ಏನೇನೋ ಕಾರಣಗಳಿಂದ ಮದುವೆ ನಿಂತುಹೋಗುವಂತೆ ಆದಾಗ, ಇಂದಿನ ಹೆಣ್ಣುಮಕ್ಕಳು ಅದನ್ನು ಧೈರ್ಯವಾಗಿ ಮೆಟ್ಟಿ ನಿಲ್ಲುವಂತೆ ಆಗಬೇಕು. ಅದು ಹೇಗೆ ?
ನಮ್ಮ ದೇಶ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ. ಸುಮಾರು ನಾಲ್ಕು ಸಾವಿರ ವರ್ಷಗಳ ಇತಿಹಾಸ ಮತ್ತು ನಾಗರಿಕತೆಯನ್ನು ಹೊಂದಿರುವ ದೇಶ. ವೇದ ಪುರಾಣಗಳ ಕಾಲದಿಂದ ಜ್ಞಾನಕ್ಕೆ ಹೆಸರುವಾಸಿಯಾದ ದೇಶ ನಮ್ಮದು. ಚರಿತ್ರೆಯ ಮಹಾಪುರುಷರು ದಕ್ಷತೆಯಿಂದ ಆಳಿದರು, ವಿಶ್ವ ಭೂಪಟದಲ್ಲಿ ಒಂದು ಗಮನಾರ್ಹ ಸ್ಥಾನವನ್ನು ಗಳಿಸಿ ಕೊಟ್ಟ ದೇಶ ಭಾರತ. ಇವೆಲ್ಲಾ ಗತಕಾಲದ ವೈಭವ. ಸಮಕಾಲೀನ ಪ್ರಪಂಚದಲ್ಲಿ, ನಾವು (ಭಾರತೀಯರು) ವಿದೇಶೀ ಸಂಸ್ಕೃತಿಗಳ, ಕೊಳ್ಳುಬಾಕ ಪ್ರವೃತ್ತಿಯ, ಸಂಪ್ರದಾಯಗಳನ್ನು ಕಿತ್ತು ಬಿಸಾಡುತ್ತಿರುವ, ಪಾರಂಪರಿಕ ಮೌಲ್ಯಗಳನ್ನು ಲೇವಡಿ ಮಾಡುತ್ತಿರುವವರಾಗಿದ್ದೇವೆ. ಕಾಲಕ್ಕೆ ತಕ್ಕಂತೆ ಕುಣಿಯಬೇಕು, ಸದ್ಯದ ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಹಿಂದುಳಿದು ಹಾಳಾಗಿಬಿಡುತ್ತೇವೆ ಎನ್ನುವ ಧೋರಣೆಯನ್ನು ತಳೆದಿದ್ದೇವೆ. ಇವೆಲ್ಲದರ ಪರಿಣಾಮವಾಗಿ ಕೆಲವು ಸಾಮಾಜಿಕ ಪೀಡೆಗಳು ಕ್ಯಾನ್ಸರ್‌ನಂತೆ ಹರಡುತ್ತಿವೆ. ಇಂತಹ ಪೀಡೆಗಳಲ್ಲಿ `ವರದಕ್ಷಿಣೆ'ಯೂ ಒಂದು.`ವರದಕ್ಷಿಣೆ' ಎಂಬ ಭೂತ, ಪವಿತ್ರವಾದ `ಮದುವೆ' ಎಂಬ ಸಂಸ್ಕಾರದಲ್ಲಿ ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ ತೂರಿಸಿದೆ. ವಿವಿಧ ಧರ್ಮೀಯರಲ್ಲಿ ಪವಿತ್ರ ಕಾರ್ಯ ಎನಿಸಿಕೊಂಡಿರುವ ವಿವಾಹಕ್ಕೆ ವ್ಯವಹಾರದ ರೂಪವನ್ನು (ಸಂಕೋಲೆ) ತೊಡಿಸಿರುವುದೇ ವರದಕ್ಷಿಣೆ.
ಹಿಂದಿನ ಕಾಲದಲ್ಲಿ ಮದುವೆ, ಸಂಬಂಧಿಕರ, ಸಮಾನ ಮನಸ್ಕರ ಸಹಮತ ಮತ್ತು ಸಹಾನುಭೂತಿಯಿಂದ ನಡೆಯುತ್ತಿದ್ದ ಧರ್ಮಕಾರ್ಯ. ಇಂತಹ ಶುಭ ಸಂದರ್ಭದಲ್ಲಿ ತಮಗೆ ತೋಚಿದ, ತಮ್ಮ ಶಕ್ತಿಗೆ ಮೀರದ, ಪ್ರೀತಿಯ ದ್ಯೋತಕವಾಗಿ ಬಳುವಳಿಗಳ ವಿನಿಮಯ ಆಗುತ್ತಿತ್ತು. ಈ ರೀತಿಯ ಕೊಡುವಿಕೆ ಕೇವಲ ಭಾರತಕ್ಕಷ್ಟೇ ಮೀಸಲಾಗಿರಲಿಲ್ಲ ಎಂದು ಚರಿತ್ರೆಕಾರರು ತಿಳಿಸುತ್ತಾರೆ.
ಬಹುಶಃ ಹಿಂದಿನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಇಲ್ಲದಿದ್ದ ಕಾರಣದಿಂದಲೇ ಅಥವಾ ಅವರಿಗೆ ಹೊರಗಿನ ವ್ಯವಹಾರಗಳಲ್ಲಿ ಅವಕಾಶಗಳಿಲ್ಲದ್ದರಿಂದಲೋ, ಬೆನ್ನೆಲುಬಾಗಿರಲಿ (ಆಧಾರವಾಗಿರಲಿ) ಎಂದು ಬಳುವಳಿಗಳನ್ನು ಕೊಡುತ್ತಿರಬಹುದು. ಕಾಲಕ್ರಮೇಣ ಇದು ಕಡ್ಡಾಯವಾಗಿ, ಶಕ್ತಿಮೀರಿ ಕೊಡಲೇಬೇಕಾದ `ಕಾಣಿಕೆ' (ಸ್ವಯಂಪ್ರೇರಿವಲ್ಲದ)ಯಾಗಿ ವರದಕ್ಷಿಣೆ ಎಂಬ ಹೆಸರನ್ನು ಪಡೆದುಕೊಂಡಿರಬೇಕು.
ಇಂದು ವರದಕ್ಷಿಣೆ ಸಾಮಾಜಿಕ ಪಿಡುಗಾಗಿದೆ. ವಿಶ್ವಕ್ಕೆ ಶಾಂತಿ, ತೃಪ್ತಿ, ಸಹಾನುಭೂತಿಯ ಸಂದೇಶವನ್ನು ಸಾರಿದ ಗೌತಮ ಬುದ್ಧ, ಅಶೋಕ ಚಕ್ರವರ್ತಿ, ಮಹಾತ್ಮಗಾಂಧಿ, ಮಹರ್ಷಿ ಡಿ.ಕೆ. ಕೇಲ್ಕರ್, ಜ್ಯೋತಿ ಬಾಪುಲೆ ಮುಂತಾದವರಿದ್ದ ದೇಶ ವಾಸಿಗಳಾದ ನಾವು ನಾಚಿಕೆಯಿಂದ ತಲೆತಗ್ಗಿಸಬೇಕಾಗಿದೆ. ಏಕೆಂದರೆ ವರದಕ್ಷಿಣೆ ಎಂಬ ಸಮಸ್ಯೆ ಅಂತರರಾಷ್ಟ್ರೀಯ ಸಾಲದ ಹೊರೆ, ಲಂಚಗುಳಿತನ, ಭ್ರಷ್ಟಾಚಾರದಷ್ಟೇ ತೀವ್ರವಾಗಿ ಹಬ್ಬಿದೆ.
ವರದಕ್ಷಿಣೆ ಸಮಸ್ಯೆ ಧೂರ್ತರು ಹಸೆಮಣೆ ಏರುವುದಕ್ಕೆ ಮೊದಲೇ ಆರಂಭವಾಗುತ್ತದೆ. `ಮದುವೆ ಸ್ವರ್ಗದಲ್ಲಿ ತೀರ್ಮಾನಿಸಲ್ಪಟ್ಟು ಭೂಮಿಯ ಮೇಲೆ ಸುಖವಾಗಿ ನಡೆಯುತ್ತದೆ' ಎನ್ನುವ ಹಿಂದಿನ ಕಾಲದ ಹೇಳಿಕೆ, ಇಂದು ಸುಳ್ಳಾಗಿದೆ. ಕೊಳ್ಳುಬಾಕ ಸಂಸ್ಕೃತಿ, ಪ್ರತಿಯೊಂದನ್ನೂ `ಹಣ'ದ ಮೂಲದಿಂದಲೇ ಅಳೆಯುವ ಪ್ರವೃತ್ತಿ, ಸ್ಪರ್ಧೆಯಂತೆ ಪರಿಗಣಿಸುವ ಮನೋಭಾವ, ಕಡಿವಾಣವಿಲ್ಲದ ಆಸೆಬುರುಕುತನ, ಸಾಮಾನ್ಯರು ಎಗ್ಗಿಲ್ಲದಂತೆ ಕಿತ್ತುಕೊಳ್ಳುವ ರೂಢಿಯಾದ ವರದಕ್ಷಿಣೆಯ ಕಬಂಧಬಾಹು, ಬಡ ಶ್ರೀಮಂತ ಎನ್ನುವ ಭೇದಭಾವವಿಲ್ಲದೆ, ಎಲ್ಲರನ್ನೂ ಕಿತ್ತು ತಿನ್ನುತ್ತಿದೆ.