ಕಳೆದ 2 ವರ್ಷಗಳು ಹೇಗೆ ಸರಿದು ಹೋದವು ಗೊತ್ತೇ ಆಗಲಿಲ್ಲ. ಅದೆಷ್ಟು ಖುಷಿ ಇತ್ತೆಂದರೆ, ಸಮಯಕ್ಕೆ ರೆಕ್ಕೆಪುಕ್ಕ ಬಂದಿವೆಯೇನೊ, ಹಗಲು ಕಳೆದದ್ದು ಗೊತ್ತೆ ಆಗಲಿಲ್ಲ. ರಾತ್ರಿಯ ಪರಿವೆಯೇ ಇರಲಿಲ್ಲ. ವಿಷಯ ಬಹಳ ಹಳೆಯದೇನಲ್ಲ. 2012ರಲ್ಲಿ ಸೀಮಾ ಮತ್ತು ರಾಜೇಶ್‌ ಇವರದ್ದು ಕೂಡ ಇದೇ ಪರಿಸ್ಥಿತಿ. ಪ್ರೀತಿಯಲ್ಲಿ ಅವರಿಗೆ ಜಗದ ಪರಿವೆಯೇ ಇರಲಿಲ್ಲ. ಇಂತಹ ಸ್ಥಿತಿಯಲ್ಲಿ ಸ್ನೇಹಿತರು ಅವರಿಂದ ದೂರ ಸರಿಯಲಾರಂಭಿಸಿದ್ದರು. ಆಫೀಸಿನ ಕೆಲಸದಿಂದ ಸ್ವಲ್ಪ ಮುಕ್ತಿ ಸಿಕ್ಕರೂ ಸಾಕು, ಅವರಲ್ಲಿ ಪ್ರೀತಿಯ ಭಾವನೆಗಳ ಸಂದೇಶಗಳು ವಿನಿಮಯವಾಗುತ್ತಿದ್ದವು.

ಶೀಘ್ರದಲ್ಲಿಯೇ ಅವರಿಬ್ಬರು ಸಾಮಾಜಿಕ ಬಂಧನದಲ್ಲಿ ಬಂಧಿಯಾಗಬೇಕೆಂದು ನಿರ್ಧರಿಸಿದರು. 2 ವರ್ಷದ ಪ್ರೀತಿಗೆ ಸಾಮಾಜಿಕ ಒಪ್ಪಿಗೆ ಕೊಡಲು ಸೀಮಾ, ರಾಜೇಶ್‌ಗೆ ತನ್ನ ಕಟುಂಬದವರನ್ನು ಭೇಟಿಯಾಗಲು ಹೇಳಿದಳು. ಅದಕ್ಕೆ ರಾಜೇಶ್‌ ಒಪ್ಪಿಕೊಂಡ.

ನಿಗದಿಪಡಿಸಿದ ದಿನದಂದು ಅಂದರೆ ದೀಪಾವಳಿಯ ಸಂಜೆ ರಾಜೇಶ್‌ ಸೀಮಾಳ ಮನೆಗೆ ಬಂದ. ರಾಜೇಶನ ಸ್ವಭಾವದ ಬಗ್ಗೆ ಸೀಮಾಳಿಗೆ ಚೆನ್ನಾಗಿ ಗೊತ್ತಿತ್ತು. ಅವನು ಸೀಮಾಳ ಮನೆಗೆ ಹೋಗುವ ಬಗ್ಗೆ ತನ್ನ ಮನೆಯವರಿಗೆ ಯಾವುದೇ ಸುಳಿವು ಕೊಟ್ಟಿರಲಿಲ್ಲ. ಸೀಮಾ ಸಹ ರಾಜೇಶ್‌ ಬರುವ ವಿಷಯವನ್ನು ಗೌಪ್ಯವಾಗಿಟ್ಟಿದ್ದಳು.

ಗಡಿಯಾರದ ಮುಳ್ಳುಗಳು ಸಂಜೆ 6 ಗಂಟೆ ತೋರಿಸುತ್ತಿದ್ದವು. ಸೀಮಾಳ ಮುಖದಲ್ಲಿ ತಳಮಳ ಎದ್ದು ಕಾಣುತ್ತಿತ್ತು. ಆಕೆಯ ತಂದೆತಾಯಿ ಬಣ್ಣಬಣ್ಣದ ಬಟ್ಟೆಗಳಲ್ಲಿ ಮಿಂಚುತ್ತಿದ್ದರು. ಮಗಳ ಮುಖದಲ್ಲಿನ ಆತಂಕ ಅವರ ಗಮನಕ್ಕೆ ಬಂದಿರಲೇ ಇಲ್ಲ.

ಡೋರ್‌ಬೆಲ್‌ ಬಾರಿಸುತ್ತಿದ್ದಂತೆಯೇ ರಾಜೇಶ್‌ ಕೆಸರು ಮೆತ್ತಿದ ಶೂಗಳನ್ನು ಹಾಕಿಕೊಂಡು, ರಂಗೋಲಿಯನ್ನು ತುಳಿಯುತ್ತ ಯಾವುದೇ ಔಪಚಾರಿಕತೆಯಿಲ್ಲದೆ, ಒಮ್ಮಿಲೆ ಸೋಫಾದ ಮೇಲೆ ಧೊಪ್ಪೆಂದು ಕುಳಿತ.

ತಿಂಡಿಕಾಫಿ ಬರುತ್ತಿದ್ದಂತೆ ಎದುರಿಗಿದ್ದವರ ಬಗ್ಗೆ ಕೇಳದೆಯೇ ಕೈಗೆತ್ತಿಕೊಂಡು ತಿನ್ನಲು ಆರಂಭಿಸಿದ. ಅದೆಲ್ಲವನ್ನು ನೋಡಿ ಸೀಮಾಳ ಮನಸ್ಸಿನಲ್ಲಿ ಒಂದು ರೀತಿಯ ಕಸಿವಿಸಿ ಶುರುವಾಯಿತು. ರಾಜೇಶನ ಈ ರೀತಿಯ ನಡವಳಿಕೆಯಿಂದ `ಫಸ್ಟ್ ಇಂಪ್ರೆಶನ್‌ ಬ್ಯಾಡ್‌ ಇಂಪ್ರೆಶನ್‌’ ಆಗಿಬಿಟ್ಟಿತ್ತು.

ಆ ಸಂದರ್ಭ ಬಹಳ ಅತ್ಯುತ್ತಮವಾಗಿತ್ತು. ಆ ಸಂದರ್ಭದ ಮಹತ್ವ ಯಾರಿಗೂ ಗೊತ್ತಾಗಲಿಲ್ಲ. ಸಂಬಂಧದ ಬಗ್ಗೆ ಹಬ್ಬದ ಮೂಡ್‌ನಲ್ಲಿ ಯಾರಿಗೂ ಮಹತ್ವ ಕೊಡಲಿಲ್ಲ.

ಈ ಮೇಲ್ಕಂಡ ರೀತಿಯ ಘಟನೆಗಳು ಬಹಳಷ್ಟು ಕುಟುಂಬಗಳಲ್ಲಿ ನಡೆಯುತ್ತಿರುತ್ತವೆ. ಯೋಚಿಸಿದ್ದೇ ಒಂದು, ಆದದ್ದೇ ಇನ್ನೊಂದು. ಇದನ್ನು ನೀವು ಹಗುರವಾಗಿ ತೆಗೆದುಕೊಳ್ಳಬೇಡಿ. ಮುಂದಿನ ಸಲ ನೀವು ನಿಮ್ಮ ಪ್ರೇಮಿಯನ್ನು ಮನೆಗೆ ಬರಲು ಆಹ್ವಾನಿಸಿದ್ದರೆ, ಎರಡೂ ಕಡೆಯವರಿಗೆ ಸಾಕಷ್ಟು ತರಬೇತಿ ಕೊಡಿ. ಮತ್ತೊಂದು ವಿಶೇಷ ಸಂಗತಿಯೆಂದರೆ, ಭೇಟಿಯಾಗಲು ಹಬ್ಬಕ್ಕಿಂತ ಬೇರೆ ಉತ್ತಮ ಸಮಯ ಮತ್ತಾವುದು ಇರಲು ಸಾಧ್ಯ? ಇದು ಖುಷಿ ಮತ್ತು ಉತ್ಸಾಹದ ಪ್ರತಿಕ್ರಿಯೆಯನ್ನು ಹೊರಹೊಮ್ಮಿಸುತ್ತದೆ.

ಮನೆಯವರಿಗೆ ಮೊದಲು ತರಬೇತಿ

ನಿಮ್ಮ ತಂದೆ ತಾಯಿಯರೊಂದಿಗೆ ನಿಮ್ಮ ಪ್ರೇಮಿಯ ಮೊದಲ ಮೀಟಿಂಗ್‌ ಅದ್ಭುತವಾಗಿರಬೇಕು. ಅದಕ್ಕಾಗಿ ನೀವು ಸ್ವಲ್ಪ ಹೋಂವರ್ಕ್‌ ಮಾಡಬೇಕು, ನಿಮ್ಮ ತಂದೆ ನಿಮಗಿಂತ ಹೆಚ್ಚು ತಿಳಿವಳಿಕೆ ಉಳ್ಳವರಾಗಿರಬಹುದು. ಆದರೆ ಆತುರದಲ್ಲಿ ಅವರ ಬಾಯಿಂದ ಹೊರಬರುವ  ಒಂದು ಶಬ್ದ ಎದುರಿಗಿನ ವ್ಯಕ್ತಿಯ ಹೃದಯ ಚೂರು ಚೂರು ಮಾಡಬಹುದು. ಇದರಿಂದ ಅವರ ಭಾವನೆಗೆ ಪೆಟ್ಟಾಗಬಹುದು.

ನೀವು ನಿಮ್ಮ ಪ್ರೇಮಿಯ ಮನೆಯವರನ್ನು ಭೇಟಿಯಾಗಲು ನಿರ್ಧರಿಸಿದ್ದರೆ, ನಿಮ್ಮ ತಂದೆತಾಯಿಯರಿಗೆ, ಪ್ರೇಮಿಯ ಕುರಿತಂತೆ ಸಂಪೂರ್ಣ ವಿಷಯ ತಿಳಿಸುವುದು ಒಳ್ಳೆಯದು. ಇದರಿಂದ ಆಗುವ ಲಾಭವೆಂದರೆ, ಅಮ್ಮಅಪ್ಪನ  ಪ್ರಶ್ನೆಗಳು ಅವರಿಗೆ ಬಾಣದ ರೂಪದಲ್ಲಿ ಚುಚ್ಚಬಾರದು ಹಾಗೂ ಇರುಸುಮುರುಸು ಉಂಟು ಮಾಡಬಾರದು. ಯಾವುದೇ ಭಯಭೀತಿ ಇಲ್ಲದೆ ನಿಮ್ಮ ಪ್ರೇಮಿ ಉತ್ತರಿಸಲು ಸಾಧ್ಯವಾಗುತ್ತದೆ.

ಒಂದು ವೇಳೆ ನಿಮ್ಮ ಪ್ರೇಮಿ ಈಚೆಗಷ್ಟೇ ವಿದೇಶ ಪ್ರವಾಸ ಮುಗಿಸಿ ಬಂದಿದ್ದರೆ, ಆ ಬಗ್ಗೆ ನಿಮ್ಮ ತಂದೆತಾಯಿಗೆ ಮಾಹಿತಿ ಕೊಡಿ. ಏಕೆಂದರೆ ನಿಮ್ಮ ತಂದೆತಾಯಿಯರು ಆ ಬಗ್ಗೆ ವಿಚಾರಿಸಿದರೆ, ತನ್ನ ಬಗ್ಗೆ ಅವರು ಆಸಕ್ತಿ ತಾಳುತ್ತಿದ್ದಾರೆಂದು ಅವನಿಗೆ ಗೊತ್ತಾಗುತ್ತದೆ.

ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ಪ್ರೇಮಿಯ ಬಳಿ ಪ್ರಸ್ತಾಪಿಸಬಾರದು ಎಂದು ತಂದೆತಾಯಿಯ ಬಳಿ ಮೊದಲೇ ತಿಳಿಸಿಬಿಡಿ. ಇದರಿಂದ ಎದುರಿಗಿನ ವ್ಯಕ್ತಿಗೆ ಅವಮಾನವಾಗುವ ಸಂದರ್ಭ ಉದ್ಭವಿಸದು. ಉದಾಹರಣೆಗೆ ನೀವು ಇಂತಿಂಥ ನೌಕರಿಯನ್ನು ಬಿಡಬೇಕಾಗಿ ಬಂದಿತ್ತು ಅಥವಾ ನಿಮ್ಮ ತಂದೆತಾಯಿಯರ ವಿಚ್ಛೇದನ ಆಯ್ತಂತಲ್ಲ ಮುಂತಾದವು. ಅಂದಹಾಗೆ ಇಂತಹ ಪ್ರಶ್ನೆಗಳನ್ನು ನಿರ್ಲಕ್ಷಿಸಲಾಗದು ಎಂಬುದು ನಿಜ. ಅವರ ಕರುಳಿನ ಕುಡಿಯ ಜೀವನದ ಪ್ರಶ್ನೆ ಅಲ್ವ ಅದು, ಈ ವಿಷಯದ ಬಗ್ಗೆ ನೀವು ಅಗತ್ಯವಾಗಿ ಪ್ರಶ್ನೆ ಮಾಡಿ. ಆದರೆ ಮೊದಲನೇ ಭೇಟಿಯಲ್ಲಿಯೇ ಅದೆಲ್ಲ ಪ್ರಶ್ನೆ ಕೇಳುವುದು ಬೇಡ.

ನಿಮ್ಮ ಪ್ರೇಮಿಗೆ ಯಾವುದರ ಬಗೆಗಾದರೂ ಅಲರ್ಜಿ ಇದ್ದರೆ, ಆತ ಪೂರ್ತಿ ಸಸ್ಯಾಹಾರಿಯಾಗಿದ್ದರೆ, ಆ ಬಗ್ಗೆ ವಿಷಯ ಬಚ್ಚಿಡುವುದು ಸರಿಯಲ್ಲ. ನಿಮ್ಮ ತಾಯಿ ಆ ಸಂದರ್ಭದಲ್ಲಿ ಯಾವುದಾದರೂ ನಾನ್‌ವೆಜ್‌ ಪದಾರ್ಥ ಮಾಡಲು ಯೋಚಿಸಿದ್ದರೆ, ನೀವು ಆ ವಿಷಯ ಹೇಳದೇ ಇದ್ದರೆ ನಿಮ್ಮ ಪ್ರೇಮಿಗೆ ಮುಜುಗರ ಉಂಟಾಗಬಹುದು. ಪ್ರೇಮಿಯ ಆಹಾರ ಆಯ್ಕೆಯ ಬಗ್ಗೆ ತಿಳಿದುಕೊಂಡಿದ್ದರೆ, ಊಟ ಮಾಡುತ್ತಲೇ ಸಹಜವಾಗಿ ಮಾತುಕತೆ ಮುಂದುವರಿಸಬಹುದು.

ಪ್ರೇಮಿಗೂ ತರಬೇತಿ

ನೀವು ನಿಮ್ಮ ತಂದೆತಾಯಿಗೆ ಹೋಂವರ್ಕ್‌ ಮಾಡಿಸಿರಿ, ಏಕೆಂದರೆ ನಿಮ್ಮ ಪ್ರೇಮಿಗೆ ಮೊದಲ ಸಂದರ್ಶನ ಭರ್ಜರಿಯಾಗಬೇಕು. ಈಗ ಪ್ರೇಮಿಗೆ ತರಬೇತಿ ಕೊಡುವ ಸಮಯ. ಆತ ನಿಮ್ಮ ಮನೆಗೆ ಬರುವ ಮುಂಚೆ ವರ್ತನೆಯ ಬಗ್ಗೆ ಸೂಕ್ಷ್ಮವಾಗಿ ಹೇಳಿಕೊಡಿ, ನಿಮ್ಮ ಮನೆಗೆ ಬಂದಾಗ ಆತನ ವರ್ತನೆ ಹೇಗಿರಬೇಕೆಂದರೆ, ನಿಮ್ಮ ತಂದೆತಾಯಿಯ ಮನಸ್ಸನ್ನು ಗೆಲ್ಲುವಂತಿರಬೇಕು. ಪ್ರೇಮಿಯ ಮುಂದೆ ಮನೆಯವರನ್ನು ಟೀಕಿಸುವ, ನಿಂದಿಸುವ ಮಾತುಗಳು ಬೇಡ. ಉದಾಹರಣೆಗೆ ಅಮ್ಮನಿಗೂ ಅಪ್ಪನಿಗೂ ಆಗುವುದಿಲ್ಲ, ವರ್ಷಾನುವರ್ಷದಿಂದ ಅವರ ನಡುವೆ ಮಾತುಕತೆಯೇ ಆಗಿಲ್ಲ. ಈ ಮಾತುಗಳಿಂದ ಸಹಾನುಭೂತಿಯೇನೋ ಸಿಗುತ್ತದೆ. ಆದರೆ ಪ್ರೇಮಿಯೆದುರು ನಿಮ್ಮ ಮನೆಯವರ ಗೌರವಕ್ಕೆ ಕುಂದು ಉಂಟಾಗುತ್ತದೆ. ಅದು ಮುಂದೆ ಸಂಬಂಧ ಹದಗೆಡಲು ಕಾರಣವಾಗಬಹುದು.

ಕೆಲವು ಸಾಮಾನ್ಯ ಸಂಗತಿಗಳ ಬಗ್ಗೆ ತಿಳಿಸಿ

ಬಹಳಷ್ಟು ಜನರಿಗೆ ತಮ್ಮಂತೆಯೇ ಹವ್ಯಾಸ ಹೊಂದಿರುವ ಜನ ಇಷ್ಟವಾಗುತ್ತಾರೆ. ಈ ಸಂಗತಿಯ ಲಾಭವನ್ನು ನೀವು ಪಡೆದುಕೊಳ್ಳಬಹುದು. ಪ್ರೇಮಿ ಮನೆಗೆ ಬರುವ ಮುಂಚೆ ಇಬ್ಬರ ನಡುವೆ ಸಾಮಾನ್ಯವಾಗಿ ಇರುವ ಸಂಗತಿಗಳ ಬಗ್ಗೆ ಮನವರಿಕೆ ಮಾಡಿಕೊಡಿ. ಇದರ ಲಾಭ ಏನೆಂದರೆ, ನಿಮ್ಮ ತಂದೆತಾಯಿ ಹಾಗೂ ಪ್ರೇಮಿಯ ನಡುವೆ ಮಾತುಕತೆ ಸರಾಗವಾಗಿ ಮುಂದುವರಿಯಬಹುದು. ನಿಮ್ಮ ಪ್ರೇಮಿಗೆ ಈ ಕಾಮನ್‌ ವಿಷಯ ತಿಳಿಸಿ. ಯಾರಾದರೂ ಮನೆಗೆ ಬಂದಾಗ, ನಿಮ್ಮ ಮನೆಯವರ ಪ್ರತಿಕ್ರಿಯೆ ಏನಿರುತ್ತದೆ ಎಂಬುದರ ಬಗ್ಗೆ ನಿಮಗೆ ಸಂಪೂರ್ಣ ಅರಿವಿರುತ್ತದೆ. ಬರುವ ವ್ಯಕ್ತಿಯ ಕೈ ಕುಲುಕುತ್ತಾರೊ ಇಲ್ಲವೋ ಎಂಬುದು ನಿಮಗೆ ಖಚಿತವಾಗಿ ತಿಳಿದಿರುತ್ತದೆ. ಕೆಲವರು ಬಂದವರನ್ನು ತಬ್ಬಿಕೊಂಡು ಸ್ವಾಗತಿಸುತ್ತಾರೆ. ಇನ್ನು ಕೆಲವರು ಹಿರಿಯರಿಗೆ ಪಾದಮುಟ್ಟಿ ನಮಸ್ಕರಿಸಿದರೆ, ಅವರಿಗೆ ಹೆಚ್ಚು ಖುಷಿಯಾಗುತ್ತದೆ. ಅಂತಹ ವ್ಯಕ್ತಿಯನ್ನು ಅವರು ಗುಡ್‌ಲಿಸ್ಟ್ ನಲ್ಲಿ ಇರಿಸಬಹುದು. ನಿಮ್ಮ ಪ್ರೇಮಿಗೆ ಮೊದಲ ಭೇಟಿಯಲ್ಲಿಯೇ ಯಾವ ಯಾವ ಸಂಗತಿಗಳನ್ನು ಅನುಸರಿಸಿದರೆ, ಅಮ್ಮ ಅಪ್ಪ ಖುಷಿಪಡಬಹುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಿ.

ನೀತಿ ನಿಯಮಗಳ ಪರಿಚಯ

ಪ್ರತಿಯೊಂದು ಮನೆಗೂ ತನ್ನದೇ ಆದ ನೀತಿನಿಯಮಗಳಿರುತ್ತವೆ. ಅವನ್ನು ಕುಟುಂಬದ ಸದಸ್ಯರು ಕಣ್ಮುಚ್ಚಿಕೊಂಡು ಪಾಲಿಸುತ್ತಾರೆ. ಯಾರಾದರೂ ಆ ನಿಯಮಗಳನ್ನು ಪಾಲಿಸದೆ ಇದ್ದರೆ ಒಂದು ಕ್ಷಣದಲ್ಲಿಯೇ ಮನೆಯ ಶಾಂತಿ ಭಂಗವಾಗುತ್ತದೆ. ಹೀಗಾಗಿ ನಿಮ್ಮ ಪ್ರೇಮಿಯನ್ನು ನಿಮ್ಮ ಮನೆಯವರಿಗೆ ಪರಿಚಯಿಸುವ ಮೊದಲು ಮನೆಯ ನೀತಿನಿಯಮಗಳನ್ನು ಆತನಿಗೆ ತಿಳಿಸಿದ್ದರೆ ಒಳ್ಳೆಯದು. ಅವುಗಳನ್ನು ಅನುಸರಿಸುವುದು ಆತನಿಗೆ ಸುಲಭವಾಗಿರಬೇಕು. ನಿಮ್ಮ ಮನೆಯೊಳಗೆ ಬರುವ ಮುಂಚೆ ಹೊರಗಡೆಯೇ ಚಪ್ಪಲಿ, ಶೂ ಕಳಚಿ ಬರುವ ಸಂಪ್ರದಾಯವಿರುತ್ತದೆ. ಅದೇ ರೀತಿ ನಿಮ್ಮ ಮನೆಯಲ್ಲಿ ಯಾವುದೇ ದ್ವಂದ್ವಾರ್ಥದ ಮಾತುಗಳನ್ನು ಇಷ್ಟಪಡುವುದಿಲ್ಲ ಎಂದಾದರೆ, ನಿಮ್ಮ ಪ್ರೇಮಿಗೆ ಆ ವಿಷಯ ಮೊದಲೇ ತಿಳಿಸಿದ್ದರೆ ಒಳ್ಳೆಯದು. ತಿಂಡಿಪಾನೀಯಗಳು ಬರುತ್ತಿದ್ದಂತೆ ಒಮ್ಮೆಲೇ ಮುಗಿಬೀಳುವುದು, ಅಗತ್ಯಕ್ಕಿಂತ ಹೆಚ್ಚು ಹಾಕಿಸಿಕೊಂಡು ತಟ್ಟೆಯಲ್ಲಿ ಹಾಗೆಯೇ ಬಿಟ್ಟುಬಿಡುವುದು ನಿಮ್ಮ ತಂದೆತಾಯಿಯರಿಗೆ ಇಷ್ಟವಾಗುವುದಿಲ್ಲ. ಈ ವಿಷಯ ನಿಮ್ಮ ಪ್ರೇಮಿಗೆ ಮೊದಲೇ ಗೊತ್ತಿದ್ದರೆ ಒಳ್ಳೆಯದು.

ಈಗ ನಿಮ್ಮ ಸರದಿ

ನೀವು ನಿಮ್ಮ ಮನೆಯವರ ಹಾವಭಾವ, ಸ್ವಭಾವದ ಬಗ್ಗೆ ಚೆನ್ನಾಗಿ ಅರಿತಿರುತ್ತೀರಿ, ಅವರಿಗೆ ಏನು ಇಷ್ಟ, ಏನು ಕಷ್ಟ ಎಂಬುದು ನಿಮಗೆ ಗೊತ್ತಿರುತ್ತದೆ. ಹೀಗಾಗಿ ನಿಮ್ಮ ಪ್ರೇಮಿ ನಿಮ್ಮ ಮನೆಗೆ ಬಂದ ನಂತರ ಅವನ ಜೊತೆಗೇ ಇರಿ. ಇಲ್ಲದಿದ್ದರೆ ಅವನಿಗೆ ಅಸಹಜತೆಯ ಭಾವ ಮೂಡುತ್ತದೆ.

ಒಂದು ಸಂಗತಿ ನೆನಪಿನಲ್ಲಿರಲಿ, ಪ್ರೇಮಿಗೆ ನಿಮ್ಮ ಮನೆ ಹೊಸತು. ಆದರೆ ನಿಮಗೆ ಆ ಮನೆ ಹೊಸತಲ್ಲ. ಇಂತಹ ಸ್ಥಿತಿಯಲ್ಲಿ ನಿಮ್ಮ ಜವಾಬ್ದಾರಿಯೆಂದರೆ, ಪ್ರೇಮಿಗೆ ನಿಮ್ಮ ಮನೆಯಲ್ಲಿ ತನ್ನತನದ ಅನುಭೂತಿ ಬರುವಂತಾಗಬೇಕು. ಅಪ್ಪಅಮ್ಮನ ಮುಂದೆ ಪ್ರೇಮಿಯನ್ನು ಹೊಗಳಿ. ನಿಮ್ಮ ಅಷ್ಟಿಷ್ಟು ಹೊಗಳಿಕೆ ಅವನಲ್ಲಿ ಆತ್ಮವಿಶ್ವಾಸವನ್ನು ಜಾಗೃತಗೊಳಿಸುತ್ತದೆ. ಅಪ್ಪಅಮ್ಮನ ದೃಷ್ಟಿಯಲ್ಲೂ ಅವನಿಗೆ ಒಳ್ಳೆಯ ಸ್ಥಾನಮಾನ ದೊರೆಯುವ ಸಾಧ್ಯತೆ ಇರುತ್ತದೆ.

– ಎಸ್‌.ಎನ್‌ ದೀಪ್ತಿ

Tags:
COMMENT