ಕಥೆ  –  ವೈ. ರಮಣಿ ರಾವ್‌

ಅತ್ತಿಗೆ ಬಹಳ ಇಷ್ಟಪಟ್ಟು ಖರೀದಿಸಿದ್ದ ಬನಾರಸ್‌ ಸೀರೆಯನ್ನು ಅವರು ಬದುಕಿರುವವರೆಗೂ ಧರಿಸಲಾಗಲಿಲ್ಲ ಎಂಬ ನೋವು ವಾಣಿಯನ್ನು ಬಾಧಿಸುತ್ತಲೇ ಇತ್ತು. ಹೀಗೇಕಾಯಿತು…..?

ಇಂದು ಬೆಳಗ್ಗೆಯೇ ಗೋಪಣ್ಣನ ಫೋನ್‌ ಬಂತು. ಅವನು ಅಳುತ್ತಾ ಗದ್ಗದ ಸ್ವರದಲ್ಲಿ, “ವಾಣಿ, ಲಲಿತಾ ಇನ್ನಿಲ್ಲ. ಸ್ವಲ್ಪ ಹೊತ್ತಿಗೆ ಮುಂಚೆ ಅವಳು ನಮ್ಮನ್ನೆಲ್ಲಾ ಬಿಟ್ಟು ಹೋಗಿಬಿಟ್ಳು,” ಎಂದ.

ನನ್ನೆದೆ ಧಸಕ್ಕೆಂದಿತು. ಒಂದಲ್ಲಾ ಒಂದು ದಿನ ಈ ದುಃಖದ ಸಮಾಚಾರ ಅಣ್ಣ ಹೇಳಲಿದ್ದಾನೇಂತ ನನಗೆ ಗೊತ್ತಿತ್ತು. ಅತ್ತಿಗೆಗೆ ಲಂಗ್ಸ್ ಕ್ಯಾನ್ಸರ್‌ ಎಂದು ಅಣ್ಣ ಹೇಳಿದಾಗಿನಿಂದ ನನ್ನ ಮನಸ್ಸಿನಲ್ಲಿ ಭಯ ಕೂತಿತ್ತು. ಅತ್ತಿಗೆ ಇನ್ನಷ್ಟು ದಿನ ಬದುಕಿರಲಿ ಎಂದು ನಾನು ಮನಸ್ಸಿನಲ್ಲೇ ಪ್ರಾರ್ಥಿಸುತ್ತಿದ್ದೆ. ಆದರೆ ಹಾಗಾಗಲಿಲ್ಲ. ಇನ್ನೂ 40 ವರ್ಷ. ಸಾಯುವ ವಯಸ್ಸಲ್ಲ. ನಾನು ನಿಟ್ಟುಸಿರುಬಿಟ್ಟೆ. ಅತ್ತಿಗೆ ಇನ್ನೂ ಏನು ನೋಡಿದ್ದಾರೆ? ಅವರ ಎಳೆಯ ಮಕ್ಕಳ ಬಗ್ಗೆ ಯೋಚಿಸಿದಾಗ ಹೃದಯ ಹಿಂಡಿಹೋಯಿತು. ಗಂಟಲು ಭಾರವಾಯಿತು.

ನಾನು ಭಾರದ ಹೃದಯದಿಂದ ಬಟ್ಟೆಗಳನ್ನು ಪ್ಯಾಕ್‌ ಮಾಡತೊಡಗಿದೆ. ಅಲ್ಮೇರಾದಿಂದ ಬಟ್ಟೆ ತೆಗೆಯುವಾಗ ಬಿಳಿ ಮಕಮಲ್ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಬನಾರಸ್‌ ಸಿಲ್ಕ್ ಸೀರೆ ನನ್ನ ಕಣ್ಣಿಗೆ ಬಿತ್ತು. ಅದನ್ನು ನೋಡಿದ ಕೂಡಲೇ ನನಗೆ ಹಿಂದಿನ ವಿಷಯಗಳು ನೆನಪಾದವು.

ಅತ್ತಿಗೆ ಅದೆಷ್ಟು ಪ್ರೀತಿಯಿಂದ ಈ ಸೀರೆ ಸೆಲೆಕ್ಟ್ ಮಾಡಿದ್ದರು. ಗೋಪಣ್ಣ ಆಫೀಸ್‌ ಕೆಲಸದ ಮೇಲೆ ಕಾಶಿಗೆ ಹೋಗಬೇಕಾಗಿತ್ತು.

“ನೀನೂ ಬರೋ ಹಾಗಿದ್ರೆ ಬಾ. ಜಾಸ್ತಿ ಏನಿಲ್ಲ. ಬರೀ 1 ವಾರ ಅಷ್ಟೇ. ಅಮ್ಮ ಮಕ್ಕಳನ್ನು ನೋಡಿಕೊಳ್ತಾರೆ,” ಎಂದು ಅತ್ತಿಗೆಗೆ ಹೇಳಿದ.

“ಅಣ್ಣಾ, ನಾನೂ ಬರ್ತೀನಿ,” ನಾನು ಹಟ ಹಿಡಿದೆ.

“ಆಯ್ತು ನೀನೂ ಬಾ,” ಅಣ್ಣ ನಗುತ್ತಾ ಹೇಳಿದ.

ನಾವು ಮೂವರೂ ಕಾಶಿಯಲ್ಲಿ ಚೆನ್ನಾಗಿ ಸುತ್ತಾಡಿದೆವು. ನಂತರ ನಾವು ಒಂದು ಬನಾರಸ್‌ ಸೀರೆ ಅಂಗಡಿಗೆ ಹೋದೆವು.

“ಕಾಶಿಗೆ ಬಂದು ಬನಾರಸ್‌ ಸೀರೆ ತಗೊಳ್ಳಿಲ್ಲ ಅಂದ್ರೆ ಹೇಗೆ?” ಅಣ್ಣ ಹೇಳಿದ.

ಅತ್ತಿಗೆ ಬಹಳಷ್ಟು ಸೀರೆಗಳನ್ನು ನೋಡಿದರು. ಕೊನೆಗೆ ಒಂದು ಗುಲಾಬಿ ಬಣ್ಣದ ಸೀರೆಯ ಮೇಲೆ ಅವರ ದೃಷ್ಟಿ ಹೋಯಿತು. ಅವರ ಕಣ್ಣುಗಳು ಹೊಳೆದವು. ಆದರೆ ಅದರ ಬೆಲೆ ನೋಡಿ ಅವರು ಸೀರೆಯನ್ನು ಪಕ್ಕಕ್ಕೆ ಸರಿಸಿದರು.

“ಯಾಕೆ, ಏನಾಯ್ತು? ಆ ಸೀರೆ ನಿನಗೆ ಇಷ್ಟವಾಗಿದ್ದರೆ ತಗೋ,” ಅಣ್ಣ ಹೇಳಿದ.

“ಬೇಡ. ಇದು ತುಂಬಾ ಕಾಸ್ಟ್ಲಿ. ಇನ್ನೂ ಕಡಿಮೆ ಬೆಲೇದು ತಗೋತೀನಿ,” ಎಂದರು ಅತ್ತಿಗೆ.

“ಬೆಲೆ ಬಗ್ಗೆ ತಲೆ ಕೆಡಿಸಿಕೋಬೇಡ,” ಎಂದು ಅಣ್ಣ ಹೇಳಿ ಆ ಸೀರೆಯನ್ನು ಪ್ಯಾಕ್‌ ಮಾಡಿಸಿ ಬಿಲ್‌ ಕೊಟ್ಟ. ನಾವು ಹೊರಗೆ ಬಂದೆವು.

“ವಾಣಿಗೂ ಏನಾದರೂ ತಗೊಳ್ಳೋಣ,” ಅತ್ತಿಗೆ ಹೇಳಿದರು.

“ಅವಳಿನ್ನೂ ಸೀರೆ ಉಡಲ್ಲ. ಉಡೋಕೆ ಶುರು ಮಾಡಿದಾಗ ಕೊಡಿಸೋಣ. ಬೇಕಾದರೆ ಒಂದು ಚೂಡಿದಾರ್‌ ನೋಡು.

”ಅಣ್ಣ ನನಗೂ ಸೀರೆ ಕೊಡಿಸಲಿ ಎಂದು ನಾನು ಆಶಿಸಿದ್ದೆ. ನನ್ನ ಕಣ್ಣುಗಳ ಮುಂದೆ ಬಣ್ಣಬಣ್ಣದ ಸೀರೆಗಳು ಹರಡಿದ್ದವು. ನಾವು ಮನೆಗೆ ಬಂದಕೂಡಲೇ ನಾನು ಅಮ್ಮನಿಗೆ ಚಾಡಿ ಹೇಳಿದೆ. ಅಮ್ಮನಿಗೆ ಹೇಳಿದ್ದು ಮದ್ದುಗುಂಡಿನ ಬತ್ತಿಗೆ ಬೆಂಕಿ ಇಟ್ಟಂತಾಯಿತು.

ಅಮ್ಮನಿಗೆ ಥಟ್ಟನೆ ಕೋಪ ಬಂತು, “ಅರೆ, ಈ ಗೋಪಿಗೆ ಎಷ್ಟೂಂತ ಬಡಕೊಳ್ಳೋದು….. ಹೆಂಡತಿಗೋಸ್ಕರ 9 ಸಾವಿರ ರೂ. ಖರ್ಚು ಮಾಡಿದ. ಜೊತೇಲಿ ಮದುವೆಗೆ ಇರೋ ತಂಗಿಯೂ ಇದ್ದಳು. ಅವಳಿಗೂ ಒಂದು ಸೀರೆ ತಂದಿದ್ರೆ ನಿನ್ನ ಗಂಟೇನು ಹೋಗ್ತಿತ್ತು? ಪಾಪ, ಅವಳಪ್ಪ ಬದುಕಿದ್ದಿದ್ರೆ ನಿನ್ನನ್ಯಾಕೆ ಕೇಳ್ತಿದ್ಲು?”

“ಅಮ್ಮಾ, ಅವಳಿಗೂ ಕೊಡಿಸ್ತಾ ಇದ್ದೆ. ಆದರೆ ಅವಳಿಗಿನ್ನೂ 14 ವರ್ಷ. ಸೀರೆ ಉಡೋ ವಯಸ್ಸಾ ಅವಳ್ದು?”

“ಆದರೇನಾಯ್ತು? ಈಗಲ್ಲದಿದ್ರೆ ಇನ್ನು 2 ವರ್ಷ ಆದ್ಮೇಲೆ ಉಡ್ತಾಳೆ. ಹೆಂಡತಿಗೆ ಹಣ ಖರ್ಚು ಮಾಡೋಕೆ ಯಾವಾಗಲೂ ತಯಾರು. ನಮ್ಮಗಳ ಖರ್ಚಿಗೆ ಬಹಳ ಲೆಕ್ಕ ಹಾಕ್ತೀಯ.”

ಅಣ್ಣ ಸುಮ್ಮನಾದ. ಬಹಳ ಹೊತ್ತಿನವರೆಗೆ ಅಮ್ಮ ಬಡಬಡಿಸುತ್ತಲೇ ಇದ್ದರು.

ಅತ್ತಿಗೆ ಆ ಸೀರೆಯನ್ನು ಅಮ್ಮನ ಮುಂದೆ ಇಟ್ಟು, “ಅಮ್ಮಾ, ಈ ಸೀರೆ ವಾಣಿಗೆ ಬಹಳ ಚೆನ್ನಾಗಿರುತ್ತೆ. ಈ ಬಣ್ಣ ಅವಳಿಗೆ ಬಹಳ ಒಪ್ಪುತ್ತೆ,” ಎಂದರು.

ಅಮ್ಮ  ಸೀರೆಯನ್ನು ಕಾಲಿನಿಂದ ದೂರ ತಳ್ಳುತ್ತಾ, “ಇರಲಿ ಬಿಡು ಲಲಿತಾ, ನಾವೇನು ಸೀರೆಗೆ ಕಾದು ಕುಳಿತಿಲ್ಲ. ಕೊಡೋ ಹಾಗಿದ್ರೆ ಮೊದಲೇ ಕೊಡಿಸ್ತಿದ್ದೆ. ಈ ಬೂಟಾಟಿಕೆ ಯಾತಕ್ಕೆ? ನಿನ್ನ ಸೀರೆ ನೀನೇ ತಗೋ,” ಎಂದು ಹೇಳಿ ಅವರು ಅಳುತ್ತಾ, “ನಮ್ಮ ಯಜಮಾನರು ಬದುಕಿದ್ದಾಗ ನಮಗೆ ಹಾಸಿ ಹೊದೆಯೋ ಅಷ್ಟು ಆಸ್ತಿ ಇತ್ತು. ಅವರು ನನ್ನನ್ನು ರಾಣಿ ತರಹ ಮೆರೆಸ್ತಾ ಇದ್ರು. ಈಗಂತೂ ನಾವು ನಿನ್ನ ಆಶ್ರಯದಲ್ಲಿದ್ದೀವಿ. ಹೇಗೆ ಇಡಬೇಕೂಂತಿದ್ದೀಯೋ ಹಾಗೆ ಇರ್ತೀವಿ. ಏನು ಕೊಡ್ತಿಯೋ ಅದನ್ನೇ ತಿಂತೀವಿ,” ಎಂದರು.

ಸೀರೆ ಯಾರಿಗೂ ಬೇಡದಂತೆ ಬಹಳ ಹೊತ್ತು ನೆಲದ ಮೇಲೇ ಬಿದ್ದಿತ್ತು. ನಂತರ ಅತ್ತಿಗೆ ಅದನ್ನು ಎತ್ತಿಕೊಂಡು ಬೀರುವಿನಲ್ಲಿ ಇಟ್ಟರು.

ಕೆಲವು ತಿಂಗಳ ನಂತರ ಅಣ್ಣನ ಸಹೋದ್ಯೋಗಿಯ ಮದುವೆ ಇತ್ತು. ಮನೆಯರನ್ನೆಲ್ಲಾ ಮದುವೆಗೆ ಆಮಂತ್ರಿಸಿದ್ದರು.

“ಆ ಬನಾರಸ್‌ ಸೀರೆ ಉಟ್ಕೋ,” ಗೋಪಣ್ಮ ಅತ್ತಿಗೆಗೆ ಬಲವಂತ ಮಾಡಿದ,

“ಅದನ್ನು ತಗೊಂಡ ಮೇಲೆ ಒಂದು ಬಾರಿಯೂ ನೀನು ಉಟ್ಟಿದ್ದನ್ನು ನೋಡಲಿಲ್ಲ,” ಎಂದ.

ಅತ್ತಿಗೆ ಸೀರೆ ಉಟ್ಟು ಬಂದಾಗ ಎಲ್ಲರೂ ಅವರನ್ನೇ ನೋಡುತ್ತಿದ್ದರು. ಅವರು ಬಹಳ ಸುಂದರವಾಗಿ ಕಾಣುತ್ತಿದ್ದರು. ಅಣ್ಣ ಮಂತ್ರಮುಗ್ಧನಾಗಿ ಅವರನ್ನೇ ನೋಡುತ್ತಿದ್ದ.

“ನಡೀರಿ ಎಲ್ರೂ ಕಾರಿನಲ್ಲಿ ಕೂತ್ಕೊಳ್ಳಿ,” ಅಣ್ಣ ಹೇಳಿದ.

ಅಮ್ಮನ ದೃಷ್ಟಿ ಅಣ್ಣನ ಮೇಲೆ ಬಿದ್ದಾಗ, “ಗೋಪಿ, ಇದೇ ಶರ್ಟ್‌ ಹಾಕ್ಕೊಂಡು ಮದುವೆಗೆ ಹೋಗ್ತೀಯಾ?” ಎಂದರು.

“ಹೌದು. ಏನಾಯ್ತು? ಸರಿ ಇಲ್ವಾ?” ಎಂದ ಅಣ್ಣ.

“ಏನು ಸರಿ ಇರೋದು ಮಣ್ಣು. ಶರ್ಟ್‌ನ ತೋಳು ಹರಿದಿದೆ.”

“ಓಹ್‌. ಹೊಲಿಗೆ ಸ್ವಲ್ಪ ಬಿಟ್ಟಿದೆ ಅಷ್ಟೆ. ನಾನು ನೋಡ್ಲಿಲ್ಲ.”

“ಅದೇ ಶರ್ಟ್‌ನ ಹಾಕ್ಕೊಂಡು ಮದುವೆಗೆ ಹೋಗ್ತೀಯಾ? ಹೆಂಡ್ತಿ ಬನಾರಸ್‌ ಸಿಲ್ಕ್ ಸೀರೆ ಉಟ್ಟು ಮೋಜು ಮಾಡ್ಲಿ. ನೀನು ಹರಿದ ಶರ್ಟ್‌ ಹಾಕ್ಕೊ. ನಿನಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇದ್ರೆ ತಾನೇ? ಜನ ನೋಡಿದ್ರೆ ನಗೋದಿಲ್ವಾ?”

“ನಾನೀಗೀ ಶರ್ಟ್‌ ಛೇಂಜ್‌ ಮಾಡಿ ಬರ್ತೀನಿ.”

“ಇಲ್ಲಿ ಕೊಡಿ. 1 ನಿಮಿಷದಲ್ಲಿ ಹೊಲಿದುಕೊಡ್ತೀನಿ,” ಅತ್ತಿಗೆ ಹೇಳಿದರು.

ಸ್ವಲ್ಪ ಹೊತ್ತಿನಲ್ಲಿ ಅತ್ತಿಗೆ ಹೊರಬಂದರು. ಅವರು ತಮ್ಮ ಸೀರೆ ಬದಲಿಸಿ ಒಂದು ಸಾಧಾರಣ ರೇಷ್ಮೆ ಸೀರೆ ಉಟ್ಟಿದ್ದರು.

“ಇದೇನು? ನಿನಗೆ ಎಷ್ಟು ಚೆನ್ನಾಗಿ ಒಪ್ತಿತ್ತು ಆ ಸೀರೆ. ಯಾಕೆ ಬದಲಿಸಿದೆ?” ಅಣ್ಣ ನೋವಿನಿಂದ ಕೇಳಿದ.

“ಸೀರೆ ಬಹಳ ಶೈನಿಂಗ್‌ ಆಗಿತ್ತು. ಮದುವೆ ಹೆಣ್ಣಿಗಿಂತ ಗ್ರ್ಯಾಂಡ್‌ ಆಗಿದ್ರೆ ಚೆನ್ನಾಗಿರಲ್ಲ. ನೋಡಿದವರು ಆಡ್ಕೋತಾರೆ.”

ಅಣ್ಣ ಮಾತಾಡಲಿಲ್ಲ.

ಆ ದಿನದ ಬಳಿಕ ಅತ್ತಿಗೆ ಆ ಸೀರೆಯನ್ನು ಎಂದೂ ಉಡಲಿಲ್ಲ. ವರ್ಷಕ್ಕೊಮ್ಮೆ ಸೀರೆಯನ್ನು ಬಿಸಿಲಿಗೆ ಹರಡಿ ನಂತರ ಎಚ್ಚರಿಕೆಯಿಂದ ಮಡಿಚಿ ಬೀರುವಿನಲ್ಲಿ ಇಡುತ್ತಿದ್ದರು.

ಅಮ್ಮ ಆಡಿದ ಮಾತು ಅತ್ತಿಗೆಯನ್ನು ಬಹಳ ನೋಯಿಸ್ತಿತ್ತು ಎಂದು ನನಗೆ ತಿಳಿದಿತ್ತು. ಅಮ್ಮ ಅಕಾಲದಲ್ಲಿ ಪತಿಯನ್ನು ಕಳೆದುಕೊಂಡು ಬಹಳ ಸಿಡಿಮಿಡಿಗುಟ್ಟುತ್ತಿದ್ದರು. ಅತ್ತಿಗೆಯ ಬಗ್ಗೆ ಅವರಿಗೆ ಅತ್ಯಂತ ಅಸಹನೆ ಇತ್ತು. ಇತ್ತ ನಾನೂ ಸಹ ಆಗಾಗ್ಗೆ ಅಮ್ಮನ ಬಳಿ ಅತ್ತಿಗೆಯ ಮೇಲೆ ಚಾಡಿ ಹೇಳಿ ಜಗಳದ ವಾತಾವರಣ ಉಂಟು ಮಾಡುತ್ತಿದ್ದೆ. ತವರು ಮನೆಯಲ್ಲಿ ಎಲ್ಲರಿಗೂ ಚಿಕ್ಕವಳಾದ್ದರಿಂದ ತುಂಬಾ ಮುದ್ದಿನಿಂದ ಬೆಳೆದಿದ್ದೆ. ಗೋಪಣ್ಣ ನನಗೆ ತಂದೆ ಇಲ್ಲದಿರುವ ಕೊರತೆ ಕಾಡದಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಹಾಗೂ ಅವನ ಮೇಲೆ ಅವಲಂಬಿಸಿರುವುದರಿಂದ ನನ್ನಲ್ಲಿ ಹೀನ ಭಾವನೆ ಉಂಟಾಗದಂತೆ ಎಚ್ಚರಿಕೆ ವಹಿಸುತ್ತಿದ್ದ. ಇತ್ತ ಅಮ್ಮ ಪ್ರತಿಕ್ಷಣ ಅವನನ್ನು ಗೋಪಿ, ಈ ಸಂಸಾರಾನ ನೀನೇ ತೂಗಿಸಬೇಕು ಎಲ್ಲರನ್ನೂ ಸಂಭಾಳಿಸಬೇಕು ಅದು ನಿನ್ನ ಕರ್ತವ್ಯ. ಬರೀ ನಿನ್ನ ಸುಖ ನೋಡಿಕೊಂಡಿದ್ರೆ ಆಗಲ್ಲ ಎಂದೆಲ್ಲಾ ಚುಚ್ಚುತ್ತಿದ್ದರು. ಆದರೆ ಕೆಲಸವೇನು ಅಷ್ಟು ಸುಲಭವೇ? ಒಟ್ಟು ಕುಟುಂಬದಲ್ಲಿ ಎಲ್ಲ ಸದಸ್ಯರನ್ನೂ ಸಂತೋಷವಾಗಿಡುವುದು ಬಹಳ ಕಷ್ಟ.

ಅಣ್ಣ ಸರ್ಕಾರಿ ಅಧಿಕಾರಿಯಾಗಿದ್ದ. ಸಂಪಾದನೆ ಹೆಚ್ಚಿಲ್ಲದಿದ್ದರೂ ನಗರದಲ್ಲಿ ಒಳ್ಳೆಯ ಪ್ರಭಾವವಿತ್ತು. ತಿಂಗಳ ಕೊನೆಯಲ್ಲಿ ಹಣ ಮುಗಿದು ಕೆಲವು ವಿಷಯಗಳಲ್ಲಿ ವಿತವ್ಯಯ ಮಾಡಬೇಕಾಗುತ್ತಿತ್ತು. ನನಗಿನ್ನೂ ನೆನಪಿದೆ. ಒಮ್ಮೆ ದೀಪಾವಳಿಯಲ್ಲಿ ಅಣ್ಣನ ಕೈ ಸಂಪೂರ್ಣ ಖಾಲಿ ಆಗಿತ್ತು. ಅವನು ಅಮ್ಮನ ಸಲಹೆ ಪಡೆದು ಈ ಬಾರಿ ದೀಪಾವಳಿಯಲ್ಲಿ ಪಟಾಕಿ ಮತ್ತು ಸಿಹಿಗಾಗಿ ಕೊಂಚ ಹಣ ಖರ್ಚು ಮಾಡಿದರೂ ಯಾರಿಗೂ ಹೊಸ ಬಟ್ಟೆ ತರಲಾಗುವುದಿಲ್ಲವೆಂದು ನಿರ್ಧರಿಸಲಾಯಿತು.

“ಆದರೆ ವಾಣಿಗೆ ಒಂದು ಸೀರೆ ಅಗತ್ಯವಾಗಿ ಕೊಳ್ಳಬೇಕು. ಈಗಂತೂ ಅವಳು ಸೀರೆ ಉಡುತ್ತಿದ್ದಾಳೆ. ಅವಳಿಗೆ ಹೊಸ ಬಟ್ಟೆ ಸಿಗಲಿಲ್ಲಾಂದ್ರೆ ಬಹಳ ದುಃಖವಾಗುತ್ತೆ. ಇನ್ನೆಷ್ಟು ದಿನ ನಮ್ಮ ಮನೇಲಿರುತ್ತಾಳೆ, ಮಗಳು ಅಂದ್ರೆ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೂಂತ…”

“ಆಯ್ತು,” ಅಣ್ಣ ತಲೆ ಆಡಿಸಿದ.

ನಾನು ಹೊಸ ಬಟ್ಟೆ ಧರಿಸಿ ಮನೆಯಲ್ಲಿ ವೈಯಾರದಿಂದ ಓಡಾಡುತ್ತಿದ್ದೆ. ಉಳಿದವರು ಹಳೆಯ ಒಗೆದ ಬಟ್ಟೆಗಳನ್ನು ಧರಿಸಿದ್ದರು. ಆದರೆ ಅತ್ತಿಗೆಯ ಮುಖದಲ್ಲಿ ಒಂದು ಚೂರೂ ಬೇಸರವಿರಲಿಲ್ಲ. ಮನೆಯಲ್ಲಿ ಯಾವುದಾದರೂ ಒಂದು ವಿಷಯಕ್ಕೆ ಮನಸ್ತಾಪ ಇರುತ್ತಿತ್ತು. ಗೋಪಣ್ಣ ಆಫೀಸ್‌ನಿಂದ ಹಿಂತಿರುಗಿದ ಕೂಡಲೇ ಅಮ್ಮ ಅವನ ಬಳಿ ದೂರುಗಳ ಮೂಟೆಯನ್ನು ಹಿಡಿದು ಕೂರುತ್ತಿದ್ದರು. ಅಣ್ಣ ಅತ್ತಿಗೆ ಎಲ್ಲಾದರೂ ಸುತ್ತಾಡಲು ಹೊರಟರೆ ಸಾಕು ಅಮ್ಮ ಮುಖ ಊದಿಸಿಕೊಂಡು ಕೂರುತ್ತಿದ್ದರು. ಅವರು ವಾಪಸ್‌ ಮನೆಗೆ ಬಂದಾಗ, “ಗೋಪಿ, ಮನೆಯಲ್ಲಿ ಮದುವೆಯಾಗದ ತಂಗಿಯೊಬ್ಬಳು ಇರೋದನ್ನು ಮರೆಯಬೇಡ. ಮೊದಲು ಅವಳಿಗೊಂದು ಗಂಡು ನೋಡಿ ಮದುವೆ ಮಾಡು. ಆಮೇಲೆ ಬೇಕಾದರೆ ನೀವು ಗಂಡ ಹೆಂಡ್ತಿ ಬೇಕಾದ್ದು ಮಾಡಿಕೊಳ್ಳಿ. ಪ್ರೇಮಿಗಳ ತರಹ ಓಡಾಡಿ ನಾನೇನೂ ಹೇಳಲ್ಲ,” ಎಂದು ನಂಜಿನ ನಾಲಿಗೆ ಆಡಿಸುತ್ತಿದ್ದರು.

ಎಂದಾದರೂ ಅತ್ತಿಗೆ ಅಲಂಕರಿಸಿಕೊಂಡಿದ್ದರೆ, “ಏನು ಲಲಿತಾ, ಹೀಗೆ ಸದಾ ಅಲಂಕಾರ ಮಾಡ್ಕೋತಿದ್ರೆ ಮನೆ ಕೆಲಸ ಯಾರು ಮಾಡೋದು?” ಎನ್ನುತ್ತಿದ್ದರು. ಎಂದಾದರೂ ಮೇಕಪ್‌ ಮಾಡಿಕೊಂಡು ಹೊರಗೆ ಹೊರಟರೆ ಅಮ್ಮ ಮುಖ ಕಿವುಚಿ, “ಊಹ್‌, 3 ಮಕ್ಕಳ ತಾಯಿ ಆಗಿದ್ದರೂ ಮೇಕಪ್‌ ಶೋಕಿ,” ಎಂದು ಚುಚ್ಚುತ್ತಿದ್ದರು.

ಅತ್ತಿಗೆ ಸಿಂಗರಿಸಿಕೊಂಡಿದ್ದನ್ನು ನೋಡಿದಾಗ ಅಣ್ಣನ ಮುಖ ಅರಳುತ್ತಿತ್ತು. ಬಹುಶಃ ಇದೇ ವಿಷಯ ಅಮ್ಮನಿಗೆ ಕೆಟ್ಟದೆನಿಸುತ್ತಿತ್ತು. ಅತ್ತಿಗೆ ಅಣ್ಣನಿಗೇನೋ ಮಾಟ ಮಾಡಿಸಿರಬೇಕು. ಅದಕ್ಕೇ ಅವನು ಸದಾ ಅವಳ ಹಿಂದೆ ಸುತ್ತುತ್ತಿರುತ್ತಾನೆ ಎನ್ನುತ್ತಿದ್ದರು. ಆದರೆ ಅತ್ತಿಗೆ ಸೌಮ್ಯ ಸ್ವಭಾವದವರಾದ್ದರಿಂದ ಅಣ್ಣನಿಗೆ ಬಹಳ ಇಷ್ಟವಾಗಿತ್ತು. ಎಂದೂ ಯಾವುದೇ ವಿಷಯಕ್ಕೂ ಅತ್ತಿಗೆ ಜಗಳ ಆಡುವುದನ್ನು ನಾನು ನೋಡಲಿಲ್ಲ. ಈ ಅತ್ತಿಗೆಯ ಬಗ್ಗೆ ನನಗೆ ಬಹಳ ಆಶ್ಚರ್ಯವಾಗುತ್ತಿತ್ತು. ಅಮ್ಮ ಸತತವಾಗಿ ಅಷ್ಟೊಂದು ವ್ಯಂಗ್ಯವಾಡುತ್ತಿದ್ದರೂ, ಮೂತಿ ತಿವಿಯುತ್ತಿದ್ದರೂ ಅವರು ಬೇಸರಪಟ್ಟಿದ್ದನ್ನು ನಾನು ನೋಡಿರಲಿಲ್ಲ. ಇಷ್ಟೊಂದು ಸಹನಶೀಲೆಯಾಗಿರಲು ಹೇಗೆ ಸಾಧ್ಯ? ಒಂದೆರಡು ಬಾರಿ ಮಾತ್ರ ಅವರು ಮೂಲೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದುದನ್ನು ನೋಡಿದ್ದೇನೆ. ಅತ್ತಿಗೆಗೆ ಇಬ್ಬರು ತಮ್ಮಂದಿರಿದ್ದು ಇನ್ನೂ ಸ್ಕೂಲ್ ನಲ್ಲಿ ಓದುತ್ತಿದ್ದರು. ಅವರು ಎಂದಾದರೂ ಅಕ್ಕನನ್ನು ನೋಡಲು ಬಂದಾಗ ಅತ್ತಿಗೆಯ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ಅವರು ಬಹಳ ಉತ್ಸಾಹದಿಂದ ಸಿಹಿ ಇತ್ಯಾದಿ ಮಾಡುತ್ತಿದ್ದರು.

ಆಗೆಲ್ಲಾ ಅಮ್ಮನ ಕೋಪ ಮುಗಿಲಿಗೇರುತ್ತಿತ್ತು, “ಓಹೋ, ಇವತ್ತೇನು ಯಾವತ್ತೂ ಇಲ್ಲದ ಉತ್ಸಾಹ ತುಂಬಿ ತುಳುಕ್ತಿದೆ. ಇರಲಿ ನಿನ್ನ ತಮ್ಮಂದಿರ ನೆಪದಿಂದಾದರೂ ಮನೆಯವರಿಗೆಲ್ಲ ಇವತ್ತು ಒಳ್ಳೆಯ ಊಟ ಸಿಗುತ್ತೆ. ಆದರೆ ಒಂದು ವಿಷಯ, ನಿನ್ನ ತಮ್ಮಂದಿರು ಯಾವಾಗಲೂ ಖಾಲಿ ಕೈಗಳನ್ನು ಬೀಸಿಕೊಂಡು ಯಾಕೆ ಬರ್ತಾರೆ? ಅವರಿಗೆ ಅಷ್ಟೂ ತೋಚೋದಿಲ್ವಾ? ಅಕ್ಕನ ಮನೆಗೆ ಹೋಗ್ತಿದ್ದೀವಿ. ಏನಾದರೂ ಸಣ್ಣ ಪುಟ್ಟ ಉಡುಗೊರೆ ತಗೊಂಡು ಹೋಗೋಣಾಂತ. ಅದೂ ಮಕ್ಕಳು ಮರಿ ಇರೋ ಮನೆಗೆ ಬರುತ್ತಾರೆ,” ಎಂದೆಲ್ಲಾ ಚುಚ್ಚುತ್ತಿದ್ದರು.

“ಅಮ್ಮಾ, ಅವರಿಬ್ಬರೂ ಇನ್ನೂ ಓದ್ತಾ ಇದ್ದಾರೆ. ಅವರ ಹತ್ರ ಅಷ್ಟು ದುಡ್ಡು ಎಲ್ಲಿರುತ್ತೆ ಉಡುಗೊರೆ ತರೋಕೆ?”

“ಅಯ್ಯೋ, 3-4 ರೂಪಾಯಿ ಚಾಕ್‌ಲೇಟ್‌ ತಂದುಕೊಡೋಷ್ಟು ಗತಿಗೆಟ್ಟಿಲ್ಲ. ಹ್ಞೂಂ ದರಿದ್ರದವರ ಮನೆಯಿಂದ ಬಂದೋರು. ಅಷ್ಟೆಲ್ಲಾ ರೀತಿ, ನೀತಿ ಏನು ಗೊತ್ತಿರುತ್ತೆ?” ಎಂದಾಗ ಅತ್ತಿಗೆಗೆ ಆ ಮಾತು ಶೂಲದಂತೆ ಚುಚ್ಚುತ್ತಿತ್ತು. ಅವರ ಕಣ್ಣೀರಿನ ಕಟ್ಟೆಯೊಡೆಯುತ್ತಿತ್ತು.

ಕೆಲವು ವರ್ಷಗಳ ಬಳಿಕ ನನ್ನ ಮದುವೆ ನಿಶ್ಚಯವಾಯಿತು. ನನ್ನ ಅತ್ತೆ ಮನೆಯವರು ಬಹಳ ಒಳ್ಳೆಯವರು. ಅವರು ವರದಕ್ಷಿಣೆ ತೆಗೆದುಕೊಳ್ಳಲು ನಿರಾಕರಿಸಿದರು. ನನ್ನ ಬೀಳ್ಕೊಡುವಾಗ ಅತ್ತಿಗೆ ತನ್ನ ಬನಾರಸ್‌ ಸೀರೆಯನ್ನು ನನ್ನ ಸೂಟ್‌ಕೇಸ್‌ನಲ್ಲಿ ಇಡುತ್ತಾ, “ವಾಣಿ, ಇದು ನನ್ನ ಕಡೆಯಿಂದ ನಿನಗೊಂದು ಚಿಕ್ಕ ಗಿಫ್ಟ್,” ಎಂದರು.

“ಅಯ್ಯೋ, ಇದಂತೂ ನಿಮಗೆ ಬಹಳ ಪ್ರಿಯವಾದ ಸೀರೆ!” ಎಂದೆ.

“ಹೌದು. ಆದರೆ ಇದನ್ನು ಉಟ್ಟುಕೊಳ್ಳೋ ಅವಕಾಶನೇ ಸಿಗ್ತಿಲ್ಲ. ನೀನು ಇದನ್ನು ಉಟ್ಟುಕೊಂಡಾಗೆಲ್ಲಾ ನಿನಗೆ ನನ್ನ ನೆನಪಾಗುತಲ್ಲಾ,” ಎಂದರು.

ನಾನು ಮನದಲ್ಲೇ, `ಹೌದು ಅತ್ತಿಗೆ, ಇದನ್ನು ಉಟ್ಟಾಗ ನಾನು ನಿಮ್ಮನ್ನು ನೆನೆಸಿಕೊಳ್ತೀನಿ. ನಿಮ್ಮಂಥ ಹೆಂಗಸರು ಈ ಪ್ರಪಂಚದಲ್ಲಿ ಬಹಳ ಕಡಿಮೆ. ಇಷ್ಟು ಸಹಿಷ್ಣುತೆ, ಇಷ್ಟು ಉದಾರ ಹೃದಯಿಗಳು ಊಹ್ಞೂಂ  ಖಂಡಿತಾ ಕಡಿಮೆ. ಎಂದೂ ನಿಮಗಾಗಿ ಏನೂ ಕೇಳಲಿಲ್ಲ, ಏನೂ ಬಯಸಲಿಲ್ಲ. ಯಾವಾಗಲೂ ಇತರರಿಗಾಗಿ ದುಡಿಯೋದೇ ಆಯ್ತು. ಅದೂ ಯಾವುದೇ ರೀತಿ ಅಪೇಕ್ಷೆಗಳನ್ನು ಇಟ್ಟುಕೊಳ್ಳದೇ,’ ಅವರು ತಮಗಾಗುತ್ತಿರುವ ಅನ್ಯಾಯಗಳನ್ನು ಕಂಡು ನಿರ್ಲಕ್ಷಿಸುತ್ತಿರುವುದನ್ನು ಕಂಡಾಗ ನನಗೆ ಅತ್ತಿಗೆ ಎಂತಹ ಮಹಾನ್‌ ಎನಿಸುತ್ತಿತ್ತು.

ನನ್ನ ಅತ್ತೆಮನೆಯೂ ತುಂಬಿದ ಕುಟುಂಬ. ಇಬ್ಬರು ನಾದಿನಿಯರು, ಒಬ್ಬ ಮುದ್ದಿನ ಮೈದುನ, ಅತ್ತೆ, ಮಾವ. ಎಲ್ಲ ನೂತನ ದಂಪತಿಯರಂತೆ ನಾನು ಮತ್ತು ನನ್ನ ಗಂಡ ಪರಸ್ಪರರೊಂದಿಗೆ ಹೆಚ್ಚಿನ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದೆ. ಸಂಜೆ ಅವರು ಆಫೀಸ್‌ನಿಂದ ಬಂದ ಮೇಲೆ ನಾವು ಎಲ್ಲಿಯಾದರೂ ಹೊರಡುವ ಪ್ರೋಗ್ರಾಂ ಹಾಕಿಕೊಳ್ಳುತ್ತೇವೆ. ನಾನು ಮೇಕಪ್‌ ಮಾಡಿಕೊಂಡು ರೆಡಿಯಾಗುವಾಗ ನನ್ನ ರೂಮಿನಲ್ಲೇ ಬಂದು ನನ್ನನ್ನೇ ಎವೆಯಿಕ್ಕದೆ ನೋಡುತ್ತಿರುವ ನಾದಿನಿಯ ಮೇಲೆ ದೃಷ್ಟಿ ಹೋಗುತ್ತದೆ. ಅವಳು ನನಗೆ ನೂರಾರು ಪ್ರಶ್ನೆಗಳನ್ನು ಕೇಳುತ್ತಾಳೆ. ಯಾವ ರೀತಿ ಉಟ್ಕೋತೀರಿ? ಯಾವ ಲಿಪ್‌ಸ್ಟಿಕ್‌ ಹಚ್ಚಿಕ್ಕೋತೀರಿ? ಯಾವ ಚಪ್ಪಲಿ ಹಾಕ್ಕೋತೀರಿ ಎಂದಾಗೆಲ್ಲಾ ಹೊರಗೆ ಹೋಗಲಿದ್ದ ನನ್ನ ಹೆಜ್ಜೆ ನಿಲ್ಲುತ್ತದೆ. ನಾನು ಗಂಡನ ಕಿವಿಯಲ್ಲಿ ಉಸುರುತ್ತೇನೆ, “ರೀ, ಸೀಮಾಳನ್ನು ಜೊತೆಗೆ ಕರೆದುಕೊಂಡು ಹೋಗೋಣ. ಪಾಪ. ಅವಳೆಲ್ಲೂ ಹೊರಗೆ ಹೋಗೋದಿಲ್ಲ. ಮನೆಯಲ್ಲಿ ಕೂತು ಕೂತು ಬೋರ್‌ ಆಗಿರುತ್ತೆ.”

“ಆಯ್ತು ಕರ್ಕೊಂಡು ಹೋಗೋಣ,” ಅವರು ಹೇಳಿದರು.

ನನ್ನ ಅತ್ತೆಯ ಕಿವಿಗೆ ಈ ವಿಷಯ ಬಿದ್ದಾಗ ಅವರು ತಡೆದರು, “ಬೇಡ ಸೀಮಾ ಇಲ್ಲೇ ಇರಲಿ. ಅವಳಿಗೆ ಸ್ಕೂಲಿ‌ನಲ್ಲಿ ತುಂಬಾ ಹೋಂವರ್ಕ್‌ ಕೊಟ್ಟಿದ್ದಾರೆ. ಅವಳು ಬಂದ್ರೆ ಆಟೋ ಮಾಡಬೇಕಾಗುತ್ತೆ. ಬೈಕ್‌ನಲ್ಲಿ ನೀವಿಬ್ರೂ ಹೋಗ್ಬನ್ನಿ.”

ಸೀಮಾ ಮುಖ ಊದಿಸಿಕೊಂಡು ಗೊಣಗುತ್ತಿದ್ದಳು. ಅಮ್ಮನೊಡನೆ ಜಗಳ ಆಡುತ್ತಿದ್ದಳು. ಆದರೆ ಅತ್ತೆಯ ಆದೇಶವನ್ನು ಯಾರೂ ವಿರೋಧಿಸುತ್ತಿರಲಿಲ್ಲ.

ನನ್ನತ್ತೆ ಬೇಕೆಂದೇ ಸೀಮಾಳನ್ನು ನಮ್ಮ ಜೊತೆ ಕಳಿಸುತ್ತಿರಲಿಲ್ಲ. ಅವಳನ್ನು ಮನೆಯ ಯಾವುದಾದರೊಂದು ಕೆಲಸದಲ್ಲಿ ತೊಡಗಿಸಿರುತ್ತಿದ್ದರು. ನಾನು ಮನದಲ್ಲೇ ಅವರಿಗೆ ಕೃತಜ್ಞತೆ ಅರ್ಪಿಸುತ್ತಿದ್ದೆ.

ಒಮ್ಮೆ ಗೋಪಣ್ಣ ನಮ್ಮ ಮನೆಗೆ ಬಂದಿದ್ದ. ಅಮ್ಮ ಕೆಲವು ಗಿಫ್ಟ್ ಗಳನ್ನು ಕಳಿಸಿದ್ದರು. ನನ್ನತ್ತೆ ಅವುಗಳನ್ನು ಮೆಚ್ಚಿ ಹೊಗಳಿದರು. ಮನೆಯವರಿಗೆಲ್ಲಾ ತೋರಿಸಿದರು. ನಂತರ ನನಗೆ ಹೇಳಿದರು, “ವಾಣಿ, ಬಹಳ ದಿನಗಳ ನಂತರ ನಿಮ್ಮಣ್ಣ ಬಂದಿದ್ದಾರೆ. ಅಡುಗೆಯವರ ಕೈಲಿ ಇವತ್ತು ಅವರಿಗಿಷ್ಟವಾದ ಅಡುಗೆ ಮಾಡಿಸು.”

ನನಗೆ ಬಹಳ ಸಂತೋಷವಾಯಿತು. ಅತ್ತೆಯ ಮೇಲೆ ಗೌರವ ಹೆಚ್ಚಾಯಿತು. ನನ್ನ ತಾಯಿ ಹಾಗೂ ನನ್ನ ಅತ್ತೆಯ ವರ್ತನೆಯಲ್ಲಿ ಎಷ್ಟು ವ್ಯತ್ಯಾಸವಿತ್ತು ಎಂದು ಯೋಚಿಸುತ್ತಿದ್ದೆ. ನನಗಿನ್ನೂ ನೆನಪಿದೆ. ನನ್ನ ಅತ್ತಿಗೆಯ ಸಂಬಂಧಿಕರು ಅವರನ್ನು ನೋಡಲು ಬಂದಾಗ ಅಮ್ಮ ಹುಬ್ಬುಗಂಟಿಕ್ಕುತ್ತಿದ್ದರು. ಅಡುಗೆಮನೆಗೆ ಹೋಗಿ ಜೋರಾಗಿ ಪಾತ್ರೆಗಳನ್ನು ಕುಕ್ಕಿ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ನನಗೆ ಮದುವೆ ಆದಾಗ ಅಮ್ಮ ನನ್ನನ್ನು ಕರೆದು ಉಪದೇಶ ನೀಡಿದರು, “ವಾಣಿ, ನಿನ್ನ ಗಂಡ ಬಹಳ ಸುಂದರವಾಗಿದ್ದಾನೆ. ಅವರ ಮುಂದೆ ನೀನು ಏನೂ ಇಲ್ಲ. ನೀನು ಯಾವಾಗಲೂ ಅವರ ಮುಂದೆ ಅಲಂಕಾರ ಮಾಡಿಕೊಂಡಿರಬೇಕು. ಆಗಲೇ ಅವರ ಮನಸ್ಸು ಗೆಲ್ಲೋಕ್ಕಾಗೋದು.”

“ಆದರೆ ಅತ್ತಿಗೇಗೆ ಅಲಂಕಾರ ಮಾಡ್ಕೊಬೇಡಾಂತ ಹೇಳ್ತಿದ್ದೆ,” ನನಗೆ ಕೇಳದೆ ಇರಲಾಗಲಿಲ್ಲ.

“ಅದು ಬೇರೆ ವಿಷಯ. ನಿನ್ನ ಅತ್ತಿಗೆಯೇನೂ ನೂತನ ವಧುವಲ್ಲ. 3 ಮಕ್ಕಳು ಇರೋಳು. ಅವಳು ಅಲಂಕಾರ ಮಾಡಿಕೊಂಡ್ರೆ ಏನು ಚೆನ್ನಾಗಿರುತ್ತೆ?” ಅಮ್ಮ ಹೇಳಿದರು.

ಇದಕ್ಕೆ ವಿರುದ್ಧವಾಗಿ ನನ್ನ ಅತ್ತೆಮನೆಯಲ್ಲಿ ಯಾವುದಾದರೂ ಹಬ್ಬ ಬಂದಾಗ ನನ್ನತ್ತೆ ಹೊಸ ಸೀರೆ ಉಡುವಂತೆ ಆಗ್ರಹಿಸುತ್ತಿದ್ದರು. ತಮ್ಮ ಒಡವೆಗಳನ್ನು ಹಾಕಿಕೊಳ್ಳಲು ಕೊಡುತ್ತಿದ್ದರು. ಅವರು ಎಲ್ಲರಿಗೂ ನನ್ನನ್ನು ತೋರಿಸುತ್ತಾ, “ನನ್ನ ಸೊಸೆ ಲಕ್ಷದಲ್ಲಿ ಒಬ್ಬಳು,” ಎನ್ನುತ್ತಿದ್ದರು.

ಅತ್ತ ನನ್ನಮ್ಮ ಇದ್ದರು. ಅತ್ತಿಗೆಯನ್ನು ಅಣುಅಣುವಾಗಿ ಸುಡುತ್ತಿದ್ದರು. ಅವರ ಭಾವನೆಗಳನ್ನು ಅವಹೇಳನ ಮಾಡಿ ಅವರ ಬದುಕಿನಲ್ಲಿ ವಿಷ ಕಕ್ಕುತ್ತಿದ್ದರು. ಅವರು ಹಾಗೇಕೆ ಮಾಡುತ್ತಿದ್ದರು? ಹಾಗೆ ಮಾಡಿ ಅವರು ಅಣ್ಣನ ಸುಖ, ನೆಮ್ಮದಿ ಹಾಳು ಮಾಡಿದ್ದರು. ಅತ್ತಿಗೆಯ ವ್ಯಕ್ತಿತ್ವಕ್ಕೇ ಧಕ್ಕೆ ತಂದಿದ್ದರು.

ಅತ್ತಿಗೆ ತನ್ನ ಬಗ್ಗೆ ಬಹಳಷ್ಟು ಅಲಕ್ಷ್ಯದಿಂದಿದ್ದರು ಎಂದು ನನಗೆ ಅನಿಸುತ್ತದೆ. ಅವರಲ್ಲಿ ಬದುಕುವ ಇಚ್ಛೆ ಸತ್ತುಹೋಗಿತ್ತು. ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆ ಬಂದಾಗಲೂ ಅವರು ಮನೆಯವರಿಗೆ ಯಾರಿಗೂ ತಿಳಿಸಲಿಲ್ಲ. ಅಣ್ಣನಿಗೆ ತಿಳಿಯುವಷ್ಟರಲ್ಲಿ ತಡವಾಗಿಹೋಗಿತ್ತು.

ನಾನು ಮನೆಗೆ ಹೋದಾಗ ಅತ್ತಿಗೆಯ ಶವ ಎತ್ತಲು ತೊಡಗಿದರು. ನಾನು ಬ್ಯಾಗ್‌ನಿಂದ ಬನಾರಸ್‌ ಸೀರೆ ತೆಗೆದು ಅತ್ತಿಗೆಗೆ ಹೊದಿಸಿದೆ.

“ವಾಣಿ ಏನ್ಮಾಡ್ತಾ ಇದೀಯಾ? ಇನ್ನು ಸ್ವಲ್ಪ ಹೊತ್ತಿಗೆ ಎಲ್ಲ ಬೂದಿಯಾಗುತ್ತೆ,” ಅಮ್ಮ ಹೇಳಿದರು.

“ಆಗ್ಲಿ ಬಿಡು,” ನಾನು ನೀರಸವಾಗಿ ಹೇಳಿದೆ.

ಅಣ್ಣನ ಹೆಂಡತಿಯಾಗಿ ವಧುವಿನ ರೂಪದಲ್ಲಿ ಮನೆಯ ಹೊಸ್ತಿಲಲ್ಲಿ ನಿಂತಿದ್ದಾಗ ಅತ್ತಿಗೆಯ ಮುಖದಲ್ಲಿದ್ದ ಕಾಂತಿ ನೆನಪಾಯಿತು. ಅವರ ಹಣೆಯಲ್ಲಿ ಗುಂಡಗಿನ ಬಿಂದಿ ಸೂರ್ಯನಂತೆ ಹೊಳೆಯುತ್ತಿತ್ತು. ಅವರ ತುಟಿಗಳಲ್ಲಿ ನಾಚಿಕೆ ಬೆರೆತ ಮುಗುಳ್ನಗೆ ಇತ್ತು. ಅವರ ಕಣ್ಣುಗಳಲ್ಲಿ ಸಾವಿರಾರು ಕನಸುಗಳಿದ್ದವು.

ಅತ್ತಿಗೆಯ ಪಾರ್ಥಿವ ಶರೀರವನ್ನು ಎತ್ತುತ್ತಿದ್ದರು. ಅಮ್ಮ ಎಲ್ಲರಿಗಿಂತ ಜೋರಾಗಿ ಅಳುತ್ತಿದ್ದರು. ಅಣ್ಣನಂತೂ ಕಟ್ಟಿಗೆಯಂತೆ ನಿಶ್ಚಲನಾಗಿದ್ದ. ಅವರ ಇಬ್ಬರು ಗಂಡು ಮಕ್ಕಳೂ ಜೋರಾಗಿ ಅಳುತ್ತಿದ್ದರು. 4 ವರ್ಷದ ಮಗಳು ಮುಗ್ಧ ಭಾವದಿಂದ ಅತ್ತಿತ್ತ ನೋಡುತ್ತಿದ್ದಳು. ನಾನು ಅವಳನ್ನು ಎತ್ತಿಕೊಂಡು ಅಣ್ಣನಿಗೆ, “ಅಣ್ಣಾ, ಗಂಡು ಮಕ್ಕಳು ದೊಡ್ಡೋರಾಗಿದ್ದಾರೆ. ಸ್ವಲ್ಪ ದಿನಗಳಲ್ಲಿ ಬೋರ್ಡಿಂಗ್‌ ಸ್ಕೂಲಿನಲ್ಲಿ ಓದೋಕೆ ಹೊರಟುಬಿಡ್ತಾರೆ. ಆದರೆ ಈ ಮಗೂನ ನೋಡಿಕೊಳ್ಳೋರು ಯಾರೂ ಇಲ್ಲ. ಇವಳನ್ನು ನನಗೆ ಕೊಟ್ಟುಬಿಡು. ನಾನು ಇವಳನ್ನು ಸಾಕ್ಕೋತೀನಿ. ನೀನು ಕೇಳಿದಾಗ ವಾಪಸ್‌ ಕಳಿಸ್ತೀನಿ,” ಎಂದೆ.

“ವಾಣಿ, ಏನ್ಮಾಡ್ತಾ ಇದೀಯಾ? ನಿಂಗ್ಯಾಕೆ ಆ ತಲೆನೋವು? ಒಂದ ವರ್ಷನಾ ಎರಡು ವರ್ಷಾನಾ? ಚೆನ್ನಾಗಿ ಯೋಚನೆ ಮಾಡು,” ಅಮ್ಮ ಕಿವಿಯಲ್ಲಿ ಪಿಸುಗುಟ್ಟಿದರು.

“ಇಲ್ಲಮ್ಮ. ನನಗೇನೂ ತೊಂದರೆ  ಇಲ್ಲ. ಈ ಮಗು ಇಲ್ಲಿದ್ರೆ ನಿನಗೆ ಸಂಭಾಳಿಸೋಕೆ ಆಗಲ್ಲ,” ನಾನಂದೆ.

“ಆದರೆ, ನಿಮ್ಮತ್ತೆಯ ಅಭಿಪ್ರಾಯಾನೂ ತಿಳ್ಕೋಬೇಕು. ನಿನ್ನ ಅಣ್ಣನ ಮಗಳನ್ನು ಮನೆಗೆ ಎತ್ಕೊಂಡು ಹೋದ್ರೆ ಏನಂತಾರೋ?” ಎಂದರು ಅಮ್ಮ.

“ನಮ್ಮತ್ತೇನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀನಿ. ಅವರು ನನ್ನ ನಿರ್ಧಾರಾನ ಹೊಗಳ್ತಾರೆ,” ನಾನು ದೃಢವಾಗಿ ಹೇಳಿದೆ.

ಅತ್ತಿಗೆ ಆಕಾಶದಿಂದ ನನ್ನನ್ನು ನೋಡುತ್ತಿದ್ದಾರೆ, ಮುಗಳ್ನಗುತ್ತಿದ್ದಾರೆ ಎಂದು ನನಗೆ ಅನ್ನಿಸಿತು. ನಾನು ಮನದಲ್ಲೇ, `ಅತ್ತಿಗೆ, ನಾನು ನಿಮ್ಮ ಆಸ್ತಿಯನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಇವಳಲ್ಲಿ ನಿಮ್ಮ ಸಂಸ್ಕಾರ ಇದೆಯೆಂದು ನನಗೆ ನಂಬಿಕೆ ಇದೆ. ಇವಳನ್ನು ನನ್ನ ಹೃದಯಕ್ಕೆ ಅಪ್ಪಿಕೊಂಡು ನಿಮ್ಮ ನೆನಪುಗಳನ್ನು ತಾಜಾ ಮಾಡಿಕೊಳ್ಳುತ್ತೇನೆ,’ ಎಂದು ಹೇಳಿಕೊಂಡೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ