ಕಥೆ - ರಂಜಿತಾ
ಇಂದು ವಿನಿತಾ ತೋರಿದ ಧೈರ್ಯವನ್ನು ಎಲ್ಲ ಯುವತಿಯರೂ ತೋರಿದ್ದಾದಲ್ಲಿ ನಮ್ಮಲ್ಲಿ ನಡೆಯುವ ಅತ್ಯಾಚಾರ, ಕಿರುಕುಳಗಳು ಸಾಕಷ್ಟು ತಗ್ಗಲಿವೆ ಎಂಬುದನ್ನು ಈ ಕಥೆ ಹೇಳುತ್ತದೆ!
``ಅಮ್ಮಾ ಪಪ್ಪಾ ಇನ್ನು ಕಾರ್ ಕಳಿಸಿಲ್ಲ. ಇವತ್ತು ಬಹಳ ಮುಖ್ಯವಾದ ಟ್ಯೂಷನ್ ಕ್ಲಾಸ್ ಇದೆ. ಇತ್ತೀಚೆಗೆ ಪ್ರತಿ ದಿನ ಹೀಗೆಯೇ ಆಗುತ್ತಿದೆ. ಇನ್ನು ನಾನೇನಾದರೂ ಪರೀಕ್ಷೆಯಲ್ಲಿ ಫೇಲ್ ಆದರೆ ನನ್ನನ್ನು ದೂರಬೇಡಿ ಪ್ಲೀಸ್....'' ವಿನಿತಾ ತಾನು ಮಹಡಿ ಮೆಟ್ಟಿಲು ಹತ್ತಿಳಿಯುತ್ತಾ ಬೇಸರದಿಂದ ನುಡಿದಳು.
``ಇಲ್ಲ, ಪಪ್ಪಾ ಇನ್ನೇನು ಕಾರು ಕಳಿಸುತ್ತಾರೆ. ಬೇಸರಪಡಬೇಡ. ಏನೂ ಕೆಟ್ಟದಾಗುವುದಿಲ್ಲ,'' ಪ್ರಶಾಂತಿ ತನ್ನೊಬ್ಬಳೇ ಮಗಳನ್ನು ಸಮಾಧಾನಪಡಿಸುತ್ತಿದ್ದಳು.
``ನಮ್ಮ ಸರ್ ಒಂದೆರಡು ನಿಮಿಷ ತಡವಾದರೂ ಸಹ ಕ್ಲಾಸ್‌ಗೆ ಸೇರಿಸಲ್ಲ. ನಾನೇನು ಮಾಡಲಿ?'' ಎಂದಾಗ ಪ್ರಶಾಂತಿಗೂ ಏನೆಂದು ಪ್ರತಿಕ್ರಿಯಿಸುವುದೋ ತಿಳಿಯದಾಗಿತ್ತು. ಅಂತೂ ಐದಾರು ನಿಮಿಷಗಳಾಗಿರಲಿಲ್ಲ ಕಾರು ಬಂದಿತ್ತು. ವಿನಿತಾ ಅಂತೂ ಅಂದಿನ ಟ್ಯೂಷನ್ ಕ್ಲಾಸ್‌ಗೆ ಹೊರಟಳು. ಮತ್ತೆ ಮರುದಿನ ಸಹ ಇದೇ ರೀತಿ ಪುನರಾವರ್ತಿಸಿದಾಗ ವಿನಿತಾ ರೋಸಿಹೋದಳು. ``ಮಮ್ಮಿ, ನನಗೊಂದು ಸ್ಕೂಟಿ ಕೊಡಿಸು.... ಪ್ರತಿ ದಿನ ಪಪ್ಪಾ ಕಾರ್ ಕಳಿಸುವುದು ತಡವಾಗುತ್ತೆ. ಅಲ್ಲದೆ, ನನ್ನ ಗೆಳತಿಯರೆಲ್ಲರೂ ಸ್ಕೂಟಿಯಲ್ಲಿ ಬರುತ್ತಾರೆ. ನಾನೂ ಸ್ಕೂಟಿ ತೆಗೆದುಕೊಂಡರೆ ಆಗ ಟ್ಯೂಷನ್‌ಗೆ ಸರಿಯಾದ ಸಮಯಕ್ಕೆ ತಲುಪಬಹುದು. ಅಲ್ಲದೆ, ಅವರೊಡನೆ ಔಟಿಂಗ್ ಸಹ ಹೋಗಲು ಬಹಳ ಸಂತಸವಾಗುತ್ತದೆ....''
``ಸ್ಕೂಟಿ ಏನೋ ಕೊಡಿಸಬಹುದು. ಆದರೆ ಈ ನಗರದ ರಸ್ತೆಗಳು ಹೇಗಿದೆ ಎಂದು ಗೊತ್ತಲ್ವಾ? ಎಲ್ಲೆಲ್ಲೂ ಹೊಂಡ, ಗುಂಡಿಗಳು.... ಅಷ್ಟೇ ಅಲ್ಲ ಏನಾದರೂ ಅಪ್ಪಿತಪ್ಪಿ ಅಪಘಾತವಾದರೆ....?``
``ಅಯ್ಯೋ! ನಾನೇನು ಚಿಕ್ಕವಳಲ್ಲ. ನೀವಿಬ್ಬರೂ ನನ್ನನ್ನ ಇನ್ನೂ ಮಗು ಎಂದುಕೊಂಡಿರುವಿರಿ?!''
``ಹಾಗಲ್ಲ ವಿನಿ, ನಮ್ಮ ಆತಂಕ ನಿನಗೆ ಅರ್ಥ ಆಗುವುದಿಲ್ಲ.''
ವಿನಿತಾ ಮೌನವಾಗಿ ಕೋಣೆಯತ್ತ ನಡೆದಳು. ಅವಳಿಗೆ ಬಹಳ ಬೇಸರವಾಗಿತ್ತು. ಅಂದು ಸಂಜೆ ಮಹಂತೇಶ್ ಮನೆಗೆ ಬಂದಾಗ ಪ್ರಶಾಂತಿಯೇ ಮಾತು ತೆಗೆದಳು, ``ನೋಡಿ, ನಿಮ್ಮ ಮಗಳು ಸ್ಕೂಟಿ ಕೇಳುತ್ತಿದ್ದಾಳೆ. ಇಷ್ಟಕ್ಕೂ ಇತ್ತೀಚೆಗೆ ನೀವು ಅವಳಿಗಾಗಿ ಕಾರು ಕಳುಹಿಸುವುದು ತಡವಾಗುತ್ತಿದೆ.''
``ಏನು ಮಾಡಲಿ? ನಾನು ಸರಿಯಾದ ಸಮಯಕ್ಕೆ ಕಾರು ಕಳಿಸುತ್ತೇನೆ. ಆದರೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ತಡವಾಗುತ್ತಿದೆ.''
``ನೀವೇನೋ ಹೀಗೆ ಹೇಳುತ್ತೀರಿ. ಆದರೆ ಅವಳ ಟ್ಯೂಷನ್ ಕ್ಲಾಸ್‌ಗೆ ತಡವಾದರೆ ಒಳಗೆ ಸೇರಿಸುವುದಿಲ್ಲ. ಇದು ಅವಳ ವಿದ್ಯಾಭ್ಯಾಸಕ್ಕೆ ತೊಂದರೆ. ನಾಳೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದರೆ ಏನು ಮಾಡುವುದು?''
ಮಹಂತೇಶ್‌ಗೂ ತಕ್ಷಣ ಇದಕ್ಕೆ ಉತ್ತರ ಹೊಳೆಯಲಿಲ್ಲ. ``ವಿನಿ ಇನ್ನೂ ಚಿಕ್ಕವಳು... ಅವಳಿಗೆ ಸ್ಕೂಟಿ ಕೊಡಿಸಿದರೆ ನಾಳೆ ಅವಳು ಏನಾದರೂ ಮಾಡಿಕೊಂಡರೆ ಅದಕ್ಕೇನು ಮಾಡಲಿ?'' ಎಂದೆನ್ನುವಷ್ಟರಲ್ಲಿ ಕೋಣೆಯಿಂದ ಹೊರ ಬಂದ ವಿನಿತಾ, ``ನಾನು ಕಾಲೇಜು ಸೇರಿದ್ದೇನೆ. ನಾನಿನ್ನು ಪುಟ್ಟ ಹುಡುಗಿಯಲ್ಲ. ನನ್ನ ಗೆಳತಿಯರೆಲ್ಲ ಆಗಲೇ ಅವರವರ ಸ್ವಂತ ವಾಹನದಲ್ಲಿ ಕಾಲೇಜಿಗೆ ಟ್ಯೂಷನ್‌ಗೆ ಬರುತ್ತಿದ್ದಾರೆ,'' ಎಂದಾಗ ಮಹಂತೇಶ್ ಅವಳ ವಾದ ಸರಣಿಗೆ ತಲೆಬಾಗಬೇಕಾಯಿತು.