ಮಿನಿ ಕಥೆ – ಕೆ. ಮಾಲತಿ ಭಟ್‌ 

 ಅಣ್ಣನ ಉಡುಗೊರೆಯ ನಿರೀಕ್ಷೆಯಲ್ಲಿದ್ದ ಅವಳಿಗೆ ಅವನಿಂದ ಉಡುಗೊರೆ ಸಿಕ್ಕಿತೆ?

ಅಂದು ಅಂಜನಾಳ ಜನುಮದಿನ. ಆದರೆ ಅಂಜನಾಳಿಗೆ ಅದೇಕೋ ಸಂಭ್ರಮ ಎನಿಸಲಿಲ್ಲ. ಆ ದಿನ ಬಹು ನಿಧಾನವಾಗಿ ಸಾಗುತ್ತಿದ್ದಂತೆ ಕಂಡಿತು. ಪತಿ ವಿನಯ್‌ ಬೆಳಗ್ಗೆ ಚಹಾದೊಂದಿಗೆ ಹುಟ್ಟುಹಬ್ಬದ ಶುಭ ಹಾರೈಕೆ ತಿಳಿಸಿ ಸಂಜೆ ಬೇಗ ಬರುವುದಾಗಿಯೂ, ರಾತ್ರಿ ಡಿನ್ನರ್‌ಗೆ ಒಳ್ಳೆಯ ರೆಸ್ಟೋರೆಂಟ್‌ಗೆ ಹೋಗೋಣವೆಂದು ತಿಳಿಸಿದ.

ಮಗ ನಿಖಿಲ್ ತಾನೇ ಬಿಡಿಸಿದ್ದ ಕೇಕ್‌ ಮತ್ತು ಹೂವಿನ ಚಿತ್ರವನ್ನು ಅಂಜನಾಳಿಗೆ ಕೊಟ್ಟು ಹುಟ್ಟುಹಬ್ಬದ ಶುಭಾಶಯ ಕೋರಿದ. ಇದಲ್ಲದೆ ಹಲವು ಸ್ನೇಹಿತರು, ಬಂಧುಗಳು ಅಂಜನಾಳಿಗೆ ಕರೆ ಮಾಡಿ ಶುಭ ಹಾರೈಸಿದರು. ಇವೆಲ್ಲದರಿಂದ ಅಂಜನಾಳಿಗೆ ಸಂತಸವಾಗಿದ್ದರೂ ಅಣ್ಣ ಅಂಕುರ್‌ನ ನೆನಪು ಅವಳ ಕಣ್ಣು ಹನಿಗೂಡುವಂತೆ ಮಾಡಿತ್ತು.

ಸುಂದರವಾದ ಬಾಲ್ಯದ ದಿನಗಳವು. ಅಂಕುರ್‌ ಮತ್ತು ಅಂಜನಾ ಅಣ್ಣತಂಗಿ. ಅಂಕುರ್‌ ಅವಳಿಗಿಂತ ಎಂಟು ವರ್ಷ ದೊಡ್ಡವನಾಗಿದ್ದ. ಹೀಗಾಗಿ ಅಂಕುರ್‌ನೊಂದಿಗೆ ಅಂಜನಾಳಿಗೆ ಒಳ್ಳೆಯ ಸ್ನೇಹ ಬೆಳೆದಿತ್ತು. ಅಂಜನಾ ಶಾಲೆಗೆ ಹೋಗುತ್ತಿದ್ದ ದಿನದಲ್ಲಿ ಅವಳ ಬೇಕು, ಬೇಡವನ್ನೆಲ್ಲ ಅಂಕುರ್‌ ನೋಡಿಕೊಳ್ಳುತ್ತಿದ್ದ. ಜಾಮೆಟ್ರಿ ಬಾಕ್ಸ್, ಪುಸ್ತಕ, ಬ್ಯಾಗ್‌, ರಬ್ಬರ್‌ನಿಂದ ಐಸ್‌ಕ್ರೀಮ್ ವರೆಗೂ ತಂದುಕೊಡುತ್ತಿದ್ದ. ಅಂಕುರ್‌ ಶಾಲೆ ಬಿಟ್ಟು ಕೆಲವು ವರ್ಷಗಳಾಗಿದ್ದವು. ಇದೀಗ ಒಂದು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅವನ ಪ್ರಪಂಚವೆಲ್ಲ ಪುಟ್ಟ ತಂಗಿ ಅಂಜನಾಳೇ ಆಗಿದ್ದಳು. ಅಂಜನಾಳಿಗೂ ತನ್ನ ಅಣ್ಣನೇ ಎಲ್ಲವೂ ಆಗಿದ್ದ.

ಕಾಲ ಸರಿದಂತೆ ಅಂಜನಾ ಮತ್ತು ಅಂಕುರ್‌ಗೆ ಮದುವೆಯಾಯಿತು. ಅಂಜನಾ ಗಂಡನ ಮನೆ ಸೇರಿದ ನಂತರ ಅಂಕುರ್‌ ಅವಳ ಜನ್ಮದಿನಕ್ಕೆ ತಪ್ಪದೇ ಉಡುಗೊರೆ ಕಳುಹಿಸುತ್ತಿದ್ದ. ಮುಂದೆ ಅಂಕುರ್‌ಗೆ ಮುದ್ದಾದ ಹೆಣ್ಣುಮಗುವಾಯಿತು. ಇಷ್ಟಾಗಿಯೂ ಅಣ್ಣತಂಗಿಯರ ಸಂಬಂಧ, ಪ್ರೀತಿ ಅತ್ಯಂತ ಗಾಢವಾಗಿತ್ತು. ಉಡುಗೊರೆ ನೀಡುವ ನಿಯಮ ಹಾಗೇ ಮುಂದುವರಿದಿತ್ತು.

ಹೀಗಿರುವಾಗ ಒಮ್ಮೆ ತಲೆ ನೋವೆಂದು ಆಸ್ಪತ್ರೆ ಸೇರಿದ್ದ ಅಂಕುರ್‌ಗೆ ಬ್ರೈನ್‌ ಟ್ಯೂಮರ್‌ ಆಗಿರುವುದು ತಿಳಿಯಿತು. ಅಂಕುರ್‌ ಪತ್ನಿ ಸಂಜನಾ ವಿಷಯ ತಿಳಿಸಿದಾಗ ಅಂಜನಾಳಿಗೆ ನಿಜಕ್ಕೂ ಶಾಕ್‌ ಆಗಿ ಬಹಳ ದುಃಖಿತಳಾದಳು. ಅಣ್ಣನ ಆರೋಗ್ಯವನ್ನು ಪ್ರತಿನಿತ್ಯ ವಿಚಾರಿಸುತ್ತಿದ್ದವಳಿಗೆ ಅವನ ಆರೋಗ್ಯದ ಸ್ಥಿತಿ ದಿನದಿನಕ್ಕೂ ಕ್ಷೀಣಿಸುತ್ತಿದೆ ಎನಿಸತೊಡಗಿತು.

ಎರಡು ವಾರಗಳು ಕಳೆದವು. ಅಂಕುರ್‌ ಇನ್ನೂ ಆಸ್ಪತ್ರೆಯಲ್ಲಿಯೇ ಇದ್ದ. ಅಂಜನಾ ಪ್ರತಿದಿನ ಹೋಗಿ ಅವನ ಆರೋಗ್ಯ ವಿಚಾರಿಸುತ್ತಿದ್ದಳು. ಇಂದು ಅಂಜನಾ ಹುಟ್ಟಿದ ದಿನ. ಅಂಕುರ್‌ ಆರೋಗ್ಯವಾಗಿದ್ದಿದ್ದರೆ ಅವಳಿಗೊಂದು ವಿಶೇಷ ಉಡುಗೊರೆ ಕೊಡುತ್ತಿದ್ದ. ಇದನ್ನು ನೆನೆಸಿ ಅಂಜನಾ ಮತ್ತಷ್ಟು ಬೇಸರಗೊಂಡು ದುಃಖಿತಳಾದಳು.

“ಕೊರಿಯರ್‌….”

ಹೊರಗಿನಿಂದ ಕೂಗಿದ ಸದ್ದು ಕೇಳಿಸಿತು. ಬಾಗಿಲು ತೆರೆದು ನೋಡಿದಾಗ ಚೆನ್ನಾಗಿ ಪ್ಯಾಕ್‌ ಮಾಡಿದ್ದ ಒಂದು ಗಿಫ್ಟ್ ಬಾಕ್ಸ್ ನೊಂದಿಗೆ ಕೊರಿಯರ್‌ ಬಾಯ್‌ ನಿಂತಿದ್ದ. ಕೊರಿಯರ್‌ ಪಡೆದು ತೆರೆದಾಗ ಸುತ್ತಲೂ ಗುಲಾಬಿ ಬಣ್ಣದ ಬಟ್ಟೆಯಲ್ಲಿ ಸುತ್ತಿದ್ದ ಕೈಗಡಿಯಾರವೊಂದು ಕಂಡಿತು. ಅದರೊಂದಿಗೆ ಒಂದು ಕಾಗದದಲ್ಲಿ ಈ ರೀತಿ ಇತ್ತು.

`ನಿನಗಿದು ಇಷ್ಟವಾಗಬಹುದು ಎನ್ನುವುದು ನನ್ನ ಅನಿಸಿಕೆ…. ‘ ಪ್ರೀತಿಯ ಅಣ್ಣ ಅಂಕುರ್‌… ಆ ಸಾಲುಗಳನ್ನು ಮತ್ತೆ ಮತ್ತೆ ಓದಿದ ಅಂಜನಾಳಿಗೆ ಅಣ್ಣನ ನೆನಪು ಒತ್ತರಿಸಿಕೊಂಡು ಬಂದು ಮತ್ತಷ್ಟು ಕಣ್ಣೀರುಗರೆದಳು.

ಅಷ್ಟರಲ್ಲಿ ಅವಳ ಮೊಬೈಲ್‌ಗೆ ಸಂಜನಾಳ ಕರೆ ಬಂದಿತು. ಹುಟ್ಟುಹಬ್ಬದ ಶುಭ ಕೋರಿದುದಲ್ಲದೆ, ಅಣ್ಣ ಆರೋಗ್ಯವಾಗಿ ಮನೆಗೆ ಮರಳಿರುವ ವಿಷಯವನ್ನೂ ತಿಳಿಸಿದಳು.

ಆ ಸಮಾಚಾರವೇ ಅಂಜನಾಳಿಗೆ ನಿಜಕ್ಕೂ ಹುಟ್ಟುಹಬ್ಬದ ವಿಶೇಷ ಉಡುಗೊರೆಯಾಗಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ