ಸುಜಾತಾ ಉದ್ಯೋಗಸ್ಥ ಮಹಿಳೆ. ಆಫೀಸ್‌ನಿಂದ ಮರಳುತ್ತಲೇ ಆಕೆ ಹಾಗೂ ಗಂಡ ಮೋಹನ್‌ ತಮ್ಮ 8 ವರ್ಷದ ಮಗಳು ನಿಖಿತಾ ಜೊತೆ ಕಾಲ ಕಳೆಯಲು ಇಷ್ಟಪಡುತ್ತಾರೆ. ಡಿನ್ನರ್‌ ತನಕ ಎಲ್ಲ ಸರಿಯಾಗಿಯೇ ಇರುತ್ತದೆ. ಆದರೆ ಬೆಡ್‌ರೂಮ್ ಲೈಫ್‌ ಇಬ್ಬರನ್ನೂ ಅಪ್‌ಸೆಟ್‌ ಮಾಡಿಬಿಡುತ್ತದೆ. ವಾಸ್ತವದಲ್ಲಿ ಸುಜಾತಾ ಬೆಡ್‌ರೂಮಿನಲ್ಲಿ ಗಂಡನ ಜೊತೆ ಖುಷಿಯಿಂದ ಕಾಲ ಕಳೆಯಲು ಇಚ್ಛಿಸುತ್ತಾಳೆ. ಗಂಡನ ಬಾಹುಗಳಲ್ಲಿ ತನ್ನ ದಿನವಿಡಿಯ ದಣಿವನ್ನು ಮರೆಯಲು ಇಚ್ಛಿಸುತ್ತಾಳೆ. ಭವಿಷ್ಯದ ಬಗ್ಗೆ ಮಾತುಕತೆ ನಡೆಸಬೇಕೆನ್ನುತ್ತಾಳೆ. ಆದರೆ ಗಂಡ ಅದಾವುದಕ್ಕೂ ಆಸ್ಪದ ಕೊಡದೆ ತನ್ನ ಬಯಕೆ ಈಡೇರಿಸಿಕೊಳ್ಳುತ್ತಾನೆ. ಅದು ಅವಳಿಗೆ ದೈನಂದಿನ ಯಾಂತ್ರಿಕ ಕ್ರಿಯೆಯಂತೆ ಆಗಿಬಿಟ್ಟಿದೆ. ಬಳಿಕ ಅವಳು ಬಿಕ್ಕಿ ಬಿಕ್ಕಿ ಅಳುತ್ತಾಳೆ…..

ರಾಗಿಣಿ ಕಳೆದ 5 ವರ್ಷಗಳಿಂದ ತನ್ನ ವೈವಾಹಿಕ ಜೀವನವನ್ನು ಖುಷಿಯಿಂದ ಕಳೆಯುತ್ತಿದ್ದಾಳೆ. ರಾಗಿಣಿ ಹಾಗೂ ಮದನ್‌ರ ಕರುಳಿನ ಕುಡಿ ಅನಿತಾಗೆ 4 ವರ್ಷ. ಆದರೆ ಈಚೆಗೆ ಅವರಲ್ಲಿ ಯಾವುದೇ ಉತ್ಸಾಹ ಕಂಡುಬರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಅವರ ನೀರಸ ಬೆಡ್‌ರೂಮ್ ಲೈಫ್‌. ದಿನವಿಡೀ ರಾಗಿಣಿ ಮನೆಯ ಕೆಲಸ ಕಾರ್ಯಗಳಲ್ಲಿ ತಲ್ಲೀನಳಾಗಿರುತ್ತಾಳೆ. ಮಧ್ಯಾಹ್ನದಿಂದ ರಾತ್ರಿಯತನಕ ಅವಳು ಮಗಳ ಉಸ್ತುವಾರಿಗೆ ನಿಂತುಬಿಡುತ್ತಾಳೆ. ಮಗಳು ಮಲಗಿದ ಬಳಿಕ ಅವಳು ತನ್ನ ಬೆಡ್‌ರೂಮಿಗೆ ಹೋಗಲು ಉತ್ಸಾಹ ತೋರಿಸುವುದಿಲ್ಲ. ಮಗಳ ಜೊತೆಗೇ ಮಲಗಿಬಿಡುತ್ತಾಳೆ. ಇದಕ್ಕೆ ಮುಖ್ಯ ಕಾರಣ ಗಂಡನ ಆತುರದಿಂದ ಕೂಡಿದ ಒತ್ತಡದ ಸೆಕ್ಸ್ ಲೈಫ್‌. ಇದು ಇಬ್ಬರ ಮೂಡ್‌ನ್ನು ಆಫ್‌ ಮಾಡುತ್ತದೆ.

ಸ್ಮಿತಾ ತನ್ನ ಸೆಕ್ಸ್ ಲೈಫ್‌ ಬಗ್ಗೆ ಖುಷಿಯಿಂದಿದ್ದಾಳೆ. ಆದರೆ ಅವಳಿಗೆ ಅನೇಕ ಆಸೆ ಆಕಾಂಕ್ಷೆಗಳಿವೆ. ಅವಳ ಪತಿಗೂ ಸಾಕಷ್ಟು ಖುಷಿಯಿದೆ. ಗಂಡ ಬೆಡ್‌ರೂಮಿನಲ್ಲಿ ತನ್ನ ಮನಸ್ಸನ್ನು ಏಕೆ ಅರಿತುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅವಳಿಗೆ ದುಃಖವಿದೆ. ಸ್ಮಿತಾ ಗಂಡನ ಸ್ಪರ್ಶ ಸುಖವನ್ನು ಇಷ್ಟಪಡುತ್ತಾಳೆ. ಆದರೆ ಅವನು ಬೆಡ್‌ರೂಮಿನಲ್ಲಿ ನಿಯಂತ್ರಣಬಾಹಿರ ಎಂಬಂತಿರುತ್ತಾನೆ. ಆತುರದಿಂದಾಗಿ ಪರಸ್ಪರರಲ್ಲಿ ಕಳೆದುಹೋಗುವುದು ಸಾಧ್ಯವಾಗುವುದಿಲ್ಲ. ಇದರ ಪರಿಣಾಮ ಎಂಬಂತೆ ಸ್ಮಿತಾ ಗಂಡನ ಜೊತೆ ಕಾಲ ಕಳೆಯಲು ಹಿಂದೇಟು ಹಾಕುತ್ತಾಳೆ.

ಮೇಲ್ಕಂಡ  ಮೂರು ಪ್ರಕರಣಗಳಿಂದ ತಿಳಿದುಬರುವ ಸಂಗತಿಯೆಂದರೆ, ಸೆಕ್ಸ್ ನಲ್ಲಿ ತಪ್ಪು ಮಾಡುವುದರಿಂದ ಒಬ್ಬರು ಮತ್ತೊಬ್ಬರ ಖಾಸಗಿ ಕ್ಷಣಗಳ ಆನಂದದಿಂದ ದೂರ ಉಳಿಯುವಂತೆ ಮಾಡುತ್ತದೆ. ಮಹಿಳೆ ಪ್ರೀತಿ ಮಾಡುವುದನ್ನು ಹಾಗೂ ಅದನ್ನು ನಿರ್ವಹಣೆ ಮಾಡುವುದನ್ನು ಚೆನ್ನಾಗಿ ಬಲ್ಲವಳಾಗಿರುತ್ತಾಳೆ. ಪ್ರೀತಿಯನ್ನು ಸುಖದ ಉತ್ತುಂಗಕ್ಕೆ ಕೊಂಡೊಯ್ಯುವುದನ್ನು ಗಂಡ ಚೆನ್ನಾಗಿ ಅರಿತಿರುತ್ತಾನೆ ಎನ್ನುವುದು ಸಾಕಷ್ಟು ಮಟ್ಟಿಗೆ ಸತ್ಯ. ಸಂದರ್ಭ ಯಾವುದೇ ಆಗಿರಬಹುದು, ಪರಿಸ್ಥಿತಿ ಹೇಗೆಯೇ ಇರಬಹುದು, ದಣಿವಿನಿಂದ ದೇಹ ಬಳಲಿ ಬೆಂಡಾಗಿರಬಹುದು, ಮೂಡ್‌ ಇರಲಿ, ಬಿಡಲಿ, ಬೆಡ್‌ಗೆ ಬರುತ್ತಿದ್ದಂತೆ ಪತಿಗೆ ಸೆಕ್ಸ್ ಮೂಡ್‌ ಬಂದುಬಿಡುತ್ತದೆ. ಗಂಡ ಸೆಕ್ಸ್ ಗೆ ನಕಾರ ಮಾಡುವ ಸಂದರ್ಭ ಕಡಿಮೆ ಎಂದೇ ಹೇಳಬಹುದು. ತನ್ನ ಒಲವಿನ ಕರೆಗೆ ಪತ್ನಿ ನಿರಾಕರಿಸಿದರೆ ಅವನಿಗೆ ಸಹಿಸಲು ಆಗುವುದೇ ಇಲ್ಲ. ನಾವಿಲ್ಲಿ ಪತಿಯಂದಿರ ಮೇಲೆ ಯಾವುದೇ ಆಕ್ಷೇಪ ಎತ್ತುತ್ತಿಲ್ಲ.

ಇನ್ನೊಂದೆಡೆ ಪತ್ನಿಯರು ಕೂಡ ಪ್ರೀತಿಯನ್ನು ಸುಖವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಾರೆ. ಆದರೆ ಅದು ಸಾಧ್ಯವಾಗುವುದು ಪ್ರೀತಿಯಿಂದ ಸ್ಪಂದನೆ ದೊರೆತಾಗ ಮಾತ್ರ. ಒಂದು ವೇಳೆ ಅದರಲ್ಲಿ ಪ್ರೀತಿಯ ಸ್ಪರ್ಶ ದೊರೆಯದೆ ಹೋದಲ್ಲಿ ಇಬ್ಬರಿಗೂ ಬೇಸರ ಉಂಟಾಗುತ್ತದೆ.

ಈ ಕುರಿತಂತೆ ಲೈಂಗಿಕ ತಜ್ಞರು ಹೇಳುವುದು ಹೀಗೆ, ಮದುವೆ ಆಗುತ್ತಿದ್ದಂತೆ ಹೆಚ್ಚಿನ ಪುರುಷರು ಸದಾ ಸೆಕ್ಸ್ ಬಗ್ಗೆಯೇ ಯೋಚನೆ ಮಾಡುತ್ತಿರುತ್ತಾರೆ. ದಿನವಿಡೀ ಕೆಲಸ ಮಾಡುತ್ತಿರುವಾಗಲೂ ಅವರಿಗೆ ಅದರ ಬಗ್ಗೆಯೇ ಯೋಚನೆ ಬರುತ್ತಿರುತ್ತದೆ. ಇಂತಹದರಲ್ಲಿ ಪತಿ ನಿಯಂತ್ರಣಬಾಹಿರ ಆಗಿಬಿಡುತ್ತಾನೆ. ಪ್ರೀತಿಯನ್ನು ಗಡಿಬಿಡಿಯಲ್ಲಿ ಮುಗಿಸಿಬಿಡುವುದು, ತನ್ನ ಪಾಡಿಗೆ ತಾನು ಮಲಗಿ ಬಿಡುವುದು ಸರಿಯಾದುದಲ್ಲ. ಎಷ್ಟೋ ಸಲ ಪತಿಯೇ ರೋಸಿ ಹೋಗುತ್ತಾನೆ. ಅದು ದಂಪತಿಗಳಲ್ಲಿ ಒತ್ತಡಕ್ಕೆ ಕಾರಣವಾಗುತ್ತದೆ. ಬೇರೆ ಶಬ್ದಗಳಲ್ಲಿ ಹೇಳಬೇಕೆಂದರೆ, ಬೆಡ್‌ ಮೇಲೆ ಪ್ರೀತಿಯಲ್ಲಿ ಆತುರ ತೋರಿಸುವುದು ಇಬ್ಬರಿಗೂ ಸರಿಯಲ್ಲ. ಬೆಡ್‌ ಮೇಲೆ ನಿಮ್ಮ ಹಾಗೂ ಪತಿ ಇಬ್ಬರ ಮೂಡ್‌ ಆನ್‌ ಆಗಿರಬೇಕು. ಅದರ ಜೊತೆಗೆ ಪ್ರೀತಿ ಕೂಡ ಆನ್‌ ಆಗಿರಬೇಕು. ಈಗ ತಪ್ಪುಗಳ ಮೇಲೆ ಗಮನ ಹರಿಸೋಣ. ನೀವು ಆ ತಪ್ಪಿನಿಂದ ಸದಾ ದೂರ ಇರಿ.

ಕ್ಲೈಮ್ಯಾಕ್ಸ್ ಗೆ ಆತುರ : ಉದ್ದೇಶ ಸರಿಯಾಗಿದ್ದರೆ, ನಿಮ್ಮ ಹೆಜ್ಜೆಗಳು ಗುರಿಯ ಕಡೆಯೇ ಸಾಗುತ್ತವೆ. ಆ ದಾರಿ ಕಲ್ಲು ಮುಳ್ಳುಗಳಿಂದ ಕೂಡಿದ್ದಾಗಿರಬಹುದು ಅಥವಾ ಮೆತ್ತನೆಯ ಹುಲ್ಲು ಹಾಸು ಆಗಿರಬಹುದು. ಈ ಒಂದು ದಾರಿಯಲ್ಲಿ ಅನೇಕ ತೊಂದರೆ ತಾಪತ್ರಯಗಳು ಉದ್ಭವಿಸುವುದು ಸಹಜ. ಇದೇ ನೀತಿ ನಿಮ್ಮ ಸೆಕ್ಸ್ ಲೈಫ್‌ಗೂ ಅನ್ವಯಿಸುತ್ತದೆ.

ಹೆಚ್ಚಿನ ಪತಿಯಂದಿರು ಬೆಡ್‌ಗೆ ಬರುತ್ತಿದ್ದಂತೆಯೇ ಸೆಕ್ಸ್ ಗಾಗಿ ಸನ್ನದ್ಧರಾಗಿರುತ್ತಾರೆ. ಕೆಲವೇ ಕ್ಷಣಗಳಲ್ಲಿ ಅವರು ಉತ್ತುಂಗಕ್ಕೆ ತಲುಪಿಬಿಡುತ್ತಾರೆ. ಹಾಗೆ ನೋಡಿದರೆ ಉತ್ತುಂಗಕ್ಕೆ ತಲುಪಲು ಹಲವು ದಾರಿಗಳಲ್ಲಿ ಸಾಗಬೇಕಾಗುತ್ತದೆ. ಇದು ಗಂಡಹೆಂಡತಿ ಇಬ್ಬರಿಗೂ ಉಪಯುಕ್ತವಾಗಿರುತ್ತದೆ. ಆತುರದ ಪತಿಗೆ ಫೋರ್‌ಪ್ಲೇ ಬಗ್ಗೆ ಮರೆತೇ ಹೋಗಿರುತ್ತದೆ. ಮುಂದಿನ ಸಲ ಈ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸಿ. ಉತ್ತುಂಗಕ್ಕಿಂತ ಮುಂಚೆ ಫೋರ್‌ಪ್ಲೇ ಅನುಸರಿಸಿ.

ಫೋರ್‌ಪ್ಲೇ ಮಹತ್ವದ್ದು : ಒಂದು ಸಂಗತಿ ನಿಮ್ಮ ಗಮನದಲ್ಲಿರಲಿ. ಬೆಡ್‌ ಮೇಲೆ ಇಬ್ಬರೂ ಖುಷಿಯಾಗಿದ್ದಾಗ ಮಾತ್ರ ಅದರ ಪರಿಣಾಮ ಖುಷಿಯಾಗಿರುತ್ತದೆ. ಆದರೆ ಪತಿ ಬೆಡ್‌ ಮೇಲೆ ತೋರಿಸುವ ಆತುರ ಇಬ್ಬರಿಗೂ ಕಿರಿಕಿರಿಯನ್ನುಂಟು ಮಾಡುತ್ತದೆ. ಮುಂದಿನ ಸಲವಾದರೂ ಈ ತಪ್ಪು ಮರುಕಳಿಸದಂತೆ ನೋಡಿಕೊಳ್ಳಿ. ಅಷ್ಟಿಷ್ಟು ಪ್ರೀತಿಯಿಂದ ಮಾತನಾಡುತ್ತಾ, ಫೋರ್‌ಪ್ಲೇಯಿಂದ ಹೆಂಡತಿಯ ಮೂಡ್‌ನ್ನು ಜಾಗೃತಗೊಳಿಸಿ. ಹೆಂಡತಿ ಉತ್ತೇಜಿತಳಾದ ಬಳಿಕ ಇಬ್ಬರೂ ಖುಷಿಯಲ್ಲಿ  ತೇಲಬಹುದು. ಇಲ್ಲದಿದ್ದರೆ ಅದೊಂದು ಯಾಂತ್ರಿಕ ಕ್ರಿಯೆಯಂತಾಗಿ ಇಬ್ಬರಿಗೂ ಒತ್ತಡ, ನಿರಾಶೆ, ಕಿರಿಕಿರಿ ಉಂಟು ಮಾಡುವುದರಲ್ಲಿ ಸಂದೇಹವೇ ಇಲ್ಲ.

ಮನಸ್ಸನ್ನು ಅರಿತುಕೊಳ್ಳಿ : ಗಂಡ ಕೇವಲ ತನ್ನ ಆನಂದಕ್ಕೆ ಮಾತ್ರ ಮಹತ್ವ ಕೊಡಬಾರದು. ಹೆಂಡತಿಯ ಬಗೆಗೂ ಗಮನಹರಿಸಬೇಕು. ಬೆಡ್‌ ಮೇಲೆ ಹೆಂಡತಿಯ ಆಸಕ್ತಿ ಅನಾಸಕ್ತಿಯ ಬಗ್ಗೆ ಗಮನವಿರಲಿ. ಫೋರ್‌ಫ್ಲೇಯಿಂದ ಖುಷಿಗೊಳಿಸುವುದು, ಆ ಬಳಿಕ ಅವಳನ್ನು ಸ್ಪರ್ಶ ಸುಖದಿಂದ ಇನ್ನಷ್ಟು ಪುಳಕಿತಗೊಳಿಸಬೇಕು. ಎಷ್ಟೋ ವಿಷಯಗಳನ್ನು ಹೆಂಡತಿ ಬಾಯಿಬಿಟ್ಟು ಹೇಳುವುದಿಲ್ಲ. ಎಲ್ಲನ್ನೂ ಅವಳು ಗಂಡನ ನಿರ್ಧಾರದ ಮೇಲೆಯೇ ಬಿಡುತ್ತಾಳೆ. ತನ್ನ ಮನದ ಬಯಕೆ ಈಡೇರದೇ ಇದ್ದಾಗ ಅವಳ ಮನಸ್ಸು ಖಾಲಿ ಖಾಲಿ ಎನಿಸುತ್ತದೆ. ಖುಷಿದಾಯಕ ಬೆಡ್‌ಲೈಫ್‌ಗಾಗಿ  ಹೆಂಡತಿಯ ಮನದ ಮಾತುಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯ.

ಒಂದಿಷ್ಟು ಮೋಜು, ತುಂಟತನ : ಸಾಮಾನ್ಯವಾಗಿ ಪತಿ ಹಾಸಿಗೆಯ ಮೇಲೆ ತುಂಟತನದಿಂದ ವರ್ತಿಸದೆ, ನೇರವಾಗಿ ಉತ್ತುಂಗಕ್ಕೆ ತಲುಪಲು ನೋಡುತ್ತಾನೆ. ಈ ಒಂದು ಚಟುವಟಿಕೆಯಲ್ಲಿ ಹೆಂಡತಿಯ ದೈಹಿಕ ಪಾಲ್ಗೊಳ್ಳುವಿಕೆ ಕೂಡ ಇದ್ದೇ ಇರುತ್ತದೆ. ಆದರೆ ಅವಳು ಮಾನಸಿಕವಾಗಿ ಜೊತೆ ಕೊಡುತ್ತಿರುವುದಿಲ್ಲ. ಗಂಡ ಬೆಡ್‌ ಮೇಲೆ ಹೆಂಡತಿಯ ಆಸಕ್ತಿ ಗಮನಿಸದೇ ಹೋದರೆ ಅವನಿಗೆ ಅವಳ ಬಗ್ಗೆ ಕಾಳಜಿ ಇಲ್ಲ ಎಂದೇ ಅರ್ಥ. ಮುಂದಿನ ಸಲ ಈ ತಪ್ಪು ಮಾಡಬೇಡಿ. ಹೆಂಡತಿಗೆ ಒತ್ತಡ, ಒತ್ತಾಯ ಹಿಡಿಸುವುದಿಲ್ಲ ಎನ್ನುದನ್ನು ನೀವು ತಿಳಿದಿರಬೇಕು.

ಸಿನಿಮಾ ಅಲ್ಲ ಬೆಡ್‌ರೂಮ್ : ನ್ನ ಜೀವನದಲ್ಲೂ ಸಿನಿಮಾದ ರೀತಿ ಘಟಿಸಬೇಕೆಂದು ಗಂಡ ಬಯಸುತ್ತಾನೆ. ತನಗೆ ಹೆಂಡತಿಯ ಸಹಕಾರ ದೊರೆಯಬೇಕು ಎಂದು ಅವನು ಆಶಿಸುತ್ತಾನೆ. ಒಂದು ವೇಳೆ ಹೆಂಡತಿಯೇನಾದರೂ ಅದಕ್ಕೆ ನಿರಾಕರಿಸಿದಲ್ಲಿ ಅವನ ಕೋಪ ನೆತ್ತಿಗೇರುತ್ತದೆ. ಎಷ್ಟೋ ಸಲ ಎಮೋಶನಲ್ ಬ್ಲ್ಯಾಕ್‌ಮೇಲಿಂಗ್‌ ಹೆಚ್ಚುತ್ತಾ ಹೋಗಿ ವಿಚ್ಛೇದನತ್ತ ತಲುಪುತ್ತದೆ. ಬೆಡ್‌ರೂಮ್ ಸಿನಿಮಾ ಪರದೆಗಿಂತ ವಿಭಿನ್ನವಾಗಿರುತ್ತದೆ. ಪ್ರೀತಿಗೆ ಸಿಹಿಯ ಲೇಪನ ಮಾಡಿದಾಗಲೇ ಅದು ಒಳ್ಳೆಯ ಫಲಿತಾಂಶ ಕೊಡಲು ಸಾಧ್ಯ.

ಜವಾಬ್ದಾರಿ ಇಬ್ಬರದೂ : ಲೈಂಗಿಕ ತಜ್ಞರು ಹೇಳುವುದೇನೆಂದರೆ, ಉತ್ತುಂಗ ಕ್ರಿಯೆಯ ಜವಾಬ್ದಾರಿ ಕೇವಲ ಗಂಡನದ್ದಷ್ಟೇ ಅಲ್ಲ, ಗಂಡ ಹೆಂಡತಿ ಇಬ್ಬರೂ ಸೇರಿಯೇ ಆ ಕ್ರಿಯೆಗೆ ಚಾಲನೆ ಕೊಡಬೇಕು. ಹೆಚ್ಚಿನ ಪತಿಯಂದಿರು ತಾವು ಸುಖ ಪಡೆದ ಬಳಿಕ ಹೆಂಡತಿಯನ್ನು ಹೆಚ್ಚು ಕಡಿಮೆ ಮರೆತೇ ಬಿಡುತ್ತಾರೆ. ಪ್ರೀತಿಯ ಸ್ಪರ್ಶ ಇರಲಿ, ಇಲ್ಲದಿರಲಿ ಗಂಡ ಬಹುಬೇಗ ಉತ್ತುಂಗಕ್ಕೆ ತಲುಪುತ್ತಾನೆ. ಆ ಬಳಿಕ ಅವನದು ಎಚ್ಚರವಿಲ್ಲದ ಸ್ಥಿತಿಯಂತಿರುತ್ತದೆ. ಹೆಂಡತಿ ಇನ್ನೂ ಉತ್ತುಂಗದ ಬಯಕೆಯಲ್ಲಿರುತ್ತಾಳೆ. ಅಂತಹ ಸ್ಥಿತಿಯಲ್ಲಿ ಮಗ್ಗಲು ಬದಲಿಸುವುದು ತಪ್ಪು.

– ಜಿ. ದೀಪ್ತಿ  

Tags:
COMMENT