ ಸಿಗಬಾರದೆಂದು ಆಕೆ ಮನೆಯನ್ನು ಸದಾ ಅಚ್ಚುಕಟ್ಟಾಗಿ ಇಡಲು ಹೆಣಗಾಡುತ್ತಿರುತ್ತಾಳೆ. ಆದರೆ ಗಂಡನ್ನೆನ್ನುವ ಪ್ರಾಣಿ ಬೇರೆ ಗ್ರಹದಿಂದ ಬಂದವನಂತೆ ವರ್ತಿಸುತ್ತಾನೆ.
ಹೊಂದಾಣಿಕೆಯ ಅಸ್ತ್ರ
ಸದಾ ತಪ್ಪುಗಳನ್ನು ಹುಡುಕುವವರು ವ್ಯವಹಾರ ಜ್ಞಾನದ ಕೊರತೆಯಿಂದ ಬಳಲುತ್ತಿರುತ್ತಾರೆ. ಅವರಿಗೆ ಇರುವ ಹಿತಚಿಂತಕರ ಸಂಖ್ಯೆ ಅತ್ಯಲ್ಪವಾಗಿರುತ್ತದೆ. ಇಲ್ಲವೇ, ಯಾರೊಬ್ಬರೂ ಇರುವುದಿಲ್ಲ. ನಕಾರಾತ್ಮಕ ಗುಣಗಳಿಂದಾಗಿ ಅವರು ಚಿರಪರಿಚಿತ ವಲಯದಲ್ಲಿ ಕುಖ್ಯಾತಿ ಪಡೆದಿರುತ್ತಾರೆ. ಗಂಡ ಪರ್ಫೆಕ್ಟ್ ಆಗಿದ್ದರೆ, ಅವನನ್ನು ಹೊರತುಪಡಿಸಿ ಇತರರು ಮೂರ್ಖರಾಗಿರುತ್ತಾರೆಯೇ?
ಪ್ರತಿಮಾಳ ಅಕ್ಕ ಎಂಎಸ್ಸಿ ಪದವೀಧರೆ. ಶಾಲೆಯೊಂದರಲ್ಲಿ ಶಿಕ್ಷಕಿ. ಆಕೆಯ ಪತಿ ಕೂಡ ಸರ್ಕಾರಿ ಉದ್ಯೋಗಿ. ಮನೆಗೆ ಹೋದಾಗ ಯಾವುದೊಂದು ವ್ಯವಸ್ಥಿತವಾಗಿರುವುದಿಲ್ಲ. ಆದರೂ ಪ್ರತಿಮಾಳ ಅಕ್ಕ ಹಾಗೂ ಅವಳ ಗಂಡನ ನಡುವೆ ಯಾವುದೇ ಮನಸ್ತಾಪ ಉಂಟಾಗುವುದಿಲ್ಲ. ಅವರು ಕೆಲಸದ ಬಗೆಗೆ ಮಾತ್ರ ಪ್ರಾಧಾನ್ಯತೆ ಕೊಡುತ್ತಾರೆ. ಯಾವುದು ಅಗತ್ಯವಾಗಿರುತ್ತದೋ, ಅದರ ಬಗ್ಗೆ ಮಾತ್ರ ಅವರು ಯೋಚಿಸುತ್ತಾರೆ. ಮನೆಯ ಸ್ವಚ್ಛತೆಯ ವಿಷಯವನ್ನು ಅವರು ತಪ್ಪಿಸುವುದಿಲ್ಲ. ಆದರೆ ಅದಕ್ಕೇ ಆದ ಸಮಯ ನಿಗದಿ ಮಾಡಿರುತ್ತಾರೆ. ಕೆಲಸದಲ್ಲಿ ಪರ್ಫೆಕ್ಷನ್ ಇರಬೇಕಾದುದು ಒಳ್ಳೆಯ ಸಂಗತಿಯೇ. ಆದರೆ ಇದರಲ್ಲಿ ಯಾರಿಗಾದರೂ ಟಾರ್ಚರ್ ಮಾಡಬೇಕಾದ ವಿಷಯವೇ ಇರುವುದಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ವಿಚಾರ ಹೊಂದಿರುತ್ತಾರೆ ಎಂದು ಹೇಳುವುದು ಕಷ್ಟ. ಅದರಲ್ಲೂ ವಿಶೇಷವಾಗಿ ಗಂಡಹೆಂಡತಿಯ ಸಂಬಂಧ ಹೊಂದಾಣಿಕೆ ಮಾಡಿಕೊಳ್ಳಲೇಬೇಕು. ಪ್ರತಿಮಾಳ ಸೀರೆಯ ಸೆರಗು ಹೇಗಿರಬೇಕು ಎನ್ನುವುದು ಅವಳ ವೈಯಕ್ತಿಕ ವಿಷಯ. ಬೇರೆಯವರೊಂದಿಗೆ ಹೇಗೆ ಮಾತಾಡಬೇಕು, ವರ್ತಿಸಬೇಕು ಎನ್ನುವುದು ಆಕೆಗೆ ಬಿಟ್ಟ ವಿಚಾರ. ಗಂಡ ತನ್ನ ಶೂಗಳಿಗೆ ಪಾಲಿಶ್ ಕೂಡ ಮಾಡಿಕೊಳ್ಳುವುದಿಲ್ಲ. ಅದನ್ನೂ ಕೂಡ ಪ್ರತಿಮಾಳೇ ಮಾಡಬೇಕಾಗುತ್ತದೆ. ಪಾಲಿಶ್ ಮಾಡಿಯೂ ಕೂಡ ಅವನು ಸುಮ್ಮನಿರುವುದಿಲ್ಲ. ಅದರಲ್ಲಿಯೂ ಏನಾದರೂ ತಪ್ಪು ಕಂಡುಹಿಡಿಯುತ್ತಾನೆ. ನೀನು ನನ್ನ ಶೂಗಳನ್ನು ಚೆನ್ನಾಗಿ ಹೊಳೆಯುವಂತೆ ಪಾಲಿಶ್ ಮಾಡಿಲ್ಲ. ಹಾಗೆ ನೋಡಿದರೆ ಗಂಡನೇ ಈ ಕೆಲಸ ಮಾಡಿಕೊಳ್ಳಬೇಕಿತ್ತು.
ಹೆಂಡತಿಯಲ್ಲಷ್ಟೇ ಅಲ್ಲ, ಮಕ್ಕಳ ಅಭ್ಯಾಸ ಹವ್ಯಾಸಗಳಲ್ಲೂ ಗಂಡನಿಗೆ ತಪ್ಪುಗಳು ಕಂಡುಬರುತ್ತವೆ. ಹೆಂಡತಿ ಮಕ್ಕಳ ಮೇಲೆ ಸಂದೇಹಪಡುವುದನ್ನು ಬಿಟ್ಟು ಅವರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಮಕ್ಕಳಿಗೆ ತಾವು ಮಾಡುವ ಕೆಲಸದಲ್ಲಿ ತಪ್ಪಾಗುತ್ತಿಲ್ಲ ತಾನೆ ಎಂಬ ಭಯ ಕಾಡುತ್ತಿರುತ್ತದೆ. ಗಂಡನ ಕೆಲಸದಲ್ಲಿ ಯಾವುದೇ ತಪ್ಪು ಕಂಡುಹಿಡಿಯಲು ಸಾಧ್ಯವಿಲ್ಲವೇ? ಅವನ ಬಾಸ್ ಅವನ ಕೆಲಸದಲ್ಲಿ ತಪ್ಪು ಹುಡುಕುತ್ತಿರಬಹುದು. ತಾನು ನೌಕರಿ ಮಾಡುತ್ತೇನೆಂಬ ಕಾರಣದಿಂದ ಗಂಡ ಅಲ್ಲಿ ಸುಮ್ಮನಿರಬಹುದು. ಪ್ರತಿಮಾ ಕೂಡ ತಾನು ಗಳಿಸುತ್ತಿರುವ ಗಂಡನ ಜೊತೆ ಇರಬೇಕೆಂಬ ಕಾರಣದಿಂದ ಸುಮ್ಮನಿದ್ದಾಳೆ.
ನೀವೇ ಸ್ವತಃ ಮುಂದುವರಿಯಿರಿ
ಊಟ ಮಾಡುವಾಗ ಅನ್ನದ ಅಗುಳು ಕೆಳಗೆ ಬಿದ್ದರೆ ಅದರರ್ಥ ಆ ವ್ಯಕ್ತಿಗೆ ಊಟ ಮಾಡಲು ಬರುವುದೇ ಇಲ್ಲ ಎಂದಲ್ಲ. ತಪ್ಪು ಕಂಡುಹಿಡಿಯುವ ಪತಿ ಜೊತೆಗೆ ಊಟಕ್ಕೆ ಕುಳಿತಿದ್ದರೆ ನೆಮ್ಮದಿಯಿಂದ ಊಟ ಮಾಡಲು ಕೂಡ ಬಿಡುವುದಿಲ್ಲ. ಒಮ್ಮೆ ಅನ್ನದ ಅಗುಳನ್ನು ಒರೆಸದೆ ಇರುವುದಕ್ಕೆ ಬಯ್ದರೆ, ಇನ್ನೊಮ್ಮೆ ಊಟದ ಟೇಬಲ್ ಗೆ ಗ್ಲಾಸ್ ತಂದಿಡದೆ ಇರುವುದಕ್ಕೆ ಹಂಗಿಸಬಹುದು. ಆ ವ್ಯಕ್ತಿ ಗ್ಲಾಸ್ ತಂದಿಟ್ಟುಕೊಂಡು ಹೆಂಡತಿಯ ಕೆಲಸವನ್ನು ಒಂದಿಷ್ಟಾದರೂ ಹಗುರ ಮಾಡಲು ಇಷ್ಟಪಡುವುದಿಲ್ಲ. ಇದನ್ನು ಹಿಂಸೆ ಎಂದು ಭಾವಿಸಬಾರದು. ಒಬ್ಬ ಮಹಿಳೆ ಯಾವ ಯಾವ ಸಂಗತಿಯ ಮೇಲೆ ಗಮನ ಕೊಡಬೇಕು? ಏನಾದರೂ ಕೊರತೆ, ಸಣ್ಣ ತಪ್ಪು ಆಗಿಯೇ ಆಗುತ್ತದೆ. ಎಲ್ಲವೂ, ಎಲ್ಲರೂ ಒಂದೇ ರೀತಿ ಆಗಿರುವುದಿಲ್ಲ. ಕುಟುಂಬ ಜೀವನದಲ್ಲಿ ಏನನ್ನಾದರೂ ಹೊಸದನ್ನು ಮಾಡಬೇಕಿದ್ದರೆ ಸ್ವತಃ ಹೆಜ್ಜೆ ಹಾಕಬೇಕು. ಹೆಂಡತಿಯನ್ನು ಅಸ್ತ್ರವನ್ನಾಗಿಸಿಕೊಂಡು ಆಕೆಯನ್ನು ಹೀಯಾಳಿಸುವುದು ಸ್ವಾರ್ಥ ಎನಿಸಿಕೊಳ್ಳುತ್ತದೆ. ಪುರುಷರು ಈ ಬಗ್ಗೆ ಯೋಚಿಸಬೇಕು.
– ನಿತಾ ವಿಶ್ವನಾಥ್