ಕಥೆ – ನಿರ್ಮಲಾ ಚಂದ್ರ 

ಕೆಲಸಕ್ಕೆಂದು ಮನೆ ತೊರೆದ ಹೆಂಡತಿ ಮಂದಿರಾ ಯಾರದೋ ಸ್ಕೂಟರ್‌ನಲ್ಲಿ ಕುಳಿತು ಪ್ರಯಾಣಿಸುತ್ತಿರುವುದನ್ನು ಕಂಡ ಅವನಿಗೆ ಅಚ್ಚರಿಯಾಗಿತ್ತು. ಅವನು ಆ ಸ್ಕೂಟರ್‌ನ್ನು ಫಾಲೋ ಮಾಡಿಕೊಂಡು ಹೋಗಬೇಕು ಎಂದುಕೊಂಡರೂ ಅದೇಕೋ ಬೇಡವೆನ್ನಿಸಿತು. ಮತ್ತೆ ಅವನು ತನ್ನ ದಾರಿ ಹಿಡಿದ.

ಅವನಿಗೆ ಹಿಂದಿನ ನೆನಪು ಕಾಡಿತು. ಅಂದು ಅವಳು ತಾನು ಸಹ ಕೆಲಸಕ್ಕೆ ಸೇರಿಕೊಳ್ಳುತ್ತೇನೆ. ನನಗೆ ಕಾಲೇಜು ದಿನಗಳಿಂದಲೂ ಟೀಚಿಂಗ್‌ನಲ್ಲಿ ಆಸಕ್ತಿ ಇದ್ದೇ ಇತ್ತು. ಇದೀಗ ಮಕ್ಕಳೂ ದೊಡ್ಡವರಾಗಿದ್ದಾರೆ. ನಾನು ಮನೆಯಲ್ಲಿ ಕುಳಿತು ಏನು ಮಾಡಲಿ? ಎಂದು ಕೇಳಿದಳು. ಅದಕ್ಕೆ ಅವನು ಮೌನವಾಗಿ ಸಮ್ಮತಿಸಿದ್ದ.

ಇಂದು ಸಂಜೆ ಮನೆಗೆ ಬಂದಾಗ ಅವನಿಗೆ ಮಂದಿರಾ ಮೊಗದಲ್ಲಿ ಹೊಸ ಕಾಂತಿ ಜೊತೆಗೆ ಮಂದಹಾಸ ಕಾಣಿಸಿತು. ಜೊತೆಗೆ ಧ್ವನಿಯಲ್ಲಿ ಎಂದೂ ಇಲ್ಲದ ಮಾಧುರ್ಯ ಕಂಡಂತಾಯಿತು. ಅವನಿಗೆ ತಾನು ಕಂಡ ಆ ದೃಶ್ಯವೇ ಕಣ್ಮುಂದೆ ಬಂದಿತು. ಅವನು ತುಸು ತಡೆದು ಕೇಳಿದ, “ನಿನ್ನ ಕೆಲಸ ಹೇಗೆ ನಡೆಯುತ್ತಿದೆ?”

“ಓಹೋ! ಚೆನ್ನಾಗಿದೆ ಶ್ರೀ….. ಎಲ್ಲ ಕೆಲಸಗಳಲ್ಲಿಯೂ ತುಸುವಾದರೂ ಕಿರಿಕಿರಿ ಇದ್ದೇ ಇರುತ್ತದಲ್ಲ. ಹಾಗೇ ಈ ಕೆಲಸದಲ್ಲಿಯೂ ಇದೆ. ಆದರೆ ನಾನದನ್ನೆಲ್ಲ ಸಂಭಾಳಿಸಿಕೊಂಡು ಹೋಗಬಲ್ಲೆ.”

“ನಾನೀಗ ಒಳ್ಳೆಯ ಸಂಪಾದನೆ ಮಾಡುವ ಕೆಲಸದಲ್ಲಿದ್ದೇನೆ. ನನ್ನ ಸಂಬಳವೇ ಸಂಸಾರ ನಡೆಸಲು ಸಾಕಾಗುವಷ್ಟಿದೆ ಇಂತಹದರಲಿ ನೀನು ಕೆಲಸಕ್ಕೆ ಹೋಗುವುದೇನೂ ಅಗತ್ಯವಿಲ್ಲ ಎನ್ನುವುದು ನನ್ನ ಭಾವನೆ.”

“ಶ್ರೀಕಾಂತ್‌, ನಿನಗೂ ತಿಳಿದಿದೆಯಲ್ಲ ನಾನು ಕೆಲಸಕ್ಕೆ ಹೋಗುತ್ತಿರುವುದು ನನ್ನ ಸಮಯನ್ನು ವ್ಯರ್ಥ ಮಾಡಬಾರದು ಎನ್ನುವ ಕಾರಣಕ್ಕೆ ಹೊರತು ಸಂಪಾದನೆಗಾಗಿ ಅಲ್ಲ. ನಾನು ಮೊದಲಿನಿಂದಲೂ ಆಸಕ್ತಿ ಬೆಳೆಸಿಕೊಂಡ ಕ್ಷೇತ್ರ ಅದು ಶಿಕ್ಷಣ ಕ್ಷೇತ್ರ. ಮಕ್ಕಳಿಗೆ ಪಾಠ ಹೇಳಿಕೊಡುವುದರಲ್ಲಿ ನನಗೆ ಏನೋ ಒಂದು ಬಗೆಯ ಶಾಂತಿ ಲಭಿಸುತ್ತದೆ.”

ಶ್ರೀಕಾಂತ್‌ ಮತ್ತೇನೂ ಮಾತನಾಡಲಿಲ್ಲ. ಈ ವಿಷಯದ ಚರ್ಚೆ ಅನಗತ್ಯ ಎನಿಸಿತು. ಅವನು ಮೌನ ವಹಿಸಿದ. ಆದರೆ ತಾನು ಕಂಡಿದ್ದು ಸುಳ್ಳೊ? ಸತ್ಯವೋ? ಈ ಪ್ರಶ್ನೆ ಮಾತ್ರ ಅವನಲ್ಲಿ ಸದಾ ಕಾಡುತ್ತಿತ್ತು.

ತುಸು ಸಮಯ ಕಳೆದು ಕೇಳಿದ, “ನೀನಿಂದು ಕಾಲೇಜು ಮುಗಿಸಿಕೊಂಡು ಇನ್ನೆಲ್ಲಾದರೂ ಹೋಗಿದ್ದೆಯಾ?”

“ಇಲ್ಲ….” ಎಂದು ಉತ್ತರಿಸಿದಳು.

ಇದಾಗಿ ಕೆಲವು ದಿನಗಳು ಕಳೆದವು. ಅದೊಂದು ದಿನ ಶ್ರೀಕಾಂತ್‌ ತನ್ನ ಕೆಲಸ ತೀರಿಸಿಕೊಂಡು ಗೆಳೆಯರೊಡನೆ  ಕಾಫಿ ಕುಡಿಯಲಿಕ್ಕಾಗಿ ಕಾಫಿ ಶಾಪ್‌ಗೆ  ಬಂದಿದ್ದ. ಅದೇ ವೇಳೆಯಲ್ಲಿ ಬ್ಲೂ ಜೀನ್ಸ್ ಮತ್ತು ಅದೇ ಬಣ್ಣದ ಟೀ ಶರ್ಟ್‌ ಧರಿಸಿದ್ದ ಯುವಕನೊಡನೆ ಮಂದಿರಾ ನಗುತ್ತಾ, ಹರಟುತ್ತಾ ಕಾಫಿ ಕುಡಿಯುತ್ತಿದ್ದುದು ಕಂಡಿತು. ಆ ಯುವಕನ ಮುಖವನ್ನೂ ಸಹ ನೋಡಲು ಹೇಸಿಕೊಂಡ ಶ್ರೀಕಾಂತ್‌ ಕಾಫಿ ಶಾಪ್‌ನಿಂದ ಹೊರಬಂದವನಿಗೆ ಅದೇ ಸ್ಕೂಟರ್‌ ಕಂಡಿತು. ಆ ಸ್ಕೂಟರ್‌ನ ರಿಜಿಸ್ಟರ್‌ ಸಂಖ್ಯೆಯನ್ನು ಬರೆದುಕೊಂಡು ಅಲ್ಲಿಂದ ನೇರವಾಗಿ ಮನೆಯತ್ತ ಮುಖ ಮಾಡಿದ. ಅಂದು ಅವನು ಎರಡರಲ್ಲಿ ಒಂದು ತೀರ್ಮಾನ ಮಾಡಲೇಬೇಕೆಂದು ನಿರ್ಧರಿಸಿದ್ದನು. ಮಂದಿರಾ ಏಕೆ ಹೀಗಾದಳು ಎನ್ನುವುದು ಅವನಿಗೆ ತಿಳಿಯದಾಯಿತು.

ಅಂದು ಸಂಜೆ ಮನೆಗೆ ಬಂದ ಮಂದಿರಾಳನ್ನು ಶ್ರೀಕಾಂತ್‌ ತಾನಾಗಿ ಏನೂ ಕೇಳಲಿಲ್ಲ. ಅವಳೂ ಕೂಡ ಅವಳ ಕೆಲಸ ಮಾಡಿಕೊಂಡಿದ್ದಳಲ್ಲದೆ, ಏನೂ ಹೆಚ್ಚು ಮಾತನಾಡಲಿಲ್ಲ. ತಡೆಯಲಾಗದೆ ಕಡೆಗೆ ಶ್ರೀಕಾಂತನೇ ಕೇಳಿದ, “ಮಂದಿರಾ ಏಕೆ ಏನೂ ಮಾತನಾಡುತ್ತಿಲ್ವಲ್ಲಾ….? ಏನಾದರೂ ಸಮಸ್ಯೆನಾ…?”

“ಹಾಗೇನೂ ಇಲ್ಲ,” ಅವಳು ಚುಟುಕಾಗಿ ಉತ್ತರಿಸಿದಳು.

“ಇಲ್ಲ. ನನ್ನಿಂದ ನೀನೇನೋ ಮರೆ ಮಾಚುತ್ತಿರುವೆ….”

“ಶ್ರೀಕಾಂತ್‌, ಇತ್ತೀಚೆಗೆ ನಾನೂ ಗಮನಿಸುತ್ತಿದ್ದೇನೆ. ನೀವೇಕೊ ಬಹಳ ವಿಚಿತ್ರವಾಗಿದ್ದೀರಿ. ಎಲ್ಲವನ್ನೂ ಅನುಮಾನದಿಂದ ನೋಡುವುದೇಕೆ? ಜೀವನವನ್ನು ಅದು ಇರುವಂತೇ ಆನಂದಿಸಬೇಕಲ್ಲವೇ?”

ಶ್ರೀಕಾಂತ್‌ ತಕ್ಷಣ ಮನಸ್ಸಿನಲ್ಲಿ, `ನೀನೀಗ ನಿನ್ನ ಜೀವನವನ್ನು ಆನಂದಿಸುತ್ತಿರುವೆಯಲ್ಲವೆ?’ ಅಂದುಕೊಂಡ. ಆದರೆ ಬಾಯಿ ತೆರೆದು ಏನೂ ಹೇಳಲಿಲ್ಲ.

ಮತ್ತೆ ಒಂದು ವಾರ ಕಳೆಯಿತು. ಮತ್ತೊಮ್ಮೆ ಕೆಲಸ ಮುಗಿಸಿ ದಿನನಿತ್ಯಕ್ಕಿಂತ ಸ್ವಲ್ಪ ಬೇಗನೇ ಮನೆಗೆ  ಬಂದಿದ್ದ. ಅದೇ ಸ್ಕೂಟರ್‌ ಮತ್ತೆ ತನ್ನ ಬಾಗಿಲಿನಲ್ಲಿಯೇ ನಿಂತಿರುವುದನ್ನು ಕಂಡ.

ಶ್ರೀಕಾಂತ್‌ ಕ್ಷಣ ಕಾಲ ಅಲ್ಲೇ ನಿಂತ. ಮನೆಯೊಳಗೆ ತೆರಳಲೋ, ಬೇಡವೋ  ಎಂದು ಯೋಚಿಸಿದ. ಮತ್ತೆ ಮಂದಿರಾ ಹೇಗಿರುಳೋ ಎಂದೆಲ್ಲಾ  ಆಲೋಚಿಸುತ್ತಾ ಅಲ್ಲೇ ನಿಂತ.

ಕೆಲ ಸಮಯದ ಬಳಿಕ ನನ್ನ ಪತ್ನಿ ಕುರಿತು ನಾನೇ ಅನುಮಾನ ಪಡುವುದು ತಪ್ಪು ಎಂದುಕೊಂಡು ಕಾಲಿಂಗ್‌ ಬೆಲ್ ಒತ್ತಿದ. ಚೆನ್ನಾಗಿ ಅಲಂಕರಿಸಿಕೊಂಡಿದ್ದ ಮಂದಿರಾ ತಾನೇ ಬಾಗಿಲು ತೆರೆದಳು. “ಓಹೋ… ನೀವು ಇಷ್ಟು ಬೇಗನೇ ಬಂದಿರಾ….? ಒಳ್ಳೆಯ ಕೆಲಸ ಮಾಡಿದಿರಿ ಬನ್ನಿ,” ಅಚ್ಚರಿಯ ನೋಟದೊಡನೆ ಸ್ವಾಗತಿಸಿದಳು.

“ನಿಮ್ಮ ಅಕ್ಕ ಶ್ರೀಲತಾ ಮತ್ತು ಅವರ ಮಗ ಬಂದಿದ್ದಾರೆ. ಇಂದು ನಮ್ಮ ಹನ್ನೆರಡನೆ ವಿವಾಹ ವಾರ್ಷಿಕೋತ್ಸವವಲ್ಲವೇ?” ಎನ್ನುತ್ತಲೇ ಶ್ರಿಕಾಂತ್‌ಗೆ `ತಾನೆಂಥಹ ತಪ್ಪು ಮಾಡಿದೆ? ನನ್ನ ಪತ್ನಿಯ ಮೇಲೆ ವಿನಾಕಾರಣ ಅನುಮಾನ ಪಟ್ಟೆನಲ್ಲಾ,’ ಎನಿಸಿತು. ಅವಳ ಮಾತಿಗೆ ಮೌನವಾಗಿ ತಲೆದೂಗಿದನಲ್ಲದೆ, ಏನೂ ಪ್ರತಿಕ್ರಿಯೆ ತೋರಲಿಲ್ಲ. ಅಷ್ಟರಲ್ಲಿ ಶ್ರೀಕಲಾ ಮತ್ತು ಆನಂದ್‌ ಅಲ್ಲಿಗೆ ಬಂದರು. ಶ್ರೀಕಾಂತ್‌ ಇಬ್ಬರ ಕುಶಲೋಪರಿ ವಿಚಾರಿಸಿ, ಹಾಗೆಯೇ ಕೆಲವು ಸಮಯ ಕಳೆದ ನಂತರ ಮಂದಿರಾ ಅವನನ್ನು ತನ್ನ ಕೋಣೆಗೆ ಬರುವಂತೆ ಕರೆದಳು.

“ನಿಮಗೊಂದು ಸರ್‌ಪ್ರೈಸ್‌ ಇದೆ,” ಎಂದಳು.

ಶ್ರೀಕಾಂತ್‌ ಕೋಣೆಗೆ ಬಂದಾಗ ಚೆನ್ನಾಗಿ ಪ್ಯಾಕ್‌ ಮಾಡಿದ್ದ ದೊಡ್ಡ ಪೆಟ್ಟಿಗೆ ತೋರಿಸಿ, “ಇದನ್ನು ತೆರೆಯಿರಿ,” ಎಂದಳು.

ಅವನು ನಾಜೂಕಿನಿಂದ ಆ ಪೆಟ್ಟಿಗೆಯನ್ನು ತೆರೆದ. ಅದರಲ್ಲಿ ಎಲೆಕ್ಟ್ರಾನಿಕ್‌ ಪಿಯಾನೋ ಇತ್ತು. “ಇದು ನನ್ನ ಕಡೆಯಿಂದ ನನ್ನ ಪ್ರೀತಿಯ ಪತಿಗಾಗಿ ಖರೀದಿಸಿ ತಂದ ಉಡುಗೊರೆ,” ಎಂದು ಮಂದಿರಾ ಮಧುರವಾಗಿ ನುಡಿದಾಗ ಶ್ರೀಕಾಂತ್‌ಗೆ  ಏನೂ ಹೇಳಲಾಗಲಿಲ್ಲ.

“ಮಂದಿರಾ ನೀನಿದನ್ನು ಹೇಗೆ ತಂದೆ?”

“ಅಯ್ಯೋ….. ಸಂಗೀತದ ಬಗ್ಗೆ ನನಗೇನು ತಿಳಿಯುತ್ತೇ? ನಾನು ಆನಂದನೊಂದಿಗೆ ಹೋಗಿ ಅವನ ಸಲಹೆಯಂತೆ ಆಯ್ಕೆ ಮಾಡಿದ ಕಾರಣ ಬೆಲೆ ಮತ್ತು ಗುಣಮಟ್ಟ ಎರಡೂ ಇರುವ ಈ ಪಿಯಾನೋ ಸಿಕ್ಕಿತು. ಕಳೆದ ಹದಿನೈದು ದಿನಗಳಿಂದ ಇದಕ್ಕಾಗಿ ಊರೆಲ್ಲಾ ಅಲೆದದ್ದಾಗಿದೆ,” ಎಂದಾಗ ಶ್ರೀಕಾಂತ್‌ಗೆ ತಾನು ಮಾಡಿದ ತಪ್ಪಿನ ಅರಿವಾಗಿ ಪಾತಾಳಕ್ಕೆ ಕುಸಿದ ಅನುಭವವಾಯಿತು.

`ಮಂದಿರಾ ತಾನು ಸಂಪಾದಿಸಿದ್ದ ಹಣದಿಂದ ತನಗಾಗಿ ಪಿಯಾನೋ ಖರೀದಿಸಿದ್ದಾಳೆ. ನಾನು ನನ್ನ ವಿವಾಹ ದಿನವನ್ನೂ ನೆನೆಸಿಕೊಳ್ಳಲಿಲ್ಲ….?!” ಎಂದು ಬೇಸರಾಯಿತು.

“ಮಂದಿರಾ ನನ್ನನ್ನು ಕ್ಷಮಿಸು. ನಾನು ನಿನಗೇನೂ ಉಡುಗೊರೆ ತಂದಿಲ್ಲ…”

“ನೀವಿಷ್ಟು ಬೇಗ ಮನೆಗೆ ಬಂದಿದ್ದೇ ಸಾಕು. ಈಗ ನನಗೆ ಅತ್ಯಂತ ಸಂತಸವಾಗಿದೆ. ಕೆಳಗೆ ಊಟ ತಯಾರಾಗಿದೆ. ಸಿಹಿ ತಿಂಡಿಯೂ ಇದೆ. ಬನ್ನಿ ಎಲ್ಲರೂ ಸೇರಿ ಊಟ ಮಾಡೋಣ…” ಎನ್ನುತ್ತಾ ಅನನ್ನು ಕರೆದುಕೊಂಡು ಊಟಕ್ಕಾಗಿ ಹೊರಟಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ